-ಎಂ.ವಿ. ಶಶಿಭೂಷಣ ರಾಜು
ಇವತ್ತು ಇನ್ನೂ ಗಾಂಧಿ ಬಂದಿರಲಿಲ್ಲ, ಒಬ್ಬನೇ ಕೂತು ಬೇಸರ ಬರತೊಡಗಿತು. ಈ ಗಾಂಧಿ ಸದಾ ಹೀಗೆ, ಬಿರಬಿರ ನಡೆಯುತ್ತಾ ಎಲ್ಲಿಯೋ ಸಾಗಿಹೋಗುತ್ತಾನೆ. ಮುಖ್ಯವಾದ ಕೆಲಸವಿದ್ದಾಗಲೂ ಗಾಳಿಪಟ ಹಾರಿಸಲು ಮಕ್ಕಳು ಕರೆದವೆಂದು ಹೊರಟುಬಿಡುತ್ತಾನೆ. “ಹೇಳಿದರೆ ಅವರಿಗೆ ಮಾತು ಕೊಟ್ಟಿದ್ದೆ” ಎನ್ನುತ್ತಾನೆ. ಸಹಾಯ ಕೇಳದಿದ್ದರೂ ಸಹಾಯ ಮಾಡಹೋಗಿ ಜನರಿಗೆ ಮುಜುಗರ ತರಿಸುತ್ತಾನೆ. ಇದ್ದಕಿದ್ದಂತೆ ಯಾವುದಾದರೂ ಉದಾಹರಣೆ ಹೇಳಿ, ಎಲ್ಲರ ತಲೆದೂಗುವಂತೆ ಮಾಡುತ್ತಾನೆ. ಯಾರಾದರೂ ಯೋಚಿಸುತ್ತಾರೆ, ಅನುಸರಿಸುತ್ತಾರೆ ಎಂಬ ನಂಬಿಕೆ ಇರಿಸಿಕೊಂಡು ಬಾಳುತ್ತಾನೆ.
ಎಲ್ಲಿ ಸಿಕ್ಕಿಹಾಕಿಕೊಂಡನೋ ಏನೋ, ಮಳೆ ಬರುವ ಹಾಗಿದೆ. ಯಾರಿಗೆ ಮುಜುಗರ ಪಡುವಂತಹ ಸಹಾಯ ಮಾಡುತ್ತಿದ್ದನೋ! ಎಷ್ಟೋ ಸಲ ಹೇಳಿಯಾಯಿತು, ಆದರೆ “ನೀನಿನ್ನು ಸಣ್ಣವ, ನಿನಗೆ ಗೊತ್ತಾಗುವುದಿಲ್ಲ” ಎನ್ನುತ್ತಾನೆ. ಕೆಲವು ಸಲ “ನಿನಗೆ ಎಷ್ಟು ವಿಷಯ ಗೊತ್ತಿದೆ ವಾವ್!” ಎಂದು ಉದ್ಗಾರ ತೆಗೆಯುತ್ತಾನೆ.
ನಾನು ಗಾಂಧಿಯೊಡನೆ ಓಡಾಡುವುದು ನನ್ನ ಕೆಲವು ಸ್ನೇಹಿತರಿಗೆ ಹಿಡಿಸುವುದಿಲ್ಲ. “ಅಷ್ಟು ದೊಡ್ಡವರ ಜೊತೆ ಏನು ನಿನ್ನ ಮಾತು” ಎಂದು ಹೀಗೆಳೆಯುತ್ತಾರೆ. ಅವರಿಗೆ ಗೊತ್ತಿಲ್ಲ; ಗಾಂಧಿ ನನ್ನ ಜೊತೆ ಇದ್ದಾಗ ನನಗಿಂತ ಚಿಕ್ಕವನಾಗಿಬಿಡುತ್ತಾನೆ. ಒಂದು ಚಿಟ್ಟೆ ಹಾರಿದರೂ ಚಕ್ಕೆಂದು ಎಗರಿ ವಿಸ್ಮಯದಿಂದ ನೋಡುತ್ತಾನೆ. ಕೋಗಿಲೆ ಕೂಗಿದರೆ ತಾನೂ ಮರುಕೂಗುತ್ತಾನೆ. ಮಳೆ ಬಂದರೆ ಹೊಂಡದ ಕೆಂಪು ನೀರಲ್ಲಿ ಈಜಾಡಿ, ನನ್ನನ್ನೂ ಎಳೆದು ಬೀಳಿಸುತ್ತಾನೆ. ಎಷ್ಟೋ ಸಲ ನಾವು ಏನೂ ಮಾತನಾಡದೆ ಗಂಟೆಗಟ್ಟಲೆ ಸುಮ್ಮನೆ ಕುಳಿತಿರುತ್ತೇವೆ. ನಮ್ಮ ಪರಸ್ಪರ ಇರುವಿಕೆಯೇ ನಮಗೆ ಒಂದು ಖುಷಿ ಕೊಡುತ್ತದೆ. ಹಾಗೆ ಕುಳಿತಿದ್ದಾಗ ಗಾಂಧಿ ಏನೋ ನೆನಪಿಸಿಕೊಂಡವನಂತೆ ನನಗೂ ಹೇಳದೆ ಎದ್ದು ಬಿರಬಿರನೆ ನಡೆದುಬಿಡುತ್ತಾನೆ. ಹಾಗೆ ಹೊರಟೆನೆಂದರೆ, ಯಾರಿಗೂ ಇಂತಹ ಸಮಯಕ್ಕೆ ಬರುತ್ತೇನೆ ಎಂದು ಮಾತು ಕೊಟ್ಟಿರುತ್ತಾನೆ ಎಂದರ್ಥ. ಇಷ್ಟು ದಿನ ಗಡಿಯಾರ ಕಟ್ಟುತ್ತಿರಲಿಲ್ಲ, ಈಗ ಸೆಲ್ಫೋನ್ ಒಂದನ್ನು ಕೊಂಡುಕೊಂಡಿದ್ದಾನೆ. “ಫೋನ್ ಮಾಡಬೇಡಿ, ಮೆಸೇಜ್ ಮಾಡಿ ಸಾಕು” ಎಂದು ಎಲ್ಲರಿಗೂ ಹೇಳಿದ್ದಾನೆ. ನಾವು ಇಬ್ಬರೇ ಇದ್ದಾಗ, ಸುಮ್ಮನೆ ಕುಳಿತಿದ್ದರೂ ಫೋನ್ ನೋಡುವುದಿಲ್ಲ—ಟೈಮ್ ನೋಡಲು ಬಿಟ್ಟರೆ!
ಗಾಂಧಿ ಇತ್ತೀಚಿಗೆ ಒಂದು ಹೊಸ ಕೆಲಸ ಶುರು ಮಾಡಿದ್ದಾನೆ. ಪಟ್ಟಣದಲ್ಲಿನ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ವಾರಕ್ಕೊಮ್ಮೆ ಹೋಗಿ ಅಲ್ಲಿನ ಬಚ್ಚಲು ತೊಳೆಯುತ್ತಾನೆ. ಎಲ್ಲಾ ಸ್ವಚ್ಛವಾದಮೇಲೆ ಅಲ್ಲಿಯೇ ಸ್ನಾನ ಮಾಡಿ, ಎಲ್ಲರ ಜೊತೆ ಸೇರಿ ಊಟ ಮಾಡುತ್ತಾನೆ. ಎಲ್ಲರಿಗೂ ಏನಾದರೂ ಬಟ್ಟೆಯೋ, ಆಟದ ಸಾಮಾನೋ, ಬರೆಯಲು ಪೆನ್ನು, ಪೆನ್ಸಿಲ್, ಪುಸ್ತಕ ಹೀಗೆ ಕೊಡುತ್ತಾನೆ. ಎಲ್ಲಾ ಮುಗಿದಮೇಲೆ ಭಜನೆ ಮಾಡಿಸುತ್ತಾನೆ. “ರಘುಪತಿ ರಾಘವ ರಾಜಾರಾಮ್” ಭಜನೆಯನ್ನು ಹಾಡಿಸುತ್ತಾನೆ. ಇನ್ನು ಸಮಯವಿದ್ದರೆ ಪುಸ್ತಕ ಓದುವುದು, ರಾಮಾಯಣ, ಮಹಾಭಾರತ ಕತೆ ಹೇಳುವುದು ಮಾಡುತ್ತಾನೆ.
ಇನ್ನು ಬರಲಿಲ್ಲವಲ್ಲ, ಸರಿ ನೋಡೋಣ ಎಂದು ಫೋನ್ ಮಾಡಿದೆ; ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಎಲ್ಲಾದರೂ ಕಷ್ಟದಲ್ಲಿ ಸಿಲುಕಿಕೊಂಡನೋ ತಾನೇ ಎಂದು ಭಯವಾಯಿತು.
ಒಂದು ಸಲ ಹೀಗಾಯಿತು: ಯಾರೋ ರಾಮನ ವಿಗ್ರಹ ವಿರೂಪಗೊಳಿಸಿದ್ದಾರೆ ಎಂದು, ಅದು ಒಬ್ಬ ಮುಸ್ಲಿಂ ಯುವಕ ಎಂದು ಗುಲ್ಲೆದ್ದು, ನಗರದಲ್ಲಿ ಹಿಂದೂ-ಮುಸ್ಲಿಂ ಜಗಳ ಶುರುವಾಯಿತು. ಹಿಂದೂ ಎನಿಸಿಕೊಂಡವರ ಗುಂಪು ಯಾರಾದರೂ ಮುಸ್ಲಿಂ ಕಂಡರೆ, ಮುಸ್ಲಿಂ ಎನಿಸಿಕೊಂಡ ಗುಂಪು ಯಾರಾದರೂ ಹಿಂದೂ ಕಂಡರೆ ಹೊಡೆಯುವುದಕ್ಕೆ ಶುರು ಮಾಡಿದ್ದರು. ಆಗ ದಾರಿಯಲ್ಲಿ ಹೋಗುತ್ತಿದ್ದ ಗಾಂಧಿಯನ್ನು ಒಂದು ಗುಂಪು ತಡೆದು, “ನೀನು ಹಿಂದೂವಾ, ಮುಸ್ಲಿಮ್ಮಾ?” ಎಂದು ಕೇಳಿತು. ಆ ಗುಂಪಿನವರು ಹಿಂದೂಗಳೆಂದು ಅರಿತವನು, “ನಾನು ಮುಸ್ಲಿಂ” ಎಂದ. ಅಲ್ಲಿಗೆ ಜನ ಅವನ ಮೇಲೆ ಏರಿಹೋದರು, ಬಟ್ಟೆ ಕಿತ್ತರು; ನೋಡಿದರೆ ಒಳಗಡೆ ಜನಿವಾರವಿದೆ! ಹೊಡೆಯಲು ನಿಂತಿದ್ದ ಜನ, “ಏನಿದು?” ಎಂದರು. “ನೀನು ಮುಸ್ಲಿಂ ಎಂದೆ” ಅಂದರು. ಅದಕ್ಕೆ ಗಾಂಧಿ, “ಜನಿವಾರ ಯಾರಾದರೂ ಹಾಕಬಹುದು, ಶಿಶುನಾಳ ಶರೀಫರ ಕಥೆ ಗೊತ್ತಿಲ್ಲವೇ?” ಎಂದ. ಹೊಡೆಯಲು ಬಂದವರು ಏನೂ ಹೇಳದೆ ಹೊರಟು ಹೋಗಿದ್ದರು.
ಇನ್ನೊಂದು ಸಲ ಇಂತಹದೇ ಸಮಯದಲ್ಲಿ ಮುಸ್ಲಿಂ ಯುವಕರು ಅಡ್ಡಗಟ್ಟಿದಾಗ, “ನಾನು ಹಿಂದೂ” ಎಂದಿದ್ದ. ನೋಡಿದರೆ ಆ ದಿನ ಕತ್ತಿನಲ್ಲಿ ಒಂದು ತಾಯಿತವಿತ್ತು, ಜನಿವಾರವಿರಲಿಲ್ಲ. “ಎಲ್ಲರೂ ಒಂದೇ ಅನ್ನುತ್ತೀಯ, ಮತ್ತೆ ಜನಿವಾರ ಏಕೆ?” ಎಂದರೆ, “ನನ್ನ ಜನಿವಾರ ಜಾತಿಸೂಚನೆಗೆ ಅಲ್ಲ, ನಮ್ಮ ತಂದೆಯ ನೆನಪಿಗಾಗಿ” ಎಂದಿದ್ದ. “ಮತ್ತೆ ಅದೇಕೆ ಮುಸ್ಲಿಂ ಯುವಕರು ಅಡ್ಡಕಟ್ಟಿದಾಗ ಜನಿವಾರ ಇರಲಿಲ್ಲ?” ಎಂದರೆ, “ನಾನೇ ಬೇಕೆಂತಲೇ ತೆಗೆದಿರಿಸಿ ಅವರಿಗೆ ಅಡ್ಡ ಹೋಗಿದ್ದೆ” ಎಂದಿದ್ದ.
“ನಿನಗೆ ಭಯವಾಗುವುದಿಲ್ಲವೇ?” ನಾನೆಂದಿದ್ದೆ.
“ನನಗೆ ಯಾತರ ಭಯ? ನನ್ನ ಹತ್ತಿರ ಇತರರಿಗೆ ಉಪಯೋಗವಾಗುವುದು ಏನೂ ಇಲ್ಲ. ಇನ್ನು ಪ್ರಾಣ—ಅದು ಹೋದರೆ ಹೋಯಿತು, ನನ್ನ ಶವ ನೋಡಿ ಪ್ರಾಣ ತೆಗೆದವನು ಪಶ್ಚಾತ್ತಾಪಗೊಳ್ಳಬಹುದು” ಎಂದು ಗೊಳ್ಳನೆ ನಕ್ಕಿದ್ದ.
ಗಾಂಧಿ ತಂದೆ-ತಾಯಿ ತೀರಿಕೊಂಡು ತುಂಬಾ ವರ್ಷಗಳಾಗಿವೆ, ಹೆಂಡತಿ ಕಮಲಮ್ಮ ಗಂಡನ ತಕ್ಕವರು. ಕಮಲಮ್ಮ ನನಗೆ ಕಾಲೇಜಿನಲ್ಲಿ ಕನ್ನಡ ಪಾಠ ಮಾಡಿದ್ದರು. ಹಳಗನ್ನಡ ಓದುವುದನ್ನು ಪ್ರತಿ ಭಾನುವಾರ ಮನೆಯಲ್ಲಿ ಹೇಳಿಕೊಡುತ್ತಿದ್ದರು. ಗಾಂಧಿಯನ್ನು ಭಾನುವಾರ ನಾನು ನೋಡುತ್ತಿದ್ದೆ; ಅವನು ಯಾವುದೋ ಪುಸ್ತಕ ಹಿಡಿದುಕೊಂಡು ಗಂಭೀರವಾಗಿ ಕುಳಿತಿರುತ್ತಿದ್ದ. ಮೊದಮೊದಲು ಮಾತಾಡುತ್ತಿದ್ದುದು ಕಡಿಮೆ.
ಒಂದು ಸಲ ನನ್ನ ಕವನವೊಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ನಾನು ಮನೆಗೆ ಹೋದಾಗ,
ಮಗ್ಗುಲು ಬದಲಾಯಿಸುವುದಿಲ್ಲ
ನಟ್ಟನಡುವೆ, ಉತ್ತುಂಗದಶೆಯಲ್ಲಿಯೂ
ಜ್ಞಾನದಾರೋಹಣದಲ್ಲಿಯೂ
ಅತಂತ್ರಸ್ಥಿತಿಯ ಆಲಾಪದಲ್ಲಿಯೂ
ಪೂರ್ಣಗೊಂಡ ದಾರಿಯ ಕೊನೆಯಲ್ಲಿಯೂ
ಎಷ್ಟು ಸತ್ತಮನಗಳ ಹೊದ್ದುಮಲಗಿದರೂ
ಮಗ್ಗುಲು ಬದಲಾಯಿಸುವುದಿಲ್ಲ
ಮಗ್ಗುಲು ಬದಲಾಯಿಸಲು ಆಗುವುದಿಲ್ಲ
ಎಂದು ಇಡೀ ಕವನವನ್ನು ಜೋರಾಗಿ ಓದುತ್ತಾ ನನ್ನ ಕಡೆ ಓಡಿಬಂದು, ತಬ್ಬಿಕೊಂಡು, “ತುಂಬಾ ಚೆನ್ನಾಗಿದೆ” ಎಂದು ಬೆನ್ನು ತಟ್ಟಿದ್ದ. ಹೀಗೆ ಹತ್ತಿರವಾದ ನಮ್ಮ ಸ್ನೇಹ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆ ಬೆಳೆಸಿಕೊಂಡಿತು. ಇಬ್ಬರೂ ಅನೇಕ ಸಂಗತಿಗಳನ್ನು ಚರ್ಚಿಸಿ ಗುದ್ದಾಡುತ್ತಿದ್ದೆವು. ಕಮಲಮ್ಮನವರ ತಿಂಡಿ ನಮ್ಮ ಜಗಳಕ್ಕೆ ವಿರಾಮ ಕೊಡುತ್ತಿತ್ತು.
ಗಾಂಧಿಯ ತಂದೆ ದೊಡ್ಡ ಜಮೀನ್ದಾರರು, ಒಬ್ಬನೇ ಮಗನಿಗೆ ಅಪಾರ ಆಸ್ತಿ ಬಿಟ್ಟುಹೋಗಿದ್ದರು. ಯಾವುದಕ್ಕೂ ಕೊರತೆ ಇರಲಿಲ್ಲ. ಗಾಂಧಿ ಓದಿನಲ್ಲಿ ತುಂಬಾ ಚುರುಕು, ಸದಾ ಓದು-ಓದು. ಅಪ್ಪನಿಗೆ ಮಗ ಲಾಯರ್ ಆಗಬೇಕು ಎನ್ನುವ ಆಸೆ. ಅಪ್ಪನ ಆಸೆ ತೀರಿಸಲು ಗಾಂಧಿ ಎಲ್‌ಎಲ್‌ಬಿ ಮಾಡಿ, “ನಾನು ಪ್ರಾಕ್ಟೀಸ್ ಮಾಡಲ್ಲ” ಅಂದುಬಿಟ್ಟ.
ಮಗ ಊರಿಗೆ ಬಂದು ಜನರ ಸಹಾಯಕ್ಕೆ ನಿಂತಿದ್ದು ಅಮ್ಮನಿಗೆ ಖುಷಿಯಾಗಿತ್ತು. ಆದರೆ ಅಪ್ಪ ಮಾತ್ರ ಆಗಾಗ, “ಸುಮ್ಮನೆ ಪದವಿ ಪಡೆದು ಮನೆಯಲ್ಲಿ ಕುಳಿತಿದ್ದಾನೆ” ಎಂದು ಗೊಣುಗುಟ್ಟುತ್ತಿರುತ್ತಿದ್ದರು; ಆದರೂ ಮಗನ ಗುಣಗಳನ್ನು ಊರಿನವರು ಹೊಗಳಿದಾಗ ಎದೆ ತುಂಬಿಬರುತ್ತಿತ್ತು. ಆದರೆ ಮಗ ಸದಾ ಮನೆ ಹೊರಗಡೆಯೇ ಇರುತ್ತಿದ್ದ, ಮನೆಯಲ್ಲಿ ಅಮ್ಮನ ಹತ್ತಿರ ಹಣ ತೆಗೆದುಕೊಂಡು ಹೋಗಿ ಎಲ್ಲರಿಗೂ ಹಂಚಿಬಿಡುತ್ತಿದ್ದ. ಮಗನ ಈ ಗುಣಗಳಿಗೆ ಹೆದರಿದ ಅಪ್ಪ, ತನ್ನ ತಮ್ಮನಿಗೆ ಜವಾಬ್ದಾರಿ ಕೊಟ್ಟು, ಮಗನ ಯೋಗಕ್ಷೇಮಗಳನ್ನು ನೋಡಿಕೊಳ್ಳಲು ಹೇಳi ಕಣ್ಮುಚ್ಚಿದ್ದರು. ಕೆಲ ಸಮಯ ಕಳೆದಮೇಲೆ ಅಮ್ಮನೂ ಅಪ್ಪನ ದಾರಿ ಹಿಡಿದರು. ಗಾಂಧಿ ಆಸ್ತಿಪಾಸ್ತಿಯ ಬಗ್ಗೆ ತಲೆಕೆಡಿಸಿಕೊಂಡವನೇ ಅಲ್ಲ; ಚಿಕ್ಕಪ್ಪ ತುಂಬಾ ಒಳ್ಳೆಯವರಾಗಿದ್ದರಿಂದ ಗಾಂಧಿಗೆ ಬೇಕಾದ್ದನ್ನು ಮಾಡಿಕೊಡುತ್ತಿದ್ದರು.
ಗಾಂಧಿ ತನಗೆ ತೋಚಿದ್ದು ಮಾಡಿಕೊಂಡು ವಿರಾಗಿಯಂತೆ, ಸಂತನಂತೆ ಇರುತ್ತಿದ್ದ. ಎಲ್ಲೋ ಊಟ ಮಾಡುತ್ತಿದ್ದ, ಎಲ್ಲೋ ಮಲಗುತ್ತಿದ್ದ, ಇದ್ದಕ್ಕಿದ್ದಹಾಗೆ ಎಲ್ಲಿಗೋ ಹೊರಟುಬಿಡುತ್ತಿದ್ದ. ಯಾವಾಗಲೋ ಬರುತ್ತಿದ್ದ. ಸದಾ ಚಟುವಟಿಕೆ, ಓಡುನಡಿಗೆ, ಸಮಯಪರಿಪಾಲನೆ, ಮಾತು ತಪ್ಪದ ನಡೆ—ಎಲ್ಲಿ ಜನಕ್ಕೆ ಸಹಾಯ ಬೇಕಿದ್ದರೆ ಅಲ್ಲಿ ಪ್ರತ್ಯಕ್ಷ!
ಗಾಂಧಿ ಹುಡುಗನಾಗಿ, ಗಾಂಧಿ ಅಣ್ಣನಾಗಿ, ಈಗ ಗಾಂಧಿ ತಾತ. ಸುಮಾರು ಅರವತ್ತು ವರುಷ. ಈಗಲೂ ಮಕ್ಕಳಂಥ ನಗು, ಅದೇ ಜೋರು ನಡಿಗೆ, ಒಂದು ಇಸ್ತ್ರಿ ಇಲ್ಲದ ಬಿಳಿ ಶರ್ಟ್, ಬಿಳಿ ಪಂಚೆ, ಹೆಗಲ ಮೇಲೆ ಒಂದು ಸಣ್ಣ ಬಿಳಿ ಟವೆಲ್, ಮುಖ ಶುಭ್ರ, ಗಡ್ಡ-ಮೀಸೆ ಇಲ್ಲ.
ನಾಲ್ಕು ಜನ ಮಕ್ಕಳು; ಎಲ್ಲರೂ ಕೈಹತ್ತಿದ್ದಾರೆ, ಒಳ್ಳೆಯ ಮಕ್ಕಳು, ಚೆನ್ನಾಗಿ ಓದಿ ಒಳ್ಳೆಯ ಕೆಲಸಗಳಲ್ಲಿದ್ದಾರೆ. ಅಪ್ಪನಿಗೆ ಆಗಾಗ ಫೋನ್ ಮಾಡಿ ಮಾತನಾಡಿಸುತ್ತಾರೆ, ಹಬ್ಬಗಳಿಗೆ ಮನೆಗೆ ಬರುತ್ತಾರೆ, ಜೊತೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು, ಮಾತನಾಡುತ್ತಿದ್ದರು, ಅಪ್ಪನನ್ನು ರೇಗಿಸುತ್ತಿದ್ದರು. ಅಮ್ಮನೇ ಮಕ್ಕಳನ್ನು ಬೆಳೆಸಿದ್ದರೂ ಮಕ್ಕಳು ಅಪ್ಪನಿಗೆ ಗೌರವ ಕೊಡುತ್ತಿದ್ದರು. ದೊಡ್ಡಮಗನಿಗೆ ಆಗಾಗ ಅಪ್ಪನ ಅತಿ ಸಮಾಜಸೇವೆಗೆ ಕೋಪಬಂದರೂ, ಅಪ್ಪನ ಎದುರಿಗೆ ತುಟಿ ಬಿಚ್ಚುತ್ತಿರಲಿಲ್ಲ. ಮಕ್ಕಳಿಗೂ ತಾತನ, ಅಪ್ಪನ ಆಸ್ತಿ ಬೇಕಾಗಿರಲಿಲ್ಲ; ಆದ್ದರಿಂದ ಅಪ್ಪನ ಹಣ ಅವರಿಗೂ ಇವರಿಗೂ ಕೊಟ್ಟರೂ ಅಷ್ಟು ಬೇಸರಗೊಳ್ಳುತ್ತಿರಲಿಲ್ಲ.
ಕೂತು ಕೂತು ಬೇಸರವಾಗಿ ಇನ್ನು ಹೊರಡೋಣ ಎಂದುಕೊಳ್ಳುವಷ್ಟರಲ್ಲಿ, ಗಾಂಧಿ ದುಡುದುಡುನೆ ಬಂದ. ಮುಖದಲ್ಲಿ ಅದೇ ಪ್ರಸನ್ನತೆ, ಆದರೆ ಯಾರಿಗೂ ಕಾಣದ ಬೇಸರ ನನಗೆ ಮಾತ್ರ ಅವನ ಮುಖದಲ್ಲಿ ಕಾಣುತ್ತಿತ್ತು. “ಏನಾಯಿತು?” ಆಪ್ತಿಯಿಂದ ಕೇಳಿದೆ.
“ಏನಿಲ್ಲ” ಎಂದು ಎಲ್ಲೋ ನೋಡಿದ.
ಮತ್ತೆ ಮುಖ ನೋಡಿದೆ.
“ದೇಶಕ್ಕೆ ಸ್ವಾತಂತ್ರ್ಯ ಬಂತು, ಆದರೆ ಜನಕ್ಕೆ… ಅಲ್ಲಿ ಮನೆಯ ಒಳಗಡೆ ಬಿಡಲ್ಲ, ಇಲ್ಲಿ ದೇವಸ್ಥಾನದ ಒಳಗಡೆ ಬಿಡಲ್ಲ! ಇಲ್ಲಿ ಲಂಚ, ಅಲ್ಲಿ ಶೋಷಣೆ… ಛೆ! ಅಪ್ಪ ಯಾಕಾದರೂ ಮಹಾತ್ಮಾ ಗಾಂಧಿ ಹೆಸರಿಟ್ಟರೋ? ಒಬ್ಬರಿಗೆ ಸಹಾಯ ಮಾಡೋಕೆ ಆಗುತ್ತಿಲ್ಲ!”
“ಇಷ್ಟು ಸಹಾಯ ಮಾಡುತ್ತಿದ್ದೀಯ, ಇನ್ನೇನು ಮಾಡಬೇಕು? ಸಮಾಜದ ಪ್ರತಿ ಸಮಸ್ಯೆಗೂ ಪರಿಹಾರ ಒಬ್ಬರಿಂದ ಆಗುವುದಿಲ್ಲ, ನಮ್ಮ ಕೈಲಿ ಆಗಿದ್ದು ಮಾಡೋದಷ್ಟೇ.”
“ಚಿಕ್ಕಹುಡುಗ ನನಗೆ ಸಮಾಧಾನ ಮಾಡುತ್ತಿದ್ದೀಯಾ? ನೀನು ಒಬ್ಬ ಗುರು ನನಗೆ!” ಎಂದ ಖುಷಿಯಿಂದ.
ಅದೂ ಇದೂ ಮಾತನಾಡುತ್ತಾ ಕುಳಿತಿದ್ದೆವು.
ಮುಂದಿನ ಕೆಲ ತಿಂಗಳಲ್ಲಿ ಕಂಪನಿ ನನ್ನನ್ನು ಅಮೆರಿಕಾಗೆ ಕಳುಹಿಸುವುದಾಗಿ ಹೇಳಿತು. ಗಾಂಧಿಯ ಹತ್ತಿರ ಹೇಳಿದಾಗ ಬೈದುಬಿಟ್ಟ: “ಎಲ್ಲರೂ ದೇಶ ಬಿಟ್ಟು ಹೋಗಿ, ಸ್ವಲ್ಪನೂ ದೇಶಪ್ರೇಮವಿಲ್ಲ! ಅಲ್ಲಿ ಹೋದಮೇಲೆ ಯಾರೂ ಹಿಂತಿರುಗಿ ಬರಲು ಬಯಸುವುದಿಲ್ಲ. ಇದ್ದ ಬುದ್ಧಿಯಲ್ಲೇ ಇಲ್ಲೇ ಏನಾದರೂ ದೇಶಕ್ಕೆ ಒಳ್ಳೆಯದು ಮಾಡಬಹುದಲ್ಲ! ಎಲ್ಲರೂ ದೇಶಪ್ರೇಮದ ನಾಟಕ ಮಾಡೋರೇ!”
“ನಿನ್ನ ಗಾಂಧಿನೂ ದಕ್ಷಿಣ ಆಫ್ರಿಕಾಗೆ ಹೋಗಿಲ್ಲವೇ?”
“ಆ ಉದಾಹರಣೆ ತೆಗೆದುಕೊಂಡು ನೀನು ದೇಶಬಿಡುವುದಕ್ಕೆ ಸಿದ್ಧನಾಗಬೇಡ. ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಈಗ ನಿಮಗೆ ದೇಶದ ಜ್ಞಾನ ಹೆಚ್ಚು ಇದೆ, ಈಗೇಲ್ಲಾ ಇಂಟರ್ನೆಟ್ ಕಾಲ.”
“ಇಲ್ಲ, ಕಂಪನಿ ಕಳುಹಿಸುತ್ತಿದೆ, ವಾಪಸ್ ಬಂದುಬಿಡುತ್ತೇನೆ.”
“ಏನಾದರೂ ಮಾಡಿಕೋ” ಎಂದು ಎದ್ದು ದುಡುದುಡುನೆ ಹೊರಟು ಹೋಗಿದ್ದ.
ನಾನು ಅಮೆರಿಕಾಗೆ ಹೊರಟ ದಿವಸ ಏರ್‌ಪೋರ್ಟ್‌ಗೆ ಬಂದು, ಕಣ್ಣಲ್ಲಿ ನೀರು ತುಂಬಿಕೊಂಡು, ಒಳ್ಳೆಯದಾಗಲಿ ಎಂದು ಹಾರೈಸಿದ್ದ.
ಅಮೆರಿಕಾಗೆ ಬಂದು ಇಪ್ಪತ್ತು ವರುಷಗಳಾಗಿಹೋದವು. ದೇಶಕ್ಕೆ ವಾಪಸ್ ಹೋಗಲಿಲ್ಲ. ಆದರೆ ಭಾರತಕ್ಕೆ ಹೋದಾಗ ಅನೇಕ ದಿನಗಳು ಜೊತೆಯಲ್ಲಿ ಕಳೆಯುತ್ತಿದ್ದವು. ಅಮೆರಿಕಾದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದ.
ಒಂದು ದಿವಸ ಒಂದು ಫೋನ್ ಕಾಲ್ ಬಂತು: “ಗಾಂಧಿ ಇನ್ನಿಲ್ಲ” ಎಂದು. ಎದೆ ಒಡೆದುಹೋದಂತಾಯಿತು.






0 Comments