ಕಾಕದೋಷ: ಒಂದು ನಾಟಕ, ನಾಲ್ಕು ನೋಟ

ವೆಂಕಟೇಶ್ ಪ್ರಸಾದ್ ಅವರ ಬಹುಚರ್ಚಿತ ನಾಟಕ ‘ಕಾಕದೋಷ’

ಈ ನಾಟಕ ‘ರಂಗ ಶಂಕರ’ದಲ್ಲಿ ಇದೇ ತಿಂಗಳ 26 ರಂದು ಮರು ಪ್ರದರ್ಶನಗೊಳ್ಳಲಿದೆ

ಖ್ಯಾತ ರಂಗ ನಿರ್ದೇಶಕರಾದ ಶ್ರೀಪಾದ ಭಟ್ ಹಾಗೂ ಮೂವರು ರಂಗ ವಿದ್ಯಾರ್ಥಿಗಳು ಈ ನಾಟಕವನ್ನು ಕಂಡ ಬಗೆ ಇಲ್ಲಿದೆ-

ಡಾ.ಶ್ರೀಪಾದ ಭಟ್

**

ನಂಬಿಕೆಗಳು ಅದು ಹುಟ್ಟಿದ ಕಾರಣಗಳ ಸಂದರ್ಭವನ್ನು ಮರೆತು ಆಚರಿಸಲ್ಪಟ್ಟಾಗ ಮೂಢವಾಗುತ್ತದೆ. ದೈನಂದಿನ ಅ- ವ್ಯವಹಾರಗಳ ಸಮರ್ಥನೆಗೆ ಬಳಸಲ್ಪಟ್ಟಾಗ ದ್ರೋಹ – ಆಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಪುರುಷ ಯಜಮಾನಿಕೆಯ ಭಾಷೆ ಈ ನಂಬಿಕೆಗಳ ದ್ರೋಹತನವನ್ನು ಬಳಸಿಕೊಂಡೇ ಬದುಕುತ್ತದೆ. ಅದು ಎಷ್ಟು ಪ್ರಭಾವಶಾಲಿ ಎಂದರೆ ಅದಕ್ಕೆ ಬಲಿಯಾಗುತ್ತಿರುವ ಹೆಣ್ಣುಗಳೂ ಸಹ ಆ ಭಾಷೆಯನ್ನೇ ತಮ್ಮದೆಂದುಕೊಂಡು ಬದುಕುತ್ತಾ ತಮ್ಮನ್ನೂ ಹಿಂಸಿಸಿಕೊಂಡು, ತಮ್ಮ ಸುತ್ತಲಿನವರನ್ನೂ ಹಿಂಸಿಸುತ್ತ ಬದುಕುತ್ತಿರುತ್ತಾರೆ.

‘ಕಾಕದೋಷ’ ನಾಟಕ ಈ ಸಂಗತಿಯ ಸುತ್ತ ಮುತ್ತ ಹಲವು ಪದರಗಳಲ್ಲಿ ಶೋಧ ನಡೆಸುತ್ತದೆ. ಮೇಲು ನೋಟಕ್ಕೆ ಕುಟುಂಬವೊಂದರ ಕತೆಯಂತೇ ಕಂಡುಬಂದರೂ ಈ ನಾಟಕವು ಅದರ ಪರಿಧಿ ದಾಟಿ, ಮನೋ ವಿಜ್ಞಾನದ ಹಲವು ಮಜಲುಗಳ ಅನ್ವೇಷಣೆಯಲ್ಲಿ ನೋಡುಗರನ್ನು ತೊಡಗಿಸಿ ತಲ್ಲಣಿಸುವಂತೆ ಮಾಡುತ್ತದೆ. ಒಂದು ತಲೆಮಾರಿನ ತಾಯಿ ( ಈ ನಾಟಕದ ಅಜ್ಜಿ) ಈ ತನ್ನ ಸಂಕಟವನ್ನು ತನ್ನ ಸೊಸೆಗೂ ದಾಟಿಸಿ ಅವಳನ್ನೂ ಪಳಗಿಸಲು ಯತ್ನಿಸಿದರೆ, ಎರಡನೇ ತಲೆಮಾರಿನ ತಾಯಿ ಅದರಿಂದ ಪಾರಾಗುವ ಬಗೆಯಲ್ಲಿ ಅನೇಕ ವಿಫಲ ಯತ್ನಗಳನ್ನು ನಡೆಸಿ ಕೊನೆಗೆ ಯಶ ಪಡೆಯುತ್ತಾಳೆ. ಆಕೆಯ ಗೊಂದಲ, ತಲ್ಲಣ, ಹತಾಷೆ, ಕ್ರೌರ್ಯ ಇವು ನಾಟಕದ ಮೂಲಧಾತು.

ಹೊಸ ತಲೆಮಾರಿನ ಮಹಿಳೆಯರಿಗೆ ( ಈ ನಾಟಕದ ಕೆಲಸದಲ್ಲಿರುವ ಹೆಣ್ಣುಮಕ್ಕಳು) ಇವು ಅರ್ಥವಾದರೂ ಬಗೆಹರಿಸಿಕೊಳ್ಳಲು ಕಷ್ಟಸಾಧ್ಯವಾದ ಪರಿಸ್ಥಿತಿ ಅವರನ್ನು ಅಬಲೆಯರನ್ನಾಗಿಸುತ್ತದೆ. ಈ ನಡುವೆ ಜಾತಿ ರಾಜಕಾರಣ, ಆಚರಣೆಗಳ ರಾಜಕಾರಣ, ಅಧಿಕಾರ ಮತ್ತು ಲೋಭದ ರಾಜಕಾರಣಗಳೂ ಒಳದನಿಯಲ್ಲಿ ಮಾತನಾಡುತ್ತಲೇ ಇರುತ್ತದೆ. ಹೀಗೆ ಸಂಕೀರ್ಣವಾದ ನಾಟಕವೊಂದನ್ನು ಕನ್ನಡದಲ್ಲಿ ಮೂಡಿಸಿದ್ದಕ್ಕಾಗಿ BTC ತಂಡಕ್ಕೆ ಅಭಿನಂದನೆಗಳು.

ನಿಜ, ಗಂಡುವಾಂಛೆ ಆನುವಂಶಿಕವಾಗಿದೆ ಅನ್ನುತ್ತ ಇಲ್ಲಿಯ ಪುರುಷರು ಹಾಗೂ ನಾವಿನ್ನೇನು ಮಾಡಲು ಸಾಧ್ಯ ಎಂಬ ಅಸಹಾಯಕತೆಯನ್ನು ಇಲ್ಲಿಯ ಹೆಣ್ಣುಗಳು ಮುನ್ನೆಲೆಗೆ ತಂದಿರಿಸಿ ಕರುಣೆ ಗಿಟ್ಟಿಸುವ ಸಾಧ್ಯತೆಯ ಅವಕಾಶವೂ ಇಲ್ಲಿದೆ. ಪುಟ್ಟ ಪುಟ್ಟ ದೃಶ್ಯಗಳ ಬದಲಾವಣೆಯಲ್ಲಿಯೂ ಮಿನಿಮಲ್ ಆಗಿದ್ದರೂ ಕಿರಿಕಿರಿ ಹುಟ್ಟಿಸುವ ಸೆಟ್ ಬದಲಾವಣೆಯ ಹೊತ್ತನ್ನು ನಾಟಕ ಉಳಿಸಿಕೊಳ್ಳಲೇ ಬೇಕಿದೆ. ನಾಟಕದ ಅವಧಿ ತುಸು ಕಡಿಮೆ ಇರಬೇಕೇನೋ ಎಂದೂ ಅನಿಸುತ್ತದೆ. ಆದರೆ ಅವೆಲ್ಲ ಸರಿಪಡಿಸಿಕೊಳ್ಳಬಹುದಾದ ಪುಟ್ಟ ಕೊರತೆಗಳು. ನಾನು ನೋಡಿದ್ದು ಇದರ ಮೊದಲ ಪ್ರಯೋಗ ಅಷ್ಟೆ. ನಾಟಕವು ಪಳಗಲು ಅದಕ್ಕೆ ಬೇಕಷ್ಟು ಅವಕಾಶವಿದೆ.

ಪಾತ್ರಗಳ ನಾಡಿಮಿಡಿತ ಅರಿತು ಅದನ್ನು ಆಡಿಸಲು ಬಲ್ಲ ತಾಕತ್ತು ಹೊಂದಿದ ನಟವರ್ಗವೇ ಇಲ್ಲಿದೆ. ನಂದಿನಿ ಪಟವರ್ಧನ, ಗೌರಿದತ್ತು ಶೃಂಗ ಇವರೆಲ್ಲ ಪೈಪೋಟಿಯಲ್ಲಿ ಅವರ ಕೌಶಲ ತೋರುತ್ತಾರೆ. ವಿದ್ಯಾ, ನವೀನ್, ಸುನಿಲ್, ರಾಗ್ ಅರಸ್ ಇವರೆಲ್ಲರ ಔಚಿತ್ಯದ ಅಭಿನಯ ಇದಕ್ಕಿದೆ. ಜಗದ ವಿಷಣ್ಣತೆಯನ್ನು ಕಾಣಿಸುವ ಅರುಣ್ ಅವರ ನೆರಳು ಬೆಳಕು, ಸುರೇಂದ್ರನಾಥರ ಕಾವ್ಯದಂತಿರುವ ವಿನ್ಯಾಸ ಇವೆಲ್ಲವೂ ನಿಮಗೆ ಸಾತ್ ನೀಡುತ್ತದೆ.

ಸಮುದಾಯದ ಸಂಕಟಗಳನ್ನು ತನ್ನದೇ ಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತ ಅದರ ನಿವಾರಣೆಗೆ ಅಹರ್ನಿಶಿ ಚಿಂತನೆ ನಡೆಸುವ ವೆಂಕಟೇಶ ಪ್ರಸಾದ್ ನಾಟಕವನ್ನು ಸಮರ್ಥವಾಗಿ ಅನುವಾದಿಸಿದ್ದಾರೆ. ಈ ಅನುವಾದ ಭಾಷೆಯಲ್ಲಿ ಎಂತೋ, ರಂಗಭಾಷೆಯಲ್ಲಿ ಕೂಡ.
ಚಂದದ ಸಂಘಟನೆಗಾಗಿ ಸುಶ್ಮಾ ಅವರಿಗೆ ಸೆಲ್ಯೂಟ್.

ಅಂದ ಹಾಗೆ ನನ್ನ ಜತೆ ಈ ರಂಗಪ್ರಯೋಗವನ್ನು ತಲ್ಲಣಿಸುತ್ತ ವೀಕ್ಷಿಸಿದ ಮೂವರು ಹೆಣ್ಣುಮಕ್ಕಳಿಗೆ ಅವರ ಅನುಭವ ದಾಖಲಿಸಲು ಕೇಳಿದೆ. ಅವರೆಲ್ಲರೂ ಯುವ ರಂಗ ಕಲಾವಿದರು. ಅವರ ಅನಿಸಿಕೆ ನಿಜಕ್ಕೂ ಮುಖ್ಯ. ಅವೂ ಇಲ್ಲಿವೆ.

ಅನಘ ಶ್ರೀ

**
ಅಜ್ಜಿ ತನ್ನ abusive ಮಗನ behaviour ಅನ್ನು ಸಮರ್ಥನೆ ಮಾಡಲು ಪ್ರಯತ್ನಿಸುವ ರೀತಿ, ಅದೇ ಮುಂದುವರಿದು ಮೊಮ್ಮಗನ ಎಲ್ಲ ವ್ಯವಹಾರದ ಕಡೆಗೆ blind eye; ಯಾವುದೇ important conversation ಮಾಡಬೇಕಾಗಿ ಬಂದಾಗ ಹಾಡು volume ಜಾಸ್ತಿ ಮಾಡಿಸುವುದು – clearly ನಡೆಯುತ್ತಿರುವ ವ್ಯವಹಾರ ಸರಿ ಇಲ್ಲ ಎನ್ನುವುದು ಅವರಿಗೂ ಗೊತ್ತು ಆದರೆ ತನ್ನ ಮೊಮ್ಮಗ ನಿಜವಾಗಿ ಎಂತವನು ಅಂತ ನೋಡುವುದಕ್ಕಿಂತ she’d rather escape. ತಮ್ಮ ಗಂಡುಮಕ್ಕಳನ್ನು beyond reason ಬೆಲೆಕಟ್ಟುವವರು ಅವರನ್ನು ಕಾಪಾಡಲು ಯಾವ ರಾಜಿಗೂ ತಯಾರಿರುವುದು – ಇದೆಲ್ಲಾ ತುಂಬ disturb ಆಯ್ತು.

ಅಮ್ಮ ಮಗನ ಜೊತೆ video game ಆಡುವ ದೃಶ್ಯ, ತನ್ನ ಮಗನ ಒಳಗಿನ ಕ್ರೌರ್ಯವನ್ನ first hand ಅವನ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸುವುದು – i liked this scene. ಅಮ್ಮನ conflicts, ತನ್ನ ಅತ್ತೆಯ ಅತಿ ವ್ಯಾಮೋಹ ಮತ್ತು ತಂಗಿ ಇವರ in between ಮನಸ್ಥಿತಿ was interesting.

ಎರಡೂ situations ಅಲ್ಲಿ ಅವನ thinking- ಹೆಂಗಸರು ಈ ರೀತಿ ಇರಬೇಕು, ವ್ಯವಹರಿಸಬೇಕು ಅನ್ನುವ ideas (also evident in the way he behaves with his female colleague), ಅವರನ್ನು control and punish ಮಾಡುವ ಅಧಿಕಾರ ತನಗುಂಟು ಎನ್ನುವ ಯೋಚನೆ, ಅವನು ಅದನ್ನೆಲ್ಲಾ justify ಮಾಡುವ ರೀತಿ – very difficult to watch.

ಅಪೂರ್ವ ಚನ್ನರಾಯ ಪಟ್ಟಣ

**

ಇವತ್ತಿನ ದಿನಗಳಲ್ಲಿ ”patriarchy” ಹಾಟ್ ಟಾಪಿಕ್ ಆಗಿರುವ ಕಾರಣ ಈ ನಾಟಕ ಬಹಳ ಸೂಕ್ತವಾಗಿದೆ. ಶತಮಾನಗಳಿಂದ ಹೆಂಗಸರನ್ನು suppress ಮಾಡಿ, ಹಲವು ವರ್ಷಗಳಿಂದ ಸಪ್ರೆಷನ್ನನ್ನೇ normalise ಮಾಡಲಾಗಿದೆ. ಇವತ್ತು ಇದರ ವಿರುದ್ಧವಾಗಿ ಮಾತಾಡಿದರೆ ಹಲವು ಹೆಂಗಸರಿಗೇ ಸರಿ ಹೊಂದುವುದಿಲ್ಲ. ಹೀಗಾಗಿ patriarchy ಇಂದಿಗೂ ಸಮಸ್ಯೆಯಾಗಿ ಉಳಿಯಲು ಕೇವಲ ಇಂದಿನ ಗಂಡಸರು ಕಾರಣರಲ್ಲ, ಮನೆತನ,ಮರ್ಯಾದೆ, ಗೌರವಗಳ ಪರದೆಗಳಿಂದ ಅಂಧರಾದ ಹೆಂಗಸರೂ ಕಾರಣರಾಗಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಬದಲಾವಣೆಯ ಪ್ರಯತ್ನ ಹೆಚ್ಚುತ್ತಿದ್ದರೂ, ಅನೇಕರ ಮೇಲೆ ಪರಿಣಾಮ ಬೀರದಿರುವುದು ಕಂಡುಬರುತ್ತದೆ.

ಮೂರು ತಲೆಮಾರಿನ ಹೆಂಗಸರು –
Patriarchy ಎಂಬ ಸಮುದ್ರದಲ್ಲಿ ಅರಿವಿಲ್ದೆ ಮುಳುಗಿ ಹೋಗಿರೋ ಅತ್ತೆ, ಪ್ರತಿ ಬಾರಿ ದಡ ಮುಟ್ಟಿದಾಗಲು ಅಲೆಗಳಿಂದ ಅಪ್ಪಳಿಸಿ, ಸಿಲುಕುತ್ತಿರುವ ಸೊಸೆ, ಸಮುದ್ರದಿಂದ ದೂರ ಸರಿದರು, ಸುನಾಮಿಯಿಂದ ಬಾಚಿ ಹೋಗುವ ನರ್ಸ್.
ಮನುಷ್ಯ ತನ್ನ ಕರ್ಮಗಳಿಂದ ಕಳಚಿಕೊಳ್ಳಲು ಧಾರ್ಮಿಕ ರೀತಿಗಳನ್ನು ಕಂಡುಕೊಂಡಿದ್ದಾನೆ. ತನ್ನ ಪ್ರತಿ ಹೀನಾಕೃತ್ಯಕ್ಕೂ ಕೆಲವು ಧಾರ್ಮಿಕ ರೀತಿ ರಿವಾಜುಗಳ ಪಾಲನೆ ಮಾಡುವ ಮೂಲಕ ಕ್ಷಮನಾಗಬಹುದು ಎಂಬ ಮೂಢನಂಬಿಕೆಯಲ್ಲಿ ಮುಳುಗಿ, ಹೇಗೆ ಯಾವ ಹೀನಾಕೃತ್ಯಗಳಿಂದಲೂ ಹಿಂಜರಿಯುತ್ತಿಲ್ಲ ಎಂಬುದನ್ನು ಈ ನಾಟಕದಿಂದ ತಿಳಿಯಬಹುದು.

ಇಂತಹ ಗಂಭೀರ ವಿಚಾರಗಳ ಕುರಿತು ನಾಟಕ ಕಟ್ಟುವಾಗ, ನಾಟಕಕಾರರ ಹಾಸ್ಯ ಬಳಕೆಯ ಆಯ್ಕೆ ಶ್ಲಾಘಿಸುವಂತದ್ದು. ಎಲ್ಲಾ ನಟರು ತಮ್ಮ ತಮ್ಮ ಪಾತ್ರಗಳನ್ನ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಪ್ರಾರಂಭದಲ್ಲಿ ಪ್ರೇಕ್ಷಕರ ನಗುವಿನಿಂದ ತುಂಬಿದ್ದ ರಂಗಮಂದಿರ, ಕೊನೆಯಲ್ಲಿ ಮೌನಕ್ಕೆ ತಿರುಗಿದ್ದು ನೋಡಿದಾಗ ನಾಟಕದ ವಿಚಾರಗಳು ನೋಡುಗರ ಮನಸ್ಸು ಮತ್ತು ಚಿಂತನೆಯನ್ನು ಮುಟ್ಟಿರುವುದು ಖಚಿತವಾಗುತ್ತದೆ.

ಒಂದು ಸಲಹೆ – ನಾಟಕದ ಕಡೆಯ ಸೀನ್ ಅಷ್ಟು intense ಆಗಿರುವುದರಿಂದ, ಮುಂಚಿತವಾಗಿ ಪ್ರೇಕ್ಷಕರಿಗೆ ಒಂದು trigger warning ಕೊಟ್ಟರೆ mental illness/trauma ಇಂದ ಬಳಲಿದವರಿಗೆ ಸಹಾಯವಾಗಬಹುದು. ಯಾರಿಗಾದರೂ ತೊಂದರೆ ಇದ್ದಲ್ಲಿ, ಹೊರಹೋಗಲು ಸಾಧ್ಯತೆಗಳಿದ್ದರೆ ಮತ್ತೂ ಉತ್ತಮ. ನಾಟಕದ ಪ್ರದರ್ಶನದಲ್ಲಿ Discipline ಮುಖ್ಯ ಎಂದು ಒಪ್ಪುತ್ತೇನೆ, ಆದರೆ ಇಂತಹ ಸೂಕ್ಷ್ಮ ಸ್ಥಿತಿಗತಿಗಳಲ್ಲಿ ಕೊಂಚ ಕಾಂಪ್ರಮೈಸ್ ಮಾಡಿದರು ತೊಂದರೆಯಾಗದು ಎಂಬುದು ಅನಿಸಿಕೆ.
ಮುಂದಿನ ಪ್ರದರ್ಶನಗಳಿಗೆ ನನ್ನ best wishes!

ವೀಣಾ ಮೈಸೂರು

**

ನಾನು ಇತ್ತೀಚೆಗೆ ನೋಡಿದ ಕೆಲವು ಒಳ್ಳೆಯ ಮತ್ತು ವಿಭಿನ್ನ ನಾಟಕಗಳ ಪಟ್ಟಿಗೆ ಕಾಕದೋಷ ಹೊಸ ಸೇರ್ಪಡೆಯಾಗಿದೆ. ಪ್ರೇಕ್ಷಕರನ್ನು ಯೋಚನೆಗೆ ಹಚ್ಚುವ, ಪ್ರೇಕ್ಷಕನ ಅಭಿಪ್ರಾಯಗಳನ್ನು ಉದ್ದೀಪಿಸುವ, ಪ್ರಶ್ನಿಸುವ ಮತ್ತು ಸರಿ ತಪ್ಪುಗಳ ತೀರ್ಮಾನವನ್ನು ಪ್ರೇಕ್ಷಕನ ಪಾಲಿಗೆ ಒಪ್ಪಿಸುವಂತಹ ಹಲವು ಅಂಶಗಳಿವೆ ಈ ನಾಟಕದಲ್ಲಿ.

ಈ ನಾಟಕ ಸಮಾಜದಲ್ಲಿ ನಡೆಯುವ ಹಲವು ಘಟನೆಗಳಿಗೆ ಕನ್ನಡಿಯಂತಿತ್ತು. ಒಮ್ಮೆ ಅಚಾತುರ್ಯದಿಂದ ಒಂದು ತಪ್ಪನ್ನೆಸಗುವ ಅಪರಾಧಿ ತನಗಾಗಬಹುದಾದ ಶಿಕ್ಷೆಯಿಂದ ಸಲೀಸಾಗಿ ಪಾರಾಗಿ, ತನ್ನ ತಪ್ಪಿನ ತೀವ್ರತೆಯನ್ನು ಅರಿತುಕೊಳ್ಳದೆ ಮತ್ತೆ ಇನ್ನೊಂದು ದೊಡ್ಡ ಅಪರಾಧವೊಂದನ್ನು ಮಾಡಿಬಿಡುವ ಒಂದು ಅಪರೂಪದ ಮತ್ತು ಭಯಾನಕವೆನಿಸುವ ಕಥಾವಸ್ತುವನ್ನು ಈ ನಾಟಕ ಹೊಂದಿದೆ.

ಅಮ್ಮ ಮತ್ತು ಮಗನ ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದ್ದು, ಪ್ರತಿಯೊಬ್ಬ ಕಲಾವಿದರ ಅಭಿನಯವು ಮನಮುಟ್ಟುವಂತಿತ್ತು. ನಾಟಕ ನೋಡಿದ ಯಾರೊಬ್ಬರೂ ತಾಯಿಯ ಪಾತ್ರದೊಂದಿಗೆ ಕನೆಕ್ಟ್ ಆಗದೆ ಇರಲಾರರು.. ನಾಟಕ ನೋಡಿದ ನಂತರವೂ ಹಲವು ದಿನಗಳ ತನಕ ಕಾಡುತ್ತದೆ ಕಾಕದೋಷ.

‍ಲೇಖಕರು avadhi

April 22, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: