ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’

ವಿದ್ಯಾ ರಾಮಕೃಷ್ಣ

**

ಲೇಖಕರು: ಕೃಷ್ಣಮೂರ್ತಿ ಹನೂರು.
ಪ್ರಕಾಶಕರು: ಅಂಕಿತ ಪುಸ್ತಕ
ಬೆಲೆ: ರೂ ೨೩೦.

**

ಕೃಷ್ಣಮೂರ್ತಿ ಹನೂರು ಅವರು ಒಬ್ಬ ಉತ್ತಮ ಕಾದಂಬರಿಕಾರರಷ್ಟೇ ಅಲ್ಲದೆ ಸಾಂಸ್ಕೃತಿಕ ಅಧ್ಯಯನದಲ್ಲಿ ಆಸಕ್ತರೂ, ನುರಿತ ಜಾನಪದ ತಜ್ಞರೂ ಆಗಿದ್ದಾರೆ. ಬುಡಕಟ್ಟು ಜನಾಂಗದ ಮೇಲೆ ಅಧ್ಯಯನವನ್ನು ನಡೆಸಿ ಸಂಶೋಧನ ಗ್ರಂಥವನ್ನೂ ರಚಿಸಿದ್ದಾರೆ. ‘ಕನ್ನಮರಿ’ ಎಂಬುದು ವಚನಕಾರ ಕನ್ನದ ಮಾರಿತಂದೆ ಅಥವಾ ಕನ್ನದ ಮಾರಯ್ಯನ ಕುಲಕ್ಕೆ ಸೇರಿದ ‘ಕನ್ನಮಾರಿ’ ಜನಾಂಗದ ಹುಡುಗನೊಬ್ಬನ ಜೀವನ ಕಥನವನ್ನು ಚಿತ್ರಿಸುವ ಕಾದಂಬರಿ. ಇಲ್ಲಿ ಹನೂರರು ವಾಸ್ತವವಾದಿ ನೆಲೆಯಲ್ಲಿ ಮುಗ್ಧ ಬುಡಕಟ್ಟು ಜನಾಂಗದ ಹುಡುಗನ ಕಣ್ಣಿನಿಂದ ಪ್ರಸ್ತುತ ಸಮಾಜದ ವ್ಯವಸ್ಥೆಗಳನ್ನು, ಅದರ ಓರೆಕೋರೆಗಳನ್ನು, ಹುಳುಕುಗಳನ್ನು ದರ್ಶನ ಮಾಡಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ರಾಜಕೀಯ, ಅಕ್ರಮ ಗಣಿಗಾರಿಕೆ, ಚುನಾವಣಾ ಸಮಯದ ಅವ್ಯವಹಾರಗಳು, ಧಾರ್ಮಿಕ ಮಠಗಳ ಮತ್ತು ರಾಜಕೀಯ ಪುಢಾರಿಗಳ ಆಷಾಢಭೂತಿತನ ಇಂತಹ ಜ್ವಲಂತ ವಿದ್ಯಮಾನಗಳ ಒಳಹೊರಗನ್ನು ನೈಜವೆನ್ನಿಸುವಂತೆ ಬಿಚ್ಚಿಟ್ಟಿದ್ದಾರೆ.

ಪ್ರಕೃತಿಗೆ ಸನಿಹವಾಗಿ ಅತ್ಯಂತ ಸರಳವಾದ ನೀತಿಗಳನ್ನು ನಂಬಿ ಪಾಲಿಸುತ್ತಾ ಜೀವನ ನಡೆಸುವ ಅಲೆಮಾರಿ ಜನಾಂಗದ ಕಪಟವರಿಯದ ಕನ್ನಮರಿ ಎಂಬ ಹುಡುಗ ನಗರಕ್ಕೆ ಬಂದು, ವಿದ್ಯಾಭ್ಯಾಸ ಪಡೆದು ಆಧುನಿಕ ಸಮಾಜದ ನಾನಾ ಮುಖಗಳನ್ನು ಹತ್ತಿರದಿಂದ ಕಂಡು ಅನುಭವ ಪಡೆದು ಕೊನೆಗೆ ತನ್ನ ಮೂಲಕ್ಕೇ ಹಿಂತಿರುಗುವ ಪಯಣವನ್ನು ಹನೂರರು ಎರಡು ಮಗ್ಗುಲುಗಳಿಂದ ಕಟ್ಟಿಕೊಟ್ಟಿದ್ದಾರೆ: ಒಂದು ಅವನು ತಾನು ಪಯಣಿಸಿದ ನೆಲೆಗಳ ಕುರಿತು ಸ್ವತಃ ಬರೆದ ಬರಹದಿಂದ (ಸ್ವಕಥನ) ಮತ್ತೊಂದು ಅವನಿರುವ ನೆಲೆಯನ್ನು ಹುಡುಕುತ್ತಾ ಬಂದು, ಅವನು ಬರೆದ ಕಥನಕ್ಕೆ ಸಾಕ್ಷೀಭಾವ ಒದಗಿಸುವ ಅವನ ಗುರುಗಳೊಬ್ಬರ ಮೂಲಕ. ಈ ಎರಡು ಮುಖ್ಯ ಪಾತ್ರಗಳೂ ತಮ್ಮ ಅಭಿಪ್ರಾಯ, ನಿಲುವುಗಳನ್ನು ಅಪ್ಪಿತಪ್ಪಿಯೂ ಎಲ್ಲಿಯೂ ವಾಚ್ಯವಾಗಿ ದಾಖಲಿಸದೇ, ಉದ್ಧರಿಸದೇ ಇದ್ದರೂ, ಓದುಗನಿಗೆ ಸ್ಪಷ್ಟವಾಗಿ ಅವರ ಮನಸ್ಥಿತಿಯ ಅನುಭೂತಿಯನ್ನು ಮಾಡಿಸುವುದು ಕಾದಂಬರಿಯ ವೈಶಿಷ್ಟ್ಯ. ಕಾದಂಬರಿಕಾರರಾಗಿ ಹನೂರರ ಗೆಲುವನ್ನು ಇದು ತೋರಿಸುತ್ತದೆ. ಬದುಕನ್ನು ತಾನಾಗಿ ಆಯ್ಕೆ ಮಾಡಿಕೊಂಡು ರೂಪಿಸಿಕೊಳ್ಳದೆ, ಪರಿಸ್ಥಿತಿಗೆ ಅನಾಯಾಸವಾಗಿ ತನ್ನನ್ನು ಒಡ್ಡಿಕೊಂಡರೂ, ಆಂತರ್ಯದಲ್ಲಿ ತನ್ನ ಅಸ್ತಿತ್ವದ ಹುಡುಕಾಟವನ್ನು ನಿರಂತರವಾಗಿ ನಡೆಸಿದ ಕನ್ನಮರಿ ಕೊನೆಗೆ ತನ್ನ ಮೂಲನೆಲೆಯಲ್ಲಿಯೇ ಅದನ್ನು ಕಂಡುಕೊಳ್ಳುವಲ್ಲಿ ಕಾದಂಬರಿಯ ಜೊತೆಗೆ ಅವನ ಹುಡುಕಾಟವೂ ಕೊನೆಯಾಗುತ್ತದೆ.

‘ನಾನು ಎಲ್ಲ ಗದ್ದಲಗಳಿಂದ ಅದೆಷ್ಟು ದೂರ ಬಂದಿರುವೆ, ಇನ್ನು ನನ್ನನ್ನು ಯಾರೂ ಹುಡುಕಿ ಬರುವುದಿಲ್ಲವೆನಿಸಿ ಮನಸಿನ ಏರಿಳಿತ ಕಡಿಮೆಯಾಗಿದ್ದಿತು’ ಎಂಬ ಅವನ ಕೊನೆಯ ಮಾತುಗಳಲ್ಲಿ ಈ ಸತ್ಯ ಗೋಚರಿಸುತ್ತದೆ. ಮುಂದುವರೆದು ‘ದಿವ್ಯಮೌನದ ಕಾನುಮಡುವಿನ ಹಟ್ಟಿಗಳಲ್ಲಿ ತೊಟ್ಟಿಲಿನಿಂದ ಎದ್ದ ಕೂಸಿನ ತೊದಲು ನುಡಿ, ಹೆಂಗಸರ ಜೋಗುಳ ಪದ, ಕುರಿ, ಮ್ಯಾಕೆ, ಕರುಗಳ ಕೂಗು. ನೋಡಿದರೆ ಆಗಲೇ ಮೂಡಲ ದಿಕ್ಕಲ್ಲಿ ಬೆಳಕು ಕಾಣಿಸುತ್ತಿತ್ತು’ ಎಂದು ಮುಂದಿನ ಕೆಲಸಕ್ಕೆ ಅಣಿಯಾಗುವ ಅಂತ್ಯದ ಸಾಲುಗಳು ಅವನ ಹೊಸ ಬಾಳಿಗೆ ನಾಂದಿ ಹಾಡಿದಂತಾಗಿ ಓದುಗನ ಮನವನ್ನು ಬೆಚ್ಚಗಾಗಿಸುತ್ತವೆ. ನವ್ಯ, ನವೋದಯ ಎರಡೂ ಶೈಲಿಗಳ ಸಮನ್ವಯದ ದೃಷ್ಟಿಕೋನ ಇಲ್ಲಿ ತೋರುತ್ತದೆ. ನೈತಿಕತೆ, ಪ್ರಾಮಾಣಿಕತೆ, ಸರಳ ಜೀವನದಂತಹ ಮಾನವೀಯ ಮೌಲ್ಯಗಳು ಮನುಷ್ಯನನ್ನು ನೆಮ್ಮದಿಯ ಕಡೆಗೆ ಕೊಂಡೊಯ್ಯುತ್ತವೆ ಎಂಬ ಮಾನವತಾವಾದದ ನೆಲೆಯನ್ನೂ ಇಲ್ಲಿ ಗುರುತಿಸಬಹುದಾಗಿದೆ.

ಕಾದಂಬರಿಯಲ್ಲಿ ಇಂದಿನ ಸಮಕಾಲೀನ ನಾಗರಿಕ ಸಮಾಜ ಮತ್ತು ಅದಕ್ಕೆ ಸಮಾನಾಂತರವಾಗಿ ಇರುವಂತೆ ತೋರುವ ‘ಕನ್ನಮಾರಿ’ ಎಂಬ ಅಲೆಮಾರಿ ಸಮುದಾಯದ ಮುಖಾಮುಖಿಯನ್ನು ಅತ್ಯಂತ ಸಹಜವಾಗಿ ವಾಸ್ತವಕ್ಕೆ ಹತ್ತಿರವೆನ್ನಿಸುವಂತೆ ಲೇಖಕರು ಚಿತ್ರಿಸಿದ್ದಾರೆ. ಸಮಾಜದ ವಿವಿಧ ಮುಖಗಳಾಗಿ ಸಮಕಾಲೀನ ಸಮಾಜವನ್ನು ಪ್ರತಿನಿಧಿಸುವ ಕಾನುಮಡುಗು ಹಳ್ಳಿಯ ಊರಗೌಡ, ಮಾದೇವಸ್ವಾಮಿ ಮೇಷ್ಟ್ರು, ಬಳ್ಳಾರಿ ಪೇಟೆಯ ಸಿರಿವಂತ ಹುಡುಗಿ ಚಂಪಕಾ ಪಟೇಲ್, ಅವಳ ಕುಟುಂಬ, ಗುಣಶೇಖರ್ ಮತ್ತಿತರ ವಿಶ್ವವಿದ್ಯಾಲಯದ ಸಿಬ್ಬಂದಿವರ್ಗ, ಎಂ.ಎಲ್.ಎ. ದಯಾನಂದ ಪ್ರಸಾದ್, ಅವನ ಪಾರ್ಟಿ ಕಾರ್ಯಕರ್ತರು, ನರ್ಸ್ ಕ್ರಿಸ್ಟಿನಾ, ಸಿಟಿಯ ಶ್ರೀಮಠದ ಗುರುಗಳು ಮತ್ತು ಮಠದ ಸಿಬ್ಬಂದಿ, ಮಲಪನ ಹಳ್ಳಿ ಶಾಖಾ ಮಠದ ರೋಗಗ್ರಸ್ತ ಸ್ವಾಮೀಜಿ, ಅವರ ಹೆಂಡತಿ, ಮಗು, ಮಠದ ಸಿಬ್ಬಂದಿ, ಆ ಹಳ್ಳಿಯ ಜನರು ಹೀಗೆ ಪಾತ್ರಗಳ ಸಂಖ್ಯೆ ದೊಡ್ಡದಾಗಿದೆ. ಅಲೆಮಾರಿ ಜನಾಂಗವನ್ನು ಪ್ರತಿನಿಧಿಸುವ ಕನ್ನಮರಿಯ ತಂದೆ, ತಾಯಿ, ಅಜ್ಜ ಮುಂತಾದ ಪಾತ್ರಗಳ ಮೂಲಕ ನಶಿಸಿಹೋಗಬಹುದಾದ ಅವರ ಸಮುದಾಯದ ಕಟ್ಟುಪಾಡುಗಳು, ಸಂಪ್ರದಾಯಗಳನ್ನು ದಾಖಲಿಸುತ್ತಲೇ ಅವರ ಬದುಕು, ಬವಣೆಗಳನ್ನು ಚಿತ್ರಿಸಿದ್ದಾರೆ. ಹೀಗೆ ಈ ಕಾದಂಬರಿಯು ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಮಹತ್ತ್ವವನ್ನು ಪಡೆದುಕೊಳ್ಳುತ್ತದೆ.

ಇನ್ನು ಕಥಾ ಸಂವಿಧಾನವನ್ನು ಪರಿಶೀಲಿಸುವುದಾದರೆ ಕಾದಂಬರಿಯು ಮೈಸೂರು ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾದ ಗುರುನಾಥ ಉಪಾಧ್ಯರು ಒಂದು ವಾರಾಂತ್ಯದಲ್ಲಿ ಕನ್ನಮರಿಯನ್ನು ಹುಡುಕಿಕೊಂಡು ಕಾನುಮಡುವು ಕಾಡುಕಂಪಳಕ್ಕೆ ಬರುವ ಮೂಲಕ ಆರಂಭವಾಗುತ್ತದೆ. ಅಲ್ಲಿ ತೆರೆದ ಬಾಗಿಲಿನ ಅವನ ಬಿಡಾರದಲ್ಲಿ ಕನ್ನಮರಿ ಕಾಣದೆ ಹೋಗಿ, ಬದಲಿಗೆ ಅವನು ಬರೆದಿಟ್ಟ ಹಾಳೆಗಳು ದೊರಕಿ, ಉಪಾಧ್ಯರು ಆ ಹಾಳೆಗಳನ್ನು ಓದುವ ಮೂಲಕ ಹಿನ್ನೋಟ ತಂತ್ರದಲ್ಲಿ ಕತೆಯೊಳಗೆ ಕತೆಯಾಗಿ ಆರಂಭವಾಗುತ್ತದೆ.

ಕನ್ನಮರಿ ಬರೆದ ಕತೆಯ ಆರಂಭ ಅವನ ಜೀವನದ ಆರಂಭದಿಂದ ಇಲ್ಲದೇ, ಅವನು ಪ್ರಸಿದ್ಧ ಶ್ರೀಮಠವೊಂದರ ಶಾಖಾಮಠಕ್ಕೆ ಧಾರ್ಮಿಕ ಗುರುವಾಗಿ ‘ಇಮ್ಮಡಿ ಕಪಿಲಸಿದ್ಧ ಮಲ್ಲಿಕಾರ್ಜುನಸ್ವಾಮಿ’ ಎಂಬ ಹೆಸರು ಪಡೆದು ಬದುಕುತ್ತಿದ್ದ ಕಾಲದಲ್ಲಿ ಅವನು ಬರೆದ ಆತ್ಮ ಕಥನವಾಗಿ, ಅಲ್ಲಿಂದಲೆ ಆರಂಭಗೊಂಡು ಉತ್ತಮ ಪುರುಷದಲ್ಲಿ ಹಿನ್ನೋಟದಲ್ಲಿ ನೆನಪಿನ ಸುರಳಿಯಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಗುರುನಾಥ ಉಪಾಧ್ಯರು ಒಂದು ರಾತ್ರಿಯಲ್ಲಿ ಕನ್ನಮರಿಯ ಕಥನದ ಒಂದು ಘಟ್ಟದವರೆಗೆ ಓದಿ ನಿಲ್ಲಿಸಿ, ಹಗಲಿನಲ್ಲಿ ಅವನ ಜೀವನದಲ್ಲಿ ಬಂದ ಮುಖ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಕಾರ್ಯದಲ್ಲಿ ನಿರತರಾಗುತ್ತಾರೆ. ಹೀಗೆ ಭೇಟಿಯಾದ ವ್ಯಕ್ತಿಗಳು ಅವನ ಕಥನಕ್ಕೆ ಸಾಕ್ಷಿ, ಪುಷ್ಟಿಗಳನ್ನು ಒದಗಿಸುತ್ತಾ ಹೋಗುತ್ತಾರೆ. ಮತ್ತೆ ಮರು ರಾತ್ರಿ ಮರಳಿ ಉಪಾಧ್ಯರು ಮುಂದಿನ ಘಟ್ಟದ ಓದಿನಲ್ಲಿ ಮುಳುಗುತ್ತಾರೆ. ಹೀಗೆ ಹಂತ ಹಂತಗಳಲ್ಲಿ ಕನ್ನಮರಿಯ ಕತೆ ಅವನು ಹೇಳಿದಂತೆ, ಮತ್ತು ಗುರುನಾಥ ಉಪಾಧ್ಯರು ಸಾಕ್ಷಿ ಒದಗಿಸಿದಂತೆ ಸಾಗುತ್ತಾ ಕೊನೆಯವರೆಗೆ ಕುತೂಹಲ ಕಾಯ್ದುಕೊಳ್ಳುತ್ತದೆ. ಬಯಲುಸೀಮೆಯ ಆಡುಭಾಷೆ, ಔಚಿತ್ಯಪೂರ್ಣವಾಗಿ ಬಳಸಲಾದ ನಿಂದನೆಯ, ಅವಾಚ್ಯ ಪದಗಳೊಂದಿಗೆ ಕೂಡಿದ ಸೊಗಡು ಕಾದಂಬರಿಗೆ ನೈಜತೆಯನ್ನು ತಂದುಕೊಟ್ಟಿದೆ.

ಕನ್ನಮಾರಿ ಜನಾಂಗದವರು ಅಲೆಮಾರಿಗಳು. ಪುಡಿಗಳ್ಳತನ ಮಾಡುವುದು ಅವರ ಕುಲ ಕಸುಬು. ಶಾಸ್ತ್ರ ಹೇಳುವ ಹಕ್ಕಿ ಶಕುನದವರು, ತಲೆ ಬುರುಡೆ, ಮೂಳೆಗಳನ್ನು ಇಟ್ಟುಕೊಂಡು ಮಾಟ ಮಂತ್ರ ಮಾಡುವವರು, ಗರ ಬಿಡಿಸುವವರು ಇಂತಹ ವೃತ್ತಿಗಳಿಗಾಗಿ ಅವರು ಹೆಸರಾದವರು. ಒಂದೇ ನೆಲದಲ್ಲಿ ನಿಂತರೆ, ಮಂತ್ರ ಮಾಡುವ, ಕಳ್ಳತನ ಮಾಡುವ ಇವರನ್ನು ಜನ ಗುರುತಿಸಿ ಹಿಡಿದಾರೆಂದು ಹೆದರಿ ಅಲೆಮಾರಿ ಜೀವನ ನಡೆಸುವವರು. ತಮ್ಮ ಕುಲದ ದೇವರೆಂದು ನಂಬುವ ಕನ್ನಮಾರಿ ತಂದೆ ಹಾಕಿಕೊಟ್ಟ ನೀತಿ, ಕಟ್ಟುಪಾಡುಗಳನ್ನು ಮುರಿಯದೆ, ಸಮಾಜದಿಂದ ಹೊರಗೆ ತಮ್ಮ ಸಮುದಾಯದ ಜೊತೆಗೇ ಬದುಕಬೇಕೆಂಬ ಆಚರಣೆಯನ್ನು ಪಾಲಿಸಿಕೊಂಡು ಬಂದವರು. ಕೋಳಿ, ತೆಂಗಿನಕಾಯಿ, ಹಳೆಯ ಬಟ್ಟೆ ಇಂತಹ ಸಣ್ಣ ಪುಟ್ಟ ಕಳ್ಳತನ ಮಾಡಿ ಇಲ್ಲವೇ ಭಿಕ್ಷೆ (ಕ್ವಾರುಣ್ಯ) ಬೇಡಿ ಬದುಕಬೇಕು, ಹಣ ಸಂಪಾದನೆ, ಹೊಸ ಬಟ್ಟೆ ತಮ್ಮಂತವರಿಗಲ್ಲ ಎಂಬ ನಂಬಿಕೆ ಇವರದ್ದು.

ಹೆಣ್ಣುಮಕ್ಕಳ ಮೇಲೆ ಕೈ ಮಾಡಬಾರದು ಎಂಬುದು ಅವರ ಜನಾಂಗದ ನೀತಿ. ಹೆಂಗಸಿನ ಮೇಲೆ ಕೈ ಮಾಡಿ ಅವಳ ಕಣ್ಣೀರು ನೆಲ ಮುಟ್ಟಿದರೆ ಅವರಿಗೆ ಏನಾದರೂ ಸಂಕಷ್ಟ ಒದಗುವುದು ಎಂದು ಕುಲದೇವತೆ ಕನ್ನಮಾರಿ ತಂದೆ ಹೇಳಿದ ಎಂಬ ಮಾತನ್ನು ಮೀರದೆ ನಡೆಯುವ ಜನರವರು. ಅವರ ಅಲೆಮಾರಿ ಜೀವನದಲ್ಲಿ ರಾತ್ರಿ ಹೊತ್ತೇ ಎತ್ತು, ಕತ್ತೆಯ ಮೇಲೆ ಸಾಮಾನು ಸರಕು ಹೇರಿ ಊರಿಂದ ಊರಿಗೆ ಪ್ರಯಾಣ ಮಾಡುತ್ತಿದ್ದುದು, ತಲೆಯ ಮೇಲೆ ಸೂರಿಲ್ಲದ ಭೂಮಿಯ ಮೇಲೆ ಮಲಗುವ ಜನರು. ಆದರೆ ಕಾಲ ಬದಲಾದಂತೆ ಅವರು ಬದುಕುವುದು ಕಷ್ಟವಾಗಿ, ಕಳ್ಳರು, ದರೋಡೆಕೋರರು ಎಂದು ಸಮಾಜದ ಜನ ಅವರನ್ನು ಹಿಡಿದು ಶೋಷಿಸುವುದು, ತಮ್ಮ ಹೊಲದ ಕೆಲಸಕ್ಕೆ ಆಳಾಗಿ ಇಟ್ಟುಕೊಳ್ಳುವುದು ಸಾಮಾನ್ಯವಾಗುತ್ತದೆ. ಅವರ ಸಂತತಿಯವರು ಅಲ್ಲಲ್ಲಿ ಚದುರಿಹೋಗಿ ಊರಿನ ಸೀಮೆಯ ಕಾಡುಗಳ ಸಮೀಪದ ಹಳ್ಳಿಗಳಲ್ಲಿ ವಾಸ್ತವ್ಯ ಹೂಡುವಂತಾಗುತ್ತದೆ. ಹೀಗೆ ಕನ್ನಮರಿಯ ತಂದೆ ಕಳ್ಳತನ ಬಿಟ್ಟು ಊರಗೌಡರ ಹೊಲಗದ್ದೆಯ ಕಾವಲಿನ ಕೆಲಸ ಮಾಡುತ್ತಾ ಸಂಸಾರ ಸಾಗಿಸುತ್ತಿರುತ್ತಾನೆ.

ನಡುನಡುವೆ ತನ್ನ ಕುಲಕಸುಬು ಬಿಡಬಾರದೆಂದು ಪುಡಿಗಳ್ಳತನಕ್ಕೆ ಹೋಗುತ್ತಿದ್ದ ತಂದೆಯೊಂದಿಗೆ ಬಾಲಕ ಕನ್ನಮರಿಯೂ ಜತೆಯಾಗುತ್ತಿರುತ್ತಾನೆ. ಇಂದಿನ ಕಾಲಧರ್ಮದಂತೆ ತಮ್ಮ ಮಗನೂ ಶಾಲೆಗೆ ಹೋಗಿ ಕಲಿಯಬೇಕೆಂಬ ಆಸೆಯಿಂದ ಕನ್ನಮರಿಯ ತಾಯಿ ಅವನನ್ನು ಎಂಟು ವರ್ಷದವನಿದ್ದಾಗ ಹಳ್ಳಿಯ ಶಾಲೆಗೆ ಸೇರಿಸುತ್ತಾಳೆ. ಕಲಿತು ದುಡಿಯ ಹೋದವರು ಹಾಳಾಗುತ್ತಾರೆ, ಅದು ತಮ್ಮಂತವರಿಗಲ್ಲ ಎಂಬ ವಿರೋಧದ ಮಾತುಗಳನ್ನು ಲೆಕ್ಕಿಸದೆ ಅವಳು ಮಾದೇವ ಸ್ವಾಮಿ ಮೇಷ್ಟ್ರ ಸಹಕಾರದಿಂದ ಅವನನ್ನು ಅಲ್ಲಿಗೆ ಸೇರಿಸಿದ ಬಳಿಕ, ಅವರು ಅವನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಮ್ಮೂರಿಗೆ ಕರೆದೊಯ್ಯುವಲ್ಲಿಗೆ ಅವನ ಜೀವನದ ಒಂದು ಘಟ್ಟ ಮುಗಿಯುತ್ತದೆ. ಮಾದೇವ ಮೇಷ್ಟ್ರು ಕನ್ನಮರಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಮುಂದಿನ ವಿದ್ಯಾಭ್ಯಾಸ ಮಾಡಿಸಿ, ಪದವಿ ಮುಗಿದ ಬಳಿಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ. ಎ. ಮಾಡಲು ಮೈಸೂರಿಗೆ ಕಳುಹಿಸುತ್ತಾರೆ. ಹೀಗೆ ನಾಗರಿಕ ಲೋಕದ ಸಂಪರ್ಕಕ್ಕೆ ಬಂದ ಕನ್ನಮರಿ ತನ್ನ ಧೈರ್ಯ, ಶ್ರದ್ಧೆ ಮತ್ತು ಮುಗ್ಧ ನೇರ ನಡವಳಿಕೆಯಿಂದ ಬಹುಜನರ ವಿಶ್ವಾಸಕ್ಕೆ ಪಾತ್ರನಾಗುತ್ತಾನೆ. ಚಂಪಕಾ ಪಟೇಲ್ ಎಂಬ ಬಳ್ಳಾರಿಯ ಕ್ವಾರಿಕಲ್ಲು ಬಿಸಿನೆಸ್ಸು ಇರುವ ಶ್ರೀಮಂತನ ಮಗಳೊಂದಿಗೆ ಅವನ ಗೆಳೆತನವಾಗುತ್ತದೆ. ಇಂಗ್ಲಿಷ್ ಎಂ. ಎ. ಓದುತ್ತಿದ್ದ ಅವಳು ಬೌದ್ಧಿಕವಾಗಿ ಅವನ ಸಂಗಾತಿಯಾಗುತ್ತಾಳೆ.

ತನ್ನ ಸುಖ ದುಃಖವನ್ನು, ನೀರಸವಾದ ಶ್ರೀಮಂತ ಬದುಕನ್ನು ಅವನಿಗೆ ವಿವರಿಸುವ ಅವಳು, ತನ್ನ ಕೌಟುಂಬಿಕ ಸಂಕಷ್ಟಗಳ ಕಾರಣದಿಂದ ಮನೆಗೆ ಮರಳಿ ಅವನಿಂದ ದೂರಾಗುತ್ತಾಳೆ. ಅವಳ ಅಪ್ಪ, ಅಣ್ಣನಂತಹ ದುರಾಸೆಯುಳ್ಳ ಉದ್ಯಮಿಗಳ ಬದುಕು, ಅವರು ಮಾಡುವ ಅಕ್ರಮ ಗಣಿಗಾರಿಕೆ, ಅನ್ಯಾಯ, ಕೊನೆಗೆ ಅವರ ದಂಧೆ ಜಪ್ತಾಗಿ ಮಾಲೀಕನಿಗೆ ಜೈಲಾಗುವ ದುರಂತಗಳನ್ನು ಅವನು ಚಂಪಾಳ ಮೂಲಕ ಅರಿಯುತ್ತಾನೆ. ಹಾಗೆಯೇ ವಿಶ್ವವಿದ್ಯಾಲಯದಲ್ಲಿ ಉನ್ನತ ಹುದ್ದೆಗಳಿಗಾಗಿ ನಡೆಯುವ ಹುನ್ನಾರ ( ವಿಚಾರ ಸಂಕಿರಣದ ಹೆಸರಿನಲ್ಲಿ ಪ್ರಮೋಷನ್, ಕುಲಪತಿ ಹುದ್ದೆಗಾಗಿ ನೀಡುವ ಲಂಚ, ರಾತ್ರಿ ಪಾರ್ಟಿ, ಕುಡಿತ, ಎರಡು ಪ್ರಾಧ್ಯಾಪಕ ಬಣಗಳ ನಡುವೆ ತಿಕ್ಕಾಟ), ಹೊಲಸು ರಾಜಕೀಯ, ಹಾಸ್ಟೆಲ್ಗಳಲ್ಲಿ ನಡೆಯುವ ದುರ್ವ್ಯವಹಾರಗಳನ್ನು ಹತ್ತಿರದಿಂದ ನೋಡುತ್ತಾನೆ. ಎರಡು ವರ್ಷಗಳಲ್ಲಿ ಎಂ. ಎ ಮುಗಿಸಿ ಹೊರಬಂದು ಹೊಟ್ಟೆಪಾಡಿಗಾಗಿ ದಾರಿ ಹುಡುಕುತ್ತಾನೆ. ಬದುಕಿನ ಮುಂದಿನ ಘಟ್ಟದಲ್ಲಿ ಕನ್ನಮರಿ ಬೇಕರಿಯೊಂದರಲ್ಲಿ ಕೆಲಸ ಗಿಟ್ಟಿಸುತ್ತಾನೆ. ಅಲ್ಲಿ ಕೆಲಕಾಲ ಕೆಲಸ ಮಾಡಿದ ಮೇಲೆ ಅಕಸ್ಮಾತ್ತಾಗಿ ಚುನಾವಣಾ ಪ್ರಚಾರದ ಸಮಯಕ್ಕೆ ಕಾರ್ಯಕರ್ತರ ಕಣ್ಣಿಗೆ ಬಿದ್ದು, ಪಾರ್ಟಿಯ ಕೆಲಸಕ್ಕೆ ಎಳೆಯಲ್ಪಡುತ್ತಾನೆ. ಪಕ್ಷದ ಚಿಹ್ನೆ, ಅಭ್ಯರ್ಥಿಯ ಹೆಸರೂ ಗೊತ್ತಿಲ್ಲದೆ ಅವರ ಪರ ಪ್ರಚಾರಕ್ಕಿಳಿಯುತ್ತಾನೆ. ಅಲ್ಲಿ ಅವನಿಗೆ ಅಧಿಕಾರಕ್ಕಾಗಿ ಚುನಾವಣೆಯಲ್ಲಿ ನಡೆಯುವ ಅವ್ಯವಹಾರಗಳ ಪರಿಚಯವಾಗುತ್ತದೆ.

ಪಕ್ಷದ ಕಾರ್ಯಕರ್ತರ ನಡುವೆ ಒಳ್ಳೆಯ ಕೆಲಸಗಾರನೆಂದು, ಪ್ರಾಮಾಣಿಕನೆಂದು ಗುರುತಿಸಿಕೊಂಡ ನಂತರ ಎಂ.ಎಲ್. ಎ. ಅಭ್ಯರ್ಥಿಯ ವಿಶ್ವಾಸ ಸಂಪಾದಿಸಿ ಅವನ ಬಲಗೈ ಬಂಟನಾಗುತ್ತಾನೆ. ಇದರಿಂದ ಅಸೂಯೆಗೊಳಗಾದ ಇತರ ಕಾರ್ಯಕರ್ತರು ಚುನಾವಣಾ ಸಮಯದಲ್ಲಿ ಅವ್ಯವಹಾರ ಮಾಡಿದನೆಂದು ಅವನ ಮೇಲೆ ಆರೋಪ ಬರುವಂತೆ ಮಾಡಿ ಅವನನ್ನು ಹೊಡೆದುಹಾಕುತ್ತಾರೆ. ಏಟು ತಿಂದು ಆಸ್ಪತ್ರೆಗೆ ಸೇರಿದ ಕನ್ನಮರಿಯನ್ನು ಭೇಟಿಯಾಗಲು ಬಂದ ಅವನ ಬಾಸ್ ಎಂ. ಎಲ್. ಎ. ಅಭ್ಯರ್ಥಿ ಈ ಕಿಡಿಗೇಡಿಗಳ ದಾಂದಲೆ ಪ್ರಕರಣವೂ ಚುನಾವಣೆಯಲ್ಲಿ ತನ್ನ ಪರವಾಗುವಂತೆ ಲಾಭ ಪಡೆದು ಗೆಲ್ಲುತ್ತಾನೆ. ಆಸ್ಪತ್ರೆಯಲ್ಲಿ ಕ್ರಿಸ್ಟಿನಾ ಎಂಬ ನರ್ಸ್ಅ ವನೊಂದಿಗೆ ಗೆಳೆತನ ಮಾಡುತ್ತಾಳೆ. ಆಸ್ಪತ್ರೆಯಿಂದ ಹೊರಬಂದ ನಂತರ ಅವನ ಮೇಲಿದ್ದ ಆರೋಪದಿಂದ ಜೈಲು ಸೇರುತ್ತಾನೆ. ತನ್ನ ಪ್ರಾಮಾಣಿಕತೆಗಾಗಿ ಜೊತೆಗಾರರ ಕುತಂತ್ರದಿಂದ ಜೈಲು ಸೇರಿದ ಕನ್ನಮರಿ ಆ ಪ್ರಪಂಚವನ್ನು ನೋಡುತ್ತಾನೆ. ಪರಿಸ್ಥಿತಿಯ ಕೈಗೆ ಸಿಕ್ಕು ಅಪರಾಧ ಮಾಡಿ ಜೈಲು ಸೇರಿದವರು, ಅಮಾಯಕರರಾಗಿದ್ದೂ ಕುತಂತ್ರಕ್ಕೆ ಬಲಿಯಾಗಿ ಜೈಲು ಸೇರಿದವರ ಕಥೆಗಳನ್ನು ಅರಿಯುತ್ತಾನೆ.

ಒಂದು ತಿಂಗಳ ಸಾದಾ ಶಿಕ್ಷೆಯ ನಂತರ ಹೊರಬಂದವನನ್ನು ಕ್ರಿಸ್ಟಿನಾ ಬಾಳ ಸಂಗಾತಿಯಾಗಿ ಆಹ್ವಾನಿಸುತ್ತಾಳೆ. ತನ್ನ ಎಂ. ಎಲ್. ಎ. ಬಾಸನ್ನು ಭೇಟಿಯಾಗಿ ಈ ವಿಚಾರ ಕೇಳುವ ಮುಗ್ಧತೆಯಿಂದ ಹೋದವನನ್ನು ಎಂ. ಎಲ್. ಎ. ಊರಿನ ಧಾರ್ಮಿಕ ಮಠವೊಂದಕ್ಕೆ ಕಳುಹಿಸಿ, ಅಲ್ಲಿ ಒಬ್ಬ ಶಾಖಾ ಮಠದ ಸ್ವಾಮೀಜಿಯ ಕಡೆಗಾಲದಲ್ಲಿ ಸೇವೆ ಮಾಡುವ ಕೆಲಸಕ್ಕೆ ನಿಯೋಜಿಸುತ್ತಾನೆ. ಆ ಸ್ವಾಮೀಜಿಯ ಸಾವಿನ ನಂತರ ಇವನನ್ನೇ ಆ ತೆರವಾದ ಜಾಗದಲ್ಲಿ ಗುರುವಾಗಿ ಕಳುಹಿಸಲಾಗುತ್ತದೆ. ಅಲ್ಲಿ ಇವನಿಗೆ ಧಾರ್ಮಿಕ ಮಠಗಳಲ್ಲಿ ನಡೆಯುವ ಅವ್ಯವಹಾರದ, ಮಠಾಧೀಶರ ಆಷಾಢಭೂತಿತನ ಅರಿವಾಗುತ್ತದೆ. ಕೆಲ ತಿಂಗಳುಗಳಲ್ಲಿ ಅಲ್ಲಿಂದ ತಪ್ಪಿಸಿಕೊಂಡು ತನ್ನ ತಂದೆಯ ಬಳಿಗೆ ಹಿಂದಿರುಗುತ್ತಾನೆ. ಹೀಗೆ ತನ್ನ ಡೈನಮಿಕ್ ಬದುಕಿನ ಆರಂಭದ ಕೆಲ ವರ್ಷಗಳಲ್ಲಿಯೇ ನಾಗರಿಕ ಸಮಾಜದ ಎಲ್ಲ ಮುಖಗಳ ಪರಿಚಯ ಅವನಿಗಾಗುವುದು ಅಸಹಜವೆನಿಸಿದರೂ (ಅವಾಸ್ತವ), ಇಲ್ಲಿ ಹನೂರರು ಕಟ್ಟಿಕೊಡುವ ಇಂದಿನ ಸಮಾಜದ ಚಿತ್ರಣ ಮಾತ್ರ ಬಹಳ ವಾಸ್ತವಿಕವಾಗಿದೆ. ಸಮಾಜದ ಬಹುಮುಖಗಳಿಗೆ ಕನ್ನಡಿ ಹಿಡಿಯುವ ಸಲುವಾಗಿ ರಚಿಸಿದ ಈ ಕಥಾ ಸಂವಿಧಾನ ಒಂದು ಸಿನೆಮಾ ಕಥೆಯಂತೆ ಭಾಸವಾಗುತ್ತದೆ.

ಸ್ವಾರ್ಥ ಜನಗಳಿಂದ ತುಂಬಿದ ಪ್ರಪಂಚದಲ್ಲಿ ಮಾದೇವ ಮೇಷ್ಟ್ರು, ಗುರುನಾಥ ಉಪಾಧ್ಯರು, ಚಂಪಕಾ ಪಟೇಲ್, ಕ್ರಿಸ್ಟಿನಾರಂತಹ ಸಜ್ಜನರೂ ಇರುವರೆಂದು ತೋರಿಸಿದ್ದರೂ, ಇಂತಹವರ ಒಡನಾಟದ ಮೋಹಕ್ಕೆ ಸಿಕ್ಕು ಈ ಸಮಾಜದಲ್ಲಿ ಉಳಿಯುವ ಪ್ರಯತ್ನವನ್ನೂ ಕನ್ನಮರಿ ಮಾಡುವುದಿಲ್ಲ. ಬಹುಶಃ ಅವನೊಳಗೆ ಅಂತರ್ಗತವಾದ ಅಲೆಮಾರಿ ತತ್ತ್ವ ಅವನಿಗೆ ಕೂಡಿಡದ, ಒಂದೇ ಕಡೆ ನೆಲೆಸಿ ಆಸ್ತಿ ಮಾಡದ, ಐಶಾರಾಮಿ ಜೀವನದ ವ್ಯಾಮೋಹಕ್ಕೆ ಒಳಗಾಗದ ನಿರ್ಮಮತ್ವವನ್ನು, ಝೆನ್ ರೀತಿಯ ಸಮಚಿತ್ತವನ್ನು ಬಳುವಳಿಯಾಗಿ ಕೊಟ್ಟಿತ್ತೆನ್ನಿಸುತ್ತದೆ. ಅವನ ಮೇಲೆ ಪ್ರಭಾವ ಬೀರಿದ, ಅವನ ಅದುವರೆಗಿನ ಜೀವನವನ್ನು ಪೂರ್ತಿಯಾಗಿ ಅರಿತು ಸಾಕ್ಷ್ಯರಾದ ಉಪಾಧ್ಯರೂ ಸೇರಿದಂತೆ ಅವನು ಬಿಟ್ಟು ಬಂದ ಜೀವನದ ಯಾವ ಪಾತ್ರಗಳನ್ನೂ ಅವನು ಪುನಃ ಒಮ್ಮೆಯೂ ಭೇಟಿ ಮಾಡುವುದಿಲ್ಲ. ಕಾದಂಬರಿಯ ಬೆನ್ನುಡಿಯಲ್ಲಿ ಮನು ವಿ. ದೇವದೇವನ್ ಅವರು ಗುರುತಿಸಿರುವಂತೆ, ಆ ಕೆಲ ವರ್ಷಗಳಲ್ಲಿ ಕನ್ನಮರಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಪುರುಷಾರ್ಥಗಳನ್ನು ನಿರಾಕರಿಸಿ ತನ್ನ ಮೂಲಕ್ಕೆ ಹಿಂದಿರುಗಿ, ಆ ಪುರುಷಾರ್ಥಗಳ ನಿಜಸ್ವರೂಪವನ್ನು ಕಾಣುವ ಪ್ರಯತ್ನದಲ್ಲಿ ತೊಡಗುವ ಸೂಚನೆ ಕಾದಂಬರಿಯ
ಕೊನೆಯಲ್ಲಿ ಸಿಗುತ್ತದೆ.

ಕಾದಂಬರಿಯಲ್ಲಿ ಬುಡಕಟ್ಟು ಜನಾಂಗದ ಜಾನಪದ ಸಂಸ್ಕೃತಿಯ ನೋಟ (ಕನ್ನಮರಿಯ ಅಪ್ಪ ಪದ ಹಾಡುವುದು, ಅಮ್ಮ ಸೋಬಾನೆ ಪದ, ಕೂಸಿನ ಪದ ಹಾಡುವುದು ಇತ್ಯಾದಿ), ಗಾದೆ ಮಾತುಗಳು (ಉದಾಹರಣೆಗೆ ‘ಹುಲಿ ಹುತ್ತದ ಕಡೆ ಕತ್ತೇಮರೀದೇನು ಗೆಯ್ಮೆ’) ಅಲ್ಲಲ್ಲಿ ಕಂಡುಬಂದು ಕೃತಿಯ ಮೌಲ್ಯವನ್ನು ಹೆಚ್ಚಿಸುತ್ತವೆ. ‘ಸೆಮಿನಾರಿನಲ್ಲಿ ನೂರು ದೇವರನು ನೂಕಾಚೆ ದೂರ ಅಂತ ಹೇಳಿ ಆಮೇಲೆ ಕನ್ನಡ ಭವನಕ್ಕೆ ಗುದ್ದಲಿ ಪೂಜೆ ಮಾಡಿಸಲು ಪುರೋಹಿತರನ್ನು ಕರೆದು ಅಷ್ಟೋತ್ತರ ನಾಮಾವಳಿ ಹೇಳಿಸ್ತೀರ’, ‘ತಲೆಯ ಮೇಲೆ ಕಾಸಿನ ಕಿರೀಟವೇನೋ ಸರಿ. ಆದರೆ ಕಾಲಿಗೆ ಮೆತ್ತಿಕೊಂಡ ಕೆಸರು ಯಾವ್ಯಾವ ಥರದ್ದು’ ಮುಂತಾದ ಚಂಪಾಳ ಮಾತುಗಳು ಲೇಖಕರ ಪ್ರಗತಿಶೀಲ, ವೈಚಾರಿಕ ದೃಷ್ಟಿಕೋನವನ್ನು ಪ್ರತಿಪಾದಿಸುತ್ತವೆ. ವಿಶ್ವವಿದ್ಯಾಲಯಕ್ಕೆ ಬಂದ ಆರಂಭದಲ್ಲಿ ಕನ್ನಮರಿ ‘ಬುಡಕಟ್ಟು ಕಂಪಳದಲ್ಲಿನ ಎಲ್ಲರ ಮಾತೂ ಒಂದೇ ರೀತಿ, ವಿಶ್ವವಿದ್ಯಾಲಯ ಆವರಣದಲ್ಲಿ ಒಬ್ಬೊಬ್ಬರದು ಒಂದೊಂದು ಬಗೆಯಲ್ಲಿ’ ಎಂದು ಅಚ್ಚರಿಯಿಂದ ತರ್ಕಿಸುವ ಒಂದೇ ಸರಳ ಮಾತಿನಲ್ಲಿ ಬುಡಕಟ್ಟು ಮತ್ತು ನಾಗರಿಕ ಸಮಾಜದ ಸಂಪೂರ್ಣ ಮೌಲ್ಯದ ತುಲನೆ ದೊರೆಯುತ್ತದೆ. ಅಂತೆಯೇ ಕಾದಂಬರಿಯನ್ನು ಓದುವ ನಾಗರಿಕರಿಗೆ ಬುಡಕಟ್ಟು ಜನಾಂಗದ ಸರಳ, ಕೃತ್ರಿಮರಹಿತ, ಸ್ವಾರ್ಥರಹಿತ ಬದುಕಿನ ಜೊತೆಗೆ ತಮ್ಮ ಬದುಕನ್ನು ತುಲನಾತ್ಮಕವಾಗಿ ವಿವೇಚಿಸಿಕೊಳ್ಳಲು ಸಾಕಷ್ಟು ಗ್ರಾಸವನ್ನು ಈ ಕಾದಂಬರಿ ನೀಡುತ್ತದೆ. ಒಟ್ಟಿನಲ್ಲಿ ಜಾನಪದ, ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿದ್ದು, ವಾಸ್ತವವಾದಿ ನೆಲೆಯಲ್ಲಿ, ಮಾನವೀಯ ನೆಲೆಯಲ್ಲಿ ಸಮಕಾಲೀನ ಸಮಾಜವನ್ನು ಅಳೆದು ತೂಗಿ ನೋಡುವ ಈ ಕಾದಂಬರಿ ಒಂದು ಗಟ್ಟಿನೆಲೆಯ, ಅಪರೂಪದ ಬಹುಮೂಲ್ಯ ಕೃತಿಯಾಗಿದೆ.

‍ಲೇಖಕರು Admin MM

April 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: