
ಮೂಲ : ರಾಬಿಯಾ ಅಲ್-ಬಸ್ರಿ ಸೂಫಿ ಕವನಗಳು
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ರಾಬಿಯಾ ಅಲ್-ಬಸ್ರಿ (717–801) ಆರಂಭಿಕ ಮಹಿಳಾ ಸೂಫಿ ಕವಿಗಳಲ್ಲಿ ಒಬ್ಬಳು. ಕ್ರಿ.ಶ. ಎಂಟನೇ ಶತಮಾನದ ಉತ್ತರಾರ್ಧದಲ್ಲಿ ಆಕೆ ಇರಾಕ್‌ನ ಬಸ್ರಾದಲ್ಲಿ ವಾಸಿಸುತ್ತಿದ್ದಳು ಎನ್ನುವುದು ಬಿಟ್ಟರೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.. ಆಕೆಯ ಬದುಕಿನ ಬಗ್ಗೆ ವಾಸ್ತವ ಮತ್ತು ದಂತಕಥೆಗಳು ಒಂದಕ್ಕೊಂದು ಬೆರೆತಿವೆ. ಆಕೆ ಬಡಕುಟುಂಬದಲ್ಲಿ ಹುಟ್ಟಿದಳು. ರಾಬಿಯಾ ಎನ್ನುವ ಹೆಸರೇ ‘ನಾಲ್ಕನೇ ಮಗಳು’ ಎಂದು ಅರ್ಥವಂತೆ. ರಾಬಿಯಾ ಸ್ವತಃ ಯಾವುದೇ ಲಿಖಿತ ಕೃತಿಗಳನ್ನು ಬಿಟ್ಟುಹೋಗಿಲ್ಲ. ಆಕೆಯ ಮೌಖಿಕ ಕವನಗಳನ್ನು ನಂತರ ಲಿಖಿತ ರೂಪಕ್ಕೆ ತರಲಾಯಿತು.
ಒಂದು ದಂತಕತೆಯ ಪ್ರಕಾರ ಆಕೆಯ ತಂದೆಯ ಮರಣದ ನಂತರ ಬಸ್ರಾದಲ್ಲಿ ಕ್ಷಾಮ ಉಂಟಾಯಿತು. ಆ ಸಂದರ್ಭದಲ್ಲಿ ಅವರ ಕುಟುಂಬ ವಲಸೆ ಹೋಗುತ್ತಿದ್ದಾಗ ದರೋಡೆಕೋರರು ದಾಳಿ ಮಾಡಿ ರಾಬಿಯಾಳನ್ನು ಎತ್ತಿಕೊಂಡು ಹೋಗಿ ಗುಲಾಮಗಿರಿಗೆ ಮಾರಿದರು. ಅಲ್ಲಿ ಯಜಮಾನ ರಾಬಿಯಾಳನ್ನು ವಿಪರೀತ ದುಡಿಸುತ್ತಿದ್ದ. ಆದರೆ ರಾತ್ರಿ ದಿನದ ಕೆಲಸಗಳನ್ನೆಲ್ಲ ಮುಗಿಸಿದ ಬಳಿಕ, ರಾಬಿಯಾ ಧ್ಯಾನ, ಪ್ರಾರ್ಥನೆಯಲ್ಲಿ ತೊಡಗುತ್ತಿದ್ದಳು. ಒಂದು ದಿನ ಯಜಮಾನ ರಾಬಿಯಾ ಪ್ರಾರ್ಥನೆಯಲ್ಲಿ ತೊಡಗಿರುವಾಗ ಆಕೆಯ ಸುತ್ತ ಒಂದು ದೈವಿಕ ಬೆಳಕು ಆವರಿಸಿಕೊಂಡಿದ್ದನ್ನು ನೋಡಿ ಇಂತಹ ಧರ್ಮನಿಷ್ಠ ಆತ್ಮವನ್ನು ಗುಲಾಮಳಾಗಿ ಇಟ್ಟುಕೊಂಡಿರುವುದನ್ನು ಕಂಡು ಬೆಚ್ಚಿಬಿದ್ದು ರಾಬಿಯಾಳನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದ. ನಂತರ ರಾಬಿಯಾ ಮರುಭೂಮಿಗೆ ತೆರಳಿ ತಪಸ್ವಿ ಜೀವನವನ್ನು ನಡೆಸತೊಡಗಿದಳು. ಮುರಿದ ಒಂದು ಮಡಕೆ, ಒಂದು ಚಾಪೆ ಮತ್ತು ತಲೆದಿಂಬಾಗಿ ಬಳಸುತ್ತಿದ್ದ ಒಂದು ಇಟ್ಟಿಗೆ ಇವಷ್ಟು ಹೊರತುಪಡಿಸಿ ಆಕೆಯ ಬಳಿ ಬೇರೆ ಏನೂ ಇರಲಿಲ್ಲ. ದೈವೀಕ ಪ್ರೀತಿಯ ಪರಿಕಲ್ಪನೆಯನ್ನು ರಾಬಿಯಾಳೇ ಮೊದಲ ಬಾರಿಗೆ ಪರಿಚಯಿಸಿದ್ದು ಎನ್ನುತ್ತಾರೆ. ಹಿಂದಿನ ಸೂಫಿಗಳು ದೇವರನ್ನು ಭಯದಿಂದ ಆರಾಧಿಸುತ್ತಿದ್ದರೆ, ರಾಬಿಯಾ ದೇವರನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ, ದೇವರಿಗಾಗಿ ಮಾತ್ರ ದೇವರನ್ನು ಪ್ರೀತಿಸಬೇಕು ಎನ್ನುವ ಕಲ್ಪನೆಯನ್ನು ಮೊದಲ ಬಾರಿಗೆ ಪ್ರತಿಪಾದಿಸಿದಳು.
1 ಓ ಅಲ್ಲಾಹುವೇ!
ನರಕದ ಭಯದಿಂದ ನಿನ್ನನ್ನು ಆರಾಧಿಸಿದೆನಾದರೆ,
ನನ್ನನ್ನು ನರಕದಲ್ಲೇ ಸುಟ್ಟುಬಿಡು!
ಸ್ವರ್ಗದ ಆಸೆಯಿಂದ ನಿನ್ನನ್ನು ಆರಾಧಿಸಿದೆನಾದರೆ,
ನನ್ನನ್ನು ಸ್ವರ್ಗದಿಂದಲೇ ಹೊರಗಿಡು!
ಆದರೆ ನಿನ್ನನ್ನೇ ನಿನ್ನ ಸಲುವಾಗಿ ಆರಾಧಿಸಿದೆನಾದರೆ,
ನಿನ್ನ ಶಾಶ್ವತ ಸೌಂದರ್ಯದಿಂದ ನನ್ನನ್ನು ವಂಚಿಸಬೇಡ.
2 ಸೈತಾನನ ಮಾತುಗಳನ್ನು ದೂರವಿಡು
ಓ ದೇವರೇ, ನನ್ನ ಪ್ರಾರ್ಥನೆಯೊಂದಿಗೆ
ಬೆರೆತುಬರುವ ಸೈತಾನನ ಮಾತುಗಳನ್ನು ದೂರವಿಡು
ಅದು ಸಾಧ್ಯವಿಲ್ಲದಿದ್ದರೆ,
ಸೈತಾನನೂ ಸೇರಿದಂತೆ ನನ್ನ ಪ್ರಾರ್ಥನೆಯನ್ನು
ಇರುವಂತೆಯೇ ಸ್ವೀಕರಿಸು.
3 ವಾಸ್ತವ
ಪ್ರೀತಿಯಲ್ಲಿ ಹೃದಯ ಹೃದಯಗಳ ನಡುವೆ
ಏನೂ ಇರುವುದಿಲ್ಲ.
ಹಂಬಲದಿಂದ ಮಾತು ಹುಟ್ಟುತ್ತದೆ,
ನಿಜವಾದ ಅನುಭವದಿಂದ ನಿಜವಾದ ವಿವರಣೆ ಹುಟ್ಟುತ್ತದೆ.
ರುಚಿ ಕಂಡವನಿಗೆ ಮಾತ್ರ ಅದು ತಾನಾಗಿ ತಿಳಿಯುತ್ತದೆ.
ಅದನ್ನು ವಿವರಿಸುತ್ತಿದ್ದಾನೆಂದರೆ ಅವನು ಸುಳ್ಳಾಡುತ್ತಿದ್ದಾನೆ.
4 ಸಾಯುವ ಮೊದಲು ಸಾಯಿ
ಎಂಥಾ ವಿಡಂಬನೆ,
ನಮ್ಮ ದೇಹದ ಅತ್ಯಂತ ಆಪ್ತವಾದ
ಕ್ರಿಯೆಗಳಲ್ಲಿ ಒಂದು
ಸಾವು.
ನನ್ನ ಸಾವು ಎಷ್ಟು ಸುಂದರ ಎನ್ನಿಸಿತು
ನಾನು ಯಾರನ್ನು ಚುಂಬಿಸಲಿದ್ದೇನೆ ಎನ್ನುವುದು ತಿಳಿದಾಗ,
ನಿಜವಾದ ಸಾವು ಸಂಭವಿಸುವ ಮೊದಲೇ
ನಾನು ಸಾವಿರ ಬಾರಿ ಸತ್ತುಬಿಟ್ಟಿದ್ದೆ.
“ನೀನು ಸಾಯುವ ಮೊದಲು ಸಾಯಿ,”
ಎಂದರು ಪ್ರವಾದಿ ಮುಹಮ್ಮದ್.
ಭಯಪಡುವ ರೆಕ್ಕೆಗಳು
ಎಂದಾದರೂ ಸೂರ್ಯನನ್ನು
ಮುಟ್ಟಬಲ್ಲವೇ?
ಒಮ್ಮೆ ನಾನು ಭಯಪಟ್ಟಿದ್ದನ್ನೆಲ್ಲ
ಪ್ರೀತಿಸಬಲ್ಲೆ ಎನ್ನುವುದನ್ನು ಅರಿತ ಕ್ಷಣವೇ
ನಾನು
ಹುಟ್ಟಿದೆ.
5 ನನ್ನ ಆತ್ಮದಲ್ಲಿ
ನನ್ನ ಆತ್ಮದಲ್ಲಿ
ಒಂದು ದೇವಾಲಯ,
ಒಂದು ಪವಿತ್ರ ಸನ್ನಿಧಿ,
ಒಂದು ಮಸೀದಿ,
ಒಂದು ಚರ್ಚ್ ಇದೆ.
ಅಲ್ಲಿ ನಾನು ಮಂಡಿಯೂರುತ್ತೇನೆ.
ಪ್ರಾರ್ಥನೆ ನಮ್ಮನ್ನು ಕರೆದೊಯ್ಯಬೇಕು
ಗೋಡೆಗಳೂ ಹೆಸರುಗಳೂ ಇಲ್ಲದ
ಒಂದು ವೇದಿಕೆಯ ಬಳಿಗೆ
ಯಾವುದೇ ಸಾರ್ವಭೌಮತ್ವವಿಲ್ಲದ,
ಬೆಳಕು ಮಾತ್ರ ತುಂಬಿದ
ಪ್ರೀತಿಯ ಒಂದು ಪ್ರದೇಶವಿಲ್ಲವೇ?
ಅಲ್ಲಿ ಪರವಶತೆ
ತನ್ನೊಳಗೇ ಸುರಿದುಕೊಂಡು
ತಾನೇ ಕಳೆದುಹೋಗುವುದಿಲ್ಲವೇ?
ಅಲ್ಲಿ ರೆಕ್ಕೆ ಪಕ್ಕಾ ಜೀವಂತವಾಗಿರುತ್ತದೆ, ಆದರೆ,
ಅದಕ್ಕೆ ಮನಸ್ಸಾಗಲೀ ದೇಹವಾಗಲೀ ಇರುವುದಿಲ್ಲ.
ನನ್ನ ಆತ್ಮದಲ್ಲಿ
ಒಂದು ದೇವಾಲಯ,
ಒಂದು ದೇಗುಲ,
ಒಂದು ಮಸೀದಿ,
ಒಂದು ಚರ್ಚ್ ಇದೆ
ಅವು ಕರಗುತ್ತವೆ
ಅವು ಕರಗುತ್ತವೆ
ದೇವರಲ್ಲಿ.






0 Comments