ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳಿಗಾಗಿ ಒಂದು ಪರಿಸರ ಪಾಠ..

–ಪಾರ್ವತಿ ಐತಾಳ್

ಕೃತಿ : ಅಯ್ಯೋ ಕಕ್ಕ…!
ಇಂಗ್ಲಿಷ್ ಮೂಲ : ತೇಜಸ್ವಿನಿ ಆಪ್ಟೆ -ರಾಮ್ & ಸುಜಾತಾ ಪದ್ಮನಾಭನ್
ಕನ್ನಡ ಅನುವಾದ : ಕನ್ಸೆಪ್ಟಾ ಫರ್ನಾಂಡೀಸ್.
ಪ್ರಕಾಶನ : ಬಹುರೂಪಿ ಪ್ರಕಾಶನ
ಬೆಲೆ : ೧೨೦

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

‘ಅಯ್ಯೋ ಕಕ್ಕ’ ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುವ ಕೃತಿ. ಮಕ್ಕಳಿಗಾಗಿ ತೇಜಸ್ವಿನಿ ಆಪ್ಟೆ -ರಾಮ್ & ಸುಜಾತಾಪದ್ಮನಾಭನ್ ಇಂಗ್ಲಿಷ್ ನಲ್ಲಿ ಬರೆದಿರುವ ಈ ಸಚಿತ್ರ ಪುಸ್ತಕವನ್ನು ಕನ್ನಡಕ್ಕೆ ಲೇಖಕಿ ( ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿದ್ದು ಈಗ ನಿವೃತ್ತರು) ಕನ್ಸೆಪ್ಟಾ ಫರ್ನಾಂಡೀಸ್ ಅನುವಾದಿಸಿದ್ದಾರೆ.‌
ನಾವು ಸಾಮಾನ್ಯವಾಗಿ ಮಲವಿಸರ್ಜನೆಯ ಬಗ್ಗೆ ಕೀಳಾಗಿ ಮಾತನಾಡುತ್ತೇವೆ. ಮಕ್ಕಳೂ ನಮ್ಮನ್ನೇ ಅನುಸರಿಸುತ್ತವೆ. ಆದರೆ ವೈಜ್ಞಾನಿಕವಾಗಿ ಆಲೋಚಿಸಿ ನೋಡಿದರೆ ತಿನ್ನುವುದು ಹೇಗೋ ಹಾಗೆಯೇ ಮಲವಿಸರ್ಜನೆ ಕೂಡಾ ಒಂದು ಸಹಜ ಕ್ರಿಯೆ ಅನ್ನುವ ಭಾವನೆ ಮಕ್ಕಳಲ್ಲಿ ಮೂಡಬೇಕು.

ಪ್ರತಿಯೊಂದು ಪ್ರಾಣಿಯೂ ಅದರದ್ದೇ ಆದ ವಿಧಾನದಲ್ಲಿ ಮಲವಿಸರ್ಜನೆ ಮಾಡುತ್ತದೆ . ಕೆಲವು ಪ್ರಾಣಿಗಳು ಅದನ್ನೇ ತಿನ್ನುತ್ತವೆ ಮತ್ತು ಇನ್ನು ಕೆಲವು ಸ್ವರಕ್ಷಣೆಗಾಗಿ ಅದನ್ನು ಬಳಸಿಕೊಳ್ಳುತ್ತವೆ. ಮಕ್ಕಳಿಗೆ ಪ್ರಾಣಿಗಳ ಕಕ್ಕದ ಕುರಿತು ತಿಳಿಯ ಹೇಳುವ ಈ ಕೃತಿಯಲ್ಲಿ ಬಣ್ಣ ಬಣ್ಣದ ಆಕರ್ಷಕ ಚಿತ್ರಗಳಿವೆ. ಕಾರ್ಟೂನುಗಳಿವೆ. ದೊಡ್ಡ ಪ್ರಾಣಿಗಳು ಮತ್ತು ಪಕ್ಷಿಗಳ ಜತೆಗೆ ಚಿಕ್ಕ ಚಿಕ್ಕ ಜೀರುಂಡೆ, ಚಿಟ್ಟೆ, ಕಂಬಳಿಹುಳ, ಹೇನು, ಜೇನು ಹುಳ, ಗೆದ್ದಲು ಹುಳ, ಜೆಲ್ಲಿಫಿಷ್, ಮೂಗಿಲಿ, ಕಪ್ಪೆ, ಜೇಡ ಮೊದಲಾದ ಕ್ರಿಮಿ ಕೀಟಗಳೂ ರಂಗದ ಮೇಲೆ ಕಾಣಿಸಿಕೊಳ್ಳುತ್ತವೆ. ಕೊನೆಯ ಎರಡು ಪುಟಗಳಲ್ಲಿ ಮಕ್ಕಳೇ ಪರಸ್ಪರ ತಮ್ಮ ಅನುಭವಗಳನ್ನು ಸಂಭಾಷಣೆಯ ಮೂಲಕ ಹಂಚಿಕೊಳ್ಳುತ್ತಾರೆ. ಕೊನೆಯ ಹುಡುಗ ಹೇಳುವ ಮಾತು ‘ನಾನು ಇನ್ನು ಮುಂದೆ ಕಕ್ಕವನ್ನು ಮೊದಲಿನಂತೆ ನೋಡುವುದಿಲ್ಲ’ಎಂದು.

ಪ್ರಾಣಿಗಳ ಜೀವನಕ್ರಮದ ಬಗ್ಗೆ ಕಡಿಮೆ ಶಬ್ದಗಳಲ್ಲಿ ಬಹಳಷ್ಟು ವಿಷಯಗಳನ್ನು ಹೇಳುವ ಈ ಕೃತಿ ಮಕ್ಕಳನ್ನು ಪ್ರಾಣಿಗಳ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ನಿಸರ್ಗದಲ್ಲಿ ಅವು ನಮ್ಮ ಸಹಜೀವಿಗಳು, ಆದ್ದರಿಂದ ಅವುಗಳನ್ನು ಪ್ರೀತಿಸುವ ಬುದ್ಧಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂಬ ಪರಿಸರ ಪಾಠವನ್ನು ಪರೋಕ್ಷವಾಗಿ ಹೇಳಿ ಕೊಡುತ್ತದೆ. ಪ್ರತಿ ಪುಟದಲ್ಲೂ ಪ್ರತಿ ಪ್ರಾಣಿ ತನ್ನ ಮಲವಿಸರ್ಜನೆಯ ಶೈಲಿ ಮತ್ತು ಉದ್ದೇಶಗಳನ್ನು ಕುರಿತು ಸ್ವತಃ ಪ್ರಾಣಿಗಳೇ ಮಾತನಾಡುವಂತೆ ಸಂಭಾಷಣೆಗಳಿವೆ. ಉದ್ದೇಶವೇ ? ಹೌದು – ಕೆಲವೊಮ್ಮೆ ಮಲವಿಸರ್ಜನೆ ಮಾಡುವುದು, ಸುತ್ತಲೂ ಚೆಲ್ಲುವುದು, ಇಡೀ ಮೈಯನ್ನು ಮಲದಿಂದಲೇ ಮುಚ್ಚಿಕೊಳ್ಳುವುದು ಇತ್ಯಾದಿ ಕ್ರಿಯೆಗಳು ಪ್ರಾಣಿಗಳಿಗೆ ಸ್ವರಕ್ಷಣಾ ತಂತ್ರವೂ ಆಗಿರುತ್ತದೆ.

ಮಲವಿಸರ್ಜನೆಯಂತಹ ಸಹಜ ಕ್ರಿಯೆಯ ಬಗ್ಗೆ ಮಕ್ಕಳು ಆಲೋಚಿಸುವಂತೆ ಮಾಡುವುದು ಕೃತಿಯ ಉದ್ದೇಶ. ಇಲ್ಲಿನ ಚಿತ್ರಗಳು ಹಾಗೂ ಲಘುದಾಟಿಯ ಸಂಭಾಷಣೆಗಳು ಓದುಗನಿಗೆ ಒಂದು ರೂಪಕವನ್ನು ವೀಕ್ಷಿಸಿದ ಅನುಭವ ನೀಡುತ್ತವೆ.
ಮಕ್ಕಳ ಲೋಕವನ್ನು ವಿಸ್ತ್ರತ ಗಳಿಸುವ ಸುಂದರವಾದ ಈ ಪುಟ್ಟ ಕೃತಿಯನ್ನು ಮಕ್ಕಳಿಗೆ ಬರ್ತ್ ಡೇ ಗಿಫ್ಟ್ ಆಗಿ ಕೊಡಬಹುದಾಗಿದೆ.

‍ಲೇಖಕರು Admin

27 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading