ಕಾಡುವ ಅಪ್ಪನೂ.. ಬಾಡಿಗೆ ಮನೆಯೂ..

 ಗೌರಿ ಚಂದ್ರಕೇಸರಿ

ಅಪ್ಪನ ವ್ಯಕ್ತಿತ್ವವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿರಲಿಲ್ಲ. ಅವರ ಧೋರಣೆಗಳಿಗೆ ನಾವು ಮನೆಯವರೆಲ್ಲ ಹೊಂದಿಕೊಂಡು ಬಿಟ್ಟಿದ್ದೆವು. ಆದರೆ ಬೇರೆಯವರಿಗೆ ಅಪ್ಪನ ನಡವಳಿಕೆಗಳು, ಅವರ ಅತಿ ಎನ್ನಿಸುವ ಸಾಚಾತನಗಳು ಇರಿಸು ಮುರಿಸನ್ನು ಉಂಟು ಮಾಡುತ್ತಿದ್ದವು. ಅಂಗಡಿಯಲ್ಲಿ ಖರೀದಿಸಿದ ವಸ್ತುಗಳಿಗೆ ದುಡ್ಡು ಕೊಟ್ಟಾಗ, ನೆರೆ ಹೊರೆಯವರಿಂದ ಇಸಿದುಕೊಂಡ ವಸ್ತುವನ್ನು ಅವರಿಗೆ ಮರಳಿಸುವಾಗ “ಕೊಟ್ಟಿದ್ದೇನೆ” ಎಂಬ ಮಾತನ್ನು ಮೂರ್ನಾಲ್ಕು ಬಾರಿ ಹೇಳುತ್ತಿದ್ದರು.

ಇದರಿಂದ ಕೆಲವರು ಬೇಸರಗೊಂಡು ಖಾರವಾಗಿಯೂ ಮಾತನಾಡುತ್ತಿದ್ದದ್ದು ಇತ್ತು. ಅಪ್ಪ ಅತೀ ಎನ್ನಿಸುವ ಅನುಮಾನದ ಪ್ರವೃತ್ತಿಯವರಾಗಿದ್ದರು. ಸಂಭವಿಸದಿರುವುದನ್ನು ದೂರಾಲೋಚಿಸಿ ಭಯಪಡುವುದು ಅಪ್ಪನ ವ್ಯಕ್ತಿತ್ವದ ಒಂದು ಭಾಗವಾಗಿ ಹೋಗಿತ್ತು. ಸಿನಿಮಾ ನೋಡಲು ಹೋದಾಗ ನೆತ್ತಿಯ ಮೇಲೆ ತಿರುಗುತ್ತಿರುವ ಫ್ಯಾನ್ ತನ್ನ ಮೇಲೆ ಕಳಚಿ ಬೀಳಬಹುದೆಂಬ ಭಯದಿಂದ ಫ್ಯಾನ್ ಕೆಳಗೆ ಕುಳಿತುಕೊಳ್ಳುತ್ತಿರಲಿಲ್ಲ. ಊಟ ಮಾಡುವಾಗ ತಟ್ಟೆಯಲ್ಲಿ ಗುಂಡು ಪಿನ್ನು, ಸೂಜಿಗಳಂತಹ ಸೂಕ್ಷ್ಮ ವಸ್ತುಗಳು ಸೇರಿರಬಹುದೇನೋ, ಪರಿಚಿತರ, ಬಂಧುಗಳ ಮನೆಗೆ ಹೋದಾಗ ಅವರು ಕೊಡುವ ಕಾಫಿಗೆ ವಿಷ ಬೆರೆತಿರಬಹುದೇನೋ ಹೀಗೆ ಅತಿಶಯೋಕ್ತಿ ಎನ್ನಿಸುವಂತಹ ಊಹೆಗಳೊಂದಿಗೆ ಬದುಕುತ್ತಿದ್ದರು ಅಪ್ಪ.

ಅಪ್ಪನ ಈ ಗೀಳಿನ ಸ್ವಭಾವ ನೆನಪಿನಾಳಿಂದ ಅಳಿಸಿ ಹೋಗದಂತಹ ಹಲವಾರು ಘಟನೆಗಳನ್ನು ನನ್ನಲ್ಲಿ ಉಳಿಸಿ ಹೋಗಿದೆ. ಅಪ್ಪ ಒಂದು ಮನೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿಗೆ ಇರುತ್ತಿರಲಿಲ್ಲ. ಮನೆ ಕೊಟ್ಟ ಮಾಲೀಕರಿಂದ ಮನಸ್ಸಿಗೆ ಬೇಸರವಾಗುವಂತಹ ಒಂದು ಮಾತು ಬಂದರೂ ಮರು ದಿನದಿಂದ ಹೊಸದೊಂದು ಮನೆಯ ಬೇಟೆಗಿಳಿಯುತ್ತಿದ್ದರು. ಮರಿ ಹಾಕಿದ ಬೆಕ್ಕಿನಂತೆ ಸದಾ ಮನೆಯನ್ನು ಬದಲಾಯಿಸುತ್ತಲೇ ಇರುತ್ತಿದ್ದರು. ಒಟ್ಟು ಹದಿನಾರು ಮನೆಗಳ ಸುಮಧುರ ನೆನಪಿನ ಒಡತಿ ನಾನು ಎನ್ನಿಸುತ್ತದೆ.

ನನಗಾಗ ಶಾಲೆಗೆ ಹೋಗುವ ವಯಸ್ಸು. ಹದಿಮೂರನೇ ಮನೆಯನ್ನು ಯಾವುದೋ ಕಾರಣಕ್ಕೆ ಖಾಲಿ ಮಾಡಬೇಕಾಗಿ ಬಂದಿತ್ತು. ಹದಿನಾಲ್ಕನೇ ಮನೆಯ ಹುಡುಕಾಟದಲ್ಲಿದ್ದಾಗ ತುಂಬಾ ವಿಶಾಲವಾದ ಮನೆಯೊಂದು ಸಿಕ್ಕಿತ್ತು. ಆಗ ಮನೆಯಲ್ಲಿನ್ನೂ ಕಟ್ಟಿಗೆಯ ಒಲೆಯನ್ನೇ ಅವಲಂಬಿಸಿದ್ದೆವು. ಯಾವುದೇ ಮನೆಗೆ ಹೋಗುವಾಗಲೂ ಹೊಸದೊಂದು ಒಲೆಯನ್ನು ಪ್ರತಿಷ್ಠಾಪಿಸಿಯೇ ಹಾಲು ಉಕ್ಕಿಸುವ ಪರಿಪಾಠ ಅಪ್ಪನದು. ಮನೆಯ ಮಾಲೀಕ ಬೀಗದ ಕೈಯ್ಯನ್ನು ಒಪ್ಪಿಸಿ ಹೊರಟು ಹೋದ ನಂತರ ಆ ಮನೆಯಲ್ಲಿದ್ದ ಹಳೆಯ ಒಲೆಯನ್ನು ಬಗೆದು ಹೊಸ ಒಲೆಯನ್ನು ಹಾಕಲು ಹಾರೆಯನ್ನು ಕೈಗೆತ್ತಿಕೊಂಡಿದ್ದರು ಅಪ್ಪ.

ಅಮ್ಮ ಒಲೆಗೆ ಮೆತ್ತನೆ ಮಾಡಲೆಂದು ಮಣ್ಣನ್ನು ಹದಗೊಳಿಸುತ್ತಿದ್ದಳು. ಹಾರೆಯಿಂದ ಒಲೆಯನ್ನು ಒಡೆಯುತ್ತಿದ್ದಾಗ “ಟಣ್” ಎಂಬ ಶಬ್ದ ಬಂದಾಗ ಎಲ್ಲರಿಗೂ ಆಶ್ಚರ್ಯ. ನಿಧಾನವಾಗಿ ಒಲೆಯನ್ನು ಒಡೆದು ನೋಡಿದಾಗ ಅದರಲ್ಲೊಂದು ಪುಟ್ಟದಾದ ಹಿತ್ತಾಳೆಯ ಡಬ್ಬಿ. ಮುಚ್ಚಳ ತೆಗೆದು ನೋಡಿದಾಗ ಬೆಂಡೋಲೆ, ಉಂಗುರ, ಚೈನು ಹೀಗೆ ಐದಾರು ಚಿನ್ನದ ಒಡವೆಗಳು. ಅದನ್ನು ಹಾಗೆಯೇ ಮುಚ್ಚಿಟ್ಟು ಡಬ್ಬಿಯನ್ನು ಅಪ್ಪ ಭದ್ರವಾಗಿಟ್ಟುಕೊಂಡು ಆ ಮನೆಗೆ ಬೀಗ ಹಾಕಿಕೊಂಡು ಮನೆಗೆ ಬಂದಿದ್ದರು. ಆ ರಾತ್ರಿ ಇಡೀ ಅಪ್ಪ ನಿದ್ದೆ ಮಾಡಲಿಲ್ಲ. ಮಾರನೇ ದಿನ ಅಪ್ಪ ಒಂದು ತೀರ್ಮಾನಕ್ಕೆ ಬಂದಿದ್ದರು.

ಆ ಮನೆಯಲ್ಲಿ ಮೊದಲು ವಾಸವಿದ್ದದ್ದು ಮಾಲೀಕರೇ. ವಯಸ್ಸಾದ ಗಂಡ ಹೆಂಡತಿಗೆ ಅಷ್ಟು ದೊಡ್ಡ ಮನೆಯ ಅಗತ್ಯವಿಲ್ಲವೆಂದು ಆ ಮನೆಗೆ ತಾಗಿಕೊಂಡಿದ್ದ ಚಿಕ್ಕ ಮನೆಗೆ ಸ್ಥಳಾಂತರಗೊಂಡಿದ್ದರು. ಊರಿಗೆ ತೆರಳಿದ್ದ ಅವರ ಹೆಂಡತಿಗೆ ಮನೆಯನ್ನು ಬಾಡಿಗೆಗೆ ಕೊಟ್ಟದ್ದು ತಿಳಿದಿರಲಿಲ್ಲ. ಒಲೆ ಹೂಡಿದ ಮರುದಿನವೇ ನಾವು ಆ ಮನೆಗೆ ಸ್ಥಳಾಂತರಗೊಂಡಿದ್ದೆವು. ಮಾರನೆ ದಿನ ಬೆಳಿಗ್ಗೆ ಮಾಲೀಕರ ಹೆಂಡತಿ ಊರಿನಿಂದ ಬಂದಿಳಿದಿದ್ದರು. ಬೆಳ್ಳಂಬೆಳಿಗ್ಗೆ ಮನೆಯೊಳಗೆ ದೌಡಾಯಿಸಿದವರೇ ಒಲೆಯ ಹತ್ತಿರ ಹೋದರು.

ಹಳೆಯ ಒಲೆಯ ಜಾಗದಲ್ಲಿ ಹೊಸದೊಂದು ಒಲೆ ಪ್ರತಿಷ್ಠಾಪನೆಯಾದದ್ದನ್ನು ಕಂಡು “ಅಯ್ಯೋ ನನ್ನ ಬಂಗಾರ ಹೋಯಿತು” ಎಂದು ಬಡಬಡಿಸತೊಡಗಿದ್ದರು. ಅಪ್ಪ ಅವರನ್ನು ಸಮಾಧಾನಪಡಿಸಿ ಕುಳಿತುಕೊಳ್ಳಲು ಹೇಳಿದ್ದರು. ನೀವು ಹೂತಿಟ್ಟ ಬಂಗಾರ ಭದ್ರವಾಗಿದೆ. ಆದರೀಗ ಅದು ನನ್ನ ಬಳಿಯಲ್ಲಿ ಇಲ್ಲ. ಅದನ್ನು ಪೋಲಿಸರ ಸುಪರ್ದಿಗೆ ಒಪ್ಪಿಸಿದ್ದೇನೆ ಎಂದರು. ಅದನ್ನು ಕೇಳಿ ಆಕೆ ಎದೆ ಬಡಿದುಕೊಂಡು ರೋಧಿಸಹತ್ತಿದರು.

ಆ ಡಬ್ಬಿ ಸಿಕ್ಕ ದಿನವೇ ಅದನ್ನು ಅಪ್ಪ ಮಾಲೀಕರಿಗೆ ಒಪ್ಪಿಸಬೇಕಿತ್ತು. ಆದರೆ ಅಪ್ಪನ ಅನುಮಾನದ ಪ್ರವೃತ್ತಿ, ಭಯ ಅದಕ್ಕೆ ಅವಕಾಶವನ್ನು ಕೊಡಲಿಲ್ಲ. ಮಾಲೀಕರೇನಾದರೂ ಆ ಡಬ್ಬಿಯಲ್ಲಿ ಇನ್ನೂ ಹೆಚ್ಚಿನ ಒಡವೆಗಳಿದ್ದವು ಎಂದು ಹೇಳಿಬಿಟ್ಟರೆ? ಎಂಬ ಭಯ ಅಪ್ಪನನ್ನು ಕಾಡಿತ್ತು. ಹಾಗಾಗಿ ನಡೆದ ವೃತ್ತಾಂತವನ್ನೆಲ್ಲ ಠಾಣೆಯಲ್ಲಿ ಹೇಳಿ ಆ ಡಬ್ಬಿಯನ್ನು ಒಪ್ಪಿಸಿ ಬಂದುಬಿಟ್ಟಿದ್ದರು ಅಪ್ಪ. ನಂತರ ಮನೆಯ ಮಾಲೀಕರು ಪೋಲಿಸ್ ಸ್ಟೇಷನ್ನಿಗೆ ತೆರಳಿ ತಮ್ಮ ಒಡವೆಗಳನ್ನು ಪಡೆದುಕೊಂಡಿದ್ದರು. ಅಪ್ಪನ ಮುಂದಾಲೋಚನೆಯನ್ನು ಅಲ್ಲಿದ್ದವರೆಲ್ಲ ಮೆಚ್ಚಿಕೊಂಡರೇನೋ ಸರಿ. ಆದರೆ ಆ ದಿನ ಮನೆಯವರೆಲ್ಲ ಪಟ್ಟ ಆತಂಕ ಅಷ್ಟಿಷ್ಟಲ್ಲ.

ಎಲ್ಲವೂ ಸುಖಾಂತ್ಯಗೊಂಡ ಮೇಲೆ ಅಪ್ಪ ಮತ್ತೆ ಬೇರೊಂದು ಮನೆಯ ಬೇಟೆಗೆ ತೊಡಗಿದ್ದರು. ಒಂದೇ ವಾರದಲ್ಲಿ ಮನೆ ಸಿಕ್ಕು ಆ ಮನೆಯಿಂದ ಋಣ ಮುಕ್ತರಾಗಿದ್ದೆವು.

ಅಪ್ಪನ ಈ ವಿಚಿತ್ರ ವ್ಯಕ್ತಿತ್ವದಿಂದ ಆಗಾಗ ಘಟಿಸುತ್ತಿದ್ದ ಘಟನೆಗಳಿಗೆ ನಾವು ಒಗ್ಗಿ ಹೋಗಿದ್ದೆವು. ಅಪ್ಪನಿಗಿದ್ದದ್ದು “ಗೀಳು” ಎಂಬ ಮಾನಸಿಕ ಸಮಸ್ಯೆ ಎಂಬುದು ನಮಗೆ ಅರ್ಥವಾಗುವಷ್ಟರಲ್ಲಿ ಅಪ್ಪನನ್ನು ನಾವು ಕಳೆದುಕೊಂಡಿದ್ದೆವು. ಅವರು ಜೀವನದುದ್ದಕ್ಕೂ ವೃಥಾ ಅನುಮಾನವೆಂಬ ಭ್ರಮಾ ಲೋಕದಲ್ಲೇ ಜೀವಿಸಿ ಮರೆಯಲಾರದಂತಹ ಹಲವಾರು ನೆನಪುಗಳನ್ನು ಉಳಿಸಿ ಹೋಗಿದ್ದಾರೆ.

‍ಲೇಖಕರು nalike

July 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಇಂತಹ ವ್ಯಕ್ತಿಗಳನ್ನು ನಾನೂ ನೋಡಿದ್ದೇನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: