‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..

ಡಾ ವಸುಂಧರಾ ಭೂಪತಿ

**

ಮಲಯಾಳಂ‘ಧನ್ಯವಾದಗಳು.. ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಕೃತಿ ಪ್ರಕಟವಾಗಿದೆ.

ರಾಸಿತ್ ಅಶೋಕನ್ ಅವರ ಈ ಕೃತಿಯನ್ನು ಕೆ ಪ್ರಭಾಕರನ್ ಅನುವಾದಿಸಿದ್ದಾರೆ.

ಅಸ್ಮಿತೆ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಖ್ಯಾತ ಸಾಹಿತಿ ಡಾ ವಸುಂಧರಾ ಭೂಪತಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.

**

ಕನ್ನಡದಲ್ಲಿ ಆರೋಗ್ಯ ಸಾಹಿತ್ಯದ ಕೃತಿಗಳ ಫಸಲು ಸಮೃದ್ಧ. ಕಾಯಿಲೆಯ ಬಗ್ಗೆ ಅರಿವು ಮೂಡಿಸಲು, ಆರೋಗ್ಯ ರಕ್ಷಣೆಗೆ ಇಂಥ ಸಾಹಿತ್ಯದ ಅವಶ್ಯಕತೆ ಇದೆ. ಆದರೆ ರೋಗಾನುಭವ ಕಥನಗಳು ಕನ್ನಡದಲ್ಲಿ ಕಡಿಮೆ. ಡಾ. ಚಂದ್ರಪ್ಪ ಗೌಡರ ‘ನನಗೆ ಬೈಪಾಸ್ ಆಯಿತು’, ಬಿ.ವಿ. ಭಾರತಿಯವರ ‘ಸಾಸಿವೆ ತಂದವಳು’ ಕೃತಿಗಳನ್ನು ಉದಾಹರಿಸಬಹುದು. ‘ಧನ್ಯವಾದಗಳು, ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಮೂಲ ಮಲಯಾಳಂನಲ್ಲಿ ರಾಸಿತ್ ಅಶೋಕನ್ ಅವರಿಂದ ರಚಿತವಾಗಿದ್ದು, ಅದನ್ನು ಕೆ. ಪ್ರಭಾಕರನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾವು ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ, ವಾಪಸು ಕಳಿಸುವಂತಹ ಛಾತಿ ಹೊಂದಿದ ರೋಗಿಯೊಬ್ಬರ ಕಥನ ಇದು.

ಕಾಯಿಲೆ ಆರಂಭವಾದಾಗಿನಿಂದ ತಾನು ಅನುಭವಿಸಿದ ನೋವಿನ ಕ್ಷಣಗಳನ್ನು ಓದುಗರಿಗೆ ಹೃದ್ಯವಾಗುವಂತೆ ಲೇಖಕರು ವಿವರಿಸಿದ್ದಾರೆ. ‘ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಅಪರೂಪದ ಕಾಯಿಲೆ. ಭದ್ರಾವತಿಯ ಲೋಕೇಶ್ವರ್ ಅವರು ಈಗೊಂದು ತಿಂಗಳ ಹಿಂದೆ ಕರೆ ಮಾಡಿ, ಶಿವಮೊಗ್ಗದ ಗೆಳೆಯ ಕೆ. ಪ್ರಭಾಕರನ್ ಮಲಯಾಳಂನಿಂದ ಅನುವಾದಿಸಿದ ಕೃತಿಯೊಂದಕ್ಕೆ ಮುನ್ನುಡಿ ಬರೆದುಕೊಡಲು ಕೇಳುತ್ತಿರುವುದರ ಬಗ್ಗೆ ತಿಳಿಸಿದ್ದರು. ನಂತರ ಪ್ರಭಾಕರನ್ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ತಿಳಿಸಿದಾಗ ಒಪ್ಪಿಕೊಂಡು, ಹಸ್ತಪ್ರತಿಯನ್ನು ಕಳುಹಿಸಿಕೊಡಲು ಹೇಳಿದೆ. ‘ಗಿಲ್ಲನ್ ಬ್ಯಾರಿ ಸಿಂಡ್ರೋಮ್’ನಿಂದ ಬಳಲಿದ ರೋಗಿಯನ್ನು ಹತ್ತಿರದಿಂದ ಕಂಡಿದ್ದೆ. ಜನಸಾಮಾನ್ಯರಿಗೆ ಈ ಕಾಯಿಲೆ ಬಗ್ಗೆ ಅರಿವೇ ಇರುವುದಿಲ್ಲ. ಬಹಳಷ್ಟು ವೃತ್ತಿನಿರತ ವೈದ್ಯರು ತಮ್ಮ ಇಡೀ ವೃತ್ತಿ ಬದುಕಿನಲ್ಲಿ ಒಬ್ಬ ಇಂತಹ ರೋಗಿಯನ್ನು ಕಂಡಿರಲಾರರು.

ಈ ಕೃತಿಯನ್ನು ಓದುತ್ತಿದ್ದಂತೆ ೨೦೧೫ರಲ್ಲಿ ಗಿಲ್ಲನ್ ಬ್ಯಾರಿ ಸಿಂಡ್ರೋಮ್‌ಗೆ ತುತ್ತಾಗಿ ಮೂರು ತಿಂಗಳುಗಳಿಗೂ ಹೆಚ್ಚು ಕಾಲ ಐಸಿಯು ವೆಂಟಿಲೇಟರ್‌ನಲ್ಲಿ ಕಳೆದಿದ್ದ ಶರತ್‌ನ ಚಿತ್ರ ಕಣ್ಮುಂದೆ ಬಂತು. ನನ್ನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪದ್ಮಾಳ ಇಪ್ಪತ್ತೆರಡು ವರ್ಷದ ಮಗ ಶರತ್‌ಗೆ ಇದ್ದಕ್ಕಿದ್ದಂತೆ ಬೆಳಿಗ್ಗೆ ಏಳುವುದೇ ಕಷ್ಟವಾಯಿತು. ಕೈ ಕಾಲುಗಳಷ್ಟೇ ಏಕೆ ಬೆರಳುಗಳನ್ನೂ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಅವನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಐಸಿಯುನಲ್ಲಿ ವೆಂಟಿಲೇಟರ್ ಅವನಿಗೆ ಬದುಕಾಗಿತ್ತು. ಆ ಸಮಯದಲ್ಲಿ ಪದ್ಮಾ ಮತ್ತು ಅವಳ ಪತಿ ಗಿರಿರಾಜ್ ಅನುಭವಿಸಿದ ನೋವು, ಸಂಕಷ್ಟ, ಸುರಿಸಿದ ಕಣ್ಣೀರಿಗೆ ಲೆಕ್ಕವಿಲ್ಲ. ದೈಹಿಕ, ಮಾನಸಿಕ, ಆರ್ಥಿಕ ಬಳಲಿಕೆಯನ್ನು ತಂದೊಡ್ಡುತ್ತದೆ. ಐದು ಲಕ್ಷಕ್ಕೂ ಮೀರಿ ಚಿಕಿತ್ಸಾ ವೆಚ್ಚ ತಗುಲಿದ್ದು, ಸಾಲದ ಹೊರೆ ಅವರ ಬೆನ್ನಿಗೇರಿತ್ತು. ಒಂದು ವರ್ಷದ ಚಿಕಿತ್ಸೆ, ಆರೈಕೆಯಲ್ಲಿ ಮತ್ತೆ ಸಹಜ ಸ್ಥಿತಿಗೆ ಮರಳಿದ ಶರತ್ ಈಗ ಆರೋಗ್ಯವಾಗಿದ್ದಾನೆ.

ಇಂಥದ್ದೇ ಸ್ಥಿತಿಯಲ್ಲಿ ನರಳಿದ ರಾಸಿತ್ ಅಶೋಕನ್ ನಾಲ್ಕು ತಿಂಗಳುಗಳಿಗೂ ಅಧಿಕ ಅವಧಿ ಐಸಿಯುನಲ್ಲಿ ಕಳೆಯುತ್ತಾರೆ. ಸಾವು ಬದುಕಿನ ತೂಗುಯ್ಯಾಲೆಯಲ್ಲಿ ಜೀಕುತ್ತಾ ನಿಧಾನವಾಗಿ ಬದುಕಿನೆಡೆಗೆ ಹೆಜ್ಜೆಯಿಡುವುದಿದೆಯಲ್ಲ ಅದು ಊಹೆಗೂ ಮೀರಿದ್ದು. ‘ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ನಲ್ಲಿ ನಮ್ಮ ದೇಹವೇ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ರಾಸಿತ್ ರೋಗದ ಜ್ವಾಲೆಯಲ್ಲಿ ಬೇಯುತ್ತಿದ್ದರೂ ಬೆಳದಿಂಗಳ ತಂಪನ್ನು ಆಸ್ವಾದಿಸುತ್ತಾ ಓದುಗರಲ್ಲೂ ಚೈತನ್ಯ ತುಂಬಿದ್ದಾರೆ. ಅಂತಹ ಭಯಾನಕ ಸ್ಥಿತಿಯಲ್ಲೂ ಪ್ರಕೃತಿ ಸೌಂದರ್ಯದ ಸೊಬಗನ್ನು ಆಸ್ವಾದಿಸಲು ಸಾಧ್ಯ ಎಂಬುದನ್ನು ರಾಸಿತ್ ನಿರೂಪಿಸಿದ್ದಾರೆ. ಸಾಮಾನ್ಯವಾಗಿ ಕಾಯಿಲೆಯಿಂದ ಬಳಲುವ ರೋಗಿ ಆತಂಕ, ಖಿನ್ನತೆಯಿಂದ ಬಳಲುತ್ತಾನೆ. ಆದರೆ, ರಾಸಿತ್‌ರ ಆತ್ಮಸ್ಥೈರ್ಯ, ಕವಿ ಮನಸ್ಸು, ಮಗುವಿನ ಮುಗ್ಧತೆಯಿಂದ ಅವರು ಕಾಯಿಲೆಯನ್ನು ಎದುರಿಸಿ ಹೋರಾಡುವಲ್ಲಿ ಯಶಸ್ವಿಯಾದುದು ಹೇಗೆಂಬುದನ್ನು ಕೃತಿ ತೆರೆದಿಡುತ್ತಾ ಹೋಗುತ್ತದೆ.

ಬರಹ ಎಂಬುದು ಪ್ರತಿ ಬರಹಗಾರನ ಸಂತಸದ, ಸೃಜನಶೀಲತೆಯ ಅಭಿವ್ಯಕ್ತಿ. ಅರೋಗ್ಯ ಕ್ಷೀಣಿಸುತ್ತಾ ದೇಹ ತನ್ನ ಸ್ವಾಧೀನತೆ ಕಳೆದುಕೊಳ್ಳುವಾಗ ನೋವು, ದುಃಖದ ಸನ್ನಿವೇಶದಲ್ಲೂ ಅವಿನಾಶಿ ಅಕ್ಷರಗಳ ಪಾರಿಜಾತದ ಗಂಧ ಹರಡಿ ಆಹ್ಲಾದಗೊಳಿಸುತ್ತದೆ. ರಾಸಿತ್ ಕಾಯಿಲೆಗೆ ಕಾರಣವೇನಿರಬಹುದೆಂದು ತನ್ನನ್ನು ಹಳಿದುಕೊಳ್ಳುವುದಾಗಲೀ ಇತರರನ್ನು ದೂಷಿಸುವುದಾಗಲೀ ಮಾಡದೆ ನಿರ್ಲಿಪ್ತ ರೋಗಿಯಂತೆ ಎಲ್ಲವನ್ನೂ ಅನುಭವಿಸಿ ಬರಹ ರೂಪಕ್ಕಿಳಿಸುವ ಕಾರ್ಯದಲ್ಲಿ ಪ್ರಾಂಜಲವಾಗಿ ತೊಡಗುತ್ತಾರೆ. ಯೌವ್ವನದ ಸದೃಢತೆ, ದುಡಿಮೆ, ಸೌಂದರ್ಯಾನುಭೂತಿಯನ್ನು ಉನ್ಮತ್ತನಂತೆ ಆಸ್ವಾದಿಸುವ ಸಮಯದಲ್ಲಿ ಧುತ್ತನೆ ಎರಗಿ ಜಡತ್ವವನ್ನು ತಂದೊಡ್ಡುವ ‘ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಅನ್ನು ದಿಟ್ಟವಾಗಿ ಎದುರಿಸಿ ಸಹಜ ಜೀವನಕ್ಕೆ ವಾಪಸ್ಸಾದ ಬಗೆ ಕಲ್ಪನೆಗೂ ಮೀರಿದ್ದು.

ತಾವು ಅನುಭವಿಸಿದ ಪ್ರತಿ ಹಂತವನ್ನು ಅರಿವಿನ ಅಕ್ಷರಗಳನ್ನು ಹೆಣೆದು ಹಾರವಾಗಿಸಿದ್ದಾರೆ. ಅಸಾಧ್ಯವಾದುದನ್ನು ಅನುಭವಿಸಿದವರಿಗೆ ಅದನ್ನು ಹೇಳಿಕೊಳ್ಳುವುದು ಸುಲಭವಲ್ಲ. ಆದರೆ, ಲೇಖಕ ರಾಸಿತ್ ಆಸ್ಪತ್ರೆಯ ಐಸಿಯುನಲ್ಲಿ ಇಂಜೆಕ್ಷನ್, ಆಕ್ಸಿಜನ್, ಮಾಸ್ಕ್, ವೆಂಟಿಲೇಟರ್, ಟ್ರೆಕಿಯೊಸ್ಟಮಿ ಮುಂತಾದವುಗಳನ್ನು ಸರಳವಾಗಿ, ಸುಲಲಿತವಾಗಿ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಮಾತ್ರ ಪರಿಚಯವಿರುವ ಪದಗಳನ್ನು ಅರ್ಥಸಹಿತವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ‘ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಭಾರತದಲ್ಲಿ ಅಪರೂಪ. ಇದ್ದಕ್ಕಿದ್ದಂತೆ ಆರೋಗ್ಯವಂತ ವ್ಯಕ್ತಿಯ ದೇಹ ದಣಿದು ಸುಸ್ತಾಗಿ ಕೈಕಾಲು, ದೇಹದ ಸ್ನಾಯುಗಳು ಚಲನಹೀನವಾಗಿ, ಧ್ವನಿ ಉಡುಗಿ ಹೋಗಿ, ಉಸಿರಾಡುವುದೂ ಕಷ್ಟಸಾಧ್ಯವಾಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಇಡೀ ದೇಹ ನಿಧನಿಧಾನವಾಗಿ ತನಗೆ ವಿಶ್ರಾಂತಿ ಬೇಕೆಂಬಂತೆ ಕಾರ್ಯವಿಹೀನವಾಗುವುದು. ಕೆಳ ಮಧ್ಯಮ ವರ್ಗದ ರಾಸಿತ್‌ರ ಮನೆಯವರಿಗೆ ವೈದ್ಯಕೀಯ ಖರ್ಚು ಭರಿಸಲು ಸಾಲ ಮಾಡಬೇಕಾದ ಪರಿಸ್ಥಿತಿ, ವರ್ಷಾನುಗಟ್ಟಲೆ ಆಸ್ಪತ್ರೆ ವಾಸ ಸಹವಾಸ. ದಿನ ದಿನಕ್ಕೂ ಕಾಯಿಲೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಆಹುತಿ ತೆಗೆದುಕೊಳ್ಳಲು ಹವಣಿಸುತ್ತಿದೆ ಎನ್ನುವಾಗಲೂ ರಾಸಿತ್‌ರ ಮನದ ನಗು ಮರೆಯಾಗಿರಲಿಲ್ಲ.

ಹದ್ದಿನಂತೆ ತಲೆಯ ಮೇಲೆ ಯಮ ಕುಕ್ಕುತ್ತಿರುವಾಗಲೂ ಬದುಕುವ ಆಶಯದ ಗಾನವನ್ನು ಆಲಿಸುತ್ತಲೇ ಇದ್ದರು. ಭಯ, ಆತಂಕ ಮೀರಿದ ಮನೋಭೂಮಿಕೆಯನ್ನು ಸಿದ್ಧಮಾಡಿಕೊಂಡು ಎದುರಿಸಿದ್ದು ಮತ್ತೆ ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಯಿತು. ಹೊರಪ್ರಪಂಚದ ಆಗುಹೋಗುಗಳು, ಹಗಲು ರಾತ್ರಿಗಳು, ಬಿಸಿಲು, ಮಳೆ, ಚಳಿಗಳು ನಾಲ್ಕೂವರೆ ತಿಂಗಳುಗಳಿಂದ ಇಲ್ಲವಾದರೂ ಮನಸ್ಸಿಗೆ ಪ್ರಕೃತಿಯ ಅಮೃತ ಸಿಂಚನವಾಗುತ್ತಲೇ ಇತ್ತು. ತನ್ನ ಸುತ್ತಲೂ ಸುಳಿದಾಡುವ ದೇವದೂತೆಯರನ್ನು (ನರ್ಸುಗಳಿಗೆ ರಾಸಿತ್ ಇಟ್ಟ ಹೆಸರು) ಮಂದಸ್ಮಿತರಾಗಿಯೇ ಗಮನಿಸುತ್ತ ಅವರ ಸಾಂತ್ವನದ ನುಡಿಗಳು, ಆರೈಕೆ, ಚಿಕಿತ್ಸೆ ಪಡೆಯುತ್ತಲೇ ಮರಳಿ ಬದುಕಿನೆಡೆಗೆ ಮುಖಾಮುಖಿಯಾಗುವ ಪರಿಯನ್ನು ಓದುತ್ತಿದ್ದರೆ, ನಮ್ಮಲ್ಲಿ ಸುಗಂಧರಾಜದ ಗಾಢ ಪರಿಮಳ ಆವರಿಸುತ್ತದೆ. ಸುನಾಮಿಯೋ ಭೂಕಂಪವೋ ಆದಾಗ ಕಣ್ಣೆದುರೇ ಬದುಕು ಛಿದ್ರವಾಗುವಂತೆ ನಡುಮಧ್ಯಾಹ್ನದ ಹರೆಯದ ಯುವಕನೊಬ್ಬ ಅಂಧಕಾರದಲ್ಲಿ ಮುಳುಗುತ್ತಿರುವಾಗ ಅಶರೀರವಾಣಿಯೊಂದು ಮತ್ತೆ ಉಸಿರು ತುಂಬಿ ‘ಬದುಕಿನ್ನೂ ಬಹಳವಿದೆ’ ಎಂದು ಆಶೀರ್ವದಿಸಿ ಕಳಿಸಿದ ರೀತಿ ಅಚ್ಚರಿ ಹುಟ್ಟಿಸುತ್ತದೆ.

ದೇಹದ ಪ್ರತಿಯೊಂದು ಅಂಗವೂ ಬಳಲಿ ಬೆಂಡಾದಾಗ ಆಸ್ಪತ್ರೆಯಲ್ಲಿ ರಾಸಿತ್ ತನ್ನ ನೋವು, ಲಕ್ಷಣಗಳು, ಚಿಕಿತ್ಸಾ ವಿಧಾನಗಳನ್ನು ಮನದಲ್ಲಿ ದಾಖಲೆ ಮಾಡಿಕೊಂಡು ಸಂಕ್ಷಿಪ್ತ ಟಿಪ್ಪಣಿ ಮಾಡಿಕೊಂಡಿದ್ದನ್ನು ಓದಿದಾಗ ಮನಸ್ಸು ಭಾರವಾಗಿ ಮೌನಕ್ಕೆ ಜಾರುತ್ತದೆ. ಸಾಹಿತ್ಯವನ್ನು ಆರಾಧಿಸುವ, ಬದುಕಿನ ಭಾಗವಾಗಿಸಿಕೊಂಡ ವ್ಯಕ್ತಿಗೆ ಮಾತ್ರ ಇದು ಸಾಧ್ಯವೇನೋ ಎನಿಸುವ ಭಾವ ಮೂಡುತ್ತದೆ. ‘ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಕೃತಿಯ ನಿರೂಪಣಾ ಶೈಲಿ ತಲಸ್ಪರ್ಶಿಯಾಗಿದೆ. ಮಲಯಾಳಂ ಭಾಷೆಯ ಸೌಂದರ್ಯವನ್ನು ಕನ್ನಡಕ್ಕೆ ಇಳಿಸುವಾಗ ಯಾವುದೇ ರೀತಿಯ ಮುಕ್ಕಾಗದಂತೆ, ಭಾವಕ್ಕೆ ಚ್ಯುತಿಯಾಗದಂತೆ ಲೇಖಕ, ಅನುವಾದಕ ಕೆ. ಪ್ರಭಾಕರನ್ ಎಚ್ಚರ ವಹಿಸಿದ್ದಾರೆ. ಈಗಾಗಲೇ ಮಲಯಾಳಂನ ಕೆಲವು ಕಾದಂಬರಿ, ಕಥೆಗಳನ್ನು ಅನುವಾದಿಸಿ ಕನ್ನಡ ಮತ್ತು ಮಲಯಾಳಂನ ನಡುವೆ ಭಾಷಾ ಸೌಹಾರ್ದತೆ ಮೆರೆದಿದ್ದಾರೆ, ಕೆ. ಪ್ರಭಾಕರನ್.

ರಾಸಿತ್ ಅವರ ಭಾಷೆ, ಶೈಲಿ ತಂಗಾಳಿಯ ಆಹ್ಲಾದಕರ ಸ್ಪರ್ಶದಂತೆ ವೇದ್ಯವಾಗುತ್ತದೆ. ಎಲ್ಲೆಲ್ಲೂ ಕತ್ತಲೆ ತುಂಬಿರುವಾಗ ದಟ್ಟೈಸಿದ ನಿಶ್ಶಬ್ದತೆಯನ್ನು ಸೀಳಿ ಬರುವ ಭರವಸೆಯ ಕಿರಣ ಇದ್ದೇ ಇರುತ್ತದೆ ಎಂಬುದನ್ನು ಸಾರುತ್ತದೆ ಈ ಕೃತಿ. ‘ಧನ್ಯವಾದಗಳು ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಕೃತಿಯನ್ನು ಓದುವ ಎಲ್ಲರಲ್ಲೂ ಬದುಕಿನ ಸಾರ್ಥಕತೆಯ ಅರಿವು ಮೂಡುತ್ತದೆ. ಕಾಯಿಲೆ ಇರುವ ವ್ಯಕ್ತಿಗಳು ಮಾತ್ರವಲ್ಲ ಎಲ್ಲರೂ ಓದಲೇಬೇಕಾದ ಕೃತಿ. ಎಲ್ಲ ಇದ್ದು ಕೀಳರಿಮೆಯಿಂದ ಬಳಲುತ್ತಿರುವವರನ್ನು ಬದುಕಿಗೆ ಮುಖ ಮಾಡುವಂತೆ ಎಚ್ಚರಿಸುತ್ತದೆ. ಬದುಕು ಅಮೂಲ್ಯವಾದ ಖಜಾನೆ ಎಂಬುದನ್ನು ಸ್ಪಷ್ಟಪಡಿಸುತ್ತಾ ಹೋಗುತ್ತದೆ.

‍ಲೇಖಕರು Admin MM

April 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: