ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’

ಗೀತಾ ದೊಡ್ಮನೆ

**

ಕವಿ ಸಾವಿತ್ರಿ ಕೃಷ್ಣಮೂರ್ತಿ ಅವರ ಕವನ ಸಂಕಲನ ಪ್ರಕಟವಾಗಿದೆ.

ಸಾಹಿತಿ ಗೀತಾ ದೊಡ್ಮನೆ ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

ಮಲೆನಾಡಿನ ಮಡಿಲಲ್ಲೊಂದು ಮನೆ; ಮನೆಗೆ ಆತುಕೊಂಡ ಹಚ್ಚಹಸಿರಿನಲ್ಲಿ ಹಕ್ಕಿಯದೊಂದು ಗೂಡು. ಹಕ್ಕಿಗೆ ಮನ ಬಂದಾಗ, ತನ್ನ ಇಂಪಿನ ದನಿಯ ಶ್ರುತಿ-ಲಯದಲ್ಲಿ ಹರಿಸುವ ಹಾಡು; ಮನೆಯ ಒಳಗೆ, ಆ ಹಕ್ಕಿ- ಹಾಡನ್ನು ಸಹ-ಸ್ಪಂದನದಲ್ಲಿ ಆಲಿಸುತ್ತ, ಸಂತೋಷಪಡುವ, ಮತ್ತೊಂದು ಜೀವ! ಅದಕ್ಕೆ, ಅಡಗಿಕೊಂಡೇ ಹಾಡುವ ಆ ಹಕ್ಕಿಯ ಬರವಿಗೆ ಕಾಯುವ ಕಾತರ;

“ಯಾಕೆ ನೀನು ನನ್ನೆದುರಿಗೆ ಒಮ್ಮೆಯಾದರೂ ಬರುತ್ತಿಲ್ಲ?
ಯಾರದಾದರೂ ಭಯವೆ? ನಿನ್ನ ದನಿಯಲ್ಲಿ ಅದೇನು ಇಂಪು! ಕೃಷ್ಣನೆಸೆದ ಕೊಳಲು ನಿನ್ನ ಕೊರಳು ಸೇರಿತೇನೇ?”-
ಎಂದು ಕಾಡುವ ವಿಸ್ಮಯ.

ಯಾವ ದೇವ ಹಾಡು ಎಂದು ನಿನ್ನ ಕಳಿಸಿದ?
ಯಾವ ಗಾನ ಗಾರುಡಿಗನು ಸ್ವರವ ಕಲಿಸಿದ?.. (ಗೋಪಿ ಹಕ್ಕಿಯ ಹಾಡು)

ಎಂಬ ಮೆಚ್ಚುಗೆಯ ಕೌತುಕದಲ್ಲಿ, ಆ ಕಾಡಿನ ಹಾಡುಗಾರ್ತಿಯ ಧ್ವನಿ, ಮತ್ತು ಈ ನಾಡಿನ ಹಾಡುಗಾರ್ತಿಯ ಸಂವೇದನಾತ್ಮಕ ಪ್ರತಿಧ್ವನಿ ಎರಡೂ ಸೇರಿ ಅನುರಣಿಸುವಂತಿದೆ- ಶ್ರೀಮತಿ ಸಾವಿತ್ರಿ ಕೃಷ್ಣಮೂರ್ತಿಯವರ ಗೋಪಿ ಹಕ್ಕಿಯ ಹಾಡು ಕವನಸಂಕಲನದಲ್ಲಿ. ಅದು ಪ್ರಕೃತಿಯ ಮನದ್ದಿರಲಿ, ಅಥವಾ ಮನದ ಪ್ರಕೃತಿಯದಿರಲಿ; ಅಂಥ ಚೆಲುವಿನ ಆಹ್ಲಾದ, ಅಗಾಧತೆಯನ್ನು ಬೆರಗುಗಣ್ಣುಗಳಿಂದ ನೋಡುವ ಮಗುವೊಂದರ ಕುತೂಹಲ ಇಲ್ಲಿಯ ಹಲವು ಕವನಗಳ ಜೀವಾಳ.

ಅಲ್ಲೊಂದು ಗೋಪಿ ಹಕ್ಕಿ; ಇಲ್ಲೊಂದು ಗೋಪಿಕೆ! ಕಂದ ಕೃಷ್ಣನ ಬರವಿಗೆ ಕಾದ ಬೃಂದಾವನದ ವಿವರಗಳನ್ನು ಬಣ್ಣಿಸುವ ಗೋಪಿ (ಮರಳಿ ಬೃಂದಾವನಕೆ) ಯಶೋದೆಯ ಮಡಿಲಲ್ಲಿ ಮಲಗಿದ್ದ ಕೃಷ್ಣನನ್ನು ತನ್ನ ಭಕ್ತಿಯ ಗಾನದಿಂದ ನಲಿಸಿದ ಗೋಪಿ (ಗೋಪೀಗಾನ) ಮತ್ತಿತರ ಕವಿತೆಗಳೆಲ್ಲವೂ ಲಯ, ಪ್ರಾಸಗಳ ಅಪ್ರಯತ್ನ ಓಘದಲ್ಲಿ ಹೊಮ್ಮಿವೆ. ಹಾಗಾಗಿ, ಗೋಪಿಹಕ್ಕಿಯ ಹಾಡು-ಶೀರ್ಷಿಕೆಯು ಒಂದು ಕವಿತೆಯ
ವಸ್ತುವಾಗಷ್ಟೇ ಅಲ್ಲ; ಇಡೀ ಕವನಸಂಕಲನಕ್ಕೇ ಧ್ವನ್ಯಾತ್ಮಕವಾಗಿಯೂ, ರೂಪಕವಾಗಿಯೂ ಒಪ್ಪುವಂತಿದೆ.

ಒಂದು ಸುಂದರ ನಸುಕು, ಒಂದು ಮುಂಜಾನೆಯಲಿ, ಮಂದಾನಿಲ, ಚಂದ್ರಾಗಮನ. ಒಂದು ಬೆಳಗು, ಕಲ್ಪನೆ..ಮುಂತಾದ ಕವಿತೆಗಳು ಪ್ರತೀ ಸಂಜೆ-ಬೆಳಗುಗಳನ್ನು ಹೊಸತಾಗಿ ನೋಡಬಲ್ಲ ಅಪರೂಪದ ಕಂಗಳ ಬೆರಗಾಗಿವೆ. ಹಾಗೆಂದು, ಕೇವಲ ರಮ್ಯಲೋಕದಲ್ಲಿ ವಿಹರಿಸುವುದಷ್ಟೇ ಕವಿಯ ಆಶಯವಲ್ಲ; ಅದಕ್ಕೇ, ಮನದ ಸ್ವ-ಕಲ್ಪಿತ ಕೋಟೆ-ಬಾಗಿಲನ್ನು ತೆರೆದು, ಬಾಹ್ಯಪ್ರಪಂಚದ ರುದ್ರ-ರಮಣೀಯತೆ, ಸೃಷ್ಟಿ-ವೈರುದ್ಧ್ಯಗಳನ್ನು ವೀಕ್ಷಿಸಿ, ಒಳಿತಿನ ಆಯ್ಕೆ ಮಾಡಿಕೊಳ್ಳಲು ಅದು ಅಂತರಂಗವನ್ನು, ಎಚ್ಚರಿಸಿ, ಪ್ರೇರೇಪಿಸಲೂಬಲ್ಲುದು!

“ಒಳಿತು-ಕೆಡುಕುಗಳೆಲ್ಲ ಒಂದರಲೇ ಇವೆ ಇಲ್ಲಿ

ನೋಡಿ ನೀನೆಲ್ಲವನು ನಿನ್ನರಿವ ಕಣ್ಣಿಂದೆ
ಮನಕೊಪ್ಪುವಂತೊಳಿತ ಮಾತ್ರವಾರಿಸಿಕೊಂಡು

ಮರಳಿ ಬಾ ನನ್ನೊಳಗೆ ನನ್ನ ಅಂತರ್ಮುಖಿಯೇ”(ಅಂತರ್ಮುಖಿ)

ಮಾಗಿ ಮಲ್ಲಿಗೆಯ ನಸು-ವರ್ಣಾಂತರವನ್ನು ಕವಿಮನ ಛೇಡಿಸುವ ಪರಿ ಮನೋಹರವಾಗಿದೆ.

“ಅರಳಿ ನಗುತಿವೆ ಹಸಿರೆಲೆ ನಡುವೆ.

ಬಿಳಿಮಲ್ಲಿಗೆಯ ಎಸಳುಗಳಲ್ಲಿ

ತಿಳಿಗೆಂಪಿನ ರಂಗದು ತಾನೇಕೆ
ಇಬ್ಬನಿ ಬಿಂದು ತಬ್ಬಲು

ಹೂವದು ನಾಚುತ ಕೆಂಪಾಗಿಹುದದೇಕೆ..”(ಮಾಗಿ ಮಲ್ಲಿಗೆ)
ನೆಚ್ಚಿನ ಕೌಟುಂಬಿಕತೆಯ ದೃಶ್ಯವನ್ನು ಕಟ್ಟಿಕೊಡುವ ಆಗಸ ಬಣ್ಣದ ನೀಲಿಯ ಗೋಡೆ, ನವ ವಧುವಾಗಿ ತವರಿನಿಂದ ತೆರಳಿದ ತಮ್ಮ ಬಾಲ್ಯಸಂಗಾತಿಯ ಜತೆಗಿನ ಸವಿನೆನಹುಗಳನ್ನು ನೆನೆಯುತ್ತ, ಬಣ್ಣಿಸುತ್ತ ಆರ್ತರಾಗುವ ಹೊಸ್ತಿಲು, ಕೊಟ್ಟಿಗೆಯ ಪುಟ್ಟ ಕರು, ಹಿತ್ತಲ ಹೂ ಬಳ್ಳಿ, ಗೂಡಿನ ಗುಬ್ಬಿಗಳ ಪ್ರಶ್ನೆಗಳಿಗೆ, ಗತಿಸಿದ ದಿನಗಳ ನೆನಪಿನ ಗಂಟು, ಬರಲಿಹ ದಿನಗಳ ನನಸಿನ ನಂಟು ಹೊತ್ತು ಸಾಗಿಹಳು ಸಂಗಾತಿಯ ಜತೆ/ ಬಾಳಿನ ತೇರನು ಎಳೆಯಲಿಕೆ- (ಅಮ್ಮಾ, ನಿನ್ನ ಮಗಳೆಲ್ಲಿ) ಎನ್ನುತ್ತ, ಸಮ್ಮಿಶ್ರಗೊಂಡ ನೋವು-ನಲಿವಿನಲ್ಲಿ ಸಂತೈಸುವ ತಾಯಿ, ಮಗಳು ಮದುಮಗಳಾದಾಗ ಅವಳನ್ನು ಬೀಳ್ಕೊಡುವ ತುಂಬುಹೃದಯದ ಕವಿತೆ (ಹಾರೈಕೆ), ಕಡೆವ ಸದ್ದು ಪಕ್ಕವಾದ್ಯ ಗೋಪಿ ಹಾಡಿಗೆ; ಲಾಲಿ ಹಾಡಿದಂತೆ ಇತ್ತು ಮಲಗಿದೂರಿಗೇ. (ಗೋಪೀಗಾನ) ಎಂಬಂಥ ಸುಂದರ ಹೋಲಿಕೆ. ಇವೆಲ್ಲ ಮಾತೃ ಹೃದಯದ ಮಮತಾಮಯ ಪ್ರಪಂಚವನ್ನು ಪರಿಚಯಿಸುತ್ತವೆ.

ಮೊಸರು ಕಡೆಯುತ್ತಿದ್ದ ತಾಯಿ ಯಶೋದೆಯ ಮಡಿಲಲ್ಲಿ ನಿದ್ರಿಸುತ್ತಿದಂತೆ ಮಲಗಿದ್ದ ಕೃಷ್ಣ, ತುಸುದೂರದ ಗೋಪಿಯ ಹಾಡಿಗೆ ದಿಗ್ಗನೆದ್ದು, ಕೊಳಲು ನುಡಿಸಿ, ಸ್ವರ ಬೆರೆಸಿ, ಹರಸುವ ಗೋಪೀಗಾನ ಒಂದು ರೂಪಕಶಕ್ತಿಯ ಕವಿತೆ, ಇವರನ್ನು ಅತ್ಯಂತ ಪ್ರಭಾವಿಸಿದ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಮತ್ತು, ಮರುಳ ಮುನಿಯನ ಕಗ್ಗ, ಹೊತ್ತಗೆಗಳು, ಸಾವಿತ್ರಿಯವರಿಗೆ ಕಂಠಪಾಠವೇ ಆಗಿಬಿಟ್ಟಿವೆ! ಇವರ ಈ ಅಪರೂಪದ ಸಾಧನೆ ಅನೇಕರಿಗೆ ತಿಳಿದಿರಲಾರದು. ನೋವು-ನಲಿವಿನ ಘಳಿಗೆಗಳಲ್ಲಿ ತಮಗೆ ಮಾರ್ಗದರ್ಶಿ ಎನಿಸಿದ ಈ ಕಗ್ಗಗಳು, ಗುರು ತಮ್ಮ ಅನುಭವದ ಬನದೊಳಾಯ್ದು ತತ್ವಗಳ ಹೂ ಕೊಯ್ದು, ಒಲುಮೆಯೆಳೆಯಲ್ಲಿ ನೇಯ್ದ ಮಾಲೆ!.. ಎಂದು ಬಣ್ಣಿಸುತ್ತ, ಆ ಮಹಾನ್‌ ವ್ಯಕ್ತಿತ್ವದ ಲೋಕಜ್ಞಾನದೆದುರು ವಿನಮ್ರತೆಯಿಂದ ಶರಣುಹೊಗುತ್ತಾರೆ.
“ಕಗ್ಗದಲಿ ಇಹುದೆಲ್ಲ ಲೋಕತತ್ವದ ಸಾರ
ನಮ್ಮ ನಿಲುವಿಗೆ ಎಟುಕದಂತೆ ಇಹುದದಪಾರ

ಈ ಜ್ಞಾನ ಶರಧಿಯಲಿ ನಾವೊಂದು ಗುಟುಕು
ಕುಡಿದರೂ ಸಾರ್ಥಕವು ಈ ನಮ್ಮ ಬದುಕು..” (ಗುರು ಡಿವಿ.ಜಿ.ಯವರಿಗೆ ಒಂದು ನಮನ)

ಮನೋಧರ್ಮ ಮತ್ತು ವಯೋಧರ್ಮಗಳ ಹೊಂದಾಣಿಕೆಯ ಕೊಂಡಿಗಳು ದುರ್ಬಲಗೊಳ್ಳುವ ಚಿತ್ರಣದಲ್ಲಿ ಇಂದ್ರಿಯ ಪ್ರಪಂಚದ ಇತಿ-ಮಿತಿಗಳ ಕ್ಷಣಭಂಗುರತೆಯನ್ನು ಸೂಚಿಸುವ ಕವಿತೆ “ಸಂಗಾತಿ”. ಒಂದೆಡೆ, ತೀವ್ರವಾಗಿ ಕಂಗೆಡಿಸಿದ ನಿರ್ವಿಣ್ಣತೆ, ಅಳಲುಗಳು- ನಿದ್ದೆ, ವಿಧಿಗೆ, ಎಂಬ ಕವಿತೆಗಳಾಗಿ, ಸೃಷ್ಟಿನಿಯಾಮಕನಲ್ಲಿ ಕವಿಯ ಯಾತನೆಗೆ ದನಿಯಾಗಿ ನಿವೇದನೆಗೊಂಡಿವೆ; ಇನ್ನೊಂದೆಡೆ, ಭಾವನೆಗಳ ಸಂಘರ್ಷಗಳಿಗೆ ಅಂಜದೆ, ಸಮತೋಲನವನ್ನು ನಿರ್ಲಿಪ್ತಿಯಿಂದ ನಿಭಾಯಿಸುವ ಕಲೆಗಾಗಿ, ಅವೆಲ್ಲವನ್ನೂ ತೋಡಿಕೊಂಡು ಹಗುರಾಗುವ ಪರಿಹಾರೋಪಾಯಕ್ಕೆ ಮನ ಆಶ್ವಾಸನೆ ನೀಡುವುದು, ಬಿಳಿಯ ಹಾಳೆಯಾಗಿ!

ಚೆಲ್ಲಿಬಿಡು ನಿನ್ನೆಲ್ಲ ಮನದ ತುಮುಲಗಳ
ಚೆಲ್ಲಿಬಿಡು ಬರಿದಾದ ನನ್ನೆದೆಯ ಮೇಲೆ.. ಎನ್ನುತ್ತ,
ಚೆಲ್ಲಿಬಿಡು ನಿನ್ನೆಲ್ಲ ಬೇಕು-ಬೇಡಗಳನು
ನೀ ತೊರೆದುದನು ಮಾತ್ರ ನಾ ಹೀರಿಕೊಳುವೆನು.”(ಚೆಲ್ಲಿಬಿಡು)

ಉದ್ದೀಪ್ತ ಭಾವಸಾಂದ್ರತೆಯೊಂದು, ನಿರಾಕಾರದಲ್ಲೇ ಸಮುಚ್ಚಯಗೊಂಡು, ಸಾಹಿತ್ಯವೋ, ಸಂಗೀತವೋ ಅಥವಾ ಲಲಿತಕಲೆಗಳ ಇನ್ನಾವುದೋ ಆಯಾಮದಲ್ಲೋ,- ಅಭಿವ್ಯಕ್ತಿಯಾಗಬಲ್ಲ ಒಂದು ಮಜಲಿಗೆ ಹೋಲಿಕೆಯಾಗಿಯೂ ನಾವಿದನ್ನು ನೋಡಬಹುದು. ಹೇಗೆ ಶಿಲ್ಪಿಯೊಬ್ಬ ತನ್ನ ಕೆತ್ತನೆಯಲ್ಲಿ, ಚಿತ್ರಕಾರ ತನ್ನ ಚಿತ್ರಣದಲ್ಲಿ, ಸಂಗೀತಕಾರ ತನ್ನ ಸಂಗೀತದಲ್ಲಿ, ನರ್ತಕ/ಕಿ ತನ್ನ ಲಾಸ್ಯದಲ್ಲಿ. ಒಟ್ಟಾರೆ- ಮನೋಭೂಮಿಕೆಯಲ್ಲಿ ಅದರದರ ರಸದ್ರವ್ಸಂಗ್ರಹಗೊಳ್ಳುತ್ತಿದ್ದಂತೆ ಅದರನುಭವಕ್ಕೊಳಪಡುವ, ಮತ್ತು ಅದೇ ಕ್ಷಣದಲ್ಲಿ, ಇನ್ನೊಂದು ಮಾಧ್ಯಮದಲ್ಲಿ ಪ್ರಕಟಗೊಳಿಸಲ್ಪಡುವ- ಪ್ರಕ್ರಿಯೆಯ ಅಲಿಖಿತ ಗುಣಧರ್ಮದಂತೆ!

ಶ್ರೀಮತಿ ಸಾವಿತ್ರಿ ಕೃಷ್ಣಮೂರ್ತಿಯವರ ಕಾವ್ಯ ವಿಕಾಸದ ಹಾದಿಗೆ ಅದರದ್ದೇ ಆದ ಭದ್ರ ಬುನಾದಿಯಿದೆ- ಮಲೆನಾಡಿನ ಸೊಗಡಿನ ಗಮಕ, ಜೀವನಾದರ್ಶ, ಸಂಗೀತ-ಸಾಹಿತ್ಯಗಳ ಸುಸಂಸ್ಕೃತಿಯೇ ಸಿರಿತನ- ಎಂದು ನಂಬಿದ ತುಂಬುಕುಟುಂಬದ ಅರಕೆ, ಅಂತರಿಕ ಸತ್ವವಲ್ಲದೆ, ತವರು ಮನೆಘಟ್ಟ, ಮತ್ತು ಗಾರ್ಹಸ್ಥ್ಯದ ನೆಲೆಯಾದ ಕಣಗಲಘಟ್ಟ- ಎರಡೂ ನೆಲೆಗಳಲ್ಲಿ. ಇನ್ನು, ನಮ್ಮ ಕನ್ನಡದ ಹಿರಿಯ ಕವಿ-ಪರಂಪರೆಯು ಕೊಡುವ ಸ್ಫೂರ್ತಿ ಪ್ರೇರಣೆಗಳಂತೂ ಸಾಹಿತ್ಯಪ್ರೇಮಿಗಳಿಗೆ ಅರಸಿದಷ್ಟೂ ಸಿಗುವಂಥದು; ಹಾಗಾಗಿ, ಇವರ ಭಾವಪರವಶತೆ ಕವಿತೆಯಾಗಿ ಹೊಮ್ಮುವಾಗ, ಬದುಕಿನ ಬಗೆಗೆ ತಾನು ಕಂಡುಕೊಂಡ ತತ್ವ-ಸೌಂದರ್ಯವನ್ನು ತನ್ನದೇ ಮೆಲುದನಿಯಲ್ಲಿ ಸುಲಭಗ್ರಾಹ್ಯತೆಯಲ್ಲೂ, ಸರಾಗವಾಗಿ ಹಾಡಬಲ್ಲ ಸುಲಲಿತಗತಿಯಲ್ಲೂ ಹೇಳಬಲ್ಲದು. ಎಲ್ಲೂ ಅತಿರಂಜಿತ ವರ್ಣನೆಗಳ ಗೋಜಿಗೆ ಹೋಗದೇ, ಕೇವಲ ತಮ್ಮ ನಿರಾಡಂಬರ ಶೈಲಿಯಿಂದಲೇ ಈ ಕವಿತೆಗಳು ಓದುಗರ ಮನ ತಟ್ಟಬಲ್ಲವು.

“ಅಂತರಾಳದೊಳೇನ ಹೆಪ್ಪುಗಟ್ಟಿಸಬೇಡ
ಕೆಸರಾಗಿ ಅದು ನಿನ್ನ ಉಸುಬಿನೊಳಗೆಳೆಯುವುದು
ಏನಿರಲಿ ಹೇಗಿರಲಿ ಹರಿಸಿಬಿಡು ಗೀತೆಯಲಿ
ನಿನ್ನಂತರಾಳದಲಿ ತಿಳಿನೀರದೊಂದಿರಲಿ”. (ಅಂತರಂಗದ ಮಾತು)
ಇಂಥ ಆಶಯವೇ ಅವರ ಕವಿತೆಗಳ ಆವಿರ್ಭಾವಕ್ಕೆ ಮತ್ತು ಅನಾವರಣಕ್ಕೆ ಒಂದು ರಹದಾರಿಯಾಗಿದೆ. ಒಂದು ಹೃದ್ಯ ಯೋಚನೆ, ಒಂದು ಒಗ್ಗಟ್ಟಿನ ಯೋಜನೆ ಈ ಗೋಪಿ ಹಕ್ಕಿಯ ಹಾಡನ್ನು ಮತ್ತಷ್ಟು ಮಧುರವಾಗಿಸಿದೆ; ಅದೆಂದರೆ, ಇವರು ತನಗೆ ತೋಚಿದಂತೆ ಕವಿತೆಗಳನ್ನು ರಚಿಸುತ್ತ (ನಿಃಸ್ಸಂಶಯವಾಗಿ ಇನ್ನೂ ಅದೆಷ್ಟೋ ಕವಿತೆಗಳು ಅವರ ಭಂಡಾರದಲ್ಲಿವೆ) ಅಲ್ಲಲ್ಲಿ ಬರೆದಿಡುತ್ತ, ಯಾವೊಂದೂ ನಿರೀಕ್ಷೆಯಾಗಲೀ, ಮಹತ್ವಾಕಾಂಕ್ಷೆಯಾಗಲೀ ಇಲ್ಲದೆ, ಸಂತೃಪ್ತಿಯಿಂದಿರುವಾಗ, ಅವರ ಮನೆಯವರೆಲ್ಲ ಸೇರಿ, ತಮ್ಮ ಒಲವಿನ ಜೀವಕ್ಕೆ ತಮ್ಮದೊಂದು ಆತ್ಮೀಯ ಕೊಡುಗೆಯಾಗಿ, ಈ ಕವನ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ; ಇದು ತುಂಬ ಅಭಿನಂದನೀಯ ಮತ್ತು ಶ್ಲಾಘನೀಯ ಕಾರ್ಯ. ಅಮ್ಮನ ಕವಿತೆಗಳ ಜೊತೆಜೊತೆಗೆ ಮಗಳು (ಶ್ರೀಮತಿ ಅಂಜಲಿ ರಾಮಮೂರ್ತಿ) ಸ್ವತಃ ರಚಿಸಿದ ಸುಂದರ ಕಲಾಕೃತಿಗಳ ವಿನ್ಯಾಸಗಳು ಚೆಂದದ ಕವಿತೆಗಳಿಗೆ ಅಂದದ ಪುಟವಿಕ್ಕಿದಂತಿದೆ. ಜೀವನ್ಮುಖೀ ದೃಷ್ಟಿಕೋನ, ಪ್ರಾಂಜಲತೆ, ಅಂತರಂಗವ ಶೋಧಿಸುವ ಹಂಬಲ, ಹಾಡಾಗಿ ತುಡಿಯುವ ತವಕಗಳ ಈ ಗೋಪೀ-ಹಕ್ಕಿಗಳ ಹಾಡಿನ ಇನಿದನಿಯು ಕಾಡಲ್ಲೂ, ನಾಡಲ್ಲೂ ಸುಮಧುರವಾಗಿ ಪಸರಿಸಲಿ ಎಂಬ ಶುಭಾಶಯಗಳು.

‍ಲೇಖಕರು Admin MM

April 22, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: