ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.
ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.
ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – 18
ಕೃತಿ – ಅಪರವಯಸ್ಕನ ಅಮೆರಿಕಾಯಾತ್ರೆ
ಲೇಖಕರು – ಎ ಎನ್ ಮೂರ್ತಿರಾವ್
ಪ್ರಕಾಶನ – ಡಿ ವಿ ಕೆ ಮೂರ್ತಿ
ಬೆಲೆ – ೧ ೫ ೦
ಎ.ಎನ್. ಮೂರ್ತಿರಾವ್ ಎಂದರೆ ಥಟ್ಟನೆ ನೆನಪಾಗುವುದು ಅವರ ವೈಚಾರಿಕ ಕೃತಿ “ದೇವರು”. ಇದನ್ನು ಪ್ರಜ್ಞಾವಂತ ಮನಸ್ಸುಗಳು ಒಮ್ಮೆ ಓದಲೇಬೇಕಾದ ಕೃತಿ ಎಂದರೆ ತಪ್ಪಾಗದು. ಹಾಗೆಯೇ ಪ್ರವಾಸ ಸಾಹಿತ್ಯದಲ್ಲಿ ಕೂಡ ಮೈಲಿಗಲ್ಲಾಗಿ ನಿಲ್ಲುವ ಅವರ “ಅಪರ ವಯಸ್ಕನ ಅಮೆರಿಕಾ ಯಾತ್ರೆ” ಎಂಬುದು ಅಷ್ಟೇ ಮಹತ್ವದ್ದಾಗಿದೆ. ಅವರ ಪೂರ್ಣ ಹೆಸರು ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್ ಎಂದು,ಇವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ ಮತ್ತು ಅನುವಾದಕರಾಗಿ ಹೆಸರಾದವರು. ಲೇಖಕರು ತಮ್ಮ ಇಳಿ ವಯಸ್ಸಿನಲ್ಲಿ (ಅಪರ ವಯಸ್ಸಿನಲ್ಲಿ )ಅಂದರೆ ನಿವೃತ್ತಿಯ ನಂತರ ಮಗನ ಕರೆಯ ಮೇರೆಗೆ 1973 ರಲ್ಲಿ ಮೊದಲ ಬಾರಿಗೆ ಅಮೆರಿಕ ಪ್ರವಾಸವನ್ನ ಕೈಗೊಳ್ಳುತ್ತಾರೆ. ಮತ್ತೆ ಮೂರು ವರ್ಷಗಳ ನಂತರ ಪುನಃ ಭೇಟಿ ನೀಡಿ ತದನಂತರ ಅಮೆರಿಕ ಮತ್ತು ಭಾರತ ಎರಡು ರಾಷ್ಟ್ರಗಳ ಸಾಹಿತ್ಯ, ಸಂಸ್ಕೃತಿ, ಜನಜೀವನ ಹೀಗೆ ಎಲ್ಲವನ್ನು ಒಟ್ಟಾಗಿ ತೌಲನಿಕವಾಗಿ ಗಮನಿಸಿ ಪ್ರಬುದ್ಧವಾದ ಅನುಭವ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
ಈ ಪ್ರವಾಸ ಕಥನ ದಿನಚರಿಯ ರೀತಿಯಲ್ಲಿ ಮೂಡಿಬಂದಿರದೆ, ಹಾಸ್ಯಪ್ರಜ್ಞೆಯಿಂದ ಲಲಿತ ಪ್ರಬಂಧದ ರೀತಿಯಲ್ಲಿ ಬರೆದಿದ್ದು ವಿಶೇಷವಾಗಿದೆ. ಪಕ್ವಗೊಂಡ ಮನಸ್ಸು ಎಲ್ಲವನ್ನು ಸಮಚಿತ್ತದಿಂದ ನೋಡಿ, ಸರಿ ತಪ್ಪುಗಳನ್ನು ಸಮತೂಕದಲ್ಲಿ ಕಂಡು ಭಾಷಾ ಶ್ರೀಮಂತಿಕೆಯೊಂದಿಗೆ ಬಣ್ಣಿಸಿದ್ದಾರೆ. ಕೃತಿ ಉದ್ಧಕ್ಕೂ ಸಾಕಷ್ಟು ಬಾರಿ ಅಲ್ಲಿನ ಜನರೊಂದಿಗೆ ಮಾತುಕತೆ ಮಾಡುತ್ತಾ, ಕೆಲವೊಮ್ಮೆ ವಲಸೆ ಹೋದ ಭಾರತೀಯರ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಅರಿಯುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಈ ಕಥನವೂ ಎರಡು ಸಂಸ್ಕೃತಿಗಳ ತೌಲನಿಕ ಅಧ್ಯಯನ ಎಂದರೆ ತಪ್ಪಾಗದು. ಇದೇ ಭಾವ ಶಿವರಾಂ ಕಾರಂತರ “ಅಪೂರ್ವ ಪಶ್ಚಿಮ” ಪ್ರವಾಸ ಕಥನ ಓದಿದಾಗಲೂ ದಕ್ಕುವುದು.
ಈ ಪ್ರವಾಸ ಕಥನವು ಎರಡು ಭಿನ್ನ ನಾಗರಿಕತೆಗಳ ತುಲನೆ ಮಾಡುತ್ತಾ ಹೋಗುವುದು. ಅಲ್ಲಿನವರ ಸ್ವಭಾವ,ಅತಿಥಿಸತ್ಕಾರ, ಆಹಾರ ಪದ್ಧತಿ, ಯಂತ್ರಗಳ ಬಳಕೆ, ಕೊಳ್ಳಬಾಕ ಸಂಸ್ಕೃತಿ ಎಲ್ಲವನ್ನೂ ಸಾಧ್ಯಂತವಾಗಿ ಹತ್ತಿರದಿಂದ ಗಮನಿಸಿ ಬರೆದಿದ್ದಾರೆ. ಇನ್ನು ಅಲ್ಲಿನ ಕುಟುಂಬ ವ್ಯವಸ್ಥೆ ಅವರ ಅಭದ್ರತೆಯ ಬದುಕು ಹಲವು ಉದಾಹರಣೆಗಳ ಮೂಲಕ ತಿಳಿಸಿದ್ದಾರೆ. ಅವರ ಸೊಸೆಯ ತಂಗಿ ಲಿಂಡಾ ‘ತಂದೆ ತಾಯಿ ನೋಡಿದವರನ್ನು ಹೇಗೆ ವಿವಾಹ ವಾಗುವುದು ಮತ್ತು ಜೀವನಪರ್ಯಂತ ಅವರೊಂದಿಗೆ ಹೇಗೆ ಬದುಕು ಸಾಗಿಸಬೇಕು’ ಎಂಬ ಅವಳ ಕೌತುಕದ ಪ್ರಶ್ನೆಗೆ ನಮ್ಮ ಭಾರತದ ಕುಟುಂಬ ವ್ಯವಸ್ಥೆಯ ಕುರಿತಾಗಿ ವಿವರಿಸುವರು. ಇನ್ನು ಅಲ್ಲಿನ ಹದಿಹರೆಯದ ಮಕ್ಕಳು ಹಿಂಸಾ ಮನೋಭಾವ ಬೆಳೆಸಿಕೊಂಡದ್ದು, ಮುಕ್ತವಾಗಿ ಶಸ್ತ್ರಾಸ್ತ್ರಗಳ ಬಳಕೆ ಹಾಗಾಗಿ ಭಯದ ವಾತಾವರಣ ಕಂಡದ್ದನ್ನು ಮತ್ತು ಅನೇಕ ಪತ್ರಿಕೆಗಳ ಆಧಾರದ ಮೇಲೆ ಯುವತಲೆಮಾರಿನ ಸಮಸ್ಯೆಯನ್ನು ಹೇಳಿದ್ದಾರೆ.
ಇನ್ನು ಕೃತಿಯಲ್ಲಿ ಹಲವಾರು ಹಾಸ್ಯಮಯ ಮತ್ತು ವಿಶೇಷ ಪ್ರಸಂಗಗಳು ಕಾಣಬಹುದು. ಅವರ ಮಗನ ವಿವಾಹ ಅದು ಪಾಶ್ಚಾತ್ಯ ಹುಡುಗಿಯೊಂದಿಗೆ ಆಗುವುದು. ಮೊದಲು ಇರಿಸು ಮುರಿಸು ಆದರೂ ನಂತರ ಹೊಂದಾಣಿಕೆ ಮಾಡಿಕೊಂಡಿದ್ದು, ಮೊಮ್ಮಗ ಕನ್ನಡದಲ್ಲಿ ಮಾತನಾಡದೆ ಇಂಗ್ಲಿಷ್ ನಲ್ಲಿ ಮಾತನಾಡಿಸಿದ್ದು, ಅಮೆರಿಕದಲ್ಲಿ ಬೀಗರ ಆದರ ಆತಿಥ್ಯ ಕಂಡು ಖುಷಿ ಪಟ್ಟದ್ದು ಹೀಗೆ ಎಲ್ಲವನ್ನೂ ನವಿರಾದ ಹಾಸ್ಯದೊಂದಿಗೆ ಹೇಳಿದ್ದಾರೆ. ಇನ್ನು ಅಮೆರಿಕಾದ ಜನ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ ಎಂದು ಅವರ ಪ್ರವಾಸದ ಹುಚ್ಚನ್ನು ಹೇಳುವರು. ಅವರು ನಯಾಗರ ಜಲಪಾತ ನೋಡಲು ಹೋದಾಗ ನಮ್ಮ ಜೋಗ ಜಲಪಾತವನ್ನು ನೆನಪಿಸಿಕೊಂಡಿದ್ದು ವಿಶೇಷ ಸಂಗತಿ. ಹೀಗೆ ಹಲವಾರು ಸಂದರ್ಭಗಳಲ್ಲಿ ನಮ್ಮ ನೆಲದ ವಿಶೇಷತೆಯನ್ನು ಪದೇ ಪದೇ ಸ್ಮರಿಸುತ್ತಲೇ ಹೋಗುತ್ತಾರೆ.
ಅಮೆರಿಕದವರ ಜೀವನಶೈಲಿ ಹೇಳುವಾಗ ಅವರ ಮನೆಯ ವಿನ್ಯಾಸ, ಅದರಲ್ಲೂ ಸ್ನಾನದ ಕೋಣೆಗೆ ಕೊಡುವ ಮಹತ್ವ, ಅಲ್ಲಿನ ರಸ್ತೆ, ಅವರ ನಿಯಮಾವಳಿ, ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಅಭಿಮಾನದಿಂದ ಹೇಳುತ್ತಾರೆ. ಮನೆಗೆ ಬರುವ ಕೆಲಸದಾಳಿಗೂ ಕೂಡ ಗೌರವ ನೀಡುವ ಅವರ ಪದ್ಧತಿ ಮತ್ತು ಕಾರನ್ನು ಹೊಂದಿದವರು ಕೂಡ ಬಡವರು ಎಂಬ ಅವರ ಕಲ್ಪನೆ ಎಲ್ಲವನ್ನು ಹೇಳುತ್ತಾ ಸಣ್ಣ ಸಣ್ಣ ಸಂಗತಿಗಳನ್ನು ಕೂಡ ಸೂಕ್ಷ್ಮವಾಗಿ ಗಮನಿಸಿ ಓದುಗರ ಗಮನ ಸೆಳೆದಿದ್ದಾರೆ.
ಲೇಖಕರು ಇಂಗ್ಲೀಷ್ ಉಪನ್ಯಾಸಕರಾಗಿರುವುದರಿಂದ, ಸಾಕಷ್ಟು ಇಂಗ್ಲಿಷ್ ಪದಗಳು, ಇಂಗ್ಲೀಷ್ ಕವಿತೆಯ ಸಾಲು ಮತ್ತು ಅನೇಕ ಪಾಶಾತ್ಯ ಲೇಖಕರನ್ನು ಉದಾರಿಸುತ್ತಾ ಹೋಗುತ್ತಾರೆ. ಹಾಗೆಯೇ ಸಾಕಷ್ಟು ನಾಣ್ನುಡಿಗಳನ್ನು ಬಳಸಿದ್ದಾರೆ. (ಉದಾ.ನೆತ್ತಿ ಚರ್ಮ ಸುಲಿಯುವುದು ) ಅವುಗಳ ಅರ್ಥವನ್ನು ಕೂಡ ಅಲ್ಲಿಯೇ ವಿವರಿಸಿದ್ದು ಓದುಗರಿಗೆ ಅನುಕೂಲ ಆಗುವಂತಿದೆ .
ಒಟ್ಟಾರೆ 50 ವರ್ಷಗಳ ಹಿಂದಿನ ಅಮೆರಿಕಾದ ಅನುಭವ ಕಥನವನ್ನು ಓದಿದಾಗ, ಇಂದು ನಮ್ಮ ಭಾರತವು ಪಾಶ್ಚಾತ್ಯರ ಯಥಾವತ್ತದ ನಕಲು ಮಾಡುತ್ತಿದೆ ಎಂಬ ಭಾವ ಮೂಡದೆ ಇರದು. ಅದರಲ್ಲೂ ಅಲ್ಲಿನ ಜನರ ಜೀವನ ಶೈಲಿ, ಮನೆಯ ವಿನ್ಯಾಸ, ಕೊಳ್ಳಬಾಕ ಸಂಸ್ಕೃತಿ, ಉಡುಗೆ ತೊಡಗೆ,ಹದಿ ಹರೆಯರ ಮಕ್ಕಳ ಸ್ವಭಾವ ಜೊತೆಗೆ ಕುಟುಂಬ ವ್ಯವಸ್ಥೆಯು ಬದಲಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಲೇಖಕರು ಕಳೆದ ಶತಮಾನದಲ್ಲಿ ಅಮೆರಿಕವನ್ನು ಕಂಡು ಬೆರಗಿನಿಂದ ಬಣ್ಣಿಸಿದರೆ ಇಂದು ಆ ಎಲ್ಲಾ ಸಂಗತಿಗಳು ನಮ್ಮನೆಲದಲ್ಲಿ ಪುನರಾವರ್ತನೆಗೊಳ್ಳುತ್ತಿರುವುದನ್ನು ಕಾಣಬಹುದು. ಹಾಗೆಂದು ಅಲ್ಲಿನ ಶಿಸ್ತು ಸಮಯ ಪ್ರಜ್ಞೆ ಅವರ ನಡಾವಳಿಯ ಅನುಕರಣೆ ಯಾವುದು ನಾವು ಮಾಡುತ್ತಿಲ್ಲ. ಆದರೆ ಅವರ ನಕಾರಾತ್ಮಕ ಸಂಗತಿಗಳು ಇಂದು ನಮ್ಮವರಿಗೆ ಸಕಾರಾತ್ಮಕವಾಗಿ ಕಾಣುತ್ತಿವೆ.
ಅಪರವಯಸ್ಕನ ಅಮೇರಿಕಾ ಯಾತ್ರೆ ಪ್ರವಾಸ ಸಾಹಿತ್ಯದಲ್ಲಿ ಬಹು ಮುಖ್ಯವಾಗಿ ಕಾಣುವುದು ಭಾಷಾ ಪ್ರೌಢಿಮೆ. ಹಾಗಾಗಿ ಭಾಷಿಕ ದೃಷ್ಟಿಯಿಂದಲೂ ಕೂಡ ಮಹತ್ವದ ಪ್ರವಾಸ ಕಥನ ಎಂದು ಹೇಳಬಹುದು. ಕನ್ನಡ ಇಂಗ್ಲಿಷ್ ಮತ್ತು ಸಂಸ್ಕೃತದ ಹದವಾದ ಬಳಕೆ, ಲೇಖಕರ ಅನುಭವ ಮತ್ತು ಅಧ್ಯಯನದ ಹಿನ್ನೆಲೆಯಲ್ಲಿ ಮಹತ್ವದ ಮತ್ತು ಮಾಹಿತಿ ಪೂರ್ಣವಾದ ಕೃತಿಯಾಗಿ ಮೂಡಿಬಂದಿದೆ. ಪ್ರವಾಸ ಕೈಗೊಳ್ಳುವ ಹುಕಿ ಇರುವವರಿಗೆ ಮತ್ತು ಇತರರ ಅನುಭವವನ್ನು ಓದಿ ಅಸ್ವಾದಿಸುವ ಮನಸ್ಸುಗಳಿಗೆ ಇದೊಂದು ಉತ್ತಮ ರಸದೌತಣ ನೀಡುವ ಕೃತಿ ಎನ್ನಬಹುದು.






0 Comments