ಮಮತಾ ರಾವ್ ಪ್ರವಾಸದ ನೆನಪು- ಸಾಂತಾಕ್ಲಾಸ್ ಅಜ್ಜನ ಊರಿನಲ್ಲಿ

ಮಮತಾ ರಾವ್

ಡಿಸೆಂಬರ್ ತಿಂಗಳು ಹತ್ತಿರ ಬಂತೆಂದರೆ ಎಲ್ಲೆಡೆಯೂ ಕ್ರಿಸ್‌ಮಸ್ ಹಬ್ಬದ ಸಡಗರ. ಮಕ್ಕಳಿಗಂತೂ ಸಂಭ್ರಮವೇ ಸಂಭ್ರಮ. ವರ್ಷವಿಡೀ ತಾವು ಏನೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಿದ್ದೆವು?, ಹೆತ್ತವರಿಗೆಷ್ಟು ವಿಧೇಯರಾಗಿದ್ದೆವು ಎನ್ನುವುದನ್ನು ನೆನಪಿಸಿಕೊಳ್ಳುತ್ತಾ ಸಾಂತಾ ಅಜ್ಜನಿಗೆ ಪತ್ರ ಬರೆದು ತಮ್ಮಿಷ್ಟದ ಆಟಿಗೆಗಳ-ಉಡುಗೊರೆಗಳ ಪಟ್ಟಿಯನ್ನು ಈಗಾಗಲೇ ರವಾನಿಸಿ ಆಗಿದೆ. ಇದೀಗ ಕ್ಷಣಗಣನೆಯಷ್ಟೇ ಉಳಿದದ್ದು.

ಹೌದು… ನಾವು ಭಾರತೀಯರಿಗೆ ಪಕ್ಷಕ್ಕೊಂದರಂತೆ ಹಬ್ಬ-ಹರಿದಿನಗಳು, ಮದುವೆ-ಮುಂಜಿ ಅಂತ ವರ್ಷವಿಡೀ ಸಂಭ್ರಮಿಸಲು ಅವಕಾಶಗಳಿದ್ದರೆ ಪಾಶ್ಚಾತ್ಯರಿಗೆ ಕ್ರಿಸ್‌ಮಸ್ ಎಂದರೆ ಮಹಾಪರ್ವವೇ ಸರಿ. ಮಕ್ಕಳಿಗಂತೂ ಕ್ರಿಸ್‌ಮಸ್ ಹಬ್ಬದ ಸಡಗರದೊಂದಿಗೆ ಸಾಂತಾಕ್ಲಾಸ್ ತರುವ ಉಡುಗೊರೆಗಳೆ ಮುಖ್ಯ ಆಕರ್ಷಣೆ.

ನನ್ನ ಬಾಲ್ಯದಲ್ಲಿಯೂ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ ತಂಡಗಳು ಕ್ಯಾರಲ್ ಹಾಡುತ್ತಾ ಮನೆ-ಮನೆಗೆ ಬರುವುದು ಸರ್ವೇ ಸಾಮಾನ್ಯವಾಗಿತ್ತು. ಅವರ ಸುಮಧುರ ಗಾಯನವನ್ನು ಕೇಳುತ್ತಾ ಮೈಮರೆಯುವಂತಾದರೂ ನಮ್ಮೆಲ್ಲರ ಆಕರ್ಷಣೆಯ ಕೇಂದ್ರ ಮಾತ್ರ ಅವರೊಂದಿಗೆ ಹೊ ಹೊ ಹೊ ಎನ್ನುತ್ತಾ ಮೈಕೈ ಕುಲುಕುತ್ತಾ ಮಕ್ಕಳನ್ನು ಪ್ರೀತಿಯಿಂದ ಹತ್ತಿರ ಕರೆದು ಮುದ್ದುಗರೆಯುತ್ತಾ ಚಾಕ್ಲೇಟ್ ಹಂಚುವ ಬಿಳಿಗಡ್ಡದ ಸಾಂತಾಕ್ಲಾಸ್ ಅಜ್ಜ!!!!. ಮೂರು ವರ್ಷಗಳ ಹಿಂದೆ ಮೊಮ್ಮಗನೊಂದಿಗೆ ‘ದಿ ಪೊಲಾರ್ ಎಕ್ಸ್ಪ್ರೆಸ್’ ಚಲನಚಿತ್ರವನ್ನು ನೋಡುತ್ತಾ ನಾನೂ ಅವನಷ್ಟೇ ರೋಮಾಂಚನಗೊಂಡಿದ್ದೆ.

ಸೂರ್ಯನ ಕಿರಣಗಳು ಸ್ಪರ್ಶಿಸದಂತಹ ಹಿಮಚ್ಛಾದಿತ ಉತ್ತರ ಧ್ರುವದ ಪ್ರದೇಶದಲ್ಲಿ ವಾಸಿಸುವ ಸಾಂತಾಅಜ್ಜ ವರ್ಷವಿಡೀ ಜಗತ್ತಿನ ಬಡಮಕ್ಕಳಿಗಾಗಿ ಹಾಗೂ ಒಳ್ಳೆಯ ನಡತೆಯ ಮಕ್ಕಳಿಗಾಗಿ ಉಡುಗೊರೆಗಳನ್ನು ಪ್ಯಾಕ್ ಮಾಡುತ್ತಾ ಕಾಲ ಕಳೆಯುತ್ತಾನಂತೆ. ಕ್ರಿಸ್‌ಮಸ್ ರಾತ್ರಿಯಂದು ಎಲ್ಲರೂ ಮಲಗಿರುವಾಗ ಗಪ್ಪಚಿಪ್ಪಾಗಿ ರೇನ್‌ಡಿಯರ್ ಅಥವಾ ಹಸ್ಕೀ(ನಾಯಿ)ಗಳು ಎಳೆಯುವ ಸ್ಲೇನಲ್ಲಿ ಬಂದು ಆಯಾಯ ಮಕ್ಕಳ ಕೋರಿಕೆಯಂತೆ ಉಡುಗೊರೆಗಳನ್ನು ಇಟ್ಟು ಹೋಗುತ್ತಾನಂತೆ.

ಬಡಮಕ್ಕಳು ಬಿಡಿ ಸ್ಥಿತಿವಂತರ ಮಕ್ಕಳು ಸಹ ತಮ್ಮ ಬೇಡಿಕೆಗಳನ್ನು ಪೂರೈಸುವಂತೆ ಸಾಂತಾ ಅಜ್ಜನನ್ನೇ ಅವಲಂಬಿಸುವುದು ಇಂದಿಗೂ ನಡೆದೇ ಇದೆ. ನನ್ನ ಮೊಮ್ಮಗನಂತೂ ಒಂದು ಕ್ರಿಸ್‌ಮಸ್ ಕಳೆದ ಕೂಡಲೇ ಮುಂದಿನ ಕ್ರಿಸ್‌ಮಸ್‌ಗೆ ತನಗೇನೇನು ಬೇಕು ಎನ್ನುವುದರ ಲಿಸ್ಟ್ ಮಾಡಲು ಪ್ರಾರಂಭಿಸುತ್ತಾನೆ. ಆಗ ನನ್ನ ಮಗನ ಮುಖ ನೋಡಬೇಕು.. ಜಗತ್ತಿನ ಮಕ್ಕಳ ಪ್ರೀತಿ ವಿಶ್ವಾಸದ ಗಣಿ ಸಾಂತಾ ಅಜ್ಜ. ಇಂತಹ ಸಾಂತಾ ಅಜ್ಜನ ಊರು ನಿಜವಾಗಿಯೂ ಇದೆ. . ಅಲ್ಲಿಗೆ ನಾವು ಹೋಗಿ ಅವನನ್ನು ಮುಖತಃ ಭೇಟಿಯಾಗುವ ಸಾಧ್ಯತೆಯೂ ಇದೆ ಎನ್ನುವುದು ತಿಳಿದದ್ದು ನಾವು ಸ್ಕಾ÷್ಯಂಡಿನೇವಿಯನ್ (ನೊರ್ವೇ, ಸ್ವೀಡನ್, ಫಿನ್‌ಲ್ಯಾಂಡ್, ಡೆನ್ಮಾರ್ಕ್) ದೇಶಗಳ ಪ್ರವಾಸಕ್ಕೆ ಹೊರಟಾಗ. ಅದೂ ಸೌಭಾಗ್ಯವಶ ಲಾಕ್‌ಡೌನ್‌ಗಿಂತ ಕೆಲವೇ ತಿಂಗಳುಗಳ ಮೊದಲು.

ಮುಂಬಯಿಯಿಂದ ಇಸ್ತಾನ್ಬುಲ್ ಮಾರ್ಗವಾಗಿ ಫಿನ್‌ಲ್ಯಾಂಡ್‌ನ ರಾಜಧಾನಿಯಾದ ಹೆಲ್‌ಸಿಂಕಿಗೆ ಪ್ರಯಾಣಿಸಿದಾಯಿತು. ಅತ್ಯಂತ ಚಳಿಯ ಹಿಮಚ್ಛಾದಿತ ಪ್ರದೇಶಕ್ಕೆ ಹೊರಟವರೆಂದು ಕಾಳಜಿಯಿಂದ ಮಗ ಅಮೇರಿಕಾದಿಂದ ತಂದಿದ್ದ ವಿಶೇಷ ಉಣ್ಣೆಯ ಕೋಟುಗಳ ಬ್ಯಾಗ್ ನಮ್ಮನ್ನು ನೋಡಿ ಕಣ್ಣು ಮಿಟಿಕಿಸಿ ಅಣಕಿಸುತ್ತಿತ್ತು. ಕಾರಣ ಫಿನ್‌ಲ್ಯಾಂಡ್‌ಗೆ ಬಂದಿಳಿದ ನಮಗೆ ಎಲ್ಲೂ ಹಿಮ ಕಾಣಲೇ ಇಲ್ಲ!!!! ನಮ್ಮ ಬೆಂಗಳೂರಿನಲ್ಲಿ ಮೋಡ ಕವಿದು ಹನಿಮಳೆಯಾದಾಗ ಅನುಭವಕ್ಕೆ ಬರುವ ನಡುಕವನ್ನಷ್ಟೇ ನಾವಲ್ಲಿ ಅನುಭವಿಸಿದ್ದು.

ಮರುದಿನ ಬೆಳಿಗ್ಗೆದ್ದು ಒಂದುದಿನದ ಮಟ್ಟಿಗೆ ಬೇಕಾಗುವಷ್ಟು ಅತ್ಯಾವಶ್ಯಕ ವಸ್ತುಗಳನ್ನು ಒಂದು ಬ್ಯಾಗಿನಲ್ಲಿ ಪ್ಯಾಕ್ ಮಾಡಿ ಉಳಿದ ಪೆಟ್ಟಿಗೆಗಳನ್ನು ಅಲ್ಲೇ ಹೋಟಲಲ್ಲಿಟ್ಟು ನಾವು ಫಿನ್‌ಏರ್ ವಿಮಾನದ ಮೂಲಕ ರೋವಾನೆಮಿಗೆ ಪಯಣಿಸಿದೆವು. ಪಿನ್‌ಲ್ಯಾಂಡ್‌ನ ಉತ್ತರಕ್ಕಿರುವ ರೋವಾನೆಮಿಯು ಆರ್ಕಿಟಿಕ್ ವೃತ್ತಕ್ಕೆ ಅತೀ ಸಮೀಪದಲ್ಲಿರುವ ನಗರ. ಇದರ ಜನಸಂಖ್ಯೆ ಸುಮಾರು ೬೪೦೦೦. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಸಂಪೂರ್ಣವಾಗಿ ನಾಶಪಟ್ಟಿದ್ದ ರೋವಾನೆಮಿ ಇದೀಗ ಯಾತ್ರಿಕರ ಪ್ರಮುಖ ಆಕರ್ಷಣೆಯ ಕೇಂದ್ರ. ಕಾರಣ ಸಾಂತಾಕ್ಲಾಸ್ ನೆಲೆಸಿರುವ ಅಧಿಕೃತ ಊರು ಇದೆಂದು. ಅವನ ವಾಸಸ್ಥಾನಕ್ಕೆ ಭೇಟಿ ನೀಡಿ ಅವನೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸುವ ಅವಕಾಶ ಯಾರಿಗೆ ತಾನೇ ಬೇಡ? ನಾವೂ ಅಲ್ಲಿ ಇಳಿದಾಗ ನವಿರಾದ ಬಿಸಿಲಿತ್ತು.

ಸಾಂತಾ ಅಜ್ಜನ ಮನೆಯಂಗಳದಲ್ಲಿಯೇ ಆರ್ಕಿಟ್ ವೃತ್ತ ಹಾದು ಹೋಗುವುದು. ನಾವು ಜಾಕೇಟ್ ಕೂಡ ಹಾಕದೆ ಆರ್ಕಿಟ್ ವೃತ್ತದ ಹತ್ತಿರ ನಿಂತು ತೆಗೆಸಿಕೊಂಡ ಫೋಟೋ ನೋಡಿದವರು ಅಲ್ಲಿ ಚಳಿ ಇರಲಿಲ್ಲವೇ ಎಂದು ಆಶ್ಚರ್ಯ ಪಟ್ಟುಕೊಂಡರು. ಹಿಂತಿರುಗಿದಾಗ ಯಾರಾದರೂ ಪ್ರಶ್ನಿಸಿದರೆ ಇರಲಿ ಅಂತಲೋ ಏನೋ ಇಲ್ಲಿಗೆ ಬಂದವರಿಗೆ ಆರ್ಕಿಟ್ ಸರ್ಕಲ್‌ಗೆ ಭೇಟಿ ನೀಡಿದ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ. ಇನ್ನು ಇಂತಹ ಬಿಸಿಲಿನಲ್ಲಿ ಸಾಂತಾ ಅಜ್ಜ ಬಹುಶ ಚಡ್ದಿ-ಬನಿಯನ್‌ನಲ್ಲೇ ಅಂದರೆ ಮನೆಯಂಗಿಯಲ್ಲೇ ಎದುರಾಗುತ್ತಾನೋ ಏನೋ??? ನಾವು ಅವನ ಗುರುತು ಹಿಡಿಯಲಾಗದಿದ್ದರೆ??? ಎನ್ನುವ ಭಯ ಕಾಡಿತು.

ಸಾಂತಾಕ್ಲಾಸ್‌ನ ಮನೆಯೊಳಗೆ ಎಲ್ಲರಿಗೂ ಉಚಿತ ಪ್ರವೇಶ. ಭೂಖಂಡದ ಉತ್ತರದಿಕ್ಕಿನತ್ತ ಪಯಣಿಸಲು ತಗಲುವ ಖರ್ಚುವೆಚ್ಚಗಳನ್ನು ಗಮನಿಸಿಯೇ ಈ ರಿಯಾಯತಿ ಇದೆಯೆಂದು ಅನಿಸಿದರೆ ಅದರಲ್ಲಿ ತಪ್ಪೇನು?. ಒಳಹೊಕ್ಕರೆ ಮಂದವಾದ ಗುಲಾಬಿ ನಿಯಾನ್ ಬೆಳಕಿನ ದಾರಿ. ಯಾವುದೋ ಯಕ್ಷಲೋಕಕ್ಕೆ ಹೋಗುತ್ತಿರುವ ಅನುಭವ.. ಪುಟಾಣಿ ಮಕ್ಕಳಂತೆ ಪುಟುಪುಟು ಹೆಜ್ಜೆಹಾಕುತ್ತಾ ಬೆರಗುಕಣ್ಗಳಿಂದ ಅತ್ತಿತ್ತ ನೋಡುತ್ತಾ ನಡೆಯಲಾರಂಭಿಸಿದೆವು.

ನಾವು ನಡೆಯುತ್ತಿರುವ ದಾರಿಯುದ್ದಕ್ಕೂ ಎರಡೂ ಪಕ್ಕದಲ್ಲಿ ವರ್ಣರಂಗಿತ ಗಿಫ್ಟ್ರ‍್ಯಾಪ್ ಮಾಡಿ ಸಾಲಾಗಿ ಪೇರಿಸಿಟ್ಟ ಉಡುಗೊರೆಗಳ ಪೊಟ್ಟಣಗಳ ರಾಶಿ. ಉಡುಗೊರೆಗಳನ್ನು ಹೊತ್ತ ಕೆಲವು ದೊಡ್ಡದೊಡ್ಡ ಮರದ ಬಾಕ್ಸ್ಗಳಂತೂ ಡಿಸ್‌ಪ್ಯಾಚ್ ಆಗಲಿಕ್ಕೆ ರೆಡಿಯಾಗಿದ್ದವು. ಗೋಡೆಗಳ ಮೇಲೆ ಮಕ್ಕಳು ಸಾಂತಾನಿಗೆ ಬರೆದ ಕೋರಿಕೆಯ ಪತ್ರಗಳನ್ನು ಫ್ರೇಮ್ ಮಾಡಿ ಜೋಡಿಸಿಡಲಾಗಿತ್ತು. ಅಲ್ಲಿದ್ದ ಗಿಫ್ಟ್ಶಾಪ್‌ನಲ್ಲಿ ನಗುಮುಖದ ಸುಂದರಿಯರು( ಎಲ್ವ್÷್ಸಗಳು ಅಂದರೆ ಚೂಪು ಕಿವಿಗಳ ಕುಳ್ಳ ಯಕ್ಷಿಣಿಯರು) ಜನರನ್ನು ಖರೀದಿ ಮಾಡಲು ಆಹ್ವಾನಿಸುತ್ತಿದ್ದರು.

ಸಾಂತಾ ಅಜ್ಜನ ಕೋಣೆಯ ಹೊರಗೆ ಗೋಡೆಯ ಮೇಲೊಂದು ಬೋರ್ಡು- ‘ಸಾಂತಾನೊಂದಿಗಿನ ನಿಮ್ಮ ಕ್ಷಣಗಳನ್ನು ಫೋಟೊದಲ್ಲಿ ಕಾಯ್ದಿರಿಸಲಾಗುತ್ತದೆʼ ಎನ್ನುವ ಸೂಚನೆ. ಓದಿ ಖುಷಿಯಾಯಿತು. ಒಳಹೊಗುವ ಪುಟ್ಟ ದ್ವಾರದೊಳಗೆ ಒಂದೊಂದೆ ಪರಿವಾರದವರ ಸದಸ್ಯರನ್ನು ಒಳ ಬಿಡಲಾಗುತ್ತಿತ್ತು. ಒಳಹೊಕ್ಕರೆ ಎದುರಿನಲ್ಲೇ ಎತ್ತರದ ಕುರ್ಚಿಯಲ್ಲಿ ವಿರಾಜಮಾನನಾಗಿದ್ದ ನಗುಮುಖದ ಸಾಂತಾ ಅಜ್ಜ ನಮ್ಮನ್ನು ಪ್ರೀತಿಯಿಂದ ಬರಮಾಡಿದ. ಕೈಹಿಡಿದು ಪಕ್ಕದಲ್ಲಿ ಕುಳ್ಳಿರಿಸಿ ಎಲ್ಲಿಂದ ಬಂದವರು ಎಂದು ವಿಚಾರಿಸಿದ. ‘ಓಹೋ ಇಂಡಿಯಾದಿಂದ ಬಂದವರೇ?? ಅಲ್ಲಿಯ ಮಕ್ಕಳೆಲ್ಲಾ ಚೆನ್ನಾಗಿರುವರೇ??’ಎನ್ನುವ ಕೂತೂಹಲವನ್ನು ವ್ಯಕ್ತ ಪಡಿಸಿದ. ಅವನೊಂದಿಗಿದ್ದ ನಮ್ಮನ್ನು ಬೇರೆ ಬೇರೆ ಕೋನಗಳಿಂದ ಕ್ಯಾಮರಾದಲ್ಲಿ ಸೆರೆ ಹಿಡಿದಿಡಲಾಯಿತು.

ನಾವು ಯಾವುದೋ ಕಿನ್ನರಲೋಕದಲ್ಲಿದ್ದೇವೆ ಎನ್ನುವ ಅನುಭವ. ಒಂದೆರಡು ಕ್ಷಣ ಮಾತ್ರ… ನಮ್ಮನ್ನು ನಯವಾಗಿ ಹೊರಗೆ ಕಳುಹಿಸಿ ಕೊಡಲಾಯಿತು. ಕೋಣೆಯಿಂದ ಹೊರಬಂದವರಿಗೆ ಸಾಂತಾಜ್ಜನೊಂದಿಗಿನ ನಮ್ಮ ಭಾವಚಿತ್ರವನ್ನು ಪಡೆಯಲು ದುಬಾರಿ ಬೆಲೆ ತೆರಬೇಕಾಗುವುದೆಂದು ತಿಳಿದು ತುಸು ಕಸಿವಿಸಿ ಆಯಿತು. ಭಾವಚಿತ್ರವನ್ನು ಪಡೆದು ಮೊಮ್ಮಗನಿಗೆ ತೋರಿಸಿ ಮೆಚ್ಚಿಸಬೇಕೆನ್ನುವುದು ನನ್ನ ಗಂಡನ ವಾದವಾದರೆ, ಅಮೇರಿಕಾದಲ್ಲಿ ರಸ್ತೆರಸ್ತೆಯಲ್ಲಿ ಕಾಣಸಿಗುವ ಸಾಂತಾನಿಗೂ ನಾವು ಅವನ ವಾಸಸ್ಥಾನಕ್ಕೆ ಹೋಗಿ ಭೇಟಿ ಮಾಡಿದ ಸಾಂತಾನಿಗೂ ಇರುವ ವ್ಯತ್ಯಾಸವನ್ನು ಆ ಪುಟ್ಟ ಮಗುವಿಗೆ ಹೇಗೆ ಅರ್ಥೈಸುವುದು ಎನ್ನುವುದು ನನ್ನ ವಾದ.

ಕೊನೆಗೂ ದುಂದುವೆಚ್ಚವನ್ನು ಮಾಡಲಿಚ್ಚಿಸದ ನಾವು ನಮ್ಮ ಸವಿನೆನಪುಗಳೊಂದಿಗೆ ಅಲ್ಲಿಂದ ಹೊರಬಿದ್ದೆವು. ಹೊರಾಂಗಣದಲ್ಲಿ ಬಲಪಕ್ಕಕ್ಕೆ ಸಾಂತಾಕ್ಲಾಸ್‌ನ ವೈಯಕ್ತಿಕ ಪೋಸ್ಟ್ ಆಫೀಸ್. ನೂರಾರು ರುಪಾಯಿಗಳಷ್ಟು ಬೆಲೆಬಾಳುವ ಆಕರ್ಷಕ ಗ್ರೀಟಿಂಗ್ ಕಾರ್ಡುಗಳನ್ನು ಖರೀದಿಸಿ ಅಲ್ಲಿಂದ ನಮ್ಮವರಿಗೆ ಪೋಸ್ಟ್ ಮಾಡುವ ಸೌಲಭ್ಯವೂ ಇತ್ತು.

ಹತ್ತಿರದಲ್ಲಿಯೇ ಇದ್ದ ರಾಯ್‌ಟೋಲಾ ಹಸ್ಕೀ ಆಂಡ್ ರೇನ್‌ಡಿಯರ್ ಪಾರ್ಕ್ನಲ್ಲಿ ನಮಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಒಂದುಕಾಲಕ್ಕೆ ಹಿಮಚ್ಛಾದಿತ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಹಸ್ಕಿಯನ್ನು ಮುಂಬಯಿಯಲ್ಲಿ ನಮ್ಮ ಸೊಸೈಟಿಯಲ್ಲಿಯೇ ದಿನಾ ಪುಕ್ಸಟ್ಟೆ ಕಾಣುತ್ತಿದ್ದ ನಮಗೆ ಅಲ್ಲಿ ಹಣತೆತ್ತು ಅದರ ಸ್ಲೇನಲ್ಲಿ ತಿರುಗಬೇಕೆನಿಸಲಿಲ್ಲ. ಆದರೆ ಈವರೆಗೆ ಎಲ್ಲೂ ಕಾಣಸಿಗದ ರೇನ್ ಡಿಯರ್ ನೋಡುವ ಸುವರ್ಣಾವಕಾಶ ಮಾತ್ರ ದೊರಕಿತು.

ನೈಸರ್ಗಿಕವಾಗಿ ಹಿಮದಡಿಯಲ್ಲಿರುವ ಚಿಗುರುಗಳನ್ನು ತಿಂದು ಜೀವಿಸುವ ಪ್ರಾಣಿ ರೇನ್‌ಡಿಯರ್. ಆದರೆ ಸಧ್ಯ ಹಿಮವಿಲ್ಲದೆ ಅವುಗಳಿಗೆ ಬೇಕಾದ ಆಹಾರವಿಲ್ಲದೆ ಬಸವಳಿದ ಜೀವಿಗಳು ಯಾತ್ರಿಕರು ನೀಡುವ ಮರದ ಎಲೆಚಿಗುರುಗಳಿಗಾಗಿ ಓಡೋಡಿ ಬರುವುದನ್ನೇ ನೋಡುತ್ತಾ ಎಲ್ಲರೂ ಹರ್ಷಿತರಾಗುತ್ತಿದ್ದರೆ.. ಅಯ್ಯೋ ಪಾಪ ಅನಿಸಿತು. ಊಟದ ಟೆಬಲಿನಲ್ಲಿ ಒಂದು ಬೋಗುಣಿಯಲ್ಲಿ ರೇನ್‌ಡಿಯರ್‌ನ್ ಮಾಂಸದ ಪದಾರ್ಥವೂ ಇತ್ತು. ಕೆಲವರಂತೂ ಆ ಅಪರೂಪದ ಮಾಂಸದ ರುಚಿ ನೋಡಿ ಚಪ್ಪರಿಸುತ್ತಿದ್ದರು.

ಇನ್ನು ನೋಡಲೇ ಬೇಕಾಗಿರುವುದು ಹಿಮಕರಡಿಗಳು. ಭೂಖಂಡದ ಉತ್ತರದ ತುದಿಯ ಹತ್ತಿರ ಬಂದು ಹಿಮಕರಡಿಯನ್ನು ನೋಡಿದೇ ಮರಳುವುದುಂಟೇ?? ಛೇ… ಅದಕ್ಕಾಗಿ ಜಗತ್ತಿನ ಅತೀ ಉತ್ತರದದಲ್ಲಿರುವ ರನುಅ ವನ್ಯಮೃಗಾಲಯಕ್ಕೆ (Ranua wildlife park) ತೆರಳಿದೆವು. ಆಕಾಶವೇ ಕಾಣದಂತೆ ಎತ್ತರಕ್ಕೆ ಬೆಳೆದಿರುವ ಪೈನ್ ಮರಗಳ ದಟ್ಟ ಕಾಡಿನಂತಿರುವ ಮೃಗಾಲಯದಲ್ಲಿ ನಡೆದಾಡುವುದೇ ಒಂದು ವಿಶಿಷ್ಟ ಅನುಭವ. ಅಪರೂಪದ ಅತ್ಯಂತ ವೈವಿಧ್ಯಮಯ ಪ್ರಾಣಿಗಳನ್ನು ಮುಖ್ಯವಾಗಿ ಹಿಮನರಿಗಳನ್ನು ಕಂಡು ಸಂತಸ ಪಟ್ಟರೂ ನಮ್ಮ ಕಣ್ಣುಗಳಂತೂ ಹಿಮಕರಡಿಯನ್ನೇ ಅರಸುತ್ತಿದ್ದವು. ಹಿಮಕರಡಿಗಳಿರುವತ್ತ ಸಾಗುವ ದಾರಿಯಲ್ಲಿರಿಸಲಾಗಿದ್ದ ಎರಡಾಳೆತ್ತರದ ಹಿಮಕರಡಿಗಳ ಕಟ್‌ಔಟ್‌ನೊಂದಿಗೆ ಫೋಟೋ ತೆಗೆದುಕೊಂಡಿದ್ದೂ ಆಯಿತು. ಆದರೆ ಹಿಮಕರಡಿಗಳ ಪತ್ತೆಯಿಲ್ಲ.

ಓ. . ಅಲ್ಲಿ ಒಂದು ಕಡೆ ಕಲ್ಲುಬಂಡೆಗಳ ಎಡೆಯಲ್ಲಿವೆ ಎಂದು ಯಾರೋ ಹೇಳಿದರೆಂದು ಅತ್ತಕಡೆ ಓಡಿದರೆ ಮಲಗಿರುವ ಬಿಳಿಬಣ್ಣದ ಕರಡಿಯ ಹಿಂಭಾಗದ ತುಪ್ಪಳದ ದರ್ಶನವಷ್ಟೆ ಆಯಿತು.. ಅಲ್ಲ ಸ್ವಾಮಿ… ನಾವು ಕಷ್ಟಪಟ್ಟು ಆಸೆಯಿಂದ ಅಲ್ಲಿತನಕ ಹೋದೆವೆನೋ ಸರಿ. . ನಿಮ್ಮ ಕುತೂಹಲವೇನು ಕಡಿಮೆಯೇ???? ಅಲ್ಲಿ ಹಿಮವೇ ಇಲ್ಲದ ಮೇಲೆ ಹಿಮಕರಡಿಗಳೆಲ್ಲಿಂದ ಬರಬೇಕು ಸಾರ್? ಒಟ್ಟಿನಲ್ಲಿ ಉತ್ತರ ಧ್ರುವದ ಸಮೀಪದಲ್ಲಿರುವ ಸಾಂತಾ ಅಜ್ಜನ ಊರಿನಲ್ಲಿ ಹಿಮವನ್ನು ಕಾಣಲೇ ಇಲ್ಲ. ಹಿಮವೇ ಇಲ್ಲವೆಂದರೆ ಹಿಮಕರಡಿಗಳು ಕಾಣಸಿಗುತ್ತವೆಯೇ? ಅಲ್ಲಿಯ ವಸ್ತು ಸಂಗ್ರಹಾಲಯದಲ್ಲಿ ಕಾಯ್ದಿರಿಸಲಾಗಿರುವ ಹಿಮಕರಡಿಗಳ ಬೊಂಬೆಗಳನ್ನು ನೋಡಿ ಸಮಾಧಾನ ಪಟ್ಟುಕೊಂಡದ್ದಾಯ್ತು.

ಫಿನ್‌ಲ್ಯಾಂಡ್‌ನಲ್ಲಿ ಕಾಣಸಿಗುವ ನಾರ್ದರ್ನ್ ಲೈಟ್ಸ್ನ ಕುರಿತಾಗಿ ಅಲ್ಲಿಯೇ ಪ್ರದರ್ಶಿಸಲಾಗುವ ೧೦ ನಿಮಿಷಗಳ ಡಾಕ್ಯುಮೆಂಟರಿಯನ್ನು ನೋಡಿ ರೋಮಾಂಚನಗೊಂಡಾಯ್ತು. ನಾವು ಹೋದ ಸಮಯದಲ್ಲಿ ಅಲ್ಲಿ ಹಿಮವಿಲ್ಲದ ಕಾರಣ ನಾರ್ದರ್ನ್ ಲೈಟ್‌ಗಳು ಅಥವಾ Auroras ಕಾಣಿಸಿಕೊಳ್ಳುವುದಾದರೂ ಹೇಗೆ? ರಾತ್ರಿಯಿಡೀ ಕ್ಯಾಂಪಿನಲ್ಲಿ ಜಾಗರಣೆ ಮಾಡಿ ಅನುಭವಿಸಬೇಕಾದ ಅಲೌಕಿಕ ಬೆಳಕಿನ ದೃಶ್ಯಗಳು ಕಾಣಸಿಗುವ ಸಾಧ್ಯತೆ ಇಲ್ಲವಾದ ಕಾರಣ ಆ ಆಸೆಯನ್ನೂ ಕೈಬಿಡಬೇಕಾಯಿತು.

ಭಾರತದ ನಿಸರ್ಗಧಾಮಗಳಾದ ಸಿಮ್ಲಾ, ಮಸ್ಸೂರಿ, ಗುಲ್ಮಾರ್ಗಗಳಲ್ಲಿ ಹಿಮವನ್ನು ಕಂಡಿದ್ದ ನಮಗೆ ಉತ್ತರಧ್ರುವದ ಪಕ್ಕದ ನಾಡಿನಲ್ಲಿ ಹಿಮದರ್ಶನವಾಗದೆ ನಿರಾಶೆಯಾಯಿತೇ??? ನಿಜ ಹೇಳಬೇಕೆಂದರೆ ಮನುಷ್ಯ ಮಾಡಿದ ಪರಿಸರ ನಾಶದ ಪರಿಣಾಮವನ್ನು ಕಣ್ಣಾರೆ ಕಂಡು ಒಂದು ರೀತಿಯ ಭಯ-ವಿಷಣ್ಣತೆ ದಟ್ಟವಾಗಿ ಕಾಡಲಾರಂಭಿಸಿತು. ಹವಮಾನದ ವೈಪರೀತ್ಯಗಳನ್ನು ನಾವೆಲ್ಲರೂ ಅನುಭವಿಸುತ್ತಿರುವ ಕಾರಣ ಹೆಜ್ಜೆಹೆಜ್ಜೆಗೂ ದೃಢವಾಗುತ್ತಾ ನಮ್ಮನ್ನು ವಿಚಲಿತಗೊಳಿಸುತ್ತಿತ್ತು.

ಈ ವರ್ಷ ಫಿನ್‌ಲ್ಯಾಂಡಿನಲ್ಲಿ ೧ ರಿಂದ ೬ ಜುಲ್ಯ್ ೨೦೨೧ ರ ತನಕ ಸತತವಾಗಿ ೧೨೨ ಗಂಟೆಗಳ ಕಾಲ ಸೂರ್ಯ ಬೆಳಗಿ ಹೊಸ ದಾಖಲೆಯನ್ನೇ ನಿರ್ಮಿಸಿದ ಮಾತ್ರವಲ್ಲ ಅನ್‌ಟಾರ್ಟಿಕಾದಲ್ಲಿ ೧೯೧೧ ರಲ್ಲಿ ೧೧೨ ಗಂಟೆಗಳ ತನ್ನ ದಾಖಲೆಯನ್ನು ಮುರಿದ. ಹವಾಮಾನ ವೈಪರೀತ್ಯಕ್ಕೆ ಬೇರೆ ಉದಾಹರಣೆಗಳು ಬೇಕೆ? ಮನುಷ್ಯ ಎಚ್ಚೆತ್ತು ಕೊಳ್ಳುತ್ತಾನೆಯೇ ಎನ್ನುವುದನ್ನು ಕಾದು ನೋಡುವಷ್ಟು ಸಮಯವಕಾಶವನ್ನು ನಿಸರ್ಗ ನೀಡಲಿದೆಯೇ?? ಬಡಮಕ್ಕಳ ಕಣ್ಣೀರನ್ನು ವರ್ಷಕ್ಕೊಮ್ಮೆಯಾದರೂ ಒರೆಸುವ ಸಾಂತಾಕ್ಲಾಸ್ ತನ್ನೂರು ಬಿಟ್ಟು ಬೇರೆಲ್ಲಿಗಾದರೂ ಹೋದರೆ ???

‍ಲೇಖಕರು Admin

December 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಡಾII ಮಿರ್ಜಾ ಬಷೀರ್. ತುಮಕೂರು

    ನಮ್ಮ ಮಮತಾ ಮೇಡಂ ಎಂದರೆ ಹೀಗೆ.
    ಸಂತೋಷ ಹಂಚುತ್ತಲೇ
    ನಮ್ಮ ಖುಷಿಯನ್ನು ಹಿಗ್ಗಿಸುತ್ತಲೇ ಅದರ ಹಿಂದೆಯೇ ಇರುವ ದುಃಖವನ್ನು ಅಸಂತೋಷವನ್ನು ತೋರಿಸಿ ಅದಕ್ಕೊಂದು ನಿವಾರಣೋಪಾಯವನ್ನು ಸೂಚಿಸುತ್ತಾರೆ. ವಂದನೆಗಳು ಮೇಡ೦.
    ಡಾII ಮಿರ್ಜಾ ಬಷೀರ್ ತುಮಕೂರು

    ಪ್ರತಿಕ್ರಿಯೆ
  2. ಕಲಾ ಭಾಗ್ವತ್

    ಚಂದದ ಕಥನ ಮಮತಾ ರಾವ್ ಮೇಡಂ. ಬಹಳ ದಿನಗಳ ಬಳಿಕ ತಮ್ಮನ್ನು ಓದುವ ಭಾಗ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: