ಶ್ಯಾಮಲಾ ಮಾಧವರ ಪ್ರಿಯಜೀವಗಳ ಒಡನಾಟ  

 ಶ್ಯಾಮಲಾ ಮಾಧವ

ಬಿಳಿ ಬಣ್ಣದ ಮಿಶ್ರತಳಿಯ ಆಲ್ಬಿನೋ ರಾಕಿ, ಪುಟ್ಟ ಮರಿಯಾಗಿದ್ದಾಗಲೇ ನಮ್ಮ ಮನೆಗೆ ಬಂದವನು. ನೋಡಲು ಚೆಲುವ. ಮರಿಯಾಗಿದ್ದಾಗ ಈ ರಾಕಿ, ಡಾ. ಜೆಕಿಲ್ ಆಂಡ್ ಮಿಸ್ಟರ್ ಹೈಡ್ ನೆನಪಿಸುವಂತಿದ್ದ. ಹಗಲೆಲ್ಲ ಪಾಪದ ಮರಿಯಂತಿದ್ದರೆ, ರಾತ್ರಿ ಬಿಟ್ಟೊಡನೆ ಮನೆಯ ಹೊರಗೆ
ನಮ್ಮನ್ನು ಅಟ್ಟಿಸಿ ಕೊಂಡು ಬರುತ್ತಿದ್ದ. ಅದು ಅವನ ಆಟವಾಗಿತ್ತು. ಅಲುಗುವ ಯಾವ ಜೀವಿಯನ್ನೂ, ಹಲ್ಲಿ, ಇಲಿಮರಿ, ಕಪ್ಪೆ ಇತ್ಯಾದಿಯಾಗಿ ಅವನು ಬಿಡುತ್ತಿರಲಿಲ್ಲ. ಸ್ವಲ್ಪ ದೊಡ್ಡವನಾದಾಗ ಹೈಡ್ ಮರೆಯಾದ. ಎಲ್ಲರ ಪೆಟ್ ಆಗಿ ಮಹಾಕಾಯನಾಗಿ ಬೆಳೆದ. ಮಗು ಶುಭಾ ಸೌದಿಯಿಂದ ಬಂದವಳು ತನ್ನ ಬೆನ್ನೇರಿ ಕುಳಿತು ಸವಾರಿ ಮಾಡಿದರೂ ಏನೂ ಮಾಡುತ್ತಿರಲಿಲ್ಲ.

ಒಮ್ಮೆ ಇಲ್ಲಿ ಮುಂಬೈಯಿಂದ ನಾನು ಎಂದಿನಂತೆ ರಾತ್ರಿ ಊರಿಗೆ ಅಮ್ಮನಿಗೆ ಕರೆ ಮಾಡಿದಾಗ ಉತ್ತರಿಸಿದ ಅಮ್ಮನ ದನಿಯಲ್ಲಿ ಆತಂಕ, ಕಳವಳ, ಉದ್ವೇಗವಿತ್ತು. ಅದೇ ತಾನೇ ಸ್ಥಳಾಂತರಗೊಂಡು ಅಡಿಗೆಕೋಣೆಯ ಮೆಟ್ಟಲ ಕೆಳಗೆ ಹೊರಗೆ ಗೋಡೆಗೊರಗಿಸಿ ಇರಿಸಿದ್ದ ಬಾಗಿಲ ಹಿಂದೆ ನುಸುಳಿದ್ದ ದೊಡ್ಡದೊಂದು ನಾಗರ ಹಾವಿನ ಬಾಲವನ್ನು ನಮ್ಮ ರಾಕಿ ಹಿಡಿದೆಳೆದಿದ್ದ. ಹಾವು ನುಸುಳಿ ಹೋಗಲೆತ್ನಿಸಿ ಭುಸುಗುಟ್ಟುವಾಗ, ಅದೇ ಆಗ ಹೊರ ಬಚ್ಚಲಿಗೆ ಸ್ನಾನಕ್ಕೆ ಹೋಗಲೆಂದು ಮೆಟ್ಟಲಿಳಿದಿದ್ದ ರೋಹನ್, ಬೆಚ್ಚಿ ಹಿಂದಡಿಯಿಟ್ಟು, ಅಮ್ಮಮ್ಮನನ್ನು ಕರೆದು ವಿಷಯ ತಿಳಿಸಿದ್ದ. ರಾಕಿಗಾಗಿ ಕಳವಳದ ಜೊತೆಗೇ ಮಕ್ಕಳು ರೋಹನ್, ಪ್ರಜ್ವಲ್‍ರನ್ನು ಅಲ್ಲಿ ನಿಲ್ಲಬೇಡಿ, ಒಳಗೆ ಬಂದು ಬಾಗಿಲು ಮುಚ್ಚಿ ಎಂದು ಕರೆವ ಆತಂಕ ಅಮ್ಮನದಾಗಿತ್ತು.
ಬಿಡಿಸಿ ಕೊಳ್ಳಲೆತ್ನಿಸಿದರೂ ಬಿಡದ ರಾಕಿಯನ್ನು ಆ ಮಹಾಗಾತ್ರದ ಸರ್ಪ ಹೆಡೆಯೆತ್ತಿ ಫೂತ್ಕರಿಸಿದರೆ, ಈ ನಮ್ಮ ರಾಕಿ, ಅದರ ಹೆಡೆಗೇ ಬಾಯಿಟ್ಟ! ಮುಖಕ್ಕೇ ಸರ್ಪದಂಶವಾಗಿ ಭವ್ಯಾಕಾರದ ರಾಕಿ ಅಲ್ಲೇ ಒರಗಿದ್ದ. ಅಣ್ಣ ದೂರ ಮದರಾಸಿನಲ್ಲಿದ್ದ. ವೆಟರ್ನರಿ ಡಾಕ್ಟರಿಗೆ ಕರೆಮಾಡಿದರೆ, ಅದಾಗಲೇ ಬಹಳ ರಾತ್ರಿಯಾಗಿದ್ದರಿಂದ ಡಾಕ್ಟರ್ ಬರಲಿಲ್ಲ. ಹಾಗೇ ಇರಲಿ; ಏನೂ ಮಾಡಲಾಗದು; ಅರ್ಧಗಂಟೆಗಿಂತ ಹೆಚ್ಚು ನಾಯಿ ಬದುಕಿರದು, ಎಂದುತ್ತರ ಬಂತು. ಹೇಗಾದರೂ ಡಾಕ್ಟರನ್ನು ಕರೆತರುವಂತೆ ನಾನು ಅಮ್ಮನನ್ನು ಫೋನ್‍ನಲ್ಲಿ ಅಂಗಲಾಚುತ್ತಿದ್ದೆ. ಇಪ್ಪತ್ತು ನಿಮಿಷಗಳಲ್ಲೇ ರಾಕಿ ಕೊನೆಯುಸಿರೆಳೆದಿದ್ದ. ಅವನ ಕಡಿತದಿಂದ ಗಾಯಗೊಂಡ ಆ ನಾಗರ ಹಾವು, ಮರುದಿನವೂ ನಮ್ಮ ದರೆಯ ಮೇಲೆ ಒರಗಿದ್ದು, ಮತ್ತೆ ಕಾಣದಾಗಿತ್ತು.

ನಮ್ಮ ಮನೆ ಚೇತನಾ ಇರುವ ಪ್ರದೇಶದ ಹೆಸರೇ ಸಂಕೊಲಿಗೆ. ವಿಶಾಲ ಮೈದಾನದ ಅಂಚಿಗೆ ಬನಗಳಿದ್ದ ಪ್ರದೇಶವದು. ಹೀಗಾಗಿ ಅಲ್ಲಿ ನಾಗರಹಾವು ಸುತ್ತಾಡುವುದು ಸಾಮಾನ್ಯ. ಕೆಲಕಾಲದಿಂದ ಅಲ್ಲೆಲ್ಲ ಮನೆಗಳೆದ್ದು, ಬನ ನಿರ್ನಾಮವಾಗಿ ಹಾವುಗಳು ನೆಲೆತಪ್ಪಿವೆ. ಹೊರಗೆ ಸುತ್ತಾಡುವ ಹಾವುಗಳನ್ನರಸಿ ಈಗ ಮುಂಗುಸಿಗಳೂ ಹೆಚ್ಚಿಕೊಂಡಿವೆ. ರಾಕಿಯ ಬಳಿಕ ನಮ್ಮ ಮನೆಗೆ ಬಂದವನು, ಬಾಕ್ಸರ್, ಬುಶ್. ಒಳ್ಳೇ ಜೇನು ಬಣ್ಣದ, ಮೊಣಕಾಲವರೆಗೆ ಬಿಳಿ ಸಾಕ್ಸ್ ಧರಿಸಿದಂತೆ ಕಾಣುವ, ಜೋಲುಕಿವಿ, ಉದ್ದ ನಾಲಗೆಯ ಚೆಲುವಾದ ಮರಿ. ಮಹಾ ಹೊಟ್ಟೆಬಾಕ! ಯಾರೇನು ತಿನ್ನುತ್ತಿದ್ದರೂ ಆಸೆಕಂಗಳಿಂದ ನೋಡುತ್ತಾ ಆ ಅಷ್ಟುದ್ದ ಜೋಲುವ ನಾಲಗೆಯಿಂದ ಜೊಲ್ಲು ಸುರಿಸುವವ. ಕೆಲವೇ ದಿನಗಳಲ್ಲಿ ಅವನಿಗೆ ಜೊತೆಯಿರಲೆಂದು ಬಿಳಿಬಣ್ಣದ ರಾಜಪಾಳಯಂ ಹೌಂಡ್ ಮರಿಯೊಂದನ್ನು ಅಣ್ಣ ತಂದ. ವಿಂಟರ್ ಎಂದು ಮೊದಲೇ ಹೆಸರಾಂತಿದ್ದ ಮರಿ, ಮನೆ ಬದಲಾದಾಗ ಸಾಕಷ್ಟು ಪ್ರತಿಭಟನೆ ತೋರಿದ್ದ.

ಮತ್ತೆ ಬೇಗನೇ ಹೊಂದಿಕೊಂಡ. ಉದ್ದನೆ ಸಪೂರ ದೇಹದ, ಸಿಂಹಕಟಿಯ, ಉದ್ದ ಬಾಲದ ವಿಂಟರ್, ನನಗೆ ಅಚ್ಚುಮೆಚ್ಚಾದ. ಅವನ ದೇಹಾಕಾರ, ಗಂಭೀರ ಚಹರೆಯನ್ನು ನೋಡಿ ಎಲ್ಲರೂ ಹೆದರುತ್ತಿದ್ದರು. ತಿನ್ನುವುದರಲ್ಲಿ ಬುಶ್‍ಗೆ ತದ್ವಿರುಧ್ಧ, ವಿಂಟರ್. ಬುಶ್, ಹಾಕಿದ ಆಹಾರ ಎಲ್ಲಿ ಹೋಯ್ತೆಂದರಿಯದಂತೆ ಗಬಗಬನೆ ತಿಂದು ಮುಗಿಸುವವನಾದರೆ, ಇವನೋ ಲೇಡಿಲೈಕ್! ಬಟ್ಟಲ ಒಂದು ಪಕ್ಕದಿಂದ ಚೂರು ಚೂರೇ ಚಂದದಿಂದ ಬೇಕಷ್ಟೇ ತಿನ್ನುವವನು. ಬಟ್ಟಲ ಸದ್ದು ಕೇಳಿದರೂ ಬುಶ್‍ನ ಹಾರಾಟ ಮುಗಿಲು ಮುಟ್ಟಿದರೆ, ಇವನೋ, ಎದುರಿಗೆ ಬಟ್ಟಲಿಟ್ಟ ಬಳಿಕವೂ ಕೂಡಲೇ ಬಾಯಿ ಹಾಕುವವನಲ್ಲ.

ಒಂದು ರಾತ್ರಿ, ನಾನು ಮುಂಬೈಯಲ್ಲಿದ್ದಾಗ ಅವರನ್ನು ಬಿಟ್ಟಿದ್ದುದನ್ನು ಅರಿಯದೆ, ಅಣ್ಣ ಗೇಟ್ ತೆರೆದು ಕಾರ್ ಒಳ ತಂದಿದ್ದ. ಮತ್ತೆ ಅವರನ್ನು ಕಟ್ಟಲೆಂದು ಕರೆದರೆ, ಇಬ್ಬರೂ ಮಾಯ! ರಾತ್ರಿಯಿಡೀ ಊರವರೆಲ್ಲ ಹುಡುಕಿದರೂ ಬುಶ್, ವಿಂಟರ್ ಪತ್ತೆಯಿಲ್ಲ. ಮರುದಿನ ಪತ್ರಿಕೆಯ “ಕಾಣೆಯಾಗಿದ್ದಾರೆ” ಅಂಕಣದಲ್ಲಿ ಪ್ರಕಟಣೆಯನ್ನೂ ಕೊಡಲಾಯ್ತು. ಮರುದಿನ ಮಧ್ಯಾಹ್ನ, ರೈಲ್ವೇ ಗೇಟ್ ಬಳಿ ಕಂಡ ಬುಶ್‍ನನ್ನು ಬಂಧುಗಳು ಹಿಡಿದು ರಿಕ್ಷಾಕ್ಕೆ ಹಾಕಿಕೊಂಡು ಮನೆಗೆ ಕರೆತಂದರು. ವಿಂಟರ್ನ ಪತ್ತೆಯಿಲ್ಲ. ಮನೆಯಿಂದ ಹೊರಗಣ ಪ್ರಪಂಚವನ್ನೇ ಕಾಣದವರು,
ಎಲ್ಲಿರುವರೋ, ಏನಾದರೋ ಎಂದು ನಾನು ತುಂಬ ಕಳವಳ ಗೊಂಡೆ. ಎರಡು ದಿನಗಳ ಬಳಿಕ, ಎರಡು ಫರ್ಲಾಂಗ್ ದೂರ ನೆತ್ತಿಲ ಮನೆ ಹಿತ್ತಿಲ ಮೂಲೆಯಲ್ಲಿ ಬಲ್ಲೆಯಲ್ಲಡಗಿದ್ದ ವಿಂಟರ್ ಕಣ್ಣಿಗೆ ಬಿದ್ದು, ಬಂದ ಕರೆಯಂತೆ ಮತ್ತೆ ಹೋಗಿ ಅವನನ್ನು ಕರೆತರಲಾಯ್ತು. ಇದು ಅವರ ಮೊದಲ ಎಸ್ಕೆಪೇಡ್ ಆದರೆ, ಮತ್ತೆ ಹೀಗೆ ಛಾನ್ಸ್ ಸಿಕ್ಕಿದಾಗಲೆಲ್ಲ ನುಸುಳಿ ಹೋಗಿ ಅವರು ನಮ್ಮನ್ನು ಕಂಗೆಡಿಸಿದ್ದು ಅಷ್ಟಿಷ್ಟಲ್ಲ!

ನನ್ನ “ಗಾನ್ ವಿದ್ ದ ವಿಂಡ್” ಬಿಡುಗಡೆಯ ದಿನ. ಮಂಗಳೂರ ಕರಾವಳಿ ಲೇಖಕಿಯರ, ವಾಚಕಿಯರ ಸಂಘ, ಗಣಪತಿ ಜೂನಿಯರ್ ಕಾಲೇಜ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹೊರಡಲು ನಾನು ತಯಾರಾಗಿದ್ದೆ. ಅಲ್ಲಿಗೆ ಬರಲಾಗುವುದಿಲ್ಲವೆಂದು ನನ್ನ ಚಿಕ್ಕಪ್ಪ, ನನ್ನನ್ನು ಹರಸಿ ಹೋಗಲು ಗುಡ್ಡೆಮನೆಯಿಂದ ಬಂದಿದ್ದರು. ಹೊರಟು ನಿಂತಿದ್ದ ಅವರನ್ನು ಬೀಳ್ಕೊಡಲು ಗೇಟಿನ ವರೆಗೆ ಹೋಗಿ ಅಲ್ಲಿ ನಾನು ಅವರೊಡನೆ ಮಾತನಾಡುತ್ತಾ ನಿಂತಿದ್ದಾಗ, ಬುಶ್, ವಿಂಟರ್ ಇಬ್ಬರೂ ನಮ್ಮ ಪಕ್ಕದಿಂದ ನುಸುಳಿಕೊಂಡು ಗೇಟ್ ಹೊರಗೆ ಹೋಗಿ ಬಿಟ್ಟರು. ಯಮಸದೃಶ ವಾಹನಗಳು ಓಡುವ ರಾಜ್ಯ ಹೆದ್ದಾರಿ, ಎದುರುಗಡೆ! ಪುಣ್ಯಕ್ಕೆ ಇಬ್ಬರೂ ರಸ್ತೆಗಿಳಿಯದೆ ಕಂಪೌಂಡ್ ಪಕ್ಕದಿಂದಲೇ ಓಡಿ, ಕಿರುಓಣಿಯಲ್ಲಿ ತಿರುಗಿ ಓಡಿದರು. ಚಿಕ್ಕಪ್ಪ, ನಾನು ಇಬ್ಬರೂ ಅವರನ್ನು ಕರೆಯುತ್ತಾ ಹಿಂದೆ ಧಾವಿಸಿದೆವು.

ಓಣಿಯಿಂದ ಮೈದಾನ ಹೊಕ್ಕು ಗಾಳಿ ಹೊಕ್ಕಿದ ಕರುವಿನಂತೆ ನೆಗೆಯುತ್ತಾ ಹಾರೋಡುತ್ತಿದ್ದ ವಿಂಟರ್! ಅಡ್ಡಾದಿಡ್ಡಿ ಸುತ್ತುತ್ತಿದ್ದ ಬುಶ್! ಮೈದಾನದಲ್ಲಿ ನಡೆದು ಬರುತ್ತಿದ್ದ ಜನರನ್ನು, ಹಿಡಿಯಿರಿ, ಹಿಡಿಯಿರಿ ಅವನನ್ನು, ಎಂದು ಕೋರಿಕೊಂಡರೆ, ಅವುಗಳ ಬಳಿ ಸಾರುವ ಕೆಚ್ಚೆದೆಯವರಾರೂ ಅಲ್ಲಿರಲಿಲ್ಲ. ಕೊನೆಗೂ ಧಡೂತಿ ದೇಹದ ಬುಶ್, ಓಡಿ ಸಾಕಾಗಿ ಉಸಿರು ಬಿಡುತ್ತಾ ನಿಧಾನವಾಗಿ ಚಿಕ್ಕಪ್ಪನ ಕೈಗೆ ಸಿಕ್ಕಿದ. ಚಿಕ್ಕಪ್ಪ ಅವನನ್ನು ಮನೆಗೊಯ್ದಾಗ, ಒಬ್ಬನೇ ಎಂದು ಸಾಕೆನಿಸಿತೋ, ಇಲ್ಲವೇ ಹೀಗೆ ನನ್ನನ್ನು ಸತಾಯಿಸಬೇಡ ವಿಂಟರ್, ಎಂಬ ನನ್ನ ಹತಾಶ ದನಿಗೆ ಕರಗಿಯೋ, ಅಂತೂ ಕೊನೆಗೂ ಬಳಿ ಬಂದ ಅವನನ್ನು ಮನೆಗೆ ಕರೆತಂದೆ. ನನ್ನ ಪುಸ್ತಕ ಬಿಡುಗಡೆಗೆ ಎಂಥಾ ಆರಂಭವಾಗಿತ್ತದು!

ಹೀಗೆ ಅವರು ತಪ್ಪಿಸಿ ಕೊಂಡು ಹೋಗಿ, ಮತ್ತೆ ಪ್ರಜ್ವಲ್ ಅವರ ಹಿಂದೆ ಹೋಗಿ ಹಿಡಿದು ಕರೆತಂದುದು ಎಷ್ಟು ಸಲವೋ! ಮತ್ತೊಮ್ಮೆ ನಾವು ಮದುವೆಗೆ ಹೊರಡಲು ಸಿಧ್ಧರಾಗಿ ನಿಂತಿದ್ದಾಗ, ಹೀಗೆಯೇ ತಪ್ಪಿಸಿಕೊಂಡು ರಸ್ತೆಗಿಳಿದ ವಿಂಟರ್ ನ ಹಿಂದೆ ನಾನೂ, ನನ್ನ ತಂಗಿ, ಉಟ್ಟ ಕಾಜೀವರಂ ಸೀರೆ ಹೊತ್ತು, ಆ ಹೆದ್ದಾರಿಯಲ್ಲಿ ವಾಹನಗಳ ನಡುವೆ ಅಡ್ಡಾದಿಡ್ಡಿ ಓಡತೊಡಗಿದ ವಿಂಟರ್ ನ ಹಿಂದೆ, ಇಲ್ಲ, ಈಗ ಬಿದ್ದ, ಅಯ್ಯೋ, ಹೋದ, ಹೋದ, ಎಂದು ಕೊಳ್ಳುತ್ತಾ, ಏದುಸಿರು ಬಿಡುತ್ತಾ ಹಿಂಬಾಲಿಸಿ, ಕೊನೆಗೂ ಅವನು ಸಿಕ್ಕಾಗ ಉಸಿರು ಕಟ್ಟಿದಂತಾಗಿ ಮನೆಗೆ ಹಿಂತಿರುಗಿದ್ದನ್ನು ಮರೆಯಲಾದೀತೇ? ಹೆದ್ದಾರಿಯ ವಾಹನಗಳ ನಡುವೆ ಓಡುತ್ತಿರುವ ನಾಯಿಯ ಹಿಂದೆ ಹೀಗೆ ಕಾಂಜೀವರಂ ಸೀರೆ ಉಟ್ಟ ಹೆಂಗಸರಿಬ್ಬರು ಓಡುತ್ತಿರುವ ದೃಶ್ಯ ಹೇಗಿರ ಬಹುದು?!

ಒಮ್ಮೆ ಹೀಗೆ ವಿಂಟರ್, ಕಿರುಓಣಿಯಲ್ಲೋಡಿ ಇತರ ನಾಯಿಗಳ ಆಘಾತಕ್ಕೆ ಸಿಲುಕಿ ನಡೆದ ಕಾಳಗದ ದನಿ ಕೇಳಿದ ಬುಶ್, ಅದು ಹೇಗೆ ತನ್ನ ಭೀಮಕಾಯವನ್ನು ನಮ್ಮ ಅಷ್ಟೆತ್ತರದ ದರೆಯ ಮೇಲಕ್ಕೇರಿಸಿ ಕೊಂಡು ಅತ್ತ ಹಾರಿ ವಿಂಟರ್ ನ ನೆರವಿಗೆ ಧಾವಿಸಿದನೋ ಎಂಬುದು ಪರಮಾಶ್ಚರ್ಯವಾಗಿತ್ತು! ಉಳಿದ ನಾಯಿಗಳ ಮನೆಯವರಿಂದ ನಮ್ಮೀ ಭಂಟರಿಗೆ ಸಹಸ್ರನಾಮಾರ್ಚನೆಯಾಗಿತ್ತು! ಅಪರೂಪಕ್ಕೆ ಅವರಿಬ್ಬರ ನಡುವೆಯೂ ಕಾಳಗ ನಡೆಯದೆ ಇಲ್ಲ. ಅದಂತೂ ಘನಘೋರ ಕಾಳಗ! ಅವರನ್ನು ಬೇರ್ಪಡಿಸುವಲ್ಲಿ ನಾವು ಅರೆಜೀವವಾಗುತ್ತಿದ್ದೆವು. ಅಣ್ಣ ಉಣ್ಣುವಾಗ, ತಿನ್ನುವಾಗ ಕೊಂಡಾಟದ ಸಲಿಗೆಯಿಂದ ಹಾಗೂ ಹೊಟ್ಟೆಬಾಕತನದಿಂದ ಡೈನಿಂಗ್ ಟೇಬಲ್ ಕೆಳಗೆ ಅವಿತು ಅಣ್ಣ ಕೊಟ್ಟುದನ್ನು ಕಟಕ್ ಎಂದು ಕಡಿವ ಬುಶ್‍ನನ್ನು ಕಂಡು ವಿಂಟರ್ ಗುರ್ರ್ ಎಂದರೆ ಸಾಕು, ಮರುಕ್ಷಣ ಇಬ್ಬರೂ ಒಬ್ಬರ ಮೇಲೊಬ್ಬರೆರಗಿ ಭೀಷಣವಾಗಿ ಕಾದುತ್ತಿದ್ದರು. ಒಂದಿನ ಬುಶ್ ನನ್ನ ಬಳಿಗೆ ಬಂದುದನ್ನು ಕಂಡು ವಿಂಟರ್ ಗುರ್ರ್ ಎಂದಾಗಲೂ ಹೀಗೆ ಕಾಳಗ ತೊಡಗಿತ್ತು. ಮತ್ತೆ ಆದಷ್ಟೂ ನಾವು ಜಾಗೃತರಾಗಿರುತ್ತಿದ್ದೆವು.

ಒಂದು ಬೆಳಗ್ಗೆ ಅವರನ್ನು ಬೆಳಗಿನ ವ್ಯಾಯಾಮಕ್ಕಾಗಿ ಬಿಟ್ಟಿದ್ದು, ನಮ್ಮ ಸಹಾಯಕಿ ಶ್ವೇತಾ ಅಂಗಳ ಗುಡಿಸುತ್ತಿದ್ದಳು. ಇಬ್ಬರೂ ಸೇರಿ ರೋಷದಿಂದ ಬೊಗಳಲಾರಂಭಿಸಿದಾಗ ಶ್ವೇತಾ, “ಅಮ್ಮಾ, ಅಮ್ಮಾ ” ಎಂದು ವಿಹ್ವಲಳಾಗಿ ಕರೆಯಲಾರಂಭಿಸಿದಳು. ನೋಡಿದರೆ, ದೊಡ್ಡದೊಂದು ಉರಗದ ಅತ್ತಿತ್ತ ನಿಂತು ಆಕ್ರಮಣ ಸನ್ನದ್ಧರಾದಂತಿದ್ದವರ ಬಳಿಗೋಡಿ ನಾನು ವಿಂಟರ್ ನನ್ನು ಹಿಡಿದೆಳೆದರೆ, ಶ್ವೇತಾ ಬುಶ್‍ನನ್ನು ಅತ್ತ ಎಳೆದಳು. ಮಾಸಲು ಬೂದು ಬಣ್ಣದ ದಪ್ಪನೆ ದೊಡ್ಡ ಹಾವು, ತಲೆಯನ್ನು ದೇಹದ ಮಧ್ಯದಲ್ಲಿ ಅಡಗಿಸಿತ್ತು. ಶ್ವೇತಾ ಬುಶ್‍ನನ್ನು ದೂರ ಎಳೆದೊಯ್ದಾಗ, ಒಂದು ದಾರಿ ಮುಕ್ತವಾದೊಡನೆ ಹಾವು ಸುರುಳಿ ಬಿಚ್ಚಿ ಜೋರಾಗಿ ಭುಸುಗುಟ್ಟುತ್ತಾ ನಮ್ಮ ಬಾವಿ ಕಟ್ಟೆಯತ್ತ ಸರಿದು ಹೋಯ್ತು. ಹೆಡೆಯೇನೂ ಕಾಣದುದರಿಂದ, ಹಾಗೂ ಕೊಳಕು ಮಂಡಲ ಹಾವುಗಳೂ ಭುಸುಗುಟ್ಟುತ್ತವೆಂದು ತಿಳಿದುದರಿಂದ ಅದು ಕಂದೋಡಿಯೇ ಇರಬೇಕೆಂದುಕೊಂಡೆ. ವಿಷಯುಕ್ತ ಹಾವುಗಳಾದರೆ ನಾಯಿಗಳ ಬೊಗಳಾಟದಿಂದಲೇ ತಿಳಿದು ಬರುತ್ತದೆ. ಕೇರೆಗಳಿಗೆ ಅವು ಕ್ಯಾರೇ ಎನ್ನುವುದಿಲ್ಲ. ಸ್ವಲ್ಪ ಮಾತ್ರ ಬೊಗಳಿ ಮತ್ತೆ, ನೀನೇ, ಎಂದುಕೊಂಡು ಸುಮ್ಮನಾಗುತ್ತವೆ.

ಮುಂಬೈಯಿಂದ ಊರಿಗೆ ಮರಳಿ ಮನೆ ಹೊಗುವಾಗಲೆಲ್ಲ ವಿಂಟರ್ ನ ಸಂತಸ ನೋಡುವಂತಿರುತ್ತಿತ್ತು. ” ಓ, ನಿನ್ನಮ್ಮ ಬಂದಳೇ?!” ಎಂದು ಅಮ್ಮ ನಗುತ್ತಿದ್ದರು. ಅದೇ ಮರಳಿ ಮುಂಬೈಗೆ ಹೊರಡುವಾಗ ಹೋಗಬೇಡವೆಂದು ಅವನು ನನ್ನ ಕಾಲ್ಗಳನ್ನು ತಬ್ಬಿಕೊಳ್ಳುತ್ತಿದ್ದ. ಹದಿನಾಲ್ಕು ವರ್ಷಗಳು ನಮ್ಮೊಡನಿದ್ದ ಪ್ರಿಯಜೀವಗಳು! ಪ್ರಾಯಸಹಜ ದೌರ್ಬಲ್ಯಗಳಿಂದ ಮತ್ತೆ ನಮ್ಮ ಮಣ್ಣಲ್ಲಿ ಒಂದಾಗಿ ಹೋದವರು! ಊರಿಗೆ ಮರಳಿದಾಗ “ಅದೋ, ಅಲ್ಲಿ ಮಲಗಿದ್ದಾರೆ”, ಎಂದು ಅಮ್ಮ ತೋರಿದ, ಅವರು ಚಿರನಿದ್ರೆಯಲ್ಲಿ ಪವಡಿಸಿದ ಆ ನೆಲವೂ ಈಗ ನಮ್ಮದಲ್ಲ. ಚತುಷ್ಪಥಕ್ಕೆ ಸೇರಿಹೋಗಿದೆ. ಈಗಲೂ ನನ್ನ ಕನಸಲ್ಲಿ ಆಗಾಗ ಬರುವ ವಿಂಟರ್, ನನ್ನ ಮಡಿಲಿಗೆ ಮುಖ ಒತ್ತುತ್ತಿರುತ್ತಾನೆ; ತನ್ನ ಜಿಂಕೆಕಣ್ಗಳಿಂದ ನನ್ನನ್ನು ದಿಟ್ಟಿಸುತ್ತಾನೆ.

‍ಲೇಖಕರು nalike

July 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: