ಚಂದ್ರಪ್ರಭ ಕಠಾರಿ ಕಥೆ- ಮುಚ್ಚಟೆ…

ಚಂದ್ರಪ್ರಭ ಕಠಾರಿ

ಹುಟ್ಟಿ ಬೆಳೆದ ಮನೇಲಿ ಸಕಲ ಸೌಕರ್ಯಗಳಿದ್ದರೂ, ಸುಮ್ಮನೆ ಇರಲಾರದೆ ತನ್ನ ದುಡಿಮೆಯ ಸ್ವಂತ ಮನೆಕಟ್ಟಬೇಕೆಂಬ ಉಮೇದಿಗೆ ಬಿದ್ದು, ನಿವೃತ್ತಿಯಾದಾಗ ಬೇಕಾದೀತೆಂದು ಬ್ಯಾಂಕಿನಲ್ಲಿಟ್ಟಿದ್ದ ಠೇವಣಿಯನ್ನೆಲ್ಲ ಮುರಿಸಿ, ಇತ್ತೀಚಿಗೆ ಟ್ರಿಪ್ಲೆಕ್ಸ್ ಅಂತ ಮೂರು ಮಹಡಿಯ ಹೊಸಮನೆ ಕಟ್ಟಿಸಿ ತಪ್ಪು ಮಾಡಿದೆ ಎಂದು ಆನಂದನಿಗೆ ಅನಿಸಿದೆ. ಬ್ಯಾಂಕಿನಲ್ಲಿದ್ದ ತನ್ನ ಜೀವಮಾನದ ಉಳಿತಾಯದ ಹಣವೆಲ್ಲ ಕರಗಿ, ಆಕಸ್ಮಿಕವಾಗಿ ಏನಾದರೂ ಅವಘಡ ಸಂಭವಿಸಿದರೆ ಏನು ಮಾಡುವುದೆಂಬ ಆತಂಕ ಆವರಿಸುತ್ತದೆ. ಹಾಗೆಂದು ಹೊಸಮನೆ ಕಟ್ಟುವ ನಿರ್ಧಾರ, ನಿಂತಲ್ಲೇ ದಿಢೀರೆಂದು ತೆಗೆದುಕೊಂಡ ನಿರ್ಧಾರವೇನು ಆಗಿರಲಿಲ್ಲ.

ನೋಟುಬಂಧಿಯಾಗಿ ಕಾಮಗಾರಿ ಕೆಲಸಗಳು ನಿಂತಾಗ, ಆದಾಗಲೇ ಉತ್ತರಭಾರತದಿಂದ ಬಂದು ಉಳಿದಿದ್ದ, ಅರ್ಧ ಕೆಲಸಗಾರರು ಹೋದವರು ಮತ್ತೆ ಹಿಂತಿರುಗಲಿಲ್ಲ. ನಂತರ ಬಂದ ಜಿಎಸ್ಟಿಯೆಂಬ ಹೊಸ ತೆರಿಗೆ ಪದ್ಧತಿಯಿಂದ, ಮಾಲೀಕರು ಅಂದಾಜು ವೆಚ್ಚ ಹೆಚ್ಚಾಯಿತೆಂಬ ನೆಪ ಹೇಳಿ, ಇಂಜಿನಿಯರ್ಗಳ ಕೈಬಿಟ್ಟು, ಮೇಸ್ತ್ರಿಗಳ ನೇಮಿಸಿಕೊಂಡು ತಾವೇ ಮನೆಕಟ್ಟಲು ನಿಂತರು. ಇನ್ನೂ ಕೊರೊನಾ ಬಂದಾಗಿನಿಂದ ಕೇಳುವುದೇ ಬೇಡ! ಅತ್ತ ಅಳಿದುಳಿದ ಸ್ಥಳೀಯ ಕೆಲಸಗಾರರು ಗುಳೇ ಹೊರಟರೆ, ಇತ್ತ ಮನೆ ಕಟ್ಟುವವರ ಬೇಡಿಕೆ ಅಲ್ಲಿಗೆ ನಿಂತಂತಾಗಿತ್ತು. 

ಇಂಥ ಪರಿಸ್ಥಿತಿಯಲ್ಲಿ, ಮೂವತ್ತು ವರುಷಗಳಿಂದ ಮನೆಗಳನ್ನು ಕಟ್ಟಿಕೊಂಡು ಬಂದ ಆನಂದನಿಗೆ, ಕಡಿಮೆ ದುಡ್ಡಿಗೆ ಹೆಚ್ಚು ಗುಣಮಟ್ಟ ನಿರೀಕ್ಷಿಸುವ ಮಾಲೀಕರೊಂದಿಗೆ ಮತ್ತು ಕೆಲಸಕ್ಕೆ ಹೇಳದೆ ಚಕ್ಕರ್ ಕೊಡುವುದು ಗಹನವಾದ ವಿಷಯವಲ್ಲ ಎಂಬ ಮನೋಭಾವದ ಕೆಲಸಗಾರರೊಂದಿಗೆ ಏಗುತ್ತ ಬಸವಳಿದಿದ್ದವನಿಗೆ ಕಾಮಗಾರಿ ಕೆಲಸ ಸಾಕೆನಿಸಿತ್ತು. ಹೇಗಿದ್ದರೂ ಮಗಳು ಅರ್ಕಿಟೆಕ್ಟ್ ಓದು ಮುಗಿಸಿ, ಮದುವೆಯ ಜವಾಬ್ದಾರಿಯೂ ಮುಗಿದಿದೆ. ದುಡಿಮೆಯಿಂದ ನಿವೃತ್ತನಾಗಿ ಮನೆ ಕಟ್ಟಿಸಿ, ಹೊಸ ಪುಸ್ತಕ ಲೋಕಾರ್ಪಣೆಗೊಂಡಾಗೆಲ್ಲ ಆಸೆಯಿಂದ ಕೊಂಡು ತಂದು, ಓದದೆ ಕಪಾಟಿನಲ್ಲಿ ರಾಶಿ ಬಿದ್ದಿದ್ದ ಪುಸ್ತಕಗಳನ್ನು ಆರಾಮಾಗಿ ಓದುತ್ತ ಕೂಡಬೇಕೆಂದವನಿಗೆ ಈಗ ನಿರಾಶೆ ಕಾಡುತ್ತಿದೆ. 

ಗೃಹಪ್ರವೇಶ ಸಮಾರಂಭ ಮುಗಿದು, ಬಂದ ನೆಂಟರಿಷ್ಟರೆಲ್ಲ ಹೊರಟು, ಅತ್ತೆ – ಮಗಳು, ಮೊಮ್ಮಗಳಷ್ಟೆ ಉಳಿದು, ನಿಶ್ಯಬ್ದತೆಗೆ ಹೊರಳಿದ ಹೊಸಮನೆಗೆ, ಹಳೇಮನೆಯಿಂದ ಸಾಮಾನುಗಳನ್ನು ಸಾಗಿಸಿ ಉಸ್ಸಪ್ಪ ಅಂದು ಇನ್ನು ತಾನು ನಿರಾಳ ಎಂದುಕೊಂಡವನಿಗೆ ದೀಪಾಳು ಸಿಡಸಿಡ ಎನ್ನುವುದು ಕಿರಿಕಿರಿಯಾಗಿ ಕಾಡಿದೆ. 

ಯಾವತ್ತು ಇರುವೆಯಂತೆ ಮನೆ ತುಂಬ ಓಡಾಡುತ್ತ ಮನೆಗೆಲಸ ಒಬ್ಬಳೇ ಮಾಡುತ್ತ ಒತ್ತಡದಲ್ಲಿರುವವಳು, ಕೆಲಮೊಮ್ಮೆ ಧ್ವನಿ ಎತ್ತರಿಸಿ ಮಾತಾಡೋದು ಆನಂದನಿಗೆ ಹೊಸದೇನಲ್ಲ. ಮೊದಲಿದ್ದ ಮನೇಲಿ ಕೂಡ ‘ ತೊಳೆದಷ್ಟೂ ಪಾತ್ರೆಗಳು ಸಿಂಕಲ್ಲಿ ಬೀಳ್ತಾನೇ ಇರುತ್ತೆ. ಮನೆ ಕಸಗುಡಿಸಿ, ಒರೆಸಿ ಸಾಕಾಗಿದೆ. ಎಲ್ಲದಕ್ಕೂ ನನ್ನ ಕರೀಬೇಡಿ…..’ ಹೀಗೆ ಇದ್ದದ್ದೇ. “ಎಲ್ಲವನ್ನೂ ನೀನೊಬ್ಬಳೇ ಏಕೆ ಮಾಡುತ್ತಿ? ಮನೆಗೆಲಸಕ್ಕೆ ಯಾರಾದ್ರು ಒಬ್ಬರನ್ನು ಇಟ್ಕೊಂಡ್ರೆ ಆಯ್ತಪ್ಪ!”  ಅಂದರೆ ಅದಕ್ಕೆ ಅವಳು ಸುತರಾಂ ಒಪ್ಪುವುದಿಲ್ಲ. ಅವರು ಕೇಳಿದಷ್ಟು ಸಂಬಳ ಕೊಡಬೇಕು, ಮೇಲಾಗಿ ಯಾವ ಯಾವ ಜನಗಳು ಬರ್ತಾರೊ ಎನ್ನುವ ವಿಚಿತ್ರ ತರ್ಕವನ್ನು ಮುಂದಿಡುತ್ತಿದ್ದಳು.

ಕಂಟ್ರಾಕ್ಟ್ ಕೆಲಸದ ಒತ್ತಡದಲ್ಲಿ, ಆಗೆಲ್ಲ ಅವಳ ಮಾತಿಗೆ ಪ್ರತಿ ಮಾತಾಡಿ ಮನೆಸೂರು ಹಾರಿಹೋಗುವಂತೆ ಆನಂದ, “ನನಗೂ ಹೊರಗೆ ತಿರುಗಾಡಿ ಸುಸ್ತಾಗುತ್ತೆ, ತಿಳ್ಕೊ. ಸಣ್ಣಸಣ್ಣ ವಿಷಯಕ್ಕು ವಟಗುಟ್ಟೋದನ್ನ ನಿಲ್ಸು!” ಎಂದು ಕೂಗಾಡುತ್ತಿದ್ದದ್ದು ಹೌದು! ಕಾಲ ಸರಿದಂತೆ ದೀಪಾಳ ಅಸಹನೆ, ಸಿಟ್ಟು – ಮನೆಗೆಲಸದ ಒತ್ತಡದಿಂದಷ್ಟೇ ಅಲ್ಲದೆ ತಿಂಗಳಿಗೊಮ್ಮೆ ಬರುವ ಮುಟ್ಟಿನಿಂದಾಗುವ ದೈಹಿಕ, ಮಾನಸಿಕ ಕಿರಿಕಿರಿಯ ಪರಿಣಾಮವೆಂದು ಅವಳ ಮಾತಿನಿಂದ, ನಡತೆಯಿಂದ ಆನಂದನಿಗೆ ತಿಳಿಯುವ ಹೊತ್ತಿಗೆ ಮಗಳು ಬೆಳೆದು ಮದುವೆಗೆ ನಿಂತಿದ್ದಳು. ಹಾಗೆ ಜ್ಞಾನೋದಯವಾದಾಗಿನಿಂದ ಅವಳು ಸುಖಾಸುಮ್ಮನೆ ರೇಗುವಾಗಲೆಲ್ಲ ಮೌನವಾಗಿರೋದನ್ನು ಆನಂದ ರೂಢಿಸಿಕೊಂಡಿದ್ದಾನೆ. 

ಮೊದಲಿದ್ದಕ್ಕಿಂತ ಹೆಚ್ಚು ಗಾಳಿ, ಬೆಳಕಿರುವ ಹೊಸ ವಿಶಾಲವಾದ ಹೊಸಮನೆಯಲ್ಲಿ  ದೀಪಾಳು ನೆಮ್ಮದಿ ಕಾಣಬೇಕಿತ್ತು. ಒಂದೆರೆಡು ವಾರದ ಮಟ್ಟಿಗೆ ಹಾಗೆ ತನ್ನ ಜೀವನದ ಅತೀ ಸಂತಸ ಕ್ಷಣಗಳನ್ನು ಅನುಭವಿಸುತ್ತಿದ್ದೇನೆನ್ನುವಂತೆ ಹುರುಪಿನಿಂದಿದ್ದಳು ಕೂಡ. ಆಮೇಲೆ ಅದೇನಾಯಿತೊ, ಮತ್ತೆ ಹಳೆಯ ಚಾಳಿ ಮರುಕಳಿಸಿತು ಎಂಬಂತೆ ಮತ್ತೆ ಗೊಣಗಾಟ, ಕೂಗಾಟ ಮುಂಚೆಗಿಂತ ಹೆಚ್ಚಾಗಿದೆ.

ಹೆಚ್ಚು ವಿಸ್ತಾರದ ಮೂರು ಅಂತಸ್ತಿನ ಮನೆಯ ಎಲ್ಲ ಕೆಲಸವನ್ನು ಒಬ್ಬಳೇ ಮಾಡಿ ಸುಸ್ತಾಗುವವಳಿಗೆ ಮನೆಗೆಲಸದವಳನ್ನು ನೇಮಿಸಿಕೋ ಎಂದು ಸಲಹೆ ಕೊಡುವ ಮನಸ್ಸಿಲ್ಲ. ಆ ಪ್ರಯೋಗ ಈಗಾಗಲೇ ನಿಷ್ಪಲವಾಗಿದೆ. ಎಳೆಕಂದಮ್ಮನನ್ನು ನೋಡಿಕೊಳ್ಳುತ್ತ ಮಗಳು, ವಯಸ್ಸಾದ ಅತ್ತೆ – ಅಷ್ಟುಇಷ್ಟು ಕೆಲಸಕ್ಕೆ ಕೈ ಹಂಚಿಕೊಳ್ಳುತ್ತರಾದರೂ, ಅವಳಿಗೆ ಸಮಾಧಾನವಿಲ್ಲ, ಸಿಡುಕುವಿಕೆಗೆ ನಿಂತಿಲ್ಲ.

ಕೆಲವೊಮ್ಮೆ ದೀಪಾಳ ಅಸಹನೆಗೆ ಬೇರೇನೊ ಕಾರಣ ಇರಬಹುದೆಂಬ ಸಣ್ಣ ಗುಮಾನಿ ಆನಂದನಿಗೆ ಇದೆ. ಅದಕ್ಕೆ ಪುರಾವೆ ಎಂಬಂತೆ, ಬೆಳಿಗ್ಗೆ ಪರಶುರಾಮ ಮನೆಯ ಮುಂದಿದ್ದ ಪಾರಿಜಾತ ಗಿಡದಲ್ಲಿ ಪೂಜೆಗಾಗಿ ಹೂಗಳನ್ನು ಬಿಡಿಸಿ ಕೊಟ್ಟದ್ದನ್ನು ಅವನ ಮಗ ಪುಟ್ಟ ರಾಘು ಬಟ್ಟಲು ಹಿಡಿದು ತಂದಿದ್ದಾನೆ. ಬಟ್ಟಲನ್ನು ಕೈಗೆ ಕೊಡದೆ ನೆಲಕ್ಕೆ ಇಟ್ಟು ಹೋಗು ಎಂದದ್ದು ಅವನಿಗೆ ತಿಳಿಯದೆ, ಅವಳ ಕೈಗೆ ಬಟ್ಟಲನ್ನು ತುರುಕಿ ಓಡಿದ್ದಾನೆ. ಅಷ್ಟಕ್ಕೆ, ಆಕಾಶ ಕಳಚಿ ಬಿದ್ದ ಹಾಗೆ “ ದರಿದ್ರ ಮುಂಡೇವು. ಎಲ್ಲಿಂದ ಬಂದವೋ? ಕೈ ಮುಟ್ಟಿ ಮಡಿ ಹಾಳು ಮಾಡಿದ. ಈಗ ಮತ್ತೆ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಅದೆಷ್ಟು ಸರ್ತಿ ಹೇಳೋದು ಅವರನ್ನೆಲ್ಲ ಬಿಡಿಸಿ, ಮನೆ ಖಾಲಿ ಮಾಡಿ ಯಾರಿಗಾದರೂ ಬಾಡಿಗೆಗೆ ಕೊಡಿ ಅಂತ. ನನ್ನ ಮಾತು ಯಾವತ್ತು ನಡೆದಿದೆ ಈ ಮನೇಲಿ…” ಅಂತ ಒಂದೇ ಸಮನೆ ವಟಗುಟ್ಟುತ್ತಿದ್ದಾಳೆ.

ರಾಘು ಐದಾರು ವರುಷದ ಪುಟ್ಟಮಗು. ಮಡಿ, ಮೈಲಿಗೆ ಅವನಿಗೇನು ತಿಳಿಯುತ್ತೆ? ದೀಪಾಳಿಗೆ ಅದು ಏಕೆ ಅರ್ಥವಾಗುವುದಿಲ್ಲ! ಅಲ್ಲದೆ, ಮೈಲಿಗೆಯಾಯಿತು ಎನ್ನುವುದು ಬರೇ ಶುಚಿತ್ವದ ಮಾತೋ ಅಥವಾ ಅವನು ಬೇರೆ ಜಾತಿಯವನು ಎನ್ನುವ ಕಾರಣಕ್ಕೊ? ಆನಂದನಿಗೆ ಉತ್ತರ ಮಾರ್ಮಿಕವಾದುದು ಎನಿಸಿತು.   

ಪುಟ್ಟ ರಾಘುನ ಶ್ರವಣ ದೋಷ ದೀಪಾಳಿಗೆ ಗೊತ್ತಿಲ್ಲವೋ ಅಥವಾ ಗೊತ್ತಿದ್ದರೂ ಅದಕ್ಕೆ ವಿನಾಯಿತಿ ಇಲ್ಲವೋ? ಅವಳ ನಡವಳಿಕೆಯಿಂದ ಆನಂದನಿಗೆ ಅನುಮಾನ ಬರುತ್ತದೆ. ರಾಘುನ ಸಮಸ್ಯೆಯ ಬಗ್ಗೆ ತನಗೂ ಮೊದಲು ತಿಳಿದಿರಲಿಲ್ಲವಷ್ಟೆ!  

ಹೊಸಮನೆಗೆ ಪಾಯ ಹಾಕುತ್ತಿದ್ದ ಸಮಯ. ಒಂದೇ ಸಮನೆ ಚಿಟಗುಡುತ್ತ ಸುರಿಯುತ್ತಿದ್ದ ಮಳೆಗೆ, ಇಡೀ ಸೈಟು ಕೆಸರಿನ ಗದ್ದೆಯಾಗಿ, ಕಾಲಿಟ್ಟರೆ ಸಾಕು ಜಾರಿ ಬೀಳುವಂತಾಗುತ್ತಿತ್ತು. ಅದರ ಪರಿವೇ ಇಲ್ಲದೆ ಉತ್ತರಕರ್ನಾಟಕದ ಕಾಂಕ್ರೀಟು ಗ್ಯಾಂಗಿನ ಮಹಿಳೆಯರು, ಹವಾಯಿ ಚಪ್ಪಲಿ ತೊಟ್ಟು ತಲೆಗಿಟ್ಟ ಸಿಂಬೆಯ ಮೇಲೆ ಬಾಂಡ್ಲಿ ಕಾಂಕ್ರೀಟು ಹೊತ್ತು ಕೂಗುತ್ತ ಪುಟುಪುಟು ನಡೆದಾಡುತ್ತಿದ್ದರು. ಕಾಲಮ್ಮಿನ ಪಾಯದ ಗುಂಡಿಗಳಿಗೆ ಕಾಂಕ್ರೀಟು ಸುರಿದಷ್ಟೂ ಚಿಲುಮೆಯಂತೆ ಭೂಮಿಯಿಂದ ಒಸರುತ್ತಿದ್ದ ನೀರು ತೊಯ್ದಾಡುತ್ತ ಮೇಲೇರಿ ಬರುತ್ತಿತ್ತು. ಆಳದ ಪಾಯದ ಗುಂಡಿಯಲ್ಲಿ, ತೊಯ್ದ ಮಣ್ಣಿನಗೋಡೆಗಳು ಯಾವಾಗ ಕುಸಿಯುತ್ತದೋ ಎಂಬ ಆತಂಕದಲ್ಲೇ ಪರಶುರಾಮನ ಸಹಿತ ಗಾರೆ, ಕೂಲಿ ಕೆಲಸಗಾರರು ಜೀವದ ಹಂಗು ತೊರೆದು ಕೆಲಸಕ್ಕಿಳಿದಿದ್ದರು.

ಕಟ್ಟಡ ನಿರ್ಮಾಣದ ಸಿವಿಲ್ ಇಂಜಿನಿಯರಿಂಗ್ ಪರಿಣತಿಯಲ್ಲಿ ಬೆಂಗಳೂರಿನ ಮಳೆಗೆ ಯಾರು ಹೆದರುತ್ತಾರೆ ಎಂಬ ಹುಂಬಧೈರ್ಯದಿಂದ, ಅಕ್ಕಪಕ್ಕ ಮನೆಯವರು ಇದೆಲ್ಲ ಕೆರೆಅಂಗಳದ ಜಾಗ, ಪಾಯದ ಕೆಲಸವನ್ನು ಮಳೆಗಾಲದಲ್ಲಿ ಪ್ರಾರಂಭಿಸಬಾರದಿತ್ತು ಅಂತ ಎಚ್ಚರಿಸಿದ್ದರೂ ಅವರ ಮಾತಿಗೆ ಕಿವಿಯಾಗದೆ ತಪ್ಪು ಮಾಡಿದೆನೆಂದು ಆನಂದನಿಗೆ ಅನಿಸಿತ್ತು. 

ಗಡಾರಿ ಹಾಕಿ ಮಣ್ಣು ಸಡಿಲ ಮಾಡಿ, ಗುದ್ದಲಿಯಿಂದ ನೆಲ ಬಗೆದರೆ ಸಾಕು, ಕೇವಲ ಒಂದು ಅಡಿ ಅಗೆತದ ಭೂಮಿಯಲ್ಲಿ ನೀರು ಕಾಣಿಸುತ್ತಿತ್ತು. ಪಂಪನ್ನಿಟ್ಟು ಕೆಸರಿನ ನೀರನ್ನು ಖಾಲಿ ಮಾಡಿ, ಮತ್ತೆ ಅಗೆಯಬೇಕಿತ್ತು. ಆಳಕ್ಕೆ ಇಳಿದಂತೆಲ್ಲ ಅಕ್ಕಪಕ್ಕದ ಮಣ್ಣಿನ ಗೋಡೆಗಳು ಪುಸಕ್ಕೆಂದು ಕುಸಿದು, ಅಗೆದ ಕೆಲಸವೆಲ್ಲ ವ್ಯರ್ಥವಾಗಿ ಮತ್ತೆ ಅಗೆಯುವ ರೇಜಿಗೆ ಹುಟ್ಟು ಹಾಕಿತ್ತು. ಹಾಗೆ ನೀರನ್ನು ಪಂಪು ಮಾಡುತ್ತ, ಆಳಕ್ಕಿಳಿದರೂ ಗುಂಡಿಯ ಗೋಡೆಗಳು ಯಾವತ್ತು ಕೆಲಸಗಾರರ ಮೇಲೆ ಕುಸಿಯುವ ಭಯವಿದ್ದೇ ಇತ್ತು.

ಹಾಗಾಗಿ, ಗುಂಡಿ ತೊಡಿದ ಕೆಲಸ ಮುಗಿದರೂ, ಕಂಬಿ ಕೆಲಸದವರು, ಕಾಂಕ್ರೀಟ್ ಹಾಕಲು ಗಾರೆಯವರು, ಕೂಲಿಗಳು ಗುಂಡಿಗಿಳಿಯಲು ಧೈರ್ಯ ಮಾಡುತ್ತಿರಲಿಲ್ಲ. ನಿಲ್ಲದ ಮಳೆಯಲ್ಲಿ ಗುಂಡಿ ಅಗೆಯುವುದು, ಗೋಡೆಗಳು ಕುಸಿದು ಗುಂಡಿ ಮುಚ್ಚುವುದು ಪುನರಾವರ್ತನೆಯಾಗಿ, ಮಳೆ ನಿಲ್ಲುವವರೆಗೆ ಪಾಯದ ಕೆಲಸವನ್ನು ನಿಲ್ಲಿಸುವುದೇ ಸರಿಯೆಂದು ಆನಂದ ನಿರ್ಧರಿಸಿದ. ಮನಸ್ಸಿನಲ್ಲಿಯೇ ಅದು ತನ್ನ ವೃತ್ತಿಜೀವನದ ಪ್ರಥಮ ಸೋಲೆಂದು ಭಾವಿಸಿದ. 

ಅಷ್ಟೊಂದು ಮನೆಗಳನ್ನು ಕಟ್ಟಿದವನಿಗೆ, ತನ್ನ ಸ್ವಂತ ಮನೆಯ ಕೆಲಸ ಆರಂಭದಲ್ಲಿಯೇ ನಿಂತಿದ್ದಕ್ಕಾಗಿ ನೊಂದಿದ್ದ ಆನಂದನ ನೆಮ್ಮದಿಯನ್ನು ಮತ್ತಷ್ಟು  ಹಾಳು ಮಾಡಲು ಸ್ನೇಹಿತರು, ನೆಂಟರಿಷ್ಟರು ರೆಡಿಯಾಗೇ ಇದ್ದರು. ‘ಪಾಯದ ಕೆಲಸ ಪ್ರಾರಂಭಿಸುವ ಮುಂಚೆ ಭೂಮಿ ಪೂಜೆ ಮಾಡಬೇಕಿತ್ತು. ವಾಸ್ತುಪೂಜೆ ಮಾಡಿಸಬೇಕಿತ್ತು. ಈಶಾನ್ಯ ದಿಕ್ಕಿನಿಂದ ಕೆಲಸ ಆರಂಭಿಸಬೇಕಿತ್ತು. ಆಗ ಇಂಥ ಉಪಸರ್ಗಗಳು ಬರುತ್ತಿರಲಿಲ್ಲ’ ಎಂಬಿತ್ಯಾದಿಯಾಗಿ ಕುಂಟೇಕೊಸರು ತೆಗೆದಿದ್ದರು. ಭೂಮಿಪೂಜೆ ಬೇಕಿದ್ದರೆ ನಿನಗೆ ತಿಳಿದಂತೆ ಮಾಡಿಕೋ, ಪುರೋಹಿತರು ಮಾತ್ರ ಬೇಡ ಎಂದಿದ್ದಕ್ಕೆ, ತನಗೆ ತೋಚಿದಂತೆ ತೊಳೆದಿಟ್ಟ ಸೈಜುಗಲ್ಲು, ಇಟ್ಟಿಗೆಗಳಿಗೆ ಅರಿಶಿನ-ಕುಂಕುಮ ಹಚ್ಚಿ, ವೀಳ್ಯೆದೆಲೆಯ ಮೇಲೆ ಬಾಳೇಹಣ್ಣನ್ನು ಇಟ್ಟು, ಕರ್ಪೂರ ಹಚ್ಚಿ ಪೂಜೆ ಮಾಡಿದ್ದ ದೀಪಾಳು, ತಾನು ಪೂಜೆ ಮಾಡಿದ್ದರಿಂದಾಗಿ ಕೆಲಸ ನಿಂತಿತೆಂದು ದೀಪಾ ಪರಿತಪಿಸಿದ್ದಳು.

ದಿನಾಲೂ ಸೈಟಿಗೆ ಹೋಗೋದು, ಅರೆಬರೆ ತೆಗೆದ ಗುಂಡಿಗಳಿಂದ, ರಾಶಿರಾಶಿ ಬಿದ್ದ ಮಣ್ಣಿನ ಗುಡ್ಡೆಗಳಿಂದ ಸ್ಮಶಾನದಂತೆ ವಿಕಾರವಾಗಿ ಕಾಣುತ್ತಿದ್ದ ಸೈಟನ್ನು ನೋಡುತ್ತ ತಾಸುಗಟ್ಟಲೆ ನಿಂತು ಹ್ಯಾಪುಮೋರೆಯೊತ್ತು ವಾಪಸ್ಸು ಬರುವುದು ಆನಂದನಿಗೆ ದಿನಚರಿಯಾಯಿತು. ಕೆಲಸ ನಿಂತು ಒಂದು ವಾರವಾಗಿರಬಹುದು. ಪರಶುರಾಮ ಬಂದವನು ‘ಸಾರ್, ಹಿಡಿದ ಕೆಲಸ ನಿಲ್ಲಿಸುವುದು ಒಳ್ಳೇದಲ್ಲ. ಏನೇ ಆಗಲಿ ಮತ್ತೆ ಪಾಯದ ಕೆಲಸ ಶುರು ಮಾಡೋಣ. ಇಲ್ಲಿನ ಮಣ್ಣುಗೆಲಸದ ವಡ್ಡರು ಹೆದರುಪುಕ್ಕಲರು. ಗುಂಡಿಗಿಳಿಯಲು ಹೆದರುತ್ತಾರೆ. ಅದಕ್ಕೆ ನಮ್ಮ ಊರಿಂದ ಆಳುಗಳನ್ನು ಕರೆಸಿದ್ದೇನೆ. ನಿತ್ಯ ಗದ್ದೆಗಳಲ್ಲಿ ಕೆಲಸ ಮಾಡುವ ಅವರಿಗೆ ಭೂತಾಯಿ ಏನು ಮಾಡಲ್ಲ’ ಅಂದಾಗ, ಆನಂದನಿಗೆ ಮೈಮನಸಲ್ಲಿ ಎಂತದೋ ಹೊಸಚೈತನ್ಯ ಹರಿದಾಡಿದಂತಾಗಿ ‘ಆಯ್ತು ಪರಶು, ನಾಳೆಯೇ ಶುರು ಮಾಡೋಣ’ ಎಂದು ಹೊಸ ಉಮ್ಮಸ್ಸಿನಿಂದ ಎದ್ದಿದ್ದ.     

ಗುಂಡಿಯ ಮೇಲುಗಡೆ ಬಲಗೈಲಿ ಕೊಡೆ, ಎಡಗೈಲಿ ಎದೆ ಹಿಡಿದು ಕಾಂಕ್ರೀಟ್ ಮುಗಿದರೆ ಸಾಕಪ್ಪ ಎಂದು ಆತಂಕದಲ್ಲಿ ನಿಂತ ಆನಂದನಿಗೆ, ಕೆಲಸಗಾರರು ಮಳೆಯಲ್ಲಿ ತೊಯ್ಯುತ್ತಲಿರುವಾಗ ತಾನು ಕೊಡೆ ಹಿಡಿದು ಮಳೆಯಿಂದ ರಕ್ಷಿಸಿಕೊಳ್ಳುವುದು ಅಪರಾಧವಾಗಿ ಕಂಡಿತು. ಕೊಡೆ ಮಡಿಸುವ ಹೊತ್ತಿಗೆ ರಸ್ತೆಯಲ್ಲಿ ನಿಂತಿದ್ದ ಕಾಂಕ್ರೀಟ್ ಗ್ಯಾಂಗಿನವರು “ಹೋ!” ಎಂದು ಒಟ್ಟಿಗೆ ಕೂಗಿದ್ದು ಕೇಳಿ ಜಾರಿಕೆ ನೆಲದಲ್ಲೇ ಅತ್ತ ಹೊರಟ. ರಸ್ತೆ ಬದಿಗಿದ್ದ ಗುಂಡಿಯಲ್ಲಿ ಮಣ್ಣುಗೋಡೆಗಳು ಕುಸಿದಿದ್ದವು.

ಆಟವಾಡುತ್ತ ಅದೇಕೆ ಅಲ್ಲಿಗೆ ಬಂದನೋ ಗೊತ್ತಿಲ್ಲ! ಮಾರುದ್ದ ಆಳದ ಗುಂಡಿಯಲ್ಲಿ ಬಿದ್ದಿದ್ದ ಚೆಂಡನ್ನು ತೆಗೆಯಲು ಹೋದ ರಾಘು, ಮಣ್ಣಿನಲ್ಲಿ ಎದೆಮಟ್ಟದವರೆಗೆ ಹೂತು ಹೋಗಿದ್ದ. ಕೈಗಳನ್ನು ಆಡಿಸುತ್ತ ಭಯದಿಂದ ಅಳುತ್ತ, ಚೀರುತ್ತಿದ್ದ. ಮಿಕ್ಸರ್ ಬಳಿ ಕಾಂಕ್ರೀಟನ್ನ ಬಾಂಡ್ಲಿಗೆ ತುಂಬುತ್ತಿದ್ದ ಕೆಲಸಗಾರರು, ಗುದ್ದಲಿ ಹಿಡಿದು ಧಾವಿಸಿ ಬಂದು ಅವನ ಸುತ್ತಲ್ಲಿದ್ದ ಮಣ್ಣನ್ನು ಅಗೆದು, ಅವನನ್ನು ಬಿಡಿಸಿದರು. ಒಂದೇ ಸಮನೆ ಅಳುತ್ತ, ಮಣ್ಣನ್ನು ಮೆತ್ತಿಗೊಂಡು ಗೊಂಬೆಯಂತಿದ್ದ ರಾಘುವನ್ನು ಪರಶುರಾಮ ಸಂತೈಸುತ್ತ ಶೆಡ್ಡಿಗೆ ಒಯ್ದ. ರಾಘು ಕೂಗಿದಂತೆ ಬಾಯಿ ಆಡುತ್ತಿದ್ದರೂ, ಧ್ವನಿ ಹೊರಡದಿದ್ದದ್ದು ಆನಂದನಿಗೆ ಬೆರಗು, ಆತಂಕ ಒಟ್ಟಿಗೆ ಆಗಿತ್ತು. 

ಸುಮಾರು ವರ್ಷಗಳಿಂದ ಪರಶುರಾಮನ ಕುಟುಂಬ ತನ್ನೊಡನೆ ಕೆಲಸ ಮಾಡುತ್ತಿದೆಯಾದರೂ, ಅವನ ಮಗ ರಾಘು ಹುಟ್ಟು ಕಿವುಡ ಎಂದು ತಿಳಿದದ್ದು ಆ ಘಟನೆಯ ನಂತರವೆ! 

ಆಗಿನಿಂದಲೂ ರಾಘುನ ಮೇಲೆ ಆನಂದನಿಗೆ ವಿಶೇಷ ಪ್ರೀತಿ, ಮಮಕಾರ. ಸೈಟಿಗೆ ಹೋದಾಗೆಲ್ಲ ಅವನಿಗಾಗಿ ಬಿಸ್ಕತ್ತು, ಚಾಕೊಲೆಟ್ಟನ್ನು ತರುತ್ತಿದ್ದ. ಅವನಾದರೂ ಅಷ್ಟೆ, ಆನಂದನನ್ನು ಕಂಡ ಕೂಡಲೇ ಓಡೋಡಿ ಬರುತ್ತಿದ್ದ, ಕೂಗುತ್ತಲ್ಲೇ! ಆದರೆ ಅವನೇನು ಕರೆಯುತ್ತಿದ್ದ ‘ಅಣ್ಣಾ?…ಅಂಕಲ್? “ಏನೆಂದು ತಿಳಿಯುತ್ತಿರಲಿಲ್ಲ. ಹುಟ್ಟುಕಿವುಡನಾದವನಿಗೆ ಬಾಯಿ ಆಡುತಿತ್ತೇ ಹೊರತು ಮಾತು ಹೊರಡುತ್ತಿರಲಿಲ್ಲ. 

ಪರಶುರಾಮನ ಭೂತಾಯಿಯ ನಂಬಿಕೆಯಂತೆ ಯಾವ ಅವಘಡಗಳು ಸಂಭವಿಸದೆ ಪಾಯದ ಕೆಲಸ ಮುಗಿದು, ಅಷ್ಟೊತ್ತಿಗೆ ಮಳೆಯೂ ನಿಂತು, ಕಟ್ಟಡ ಸರಸರ ಮೇಲೆದ್ದು, ಎದೆಗುಂದಿದ್ದ ಆನಂದನಿಗೆ ಎದೆಯೆತ್ತಿ ನಿಲ್ಲುವಂತಾಯಿತು.    

ಪರಶುರಾಮನ ಛಲ, ಧೈರ್ಯವಂತಿಕೆ ಇರದಿದ್ದರೆ ಕಟ್ಟಡ, ಪಾಯದ ಕೆಲಸದಲ್ಲೇ ನಿಂತು ಹೋಗಬೇಕಾಗಿತ್ತು. ಅವನ ಋಣ ತಮ್ಮ ಮೇಲಿದೆಯೆಂದು, ನೆಲಮಹಡಿಯಲ್ಲಿ ಕಾರುಬೈಕು ನಿಲ್ಲಿಸಲು ಅರ್ಧಜಾಗ ಬಿಟ್ಟು ಹಿಂದಕ್ಕೆ ಬಾಡಿಗೆ ಕೊಡಲೆಂದೇ ಕಟ್ಟಿಸಿದ್ದ ಒಂದು ರೂಮಿನ ಮನೆಯನ್ನು, ಗೃಹಪ್ರವೇಶ ಮಾಡಿ ಮನೆ ಸೇರಿಕೊಂಡಾಗ, ದಿನರಾತ್ರಿ ಕಟ್ಟಡದ ಕೆಲಸ ಮಾಡುತ್ತಿದ್ದ ಪರಶುರಾಮನ ಕುಟುಂಬವನ್ನು ಅಲ್ಲಿಯೇ ವಾಸಿಸಲು ಆನಂದ ಬಿಟ್ಟಿದ್ದ. ಕೃತಜ್ಞತಾ ಭಾವ ಇದ್ದದ್ದಕ್ಕೇ ಹಾಗೆ ನಡೆದುಕೊಂಡರೂ, ಅವನಿಗೆ ಬೇರೆಯದೇ ಆದ ಲೆಕ್ಕಾಚಾರಗಳಿದ್ದವು. 

ಮನೆಗೆಲಸಕ್ಕೆ ಯಾರಾನ್ನಾದರೂ ನೇಮಿಸಿದರೆ ದೀಪಾಳಿಗೆ ಕೆಲಸ ಕಮ್ಮಿಯಾಗಿ ಗೊಣಗಾಟ ನಿಲ್ಲಬಹುದೆಂದು ಆನಂದ ಯೋಚಿಸಿದ. ಹೇಗೂ ಮೂರು ಅಂತಸ್ತಿನ ಮನೆಗೆಲಸಕ್ಕೆ ಯಾರು ಸಿಗುವುದಿಲ್ಲ. ಸಿಕ್ಕರೂ ಮುಲಾಜಿಲ್ಲದೆ ಏಳೆಂಟು ಸಾವಿರ ಬೇಡಿಕೆಯಿಡುತ್ತಾರೆ. ಆದ್ದರಿಂದ – ದಿನ ಬಿಟ್ಟು ದಿನ ಇಡೀ ಮನೆಯನ್ನು ಗುಡಿಸಿ, ಸಾರಿಸಿ ಕೊಡಲು ಹೆಂಡತಿ ನಿಂಗಮ್ಮನನ್ನು  ಬಿಡೆಂದು ಪರಶುರಾಮನಿಗೆ ಹೇಳಿದರೆ ಅವನು ನಿರಾಕರಿಸುವುದಿಲ್ಲ. ಅದು ಅಲ್ಲದೆ, ತಾನಾಗೇ ಇರಲು ಹೇಳಿ ಪರಶುರಾಮನ ಬಳಿ ಬಾಡಿಗೆ ಕೇಳುವುದು ಸಮಂಜಸವಲ್ಲ.

‘ಇದೊಳ್ಳೆ ಚೆನ್ನಾಗಿದೆ. ಮನೆ ಕಟ್ಟೋವಾಗ ಪರಶು ಕಷ್ಟ ಪಟ್ಟ, ಅವನ ಋಣ ನಮ್ಮೇಲಿದೆ ಅನ್ನೋದು ಎಷ್ಟು ಸರಿ? ಅದಕ್ಕೆ ಅವನಿಗೆ ಹೆಚ್ಚಿನ ಕೂಲಿಯನ್ನೇ ಕೊಟ್ಟಿದ್ದೀರಾ! ಹಾಗಂತ ಕೂಲಿ ಕೆಲಸ ಮಾಡುವ ಯಾರ್ಯೊರನ್ನೋ ಮನೇಗೆ ಸೇರ್ಕೊಳ್ಳಿಕ್ಕೆ ಆಗುತ್ತಾ?” ಎಂದು ತಕರಾರು ತೆಗೆದ ದೀಪಾಳಿಗೆ – ಸ್ವಲ್ಪವಾದರೂ ಬಾಡಿಗೆ, ಈ ತೆರದಲ್ಲಿ ವಸೂಲಿ ಆಗುತ್ತದೆಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿ, ತನ್ನ ಬುದ್ಧಿವಂತಿಕೆಗೆ ಆನಂದ ತಾನೇ ಬೆನ್ನು ಚಪ್ಪರಿಸಿಕೊಂಡ. ಮೊದಲಿಗೆ ದೀಪಾಳು ಹಿಂಜರಿದರೂ ಆಮೇಲೆ ಅರೆಮನಸ್ಸಿಂದ ಒಪ್ಪಿದಳು. 

ಪರಶುರಾಮನ ಹೆಂಡತಿ ನಿಂಗಮ್ಮ ಭಾರೀ ಚುರುಕು. ಮೇಲಿನ ಮಹಡಿಯಿಂದ ಕೆಳಗೆ ಹಾಲಿನವರೆಗೂ ಪೊರಕೆಯನ್ನು ಜಾಡಿಸುತ್ತ, ಸರಸರ ಗುಡಿಸಿ, ಸಾರಿಸಿಕೊಂಡು ಒಂದೆರೆಡು ತಾಸಲ್ಲಿ ಇಡೀ ಮನೆಯ ಗ್ರಾನೈಟ್ ನೆಲ ಪಳಪಳ ಹೊಳೆಯುವಂತೆ ಚೊಕ್ಕಟ ಮಾಡುತ್ತಿದ್ದಳು. ನಿರೀಕ್ಷಿಸಿದಂತೆ ದೀಪಾಳ ಮುಖವರಳಿ – ಅವಳಿಗೂ, ಅವಳು ಕೆಲಸ ಮಾಡುವ ಹೊತ್ತಲ್ಲಿ ಅಮ್ಮನ ಸೆರಗಿಗೆ ಬಿದ್ದು ಬೆರಗುಗಣ್ಣಿಂದ ಇಡೀ ಮನೆಯನ್ನು ಅರಮನೆಯನ್ನು ಕಂಡಂತೆ ಅವಲೋಕಿಸುತ್ತ ಅತ್ತಿತ್ತ ಓಡಾಡುತ್ತ ಆಟವಾಡುತ್ತಿದ್ದ ರಾಘುವಿಗೂ ತಿನ್ನಲು ಮಿಕ್ಕ ತಿಂಡಿಯನ್ನು ಕೊಡುತ್ತಿದ್ದಳು. ಆದರೆ- ಕೆಲವೊಮ್ಮೆ ರಾಘು ಸೋಫಾದ ಮೇಲೆ, ರೂಮಲ್ಲಿ ಮಂಚ ಮೇಲೆ ಕುಳಿತು, ಮಲಗಿದರೆ ಅಥವಾ ಮಗಳ ಕೋಣೆಗೆ ಇಣುಕಿ ತೊಟ್ಟಿಲಲ್ಲಿದ್ದ ಮೊಮ್ಮಗಳ ಜೊತೆ ಆಡುವಾಗ ಕೋಪಗೊಂಡು ಮೆದುವಾಗಿ ಗದರುತ್ತಿದ್ದಳು. 

ನೀರು, ಕರೆಂಟು, ಶೌಚ ಸೌಲಭ್ಯಗಳಿರುವ ಸುಸಜ್ಜಿತ ಮನೆಯನ್ನು ಬಾಡಿಗೆಯಿಲ್ಲದೆ ಇರಲು ಕೊಟ್ಟರೆಂಬ ಉಪಕಾರ ಸ್ಮರಣೆಗೋ, ಏನೋ? ದಿನ ಬಿಟ್ಟು ದಿನವೆಂದಿದ್ದರೂ, ನಿಂಗಮ್ಮ ದಿನಾಲೂ ಮನೆಗೆಲಸಕ್ಕೆ ಬರೋಳು. ಮನೆ ಗುಡಿಸಿ, ಸಾರಿಸುವ ಕೆಲಸವಲ್ಲದೆ ಪಾತ್ರೆಗಳನ್ನು ತೊಳೆದಿಡುತ್ತಿದ್ದಳು. ಅವಳು ಅತ್ತ ಹೋದ ಮೇಲೆ, ದೀಪಾ ಪಾತ್ರೆಗಳ ಮೇಲೆ ನೀರನ್ನು ಚಿಮುಕಿಸಿ ಮಡಿ ಮಾಡಿ, ಪಾತ್ರೆಗಳನ್ನು ಜೋಡಿಸಿಟ್ಟು ಕೊಳ್ಳುತ್ತಿದ್ದಳು. ಅಲ್ಲಿಗೆ ತಕ್ಕಮಟ್ಟಿಗೆ ದೀಪಾಳ ಗೊಣಗುವಿಕೆ ಲೆಕ್ಕಾಚಾರದಂತೆ ಅಲ್ಪವಿರಾಮ ಬಿದ್ದಂತಾಗಿ ಆನಂದ ನಿಟ್ಟುಸಿರು ಬಿಟ್ಟ. 

ರಾಘು ಗುಂಡಿಯಲ್ಲಿ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಹಾಗೊಮ್ಮೆ ಅನಾಹುತವಾಗಿದ್ದರೆ ಪೊಲೀಸ್ ಕೇಸು, ಲಾಯರು, ಕೋರ್ಟುಕಚೇರಿಯ ಚಿತ್ರಣ ನೆನೆದೇ ಆನಂದ ನಡುಗಿ ಹೋಗುತ್ತಿದ್ದ. ಅದೇ ಕಾರಣಕ್ಕೊ ಅಥವಾ ಅಷ್ಟು ಮುದ್ದುಮೊಗದ ಪುಟ್ಟಬಾಲಕ, ಹುಟ್ಟುಕಿವುಡನಾಗಿದ್ದರಿಂದ ಮಾತು ಬಾರದೆ ಮೂಗನಾಗಿರುವುದಕ್ಕೆ ಮರುಕವೋ, ಆನಂದ ರಾಘುವಿನ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದ. ರಾಘು ಶಾಲೆಗೆ ಸೇರುವ ವಯಸ್ಸಾಗಿದ್ದರೂ, ಅವನ ಕಿವುಡುತನಕ್ಕೆ ಯಾವ ಚಿಕಿತ್ಸೆಯನ್ನು ಕೊಡಿಸದೆ ನಿರ್ಲಕ್ಷದಿಂದಿದ್ದ ಪರಶುರಾಮನನ್ನು ತರಾಟೆಗೆ ತೆಗೆದುಕೊಂಡು, ತನಗೆ ಗೊತ್ತಿದ್ದ ಇಎನ್ಟಿ ಡಾಕ್ಟರ ಬಳಿ ರಾಘುವಿಗೆ ಚಿಕಿತ್ಸೆ ಕೊಡಿಸುತ್ತಿದ್ದ.

ಆ ದಿನ ಡಾಕ್ಟರರ ಸೂಚನೆ ಮೇರೆಗೆ ರಾಘುವಿಗೆ ಸೂಕ್ತವಾಗುವ ಶ್ರವಣ ಯಂತ್ರಕ್ಕಾಗಿ ಕ್ಲಿನಿಕ್ಕಿಗೆ  ಕರೆದೊಯ್ಯ ಬೇಕಿತ್ತು. ವಾಕಿಂಗ್ ಮುಗಿಸಿ ಬಂದ ಆನಂದ, ಮನೆ ಮುಂದೆ ನೀರು ಹಾಕಿ, ರಂಗೋಲೆ ಬಿಡಿಸುತ್ತಿದ್ದ ನಿಂಗಮ್ಮಳಿಗೆ  “ ಏನಮ್ಮ, ರಾಘುನ ಬೇಗ ಸ್ನಾನ ಮಾಡ್ಸಿ ರೆಡಿ ಮಾಡು. ಇವತ್ತು ಇಎನ್ಟಿ ಡಾಕ್ಟರ್ರ ಅಪಾಯಿಂಟ್ಮೆಂಟ್ ಇದೆ. ಕರ್ಕ್ಕೊಂಡು ಹೋಗ್ಬೇಕು” ಎಂದರೆ, ‘ ಆಗ್ಲಿ ಸಾ….ಇಲ್ಲೇ ಕಾಯ್ತಿರ್ತೀನಿ ನೀವೇ ಬಂದು ಕರ್ಕೊಂಡು ಹೋಗಿ ” ಎಂದದ್ದಕ್ಕೆ, ಪ್ರಶ್ನಾರ್ಥಕವಾಗಿ ಮುಖ ಮಾಡಿದ. ಅವಳು “ ನಾನು ಮೇಲೆ ಮನೆಗೆ ಬರಂಗಿಲ್ಲ. ಅಮ್ಮವ್ರು ಕೆಲಸಕ್ಕೆ ಬರೋದ್ ಬೇಡಾಂತ ಹೇಳಿದ್ದಾರೆ” ಎಂದಳು. ಎಲ್ಲಾ ಸರಿಹೋಯಿತೆಂದುಕೊಂಡರೆ ಮತ್ಯಾವ ಸಂಕಟ ಬಂತಪ್ಪ ಎಂದು ಆನಂದ ತಲೆಕೆರೆದುಕೊಂಡ.

ಅಡುಗೆಮನೇಲಿ ಬೆಳಗಿನ ಉಪಹಾರಕ್ಕೆ ತಯಾರಿ ನಡೆಸಿದ್ದ ದೀಪಾಳನ್ನು ಯಾಕೆಂದು ಕೇಳಿದರೆ “ ಅವಳ ಮಗ ತುಂಟ. ಹೇಳಿದ ಮಾತು ಕೇಳೊಲ್ಲ. ಸೋಫಾ, ಮಂಚ ಅನ್ನದೆ ಎಲ್ಲೆಂದರಲ್ಲಿ ಕೂರ್ತಾನೆ. ಹೇಳಿದ್ರೆ ಅರ್ಥವಾಗೊಲ್ಲ. ನಿಂಗಮ್ಮ ಕೂಡ ಅವನು ಅದುಇದು ಸಾಮಾನು ಎತ್ಕೊಂಡು ಆಡ್ತಿದ್ರೆ, ನೋಡೋದ್ರು ನೋಡ್ದಂಗೆ ಗದರದೆ ಸುಮ್ನಿರ್ತಾಳೆ. ಅಲ್ದೆ…ಅವ್ರು ಯಾವುದೋ ಮಣೆಗಾರ ಜಾತಿಯವರಂತೆ!…ಊರಲ್ಲಿ ಹಬ್ಬದ ದಿನ ತಮಟೆ ಬಡೀತಾರಂತೆ! ಯಾರ ಸಾವಾಸನೂ ಬೇಡ. ಕಷ್ಟನೋ ಸುಖನೋ ನಾನೇ ಎಲ್ಲಾ ಮಾಡ್ತೀನಿ….” ಎಂದು ತಲೆಯೆತ್ತದೆ ಪಾತ್ರೆನಾ ಸ್ಟವ್ ಮೇಲೆ ಕುಕ್ಕಿದಳು.

“ಅಲ್ಲ ದೀಪಾ, ಹಳೇಮನೇಲಿ ಅಮ್ಮ ಹಾಸಿಗೆ ಹಿಡಿದಾಗ ಮಾದಮ್ಮ ಕೆಲಸಕ್ಕೆ ಬರೋಳು. ಅವ್ಳ ಜಾತಿ ಯಾವ್ದೂಂತ ನೀನು ಯಾವತ್ತು ಕೇಳಿರ್ಲಿಲ್ಲ. ಈಗ್ಯಾಕೆ ನಿಂಗೆ ಈ ಬುದ್ಧಿ ಬಂತು?” ಎಂದರೆ, “ಮಾದಮ್ಮನ ಬಗ್ಗೆ ನಿಮಗೆಷ್ಟು ಗೊತ್ತು? ಅವ್ಳು ಒಕ್ಕಲಿಗರೋಳು. ಹಳೇಮನೆ ಕತೆ ಬೇರೆ. ಅಲ್ದೆ, ಕೂಲಿ ಮಾಡ್ತಿದ್ದೋರ್ಗೆಲ್ಲ ಇರ್ಲಿಕ್ಕೆ ಪುಕ್ಕಟೆ ಮನೆ ಕೊಟ್ಕೊಂಡು ಇಲ್ಲದ ಉಸಾಬರಿ ನಿಮ್ಗೆ ಬೇಕಿತ್ತಾ?” ಎಂದಳು.

ಅಸಲಿಗೆ ದೀಪಾಳ ಸಮಸ್ಯೆಯಾದರೂ ಏನೆಂದು ಆನಂದನಿಗೆ ಅರ್ಥವಾಗಲಿಲ್ಲ. ಒಂದೆಡೆ ಕೆಲಸದವರ ಜಾತಿಯ ಬಗ್ಗೆ ಮಾತಾಡುತ್ತಾಳೆ, ಮತ್ತೊಮ್ಮೆ ಪರಶುರಾಮನನ್ನು ಮನೆ ಬಿಡಿಸಿ ಬಾಡಿಗೆ ಕೊಟ್ಟರೆ ದುಡ್ಡು ಸಿಗುತ್ತದೆ ಅನ್ನುತ್ತಾಳೆ. ಇವಳ ಸಮಸ್ಯೆ ದುಡ್ಡಿನದೋ? ಜಾತಿಯದೋ? ಅಡುಗೆಮನೆಯಲ್ಲಿ ಅತ್ತೆಯು ದೀಪಾಳೊಂದಿಗೆ ಆಗಾಗ ಪಿಸುಪಿಸುಗುಡುವುದನ್ನು ನೋಡಿದರೆ, ಆಕೆಯೇ ಇಲ್ಲಸಲ್ಲದ್ದನ್ನು ದೀಪಾಳ ಕಿವಿಯಲ್ಲಿ ಊದಿ, ಉರಿಯುವ ಆಲೋಚನೆಗಳಿಗೆ ತುಪ್ಪು ಸುರಿಯುತ್ತಿದ್ದಾಳೆಂದು ಎಣಿಸಿದ. 

ನಿರಂತರ ಅದೇ ಯೋಚನೆಯಲ್ಲಿ ಮುಳುಗಿದ್ದವನಿಗೆ, ದೀಪಾಳು ಮುಖ ಕಿವುಚಿಕೊಂಡು ಹೇಳಿದ ಮಣೆಗಾರ ಜಾತಿ…ತಮಟೆ ಬಡಿಯೋದು ಎಂಬ ಪದಪುಂಜಗಳು, ಶ್ರೀರಾಮಪುರದಲ್ಲಿ ತಮಿಳರು ಶವಯಾತ್ರೆಯಲ್ಲಿ ತಮಟೆ ಬಡಿಯುತ್ತ, ಕುಣಿಯುತ್ತ, ಪಟಾಕಿ ಸಿಡಿಸುತ್ತ ಸಾಗುವ ಚಿತ್ರಗಳು ಹಾದು ಹೋದವು. ಅವನ ಸುಪ್ತಪ್ರಜ್ಞೆಯಲ್ಲಿ ಅವಿತು ಕುಳಿತ್ತಿದ್ದ ಜಾತಿಯೆಂಬ ಭೂತವು, ಧುತ್ತನೇ ಹೊರಬಂದು ಅವನನ್ನು ಅಣಕಿಸ ತೊಡಗಿತು. ಕಟ್ಟಡದ ನಿರ್ಮಾಣದ ಪ್ರಾರಂಭದಿಂದ ಇಲ್ಲಿಯವರೆಗೂ ಅನಿರೀಕ್ಷಿತ, ಕ್ಷುಲ್ಲಕ ಸಮಸ್ಯೆಗಳೇ ಒಂದಾದ ಮೇಲೊಂದರಂತೆ ಬಾಧಿಸುತ್ತಿದೆ ಅನಿಸಿ ಎಲ್ಲವನ್ನೂ ನೀಗಿಕೊಂಡು ನಿಸೂರಾಗಬೇಕೆಂದುಕೊಂಡ.    

ಪರಶುರಾಮನನ್ನು ಮನೆ ಬಿಡಿಸುವವರೆಗೂ ದೀಪಾಳ ಅಸಮಾಧಾನ ಹೋಗದು. ಹಾಗೆಂದು, ತಾನೇ ಇರು ಎಂದು ಹೇಳಿ ಈಗ ಜಾಗ ಖಾಲಿಮಾಡು ಎನ್ನುವುದು ಹೇಗೆಂದು ತಿಳಿಯದೆ ಆನಂದ ಗೊಂದಲಕ್ಕೀಡಾದ. ರಾಘುನ ಕಿವಿ ತೋರಿಸಲು ಡಾಕ್ಟರ್ ಬಳಿಗೆ ಕರೆದೊಯ್ದಾಗೆಲ್ಲ, ಬೇರೆಡೆ ಕೆಲಸಕ್ಕೆ ಹೋಗುತ್ತಿದ್ದ ಪರಶುರಾಮನಿಗೆ “ಕೆಲಸ ಸಿಕ್ಕಾಗ ಫೋನು ಮಾಡುತ್ತೇನೆ. ಅಲ್ಲಿಯವರೆಗೂ, ಮನೆ ಖಾಲಿಮಾಡಿ ಈಗ ನೀನು ಕೆಲಸ ಮಾಡೋ ಜಾಗದಲ್ಲೇ ಉಳಿದುಕೊ” ಎಂಬ ಮಾತು ಬಾಯಿಯವರೆಗೂ ಬಂದು ಅಲ್ಲೇ ನಿಂತು ಬಿಡುತ್ತಿತ್ತು. 

ಮೂರನೇ ಮಹಡಿಯ ತನ್ನ ರೂಮಿನಲ್ಲಿ ಓದುತ್ತ ಕೂತವನಿಗೆ ಯಾರೋ ಚಿಟಾರನೆ ಕೂಗಿದಂತೆ ಕೇಳಿಸಿತು. ಕಿವಿಕೊಟ್ಟು ಆಲಿಸಿದರೆ ಕೆಳಗೆ ಹಾಲಿನಲ್ಲಿ ದೀಪಾ, ಅತ್ತೆ ಏರುದನಿಯಲ್ಲಿ ಮಾತಾಡುತ್ತಿದ್ದರು. ಜೊತೆಗೆ ಮೊಮ್ಮಗಳು ಜೋರಾಗಿ ಅಳುತ್ತಿದ್ದದ್ದು ಕೇಳಿಸಿ ಕೆಳಗೆ ದಡಬಡ ಓಡಿಬಂದ. ಮಗಳು ಆತಂಕದಲ್ಲಿ ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸುತ್ತಿದ್ದರೆ, ಅತ್ತೆಯವರು ಅದರ ಬೆನ್ನಿನಲ್ಲಿ ಆದ ಕೆಂಪು ಚಿಕ್ಕಚಿಕ್ಕ ದಂದೆಗಳಿಗೆ ಕೊಬ್ಬರಿ ಎಣ್ಣೆ ಸವರುತ್ತಿದ್ದರು. “ಏನಾಯ್ತು ಮಗೂಗೆ?” ಅಂತ ಆನಂದ ಅಂದದ್ದೇ, ದೀಪಾ ತಿರುಗಿಬಿದ್ದಳು. “ಆಗೋದೇನು ಬಂತು? ನನ್ನ ಮಾತ್ನ ನೀವೆಲ್ಲಿ ಕೇಳ್ತೀರಾ? ಪಾಪು ತೊಟ್ಲಲ್ಲಿ ತಿಗಣೆ ಸೇರ್ಕೊಂಡು ಹೇಗೆ ಅದರ ಬೆನ್ನನ್ನ ಕಚ್ಚಿದೆ, ನೋಡಿ!” ಅಂದಳು.

ಆನಂದನಿಗೆ ಮೊದಲಿಗೆ ಅವಳ ಮಾತಿನ ತಲೆಬುಡ ಅರ್ಥವಾಗಲಿಲ್ಲ. ಆದರೆ, ಈಗಷ್ಟೇ ಗೃಹಪ್ರವೇಶ ಮಾಡಿ ಬಂದ ಹೊಸಮನೇಲಿ ತಿಗಣೆಯೇ! ಅವನಿಗೆ ಹಳೇಮನೆಯಲ್ಲಿ – ತಿಗಣೆಗಳ ಕಾಟ ಜಾಸ್ತಿಯಾಗಿ ರಾತ್ರಿಯೆಲ್ಲ ನಿದ್ರೆ ಬಾರದೆ ಎದ್ದು, ಕುಟುಕಿ ಸಾಯಿಸಿದರೆ ಗಬ್ಬುನಾತ ಹರಡುತ್ತಿದ್ದರಿಂದ, ಹಾಸಿಗೆಯ ಮೂಲೆಮೂಲೆ ಸಂದುಗಳಲ್ಲಿ, ದಿಂಬಿನ ಕವರಿನಲ್ಲಿ ಅಡಗಿದ್ದ ತಿಗಣೆಗಳನ್ನು ಹುಡುಕಿ ಲೋಟದಲ್ಲಿಟ್ಟ ನೀರಿಗೆ ಹಾಕುತ್ತಿದ್ದ, ಇಡೀ ರಾತ್ರಿ ನಿದ್ದೆಗೆಟ್ಟ ದಿನಗಳ ನೆನಪುಗಳು ಕಣ್ಮುಂದೆ ಹಾದು ಹೋಗಿ ಗಾಬರಿಯಾಯಿತು. ಕಣ್ಣಿಗೆ ಕಾಣದ ಸಂದುಗೊಂದುಗಳಲ್ಲಿ ಅಡಗಿ ಕುಳಿತು, ಕತ್ತಲಾದೊಡನೆ ಮಲಗಿದ ಹೊತ್ತು ರಾಕ್ಷಸ ಸಂತತಿಯಾಗಿ ದಾಳಿಯಿಡುವ ಈ ಕ್ಷುದ್ರಜೀವಿ ಬಂದದ್ದಾದರೂ ಎಲ್ಲಿಂದ? ಇಷ್ಟು ದೊಡ್ಡಮನೆಯಲ್ಲಿ ಅದಿರುವ ತಾವನ್ನು ಹುಡುಕಿ ನಿರ್ಮೂಲನೆ ಮಾಡಲು ಸಾಧ್ಯವೆ? ಒಮ್ಮೆಗೆ ಆನಂದನಲ್ಲಿ ಆತಂಕ ಆವರಿಸಿ ದಿಗ್ಮೂಢನಾದ.

ದೀಪಾಳು ಕಾರಿಕೊಳ್ಳುತ್ತಿದ್ದ, ‘ಮನೆಗೆಲಸಕ್ಕೆ ಬರುತ್ತಿದ್ದ ನಿಂಗಮ್ಮ, ಎಲ್ಲೆಂದರಲ್ಲಿ ಕೂತು, ಓಡಾಡುತ್ತಿದ್ದ ಅವಳ ಮಗನಿಂದ್ಲೇ ತಿಗಣೆ ಬಂದಿರಬೇಕು!’ ಅನ್ನೋ ಸಿಟ್ಟಿನ ಮಾತುಗಳು ಪರಶುರಾಮನ ಕುಟುಂಬವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿತ್ತು. “ಎಲ್ಲಾ ಕಾರ್ಯಕ್ಕೂ ಧರ್ಮಶಾಸ್ತ್ರ ಅಂತ ಇರುತ್ತೆ. ಅದ್ಯಾವುದನ್ನು ನಂಬೋದಿಲ್ಲಾಂತ, ಹೊಸಮನೆ ಸೇರ್ಕೊಳ್ಳೆ ಮುಂಚೆ ವಾಸ್ತುಪೂಜೆ, ಹೋಮಹವನ, ಗೋಪ್ರವೇಶ ಇವೆಲ್ಲ ಏನೂ ಮಾಡಿಸದೆ ಇದ್ರೆ ಇನ್ನೇನಾಗುತ್ತೆ! ಎಲ್ಲಾ ಹುಳುಹುಪ್ಪಟೆಗಳು ಮನೆಯೊಳ್ಗೆ ಬಂದು ಸೇರ್ಕೊತಾವೆ. ಮನೇಲಿ ತಿಗಣೆ ಇದ್ರೆ ದರಿದ್ರ ಅಂತ್ಲೇ ಅರ್ಥ!” ಎಂದು ಅತ್ತೆ, ಉರಿಯೋ ಬೆಂಕಿಗೆ ಪುಳ್ಳೆ ಇಡುತ್ತಿದ್ದದ್ದು, ಗೃಹಪ್ರವೇಶ ಮಾಡೋವಾಗ ಪುರೋಹಿತನ್ನು ಕರೆಸದೆ, ಬರೀ ಹಾಲುಕ್ಕಿಸಿ, ಶಿವಕೋಟಾಚಾರ್ಯರ ವಡ್ಡಾರಾಧನೆ ಪುಸ್ತಕವನ್ನು ಸಾಂಕೇತಿಕವಾಗಿ ಬಂದ ನೆಂಟರಿಗೆ ಹಂಚಿ, ಹೊಸಮನೆ ಪ್ರವೇಶವನ್ನು ಸಂಭ್ರಮಿಸಿದ ಆನಂದನಿಗೆ ಅತ್ತೆ ಹೇಳುವ ಕೊಂಕುಗಳಿಗೆ ಒಂದಕ್ಕೊಂದು ಸಂಬಂಧವಿಲ್ಲವೆಂದು ತಿಳಿದಿದ್ದರೂ ಮನಸ್ತಾಪವಾದೀತೆಂದು ತುಟಿ ಬಿಚ್ಚಲಿಲ್ಲ.  

ಮತ್ತೆರೆಡು ದಿನಗಳಲ್ಲಿ ವಾರ್ಡ್ ರೋಬಿನಲ್ಲಿ ಬಟ್ಟೆಗಳ ಮಧ್ಯೆ, ಹಾಸಿಗೆಯಲ್ಲಿ ತಿಗಣೆಗಳು ಕಂಡು ಮನೆಮಂದಿಯ ನೆಮ್ಮದಿಗೆಡಿಸಿದವು. ತಲೆಯಲ್ಲಿ ತಿಗಣೆಯನ್ನೇ ನೆನೆಸುತ್ತ ಹಾಸಿಗೆಗೆ ತಲೆಕೊಟ್ಟರೆ, ಮೈಯಲ್ಲಿನ ಸಣ್ಣನವೆ, ಕಡಿತವಾದರೂ ತಿಗಣೆಯೇ ಇರಬೇಕೆಂದು ಎದ್ದು ಹುಡುಕಾಡುವಂತಾಯಿತು. 

ಈಗಂತೂ ದೀಪಾಳ ಗೊಣಗಾಟ ಬರೀ ಸ್ವಗತದಲ್ಲಿರದೆ ಮುಖಕ್ಕೆ ಮುಖಕೊಟ್ಟು ಹೇಳುವಷ್ಟು ರೋಸೆದ್ದಿತ್ತು. ಮೊದಲು ತಿಗಣೆಯ ಮೂಲವನ್ನು ಕಂಡುಹಿಡಿಯುವುದೋ? ಅಥವಾ ಮನೆಯಲ್ಲಿ ನಿಧಾನವಾಗಿ ಹಬ್ಬುತ್ತಿರೋ ಅದರ ಸಂತತಿಯನ್ನು ಔಷಧಿಯೇನಾದರೂ ಹೊಡೆದು ತಹಬಂದಿಗೆ ತರುವುದೋ? ಹಾಗೆ ಮಾಡಿದರೆ ಔಷಧಿಯನ್ನು ಸಿಂಪಡಿಸಿದ ಇಪ್ಪತ್ನಾಲ್ಕು ತಾಸು ಮನೆಯಲ್ಲಿ ಯಾರೂ ಇರಬಾರದು. ಅದು ಭಾರೀ ಅಪಾಯ. ಹಾಗಾದರೆ ಎಲ್ಲಿಗೆ ಹೋಗುವುದು? ಆನಂದ ಯೋಚಿಸುತ್ತ ಗೊಂದಲದಲ್ಲಿ ಬಿದ್ದ.

ವಾರಕ್ಕೆ ಮೂರುದಿನ ತಾನೇ ಮುತುವರ್ಜಿವಹಿಸಿ ಡಾಕ್ಟರರ ಬಳಿ ರಾಘುಗೆ ವಾಕ್ ತರಬೇತಿಗೆ ಕರೆದೊಯ್ಯುತ್ತಿದ್ದ ಆನಂದ, ತನಗೆ ಬೇರೆ ಕೆಲಸವಿದೆಯೆಂದು ಇಲ್ಲದ ಸಬೂಬು ಹೇಳಿ, ದುಡ್ಡು ಕೊಟ್ಟು ಪರಶುರಾಮನಿಗೆ ಕರೆದೊಯ್ಯಲು ಹೇಳಿದ. ದುಡ್ಡನ್ನು ಕೊಡುವಾಗಲು ಎಚ್ಚರಿಕೆಯಿಂದ ಅವನ ಹಸ್ತ ತಾಗದಂತೆ ಎಚ್ಚರಿಕೆ ವಹಿಸಿದ.

ದೀಪಾಳ ಮಾತಿನಂತೆ, ಸಮಸ್ಯೆಯ ಮೂಲವನ್ನು ಪರಶುರಾಮ ಇದ್ದಲ್ಲಿಯೇ ಕಂಡು ಹಿಡಿಯಬೇಕೆಂದು ಆನಂದ ನಿರ್ಧರಿಸಿದ. 

ಬೆಳಂಬೆಳಿಗ್ಗೆ ಬೇಗನೆದ್ದು ಅಡುಗೆ ಮಾಡಿ, ಉಂಡು ಡಬ್ಬಿಯಲ್ಲಿ ಊಟವನ್ನು ಕಟ್ಟಿಕೊಂಡು ಕೆಲಸಕ್ಕೆ ಹೊರಟರೆ, ಪರಶುರಾಮ – ನಿಂಗಮ್ಮ ಬರುತ್ತಿದ್ದದ್ದು ಸಂಜೆಗೆ ಕತ್ತಲಾಗುವ ಹೊತ್ತಿಗೆ. ಅವರು ಕೆಲಸಕ್ಕೆ ಹೊರಟ ಸಮಯ ಸಾಧಿಸಿ ಆನಂದ, ತನ್ನ ಬಳಿ ಇದ್ದ ಮತ್ತೊಂದು ಮುಂಬಾಗಿಲ ಬೀಗದ ಕೀಲಿಯಿಂದ ಕೆಳಮನೆಯ ಬಾಗಿಲು ತೆರೆದ. ಗಪ್ಪೆಂದು ಕಮಟು ವಾಸನೆ ಒಳಗಿಂದ ನುಗ್ಗಿ ಬಂದು ಮೂಗಿಗೆ ಬಡಿಯಿತು. ಮೂಗು ಮುಚ್ಚಿಕೊಂಡು ಒಳಗೆ ಬಂದವನು ಸ್ವಿಚ್ಚಾಕಿ ಟೂಬ್ಲೈಟ್ ಬೆಳಕಿನಲ್ಲಿ ನೋಡಿದರೆ ತಲೆ ತಿರುಗಿ ಬೀಳುವಂತಾಯಿತು.

ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ, ಬಟ್ಟೆ ಹರಿದು ಆಚೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಹತ್ತಿಯ ಹಾಸಿಗೆಗಳು, ಬಟ್ಟೆಬರೆಗಳು, ಅಡುಗೆಮನೆಯ ಸಿಂಕಿನಲ್ಲಿ ತೊಳೆಯದೆ ಬಿದ್ದಿದ್ದ ನೆಗ್ಗು ಬಿದ್ದ ಅಲ್ಯುಮಿನಿಯಮ್ ಪಾತ್ರೆಗಳ ರಾಶಿ, ಅವಕ್ಕೆ ಮುತ್ತಿಕೊಂಡ ನೊಣಗಳು, ಗೋಡೆ ಮೇಲೆಲ್ಲ ಇದ್ದಿಲಲ್ಲಿ ರಾಘು ಬರೆದ ಚಿತ್ರವಿಚಿತ್ರ ಬರೆವಣಿಗೆಗಳು, ಅಲ್ಲಲ್ಲಿ ಮೊಳೆ ಹೊಡೆದು ನೇತುಹಾಕಿದ್ದ ಕೊಳಕಾದ ಪ್ಯಾಂಟುಶರಟುಗಳು, ಮಸಿ ಹಿಡಿದ ದೇವರ ಕ್ಯಾಲೆಂಡರ್ಗಳು. ಬಚ್ಚಲಂತೂ ನೆಲ, ಗೋಡೆಗೆ ಹಾಕಿದ್ದ ಟೈಲ್ಸ್ ಗಳೆಲ್ಲ ಕರೆಗಟ್ಟಿ, ಮೂಗಿಗೆ ಅಡರಿದ ಗಬ್ಬು ವಾಸನೆಗೆ ವಾಂತಿ ಬಂದ ಹಾಗೆ ಆಯಿತು. ಇಡೀ ಹೊಸಮನೆಯ ವಾತಾವರಣ  ಜೋಪಡಿಯಂತೆ ಕಂಡು ಆನಂದನಿಗೆ ಮೈಯೆಲ್ಲ ಉರಿದುಹೋಯಿತು.

ಅಸಹ್ಯ ಪಡುತ್ತಲೇ ಹಾಸಿಗೆ-ದಿಂಬು, ಗೋಡೆಗಳ ಮೇಲೆ, ಕಪಾಟು, ಬಾಗಿಲು ಸಂದಿಗೊಂದಿಗಳಲ್ಲಿ ಹುಡುಕಿದರೂ ಎಲ್ಲೂ ಒಂದೇ ಒಂದು ತಿಗಣೆ ಕಾಣದಿದ್ದದ್ದು ಅವನಲ್ಲಿ ನಿರಾಶೆ ಮೂಡಿಸಿತು. 

ಕೆಲಸದಿಂದ ವಾಪಸ್ಸು ಬರುವುದನ್ನೇ ಕಾಯುತ್ತ ಗೇಟಿನ ಬಳಿ ಆನಂದ ನಿಂತಾಗ – ದೂರದಲ್ಲಿ ಪರಶುರಾಮ, ನಿಂಗಮ್ಮ ಬರುವುದು ಕಂಡರೆ, ಅವರ ಮುಂದೆ ರಾಘು ಸ್ಕೂಟರ್ ಬಿಡುವ ರೀತಿಯಲ್ಲಿ ಓಡುತ್ತಾ ಬರುವುದು ಕಾಣಿಸಿತು. ರಾಘು ಸೀದಾ ಆನಂದನ ಬಳಿ ಬಂದವನೇ ಮೂಕ ಸನ್ನೆ ಮಾಡುತ್ತ ಎತ್ತಿಕೊಳ್ಳುವಂತೆ ಕುಣಿಯುತ್ತಿದ್ದ. ಹಿಮ್ಮೆಟ್ಟಿ ನಿಂತ ಆನಂದ, ದೂರ ಸರಿಯುವಂತೆ ಕೈ ಸನ್ನೆ ಮಾಡಿದ. 

“ಅಲ್ಲಯ್ಯ ಪರಶು…ಅದೇನು ಹೊಸಮನೇನಾ ಅಷ್ಟು ಕೆಟ್ಟದಾಗಿ ಇಟ್ಕೊಂಡ್ ಇದ್ದೀಯ! ಸಾಮಾನು ಎಲ್ಲೆಂದರಲ್ಲಿ ಬಿದ್ದಿದೆ. ಅಷ್ಟು ಗಬ್ಬು ನಾರುವ ಮನೆಯೊಳಗೆ ಅದ್ಯಾಗೆ ಇರ್ತೀಯಾ?” ಅಂದ ಸಿಟ್ಟಿನಿಂದ. ಏನು ಹೇಳಬೇಕೆಂದು ತೋಚದೆ ಪರಶುರಾಮ ತಲೆ ಕೆರೆಯುತ್ತ, ಹುಸಿ ನಗೆ ಬೀರಲು ಪ್ರಯತ್ನಿಸುತ್ತ, ತಲೆ ತಗ್ಗಿಸಿ ಸಂಕೋಚದಿಂದ ನಿಂತ. 

“ಅದಿರ್ಲಿ…ಅದೇನಯ್ಯ ಅಷ್ಟೊಂದು ತಿಗಣೆಗಳ್ನ ಸಾಕ್ಕೊಂಡಿದ್ದೀಯ! ಮನೇನಾ ಕ್ಲೀನಾಗಿ ಇಟ್ಕೊಳ್ಳೊದಲ್ವ?”

“ಇಲ್ಲ ಸಾ…ತಿಗಣೆಗಿಗಣೆ ಏನೂ ಇಲ್ಲ”

“ಏನ್ ಪರಶು ಹಿಂಗಂತೀಯ! ನಾನೇ ಬೆಳಗ್ಗೆ ಕಣ್ಣಾರೆ ನೋಡ್ದೆ. ಪಿತಪಿತ ಅಂತಾವೆ! ಅಷ್ಟು ತಿಗಣೆ ಇದೆ”

“ಇಲ್ಲ ಸಾ…ನಮ್ಗೇನು ಕಂಡಿಲ್ಲ. ಬೆಳಿಗ್ಗೆ ಹೋದ್ರೆ ಕೆಲಸ ಮಾಡಿ ಸುಸ್ತಾಗಿ ಬರೋದು ಇಷ್ಟೊತ್ತಾಗುತ್ತೆ. ಊಟ ಮಾಡಿ ನೆಲಕ್ಕೆ ತಲೆ ಕೊಟ್ರೆ ಮೈಮೇಲೆ ಹಾವು ಹೋದ್ರು ಗೊತ್ತಾಗೊಲ್ಲ. ಒಂದೆರೆಡು ಇರಬಹುದೇನೊ….ಗೊತ್ತಿಲ್ಲ”

ಆನಂದ ಏನೋ ಯೋಚಿಸುವವನಂತೆ ಕಣ್ಮುಚ್ಚಿ ಕೈಯಿಂದ ಹಣೆಯನ್ನು ತಟ್ಟುತ್ತ “ ಒಂದ್ ಕೆಲ್ಸ ಮಾಡು. ಈ ಶನಿವಾರ ಬಟವಾಡೆ ಅದ್ಮೇಲೆ, ಭಾನುವಾರ ಮನೆ ಖಾಲಿಮಾಡಿ, ಕೆಲ್ಸ ಮಾಡ್ತೀರೊ ಸೈಟಲ್ಲಿ ಅಥ್ವಾ ಅಲ್ಲೇ ಎಲ್ಲಾದ್ರು ಉಳ್ಕೊ. ನಾವು ಕೂಡ ಮನೇಲಿ ಯಾರೂ ಇರಲ್ಲ. ವಾರದ ಮಟ್ಟಿಗೆ ಟೂರ್‍ ಹೋಗ್ತಿದ್ದೀವಿ” ಅಂದ. ಇದ್ದಕ್ಕಿದಂತೆ ಮನೆಖಾಲಿ ಮಾಡು ಅಂದದ್ದರಿಂದ ಪರಶುರಾಮನ ಮುಖ ಸಪ್ಪಗಾಯಿತು. ‘ಒಂದು ವಾರ ಟೈಮು ಕೊಡಿ’ ಎಂದು ಹೇಳಲು ಹೊರಟವನು, ಆ ಮಾತನ್ನು ನುಂಗಿಕೊಂಡು ‘ಆಯಿತು’ ಎಂಬಂತೆ ತಲೆಯಾಡಿಸಿದನು. 

ತಿಗಣೆ ಓಡಿಸಲು ಮನೆಯ ಮೂಲೆ ಮೂಲೆಯಲ್ಲಿ ಸಿಲ್ವರ್ ನೈಟ್ರೈಟ್ ಮಾತ್ರೆಗಳನಿಟ್ಟು, ಬಾಗಿಲು ಕಿಟಕಿಗಳನ್ನು ಗಾಳಿಯಾಡದಂತೆ ಭದ್ರಪಡಿಸಿ, ಮನೆಗೆ ಬೀಗ ಹಾಕಿ ಕೆಳಗೆ ಬರೋ ಹೊತ್ತಿಗೆ ಮೊಮ್ಮಗಳನ್ನು ಎತ್ತಿಕೊಂಡು ಮಗಳು, ಅತ್ತೆ, ದೀಪಾ ಕಾರಲ್ಲಿ ಕುಳಿತು ಕಾಯುತ್ತಿದ್ದರು. ಲಗೇಜ್ ಆಟೋದಲ್ಲಿ ಮನೇಲಿದ್ದ ಸಾಮಾನುಗಳನ್ನು ತುಂಬಿ, ಮುಷ್ಟಿಯಲ್ಲಿ ಬೀಗದ ಕೀಲಿ ಹಿಡಿದು ಪರಶುರಾಮ ಗೇಟಿನ ಬಳಿ ನಿಂತಿದ್ದ. ಗಂಡಹೆಂಡಿರು ಇಬ್ಬರ ಕಣ್ಣಲ್ಲಿ ನೀರಾಡುತ್ತಿದ್ದನ್ನು ಆನಂದ ಗಮನಿಸಿದ. ಆಗಲೇ ಆಟೋ ಹತ್ತಿ, ಕುಣಿಯುತ್ತಿದ್ದ ರಾಘು ಗಾಡಿಯಲ್ಲಿ ಹೋಗೊ ಸಂಭ್ರಮದಲ್ಲಿದ್ದ.

ಬೀಗದ ಕೀಲಿಯನ್ನು ಆನಂದನ ಕೈಗಿಟ್ಟ ಪರಶುರಾಮ ಕಾಲಿಗೆ ಅಡ್ಡಬಿದ್ದು ನಮಸ್ಕರಿಸಿದ. ಹಿಂದೆಯೇ ನಿಂಗಮ್ಮ ಕೂಡ ಕಾಲಿಗೆರಗಿದಳು. ಮೊದಲೇ ಅಂದುಕೊಂಡಂತೆ, ಗೃಹಪ್ರವೇಶ ಸಮಾರಂಭದಲ್ಲಿ ಬಂದಿದ್ದ ಮುಯ್ಯಿ ದುಡ್ಡನ್ನು ಕವರಿನಲ್ಲಿಟ್ಟು, ರಾಘುವಿನ ಶ್ರವಣ ಯಂತ್ರಕ್ಕಾಗಿ ಪರಶುರಾಮನಿಗೆ ಕೊಡಲು ಆನಂದ ಮುಂದಾದ. ಎರಡು ಹೆಜ್ಜೆ ಹಿಂದಿಟ್ಟ ಪರಶುರಾಮ “ಬೇಡ ಸಾ…ಆಗ್ಲೇ ನಿಮ್ಮ ರುಣ ನಮ್ಮೇಲೆ ಭಾಳ ಇದೆ. ನಿಮ್ಮ ಆರ್ಶೀವಾದ ಇದ್ರೆ ಸಾಕು” ಎಂದು ಕೈಮುಗಿದ.

‍ಲೇಖಕರು Admin

February 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: