ಹೃದಯದ ಬಗ್ಗೆ ತಿಳಿಯಲು’ಹೃದಯ– ಅರಿವು ಮತ್ತು ಆರೋಗ್ಯ’

ಖ್ಯಾತ ಹೃದ್ರೋಗ ತಜ್ಞ ಡಾ ಸುರೇಶ ಸಗರದ ಅವರ ಕೃತಿ- ‘ಹೃದಯ – ಅರಿವು ಮತ್ತು ಆರೋಗ್ಯ’

ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಖ್ಯಾತ ವೈದ್ಯ ಡಾ ಎನ್ ಗೋಪಾಲಕೃಷ್ಣ ಅವರು ಬರೆದ ಮುನ್ನುಡಿ ಇಲ್ಲಿದೆ-

ಹೃದಯದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಉಪಯುಕ್ತ ಪುಸ್ತಕ‌…

ಡಾ ಎನ್ ಗೋಪಾಲಕೃಷ್ಣ

ರಾಯಚೂರಿನ ಹಿರಿಯ ಹೃದಯರೋಗ ತಜ್ಞ ಹಾಗೂ ಸಾಹಿತಿ ಡಾ ಸುರೇಶ ಸಗರದ ಅವರ ‘ಹೃದಯ – ಅರಿವು ಮತ್ತು ಆರೋಗ್ಯ’ ಕೃತಿಯನ್ನು ಓದುವುದರಿಂದ ನಮ್ಮ ಹೃದಯದ ವಿವಿಧ ಭಾಗಗಳ ಬಗ್ಗೆ ಸಚಿತ್ರ ವಿವರಣೆ ದೊರೆಯುವುದರ ಜೊತೆಗೆ ಹೃದಯ ಕೆಲಸ ಮಾಡುವ ಬಗೆ, ಹೃದಯಕ್ಕೆ ಉಂಟಾಗುವ ಕಾಯಿಲೆಗಳ ಬಗ್ಗೆ ಹಾಗೂ ಲಭ್ಯವಿರುವ ಚಿಕಿತ್ಸೆಗಳ ಸರಳ ವಿವರಣೆ ದೊರೆಯುತ್ತದೆ.

ನಾವು ಹೃದಯದ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸುವುದು ಸಾಮಾನ್ಯವಾಗಿ ಅಧಿಕ ಇಲ್ಲವೇ ಕಡಿಮೆ ರಕ್ತ ಒತ್ತಡ ಅಥವಾ ಬೇರಾವುದೇ ಹೃದಯದ ಬೇನೆ ಕಾಣಿಸಿಕೊಂಡಾಗಲೇ. ಹೃದಯದ ಕಾಯಿಲೆಯಾದರೂ ವಿಶೇಷವಾಗಿ ಯುವಜನರಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ, ಇದೇ ಅಕ್ಟೋಬರ್ ೨೦೨೧ರಲ್ಲಿ ಕನ್ನಡದ ಸುಪ್ರಸಿದ್ಧ ನಟ ಪುನೀತ್ ರಾಜ್ ಕುಮಾರ್ ಹೃದಯ ಸ್ತಂಭನದಿಂದ ಹಠಾತ್ ನಿಧನ ರಾಜ್ಯದಲ್ಲಿ ಯುವಜನತೆಯ ಎದೆ ನಡುಗಿಸಿರುವುದನ್ನು ಎಲ್ಲರೂ ಕಾಣುತ್ತಿದ್ದೇವೆ.

ನಮ್ಮ ದೇಹದಲ್ಲಿ ಹೃದಯದ ಸ್ನಾಯುಗಳ ನಿಯಂತ್ರಣದಲ್ಲಿ ವಿದ್ಯುತ್ ತಂತಿ ವ್ಯವಸ್ಥೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ದೊರೆಯುತ್ತದೆ. ಬಲ ಹೃತ್ಕರ್ಣದಲ್ಲಿ ವಿದ್ಯುತ್ ಜನಕ ಕೆಂದ್ರ ಇದ್ದು, ತಂತಿ ವ್ಯವಸ್ಥೆಯ ಮೂಲಕ ವಿದ್ಯುತ್ ತರಂಗಗಳು ಹೃದಯದ ಎಲ್ಲ ಸ್ನಾಯುಗಳಿಗೆ ಸಂದೇಶವನ್ನು ತಲುಪಿಸುತ್ತವೆ ಎಂಬುದು ಪ್ರಕೃತಿಯ ವರದಾನವೇ ಸರಿ.

ಹೃದಯದ ತೊಂದರೆಗಳಿಗಂತೂ ಈಗ ಅತ್ಯಾಧುನಿಕ ಚಿಕಿತ್ಸೆ ದೊರೆಯುತ್ತಿದೆ. ೧೦೫೦ ಹಾಸಿಗೆಗಳ ಅತಿ ದೊಡ್ಡ ಆಸ್ಪತ್ರೆ ಜಯದೇವ ಹೃದ್ರೋಗ ಸಂಸ್ಥೆ ಬೆಂಗಳೂರಿನಲ್ಲಿದೆ. ಅಲ್ಲದೆ ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿಯೂ ಉತ್ತಮ ಮಟ್ಟದ ಚಿಕಿತ್ಸೆ ದೊರೆಯುತ್ತದೆ. ‘ಕೇವಲ ಒಂದೇ ಪರೀಕ್ಷೆಯಿಂದ ಹೃದಯದ ಎಲ್ಲಾ ಸಮಸ್ಯೆಗಳನ್ನು ತಿಳಿಯಲು ಸಾಧ್ಯವಿಲ್ಲ.

ರೋಗವನ್ನು ಪತ್ತೆಹಚ್ಚಲು ಮತ್ತು ಅದರ ಪ್ರಭಾವನ್ನು ಅರಿಯಲು ವಿವಿಧ ಬಗೆಯ ಪರೀಕ್ಷೆಗಳನ್ನು ಮಾಡುವ ಅವಶ್ಯಕತೆ ಇರುತ್ತದೆ. ಕೆಲವು ಪರೀಕ್ಷೆಗಳನ್ನು ಹಲವು ಸಲ ಮಾಡಬೇಕಾಗಬಹುದು. ಎಲ್ಲಾ ಪರೀಕ್ಷೆಗಳನ್ನು ಏಕ ಕಾಲದಲ್ಲಿ ಮಾಡುವ ಅವಶ್ಯಕತೆಯೂ ಇರುವುದಿಲ್ಲ. ಎಲ್ಲಾ ಪರೀಕ್ಷೆಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾಡಿಸಬೇಕು’ ‘ಶೇ ೧೦ ರಷ್ಟು ಹೃದಯಾಘಾತ ರೋಗಿಗಳಲ್ಲಿ ಈಸಿಜಿಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬರುವುದಿಲ್ಲವೆಂದು ತಿಳಿದುಬಂದಿದೆ. ಆದುದರಿಂದ ಅಂತಹ ಕೆಲವು ಸಂದರ್ಭಗಳಲ್ಲಿ ಸರಣಿ ಈಸಿಜಿಗಳನ್ನು ಮಾಡಿ ಪರೀಕ್ಷಿಸಲಾಗುತ್ತದೆ ಮತ್ತು ಬೇರೆ ರೀತಿಯ ಪರೀಕ್ಷೆಗಳ ಮೂಲಕ ಹೃದಯಾಘಾತವನ್ನು ಪತ್ತೆ ಹಚ್ಚಲಾಗುತ್ತದೆ’ ಎನ್ನುತ್ತಾರೆ ಲೇಖಕರು.

ಈಕೋ: ಹೃದಯದ ಅಲ್ಟ್ರಾಸೌಂಡ್ ಸ್ಕ್ಯಾನಿಂಗನ್ನು ಈಕೋ ಕಾರ್ಡಿಯೋಗ್ರಾಫಿ ಎನ್ನುತ್ತಾರೆ. ಈ ಪರೀಕ್ಷೆಯ ಮೂಲಕ ಹೃದಯದ ಪಂಪಿಂಗ್ ಶಕ್ತಿಯನ್ನು ಅರಿಯಬಹುದು. ಹುಟ್ಟಿನಿಂದ ಬರುವ ಹೃದಯ ರೋಗವನ್ನು ಪತ್ತೆ ಹಚ್ಚಲು ಈಕೋ ಪರೀಕ್ಷೆ ಅತಿ ಅವಶ್ಯಕ.
ʼಟ್ರೆಡ್‌ಮಿಲ್ ಟೆಸ್ಟಿಂಗ್ (ಟಿ ಎಂ ಟಿ): ಎನ್ನುವುದು ಹೃದಯದ ರಕ್ತನಾಳಗಳಲ್ಲಿ ಅಡೆತಡೆ ಏನಾದರೂ ಇದೆಯೆ ಎಂಬುದನ್ನು ಕಂಡುಹಿಡಿಯಲು ಮಾಡುವ ಪರೀಕ್ಷೆ. ಮಧ್ಯ ವಯಸ್ಸಿನ ವ್ಯಕ್ತಿಗಳಲ್ಲಿ ಎದೆ ನೋವು ಹೃದಯ ರಕ್ತನಾಳಗಳಲ್ಲಿನ ಅಡೆತಡೆಯಿಂದಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಚಲಿಸುತ್ತಿರುವ ಪಟ್ಟಿಯ ಮೇಲೆ ನಡೆಸಲಾಗುವುದು. ಆಮ್ಲಜನಕದ ಕೊರತೆಯಿಂದ ಈಸಿಜಿಯಲ್ಲಿ ಬದಲಾವಣೆಗಳು ಉಂಟಾಗುವವು. ಇದನ್ನು ಪಾಜಿಟಿವ್ ಪರೀಕ್ಷೆ ಎಂದು ಪರಿಗಣಿಸಿ ಹೆಚ್ಚಿನ ಪರೀಕ್ಷೆಗಳಿಗಾಗಿ ಶಿಫಾರಸು ಮಾಡಲಾಗುವುದು. ಹುಟ್ಟಿನಿಂದ ಬರುವ ಹೃದಯ ರೋಗವನ್ನು ಪತ್ತೆ ಹಚ್ಚಲು ಈಕೋ ಪರೀಕ್ಷೆ ಅತಿ ಅವಶ್ಯಕʼ.

ಕೆಲವು ಸಂದರ್ಭಗಳಲ್ಲಿ ರಕ್ತ ನಾಳಗಳಲ್ಲಿ ಅಡೆತಡೆ ಇಲ್ಲದಿದ್ದರೂ ಟಿ ಎಂ ಟಿ ಪಾಜಿಟಿವ್ ಬರಬಹುದು ಮತ್ತು ಅಡೆತಡೆ ಇದ್ದಾಗಲೂ ಟಿ ಎಂ ಟಿ ನೆಗೆಟಿವ್ ಬರಬಹುದು. ಟಿ ಎಂ ಟಿ ಸ್ಕ್ರೀನಿಂಗ್ ಪರೀಕ್ಷೆಯಾಗಿದ್ದು ರಕ್ತ ನಾಳಗಳಲ್ಲಿನ ಅಡೆತಡೆಯ ಸತ್ಯಾಸತ್ಯತೆ ಗುರುತಿಸಲು ಆಂಜಿಯೋಗ್ರಾಫಿ ಪರೀಕ್ಷೆ ಅವಶ್ಯಕ.

ಟಿ ಎಂ ಟಿ ಮಾಡುವಾಗ ಅನಿರೀಕ್ಷಿತ ಗಂಡಾಂತರಗಳಾಗುವ ಸಂಭವನೀಯತೆ ಇರುತ್ತದೆ. ವೈದ್ಯರ ಸಲಹೆಯನ್ನು ಪಡೆದ ನಂತರವೆ ಈ ಪರೀಕ್ಷೆಯನ್ನು ಪರಿಣಿತ ತಂತ್ರಜ್ಞರ ಸಮ್ಮುಖದಲ್ಲಿ ಮಾಡಿಸಿಕೊಳ್ಳಬೇಕು. ಆಂಜಿಯೋಗ್ರಾಫಿ: ರಕ್ತ ನಾಳಗಳ ಕ್ಷ ಕಿರಣ ಚಲನ ಚಿತ್ರವನ್ನು ಆಂಜಿಯೋಗ್ರಾಫಿ ಎನ್ನುತ್ತೇವೆ. ರಕ್ತ ನಾಳದ ಚಿತ್ರವನ್ನು ನೇರವಾಗಿ ತೆಗೆಯಲು ಸಾಧ್ಯವಿಲ್ಲ. ರಕ್ತನಾಳದಲ್ಲಿ ಅಯೋಡಿನಯುಕ್ತ ರಾಸಾಯನಿಕ ಪದಾರ್ಥವನ್ನು ಸೇರ್ಪಡಿಸಿ ಕ್ಷ ಕಿರಣ ಚಿತ್ರವನ್ನು ತೆಗೆಯಬಹುದು. ಅದರ ಚಲನ ಚಿತ್ರವೇ ಆಂಜಿಯೋಗ್ರಾಫಿ. ದೇಹದ ಯಾವುದೇ ರಕ್ತ ನಾಳದ ಚಿತ್ರವನ್ನು ತೆಗೆಯಲು ಸಾಧ್ಯವಿದೆ ಎಂಬುದಾಗಿ ಡಾ. ಸಗರದ ತಿಳಿಸುತ್ತಾರೆ.

ಇವೆಲ್ಲದರ ಜೊತೆಗೆ ಧೂಮಪಾನ, ಮದ್ಯಪಾನಗಳಿಂದ ಹೃದಯಕ್ಕೆ ಉಂಟಾಗುವ ಅನಾರೋಗ್ಯದ ಬಗ್ಗೆ ಚರ್ಚಿಸುತ್ತಾರೆ. ನಿಯಮಿತ ವ್ಯಾಯಾಮದ ಅಗತ್ಯತೆಗಳನ್ನೆಲ್ಲ ತಿಳಿಸುತ್ತಾರೆ.

೧೨೨ ಪುಟಗಳಲ್ಲಿ ಹೃದಯ ಅಂಗ ರಚನೆ ಮತ್ತು ಕಾರ್ಯ, ಹೃದಯ ರೋಗ ಸಂಬಧಿ ಪರೀಕ್ಷೆಗಳು, ಹುಟ್ಟಿನಿಂದಲೇ ಇರುವ ಹೃದಯ ರೋಗಗಳು, ರಕ್ತದೊತ್ತಡ, ಬೊಜ್ಜುತನ, ಕೊಲೆಸ್ಟ್ರಾಲ ಸಮಸ್ಯೆ, ತಂಬಾಕು ಸೇವನೆ ಮತ್ತು ಅನಾರೋಗ್ಯ, ಎದೆ ನೋವು ಕಾರಣಗಳು ಮತ್ತು ಪರಿಹಾರ, ಹೃದಯಾಘಾತ, ಹೃದಯಾಘಾತದ ಚಿಕಿತ್ಸೆ, ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟಂಗ್, ಬೈ ಪಾಸ್ ಶಸ್ತ್ರ ಚಿಕಿತ್ಸೆ, ಯುವವಯಸ್ಸಿನಲ್ಲಿ ಹೃಯಾಘಾತ, ಕವಾಟಗಳ ಸಮಸ್ಯೆ, ಬಲಹೀನ ಹೃದಯ, ಹೃದಯ ಕಸಿ (ಟ್ರಾನ್ಸ್ಪ್ಲಾಂಟೇಷನ್), ಹೃದಯ ಬಡಿತ ಅಥವಾ ಗತಿಯಲ್ಲಿ ವ್ಯತ್ಯಾಸ, ಹೃದಯ ಸ್ತಂಭನ ಮತ್ತು ಏಕಾಏಕಿ ಸಾವು, ಹೃದಯದ ಹೊರ ಪದರಿನ ಸಮಸ್ಯೆಗಳು, ಆಹಾರ, ಜೀವನ ಶೈಲಿ ಮತ್ತು ಹೃದಯ ಆರೋಗ್ಯ, ಹೃದಯ ಆರೋಗ್ಯ – ಮುಂಜಾಗುರೂಕತೆ ಕ್ರಮಗಳು, ಕೋವಿಡ್ ಮತ್ತು ಹೃದಯ, ಮಹಿಳೆ ಮತ್ತು ಹೃದಯ ಆರೋಗ್ಯ, ಹೃದಯರೋಗಿಗಳಲ್ಲಿ ಗರ್ಭಧಾರಣೆ ಮತ್ತು ಪ್ರಸವ, ಇತರೆ ಕಾಯಿಲೆಗಳಲ್ಲಿ ಹೃದಯ, ವಿಶ್ವ ಹೃದಯ ದಿನಾಚರಣೆ – ಹೀಗೆ ಇಲ್ಲಿ ಕೊಡಲಾಗಿರುವ ಹೃದಯದ ಬಗೆಗಿನ ಮಾಹಿತಿಯಿಂದ ಆಬಾಲವೃದ್ಧರಾದಿಯಾಗಿ ಓದಿ ಅರಿತುಕೊಳ್ಳಬಹುದಾದ ಅಂಶಗಳನ್ನೊಳಗೊಂಡ ಕೃತಿಯಾಗಿದೆ.

‍ಲೇಖಕರು Admin

December 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: