-ನಾಗರಾಜನಾಯಕ ಡಿ.ಡೊಳ್ಳಿನ
ಹೈದರಾಬಾದ ಕರ್ನಾಟಕ ವಿಮೋಚನೆಯ ಹೋರಾಟದ ವಿವಿಧ ಮಜಲುಗಳು – ಭಾಗ 1
೧೯೪೭ ಆಗಸ್ಟ್ ೧೫ ರಂದು ನಮ್ಮ ಭಾರತ ಆಂಗ್ಲರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಿ ಸ್ವಾತಂತ್ರ‍್ಯ ಪಡೆಯಿತು. ಆದರೆ ದೇಶಿಯ ಅರಸರ ಆಡಳಿತದಲ್ಲಿದ್ದ ೬೦೦ ಕ್ಕೂ ಮೇಲ್ಪಟ್ಟ ಸಂಸ್ಥಾನಗಳು ಭಾರತ ಒಕ್ಕೂಟದ ಕರೆಯನ್ನು ತಿರಸ್ಕರಿಸಿ ತಾವು ಸ್ವತಂತ್ರರೆAದು ಸಾರಿದರು. ಹಾಗೇ ಸಾರಿದವರಲ್ಲಿ ಹೈದರಾಬಾದ ನವಾಬರು ಸೇರುತ್ತಾರೆ. ಹೈದರಾಬಾದ ಸಂಸ್ಥಾನದ ಪ್ರಜೆಗಳು ಈ ಗುಲಾಮಗಿರಿ ವಿರುದ್ಧ ಹೋರಾಡಿದರು.ಹೈದರಬಾದ ವಿಮೋಚನಾ ಹೋರಾಟದ ಫಲವಾಗಿ ಈ ಭಾಗಕ್ಕೆ ೧೯೪೮ ಸೆಪ್ಟೆಂಬರ್ ೧೭ ರಂದು ವಿಮೋಚನೆಯಾಯಿತು. ವಿಮೋಚನೆ ಅಂದರೆ ಬಿಡುಗಡೆ, ಈಗ ಕಲ್ಯಾಣ ಕರ್ನಾಟಕ ಹೆಸರಿನಿಂದ ಗುರುತಿಸಿಕೊಳ್ಳುವ ಹೈದರಾಬಾದ ಕರ್ನಾಟಕ ವೆಂದರೆ ಕಲಬುರಗಿ, ಬೀದರ, ರಾಯಚೂರು, ಈಗಿನ ತೆಲಂಗಾಣದ ಹೈದರಾಬಾದ್, ನಿಜಾಮಾಬಾದ್, ವಾರಂಗಲ್, ಮಹಾರಾಷ್ಟ್ರದ ಪರಬಣಿ. ನಾಂದೇಡ, ಉಸ್ಮಾನಾಬಾದ್, ಔರಂಗಾಬಾದ್ ಸೇರಿ ಸುಮಾರು ೧೬ ಜಿಲ್ಲೆಗಳನ್ನು ಒಳಗೊಂಡಿತ್ತು.ಹೈದರಾಬಾದ ಸಂಸ್ಥಾನದ ಕೊನೆಯ ದೊರೆ ನವಾಬ್ ಮೀರ್ ಉಸ್ಮಾನ್ ಅಲಿ ಖಾನ್. ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಶಿಬಿರಗಳೆ ಕುರಿತು, ವಿಮೋಚನ ಹೋರಾಟದಲ್ಲಿ ಮಾಧ್ಯಮಗಳು, ಕೀರ್ತನೆಗಳು, ಲಾವಣಿಗಳು ಹೇಗೆ ಜನಪದರ ಕುರಿತು ನಾವೊಂದಿಷ್ಟು ತಿಳಿದುಕೊಳ್ಳೋಣ
ವಿಮೋಚನೆಯಲ್ಲಿ ಪತ್ರಿಕೆಗಳ ಪಾತ್ರ
ಆಧುನಿಕವಾಗಿ ಶೀಘ್ರ ಸುದ್ದಿ ಪ್ರಸಾರ ಮಾಡುವ ಆಕಾಶವಾಣಿ, ದೂರದರ್ಶನ, ಸಿನಿಮಾಗಳಂತೆ ಪತ್ರಿಕೆಗಳು
ಸಹಾ ಸ್ವಾತಂತ್ರ‍್ಯ ಚಳುವಳಿಯಲ್ಲಿ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದ ಪ್ರಸಂಗ
ಗಳಲ್ಲಿ ಹೆಜ್ಜೆ ಹೆಜ್ಜೆಗೂ ನಿರ್ವಹಿಸಿದ ಕಾರ್ಯವನ್ನು ಇಲ್ಲಿ ಸ್ಮರಿಸಲೇಬೇಕಾಗುತ್ತದೆ.
ದಿ ಡೆಮಾಕ್ರಾಟ್ ಪತ್ರಿಕೆ
ವಿ.ಎಚ್. ದೇಸಾಯಿ ಅವರ ಸಂಪಾದಕತ್ವದಲ್ಲಿ ೧೯೪೭ ಜನವರೀ ೨೬ರಂದು “ದಿ ಡೆಮಾಕ್ರಾಟ್’ ಪತ್ರಿಕೆಯು
ಹೊರ ಬಂದಿತು. “ಚಂಚಲಗೂಡಾ’ ಜೈಲಿನಲ್ಲಿ ಈ ಪತ್ರಿಕೆ ಜನ್ಮ ಪಡೆಯಿತು. ಇದು ತ್ರಿವರ್ಣಧ್ವಜ ಹಾಗೂ
ಗಾಂಧೀಜಿಯವರ ಭಾವಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ, ರಾಷ್ಟ್ರೀಯತೆಯನ್ನು ಹೆಚ್ಚಿಸುವ ಲೇಖನಗಳಿಂದ ತುಂಬಿ ಸುಂದರವಾಗಿ ಮೂಡಿ ಬರುತ್ತಿತ್ತು. ಪತ್ರಿಕೆಯ ಸಂಪಾದಕೀಯ ನೀತಿ ಸ್ಪಷ್ಟ ಮತ್ತು ಹರಿತವು ಆಗಿತ್ತು. ಅಲ್ಲದೆ ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸುವುದಾಗಿತ್ತು. ರಾಷ್ಟ್ರದ ಅಭಿವೃದ್ಧಿಯ ಜೊತೆಗೆ ಸಾಮಾನ್ಯ ಜನತೆಯ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರೇರೆಪಿಸುವ ಶಕ್ತಿಯನ್ನು ಹೊಂದಿತ್ತು.
ಮುಖಂಡರ ಬಂಧನಗಳು ಹೆಚ್ಚಾದವು. ಚಂಚಲಗೂಡಾ ಕಾರಾಗೃಹದಲ್ಲಿ ಹುಟ್ಟುಹಾಕಿದ ದಿ ಡೆಮಾಕ್ರಾಟ್ ಪತ್ರಿಕೆ ಕ್ರಾಂತಿಯನ್ನೇ ಎಬ್ಬಿಸಿತು. ಇದರಲ್ಲಿ ಸಂಪಾದಕೀಯ ವಿಭಾಗದಲ್ಲಿ ಬರೆದ ವಿ.ಎಚ್.ದೇಸಾಯಿರವರ ಲೇಖನಗಳು ವಿಮೋಚನ ಹೋರಾಟಗಾರರಿಗೆ ಸ್ಫೂರ್ತಿಯಾದವು. ಇದರಿಂದ ಸಾಮಾನ್ಯರಲ್ಲಿ ಹೊಸ ಬಗೆಯ ರಾಜಕೀಯ ವಿದ್ಯಮಾನಗಳು ಬೇಗನೆ ತಲುಪುತ್ತಿದ್ದವು. ನಿಜಾಂನ ದರ್ಪಿಷ್ಮ ಆಳ್ವಿಕೆಯನ್ನು ಖಂಡಿಸುವ ಲೇಖನಗಳು ಈ ಪತ್ರಿಕೆಯಿಂದ ಮೂಡಿ ಬಂದವು. ಹೈದರಾಬಾದ್ ಕರ್ನಾಟಕದ ಜನತೆಯಲ್ಲಿ ಹೋರಾಟದ ಅರಿವು ಪಡೆದುಕೊಂಡು ಹಾಗು ರಜಾಕಾರರ ದುಷ್ಟತ್ಯಗಳನ್ನು ಸೆದೆಬಡಿಯಲು ಕಂಕಣಬದ್ದರಾದರು. ವಿಮೋಚನ ಹೋರಾಟದ ಸಂದರ್ಭದಲ್ಲಿ ಪತ್ರಿಕೆಯು ಮಾಡಿದ ಪಾತ್ರ ಅಪಾರವಾಗಿದೆ.
ಇಮರೋಜ್ ಪತ್ರಿಕೆ
ಹೈದರಾಬಾದ್ ಸಂಸ್ಥಾನದಲ್ಲಿ ನಿಜಾಂನ ಮತಾಂಧ ನೀತಿಯನ್ನು ಖಂಡಿಸಿ ರಜಾಕಾರರ ಅತ್ಕಾಚಾರಗಳ ಕುರಿತು ಜನತೆಗೆ ಎಳೆಎಳೆಯಾಗಿ ವಿವರಣೆ ನೀಡುತ್ತಿದ್ದ ಪತ್ರಿಕೆಯೆ “ಇಮರೋಜ್’ ಎಂಬ ಉರ್ದು ಪತ್ರಿಕೆ. ಇದರ ಸಂಪಾದಕನಾದ ಶೋಯಬುಲ್ಲಾಖಾನನು ಹೈದರಾಬಾದ್ ಕರ್ನಾಟಕದ ಪ್ರಭಾವಿ ಪರ್ತಕರ್ತ ನಾಗಿದ್ದನು. ಈ ಭಾಗದ ಜನತೆಯಲ್ಲಿ ಕೋಮು ಸೌಹಾರ್ದ ವಾತಾವರಣವನ್ನು ಸೃಷ್ಟಿಸಿದ ಕೀರ್ತಿಯೂ ಈ ಪತ್ರಿಕೆಗೆ ಸಲ್ಲುತ್ತದೆ. ಈ ಪತ್ರಿಕೆಯನ್ನು ಓದುತ್ತಿದ್ದ ಮುಸ್ಲಿಂರು ಕೂಡ ಗಾಂಧಿ ಟೋಪಿ ಧರಿಸಿ ವಿಮೋಚನ ಹೋರಾಟಕ್ಕೆ ಧುಮುಕಿದರು. ಮುಸ್ಲಿಂರಿಗೆ ಅವರದೇ ಉರ್ದುಭಾಷೆಯ ಮೂಲಕ ನಿಜಾಂನ ಸರ್ವಾಧಿಕಾರದ ಬಗ್ಗೆ ಇಮರೋಜ ಪತ್ರಿಕೆ ತಿಳಿಸತೊಡಗಿತು.”” ಯಾವ ಸಂದರ್ಭದಲ್ಲಿ ಹೇಗೆ ಬರೆಯಬೇಕೆಂಬ ಹಾಗೂ ಹೋರಾಟಗಾರರಿಗೆ ಸ್ಫೂರ್ತಿ ತುಂಬುವ ಬುದ್ಧಿವಂತಿಕೆ ಈ ಪತ್ರಿಕೆಯ ಸಂಪಾದಕನಲ್ಲಿತ್ತು. ಇದನ್ನು ಮನಗಂಡ ರಜಾಕಾರರು ಶೋಯಬುಲ್ಲಾಖಾನ್‌ನನ್ನು ಹಾಗೇ ಬಿಟ್ಟರೆ ನಮಗೆ ಉಳಿಗಾಲವಿಲ್ಲವೆಂದು ತಿಳಿದು, ಹೈದರಾಬಾದ್‌ನ ನಡುಬೀದಿಯಲ್ಲಿ ಹಾಡು ಹಗಲೇ ಆತನನ್ನು ಗುಂಡಿಕ್ಕಿಕೊAದರು. ಹೋರಾಟಗಾರ, ಶ್ರೇಷ್ಠ ಪತ್ರಕರ್ತ, ಅಪೂರ್ವ ವ್ಯಕ್ತಿತ್ತದ ಶೋಯಬುಲ್ಲಾಖಾನ್‌ನು ಸ್ವಾತಂತ್ರ‍್ಯಕ್ಕಾಗಿ ಪ್ರಾಣತ್ಕಾಗ ಮಾಡಿದನು. ಅವನ ದೇಶಪ್ರೇಮವನ್ನು ನೋಡಿದ ನಲವಡಿ ಶ್ರೀಕಂಠಶಾಸ್ತ್ರಿಯವರು ತಮ್ಮ ಲಾವಣಿಯಲ್ಲಿ ಈ ರೀತಿ ಚಿತ್ರಿಸಿದ್ದಾರೆ.
“ನೀತಿವಂತ ನಿರ್ಮಲ ಮನಸ್ಸಿನ ಇಂಮ್ರೋಜ. ಪತ್ರ ಸಂಪಾದಕರು
” ಖ್ಯಾತಿವಂತ ಶೋಬುಲ್ಲಾಖಾನರು ಮುಸಲೀಮ್ ಧರ್ಮ ಪ್ರಚಾರಕರು
ಪಾತಕತನವಿದು ಪ್ರಜರ ಕೊಲ್ಲುವುದು ಬೇಡವೆಂದು ನಿಜ ಸಾರಿದರು
ಘಾತಿಸುತವರನು ಕೊಲೆ ಮಾಡಿಸಿದರು ರಜವೀ ರಾಜ್ಯ ಸ್ಥಾಪಕರು””
ಕಾಸಿಂ ರಜ್ವಿಯು ಶೋಯಬುಲ್ಲಾಖಾನ್‌ನನ್ನು ಕೊಲ್ಲಲು ತನ್ನ ಸೈನಿಕರಿಗೆ ಆಜ್ಞೆ ನೀಡಿದನೆಂದು ಈ ಲಾವಣಿಗಳಲ್ಲಿ ಕಂಡುಬರುವುದು.
ಭಕ್ತಬಂಧು
೧೯೧೯-೨೧ರ ಅವಧಿಯಲ್ಲಿ ಕೊಪ್ಪಳದಿಂದ ಪ್ರಕಟವಾದ “ಭಕ್ತಬಂಧು’ ಎಂಬ ಮಾಸಿಕವನ್ನು ಹೈದರಾಬಾದ್ ಕರ್ನಾಟಕದ ಮೊಟ್ಟ ಮೊದಲ ಪತ್ರಿಕೆ ಎಂದು ಗುರುತಿಸಬಹುದು.” ಕೊಪ್ಪಳವಲ್ಲದೆಬೆಂಗಳೂರು, ದಾವಣಗೆರೆಗಳಿಂದಲೂ ಈ ಪತ್ರಿಕೆ ಮುದ್ರಿತವಾಗುತ್ತಿ ತ್ತು. ಎಂ.ಚಿದಾAಬರಯ್ಮರವರು ಈ ಪತ್ರಿಕೆಯ ಸಂಪಾದಕರಾಗಿದ್ದರು. ನಿಜಾಂ ಆಡಳಿತದ ವಿರುದ್ಧವಾಗಿ ಈ ಪತ್ರಿಕೆ ಅನೇಕ ಲೇಖನಗಳನ್ನು ಪ್ರಕಟಿಸಿತು. ಜನತೆಯಲ್ಲಿ ದೇಶ ಪ್ರೇಮ, ತ್ಯಾಗ, ಬಲಿದಾನಗಳ ಮಹತ್ವದ ಬಗ್ಗೆ ಲೇಖನಗಳನ್ನು ಪ್ರಕಟಿ ಸುತ್ತಿತ್ತು. ೧೯೪೭-೪೮ರ ಸಮಯದಲ್ಲಿ ಕೊಪ್ಪಳ ಭಾಗದ ಜನತೆಯ ಜಾಗೃತಧ್ವನಿಯಾಗಿ “ಭಕ್ತಬಂಧು’ ಪತ್ರಿಕೆ ಕಾರ್ಯ ಮಾಡಿತು.
ಸಂಯುಕ್ತ ಕರ್ನಾಟಕ ಪತ್ರಿಕೆ
ಹಾಗೆಯೇ ಸಂಯುಕ್ತ ಕರ್ನಾಟಕ, ದಖ್ಬಿನ್ ಪ್ರಭಾತ್, ಮಿತ್ರವಾಣಿ ಪತ್ರಿಕೆಗಳು ಹಾಗು ಉಗ್ರರೂಪದ ರಾಷ್ಟ್ರೀಯವಾದಿ ಪತ್ರಿಕೆಯೆಂಬ ಹೆಗ್ಗಳಿಕೆಯನ್ನು ಹೊಂದಿದ “ನಾಗರಿಕ’ ವಾರಪತ್ರಿಕೆಗಳು ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಇವುಗಳ ಪಾತ್ರವು ಮಹತ್ವದ್ದಾಗಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯವಾಗಿ, ಜನಜಾಗೃತಿ ಮೂಡಿಸುವಂಥ ಕೆಲಸವನ್ನು ಇಲ್ಲಿ ಆರಂಭ ವಾದ ಹಲವಾರು ಪತ್ರಿಕೆಗಳು ಸಮರ್ಥವಾಗಿ ಮಾಡಿವೆ. ಕೊಪ್ಪಳ ಜಿಲ್ಲೆಯಲ್ಲಿ ಪತ್ರಿಕೆಗಳ ಮೂಲಕ ಜನರನ್ನು ವಿಮೋಚನ ಹೋರಾಟಕ್ಕೆ ಅಣಿಗೊಳಿಸುವ ಹಾಗೂ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುವ ಕಾರ್ಯವು ಭರದಿಂದ ಜರುಗಿತು. ಈ ಜಿಲ್ಲೆಯ ಗಡಿಭಾಗದ ಪ್ರದೇಶವಾದ ಗದಗದಿಂದ ವಿ. ಎಚ್. ದೇಸಾಯಿಯವರ ಸಂಪಾದಕತ್ವದಲ್ಲಿ “ಕರ್ನಾಟಕ ಬಂಧು” ಎಂಬ ಪತ್ರಿಕೆ ೧೯೪೫ರಲ್ಲಿ ಹೊರ ಬಂದಿತು. ಅವರು ರಾಷ್ಟ್ರೀಯ ಹೋರಾಟದಲ್ಲಿ ತುಂಬಾ ಉತ್ಸುಕನಾಗಿ ಸೇರಿಕೊಂಡು ಹೋರಾಟಕ್ಕೆ ಮುಂದಾಗಿ ಹೋರಾಟದ ಕೂಗಿಗೆ, ಕ್ರಾಂತಿಯ ಕಹಳೆಯನ್ನು ಊದಿದರು. ಇವರು ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯ ಜನತೆಯ ಶೋಚನೀಯ ಸ್ಥಿತಿಯ ಹಿನ್ನೆಲೆಗೆ ಕಾರಣವಾಗಿದ್ದ, ನಿಜಾಂ ಹಾಗೂ ರಜಾಕಾರರ ವಿರುದ್ಧ ಖಾರವಾದ ಲೇಖನಗಳನ್ನು ಪ್ರಕಟಿಸಿದರು. ಇಲ್ಲಿನ ಜನತೆ ವಿಮೋಚನ ಹೋರಾಟಕ್ಕೆ ಧುಮುಕಲು ಪ್ರೆರೇಪಿಸಿದ್ದಾರೆ. ೧೯೪೭ ಜನವರಿ ೨೬ರಂದು, “ದಿ ಡೆಮಾಕ್ರಾಟ್’ ಆಂಗ್ಲ ಪತ್ರಿಕೆಯನ್ನು “ಚಂಚಲಗೂಡಾ’ ಜೈಲಿನಲ್ಲಿ ಸೃಷ್ಟಿಸಿ, ಹೊರಡಿಸುತ್ತಿದ್ದರು. ಇದು ಅವರಲ್ಲಿರುವ ಅಪಾರವಾದ ರಾಷ್ಟ್ರ ಪ್ರೇಮ ವನ್ನು ಎತ್ತಿ ತೋರಿಸುತ್ತದೆ. ಈ ಆಂಗ್ಲ ಪತ್ರಿಕೆಯಲ್ಲಿ ಅನೇಕರು ಬರೆದ ಲೇಖನಗಳು ವಿಮೋಚನ ಹೋರಾಟಕ್ಕೆ ಸ್ಫೂರ್ತಿ ನೀಡುತ್ತಿದ್ದವು. ಇಡೀ ಹೈದರಾಬಾದ್ ಕರ್ನಾಟಕದಲ್ಲಿ ನಿಜಾಂನ ವಿರುದ್ದವಾಗಿ ರಾಜಾರೋಷವಾಗಿಅಷ್ಟೇ ಜನಪ್ರೀಯತೆ ಹಾಗೂ ಹಲವಾರು ಸ್ವಾತಂತ್ರ‍್ಯ ಹಾಗೂ ವಿಮೋಚನ ಕಾರ್ಯಕರ್ತರನ್ನು ಸೃಷ್ಟಿಸಿದ ಕೀರ್ತಿ ಶೋಯಬುಲ್ಲಾಖಾನ್‌ರ ನೇತೃತ್ವದಲ್ಲಿ ಹೊರಡುತ್ತಿದ್ದ “ಇಮರೋಜ’ ಎಂಬ ಉರ್ದು ಪತ್ರಿಕೆಗೆ ಸಲ್ಲುತ್ತದೆ. ಈ ಪತ್ರಿಕೆಯು ಇಡೀ ಹೈದರಾಬಾದ್ ನಿಜಾಂನ ಸಂಸ್ಥಾನಕ್ಕೆ ಒಳಪಟ್ಟ ಕರ್ನಾಟಕದ ಬೀದರ, ಗುಲ್ಬರ್ಗಾ, ರಾಯಚೂರು ಹಾಗೂ ಜಹಗೀರು ಜಿಲ್ಲೆಯಾದ ಕೊಪ್ಪಳದಲ್ಲಿ ನಡೆದ ಕಾಸಿಂರಜ್ವಿ ಆಡಳಿತದ ಕುತಂತ್ರಗಳ ಕುರಿತು ಬರೆಯುತ್ತಿತ್ತು. ಶೋಯಬುಲ್ಲಾಖಾನ್‌ನ ಪತ್ರಿಕೆ ಎಂದರೆ ವಿರೋಧಿಗಳಿಗೆ ನಡುಕು ಹುಟ್ಟಿಸುತ್ತಿತ್ತು. ಇದಕ್ಕಾಗಿ ಶೋಯಬುಲ್ಲಾಖಾನ್‌ನನ್ನು ರಜಾಕಾರರು ಬರ್ಬರವಾಗಿ ಹತ್ಯೆ ಮಾಡಿದರು. ದೇಶ ಸ್ವಾತಂತ್ರ‍್ಯ ಹಬ್ಬದ ಆಚರಣೆ ಆನಂದದ ಕ್ಷಣಗಳ ಜೊತೆಗೆ ನಿಜಾಂ ಸಂಸ್ಥಾನ ಸ್ವಾತಂತ್ರ‍್ಯ ಭಾರತಕ್ಕೆ ಸೇರದೆ ಅದು ಅನುಭವಿಸುತ್ತಿರುವ ಸ್ಥಿತಿಯ ಬಗ್ಗೆ ಇಲ್ಲಿನ ಜನರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ಮೂಡಿತು. ನಿಜಾಂನ ಕ್ರೂರ ನೀತಿ, ಅರಾಜಕತೆ, ಲೂಟಿ ಮುಂತಾದವುಗಳನ್ನು ಬಹಿರಂಗವಾಗಿಯೇ ಪ್ರಕಟಿಸಿ ಎಲ್ಲಾ ಜನತೆಗೆ ಸುದ್ದಿ ತಿಳಿಸಿತು. ಅದರಂತೆ ವಿಮೋಚನ ಹೋರಾಟಗಾರರಿಗೆ ಎಲ್ಲ ಬಗೆಯಲ್ಲೂ ಪ್ರೇರಣೆ ನೀಡಿದ್ದು ಈ ಪತ್ರಿಕೆ. ಕೊಪ್ಪಳ ಭಾಗಗಳಲ್ಲಿ ಎಸ್.ಎಂ. ಬಂಗಾರಶೆಟ್ಟರ್, ವೀರಭದ್ರಪ್ಪ ಶಿರೂರುರವರು ಪತ್ರಿಕೆಗಳಲ್ಲಿ ಸಣ್ಣ ಲೇಖನಗಳನ್ನು ಹೊರಡಿಸುವ ಮೂಲಕ ಜನರಿಗೆ ಹೋರಾಟದ ಸ್ಫೂರ್ತಿಯನ್ನು ನೀಡಿದರು.
ಸಾಹಿತ್ಯದಲ್ಲಿ ಹೋರಾಟಗಾರರ ಪಾತ್ರ
ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಕೀರ್ತನೆ, ಲಾವಣಿ ಸಾಹಿತ್ಮಪ್ರಕಾರಗಳ ಪಾತ್ರವು ಮಹತ್ವದ್ದಾಗಿದೆ. “ಕೀರ್ತನ ಕೇಸರಿ” ಎಂದೇ ಹೆಸರಾಗಿದ್ದ ಕೊಪ್ಪಳ ಜಯರಾಮಚಾರ್ಯರು, ರಜಾಕಾರರ ದೌರ್ಜನ್ಯದ ವಿಷಯವಾಗಿ ಕೀರ್ತನೆಗಳನ್ನು ಹೇಳುತ್ತಾ ಜನರನ್ನು ಜಾಗೃತಗೊಳಿಸಿದರು. ನಿಜಾಂ ಸರಕಾರವು ಇವರನ್ನು ಕೀರ್ತಿನ ಮಾಸ್ತರನೆಂದು ನೇಮಕ ಮಾಡಿತ್ತು. ಸದಾ ಗಾಂಧಿ ಟೋಪಿ, ಖಾದಿಗಳನ್ನು ಧರಿಸಿ ರೈಲ್ವೆ ಸ್ಟೇಷನ್ ಬಸ್‌ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರಿಗೆ ರಾಷ್ಟ್ರಾಭಿಮಾನ ಹುಟ್ಟಿಸುವ ಕೀರ್ತನೆಗಳನ್ನು ಹೇಳಿ
ಹೋರಾಟಕ್ಕೆ ಜನರನ್ನು ಹುರಿದುಂಬಿಸುತ್ತಿದ್ದರು. ಇದನ್ನು ಕಂಡು ನಿಜಾಂ ಸರಕಾರ ಇವರಿಗೆ ಎಚ್ಚರಿಕೆ ನೀಡಿತು. ಕೊನೆಗೆ ಇವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಹೋರಾಟಗಾರರಿಗೆ ಸಹಾಯಕರಾಗಿ ನಿಂತರು. ಜಯ ರಾಮಾಚಾರ್ಯರು ತಮ್ಮ ಕೀರ್ತನೆಗಳಲ್ಲಿ ಸ್ವಾತಂತ್ರ‍್ಯ ಗೀತೆಯನ್ನು ಹಾಡಿ ಜನರ ಮನಪರಿವರ್ತನೆ ಮಾಡು ತ್ತಿದ್ದರು. ಜೊತೆಗೆ ವಿಮೋಚನ ಹೋರಾಟಗಾರರಿಗೆ ಸಂಪೂರ್ಣವಾದ ಸುದ್ದಿ ಮಾಹಿತಿಗಳನ್ನು ತಿಳಿಸುತ್ತಿದ್ದರು. ರಜಾಕಾರರ ಹಾವಳಿಯನ್ನು ನೋಡಿ ಅದನ್ನು ಮುಖ್ಯ ವಸ್ತುವಾಗಿಟ್ಟುಕೊಂಡು ಈ ಭಾಗದ ಚನ್ನಗೌಡ ಮಾಸ್ತರ, ನಲವಡಿ ಶ್ರೀಕಂಠಶಾಸ್ತ್ರಿಗಳು ಲಾವಣಿಗಳನ್ನು ರಚಿಸಿದರು. ಲಾವಣಿಯು ಜನಪದದ ಮುಖ್ಯ ಮಾಧ್ಯಮವಾಗಿದೆ. ಇಡೀ ಘಟನೆ ಚರಿತ್ರೆಯ ವ್ಯಕ್ತಿಯ ನೆಲೆಯಲ್ಲಿ ಸಾಮೂಹಿಕವಾಗಿ ಹೇಳಲು ಹೊರಟಿದ್ದು
ವಿಶೇಷವಾಗಿದೆ. ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟ ನಡೆದಿದ್ದು ನಿಜಾಂ ಹಾಗೂ ರಜಾಕಾರ ರೊಡನೆ. ನಿಜಾಂನ ಅದಕ್ಷ ಆಡಳಿತ ರಜಾಕಾರರ ದೌರ್ಜನ್ಯಗಳ ವಿರುದ್ಧವಾಗಿ ಹೋರಾಟದ ಚಿತ್ರಣವನ್ನು ಲಾವಣಿಗಳಲ್ಲಿ ಕಾಣಬಹುದಾಗಿದೆ. ಲಾವಣಿ ಹಾಗೂ ಗೀಗೀ ಪದಗಳಲ್ಲಿ ಅನೇಕ ಮುಸ್ಲಿಮರು ರಜಾಕಾರರ ಕ್ರೂರ ನೀತಿಯನ್ನು ಪ್ರತಿಭಟಿಸಿದ್ದು ಕಂಡುಬರುತ್ತದೆ. ಯಲಬುರ್ಗಿಯ ಚನ್ನಗೌಡ ಮಾಸ್ತರರ “”ಲಾವಣಿ’ ಮತ್ತು “ಜೀ’ ಪದಗಳನ್ನು ಈ ರೀತಿಯಾಗಿ ನೋಡಬಹುದು.
“ಮೊದಲು ರಾಜಧಾನಿ ಸುದ್ದಿ ಕೇಳ್ಳಿ
ನಮ್ ನಿಜಾಂರಿರುವರೀಗ ಬಹಳ ಮುಪ್ಪಿನವರಾ
ಹಿರಿಸೊಸೆ ಅಧಿಕಾರ
ಅಂತಾರ ಅವರ ಮನೆಯೊಳು ಬಹಳ ಬಗಿತಾರ ಹೋ ಜೀ
ಇಸ್ಲಾಂ ಅಂಥಾ ಚಲೋದ್ ಇಸ್ಲಾತ್ ಇಂಥಾ ಚಲೋದ್
ಕೇಶ್ರಾಂತ ಅವರ ತಿಳಿಸಿ ಹೇಳ್ಕಾರಾ ಉಳಿದ ಮತಗಳನ್ನೆಲ್ಲಾ ಅವರು
ನಿಜಾಂರ ಮುಂದೆ ಮನಬಲ್ಲಂತೆ ಅಲ್ಲಗಳೇದಾರಾ”
ಚನ್ನಗೌಡ ಮಾಸ್ತರರು ಜೀ ಪದಗಳ ಮೂಲಕ ಸಂಪೂರ್ಣ ಹೋರಾಟದ ವಿವರವನ್ನು ಕೊಡುತ್ತಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈ ರೀತಿಯಾದ ಲಾವಣಿಗಳು ಸಾಕಷ್ಟು ನಮಗೆ ಲಭ್ಯವಾಗುತ್ತವೆ.
ಹೋರಾಟದಲ್ಲಿ ಶಿಬಿರಗಳ ಪಾತ್ರ
ಶಿಬಿರಗಳೆಂದರೆ ಸ್ವಾತಂತ್ರ‍್ಯ ಹೋರಾಟಕ್ಕಾಗಿ ಆಯಕಟ್ಟಿನ ಪ್ರದೇಶಗಳಲ್ಲಿ ದೇಶ ಪ್ರೇಮಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿಕೊಂಡು ರಚಿಸಿಕೊಂಡಿರುವ ಹೋರಾಟಗಾರರ ಪಡೆ. ರಜಾಕಾರರ ದುಷ್ಪತ್ಕಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ನಿಜಾಂ ಸರಕಾರದ ವಿರುದ್ದ ಪ್ರತಿರೋಧಕ ಕ್ರಮಗಳನ್ನು ಕೈಗೊಳ್ಳುವು ದಕ್ಕಾಗಿ ನಿಜಾಂ ಕರ್ನಾಟಕ ಸರಹದ್ದಿನ ಅನೇಕ ಸ್ಥಳಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶಿಬಿರಗಳನ್ನು ಪ್ರಾರಂಭಿಸಲಾಯಿತು. ವಿಶೇಷವಾಗಿ ಗಂಗಾವತಿಯ ಹೋರಾಟಗಾರರು ಶಿರುಗುಪ್ಪ ಮತ್ತು ಕಂಪ್ಲಿಗಳಲ್ಲಿ ಶಿಬಿರಗಳನ್ನು ಹುಟ್ಟು ಹಾಕಿದರು.

ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಗಡಿಶಿಬಿರಗಳ ಪಾತ್ರವು ತುಂಬಾ ಮಹತ್ವದ್ದಾಗಿವೆ. ಸ್ವಾತಂತ ಹೋರಾಟದ ಅನೇಕ ಮಾದರಿಗಳನ್ನು ಧೇಯೋದ್ದೇಶಗಳನ್ನು ಒಳಗೊಂಡ ಸಂಘ-ಸ೦ಸ್ಥೆಗಳು ಜನ್ಮತಾಳಿದಂತೆ ಈ ಬಾಗದಲ್ಲಿ ಶಿಬಿರಗಳು ಹುಟ್ಟಿಕೊಂಡವು. ಪ್ರಥಮವಾಗಿ ವಿಮೋಚನ ಹೋರಾಟದ ರೂಪರೇಷೆಗಳು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿಂದಲೇ ಪ್ರಾರಂಭವಾಯಿತೆನ್ನ ಬಹುದು. ಮೂಲತಃ ವಿಮೋಚನ ಪ್ರತಿಭಟನೆಯಲ್ಲಿ ಯಾವ ಯಾವ ಕೆಲಸಗಳನ್ನು ಎಲ್ಲಿ? ಹೇಗೆ? ಮಾಡ ಬೇಕೆಂಬ ಯೋಜನೆಯ ಪೂರ್ವ ತಯಾರಿಯೊಡನೆ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಈ ಶಿಬಿರಗಳ ಮುಖ್ಯ ಕೆಲಸವಾಗಿತ್ತು. ಶಿಬಿರಗಳು ಎಂದ ಕೂಡಲೆ ನಮ್ಮ ಕಣ್ಣಿದುರಿಗೆ ಇಂದು ನಿರಾಶ್ರಿತ ಶಿಬಿರಗಳ ಕಲ್ಪನೆ ಮೂಡುತ್ತದೆ. ಆದರೆ ವಿಮೋಚನ ಹೋರಾಟದ ಶಿಬಿರಗಳಲ್ಲಿ ಇಂತಹ ಯೋಚನೆ ಇರಲಿಲ್ಲ. ಕೇವಲ ನಿಜಾಂರ ಅನುಯಾಯಿಗಳಾಗಿದ್ದ ರಜಾಕಾರರಿಂದ ಯಾವ ಸ್ಥಳಗಳು ದಾಳಿಗೆ ಒಳಗಾಗಿವೆ ಎಂಬುದನ್ನು ತಮ್ಮ ಗುಪ್ತಚಾರರಿಂದ ತಿಳಿದುಕೊಂಡು, ಅಂತಹ ಹಳ್ಳಿಗಳ ಹಾಗೂ ಸಾಮಾನ್ಯ ಜನರ ರಕ್ಸಣೆಗೆ ಮುಂದಾಗಿ ರಜಾಕಾರರ ವಿರುದ್ಧ ಹೋರಾಟ ಮಾಡಿದ್ದಾರೆ. ಹೈದರಾಬಾದ್ ಸಂಸ್ಥಾನಕ್ಕೆ ಒಳಪಟ್ಟ ಕರ್ನಾಟಕದ ಈ ಪ್ರಾಂತ್ಯಗಳನ್ನು ಸ್ವತಂತ್ರ ಭಾರತದ ಮಡಿಲಿಗೆ ಸೇರಿಸುವಂತಹ ಮಹತ್ವದ ಉದ್ದೇಶದಿಂದ ಈ ಶಿಬಿರಗಳು ಹುಟ್ಟಿಕೊಂಡವು. ಹೀಗೆ ಶಿಬಿರಗಳು ಹುಟ್ಟಲು ಮುಖ್ಯವಾಗಿ ನಿಜಾಂನ ಪರವಾಗಿ ಕಾರ್ಯಗೈಯುವ, ರಜಾಕಾರರ ಕೃತ್ಯಗಳವಿರುದ್ಧವಾಗಿ ಸಾಮಾನ್ಮ ಜನತೆಯನ್ನು ಸಂಘಟಿಸಿದರು. ಯೋಜಿತ ಪ್ರದೇಶದಲ್ಲಿ ಅಂದರೆ ಜಿಲ್ಲೆಯ ಗಡಿಭಾಗದ ಆಯಕಟ್ಟಿನ ಪ್ರದೇಶಗಳಲ್ಲಿ ಶಿಬಿರಗಳನ್ನು ಸ್ಥಾಪಿಸಲು ಸ್ವಾತಂತ್ರ‍್ಯ ಪ್ರೇಮಿಗಳ ಮುಖಂಡತ್ವದಲ್ಲಿ ಕಾರ್ಯನಿರ್ವಹಿಸಲಾಯಿತು. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂಬAಧಿಸಿದ ಪ್ರತಿಯೊಂದು ಶಿಬಿರವೂ ಪ್ರಧಾನ ಕಛೇರಿ ಗದಗ ಅಥವಾ ಶಾಖಾ ಕಛೇರಿ ಬಿಜಾಪುರ -ಸೊಲ್ಲಾಪುರಗಳಿಂದ ಬಂದ ನಿರ್ದೇಶನಕ್ಕೆ ಅನುಗುಣವಾಗಿ ಕೆಲಸ ಮಾಡಬೇಕಿತ್ತು. ಕ್ರಿಯಾಸಮಿತಿಯ ಎಲ್ಲಾ ಅಧಿಕಾರಗಳನ್ನು ಪಡೆದಿದ್ದ ಶಿಬಿರಾಧಿಪತಿಯು ಶಿಬಿರದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದನು. ಪ್ರತಿಯೊಂದು ಶಿಬಿರದಲ್ಲೂ ಸೈನಿಕರಂತೆ ಕರ್ತವ್ಯ ನಿರತ ರಾಗಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಂಖ್ಯೆ ೨೫ರಿಂದ ೨೫೦ರವರೆಗೆ ಇರುತ್ತಿತ್ತು. ಗಡಿಶಿಬಿರಗಳಲ್ಲಿ ಮೂರು ಅಂಗಗಳಿರುತ್ತಿದ್ದವು. ೧. ಸಶಸ್ತ್ರ ವಿಭಾಗ ೨. ಗುಪ್ತಚಾರ ೩. ನಿಶಸ್ತ್ರ ವಿಭಾಗ ಹೀಗೆ ಮೂರು ರೀತಿಯ ವಿಭಾಗಗಳನ್ನು ಶಿಬಿರಗಳು ಹೊಂದಿದ್ದವು. ಎಲ್ಲಾ ಸ್ವಾತಂತ್ರ‍್ಯಗಳನ್ನು ನಿಜಾಂ ಆಡಳಿತದಿಂದ ಕಳೆದುಕೊಂಡಿದ್ದ ಈ ಭಾಗದ ಜನತೆಗೆ ಪ್ರತಿಭಟನೆ ಮಾಡುವ ಅವಕಾಶವಿರಲಿಲ್ಲ. ರಜಾಕಾರರ ದಬ್ಬಾಳಿಕೆಯಿಂದ ಜನತೆಯ ಕೂಗು ಯಾರಿಗೂ ಕೆಳದಾಯಿತು. ನಿಜಾಂ ಸರಕಾರರ ಜನ ವಿರೋಧಿ, ಧರ್ಮವಿರೋಧಿ, ಚಟುವಟಿಕೆಗಳ ಬಗ್ಗೆ ಮಾತನಾಡುವುದು ದೊಡ್ಡ ಅಪರಾಧವಾಗಿತ್ತು. ಇದರಿಂದ ವಿದ್ಯಾವಂತರು, ಶೋಷಿತರು, ಒಂದೆಡೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಪೂರ್ವಯೋಜಿತವಾಗಿ ರಜಾಕಾರರ ಮೇಲೆರಗಿ, ಅವರಲ್ಲಿ ಭಯ ಹುಟ್ಟಿಸುವಂತಹ ಪ್ರತಿರೋಧ ತೋರಿಸಲು ಹಾಗು ಹೈದರಾಬಾದ್ ಕರ್ನಾಟಕವನ್ನು ರಜಾಕಾರರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ಧೇಯ-ಧೋರಣೆಗಳನ್ನು ಒಳಗೊಂಡು ಹೈದರಾಬಾದ್ ಕರ್ನಾಟಕದ ಭಾಗಗಳಲ್ಲಿ ಶಿಬಿರಗಳು ಸ್ಥಾಪನೆಗೊಂಡಿದ್ದವು.
। ಮುಂದುವರೆಯುವುದು ।






0 Comments