ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೃಥ್ವಿ ಸೂರಿ ಅಂಕಣ – ಫಸ್ಟ್ ಕ್ಲಾಸ್ ಪ್ರಾಜೆಕ್ಟ್ (A FIRST CALSS PROJECT)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು

ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.

ಮೂಲ – ರಾಜು ಜೆ಼ಡ್. ಮೊರೆ

ಕನ್ನಡಕ್ಕೆ – ಪೃಥ್ವಿ ಸೂರಿ

ಅಂಕಣ – ೧೨

ವಕೀಲರೊಬ್ಬರಿಗೆ ಕಾನೂನಿನ ಬೋಧನೆ ಮಾಡುವುದೆಂದರೆ ಪಂಚಪ್ರಾಣ. ಅವರು ಕಾನೂನಿನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಲ್ಲದೆ, ನಂತರ ಪಿಎಚ್.ಡಿ ಪದವಿಯನ್ನೂ ಪಡೆದಿದ್ದರು.

ಒಂದು ವೇಳೆ‌ ಅವರು ಬೋಧನೆಯನ್ನೇ ವೃತ್ತಿಯಾಗಿ ಸ್ವೀಕರಿಸಿದ್ದರೆ ಅವರು ಒಬ್ಬ ‘ಡೀನ್’ ಆಗಬಹುದಿತ್ತು. ಆದರೆ, ವಕೀಲರಿಗೆ ವಕಾಲತ್ತಿನ ಮೇಲೆ ವಿಪರೀತವಾದ ಆಸಕ್ತಿ ಮತ್ತು ಬಾಂಬೆ ಹೈಕೋರ್ಟಿನಲ್ಲಿ ತಮ್ಮ ಹೆಸರು ಮಾಡಬೇಕೆನ್ನುವ ಬಯಕೆಯೂ ಇತ್ತು. ವಕಾಲತ್ತನ್ನು ಆರಂಭಿಸಿದ ನಂತರವೂ ಅವರು ತಮ್ಮ ಮೊದಲ ಪ್ರೀತಿಯಾದ ಬೋಧನೆಯನ್ನು ಬಿಡಲಿಲ್ಲ. ಅರೆಕಾಲಿಕವಾಗಿಯಾದರೂ ಕಾನೂನನ್ನು ಕಲಿಸುವುದನ್ನು ಮುಂದುವರೆಸಿದರು.

ವರ್ಷಗಳು ಉರುಳಿದವು. ಅವರು ಬೇಡಿಕೆಯ ವಕೀಲರಾಗಿ ಗುರುತಿಸಿಕೊಂಡರು. ಬಾಂಬೆ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿಯೂ ಒಳ್ಳೆಯ ಹೆಸರನ್ನು ಮಾಡಿದರು. ಈ ಕತೆಗಾಗಿ ಅವರಿಗೆ ‘ವಕೀಲ ಸತ್ಯವಾನ್’ ಎಂದು ಹೆಸರಿಡೋಣ.

ಸತ್ಯವಾನ್ ಆಧ್ಯಾತ್ಮಿಕ ಮನೋಭಾವದಾವರು. ಸನ್ಮಾರ್ಗದ ಹಾದಿ ಅವರಿಗೆ ಅಚ್ಚುಮೆಚ್ಚು. ಕಾನೂನು ಪ್ರಾಧ್ಯಾಪಕರಾಗಿ ಅವರ ಹಿರಿತನ ಹೆಚ್ಚಾದಂತೆ, ವಿಶ್ವವಿದ್ಯಾಲಯವು ಅವರಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ಮಾಡರೇಟರ್ ಮತ್ತು ಪರೀಕ್ಷಕರಾಗಿ ಕೆಲಸ ಮಾಡುವ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿದರು.

ಒಂದು ಸಂಜೆ, ತಾವು ಯಾವಾಗಲೂ ಹೋಗುತ್ತಿದ್ದ ದೇವಸ್ಥಾನಕ್ಕೆ ಹೋಗಿ ಅಲ್ಲಿ ಭಜನೆ ಮುಗಿಸಿ ಮನೆಗೆ ಬಂದಾಗ, ಸತ್ಯವಾನ್ ಅವರಿಗೆ ಒಬ್ಬ ವ್ಯಕ್ತಿ ತಮ್ಮ ಮನೆ ಮುಂದೆ ಸುಮಾರು ಎರಡು-ಮೂರು ಗಂಟೆಗಳಿಂದ ಕಾಯುತ್ತಿರುವುದು ಕಂಡುಬಂದಿತು.

ಅವರು ಸಾಮಾನ್ಯ ಅತಿಥಿಯಾಗಿರಲಿಲ್ಲ. ಅತ್ಯಂತ ಗೌರವಾನ್ವಿತ ಹಿರಿಯ ವಕೀಲರಾಗಿದ್ದರು. ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಕೆಲಸ ಮಾಡಿ, ನಂತರ ರಾಜೀನಾಮೆ ನೀಡಿ ಮತ್ತೆ ಭರ್ಜರಿಯಾದ ಪ್ರಾಕ್ಟೀಸ್ ಅನ್ನು ಕಟ್ಟಿಕೊಂಡಿದ್ದರು.

ಸತ್ಯವಾನ್ ತಮ್ಮ ಮನೆಯ ಬಾಗಿಲು ತೆರೆದು ಅತಿಥಿಯನ್ನು ಒಳಗೆ ಆಹ್ವಾನಿಸಿದರು.

ಲೋಕಾಭಿರಾಮದ ಮಾತುಕತೆಯ ನಂತರ, ಹಿರಿಯ ವಕೀಲರು ನೇರ ವಿಷಯಕ್ಕೆ ಬಂದರು. “ನೀವು ಈ ಬಾರಿ ಅಂತಿಮ ವರ್ಷದ ಎಲ್‌ಎಲ್.ಬಿ. ವಿದ್ಯಾರ್ಥಿಗಳ ಸಂವಿಧಾನಾತ್ಮಕ ಕಾನೂನು (Constitutional Law) ಪತ್ರಿಕೆಯ ಮೌಲ್ಯಮಾಪನ ಮಾಡುತ್ತಿದ್ದೀರಲ್ಲವೇ?” ಎಂದರು.

ಸತ್ಯವಾನ್ “ಹೌದು” ಎಂದು ಉತ್ತರಿಸಿದರು.

ಆಗ ಹಿರಿಯ ವಕೀಲರು ನಸುನಗುತ್ತಾ “ಸರ್, ಈ ಎರಡು ಸೀಟ್ ನಂಬರ್‌ಗಳನ್ನು ತೆಗದುಕೊಳ್ಳಿ. ಈ ಇಬ್ಬರಿಗೂ ಅಂತಿಮ ಎಲ್‌ಎಲ್.ಬಿ.ಯಲ್ಲಿ ಫಸ್ಟ್ ಕ್ಲಾಸ್ ಅಂಕಗಳು ಬರಬೇಕು.”

ಈ ಮಟ್ಟಿಗಿನ ಧೈರ್ಯವನ್ನು ಮತ್ತು ಅವರ ಬೇಡಿಕೆಯ ಕ್ರಮವನ್ನು ಕಂಡು ಸತ್ಯವಾನ್ ಅವರು ಆಶ್ಚರ್ಯಚಕಿತರಾದರು. ಆ ಇಬ್ಬರು ಅಭ್ಯರ್ಥಿಗಳು ಯಾರು, ಅವರ ಹೆಸರೇನು ಎಂದು ಪಟ್ಟು ಹಿಡಿದು ಕೇಳಿದರೂ ಅತಿಥಿ ಗೌಪ್ಯತೆಯನ್ನು ರಟ್ಟು ಮಾಡಲಿಲ್ಲ.

ಸತ್ಯವಾನ್ ವಿನಯದಿಂದ “ಸರ್, ನಿಮ್ಮ ಮೇಲೆ ನನಗೆ ಗೌರವವಿದೆ. ಆದರೆ, ನಾನು ಇಂತಹ ಕೆಲಸ ಮಾಡಲಾರೆ.” ಎಂದರು. ಹಿರಿಯ ವಕೀಲರಿಗೆ ‘ಇಲ್ಲ’ ಎನ್ನುವ ಉತ್ತರವನ್ನು ಕೇಳಲು ಸಿದ್ಧರಿರಲಿಲ್ಲ.

ಅಂತಿಮವಾಗಿ ಹಿರಿಯ ವಕೀಲರು, ಸತ್ಯವಾನ್ ಅವರಿಗೆ ವಿಷಯವನ್ನು ರಹಸ್ಯವಾಗಿಟ್ಟುಕೊಂಡು, ಸಹಾಯ ಮಾಡಲು ಒಪ್ಪಿದರೆ ಮಾತ್ರ ಆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಹೇಳುತ್ತೇನೆ ಎಂದರು. ಆ ಇಬ್ಬರು ಅಭ್ಯರ್ಥಿಗಳು ಅಂದಿನ ‘ಕೊಲಿಜಿಯಂ’ನಲ್ಲಿದ್ದ ಹೈಕೋರ್ಟಿನ ಹಿರಿಯ ನ್ಯಾಯಾಧೀಶರುಗಳ ಮಕ್ಕಳು ಎಂದರು.

ಆ ಇಬ್ಬರೂ ನ್ಯಾಯಾಧೀಶರು ವಿಭಾಗೀಯ ಪೀಠಗಳ ನೇತೃತ್ವವನ್ನು ವಹಿಸಿದ್ದರು. ಜನರ ದೃಷ್ಟಿಯಲ್ಲಿ ನೈತಿಕ ಮೌಲ್ಯ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಅತಿಥಿ ನ್ಯಾಯಾಧೀಶರಾಗಿದ್ದ ಕಿರು ಅವಧಿಯ ಸಂದರ್ಭದಲ್ಲಿ ಅವರ ಸಹೋದ್ಯೋಗಿಯಾಗಿದ್ದರು. ಈಗ ಅವರು ಸತ್ಯವಾನ್ ಅವರ ಬಳಿ ಆ ನ್ಯಾಯಾಧೀಶರುಗಳ “ವಕೀಲ”ರಂತೆ ಬಂದಿದ್ದರು.

ಇತರೆ ವಿಷಯಗಳ ಮೌಲ್ಯಮಾಪಕರ ಜತೆಯಲ್ಲಿ ನಾನು ಈಗಾಗಲೇ ಮಾತನಾಡಿದ್ದೇನೆ ಎಂದೂ, ಅವರೆಲ್ಲರೂ ಈ ವಿಷಯವಾಗಿ “ಸಹಕರಿಸಲು” ಒಪ್ಪಿ ಇಬ್ಬರಿಗೂ ಫಸ್ಟ್‌ ಕ್ಲಾಸ್ ಅಂಕಗಳನ್ನು ಕೊಡಲು ನಿರ್ಧರಿಸಿದ್ದಾರೆ ಎಂದು ಸತ್ಯವಾನ್ ಅವರಿಗೆ ತಿಳಿಸಿದರು. ಹಾಗೆಯೇ ನೀವು ಸಂವಿಧಾನಾತ್ಮಕ ಕಾನೂನು ವಿಷಯದಲ್ಲಿಯೂ ಅದೇ ರೀತಿ ಸಹಾಯ ಮಾಡಬೇಕೆಂದು ಕೇಳಿಕೊಂಡರು.

ಪ್ರತಿಯಾಗಿ ಸತ್ಯವಾನ್ ಅವರು ವಿನಯದಿಂದಲೇ “ನಾನು ಈ ಇಬ್ಬರ ಉತ್ತರ ಪತ್ರಿಕೆಗಳನ್ನು ಹೆಚ್ಚಿನ ಕಾಳಜಿಯಿಂದ ಮೌಲ್ಯಮಾಪನ ಮಾಡುತ್ತೇನೆ. ಅವರ ಅರ್ಹತೆಗಿಂತ ಕಡಿಮೆ ಅಂಕಗಳನ್ನು ಕೊಡುವುದಿಲ್ಲ ಎಂದು ಮಾತ್ರ ನಾನು ಭರವಸೆ ನೀಡಬಲ್ಲೆ.” ಎಂದರು.

ಹಿರಿಯ ವಕೀಲರು ಮುಗುಳ್ನಕ್ಕರು. ಸತ್ಯವಾನ್ ಅವರ ಈ ಉತ್ತರವು ತಮ್ಮ “ಫಸ್ಟ್ ಕ್ಲಾಸ್ ಪ್ರಾಜೆಕ್ಟ್”ಗೆ ಒಪ್ಪಿಗೆ ಎಂದೇ ಭಾವಿಸಿಕೊಂಡರು.

ಇದಿಷ್ಟೆ ಅಲ್ಲದೆ, ಸತ್ಯವಾನ್ ಅವರು ಈ ಇಬ್ಬರೂ ನ್ಯಾಯಾಧೀಶರುಗಳ ಮುಂದೆ ಹಾಜರಾದಾಗಲೆಲ್ಲಾ, ಯಾವುದೇ ಪ್ರಕರಣವಿರಲಿ ಅನುಕೂಲಕರ ಆದೇಶಗಳು ಸಿಗುವಂತೆ ತಾನು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಅದೊಂದು ರೀತಿಯ ‘ಪ್ರತಿಫಲ’ದ ಆಫರ್ ಆಗಿತ್ತು.

ವಾಸ್ತವವಾಗಿ ಸತ್ಯವಾನ್ ಅವರು ಎಷ್ಟು ಪ್ರಯತ್ನಿಸಿದರೂ ಆ ಇಬ್ಬರು ಅಭ್ಯರ್ಥಿಗಳ ಸಾಧಾರಣ ಉತ್ತರ ಪತ್ರಿಕೆಗಳಿಗೆ ಶೇಕಡಾ 50 ಕ್ಕಿಂತ ಹೆಚ್ಚಿನ ಅಂಕ‌ ನೀಡಲು ಸಾಧ್ಯವಾಗಲೇ ಇಲ್ಲ. ಉಳಿದೆಲ್ಲಾ ಮೌಲ್ಯಮಾಪಕರು ತಮ್ಮ ಮಾತು ಉಳಿಸಿಕೊಂಡು ಆ ಇಬ್ಬರಿಗೂ ಫಸ್ಟ್ ಕ್ಲಾಸ್ ಅಂಕಗಳನ್ನು ಕೊಟ್ಟಿದ್ದರು. ಆದರೆ, ಸತ್ಯವಾನ್ ಅವರ ‘ಅಸಹಕಾರ’ದಿಂದಾಗಿ, ಆ ಇಬ್ಬರು ನ್ಯಾಯಾಂಗ ‘ದಿಗ್ಗಜರ’ ಮಕ್ಕಳಿಗೆ ಅಂತಿಮ ಎಲ್‌ಎಲ್‌.ಬಿ. ಪರೀಕ್ಷೆಯ ಒಟ್ಟು ಅಂಕಗಳಲ್ಲಿ ಪ್ರಥಮ ಧರ್ಜೆ ತಪ್ಪಿಹೋಯಿತು.

ಫಲಿತಾಂಶ ಬರುವಷ್ಟರ ವೇಳೆಗೆ ಅವರಲ್ಲಿ ಒಬ್ಬರ ತಂದೆ ಸುಪ್ರೀಂ ಕೋರ್ಟಿಗೆ ಪದೋನ್ನತಿ ಪಡೆದಿದ್ದರು. ಹಾಗಾಗಿ ಅವರು ಸತ್ಯವಾನ್ ಅವರ ವೃತ್ತಿಜೀವನದ ಮೇಲೆ ನೇರವಾಗಿ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಆದರೆ, ಮತ್ತೊಬ್ಬ ನ್ಯಾಯಾಧೀಶರು ಮಾತ್ರ ಸತ್ಯವಾನ್ ಅವರಿಗೆ ತೊಂದರೆ ಕೊಡುವ ಯಾವ ಅವಕಾಶವನ್ನು ಬಿಡಲಿಲ್ಲ. ಉತ್ತಮ ಪ್ರಕರಣಗಳಲ್ಲಿ, ಅತ್ಯಂತ ಬಲವಾದ ವಾದಗಳಿದ್ದ ಸಂದರ್ಭದಲ್ಲಿಯೂ ಸತ್ಯವಾನ್ ಅವರಿಗೆ ನ್ಯಾಯಾಧೀಶರಿಂದ ಪ್ರತಿಕೂಲ ಆದೇಶಗಳೇ ಬರುತ್ತಿದ್ದವು.

ಸತ್ಯವಾನ್ ಅವರು ಒಬ್ಬ ಹಿರಿಯ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನುವ ಸುದ್ದಿ ಮಿಂಚಿನಂತೆ ಹರಿದಾಡುತ್ತಿದ್ದಂತೆಯೇ ಅವರಿಗೆ ಬರುತ್ತಿದ್ದ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗತೊಡಗಿತು. ತಾವು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಇದನ್ನು ಸತ್ಯವಾನ್ ಅವರು ತಮ್ಮ ಕರ್ಮ ಎಂದುಕೊಂಡರು. ಅದರಿಂದ ನೋವು ಅನುಭವಿಸಬೇಕಾಗಿ ಬಂದರೆ ಅನುಭವಿಸೋಣ ಎಂದುಕೊಂಡಿದ್ದರು.

ನಂತರದ ಘಟನೆಗಳು

ಆ ಹಿರಿಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದರು. ಅವರ ‘ದ್ವಿತೀಯ ದರ್ಜೆಯ’ ಮಗ ಬಾಂಬೆ ಹೈಕೋರ್ಟಿನ ಭಾರಿ ಬೇಡಿಕೆಯ ಹಿರಿಯ ವಕೀಲರಾದರು.

ಎರಡನೆಯ ನ್ಯಾಯಾಧೀಶರು ಬಾಂಬೆ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿ ನಿವೃತ್ತರಾದರು. ಅವರು ಕೊನೆಯವರೆಗೂ ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಉಪದೇಶ ಮಾಡುತ್ತಲೇ ಇದ್ದರು. ಅವರ ‘ದ್ವಿತೀಯ ದರ್ಜೆ’ಯ ಮಗ ವಕೀಲಿಕೆಯಲ್ಲಿ ಸುಧಾರಿಸಿಕೊಳ್ಳುತ್ತಲೇ ಜಾತಿ ಮತ್ತು ವಂಶಾವಳಿಯ ಬಲದಿಂದ ಕೊನೆಗೂ ಹೈಕೋರ್ಟಿನ ನ್ಯಾಯಾಧೀಶರಾಗಿ ಪದೋನ್ನತಿ ಪಡೆದರು.

ಕಾಲಕ್ರಮೇಣ ಸತ್ಯವಾನ್ ಅವರೂ ಅರ್ಹತೆಯ ಆಧಾರದ ಮೇಲೆ ಪದೋನ್ನತಿ ಪಡೆದು, ಅತ್ಯಂತ ಗೌರವಾನ್ವಿತ ಹೈಕೋರ್ಟ್ ನ್ಯಾಯಾಧೀಶರಾಗಿ ಗುರುತಿಸಿಕೊಂಡರು.

ಅವರ ನೇಮಕಾತಿಯ ಆದೇಶ ಬಂದಾಗ ವಕೀಲರ ವಲಯದಲ್ಲಿ “ನಲವತ್ತು ಕಳ್ಳರ ಜೊತೆಯಲ್ಲಿ ಕುಳಿತುಕೊಳ್ಳಲು ಕೊನೆಗೂ ಒಬ್ಬ ‘ಅಲಿಬಾಬಾ’ ಸಿಕ್ಕಂತಿದೆ” ಎಂಬ ಚರ್ಚೆ ಹರಡಿತು. ಅದು ಅತಿಶಯೋಕ್ತಿಯಾಗಿದ್ದರೂ, ಅಂದಿನ ಪರಿಸ್ಥಿತಿ ಹಾಗಿತ್ತು.

ಸೋಜಿಗವೆನ್ನುವಂತೆ ಎರಡನೇ ನ್ಯಾಯಾಧೀಶರ ‘ಎರಡನೇ ದರ್ಜೆ’ ಮಗ ನ್ಯಾಯಾಧೀಶರಾಗಿ ಬಂದು, ನ್ಯಾಯಮೂರ್ತಿ ಸತ್ಯವಾನ್ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ಕುಳಿತುಕೊಂಡಾಗ ನನಗೆ ನಗು ತಡೆಯಗಾಲಿಲ್ಲ. ಇವರೇ ಅಲ್ಲವೇ ಒಮ್ಮೆ ಈತನ ಸಂವಿಧಾನಾತ್ಮಕ ಕಾನೂನು ಪತ್ರಿಕೆಯ ಮೌಲ್ಯಮಾಪನ ಮಾಡಿದ್ದವರು. ಅವರ ಪಕ್ಕದಲ್ಲಿಯೇ ಕುಳಿತ್ತಿದ್ದಾರೆ!

ಬೆಂಚ್ ನಲ್ಲಿ ಹಲವು ವರ್ಷಗಳ ಕಾಲ, ನ್ಯಾಯಮೂರ್ತಿ ಸತ್ಯವಾನ್ ಅವರ ಫಸ್ಟ್ ಕ್ಲಾಸ್ ಬುದ್ಧಿಶಕ್ತಿಗೆ ಈ ಪ್ರಮಾಣೀಕೃತ ‘ಎರಡನೇ ದರ್ಜೆ’ ಸಹೋದ್ಯೋಗಿಯ ಸಾಂಗತ್ಯ ಆಗಾಗ ರಿಚ್ ಬೆಂಚ್ ನಲ್ಲಿ ಜೊತೆಯಾಗುತ್ತಲೇ ಇತ್ತು.

ತಮ್ಮ ಮಕ್ಕಳಿಗಾಗಿ ಅಡ್ಡದಾರಿ ಹಿಡಿಯಲು ಬಯಸಿದ್ದ ಆ ಇಬ್ಬರೂ ನ್ಯಾಯಾಧೀಶರುಗಳು ಈಗ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಸಹೋದ್ಯೋಗಿಗಳ ಮಕ್ಕಳಿಗಾಗಿ ‘ಫಸ್ಟ್ ಕ್ಲಾಸ್’ ಬಯೋಡೇಟಾ ಸೃಷ್ಟಿಸಲು ಮಧ್ಯವರ್ತಿಯಾಗಿ ಬಂದಿದ್ದ ಆ ಹಿರಿಯ ವಕೀಲರೂ ಈಗ ಸ್ವರ್ಗ, ನರಕ ಅಥವಾ ಇನ್ನೆಲ್ಲೋ ಸೇರಿಕೊಂಡಿದ್ದಾರೆ.

ನ್ಯಾಯಮೂರ್ತಿ ಸತ್ಯವಾನ್ ಅವರು ಇಂದು ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ. ಅವರು ‘ಸಿಂಗಲ್ ಮಾಲ್ಟ್’ ವಿಸ್ಕಿ ಮತ್ತು ‘ಭಗವದ್ಗೀತೆ’ ಎರಡನ್ನೂ ಸಮನಾಗಿ ಆನಂದಿಸುತ್ತಿದ್ದಾರೆ. ಅದೊಂದು ಪ್ರಬಲ ಸಂಯೋಜನೆಯೂ ಆಗಿದೆ.

ಒಂದೆರಡು ಪೆಗ್ ಹೆಚ್ಚಾಗಿ ಕುಡಿಯದ ಹೊರತು, ಅವರೀಗ ಈ ಕತೆಯನ್ನು ಯಾರಿಗಾದರೂ ಹೇಳುತ್ತಾರೆ ಎನ್ನುವ ಬಗ್ಗೆ ನನಗೆ ಬಲವಾದ ಅನುಮಾನವಿದೆ.

‍ಲೇಖಕರು Admin

26 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading