ಪಿ ಚಂದ್ರಿಕಾ ಅಂಕಣ – ಬ್ಯೂಟಿ ಪಾರ್ಲರ್‌ನವರ ಪೈಸಾ ವಸೂಲ್ ಮತ್ತು ಪೊಲೀಸರ ಉದಾರತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

33


ಕಾರ್ನಾಡಿನ ಪೇಟೆ ಬೀದಿಯಲ್ಲಿರುವ ಶ್ರೀ ಲಕ್ಷ್ಮೀ ಗಣೇಶ ಜ್ಯೂಯಲರಿ ವರ್ಕ್ಸ್ ನಲ್ಲಿ ಶ್ರೀನಿವಾಸಾಚಾರಿಯ ಚಿನ್ನದಂಗಡಿಯ ಶೂಟಿಂಗ್ ನಡೆಯುತ್ತಿತ್ತು. ಓನರ್ ಶರತ್ ಪ್ರಸಾದ್‌ಗೆ ಅದೇನೋ ಸಂತಸ. ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ. ಶ್ರೀನಿವಾಸಾಚಾರಿ ಚಿನ್ನದ ಸರವನ್ನು ಪರೀಕ್ಷಿಸುವ ದೃಶ್ಯವಿತ್ತು. ಅದಕ್ಕಾಗಿ ನಾವು ನಕಲಿ ಚಿನ್ನದಸರವನ್ನು ಕೊಟ್ಟಿದ್ದೆವು. ನಿಜವಾದ್ದೇ ತೆಗೆದುಕೊಳ್ಳಿ. ನೀವು ಕದಿಯಲಿಕ್ಕಾಗುವುದಿಲ್ಲವಲ್ಲ ಎಂದಿದ್ದರು. ನಾವೇ ಅದಕ್ಕೆ ಒಪ್ಪಲಿಲ್ಲ.

ಪಾತುಮ್ಮ ಚೀಲದಲ್ಲಿ ಪೈಸೆ ಪೈಸೆಯನ್ನು ಕೂಡಿಹಾಕಿ ಅತ್ಯಂತ ನಂಬಿಕೆಯಿಂದ ಶ್ರೀನಿವಾಸಾಚಾರಿಗೆ ತಂದುಕೊಡುವ ದೃಶ್ಯವದು. ಸಾವಿರಾರು ವರ್ಷಗಳಿಂದ ಒಟ್ಟಿಗೆ ಬದುಕುತ್ತಿರುವ ಸೌಹಾರ್ದದ ಕಥೆಯ ಜೀವಾಳವೇ ಆ ದೃಶ್ಯ. ನಾನು ನನ್ನ ಅಜ್ಜಿ (ಇಪ್ಪತ್ತು ವರ್ಷಗಳ ಕೆಳಗೆ ಅವರು ಜೀವನ ಕೊನೆಗೊಳಿಸಿದ್ದರು) ಇಟ್ಟಿದ್ದ ನಾಣ್ಯಗಳನ್ನು ನೋಟುಗಳನ್ನು ನನ್ನ ಮನೆಯಿಂದ ತಂದಿದ್ದೆ. ಆ ನಾಣ್ಯಗಳು ಈಗ ಸಿಗುವುದಿಲ್ಲ. ಅದನ್ನು ಜೋಪಾನವಾಗಿ ವಾಪಾಸು ತೆಗೆದುಕೊಂಡು ಹೋಗುವುದು ನನ್ನ ಆದ್ಯತೆಯೂ ಆಗಿತ್ತು. ಆಕೆ ಚೀಲದಿಂದ ಆನಾಣ್ಯಗಳನ್ನು ಸುರಿವ ದೃಶ್ಯ ನಿಜಕ್ಕೂ ತುಂಬಾ ಚೆನ್ನಾಗೇ ಬಂತು. ಅವತ್ತು ನನಗೆ ನೆನಪಿರುವ ಪ್ರಕಾರ ಸುಮಾರು ನಾಲಕ್ಕು ದೃಶ್ಯಗಳ ಚಿತ್ರೀಕರಣವಾಗಿತ್ತು.

ಪೇಟೆ ಬೀದಿ ಅಲ್ಲದೆ ಬೇರೆ ಕಡೆ ಶೂಟ್ ಮಾಡುವಾಗ ರಸ್ತೆ, ವಾಹನ ಕಿರಿಕಿರಿ ಇರುತ್ತಿರಲಿಲ್ಲ. ಸಂತೆಯಲ್ಲೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ಎನ್ನುವ ವಚನ ನನಗಂತೂ ಪದೇ ಪದೇ ನೆನಪಾಗುತ್ತಿತ್ತು. ಊರ ಮಧ್ಯೆ ನಿಂತು ವಾಹನ ಓಡಾಡಬಾರದು ಎಂದರೆ ಯಾರು ಕೇಳುತ್ತಾರೆ? ಸ್ಪಾಟ್ ರೆಕಾರ್ಡಿಂಗ್ ಬೇರೆ. ವಾಯ್ಸ್ ಡಬ್ ಮಾಡದೆ ನೇರ ರೆಕಾರ್ಡ್ ಮಾಡ್ತಾ ಇರೋದ್ರಿಂದ ಅದೇ ಫೈನಲ್ ಆಗುತ್ತಿತ್ತು. ಸ್ವಲ್ಪ ಸದ್ದಾದರೂ ಸೌಂಡ್ ರೆಕಾರ್ಡಿಂಗ್‌ನವರು ರಿಟೇಕ್ ಹೇಳುತ್ತಾರೆ. ಚಿತ್ರೀಕರಣ ಶುರುವಾಯಿತೆಂದರೆ ರಸ್ತೆ ಕಾವಲು ಕಾಯುತ್ತಾ ನಿಲ್ಲುವುದೊಂದೇ ದಾರಿ.

ಆ ಸಮಯಕ್ಕೆ ಯಾವುದೂ ವೆಹಿಕಲ್‌ಗಳು ಓಡಾಡದ ಹಾಗೆ ರೋಡ್ ಬ್ಲಾಕ್ ಮಾಡಿ ದೃಶ್ಯವನ್ನು ಪೂರ್ಣಗೊಳಿಸುತ್ತಿದ್ದೆವು. ವಾರ್ತಾ ಇಲಾಖೆಯಲ್ಲಿ ನಾವು ಕರ್ನಾಟಕದ ಯಾವುದೇ ಜಾಗದಲ್ಲಿಯಾದರೂ ಚಿತ್ರೀಕರಣ ಮಾಡಬಹುದು ಎಂದು ಪರ್ಮೀಷನ್ ತೆಗೆದುಕೊಂಡಿದ್ದೆವು. ಹಾಗಂತ ಸ್ಥಳೀಯ ನಾಗರೀಕರಿಗೆ ತೊಂದರೆ ಮಾಡುವ ಹಾಗಿರಲಿಲ್ಲ.

ನಮ್ಮ ಹುಡುಗರಿಗೆ ರೋಡ್ ಬ್ಲಾಕ್ ಮಾಡಿ ಎಂದ ತಕ್ಷಣ ನೂರು ಮೀಟರ್ ರಸ್ತೆಯನ್ನು ದೃಶ್ಯೀಕರಣದ ಜಾಗದಿಂದ ಎರಡು ಬದಿ ಸೇರಿದಂತೆ ಬ್ಲಾಕ್ ಮಾಡಿಬಿಡುತ್ತಿದ್ದರು. ಎಲ್ಲ ಹುಡುಗರೂ ಒಂದೇ ರೀತಿ ಇರುವುದಿಲ್ಲವಲ್ಲ. ಕೆಲವರು ಬರುವ ವೆಹಿಕಲ್‌ಗಳನ್ನು ತಡೆದು ಮನವಿ ಮಾಡಿಕೊಂಡರೆ ಮತ್ತೆ ಕೆಲವರು ಒರಟೊರಟಾಗಿ ಮಾತಾನಾಡಿಬಿಡುತ್ತಿದ್ದರು. ಅದು ಕಾರ್ನಾಡಿನ ಪೇಟೆ ಬೀದಿಯಾದ್ದರಿಂದ ಜನರ ಓಡಾಟ ಸಹಜವಾಗೇ ಜಾಸ್ತಿ ಇರುತ್ತಿತ್ತು.

ಸಹನೆ, ಸಮಯ ಇದ್ದವರು ಏನೋ ಮಾಡ್ತಾ ಇದಾರೆ ಅಂತ ನೋಡಿದ್ರೆ, ಇನ್ನು ಕೆಲವರು, ನಾವು ಹೋದಮೇಲೆ ನಿಮ್ಮ ಶೂಟಿಂಗ್ ಮಾಡಿಕೊಳ್ಳಿ’ ಎಂದು ಒರಟಾಗಿ ಹೇಳಿಬಿಡುತ್ತಿದ್ದರು. ಆ ಕಾರಣಕ್ಕೆ ಅಲ್ಲಿಯ ಸಾರ್ವಜನಿಕರ ಜೊತೆ ಜಗಳವಾಗಿ, ನಾವೇ ಹೋಗಿ ಮಧ್ಯದಲ್ಲಿ ಹುಡುಗರ ಪರವಾಗಿ ಕ್ಷಮೆ ಕೇಳಿ ಅವರನ್ನು ಸಮಾಧಾನ ಮಾಡಿದ್ದಿತ್ತು. ಇದೆಲ್ಲದರ ನಡುವೆಯೇ ಶ್ರೀನಿವಾಸಾಚಾರಿ ಚಿನ್ನದ ಅಂಗಡಿಯ ಶೂಟಿಂಗ್ ನಡೆಯುತ್ತಿದ್ದ ಸಂಜೆ ದೊಡ್ಡ ಗಲಾಟೆಯಾಗಿ ಬಿಟ್ಟಿತ್ತು. ಚಿತ್ರೀಕರಣ ಮುಗಿದು ನಮ್ಮ ವಸ್ತ್ತುಗಳನ್ನೆಲ್ಲಾ ಪ್ಯಾಕ್ ಮಾಡುವಾಗ ಪಕ್ಕದಲ್ಲಿದ್ದ ಪಾರ್ಲರ್‌ನ ಹೆಂಗಸು ಬಂದು ಮಾತನಾಡಲಿಕ್ಕೆ ಶುರು ಮಾಡಿದಳು. ನಾವು ನಮ್ಮ ಬಗ್ಗೆ ವಿಚಾರಿಸಿಕೊಳ್ಳುತಿರಬಹುದು ಎಂದು ಕೊಂಡು ನಮ್ಮ ಕೆಲಸದಲ್ಲಿ ನಾವು ತೊಡಗಿಕೊಂಡಿದ್ದೆವು. ಇದ್ದಕ್ಕಿದ್ದ ಹಾಗೆ ಮಾತು ಜೋರಾಯಿತು. ಸುತ್ತ ಮುತ್ತ ಇರುವವರೆಲ್ಲಾ ಬಂದು ಸೇರಿಬಿಟ್ಟರು. ಹೀಗೆ ಸ್ಥಳೀಯರ ಜೊತೆ ಜಗಳ ಮಾಡಿಕೊಂಡರೆ ನಮ್ಮ ಮುಂದಿನ ಕೆಲಸಕ್ಕೆ ತೊಂದರೆ ಆಗುತ್ತೆ ಎಂದು ಭಾವಿಸಿ, ಆಕೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏನಾಯಿತು ಎಂದೆಲ್ಲಾ ವಿಚಾರಿಸಿದೆವು.

ನಿಮ್ಮ ಶೂಟಿಂಗ್ ಕಾರಣಕ್ಕೆ ನನ್ನ ವ್ಯಾಪಾರಕ್ಕೆ ತೊಂದರೆಯಾಗಿದೆ. ಈ ನಷ್ಟವನ್ನು ಯಾರು ಭರಿಸುತ್ತಾರೆ?’ ಎಂದು ತನ್ನದೇ ವಾದವನ್ನು ಮುಂದಿಟ್ಟಳು. ಅರೆ ನಮ್ಮ ಶೂಟಿಂಗ್‌ಗೂ ನಿನ್ನ ವ್ಯಾಪಾರಕ್ಕು ಏನು ಸಂಬಂಧ? ನಾವು ನಿನ್ನ ಬಿಸನೆಸ್‌ಗೆ ತೊಂದರೆಯನ್ನೂ ಮಾಡಿಲ್ಲ. ನಿನ್ನ ಪಾರ್ಲರ್‌ಗೆ ಬರುವವರನ್ನು ತಡೆದಿಲ್ಲ’ ಎಂದೆಲ್ಲಾ ಅವಳನ್ನು ಸಮಾಧಾನ ಪಡಿಸಲು ನೋಡಿದೆವು. ಆಕೆ ಮಾತ್ರ ಜಗ್ಗಲೇ ಇಲ್ಲ.ನನಗೆ ದಿನವೊಂದಕ್ಕೆ ಎರಡರಿಂದ ಮೂರು ಸಾವಿರ ವ್ಯಾಪಾರ ಆಗುತ್ತದೆ. ಇವತ್ತು ಒಂದು ಪೈಸವೂ ಆಗಲಿಲ್ಲ’ ಎಂದಳು. ದಿನಾ ಇಷ್ಟು ಆಗೇ ಆಗುತ್ತೆ ಅನ್ನಲಿಕ್ಕೆ ನಿನ್ನದು ದಿನಸಿ ವ್ಯಾಪಾರವಲ್ಲ. ಒಂದೊಂದು ದಿನ ಸಹಜವಾಗೇ ವ್ಯಾಪಾರ ಆಗದೇ ಇರಬಹುದಲ್ಲಾ?’ ಎಂದೆವು. ಆಕೆ ಯಾರ ಮಾತನ್ನು ಕೇಳಿಸಿಕೊಳ್ಳಲಿಕ್ಕೆ ಸಿದ್ಧವಿರಲಿಲ್ಲ.

ನೀವು ಕೊಡಲಿಲ್ಲ ಅಂದ್ರೆ ನಾನು ಏನು ಮಾಡಬೇಕೋ ಅದನ್ನ ಮಾಡುತ್ತೇನೆ’ ಎಂದಿದ್ದಳು ಆಕೆ. ಆಕೆಗೆ ನಾವು ಸಿನೆಮಾದವರು ನಮ್ಮಲ್ಲಿ ಹಣಕ್ಕೆ ಕೊರತೆ ಇರುವುದಿಲ್ಲ ಇದೊಂದು ಸಂದರ್ಭ ಹೇಗಾದರೂ ಮಾಡಿ ಪೈಸೂ ವಸೂಲಿ ಮಾಡಿಕೊಂಡು ಬಿಡೋಣ ಎನ್ನುವ ಉದ್ದೇಶವಿತ್ತು. ಅದಕ್ಕೆ ತಕ್ಕ ಹಾಗೆ ಮಾತಾಡುತ್ತಲೇ ಇದ್ದಳು. ಅಕ್ಕ ಪಕ್ಕದವರ್ಯಾರೋ ಈಕೆಯಸ್ನೇಹಿತೆ ಪೊಳಿಸ್‌ರೊಬ್ಬರ ಪತ್ನಿ ಆ ಕುಮ್ಮಕ್ಕಿನಿಂದಲೇ ಮಾತನಾಡುತ್ತಿರುವುದು ಎಂದಿದ್ದರು. ಗಲಾಟೆ ಮಾಡಿಕೊಂಡು ನಾವು ಸಾಧಿಸುವುದಾದರೂ ಏನನ್ನು? ಕಡೆಗೆ ನಮಗೆ ಮಾತಾಡಿ ಆಡಿ ಬೇಸರವಾಗಿ ಆಕೆಗೆ ಎರಡು ಸಾವಿರ ಕೊಟ್ಟೆವು. ಅದು ಸಾಕಾಗಲ್ಲ ಎಂದು ಪಟ್ಟು ಹಿಡಿದಳು.

ನಾವು ಇಷ್ಟನ್ನ ಕೊಡಲಿಕ್ಕೆ ನಾವು ನಮ್ಮ ಲೆಕ್ಕದಲ್ಲಿ ಏನೆಲ್ಲಾ ಸರ್ಕಸ್ ಮಾಡಬೇಕು, ನಮ್ಮ ಪ್ರಡ್ಯೂಸರ್ ಕೇಳಲ್ಲ’ ಎಂದೆಲ್ಲಾ ಹೇಳಿದೆವುಅಷ್ಟು ಹಣವಿಲ್ಲ ಎಂದ ಮೇಲೆ ನೀವು ಎಂತಕ್ಕೆ ಸಿನೆಮಾ ಮಾಡಿ ನಮ್ಮಂಥವರಿಗೆ ತೊಂದರೆ ಕೊಡುವುದು?’ ಎಂದಳು. ಅರೆ ಈಕೆಗೆ ಹಣ ಕೊಡುವುದಕ್ಕೆ ನಾವು ಸಿನೆಮಾ ಮಾಡಬೇಕಾ? ಕೇಳುವುದಕ್ಕೂ ನ್ಯಾಯ ಇರಬೇಕಲ್ಲವಾ? ಆ ಊರಲ್ಲಿ ಬಂದರೆ ಐಬ್ರೋ ಮಾಡಿಸಿಕೊಳ್ಳಲಿಕ್ಕೋ ಕೂದಲು ಕತ್ತರಿಸಿಕೊಳ್ಳಲಿಕ್ಕೋ ಅಥವಾ ಫೇಷಿಯಲ್ ಮಾಡಿಸಿಕೊಳ್ಳಲಿಕ್ಕೋ ಬರುತ್ತಾರೆ. ಎಲ್ಲದರಿಂದ ಆಕೆಗೆ ಐನೂರೋ ಸಾವಿರವೋ ಬಂದರೆ ಹೆಚ್ಚು. ನಮ್ಮನ್ನು ಹಣಕ್ಕಾಗಿ ಹೀಗೆ ಸತಾಯಿಸುವುದಾ? ಎಂದು ಕೋಪ ಕೂಡಾ ಬಂತು.

ಗಂಡÀಸರಾದರೆ ಗದರಿಸಬಹುದು ಹೆಂಗಸರ ಹತ್ತಿರ ಕಷ್ಟ. ಬೈಯ್ಯಲಿಕ್ಕೂ ಬರಲ್ಲ ಎಂದು ಗೊಣಗಿಕೊಂಡು ಇನ್ನೊಂದು ಸಾವಿರಕೊಟ್ಟರು ಪಂಚಾಕ್ಷರಿ. ಆಕೆ ಕೇಳಿದಷ್ಟನ್ನು ಕೊಟ್ಟ ನಮ್ಮನ್ನು ಗಮನಿಸುತ್ತಿದ್ದ ಪಕ್ಕದ ತರಕಾರಿ ಅಂಗಡಿಯವ ಕೂಡಾ ನಮ್ಮಿಂದ ಹಣವನ್ನು ನಿರೀಕ್ಷಿಸುತ್ತಿದ್ದ. ಅವನು ಮಾತಾಡಲಿಕ್ಕೆ ಬಂದ ತಕ್ಷಣ ನಾವು ಹೊರಟೇ ಬಿಟ್ಟೆವು. ನಮ್ಮ ಹುಡುಗರ ಹತ್ತಿರ ಅವನು ಮುಂದಿನ ಸಲ ಬನ್ನಿ. ಆಗ ಹೇಳ್ತೀನಿ’ ಅಂತ ಧಮಕಿ ಹಾಕಿದನಂತೆ. ಕೇಳಲಿಕ್ಕೆ ನಾವಿಲ್ಲದಿದ್ದರಿಂದ ಗೊಣಗಿಕೊಂಡು ಸುಮ್ಮನಾಗುವುದನ್ನು ಬಿಟ್ಟರೆ ಅವನಿಗೂ ಬೇರೆ ದಾರಿ ಇರಲಿಲ್ಲ. ನಮ್ಮ ಶೆಡ್ಯೂಲ್‌ನ ಪ್ರಕಾರ ಎರಡು ದಿನ ಚಿನ್ನದಂಗಡಿಯ ಚಿತ್ರೀಕರಣವಿತ್ತು. ನಾಲ್ಕೆöÊದು ದಿನ ಬಿಟ್ಟು ಫೋನ್ ಮಾಡಿದರೆ ಚಿನ್ನದಂಗಡಿಯ ಓನರ್ ಶರತ್ ಪ್ರಸಾದ್ದಯವಿಟ್ಟು ಕ್ಷಮಿಸಿ ನನಗೆ ಅಕ್ಕಪಕ್ಕದ ಜನ ಬೈತಾ ಇದಾರೆ. ಇನ್ನು ಅಂಗಡಿಯನ್ನು ಚಿತ್ರೀಕರಣಕ್ಕೆ ಕೊಡಲಿಕ್ಕಾಗಲ್ಲ’ ಎಂದುಬಿಟ್ಟಿದ್ದರು.

ಚಿನ್ನದಂಗಡಿಯ ದೃಶ್ಯಗಳನ್ನು ಎಲ್ಲಿ ಚಿತ್ರೀಕರಿಸುವುದು? ಅದು ಒಮ್ಮೆ ಚಿತ್ರೀಕರಿಸಿದ ಜಾಗವನ್ನು ಬದಲಿಸುವುದಾದರೂ ಹೇಗೆ? ಕಾಂಪಾಕ್ಟ್ ಆಗಿ ಬೇರೆ ಚಿನ್ನದಂಗಡಿಯಲ್ಲಿ ಚಿತ್ರೀಕರಿಸೋಣ ಎಂದರೆ ನಮಗೆ ಅಂಗಡಿಯನ್ನು ಕೊಡುವವರು ಯಾರು? ಇದು ನಿಜಕ್ಕೂ ದೊಡ್ಡ ಸವಾಲೇ. ಮತ್ತೆ ರಾತ್ರಿಯೆಲ್ಲಾ ಯೋಚನೆ ಮಾಡಿ ಮತ್ತೆ ಚಿನ್ನದಂಗಡಿಯದೃಶ್ಯಗಳನ್ನೆಲ್ಲಾ ಶ್ರೀನಿವಾಸಾಚಾರಿಯ ಮನೆಗೇ ಶಿಫ್ಟ್ ಮಾಡಿದೆವು. ನಿಜಕ್ಕೂ ಮನೆಯ ಓನರ್ ಬೋಳಾ ರಂಗನಾಥರಾವ್ ನಮಗೆ ನೀಡಿದ ಸಹಕಾರಕ್ಕೆ ನಾವು ಕೃತಜ್ಞರಾಗಿರಬೇಕು.

ನಾಳೆ ಇಲ್ಲಿಗೇ ಬರ್ತೀರಾ? ಬನ್ನಿ ಎಷ್ಟು ದಿನ ಬೇಕಾದರೂ ಮಾಡಿಕೊಳ್ಳಿ ಎಂದು ಬಿಟ್ಟುಕೊಟ್ಟರು. ಒನ್ನೊಂದು ಸಲ ನಮಗೆ ಕಾರ್ನಾಡಿನ ಬೀದಿಗಳನ್ನು ಬ್ಲಾಕ್ ಮಾಡಬೇಕಾಗಿ ಬಂದದ್ದು ಅಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಪಾತುಮ್ಮಳ ಮಗಳು ಸಲ್ಮಾ ಹೆರಿಗೆಗಾಗಿ ಬರುವ ದೃಶ್ಯವನ್ನು ಚಿತ್ರೀಕರಿಸುವಾಗ. ಅದೂ ಮುಖ್ಯ ರಸ್ತೆಯಾದ್ದ ಕಾರಣ ವಾಹನ ಓಡಾಟ ನಿಜಕ್ಕೂ ಜಾಸ್ತಿಯೇ ಇತ್ತು. ಒಳಗೆ ಚಿತ್ರೀಕರಣ ಶುರುವಾದ ತಕ್ಷಣ ರಸ್ತೆಯಲ್ಲಿ ವಾಹನ ಓಡಾಟವನ್ನು ತಡೆಯಬೇಕಿತ್ತು. ಅಲ್ಲಿ ಪೊಲೀಸರಿದ್ದಾರೆ ಎನ್ನುವುದು ಗೊತ್ತಿಲ್ಲದ ನಮ್ಮ ಹುಡುಗರು ಬರುತ್ತಿದ್ದ ವಾಹನವನ್ನು ತಡೆಗಟ್ಟಿದ ತಕ್ಷಣ ಗಮನಿಸಿ ಬಂದೆ ಬಿಟ್ಟರು.ಜನರಿಗೆ ತೊಂದರೆ ಕೊಡುತ್ತಿದ್ದೀರಲ್ಲಾ? ಹೀಗೆ ಮಾಡುವುದು ಕಾನೂನಿನ ಪ್ರಕಾರ ಅಪರಾಧ.

ನಮ್ಮಲ್ಲಿ ನೀವು ಶೂಟಿಂಗ್‌ಗೆ ಪರ್ಮೀಷನ್ ತಗೊಂಡಿದ್ದೀರಾ?’ ಎಂದೆಲ್ಲಾ ಗಲಾಟೆ ಶುರು ಮಾಡಿದರು. ಹುಡುಗರು ಬಂದು ಹೀಗಾಗಿದೆ’ ಎಂದು ನನ್ನನ್ನು ಕರೆದರು. ನನ್ನನ್ನು ನೋಡಿದ ತಕ್ಷಣಮೊನ್ನೆಯೂ ಪೇಟೆ ಬೀದಿಯಲ್ಲಿ ಜನರನ್ನು ತಡೆಯುತ್ತಿದ್ದವರು ನೀವೇನೇನ್ರೀ. ನಮಗೆ ಪಬ್ಲಿಕ್‌ನಿಂದ ಕಂಪ್ಲೇಂಟ್ ಬಂದಿದೆ. ಸಿನೆಮಾದೋರಾದ್ರೆ ಏನು ಬೇಕಾದ್ರೂ ಮಾಡಬಹುದಾ?’ ಎಂದೆಲ್ಲಾ ಜೋರು ಮಾಡಿದರು. ಇದು ವಿಪರೀತಕ್ಕೆ ಹೋಗುತ್ತೆ ಎನ್ನುವ ಕಾರಣಕ್ಕೆ ನಾನು ಏನೂ ಗೊತ್ತೇ ಇಲ್ಲ ಎನ್ನುವ ಹಾಗೆ, ಇಲ್ಲ ಸಾರ್ ನಮಗೂ ಅದಕ್ಕೂ ಸಂಬAಧವಿಲ್ಲ.

ನಾವು ವಾರ್ತಾ ಇಲಾಖೆಗೆ ಜನರನ್ನು ಎಜ್ಯುಕೇಟ್ ಮಾಡಲಿಕ್ಕೆ ಅಂತ ಡಾಕ್ಯುಮೆಂಟರಿ ಮಾಡ್ತಾ ಇದೀವಿ. ಬೇಕಾದ್ರೆ ನೋಡ ಬನ್ನಿ, ಮುಸ್ಲಿಂ ಹೆಣ್ಣುಮಕ್ಕಳು ಹೆಚ್ಚು ಹೆರದ ಹಾಗೆ, ಫ್ಯಾಮಿಲಿ ಪ್ಲಾನಿಂಗ್ ಕುರಿತು ಡಾಕ್ಟರ್ ಮಾತಾಡ್ತಾ ಇದಾರೆ’ ಎಂದೆ. ಅವರು ಬಂದು ನೋಡಿದರು. ನಿಜಕ್ಕೂ ಅವತ್ತು ಅದೇ ದೃಶ್ಯದ ಚಿತ್ರೀಕರಣವೇ ನಡೀತಾ ಇತ್ತು. ಪೊಲೀಸರಿಗೆ ನಮ್ಮ ಬಗ್ಗೆ ಅನುಮಾನ ಬರಲಿಲ್ಲ.ಆಯ್ತು ಬಿಡಿ, ಹಣ ಇದೆ ಅಂತ ದರ್ಪ ತೋರಿಸ್ತಾರೆ. ಅದಕ್ಕೆ ಮಾತನಾಡಿದೆವು. ಪಾಪ ನೀವು ಒಳ್ಳೆ ಕೆಲಸ ಮಾಡ್ತಾ ಇದೀರ’ ಎಂದು ಹೊಗಳಿದರು.

ನಾನೂ ಬ್ರೇಕ್‌ನಲ್ಲಿ ಪಂಚಾಕ್ಷರಿಯನ್ನು ಅವರಿಗೆ ಪರಿಚಯಿಸಿ, ನೋಡಿ ಮೊನ್ನೆ ಯಾರೋ ಸಿನೆಮಾದವರು ರೋಡ್ ಬ್ಲಾಕ್ ಮಾಡಿದ್ದರಂತೆ. ಇವರು ನಮ್ಮ ಮೇಲೆ ಕೋಪ ಮಾಡಿಕೊಂಡರು. ಅದಕ್ಕೆ ನಾವು ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಡಾಕ್ಯುಮೆಂಟರಿ ಫಿಲ್ಮ್ ಮಾಡ್ತಾ ಇದೀವಿ ಎಂದು ಕರೆದುಕೊಂಡು ಬಂದೆ. ನೀವಾದರೆ ಸರಿಯಾಗಿ ಹೇಳ್ತೀರ ಅಂತ’ ಎಂದೆ. ಪಂಚಾಕ್ಷರಿಗೆ ಪೂರ್ತಿ ವಿಷಯ ಅರ್ಥವಾಗಿತ್ತು. ಅವರೂ ನನಗಿಂತ ನಾಟಕ ಮಾಡಿದರು. ಬಂದ ಪೊಲೀಸರು ನಿಜ ಎಂದು ನಂಬಿದರು. ಅತ್ಯಂತ ಕಾಳಜಿಯಿಂದನಮ್ಮ ಈ ಭಾಗದ ಮುಸಲ್ಮಾನ ಹೆಣ್ಣು ಮಕ್ಕಳು ನಿಜಕ್ಕು ತುಂಬಾ ಕಷ್ಟದಲ್ಲಿದ್ದಾರೆ. ಅವರಿಗೆ ಅರ್ಥವಾಗುವ ಹಾಗೆ ಸರಿಯಾಗಿ ಹೇಳಿ. ಹೆರುವ ಯಂತ್ರಗಳೇ ಆಗಿಬಿಟ್ಟಿದ್ದಾರೆ.

ನೋಡಿದರೆ ಪಾಪ ಅನ್ನಿಸುತ್ತೆ. ಎಜ್ಯುಕೇಟೆಡ್ಸ್ ಪರವಾಗಿಲ್ಲ, ಮಿಕ್ಕವರ ಕತೆ ಹೇಳುವುದು ಬೇಡ’ ಎಂದಿದ್ದರು. ಚಿತ್ರೀಕರಣದ ಮಧ್ಯೆ ನಾನು ಹೊರಗೆ ಬಂದಾಗ ನನಗೆ, `ಒಳ್ಳೆ ಕೆಲಸ ಮಾಡ್ತಾ ಇದೀರ’ ಎಳನೀರನ್ನೂ ಕುಡಿಯಲು ಬಲವಂತ ಮಾಡಿದರು. ನಾನು ನಮ್ಮ ಹುಡುಗರಿಗೆ ವಿಷಯ ತಿಳಿಸಿಬಿಟ್ಟಿದ್ದೆ ಕೇಳಿದರೆ ಹೀಗೇ ಹೇಳಿ ಎಂದು.

ಒಳ್ಳೆಯ ಕೆಲಸ ಎನ್ನುವುದನ್ನು ನಾವು ಅರ್ಥ ಮಾಡಿಸಿದರೆ ಯಾರಾದರೂ ಸರಿಯೇ ಖಂಡಿತಾ ನಮಗೆ ಬೆಂಬಲಕೊಡುತ್ತಾರೆ. ಆದರೆ ನಾವು ತಪುö್ಪ ಮಾಡಿದೆವು ಎಂದು ನನಗೆ ಗೊತ್ತಾಗಿದ್ದು ಮಾತ್ರ ಪೊಲೀಸರು ಆ ಮಾತನ್ನು ಹೇಳಿದಾಗಲೇ ಪಂಚಾಕ್ಷರಿಗೆಗೊತ್ತಿತ್ತೋ ಇಲ್ಲವೋ ನನಗೆ ಕೊನೆಗೂ ಗೊತ್ತಾಗಲಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಹೊಳೆದ ಸುಳ್ಳೊಂದು ಅವತ್ತು ಕಾನೂನಿನ ಜೊತೆ ಜಗಳಕ್ಕೆ ನಿಲ್ಲದೆ ಎಲ್ಲವನ್ನೂ ತುಂಬಾ ಸರಳವಾಗಿ ಸಹಜವಾಗಿ, ಸಲೀಸಾಗಿ ಕೆಲಸ ನಡೆೆಯುವಂತೆ ಮಾಡಿತ್ತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

February 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: