ಗಂಡಾಂತರಕಾರಿ ಫಲಿತಾಂಶ…

ಜಿ ಪಿ ಬಸವರಾಜು

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇನ್ನೂ ಪ್ರಜಾಪ್ರಭುತ್ವದ ಕನಸು ಪೂರ್ಣವಾಗಿ ಕಮರಿಲ್ಲ ಎನ್ನುವುದರ ಆಶಾಕಿರಣವಾಗಿ ಪಂಜಾಬ್‌ ಫಲಿತಾಂಶ ಹೊರಹೊಮ್ಮಿದೆ. ಉಳಿದ ರಾಜ್ಯಗಳ ಚುನಾವಣಾ ಫಲ ಅನೇಕ ಸಂಗತಿಗಳನ್ನು ಸೂಚಿಸುತ್ತಿವೆ. ಇವನ್ನು ಎಚ್ಚರಿಕೆಯಿಂದ ಗಮನಿಸುವುದು ಅತ್ಯಗತ್ಯ.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮೂಲಭೂತವಾದವನ್ನು, ಸರ್ವಾಧಿಕಾರವನ್ನು ಪ್ರತಿಪಾದಿಸುತ್ತಲೇ ಏಳೆಂಟು ವರ್ಷಗಳ ಕಾಲ ಆಡಳಿತ ನಡೆಸಿತು. ಕೆಲವು ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಅದನ್ನು ʼಡಬಲ್‌ ಎಂಜಿನ್‌ʼ ಸರ್ಕಾರ ಎಂದು ಕರೆದು ಹೆಮ್ಮೆಪಡಲಾಯಿತೇ ಹೊರತು, ಆಡಳಿತದಲ್ಲಿ ಮಾತ್ರ ಬಿಜೆಪಿಯ ಗುಣಧರ್ಮ ಬದಲಾಗಲಿಲ್ಲ.

ಭಾರತೀಯರು ಈ ಅವಧಿಯಲ್ಲಿ ಅನುಭವಿಸಿದ ಸಂಕಷ್ಟ ಹಲವು ಮಗ್ಗಲುಗಳನ್ನು ಕಂಡಿದೆ. ಅಲ್ಪಸಂಖ್ಯಾತರ ಆತಂಕ ಇವತ್ತಿಗೂ ಕೊನೆಯಾಗಿಲ್ಲ. ಚುನಾವಣೆ ಮಾತ್ರವಲ್ಲ, ನಿತ್ಯದ ಬದುಕು, ನಾಳಿನ ಕನಸು ಎಲ್ಲವೂ ಅನಿಶ್ಚಿತ, ಆತಂಕ ಮತ್ತು ಯಾತನಾಮಯ. ಹಾಗೆಯೇ ಜನತಂತ್ರದ ಮೌಲ್ಯಗಳನ್ನು ಗೌರವಿಸುತ್ತ, ಸರ್ವಾಧಿಕಾರದ ವಿರದ್ಧ ಧ್ವನಿ ಎತ್ತಿದ ಜನತಂತ್ರ ಪ್ರೇಮಿಗಳ ಧ್ವನಿ ಬಲವನ್ನು ಪಡೆದುಕೊಳ್ಳಲೇ ಇಲ್ಲ. ಎಡ ಪಕ್ಷಗಳ ಚಿಂತನೆ ಮತ್ತು ರಾಜಕೀಯ ಕೇರಳವನ್ನು ಬಿಟ್ಟು ಹೊರಬರಲೇ ಇಲ್ಲ. ನಮ್ಮ ರೈತರು ಅನುಭವಿಸಿದ ನೋವಿಗೂ ಈ ಚುನಾವಣೆಯಲ್ಲಿ ಪರಿಹಾರ ಸಿಕ್ಕಲಿಲ್ಲ. ಖಾಸಗೀಕರಣ ಎಂಬ ಜನವಿರೋಧಿ ನಡೆ ಎಗ್ಗಿಲ್ಲದೆ ಮುಂದುವರಿದಿದೆ.

ಯಾಕೆ ಚುನಾವಣಾ ಫಲಿತಾಂಶ ಹೀಗಾಯಿತು? ಬಿಜೆಪಿ ನಡೆಸುತ್ತಿರುವ ಆಡಳಿತ, ಅದರ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಜನ ಒಪ್ಪಿದ್ದಾರೆಯೇ? ಅಥವಾ ಲೋಪದೋಷಗಳು ಬೇರೆಯೇ ಇವೆಯೇ?

ಪಂಜಾಬ್‌ ಮತದಾರರು ಮಾತ್ರ ವಿವೇಚನೆಯಿಂದ ತಮ್ಮ ಮತಗಳನ್ನು ಹಾಕಿದ್ದಾರೆಯೇ? ಉಳಿದ ನಾಲ್ಕು ರಾಜ್ಯಗಳ ಮತದಾರರ ವಿವೇಚನಾ ಶಕ್ತಿ ಕುಗ್ಗಿದೆಯೇ? ಇಂಥ ಪ್ರಶ್ನೆಗಳು ಎದುರಾಗುವುದು ಸಹಜ.

ಇಂಥ ಸರಳ ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕಿಂತ ಮೊದಲು  ಬಿಜೆಪಿಗೆ ಪರ್ಯಾಯವಾಗಿ ಕಣದಲ್ಲಿ ಎದುರಾಳಿಯಾಗಿ ನಿಂತ ರಾಜಕೀಯ ಪಕ್ಷಗಳು, ಅವುಗಳ ನಿಲುವು ನಿಷ್ಠೆಗಳು, ಪ್ರಣಾಳಿಕೆಗಳು, ಚುನಾವಣಾ ಚದುರಂಗದಾಟದಲ್ಲಿ ಅವು ನಡೆಸಿದ ಆಟ ಇವುಗಳನ್ನು ಗಂಭೀರವಾಗಿ ನೋಡಬೇಕಾಗಿದೆ.

ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ದೊಡ್ಡ ಎದುರಾಳಿಯೇ ಹೌದು. ಆದರೆ ಅದು ಹಿಂದಿನ ತನ್ನ ಅಧಿಕಾರಾವಧಿಯಲ್ಲಿ ನಡೆಸಿದ ದಬ್ಬಾಳಿಕೆ ಇನ್ನೂ ಅದನ್ನು ಭೂತದಂತೆಯೇ ಕಾಡುತ್ತಿರುವುದನ್ನು ಈ ಚುನಾವಣಾ ಫಲಿತಾಂಶ ತೋರಿಸಿದೆ. (ಯೋಗಿ ಆಡಳಿತದಲ್ಲಿದ್ದ ದಬ್ಬಾಳಿಕೆ ಕಡಿಮೆಯದೇನೂ ಆಗಿರಲಿಲ್ಲ) ಜೊತೆಗೆ ಇನ್ನುಳಿದ ಬಿಜೆಪಿ ವಿರೋಧೀ ಪಕ್ಷಗಳನ್ನು ಗಣನೆಗೇ ತೆಗೆದುಕೊಳ್ಳದೆ ಸಮಾಜವಾದಿ ಪಕ್ಷ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಿದ್ದು ಕೂಡಾ ತಪ್ಪು ನಡೆಯೇ. ಎಲ್ಲ ವಿರೋಧ ಪಕ್ಷಗಳೂ ಒಂದಾಗಿ ಬಿಜೆಪಿಯನ್ನು ಎದುರಿಸಬೇಕಾಗಿತ್ತು. ಅಲ್ಲಿ ಸಮಾಜವಾದಿ ಪಕ್ಷ ಎಡವಿರುವುದು ಕಾಣಿಸುತ್ತದೆ. ಬಿಎಸ್‌ಪಿ ಕೂಡಾ ಬಿಜೆಪಿಯ ಅಪಾಯವನ್ನು ಅರಿಯಲಿಲ್ಲ. ಏಕಾಂಗಿಯಾಗಿ ಸೆಣಸಲು ಅದಕ್ಕೆ ಉತ್ತರ ಪ್ರದೇಶದಲ್ಲಿ ಬಲವೂ ಇಲ್ಲ. ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಮಹಿಳೆಯರನ್ನು , ಅವರ ಶಕ್ತಿಯನ್ನು ಮುಂದುಮಾಡಿದ್ದು ಬಹಳ ಉತ್ತಮ ನಡೆ. ಆದರೆ ಅದೊಂದೇ ಚುನಾವಣೆಯ ಗೆಲುವಿಗೆ ಸಾಕಾಗಲಿಲ್ಲ. ಕಾಂಗ್ರೆಸ್‌ ಪಕ್ಷ ಅಲ್ಲಿ ತನ್ನ ಬಲವನ್ನು ಒಗ್ಗೂಡಿಸುವಂಥ ಪ್ರಯತ್ನವನ್ನೇ ಮಾಡಲಿಲ್ಲ.

ಇವತ್ತು ನಮ್ಮ ರಾಜಕೀಯ ಪಕ್ಷಗಳು ಹೇಗಿವೆ ಎಂದರೆ ಯಾರು ಯಾವ ಪಕ್ಷಕ್ಕೆ ಬೇಕಾದರೂ ಪಕ್ಷಾಂತರ ಮಾಡಬಹುದು. ಪಕ್ಷದ ಪ್ರಣಾಳಿಕೆ, ತತ್ವ,ನಿಷ್ಠೆ, ಕಾರ್ಯಕ್ರಮ ಯಾವುದೂ ನಮ್ಮ ರಾಜಕಾರಣಿಗಳಿಗೆ ಮುಖ್ಯವಾಗುವುದಿಲ್ಲ. ಟಿಕೆಟ್‌ ಸಿಕ್ಕರೆ ಸರಿ, ಇಲ್ಲದಿದ್ದರೆ ಇನ್ನೊಂದು ಪಕ್ಷಕ್ಕೆ ಹಾರಿ ಅಲ್ಲಿ ಚುನಾವಣೆಯ ಹುರಿಯಾಳು ಆಗುತ್ತಾರೆ. ಹಾಗೆಯೇ ಪಕ್ಷಗಳೂ ಬಂದವರನ್ನು ತೋಳುಚಾಚಿ ಕರೆದುಕೊಳ್ಳುತ್ತವೆ. ಈ ಅಭ್ಯರ್ಥಿ ಯಾರು, ಎಲ್ಲಿಂದ ಬರುತ್ತಿದ್ದಾನೆ, ಇವನ ಸಿದ್ಧಾಂತ ಏನು ಇತ್ಯಾದಿ ಪ್ರಶ್ನೆಗಳನ್ನೇ ಕೇಳುವುದಿಲ್ಲ. ಗೋವಾದಲ್ಲಿ ಕಾಂಗ್ರೆಸ್‌ ತೊರೆದವರು ತೃಣಮೂಲ ಕಾಂಗ್ರೆಸ್‌ನಲ್ಲಿ ಅಥವಾ ಬಿಜೆಪಿಯಲ್ಲಿ ಜಾಗ ಕಂಡುಕೊಂಡರು. ಉತ್ತರಾಖಂಡ ಮತ್ತು ಮಣಿಪುರಗಳ ರಾಜಕೀಯವನ್ನು ಗಮನಿಸಿದರೂ ಈ ಅಂಶ ನಿಚ್ಚಳವಾಗಿ ಕಾಣುತ್ತದೆ. ಗೆಲ್ಲುವ ಅಭ್ಯರ್ಥಿ ಎನಿಸಿದರೆ ಸಾಕು  ಯಾವ ಪಕ್ಷವೂ ಅಂಥವರನ್ನು ಕರೆದುಕೊಳ್ಳುತ್ತದೆ. ಗೋವಾದಲ್ಲಿ ಪಕ್ಷಾಂತರಿಗಳನ್ನು ತಡೆಯುವುದೇ ಕಾಂಗ್ರೆಸ್ಸಿಗೆ ದೊಡ್ಡ ಸವಾಲಾದದ್ದು, ಅಂಥವರನ್ನು ತಡೆಯುವುದಕ್ಕಾಗಿಯೇ ಪ್ರಮಾಣ ವಚನ ತೆಗೆದುಕೊಳ್ಳುವಂತೆ ಮಾಡಿದ್ದು- ಇದೆಲ್ಲ ಯಾವ ಬಗೆಯ ರಾಜಕಾರಣ?

ದೆಹಲಿಯ ಆಪ್‌ ಪಂಜಾಬ್‌ಗೆ ಬಂದಿದೆ. ದೆಹಲಿಯ ಅದರ ಕಾರ್ಯಕ್ರಮಗಳನ್ನು ಪಂಜಾಬಿನ ಮತದಾರರು ಗಮನಿಸಿದ್ದಾರೆ. ಅದಕ್ಕೇ ಆ ಪಕ್ಷಕ್ಕೆ ಗೆಲುವು ಸಿಕ್ಕಿದೆ ಎಂದು ಹೇಳುವುದು ಸರಳವಾಗುತ್ತದೆ. ಅಲ್ಲಿ ಕಾಂಗ್ರೆಸ್‌ನ ಒಳಜಗಳವನ್ನು ಎತ್ತಿ ತೋರಿಸಲು ಯಾವ ಕನ್ನಡಿಯೂ ಬೇಕಾಗಿರಲಿಲ್ಲ. ಚೆನ್ನಿಯ ವಿರುದ್ಧ ಸಿದ್ದು ನಡೆಸುತ್ತಿದ್ದ ಪ್ರಚಾರವನ್ನು ಪಂಜಾಬ್‌ ಮತದಾರರು  ಹಗಲು ರಾತ್ರಿ ನೋಡುತ್ತಿದ್ದರು. ಕಾಂಗ್ರೆಸ್‌ ನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಕ್ಯಾಪ್ಟನ್‌ ಅಮರಿಂದರ್‌ ಸಿಂಗರನ್ನೂ ಜನ ನೋಡಿದ್ದರು. ಅಕಾಲಿದಳದ ಆಡಳಿತವನ್ನೂ ಅವರು ನೋಡಿದ್ದರು.  ಬಿಜೆಪಿ ಅಲ್ಲಿ ಬೋರ್ಡಿಗೇ ಇರಲಿಲ್ಲ.

ರೈತರು ಒಂದು ವರ್ಷಕ್ಕೂ ಮಿಕ್ಕಿ ದೆಹಲಿಯ ಗಡಿಯಲ್ಲಿ ನಡೆಸಿದ ಚಳವಳಿ ಈ ಚುನಾವಣೆಯಲ್ಲಿ ಯಾವ ಪರಿಣಾಮವನ್ನೂ ಬೀರಲಿಲ್ಲವೇ? ಚುನಾವಣೆಯ ಸಂದರ್ಭದಲ್ಲಿ ರೈತ ಮುಖಂಡರು ಸ್ಪಷ್ಟ ನಿಲುವನ್ನು ತಳೆಯದೆ ಮೌನವಾಗಿದ್ದುದು ಯಾಕೆ?

ಇದನ್ನೆಲ್ಲ ಗಮನಿಸಿದಾಗ ಭಾರತೀಯ ಮತದಾರರಿಗೆ ಪರ್ಯಾಯಗಳ ಕೊರತೆಯೇ ಎದ್ದು ಕಾಣುತ್ತದೆ. ಐದು ರಾಜ್ಯಗಳ ಚುನಾವಣೆಯನ್ನು ಮುಂದಿನ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಭಾವಿಸಲಾಗಿದೆ.

ಫೈನಲ್‌ ಚುನಾವಣೆಯಲ್ಲೂ ಪರಿಸ್ಥಿತಿ ಬದಲಾಗದಿದ್ದರೆ, ನಮ್ಮ ರಾಜಕೀಯ ಪಕ್ಷಗಳು (ಬಿಜೆಪಿ ವಿರೋಧಿ ಪಕ್ಷಗಳು) ಹೇಳ ಹೆಸರಿಲ್ಲದಾಗುತ್ತವೆ; ಸರ್ವಾಧಿಕಾರ ಇನ್ನಷ್ಟು ಕಾಲ ಮೆರೆಯುತ್ತದೆ. ದೇಶ ಇನ್ನೂ ಪ್ರಪಾತಕ್ಕೆ ಬೀಳುತ್ತದೆ. ಮೂಲಭೂತವಾದಿಗಳ ಸ್ವೇಚ್ಛಾ ನಡೆ, ಸರ್ವಾಧಿಕಾರದ ನರ್ತನ, ವಿರೋಧ ಪಕ್ಷಗಳೇ ನಾಶವಾಗುವಂಥ ರಾಜಕೀಯ ನಡೆ, ಪ್ರಜಾಪ್ರಭುತ್ವ ಎಂಬುದು ಕೇವಲ ಹೆಸರಿಗೆ ಉಳಿದುಕೊಳ್ಳುವ ಸಾಧ್ಯತೆ-ಇವೆಲ್ಲವನ್ನೂ ಭಾರತೀಯ ಮತದಾರರು ಅನುಭವಿಸಬೇಕಾಗುತ್ತದೆ.

ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಹುದೊಡ್ಡ ಸತ್ಯವನ್ನು  ತೆರೆದು ತೋರಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ಎಲ್ಲರೂ ಗಂಭೀರವಾಗಿ ಚಿಂತಿಸಲು, ಆತ್ಮಶೋಧ ಮಾಡಿಕೊಳ್ಳಲು ಇದು ದೊಡ್ಡ ಅವಕಾಶವನ್ನು ಕಲ್ಪಿಸಿದೆ.

‍ಲೇಖಕರು Admin

March 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. M. A. Sriranga

    2019ರಲ್ಲಿ ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ಸೇರಿ ಮಹಾ ಘಟಬಂಧನ ಮಾಡಿ ಕೊಂಡಿದ್ದರಲ್ಲ ಅದು ಏಕೆ ವಿಫಲವಾಯ್ತು? ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ಚುನಾವಣಾ ಪ್ರಚಾರಕ್ಕೆ ಹೊರಡುವ ಮುನ್ನ ಒಮ್ಮತದಿಂದ ತಮ್ಮ ಪ್ರಧಾನ ಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಲಿ. ಕೊನೆಯ ಪಕ್ಷ ಅವರ ವೈಯಕ್ತಿಕ ವರ್ಚಸ್ಸಿನ ಬಲದಿಂದ ಅಧಿಕಾರಕ್ಕೆ ಬಂದರೂ ಬರಬಹುದು. ಅವರು ಅದನ್ನಾದರೂ ಮಾಡಲು ಸಿದ್ಧರಾಗಿದ್ದಾರೆಯೆ? ಇಂದು ರಾಜಕಾರಣ 24×7 ಮಾದರಿಯ ಕೆಲಸ. ವೀಕೆಂಡ್ ಪಾರ್ಟಿ ತರಹದ ರಾಜಕೀಯದಿಂದ ಗೆಲುವು ಬರುವುದಿಲ್ಲ. 2024ರ ತನಕ ಕಾಯುವುದೇಕೆ? 2023ಕ್ಕೆ ಕರ್ನಾಟಕ ವಿಧಾನ ಸಭಾ ಚುನಾವಣೆ ಇದೆಯಲ್ಲ? ಮೊದಲ ಪ್ರಯತ್ನ ಇಲ್ಲೇ ಆಗಲಿ.

    ಪ್ರತಿಕ್ರಿಯೆ
  2. ಚಂದ್ರಪ್ರಭ ಕಠಾರಿ

    ಲೇಖನ ಅರ್ಥಪೂರ್ಣವಾಗಿದೆ. ಸಕಾಲಿಕವಾಗಿದೆ. ಜಿಪಿ ಬಸವರಾಜು ಅವರಿಗೆ ಮತ್ತು ಲೇಖನ ಪ್ರಕಟಿಸಿದ ಅವಧಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  3. M A Sriranga

    ಸಾಮಾನ್ಯ ಜನರ ವಿವೇಚನೆಯನ್ನೇ ಅವಮಾನಿಸುವ, ಅನುಮಾನಿಸುವ ಮತ್ತು ಪ್ರಶ್ನಿಸುವ ಇಂತಹ ಲೇಖನದಿಂದ ಏನು ಪ್ರಯೋಜನ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: