ಮೈ ನಾ ಹಿಂದೂ ನಾ ಮುಸಲ್ಮಾನ್…

ಜ್ಯೋತಿ ಇರ್ವತ್ತೂರು

ಪತ್ರಿಕೋದ್ಯಮದಲ್ಲಿ ಗಳಿಸಿದ ಅನುಭವ ಅಪಾರ. ಅದೂ ಕೂಡಾ ಇಡೀ ಕರ್ನಾಟಕ ಸುತ್ತುವ ಅವಕಾಶ ನೀಡಿದ ಸಿರಿಸಾಮಾನ್ಯ ಕಾರ್ಯಕ್ರಮ ಮಾತ್ರ  ನಾಡಿನ ಮೂಲೆ ಮೂಲೆಯಲ್ಲಿನ ಜನರ ನೋವು ನಲಿವು ಸೋಲು ಗೆಲುವು ಹೀಗೆ ಹತ್ತು ಹಲವಾರು ಮುಖಗಳ ಪರಿಚಯವನ್ನು ನನಗೆ ಮಾಡಿ ಕೊಟ್ಟಿತು.

ಹೀಗೆ ಒಂದೊಂದೇ ನೆನಪನ್ನು ಕೆದಕಿದಾಗ ತುಂಬಾ ಕಾಡಿದ್ದು ಫಾತಿಮಾಳ ಕಥೆ.

ಚಿಕ್ಕಬಳ್ಳಾಪುರದಲ್ಲೊಂದು ಹಳ್ಳಿ. ಅಲ್ಲಿನ ಬಡ ಕುಟುಂಬದಲ್ಲಿದ್ದ ಫಾತಿಮಾಗೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ. ಗಂಡ ಕುಡುಕನಾಗಿದ್ದರಿಂದ ಫಾತಿಮಾ ರೈಲು ಹತ್ತಿ ದೂರ ಪಯಣಿಸಿ ಮನೆಯೊಂದರಲ್ಲಿ ಕೆಲಸ ಮಾಡಿ ಮತ್ತೆ ವಾಪಾಸಾಗಬೇಕಿತ್ತು.

ತನ್ನ ಬಡತನ ಅಸಹಾಯಕತೆ ಮುಂದೊಂದು ದಿನ ತನ್ನನ್ನು ನರಕಯಾತನೆಗೆ ತಳ್ಳಬಹುದೆಂಬ ಕಲ್ಪನೆಯು ಫಾತಿಮಾಗೆ ಇರಲಿಲ್ಲ. 

ಹಾಗಾದರೆ ಫಾತಿಮಾಗೆ ಏನಾಯ್ತು ಅಂತ ನೀವು ಯೋಚನೆ ಮಾಡ್ತಿರಬಹುದಲ್ಲ. ಒಂದು ಸಿನಿಮಾ ಕಥೆ ತರ ಫಾತಿಮಾ ಜೀವನದಲ್ಲಿ ಘಟನೆಗಳು ನಡೆಯಲು ಆರಂಭವಾಗಿದ್ದು  ರೈಲಿನಲ್ಲಿ ಪರಿಚಯವಾದ ಒಬ್ಬಳಿಂದ. ಆಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ಕೀಳುಮನೋಭಾವದ ವ್ಯಕ್ತಿ ಎಂದು ಗೊತ್ತಿದ್ದರೆ ಬಹುಶಹ ಫಾತಿಮಾ ಖಂಡಿತವಾಗಿಯೂ ಆಕೆಯ ಬಳಿ ಮಾತನಾಡುತ್ತಿರಲಿಲ್ಲವೆನಿಸುತ್ತದೆ. ಮಾತಾಡುತ್ತಾ ಮಾತಾಡುತ್ತಾ ಫಾತಿಮಾಗೆ ಆಪ್ತಳಾದ ಆ ಹೆಂಗಸು ವೀಳ್ಯದೆಲೆಯ ಮೂಲಕ ಮತ್ತು ಬರಿಸುವ ಪದಾರ್ಥವನ್ನು ಫಾತಿಮಾಗೆ ನೀಡಿದ್ದಳು. ಮತ್ತು ಬರಿಸುವ ಆ ಪದಾರ್ಥವನ್ನು ಸೇವಿಸಿದ ಮೇಲೆ ಮುಂದೇನಾಯಿತು ಎಂಬುದು ಫಾತಿಮಾಗೆ ತಿಳಿಯಲಿಲ್ಲ.

ಆಮೇಲೆ ನಡೆದದೆಲ್ಲಾ ಸಿನಿಮಾ ಮಾದರಿಯ ಘಟನೆಗಳು. ದೆಹಲಿ ತಲುಪಿಸಿದ ಆ ಧೂರ್ತ ಮಹಿಳೆ  ಫಾತಿಮಾಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಳು. ದೂರದ ದೆಹಲಿಯಲ್ಲಿ ನಾಲ್ಕುಗೋಡೆಯ ಮಧ್ಯೆ ಫಾತಿಮಾ ಬಂಧಿಯಾದಳು.ಗೊತ್ತುಗುರಿಯಿಲ್ಲದ ಯಾವುದೋ ಗಿರಾಕಿಗಳು ಮೈಮೇಲೆ ಬೀಳುತ್ತಿದ್ದರು. ಕೆಲವರಂತೂ  ಸ್ಪಂದಿಸದೆ ಇದ್ದಾಗ ಹೊಡೆಯುತ್ತಿದ್ದರು. ಬದುಕು ನರಕವಾಗಿತ್ತು.ನೋವಿದ್ದರು ಹಣಕಾಸಿನ ತೊಂದರೆಯಿದ್ದರು ಗಂಜಿಕುಡಿದು ಸ್ವಲ್ಪವಾದರು ನೆಮ್ಮದಿಯಿಂದ ಬದುಕುತ್ತಿದ್ದ ಫಾತಿಮಾಳ ಈಗಿನ ಬದುಕನ್ನು ವಿವರಿಸುವುದು ಅಸಾಧ್ಯವಾಗಿತ್ತು.ಹೀಗೆ ಏಳೆಂಟು ವರುಶಗಳು ಸರಿದು ಹೋದವು.

ಅದೊಂದು ದಿನ ಗರ್ಭಕೋಶದ ತೊಂದರೆಯಿಂದ ಫಾತಿಮಾಗೆ ರಕ್ತವು ಧಾರಾಕಾರವಾಗಿ ಸುರಿಯಲಾರಂಭಿಸಿತು. ಅದು ಹೇಗೋ ಇದ್ದ ಧೈರ್ಯವನ್ನೆಲ್ಲಾ ಸೇರಿಸಿ ಫಾತಿಮಾ ಆ ಕತ್ತಲೆಯ ಕೋಣೆಯ ಕತ್ತಲೆ ಬದುಕಿನಿಂದ ರಾತ್ರೋ ರಾತ್ರಿ ತಪ್ಪಿಸಿಕೊಂಡು ರಸ್ತೆಯನ್ನರಸಿ ಹೊರಟೇ ಬಿಟ್ಟಿದ್ದಳು. ಮುಖ್ಯ ರಸ್ತೆ ಕೊನೆಗು ಸಿಕ್ಕಿತ್ತು. ಬಂದು ಅಯ್ಯೋ ಅನ್ನುತ್ತಾ ರಸ್ತೆ ಮೇಲೆ ಬೀಳುತ್ತಲೇ ತಲೆ ಸುತ್ತು ಬಂದಂತಾಯಿತು.

ಆಗ ದೇವರಂತೆ ಬಂದವನು ಮನು.ಫಾತಿಮಾ ಮುಸ್ಲಿಂ ಈತ ಹಿಂದೂ. ಜಾತಿಯ ಅಡ್ಡಗೋಡೆ ಮಾನವೀಯತೆಯ ಮಧ್ಯೆ ಸುಳಿಯಲಿಲ್ಲ. ತನ್ನ ಆಟೋದಲ್ಲಿ ಫಾತಿಮಾನ ಎತ್ತಿಕೊಂಡು ಮನೆಗೆ ಕರೆದುತಂದು ಉಪಚರಿಸಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಮನು ಚಿಕಿತ್ಸೆಯನ್ನು ಕೊಡಿಸಿದ. ಕೆಲವು ದಿನಗಳ ಬಳಿಕ ಸ್ವಲ್ಪ ಆರೋಗ್ಯ ಸುಧಾರಿಸಿದಾಗ ಮನೆಯ ವಿಳಾಸ ಕೇಳಿದ ಮನುವಿಗೆ  ತನ್ನದು ಚಿಕ್ಕಬಳ್ಳಾಪುರವೆಂದು ಫಾತಿಮಾ ತಿಳಿಸಿದಳು. ಆ ಪ್ರಕಾರ ಮನು ಫಾತಿಮಾಳನ್ನು ಆಕೆಯ ಊರಿಗೆ ಕರೆದುಕೊಂಡು ಬಿಟ್ಟ. ಸಂಶಯದಿಂದ ನೋಡಿದ ಪತಿ ನೆರೆಹೊರೆಯವರು ಕೊನೆಗೆ ಆಕೆಯ ಕರುಣಾಜನಕ ಕಥೆ ಕೇಳಿ ಮರುಗಿದರು. ತಾಯಿಯಿಲ್ಲದೆ ತಬ್ಬಲಿಯಾಗಿದ್ದಂತ ಮಕ್ಕಳು ಅಮ್ಮನ ಮಡಿಲನ್ನು ಕೊನೆಗು ಸೇರಿದರು.

ನಾನು ಭೇಟಿಕೊಟ್ಟಾಗ ಘಟನೆಯ ಆಘಾತದಿಂದ ಸಂಪೂರ್ಣವಾಗಿ ಫಾತಿಮಾ ಹೊರಗೆ ಬಂದಂತೆ ಕಾಣಲಿಲ್ಲ. ಮನುವತ್ತ ಕಣ್ಣು ಹರಿಸಿದೆ. ಜಾತಿ ಲೆಕ್ಕಾಚಾರ  ಹಾಕದ ಮಾನವೀಯತೆಯನ್ನ ಆತನ ಕಣ್ಣು ಹೃದಯ ಪ್ರತಿಬಿಂಬಿಸುತ್ತಿದ್ದವು.

ಮೈ ನಾ ಹಿಂದೂ ನಾ ಮುಸಲ್ಮಾನ್  ಮುಜೆ  ಜೀನೇದೋ ಎಂಬ ಜಗಜೀತ್ ಸಿಂಗ್ ಗಜಲ್ ಸಾಲುಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಸಿದವು.

ಹಿಜಾಬ್ ಗಲಾಟೆ ಇದರ ರಾಜಕೀಯ ಲಾಭ ಪಡೆಯಲು ಹೊರಟಿರುವ ಶಕ್ತಿಗಳು ಈ  ವಿಚಾರದಿಂದ ಮನಸ್ಸು ಜೋಡಿಸುವ ಮುಗ್ಧ ಮಕ್ಕಳಲ್ಲೇ ವಿಶಬೀಜಬಿತ್ತುವ ಶಕ್ತಿಗಳನ್ನು ಕಂಡು ನೋವಿನ ಎಳೆಯೊಂದು ಹೃದಯಯನ್ನ ಚುಚ್ಚುವಾಗ ಫಾತಿಮಾ ಮತ್ತು ಮನು ನೈಜ ಕಥೆ ಎಲ್ಲೋ ಭರವಸೆಯ ಕಿರಣವಾಗಿ ಗೋಚರಿಸುತ್ತದೆ.

‍ಲೇಖಕರು Admin

February 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: