ಕಂ ಕ ಮೂರ್ತಿ ಕೃತಿ ‘ಮಿಂಚು’ ಧ್ಯಾನಸ್ಥ ಘಳಿಗೆಯ ಅನುಭಾವ…

ಕಂ ಕ ಮೂರ್ತಿ

ಇಲ್ಲಿನ ಬರಹಗಳು ಧ್ಯಾನಸ್ಥ ಘಳಿಗೆಯಲ್ಲಿ ಹೊಳೆದವು. ಅವುಗಳನ್ನು ಪದ್ಯಗಳು ಎನ್ನಿ ಅಥವಾ ಪ್ರಚಲಿತ ಸಾಹಿತ್ಯ ಪ್ರಾಕಾರಗಳಿಗೆ ಒಗ್ಗದವು ಎನ್ನಿ ನನಗೆ ಚಿಂತೆ ಇಲ್ಲ. ಒಂದು ವಿಚಾರವನ್ನು ಮಥಿಸಿದಾಗ ಮನಸ್ಸಿನಲ್ಲಿ ಹೊಳೆದ ಕೋಲ್ಮಿಂಚುಗಳು. ಸತ್ಯವನ್ನು ಶೋಧಿಸಲು ಅಥವಾ ಅದಕ್ಕೆ ಹತ್ತಿರವಾಗಲು ಜೀವನಾನುಭವದ ಬೆಳಕು ಅಗತ್ಯ ಎಂದು ನಂಬಿದವನು ನಾನು. ಅಂತಹ ಅನುಭವ ಇದ್ದಾಗ ನಮ್ಮ ಗ್ರಹಿಕೆ ಯಾವುದೇ ಸಿದ್ಧಾಂತ, ಮತಪಂಥಗಳ ಪೂರ್ವಾಗ್ರಹಗಳಿಲ್ಲದೇ ಅರಳಬಲ್ಲದು.

ಪುಸ್ತಕದಿಂದ ಓದಿದ, ಕೇಳಿ ತಿಳಿದ ಜ್ಞಾನಕ್ಕಿಂತ ಸ್ವಂತಕ್ಕೆ ದಕ್ಕಿದ ಅನುಭವ ದೊಡ್ಡದು ಹಾಗೂ ಅಂತಹ ಅನುಭವ ಹೇಳುವ ಮಾತು ದೊಡ್ಡದು ಎನ್ನುವುದಾದರೆ ನಾನು ಅಂತಹ ಮನಸ್ಸಿನ ಮಾತುಗಳನ್ನು ನಿಮ್ಮ ಜತೆ ಹಂಚಿಕೊಂಡಿದ್ದೇನೆ. ನಿಮ್ಮ ಓದಿಗಾಗಿ ಹಂಬಲಿಸಿದ್ದೇನೆ.

ಅನುಭವದ ಮೂಸೆಯಲ್ಲಿ ಥಟ್ಟನೆ ಹೊಳೆಯುವ ವಿಚಾರಗಳು ನವನವೀನ ರೆಕ್ಕೆಗಳ ಬಿಂದುಂಬೆ ಹುಳಗಳಂತೆ ಹಾರಾಟ ನಡೆಸುತ್ತವೆ, ಮೂಲತ: ಮಲೆನಾಡಿನವನಾದ ನಾನು ರಾತ್ರಿ ತಮ್ಮ ದೇಹದ ವಿಶಿಷ್ಟ ಬೆಳಕಿನಿಂದಲೇ ಮಿಂಚುವ ಬಿಂದುಂಬೆ ಹುಳುಗಳನ್ನು ನೋಡಿ ಬೆಳೆದವನು, ಬೆರಗಾದವನು, ಬಡತನದ ಕಾರಣಕ್ಕೆ ಬಾಲ್ಯ ಎನ್ನುವುದು ಸಹ ತೀವ್ರ ಒಂಟಿತನದ ಬಾಧೆಯಾದಾಗ ಪ್ರಕೃತಿಯ ಸಣ್ಣ ವಿಸ್ಮಯಗಳು ನಮ್ಮ ಜತೆಗಾರರಾಗುವುದು ಹಾಗೆ ಆಗುವ ಮೂಲಕ ನಮ್ಮಲ್ಲಿ ಬದುಕಿನ ಪ್ರೀತಿ ಹುಟ್ಟಿಸುವುದು ಸೋಜಿಗ. ಪ್ರಕೃತಿಯ, ಬದುಕಿನ ವಿಸ್ಮಯಗಳನ್ನು ಶೋಧಿಸುತ್ತ ಹೋದಷ್ಟು ಅದು ತಣಿಯುವುದಿಲ್ಲ, ಬದಲಾಗಿ ಅದು ಬೆಳೆಯುತ್ತದೆ. ಇಲ್ಲಿನ ಬರೆಹಗಳಲ್ಲಿ ವಿಚಾರದ ಮಿಂದುಂಬೆ ಹುಳಗಳಿವೆ ಎಂದು ಓದಿದವರಿಗೆ ಅನಿಸಿದರೆ ಬರವಣಿಗೆ ಸಾರ್ಥಕ.

ಇದನ್ನು ಧ್ಯಾನಸ್ಥ ಘಳಿಗೆಯ ಅನುಭಾವ ಎಂದು ಕರೆದಿದ್ದೇನೆ. ನಾನು ವೃತ್ತಿಯಲ್ಲಿ ಪತ್ರಕರ್ತ. ಪತ್ರಿಕಾವೃತ್ತಿ ನನ್ನ ಬದುಕಿನ ಭಾಗವೇ ಆಗಿದೆ. ಹದಿಹರೆಯದಲ್ಲಿ ಆದರ್ಶದ ಗುಂಗಿನಲ್ಲಿದ್ದಾಗ ಈ ಕ್ಷೇತ್ರ ಪ್ರವೇಶಿಸಿದವನು. ಬರವಣಿಗೆಯಿಂದ ಲೋಕದ ಡೊಂಕನ್ನು ಬದಲಾಯಿಸಬಹುದು ಎಂದು ಬಲವಾದ ಕನಸು ಮತ್ತು ಭ್ರಮೆಯಲ್ಲಿದ್ದವನು. ಇಂತಹ ಮನಸ್ಥಿತಿಯೇ ನಾವು ಅಪ್ಪಿಕೊಂಡ ಕ್ಷೇತ್ರದಲ್ಲಿ ಒಂದಿಷ್ಟು ಒಳಿತನ್ನು ಮಾಡಲು ಸಾಧ್ಯವಾಗುವಂತೆ ಮಾಡುತ್ತದೆ.

ಪತ್ರಿಕಾವೃತ್ತಿಯ ಜತೆಗೇ ಜನಪರ ಚಳವಳಿಗಳ ನಂಟು. ಪತ್ರಕರ್ತನ ಬರವಣಿಗೆಯೆಂದರೆ ಆ ಕ್ಷಣ ಬೇಡುವುದನ್ನು ನೀಡುವುದು, ಈ ನೀಡುವುದರಲ್ಲಿ ಆ ಕ್ಷಣದ ಸುಖ, ಸಾರ್ಥಕ ಭಾವ ಇದ್ದರೂ ಆ ಅವಸರ ಎನ್ನುವುದು ಭಾಷೆಯ ಸೃಜನಶೀಲತೆಯನ್ನು, ತಣ್ಣಗೆ ಯೋಚಿಸಿ ಬರೆಯುವ ವ್ಯವಧಾನವನ್ನು ಕೊಲ್ಲುತ್ತದೆ. ಲೋಕಕ್ಕೆ ಬುದ್ಧಿ ಹೇಳುತ್ತಿದ್ದೇನೆಯೆ ಎಂಬ ಅಹಂ ಅನ್ನು ನಮಗರಿವಿಲ್ಲದೇ ನಮ್ಮಲ್ಲಿ ಸೃಷ್ಟಿಸುತ್ತದೆ.

ನಾನಾ ಕಾರಣಕ್ಕೆ ದಿನವೂ ನಮ್ಮೊಳಗೆ ಗೆಡ್ಡೆಕಟ್ಟುತ್ತ ಹೋಗುವ ಅಹಂ ಅನ್ನು ಕಳೆದುಕೊಂಡಾಗ ಹುಟ್ಟುವ ಪ್ರೀತಿ ಮತ್ತು ಜೀವಕಾರುಣ್ಯ ಅದನ್ನು ಸ್ವತ: ಅನುಭವಿಸಿದ ಜೀವಕ್ಕೆ ಗೊತ್ತು. ಅಂತಹ ಹೊತ್ತಿನಲ್ಲಿಯೇ ಇಲ್ಲಿನ ಅನೇಕ ಚಿಂತನೆಗಳು ಮೂಡಿವೆ. ಧರ್ಮ, ಜಾತಿ, ಸಿದ್ಧಾಂತದ ಹಂಗಿಲ್ಲದ ಮನಸ್ಸು ಪಯಣಿಸುವ ಬಗೆಯಿದು. ಕರುಣೆ ಮತ್ತು ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಮನಸ್ಸಿಗೆ ಅನ್ನಿಸುವುದು ಅದು ಮನಸ್ಸು ಧರಿಸುವ ಹೊಸ ಹುಟ್ಟೇ ಸರಿ. ಅದೊಂದು ಧ್ಯಾನಸ್ಥ ಘಳಿಗೆ. ನಿರಂತರ ಆತ್ಮಶೋಧನೆ ಇಲ್ಲದ ಮನುಷ್ಯ ಅಹಂನ ಪ್ರಪಾತಕ್ಕೆ ಬೀಳುತ್ತ ಹೋಗುತ್ತಾನೆ. ಒಂದು ವಿಷಯದ ಬಗ್ಗೆ ಯೋಚಿಸಿದಾಗ ಮನಸ್ಸು ಥಟ್ಟನೆ ಒಂದು ನಿರ್ಣಯ ಕೊಟ್ಟು ಬಿಡುತ್ತದೆಯಲ್ಲ, ಅದು ಒಂದು ಸಾಲು ಇರಬಹುದು ಎರಡು ಸಾಲು ಇರಬಹುದು. ಅದು ಕೋಲ್ಮಿಂಚು.

ಮೊದಲೇ ಹೇಳಿದಂತೆ ಇಲ್ಲಿನ ಪದ್ಯಗಳು ಥಟ್ಟನೆ ಮಿಂಚಿನಂತೆ ಹೊಳೆದವು. ನನ್ನ ಮನಸ್ಸು ಪ್ರಶಾಂತ ಘಳಿಗೆಯಲ್ಲಿ ಆಳಕ್ಕಿಳಿದು ಕೇಳಿಕೊಂಡ ಪ್ರಶ್ನೆಗಳಿಗೆ ಉತ್ತರ ರೂಪವಾದವು. ಹಾಗೆ ಹುಟ್ಟುವ ಮೊದಲ ಮಾತೇ ಸತ್ಯ ಎನಿಸಬಹುದು. ಸಹಜವಾಗಿ ಹುಟ್ಟುವ ಮಾತಿಗೆ ಅಸತ್ಯದ ಬಿಂಕ ಬಿನ್ನಾಣ ಇರುವುದಿಲ್ಲ. ಆತ್ಮದ ಬೆಳಕಿನ ನುಡಿಗಳಿಗೆ ಕಪಟತನದ ಅಪವಿತ್ರದ ಸೋಂಕಿರುವುದಿಲ್ಲ. ಯೋಚಿಸಿ, ಲಾಭನಷ್ಟದ ತೂಕಮಾಡಿ ವ್ಯಾವಹಾರಿಕವಾಗಿ ಆಡುವ ಮಾತು ವ್ಯಾವಹಾರಿಕವಾಗಿಯೇ ಉಳಿದು ಬಿಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ನಮ್ಮ ಮಾತುಗಳು ಕಪಟತನದ ಸಿಪ್ಪೆ ಸುತ್ತಿಕೊಂಡಿರುತ್ತವೆ. ಅವು ನಿಜ ಮಾತಾಗಬೇಕಾದರೆ ಅಹಂಕಾರ ಕಳೆಯಬೇಕು ಆ ಮೂಲಕ ಪ್ರೀತಿ ಅರಳಬೇಕು.

ಒಮ್ಮೆ ಅನಿಸಿತು, ಜನ್ಮಜಾತವಾಗಿ ಬೆಚ್ಚನೆಯ ಭಾವವೇ ಇಲ್ಲದೇ ಕಳೆದ ನನ್ನ ಬಾಲ್ಯದ ಬದುಕಿನ ಬಗ್ಗೆ. ತಕ್ಷಣವೇ ಉತ್ತರ ರೂಪವಾಗಿ ಕೆಳಗಿನ ಪದ್ಯ ಹೊಳೆಯಿತು.

ನನ್ನ ಹೃದಯದಲಿ
ನೀ ನೆಟ್ಟ ಕಾರುಣ್ಯದ ಬೀಜ
ಗಿಡವಾಗಿ, ಮರವಾಗಿ, ಹೂವಾಗಿ
ಹಣ್ಣಾಗಿ ನಾನಾ ಫಲಗಳನ್ನು ಕೊಟ್ಟಾಗ
ನೀ ಏನೂ ಕೊಡಲಿಲ್ಲ
ಎಂಬ ಭಾವವೇ ಮರೆಯಾಯಿತು.

ಇದು ನಿಜವಲ್ಲವೇ? ಮನುಷ್ಯ ಹೊಂದಿರುವ ಕಾರುಣ್ಯದ ಸಂಪತ್ತಿಗಿಂತ ದೊಡ್ಡದು ಯಾವುದಿದೆ. ದೇವರು ಭೌತಿಕವಾಗಿ ಎಲ್ಲವನ್ನೂ ಕೊಟ್ಟು ಕಾರುಣ್ಯವನ್ನೇ ಕೊಡದಿದ್ದರೆ ಆ ಜೀವಕ್ಕೆ ಏನು ಬೆಲೆಯಿದೆ. ಬದುಕಿಗೆ ಏನು ಮೌಲ್ಯವಿದೆ?. ಎಲ್ಲ ಧರ್ಮದ ಸಾರಗಳು ಅಂತಿಮವಾಗಿ ನಮ್ಮಲ್ಲಿ ಹುಟ್ಟಿಸಬೇಕಾದ್ದು ಜೀವಕಾರುಣ್ಯವಲ್ಲವೆ? ಇಲ್ಲಿನ ಬಹುತೇಕ ಬರಹಗಳು ಮಿಂಚುಗಳಂತೆ ಹೊಳೆದಿದ್ದು ಹೀಗೆ.

ಲೇಖಕನಾದವು ತನ್ನ ಕೃತಿಯ ಬಗ್ಗೆ ತಾನೇ ಹೆಚ್ಚಿಗೆ ಬರೆಯಬಾರದು.

ಇದನ್ನು ಅಂದವಾಗಿ, ಆಸ್ಥೆಯಿಂದ ಮುದ್ರಿಸಿ ಕೊಟ್ಟ ಬೆಂಗಳೂರಿನ ಚೇತನ್ ಬುಕ್ಸ್ನ ಚೇತನ್ ಕಣಬೂರು ಅವರಿಗೆ ನನ್ನ ಮೊದಲ ಕೃತಜ್ಞತೆ. ಯುವ ಪ್ರಕಾಶಕರಾಗಿರುವ ಚೇತನ್ ಅವರ ಅಸಕ್ತಿಯಿಂದಾಗಿ ಇದು ಸುಂದರವಾಗಿ ಮೂಡಿ ಬಂದಿದೆ. ಪ್ರಸಿದ್ಧ ಕಲಾವಿದ ಗಣಪತಿ ಅಗ್ನಿಹೋತ್ರಿ ಇಲ್ಲಿನ ಪದ್ಯಗಳಿಗೆ ಅರ್ಥಪೂರ್ಣ ರೇಖಾಚಿತ್ರ ಒದಗಿಸಿಕೊಟ್ಟಿದ್ದಾರೆ. ಅರ್ಥಪೂರ್ಣ ಮುಖಪುಟ, ಹಿಂಬದಿಯ ರಕ್ಷಾಪುಟ ಒದಗಿಸಿದ್ದಾರೆ ಅವರಿಗೆ ನನ್ನ ಕೃತಜ್ಞತೆ. ಆಗಾಗ ಅಲ್ಲಲ್ಲಿ ಬರೆದ ಇವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಪ್ರಚೋದಿಸಿದ ಸನ್ಮಿತ್ರರಾದ ಪತ್ರಕರ್ತ ಎಸ್.ರವಿಪ್ರಕಾಶ್, ಮೂಡಿಗೆರೆ ಕವಿಮಿತ್ರ ಹರೀಶ್ ಟಿ.ಜಿ ಅವರಿಗೆ ಆಭಾರಿ.

‍ಲೇಖಕರು Admin

February 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: