ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಜಾತ ಆರ್ ರಾವ್ ಅವರ ಕಾವ್ಯಮಯ ಭಾವಾಭಿವ್ಯಕ್ತಿಯ ‘ಭಾವಾಂತರಂಗ’

ಸುಜಾತಾ ಆರ್ ರಾವ್ ಅವರ ಕೃತಿ ‘ಭಾವಾಂತರಂಗ’

ಈ ಕೃತಿಯ ಕುರಿತ ಕೆ. ಆರ್. ಉಮಾದೇವಿ ಉರಾಳ ಅವರ ಬರಹ ಇಲ್ಲಿದೆ.

-ಕೆ. ಆರ್. ಉಮಾದೇವಿ ಉರಾಳ

ಪ್ರಚಾರ ಪ್ರಸಿದ್ಧಿಯ ಗೊಡವೆ ಇಲ್ಲದೆ ಸಹಜ ಕವಿ ಮನದ ಕವಯಿತ್ರಿ ಸುಜಾತಾ ಆರ್ ರಾವ್ ತಮ್ಮ ಪಾಡಿಗೆ ತಾವು ಆತ್ಮ ಸಂತೋಷಕ್ಕಾಗಿ  ಕವನಗಳನ್ನು ಬರೆದಂತಹವರು. ಹಲವು ಗೋಷ್ಠಿಗಳಲ್ಲಿ ಕವನ ವಾಚಿಸಿರುವವರು. ಇವರ ಹಲವು ಕವನಗಳಿಗೆ, ಕಥೆಗೆ ಪುರಸ್ಕಾರ ಕೂಡ ಸಂದಿದೆ. ಈಗಾಗಲೇ ಇವರ ಕವನಗಳನ್ನು ನಾಡಿನ ಹೆಮ್ಮೆಯ ಗಾಯಕರು ಸುಶ್ರಾವ್ಯವಾಗಿ ಹಾಡಿರುವರು.  ಜಿ. ಎಸ್. ಅಮೂರರಂತಹ ಕನ್ನಡದ ಶ್ರೇಷ್ಠ ವಿಮರ್ಶಕರು ಸುಜಾತಾ ರ ಕವನಗಳನ್ನು ಓದಿ ಅವರ ಕವಿತಾ ಪ್ರತಿಭೆಯ ಕುರಿತು  ಮೆಚ್ಚುಗೆಯನ್ನು ವ್ಯಕ್ತಪಡಿಸಿರುವರೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿ.  ಇಂತಹ ಸುಜಾತಾ ರವರು ಮೊದಲ ಬಾರಿಗೆ ತಮ್ಮ ಕವನ ಸಂಕಲನ ಪ್ರಕಟಿಸಿದ್ದಾರೆ. “ಭಾವಾಂತರಂಗ” 53 ಕವನಗಳ ನೂರಆರು ಪುಟಗಳ  ಕವನ ಸಂಕಲನ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಬದುಕಿನ ವಿವಿಧ ಆಯಾಮಗಳಡೆಗಿನ ಸುಜಾತಾ ರ ಒಳನೋಟದ ದೃಷ್ಟಿಕೋನ ಕಾವ್ಯಮಯವಾಗಿ ಇಲ್ಲಿನ ಕವನಗಳಲ್ಲಿ ಅಭಿವ್ಯಕ್ತವಾಗಿದೆ. ಮೆಲುದನಿಯಲ್ಲಿಯೇ ಆದರೂ ಸ್ಪಷ್ಟತೆಯಿಂದ, ನಿಷ್ಕೃಷ್ಟತೆಯಿಂದ, ಲವಲವಿಕೆಯ ಚೈತನ್ಯಶೀಲತೆಯಿಂದ ಕಾವ್ಯಮಯವಾಗಿ ಹೇಳುತ್ತಾ ಓದುಗರ ಮನಕ್ಕೆ ಆಪ್ಯಾಯಮಾನತೆಯ ಭಾವ ಮೂಡಿಸುತ್ತಾರೆ, ಸುಜಾತಾ ರವರು. 

 “ನಿತ್ಯ ನೂತನ” ಕವನದಲ್ಲಿ  ನವ ನವೋನ್ಮೇಷ ಶಾಲಿನಿ ಜಗದ ಸೌಂದರ್ಯಕ್ಕೆ  ಬೆರಗಾದ ಕೌತುಕದ ಮನವಿದೆ. ಕವಿತೆ  ಹುಟ್ಟುಪಡೆವ ವೈವಿಧ್ಯಮಯ ಸನ್ನಿವೇಶಗಳ ಕುರಿತ ಕವನ “ಕವಿತೆಯ ಉದಯ”. ಕರುಳ ಕುಡಿಯ ಅಭ್ಯುದಯಕ್ಕೆ ತಾನು ತೊಡರುಗಲ್ಲಾಗಲಾರೆ ಎಂಬ ನಿಶ್ಚಯದೊಂದಿಗೆ  “ಬರಿ ಓಟ ಬದುಕಲ್ಲ ಪ್ರಥಮವೇ ಗೆಲುವಲ್ಲ/ ಯಶದ ಬೇಟೆಗೆ ಸರ್ವ ಸುಖ ತ್ಯಾಗ ಸಲ್ಲ” ಎಂಬ ಜೀವನ ಪಾಠ ಹೇಳುವ ಜನನಿಯ ಹಾರೈಕೆ “ಕರುಳ ಕರೆ”ಯಲ್ಲಿದೆ. “ಆಚರಣೆ” ಕವನ ದೇಶದ ಸ್ವಾತಂತ್ರ್ಯದ ಆ ಅಪೂರ್ವ ಗಳಿಕೆಯ ಮಹತ್ವವನ್ನು ಸ್ಮರಿಸುತ್ತಾ “ಏನ ಉಳಿಸುವಿರಿ ನೀವು ನಿಮ್ಮ ಪೀಳಿಗೆಗೆ?  ನಿರ್ಮಲ ಜಲ? ಫಲಭರಿತ ನೆಲ? ವಿಷವಿರದ ಊಟ? ಒಂದಿಷ್ಟು ತಂಪು ಗಾಳಿ? ಇನ್ನೊಂದಿಷ್ಟು ತಮ್ಮ ಹಿರಿಯರ ಕೊಡುಗೆಯ ಹೆಮ್ಮೆ?” ಎಂಬ ಆತ್ಮಾವಲೋಕನದ ಚಬುಕು ಬೀಸುತ್ತದೆ. “ಚೇತನ” ಕವಿತೆಯು “ಕೊರಡು ಕೊನರದು ಎಂದು ನಿರ್ಲಕ್ಷ್ಯ ತೋರದಿರು/  ಒಳಗೆಲ್ಲೋ ಇದ್ದೀತು ಬಸಿರಿನುಸಿರು”  ಎನ್ನುತ್ತಾ , ಜೀವನ್ಮುಖಿ ಚೈತನ್ಯದ ಕುರಿತು ಚೈತನ್ಯಪೂರ್ಣವಾಗಿಯೇ ಮಿಡಿದಿದೆ.  ಬದುಕಿನಲ್ಲಿ ಭರವಸೆಗಾಗಿ ಭಾವನಾತ್ಮಕ ಅವಲಂಬನೆಯನ್ನು ಊರುಗೋಲಿನ  ರೂಪಕವಾಗಿಸಿ “ನಂಬಿ ಹಿಡಿದ ಕೋಲು ಘಟಸರ್ಪವಾದೀತು” ಎಂಬ ವಾಸ್ತವತೆಯೆಡೆಗೂ ಎಚ್ಚರಿಸಿ, “ಊರುಗೋಲಿಲ್ಲದಿರೆ ಅಂಜದಿರು ನೀನು” ಎಂಬ ಆತ್ಮ ಪ್ರತ್ಯಯದೆಡೆಗೂ ಬೊಟ್ಟು ತೋರುವ ಕವನ “ಊರುಗೋಲು”.  “ಅಮ್ಮ” ಕವನ ಮಾತೃತ್ವದ ಮಮತೆಯ ಮಾನವತೆ ಹೊಮ್ಮಿದಲ್ಲೆಲ್ಲ ಮೊಳೆವ ಅಮ್ಮ, ಕೇವಲ ಜನ್ಮ ನೀಡಿದ ಮಾತೆಗೆ ಮಾತ್ರ ಸೀಮಿತವಲ್ಲ ಎನ್ನುತ್ತಾ ಸೀಮಾತೀತ ಮಾತೃತ್ವವನ್ನು ಪರಿಚಯಿಸುತ್ತದೆ. ಬದುಕಿನ ಮಹತಿಯನ್ನು ಪ್ರತಿಮಾತ್ಮಕವಾಗಿಸುವ ಕವಿತೆ “ಯಾರೋ ಹಚ್ಚಿಟ್ಟ ಹಣತೆ”. “ಕತ್ತಲನು ಓಡಿಸುತ ಬೆಳಕ ಪಸರಿಸಲೆಂದು” ಯಾರೋ ಹಚ್ಚಿಟ್ಟ ಪುಟ್ಟ ಪ್ರಣತಿಯ ಪ್ರತಿಮೆಯ ಮೂಲಕ ತೆರೆಯ ಮರೆಯ ಜಗದುಪಕಾರಿಗಳನ್ನು ನೆನೆಯುತ್ತಾ,  ಅವರ ಉಪಕೃತಿಗಳಿಗೆ ನಾವಿಷ್ಟು ಕೈಗೂಡಿಸಬೇಕೆಂಬ ಜಾಗೃತಿ ಮೂಡಿಸುವ ಪರಿಕಲ್ಪನೆ ಓದುಗರಲ್ಲಿ ಪುಳಕ ಉಂಟುಮಾಡುತ್ತದೆ.

 ಸುಜಾತಾರವರದು ಸಹಜವಾದ ಕವಿಮನ. ಪ್ರಕೃತಿಯ ವಿದ್ಯಮಾನಗಳೆಲ್ಲ ಈ ಕವಿಮನದಲ್ಲಿ ದಿವ್ಯದರ್ಶನವೀಯುತ್ತವೆ. “ಬಾನಾಡಿ ನಾನಾಗಿ” ಕವಿತೆ ಅಂಬರದಿ ಹೂಹಗುರಾಗಿ ತೇಲುವ ದಿವ್ಯಾನುಭವ ಸವಿಯುತ್ತಲೇ ಅವನಿಯೆಡೆ ದೃಢತೆಯಲ್ಲಿ ಅಡಿಯನಿಡುವ ಮನ ಮಾಡುವ ‘ಕಾಲು ನೆಲದಲ್ಲಿ ನೋಟ ನಭದಲ್ಲಿ’ ಎಂಬಂತಹ ಅಮೂರ್ತ ಕಲ್ಪನೆಯನ್ನು ಸೊಗಸಾಗಿ ಹೆಣೆದಿದೆ. 

ಭಾವಾಭಿವ್ಯಕ್ತಿಗೆ ತಕ್ಕನಾದ ಭಾಷಾ ಶ್ರೀಮಂತಿಕೆ, ರೂಪಕಗಳನ್ನು ಪ್ರತಿಮೆಗಳನ್ನು ಸೂಕ್ತವಾಗಿ ಬಳಸುವ ಮೂಲಕ ಕಾವ್ಯಾತ್ಮಕ ಅಭಿವ್ಯಕ್ತಿಯಲ್ಲಿ ಮೌಲಿಕತೆ, ಕವಿತೆಯ ಆಶಯಕ್ಕೆ ತಕ್ಕನಾದ ಶೀರ್ಷಿಕೆ ಎಂದು ಸುಜಾತ ಆರ್ ರಾವ್ ತಮ್ಮ ಮೊದಲ ಕವನ ಸಂಕಲನದಲ್ಲಿ ಭವಿಷ್ಯದ ಭರವಸೆಯ ಕವಯಿತ್ರಿಯಾಗಿ ಹೊರಹೊಮ್ಮಿದ್ದಾರೆ.

‍ಲೇಖಕರು Admin

30 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading