ಮತ್ತಾಯನಿಗೆ ಸತ್ಯದ ಸಾಕ್ಷಾತ್ಕಾರವಾಗುವ ಕ್ಷಣವಂತೂ…ಅಬ್ಬಾ!

ಮೇ 5 ರಂದು ಉದ್ಯಾವರದ ಚರ್ಚ್ ವಠಾರದಲ್ಲಿ, ನಿರಂತರ್ ಉದ್ಯಾವರ್ ಪ್ರಸ್ತುತಿಯಲ್ಲಿ  ‘ಮತ್ತಾಯ 22: 39’ಪ್ರದರ್ಶನವಿದೆ. ಮಿಸ್ ಮಾಡ್ಬೇಡಿ..

ಅಹಲ್ಯಾ ಬಲ್ಲಾಳ್

ಚಿತ್ರಗಳು: ಅರವಿಂದ ಕುಡ್ಲ

**

ತಾನು ಉಳಿಯಬೇಕು ಬೆಳೆಯಬೇಕು, ಅದಕ್ಕೆ ಏನು ಬೇಕಾದರೂ ಮಾಡಿಯೇನು ಎನ್ನುವ ಬಹುಮಟ್ಟಿಗೆ ಸರ್ವವ್ಯಾಪಿ ಧೋರಣೆಯ ದೆಸೆಯಿಂದ  ವ್ಯಕ್ತಿಯ ನೆಲೆಯಲ್ಲಿ, ವೃತ್ತಿ- ಉದ್ಯಮದ ಸ್ತರದಲ್ಲಿ, ಸಮಾಜ ದೇಶಗಳ ವ್ಯಾಪ್ತಿಯಲ್ಲಿ ನಯವಂಚಕತನ, ಬೂಟಾಟಿಕೆ, ಆಕ್ರಮಣಶೀಲತೆ ಯುದ್ಧಗಳಿಗೆ ಗುರಿಯಾಗಿ ಕೈ ಕೈ ಹಿಸುಕಿಕೊಳ್ಳುತ್ತಿರುವ ಶ್ರೀಸಾಮಾನ್ಯರು……

…ಇದಕ್ಕೆ ಪ್ರತಿರೋಧವೆಂಬಂತೆ ಸೃಜನಶೀಲ ಅಭಿವ್ಯಕ್ತಿಯನ್ನು ಬಂಡವಾಳವಾಗಿಟ್ಟುಕೊಂಡಿರುವ ಕನಸುಗಾರರು, ಕಲಾವಿದರು…

ಹಾ! ಕಥೆ- ಕವನ- ಹಾಡು- ಕುಣಿತ- ಚಿತ್ರ- ನಾಟಕ-ಸಿನೆಮಾದಿಂದ ಏನಾದೀತು; ವಾಸ್ತವ ಬೇರೆ, ಇಲ್ಲಿ ತೀವ್ರ ಸ್ಪರ್ಧೆಗೇ ಮೇಲುಗೈ ಎನ್ನುವಿರೇನೋ.  ಹಾಗೆನಿಸುವುದು ಸಹಜವೇ. ಕೊಂಚ ತಾಳಿ. ರೂಢಿಗತ ದೃಷ್ಟಿಕೋನ ಬಿಟ್ಟು ನೋಡುವುದರಲ್ಲಿಯೂ ಒಂದು ಘನತೆಯಿದೆ. ಮತ್ತದು ಪ್ರಯೋಜನಕಾರಿಯೂ ಹೌದು.

ಮತ್ತಾಯನಿಗೆ ಇದು ಅರಿವಿಗೆ ಬರುವಾಗ ತುಂಬ ತಡವಾಗಿ ಹೋಯ್ತು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಿರ್ದಿಗಂತ ‘ನೇಹದ ನೇಯ್ಗೆ’ ಹಬ್ಬದಲ್ಲಿ ಸಿಕ್ಕವನು ‘ಮತ್ತಾಯ’.

ಕಾಲೇಜಿನ ಅಂಗಳದ ಬಾಸ್ಕೆಟ್ ಬಾಲ್ ಕೋರ್ಟಿನ ಸುತ್ತ ಅಟ್ಟಣಿಗೆಗಳ ಮೇಲೆ  ಕೂತ ನೋಡುಗರಿಗೆ ನಾಟಕದ ನಿರ್ದೇಶಕ ಅರುಣ್ ಲಾಲ್, ಕೇರಳ ಈ ಬಯಲು ರಂಗದಲ್ಲಿ ಏನು ಹೇಳಹೊರಟಿದ್ದಾರೆ ಎಂಬ ಸುಳಿವಿರಲಿಲ್ಲ. ಇಲ್ಲೊಂದು ವಿಶಿಷ್ಟ ಅನುಭವ ಕಾದಿದೆ ಎಂದು ಸುತ್ತಮುತ್ತಲಿನ  ಮೆಲುಗಾಳಿ ಮಾತ್ರ ಉಸುರಿದಂತಿತ್ತು. “ಇಬ್ಬರೇ ನಟರಂತೆ” ಎಂಬ ಗುಸುಗುಸು ಬೇರೆ ಕಿವಿಗೆ ಬಿದ್ದಿತ್ತು.

ಈ ಪ್ರಯೋಗ ಡಾ. ಸುಧಾಕುಮಾರಿಯವರು ಕನ್ನಡಕ್ಕೆ ತಂದಿರುವ,  ಟಿ. ವಿ.ಕೊಚುಬಾವ ಅವರ ಮೂಲ ಕತೆಯನ್ನು ಆಧರಿಸಿದೆ. ಪ್ರಕಾಶ ರಾಜ್ ಅವರ ಹಿನ್ನೆಲೆ ಧ್ವನಿಯ ಪರಿಚಯದ ನಂತರ ಮತ್ತಾಯ 22: 39  ನಾಟಕದ ಆರಂಭ.

ಗ್ಯಾಲರಿಯ ಎತ್ತರದಿಂದ ಪ್ರದರ್ಶನಕ್ಕೆ ಸಮಗ್ರ ನೋಟ ಸಿಗುವುದು ಅನುಭವಕ್ಕೆ ಬರುತ್ತದೆ.  ಭೀಕರ ಬರ ಮತ್ತು ಆಶ್ಚರ್ಯಕರವಾಗಿ ಬದುಕಿ ಉಳಿದ ನೆರೆಮನೆಯವರೂ, ಗೆಳೆಯರೂ ಆದ ಮತ್ತಾಯ ಮತ್ತು ಯೋಹಾನರ ಪರಿಚಯವಾಗುತ್ತದೆ. ನೆಲದ ಮೇಲೆ ಸುಟ್ಟ ಇಟ್ಟಿಗೆಗಳನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಜೋಡಿಸಲಾಗಿದೆ. ಪಾತ್ರಧಾರಿಗಳು ಬರಿಯ ಮುಂಡು ಧರಿಸಿದ್ದಾರೆ. ಎಲ್ಲೆಡೆ ಕಂದು ಬಣ್ಣವೇ. ರಂಗದ ಒಂದು ಬದಿಗೆ ಒಣಗಿದ ಮರ. ಅದರ ವಿರುದ್ಧ ಇನ್ನೊಂದು ಬದಿಗೆ ಸರೂತ ನಿಲ್ಲಿಸಲಾದ ಒಂದು ಸ್ತಂಭದಂತದ ಉರುಳೆ. ಆಟದ ಸ್ಥಳದ ಎರಡು ಪಕ್ಕದಲ್ಲಿ ಎರಡು ಕಿರಿದಾದ ಓಣಿಗಳು ಸೈಡ್ ವಿಂಗ್ ಗಳಂತೆ ಇವೆ.

ನಾಟಕ ಮುಂದುವರಿದಂತೆ ಎರಡೂ ಪಾತ್ರಗಳು ಬರಿಯ ಇಟ್ಟಿಗೆಗಳನ್ನೂ ಮೌಖಿಕ ಸದ್ದುಗಳನ್ನೂ ಬಳಸಿ ಅವರ ದಿನಚರಿಯನ್ನೂ ಸರಳ ಲೋಕವನ್ನೂ ದರ್ಶಿಸುತ್ತಾರೆ. ಸನ್ನಿವೇಶಗಳಿರಲಿ, ಪ್ರಕ್ರಿಯೆಗಳಿರಲಿ, ಚಲನೆಗಳಿರಲಿ, ಭಾವಲಹರಿಗಳಿರಲಿ, ವಸ್ತುಗಳಿರಲಿ, ಕಲ್ಪನೆಗಳಿರಲಿ ಎಲ್ಲಕ್ಕೂ ಇಟ್ಟಿಗೆಗಳೇ ಸೈ! Object theatre ನ  ಈ ಪರಿಕಲ್ಪನೆಯನ್ನು ನಿರ್ದೇಶಕರು ಬಳಸಿರುವ ಪರಿಗೆ, ಅದು ಉಂಟುಮಾಡುವ ಪರಿಣಾಮಕ್ಕೆ ಶರಣು.  ಈ ಇಬ್ಬರು ಗೆಳೆಯರು ನಗುತ್ತಾರೆ, ಜಗಳವಾಡುತ್ತಾರೆ, ಒಬ್ಬರನ್ನೊಬ್ಬರು ಹಂಗಿಸುತ್ತಾರೆ, ಹಾಡುತ್ತಾರೆ, ಕುಣಿಯುತ್ತಾರೆ, ಪರಸ್ಪರರ ಕಾಲೆದುಕೊಳ್ಳುತ್ತಾರೆ, ಲೆಕ್ಕ ಹಾಕುತ್ತಾರೆ, ಕನಸು ಕಾಣುತ್ತಾರೆ; ಅಷ್ಟೇ ಏಕೆ ಯೋಹಾನಾ ನಾಚಿಕೆ ಬಿಟ್ಟು ಮತ್ತಾಯನ ಮನೆಗೆ ಯಾವಾಗಲೂ ತನ್ನನ್ನು ತಾನೇ ಊಟಕ್ಕೆ ಆಹ್ವಾನಿಸಿಕೊಂಡು ಗಡದ್ದಾಗಿ ಸ್ವಾಹಾ ಅಂತಾನೆ…ಒಟ್ಟಿನಲ್ಲಿ ಎಲ್ಲವೂ ಆಟವೇ. 

ನೆರೆಕೆರೆಯ ಮತ್ತಾಯ ತುಳು ಮಿಶ್ರಿತ ಕರಾವಳಿ ಕನ್ನಡ ನುಡಿಯುತ್ತಾನೆ; ಯೋಹನ್ನಾನ ಭಾಷೆಗೆ ಉತ್ತರ ಕರ್ನಾಟಕದ ಸೊಗಡಿದೆ. ಮತ್ತಾಯನ ಬಳಿ ಬಾವಿ, ಅಕ್ಕಿ ತುಂಬಿಸಿಟ್ಟ ಮಡಿಕೆಗಳು, ಕೋಳಿ ಮುಂತಾದ ಸಂಪನ್ಮೂಲಗಳಿವೆಯಾದರೆ ಯೋಹಾನನ ಬಳಿ ಅಂಥಹ ಸೌಕರ್ಯಗಳಿಲ್ಲ. ಆದರೆ ಇದು ಅವರಿಬ್ಬರಿಗೂ ಸಮಸ್ಯೆಯೇನಲ್ಲ.

ಒಂದು ಹಂತದಲ್ಲಿ ಈ ಸುಂದರ ಬಾಂಧವ್ಯದಲ್ಲಿ ಅಪಸ್ವರ ಕೇಳಿಬರುತ್ತದೆ. ತಿರುವು ಬರುವುದು ಇಬ್ಬರಲ್ಲಿ ಒಬ್ಬನಿಗೆ ತನ್ನ ಬಳಿ ಇರುವ ಸಂಪನ್ಮೂಲಗಳು ಕಡಿಮೆ ಆಗುತ್ತಿವೆ ಎಂದೆನಿಸಲು ಶುರುವಾದ ಮೇಲೆ. ಆತ ತನ್ನದನ್ನು ಉಳಿಸುವುದರ ಕಡೆಗೇ ಗಮನ ಕೊಡುತ್ತಾನೆ. ಕಾಲಕ್ರಮೇಣ ಅವರಿಬ್ಬರ ನಡುವಿನ ಆಟಗಳು ಮುಗ್ಧತೆಯನ್ನು ಕಳೆದುಕೊಂಡು ಗಂಭೀರವಾಗತೊಡಗುತ್ತವೆ. ಇಲ್ಲೆಲ್ಲ ನಿರ್ದೇಶಕರು ಬಳಸುವ ಪುನರಾವರ್ತನೆಯ ತಂತ್ರ ಪ್ರೇಕ್ಷಕರಿಗೆ ಈ ಇಡೀ ಪ್ರಕ್ರಿಯೆಯ ಗಾಢ ಅನುಭವ ನೀಡುತ್ತದೆ.  ಪ್ರೀತಿ -ವಿಶ್ವಾಸ, ನಗು, ಔದಾರ್ಯ, ಭ್ರಾತೃತ್ವ, ಕಲಾಭಿವ್ಯಕ್ತಿ, ಬಾಂಧವ್ಯ-ಒಂದೊಂದೇ ಒಂದೊಂದೇ ಮಂಕಾಗಿ ಕೊನೆಗೆ ಸಾಯುತ್ತವೆ.

ಇದಾದ ಮೇಲೆ ಏನು? ನಾಟಕ ಹೇಗೆ ಮುಂದುವರಿಯುತ್ತದೆ? ಶೀರ್ಷಿಕೆಯಲ್ಲಿರುವ ಮತ್ತಾಯನ ನಂತರ ಬರುವ ಸಂಖ್ಯೆಗಳ ಅರ್ಥವೇನು? ಸುಟ್ಟ ಇಟ್ಟಿಗೆಗಳ ಬಳಕೆ ಈ ಪ್ರಯೋಗಕ್ಕೆ ಯಾಕೆ ಮತ್ತು ಹೇಗೆ ಸೂಕ್ತ?

ಅರುಣ ಲಾಲ್ ಅವರು ರಂಗದ ಮೇಲೆ ನಟರನ್ನು ಬಳಸುವ ಪರಿಯಲ್ಲಿ ಇಂದ್ರಜಾಲವಿದೆ. ಅಂತೆಯೇ ರಂಗಪರಿಕರಗಳ ಬಳಕೆ. ಕ್ಲಾನ್ವಿನ್ ಫೆರ್ನಾಂಡಿಸ್ ಮತ್ತು ಕುಮಾರ್ ಲಾಲ್ ನಿರ್ದೇಶಕರ ಕಲ್ಪನೆಯನ್ನು ತಮ್ಮ ದೇಹಭಾಷೆಯಿಂದ ಸಾಕಾರಗೊಳಿಸುತ್ತಾರೆ. ನಾಟಕದ ವಸ್ತುವಿಷಯ ಮನಸ್ಸು ಹೃದಯಗಳನ್ನು ಏಕಕಾಲಕ್ಕೆ ತಟ್ಟುವ ಪರಿಯೇ ರೋಮಾಂಚಕ. ಮತ್ತಾಯನಿಗೆ ಸತ್ಯದ ಸಾಕ್ಷಾತ್ಕಾರವಾಗುವ ಕ್ಷಣವಂತೂ…ಅಬ್ಬಾ!

ಅನುಷ್ ಶೆಟ್ಟಿ ಮತ್ತು ತಂಡದವರ ಹಿತಮಿತ ಸಂಗೀತ, ಆನ್ಸ್ಟಿನ್ ಮಚಾಡೋ ಅವರ ಸಹಕಾರ, ಕ್ರಿಸ್ಟಿಯ ಬೆಳಕಿನ ವಿನ್ಯಾಸ,  ಜಾಕ್ಸನ್ ಡಿ ಕುನ್ಹಾ ಅವರ ಸೆಟ್ಸ್ ಮತ್ತು ರಂಗಪರಿಕರ ಎಲ್ಲವೂ ಒಟ್ಟು ಅನುಭವಕ್ಕೆ ಪೂರಕವಾಗಿವೆ. ಈ ನಾಟಕ ನೀಡುವ  ಸುಲಭದಲ್ಲಿ ಮರೆಯಲಾಗದ ಸಮಗ್ರ ಅನುಭೂತಿಯಲ್ಲಿ ಆತ್ಮನಿರೀಕ್ಷಣೆಯೂ ಸೇರಿದೆ. ಆಯೋಜಕರಿಗೆ ಮತ್ತು ತಂಡಕ್ಕೆ ಮೆಚ್ಚುಗೆ ಹಾಗೂ ಕೃತಜ್ಞತೆ!

‍ಲೇಖಕರು avadhi

May 1, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: