ಕಠಾರಿ ಅಂಚಿನ ನಡಿಗೆ..

ಸಾಮಾಜಿಕ ಚಿಂತಕರಾದ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ ‘ಕಠಾರಿ ಅಂಚಿನ ನಡಿಗೆ’ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

‘ಚಿಕ್ಕು ಕ್ರಿಯೇಷನ್ಸ್’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ವಿದ್ವಾಂಸರಾದ ಪುರುಷೋತ್ತಮ ಬಿಳಿಮಾಲೆ ಅವರು ಬರೆದಿರುವ ಬೆನ್ನುಡಿ ಹಾಗೂ ಲೇಖಕರ ಮಾತು ನಿಮ್ಮ ಓದಿಗಾಗಿ ಇಲ್ಲಿದೆ.

**

ಪುರುಷೋತ್ತಮ ಬಿಳಿಮಲೆ

ಬೆನ್ನುಡಿ

ಚಂದ್ರಪ್ರಭ ಕಠಾರಿಯವರ ಪ್ರಸ್ತುತ ಪುಸ್ತಕ ʼಕಠಾರಿ ಅಂಚಿನ ನಡಿಗೆʼ, ಅವರು ಸಾಂದರ್ಭಿಕವಾಗಿ ಬರೆದ ೩೪ ಅಂಕಣ ಬರೆಹಗಳ ಸಂಕಲನ. ನೇರ ಮತ್ತು ಖಚಿತ ಮಾತುಗಳಿಗೆ ಹೆಸರಾಗಿರುವ ಅವರು ಈ ಪುಸ್ತಕದಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳು ಕೂಡಾ ಎಷ್ಟು ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಹೀಗೆ ಬರೆಯಲು ಬೇಕಾದ ಧೈರ್ಯ ಅವರಲ್ಲಿರುವುದು ವಿಶೇಷವೇ ಸರಿ. ಅನೇಕರು ಗುಟ್ಟಾಗಿ ಮಾತಾಡಲೂ ಹೆದರುವ ವಿಷಯಗಳ ಬಗ್ಗೆ  ಕಠಾರಿಯವರು ಇಲ್ಲಿ ಯಾವ ಸಂಕೋಚವೂ ಇಲ್ಲದೆ ಬರೆದಿದ್ದಾರೆ.

ಕಠಾರಿಯವರ ಹರಿತವಾದ  ವ್ಯಂಗ್ಯ-ವಿಡಂಬನೆಗಳು ವರ್ತಮಾನದ ಹಲವು ಘಟನೆಗಳ ಸುತ್ತ ಬೆಳೆದಿವೆ. ಕೋಮುವಾದ, ದ್ವೇಷ ಭಾಷಣ, ಧಾರ್ಮಿಕ ಅವಾಂತರಗಳು, ಬಡವರ ಮನೆಯ ಮೇಲೆ ಮಾತ್ರ ಹರಿಯುವ ಬುಲ್ಡೋಜರುಗಳು, ಭ್ರಷ್ಟಾಚಾರದ ಹೆಚ್ಚಳ, ಪಠ್ಯ ಪುಸ್ತಕ ರಚನೆಯ ಬಿಕ್ಕಟ್ಟುಗಳು,  ಮಾಧ್ಯಮಗಳ ದಯನೀಯ ಸ್ಥಿತಿ, ದಿಢೀರನೆ ಹುಟ್ಟಿ ಮಾಯವಾದ ಉರಿಗೌಡ- ನಂಜೇಗೌಡರು, ವಾಟ್ಸಪ್‌ ವಿಶ್ವವಿದ್ಯಾಲಯದ ಪದವೀಧರರ ಜ್ಞಾನ ಮೀಮಾಂಸೆ, ಸುಳ್ಳುಗಳ ವಿಜೃಂಭಣೆ, ನಕಲಿ ನಾಯಕರ ಕಿತಾಪತಿಗಳು, ಸಮಾಜವನ್ನು ಹಿಂದಕ್ಕೆ ತಳ್ಳುತ್ತಿರುವ ಮೌಢ್ಯಗಳು, ರಾಜಕಾರಣಿಗಳ ಹಾಸ್ಯಾಸ್ಪದ ಹೇಳಿಕೆಗಳು, ಟ್ರೋಲ್‌ ಗಿರಾಕಿಗಳ ಕಷ್ಟಗಳೇ ಮೊದಲಾದ ಹಲವು ಸಂಗತಿಗಳು ಇಲ್ಲಿ ಕಠಾರಿಯವರ ಮಾತಿನೇಟಿಗೆ ಗುರಿಯಾಗಿವೆ. 

ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಲಂಕೇಶ್‌ ಮೊದಲಾದವರು ವ್ಯಂಗ್ಯವನ್ನು ಪರಿಣಾಮಕಾರಿಯಾಗಿ ಬಳಸಿದ್ದುಂಟು. ಚಾಪ್ಲಿನ್‌ ಈ ವಿಷಯದಲ್ಲಿ ಅದ್ಭುತವನ್ನೇ ಸಾಧಿಸಿದ. ನಮ್ಮ ಸಾಮಾನ್ಯ ಗ್ರಹಿಕೆಗಳಲ್ಲಿಯ ವಿರೋಧಾಭಾಸಗಳನ್ನು ಅವರು ದಿಟ್ಟವಾಗಿ ಬಯಲಿಗೆಳೆದಿದ್ದರು.  ಲಂಕೇಶರು ಬಳಸಿದ ʼಬಂʼ ಮತ್ತು ʼಗುಂʼ ಪದಗಳು ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನೇ ಅಲ್ಲಾಡಿಸಿದ್ದವು. ಈ ಪರಂಪರೆಯನ್ನು ತನ್ನದೇ ರೀತಿಯಲ್ಲಿ ಮುಂದುವರೆಸಿರುವ ಚಂದ್ರಪ್ರಭ ಕಠಾರಿಯವರು ವರ್ತಮಾನ ಕಾಲದಲ್ಲಿ ಪ್ರಚಲಿತದಲ್ಲಿರುವ ಅನೇಕ ಪದಗಳನ್ನು ಈ ಪುಸ್ತಕದಲ್ಲಿ  ಬಳಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವು ಭಾಷಾಭ್ಯಾಸಿಗಳ ಪ್ರಯೋಜನಕ್ಕೂ ಬರಬಹುದು.

ಕಠಾರಿಯವರ ವ್ಯಂಗ್ಯ ಮತ್ತು ವಿಡಂಬನೆಗಳು ವಾಸ್ತವದ ವೈರುದ್ಧ್ಯಗಳನ್ನು ದಿಟ್ಟವಾಗಿ ತೆರೆದಿಡುತ್ತವೆ. ಇವುಗಳ ಓದು  ಸಮಾಜದ ಹಲವು ಬೆಳವಣಿಗೆಗಳ  ಬಗ್ಗೆ ಮಾತಾಡಲು ಮತ್ತು ಚರ್ಚಿಸಲು ಪ್ರಚೋದನೆ ನೀಡುತ್ತದೆ. ಮಾನವನ ಮೂರ್ಖತನಗಳ ಬಗ್ಗೆ ಲೇಖಕರು ಬರೆಯದೇ ಹೋದರೆ ಮತ್ಯಾರು ಬರೆಯಬೇಕು?

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

ಹಿಂತಿರುಗಿ ನೋಡಿದರೆ, ʼಕಠಾರಿ ಅಂಚಿನ ನಡಿಗೆʼ ಪುಸ್ತಕವಾಗಿ ಪ್ರಕಟಗೊಳ್ಳುತ್ತಿರುವುದು ಅಚ್ಚರಿಯ ಸಂಗತಿಯಾಗಿ ಕಾಣುತ್ತದೆ.

ಕಳೆದ ವರ್ಷದಲ್ಲಿ – ಆಳುವ ಪ್ರಭುತ್ವವನ್ನು ಓಲೈಸುವ ಜೊತೆಗೆ ಅದರ ಮನೋಧೋರಣೆಯನ್ನು ಕೊಂಡಾಡಿ, ಚಪ್ಪರಿಸುವ ಜನರನ್ನು ಮೆಚ್ಚಿಸಿ, ರಂಜಿಸಿ ಅವರಿಗೆ ತಿಳಿಯದಂತೆ ಅವರ ಜೇಬಿಗೆ ಕೈಹಾಕಿ ಹಣ ಮಾಡುವ ಉದ್ದೇಶದಿಂದಲೇ ತಯಾರಾದ ಪ್ರಾಪಗಂಡ ಸಿನಿಮಾವೊಂದು ಬಿಡುಗಡೆಯಾಗಿತ್ತು. ಆನ್‌ ಲೈನ್‌ ಸುದ್ದಿ ಪತ್ರಿಕೆಯ ಸಂಪಾದಕ, ಗೆಳೆಯ ಆ ಸಿನಿಮಾವನ್ನು ಹೊಗಳಿ ಬರೆದ ಲೇಖನವನ್ನು ಪ್ರಕಟಿಸಿದ್ದ. ಲೇಖನದಲ್ಲಿನ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ಪತ್ರ ಬರೆದೆ. ಪತ್ರಕರ್ತ ಗೆಳೆಯ ಅದನ್ನು ಪ್ರಕಟಿಸಲಿಲ್ಲ. ಆದರೆ, ಅದೇ ವಾಟ್ಸಪ್‌ ಗುಂಪಿನಲ್ಲಿದ್ದ ಮತ್ತೊರ್ವ ಗೆಳೆಯ, ಲೇಖಕ ಹನುಮಂತ ಹಾಲಿಗೇರಿ ಕನ್ನಡ ಒನ್‌ ನ್ಯೂಸ್‌ ಆನ್‌ ಲೈನ್‌ ಪತ್ರಿಕೆಗೆ ಆ ಬಗ್ಗೆ ಲೇಖನ ಬರೆಯಲು ಹೇಳಿ ಪ್ರಕಟಿಸುವ ಭರವಸೆಯಿತ್ತರು. ಲೇಖನ ಪ್ರಕಟವೂ ಆಯಿತು.

ಹನುಮಂತ ಹಾಲಿಗೇರಿ ಅಲ್ಲಿಗೆ ಬಿಡದೆ ಪ್ರತಿವಾರ ಪ್ರಚಲಿತ ಸಂಗತಿಗಳ ಬಗ್ಗೆ ಅಂಕಣ ಬರೆಯಲು ಒತ್ತಾಯಿಸಿದರು. ಮನಸ್ಸಿಗೆ ತೋಚಿದ ಗಳಿಗೆಯಲ್ಲಿ ಕೂತು ಬರೆಯುವವನಿಗೆ ಪ್ರತಿವಾರ ತಪ್ಪದೆ ಬರೆಯುವ ಶಿಸ್ತನ್ನು ಪಾಲಿಸಲು ಸಾಧ್ಯವೇ? ಎಂದು ಹಿಂದೇಟು ಹಾಕಿದೆ. ಆದರೆ, ಛಲ ತೊಟ್ಟವನಂತೆ ಗೆಳೆಯ ಪಟ್ಟು ಬಿಡದೆ, ʼನಿಮಗದು ಅಸಾಧ್ಯವಾದುದಲ್ಲ, ಬರೀರಿʼ ಎಂದು ಪ್ರೋತ್ಸಾಹಿಸಿದರು. ತಾನೇ ಅಂಕಣಕ್ಕೆ ʼಕಠಾರಿ ಅಂಚಿನ ನಡಿಗೆʼ ಎಂಬ ಶೀರ್ಷಿಕೆಯನ್ನು ಕೊಟ್ಟರು.

ಆಗ ಬರೆದ ಅಂಕಣಗಳ ಗುಚ್ಚ ನಿಮ್ಮ ಕೈಲಿದೆ. ಹನುಮಂತ ಹಾಲಿಗೇರಿ ನನ್ನಲ್ಲಿ ಧೈರ್ಯ ತುಂಬದಿದ್ದರೆ ಈ ಬರಹಗಳನ್ನು ಬರೆಯಲು ಆಗುತ್ತಿರಲಿಲ್ಲ. ಆ ಕಾರಣಕ್ಕಾಗಿ ಹನುಮಂತ ಹಾಲಿಗೇರಿಯನ್ನು ನಾನು ಪ್ರೀತಿಯಿಂದ ನೆನೆಯುತ್ತೇನೆ ಮತ್ತು ಅವರಿಗೆ ನನ್ನ ಕೃತಜ್ಞತೆಗಳು.

ಅಂಕಣಗಳನ್ನು ಪುಸ್ತಕವಾಗಿ ಪ್ರಕಟಿಸುವ ಯೋಚನೆಯನ್ನು ಹನುಮಂತ ಹಾಲಿಗೇರಿ ತಲೆಯಲ್ಲಿ ತುಂಬಿದ್ದರೂ, ಅದು ಈ ಹೊತ್ತಲ್ಲಿ ಸಾಕಾರವಾಗುತ್ತದೆಂಬ ಕಲ್ಪನೆ ಇರಲಿಲ್ಲ.

ದೇಶ ರಾಜಕೀಯವಾಗಿ ಮತ್ತೊಂದು ಮಗ್ಗಲಿಗೆ ಹೊರಳುವ ಈ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವವರು, ಸಾಮಾಜಿಕ ಕಾಳಜಿಯುಳ್ಳವರು, ಸಂವೇದನಾಶೀಲರು ಭವಿಷ್ಯದ ಬಗ್ಗೆ ಆತಂಕದಲ್ಲಿರುವುದಂತೂ ನಿಜ. “ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗುತ್ತದೆ” ಎಂದು ಖ್ಯಾತ ಸಿನಿಮಾ ನಟ ಪ್ರಕಾಶ್‌ ರಾಜ್ ಹೇಳುತ್ತಾರೆ.  ಹೌದು…ಪ್ರಜ್ಞಾವಂತ ನಾಗರೀಕರೆಲ್ಲರೂ ಈಗ ಮಾತಾಡಲೇ ಬೇಕಾದ ದುರಿತಕಾಲದಲ್ಲಿದ್ದೇವೆ.

ಹಾಗಾಗಿ, ಈ ವಿಡಂಬನಾತ್ಮಕ ಅಂಕಣಗಳನ್ನು ಮುಂದೆಂದೋ ಪುಸ್ತಕವಾಗಿ ತರುವ ಬದಲಿಗೆ ಈಗಲೇ ಪ್ರಕಟಿಸಿ – ಆಳ್ವಿಕೆಯಿಂದ ಆದ ನೋವು, ಸಂಕಟಗಳನ್ನು ಕಾಲ ಸರಿದಂತೆ ಮರೆಯುವ  ಜನರ ನೆನಪನ್ನು ಕೆದಕುವುದು ಈ ಕಾಲದ ಜರೂರತ್ತು ಅನ್ನಿಸಿತು.  

ಕೆಲವೇ ದಿನಗಳಲ್ಲಿ ಪುಸ್ತಕ ಹೊರ ತರುವುದು ಕಷ್ಟಸಾಧ್ಯವಾಗಿತ್ತು. ಗೆಳೆಯರ ಒತ್ತಾಸೆಯೂ ಇದ್ದದ್ದರಿಂದ ಇದು ಸಾಧ್ಯವಾಯಿತು.ಅದರಲ್ಲೂ ಎಮ್. ನಾಗರಾಜ ಶೆಟ್ಟಿ‌ ಅವರು ಎಂದಿನಂತೆ ಸಲಹೆ, ಸೂಚನೆ ಕೊಡುತ್ತ ನನ್ನ ಬೆನ್ನಿಗಿದ್ದರು. ಅಲ್ಲದೆ, ಕರಡು ತಿದ್ದುಪಡಿಯನ್ನು ಶೀಘ್ರವಾಗಿ ಮಾಡಿಕೊಟ್ಟಿದ್ದಾರೆ. ಅವರ ಉಪಕಾರವನ್ನು ಎಂದಿಗೂ ಮರೆಯಲಾರೆ. ಅವರಿಗೆ ಧನ್ಯವಾದಗಳು.

ಈ ಮೊದಲೇ ಹೇಳಿದಂತೆ ಸಮಯ ಬಹಳ ಕಡಿಮೆ ಇದ್ದು ಮುನ್ನುಡಿ, ಬೆನ್ನುಡಿಗಾಗಿ ಯಾರನ್ನು ಕೇಳುವುದೆಂದು ಗೊಂದಲದಲ್ಲಿದ್ದೆ. ಡಾ. ಪುರುಷೋತ್ತಮ ಬಿಳಿಮಲೆಯವರನ್ನು ಕೇಳುವ ಅಪೇಕ್ಷೆಯಿದ್ದರೂ ಹಿಂಜರಿಕೆ ಇತ್ತು. ಫೋನಿನಲ್ಲಿ ಸಂಪರ್ಕಿಸಿದೆ. ನನ್ನ ನಿರೀಕ್ಷೆ ಮೀರಿ ಬಹಳ ಆತ್ಮೀಯವಾಗಿ ಮಾತಾಡಿ, ಒಂದು ದಿನದೊಳಗೆ ಮೆಚ್ಚುಗೆಯ, ಮೌಲಿಕ ಮತ್ತು ಅರ್ಥಪೂರ್ಣವಾದ ಬೆನ್ನುಡಿಯನ್ನು ಬರೆದುಕೊಟ್ಟು ಉಪಕರಿಸಿದ್ದಾರೆ. ಅವರಿಗೆ ನಾನು  ಎಂದಿಗೂ ಋಣಿ.

ಕನ್ನಡದ ಪ್ರಮುಖ ಕತೆಗಾರ್ತಿ ಸುಮಂಗಲಾ ಅವರಿಗೆ ಕೆಲವು ಅಂಕಣಗಳನ್ನು ಕಳುಹಿಸಿ ಅನಿಸಿಕೆ ತಿಳಿಸಲು ಕೋರಿದ್ದೆ. ಅವರ ವಿಮರ್ಶಾತ್ಮಕ ಬರಹ ಇಡೀ ಪುಸ್ತಕವನ್ನು ಪ್ರತಿನಿಧಿಸುವಂತಿದೆ. ಅವರ ಪ್ರೀತಿ, ವಿಶ್ವಾಸಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಅಂಕಣಗಳ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸಿ ಮೆಚ್ಚುಗೆ ಸೂಚಿಸಿದ ಚಿಂತಕರಾದ ಶ್ರೀಪಾದಭಟ್‌ ಮತ್ತು ಶಿವಸುಂದರ್‌ ಅವರನ್ನು ನೆನೆಯುತ್ತೇನೆ.

ಅಂಕಣ ಬರಹಗಳನ್ನು ಪ್ರಕಟಿಸಿದ ಕನ್ನಡ ಒನ್  ನ್ಯೂಸ್ ಪತ್ರಿಕಾ ಬಳಗ ಮತ್ತು ಪೀಪಲ್ ಮೀಡಿಯಾದ ಗುಲಾಬಿ ಬಿಳಿಮಲೆಯವರಿಗೆ  ಧನ್ಯವಾದಗಳು.

ಈ ಅಂಕಣ ಬರಹಗಳನ್ನು ಪ್ರೀತಿಯಿಂದ ಪ್ರಕಟಿಸುತ್ತಿರುವ ಪ್ರಕಾಶಕರಾದ ಚಿಕ್ಕು ಕ್ರಿಯೇಷನ್ಸ್‌ ನ ಸುಷ್ಮಾ ಕಠಾರಿ‌ ಅವರಿಗೆ ಕೃತಜ್ಞತೆಗಳು. ಅಲ್ಪಾವಧಿಯಲ್ಲಿ ಅಂದವಾಗಿ ಪುಟವಿನ್ಯಾಸ ಮತ್ತು ಆಕರ್ಷಣೀಯ ರಕ್ಷಾಪುಟ ರಚಿಸಿಕೊಟ್ಟ ವಿ ಆರ್‌ ಕಾರ್ಪೆಂಟರ್‌ ಅವರಿಗೆ ನಮನಗಳು.

ಸಮಕಾಲೀನ ವಿಡಂಬನಾತ್ಮಕ ಬರಹಗಳು ಒಂದು ವಿಷಮ ಕಾಲಘಟ್ಟವನ್ನು ನಿಮ್ಮ ಕಣ್ಮುಂದೆ ತಂದು ನಿಲ್ಲಿಸಬಹುದು. ಚಿಂತನೆಗೆ ಹಚ್ಚಬಹುದು. ಹಾಗಾದಲ್ಲಿ ಈ ಬರಹಗಳು ಸಾರ್ಥಕತೆಯನ್ನು ಕಂಡಂತೆ. ಪುಸ್ತಕವನ್ನು ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ಅದಕ್ಕಾಗಿ ನಾನು ಕಾಯುತ್ತೇನೆ.

ಚಂದ್ರಪ್ರಭ ಕಠಾರಿ

**

‍ಲೇಖಕರು Admin MM

April 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: