ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣ : ಕರ್ನಾಟಕದ ಹಸಿರು ಮತ್ತು ನಾದ ವಲಯ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

1

ರುದ್ರಪಟ್ಣ – ಕರ್ನಾಟಕದ ಹಸಿರು ಮತ್ತು ನಾದ ವಲಯ

ಇದು ಕಾವೇರಿಯ ನಾಡು. ನದಿ ಪಚ್ಚೆ ಹಸುರಿನ ದಡಗಳ ಮೇಲೆ ಅಲೆಗಳನ್ನು ಚಿಮ್ಮುತ್ತ, ನಿರಂತರವಾಗಿ, ಮಧುರ ಲಯದೊಂದಿಗೆ ಹರಿಯುತ್ತಿದೆ. ಸುತ್ತಲಿನ ಹಸಿರು ವಲಯ ಪಕ್ಷಿಗಳ ಚಿಲಿಪಿಲಿಯಿಂದ ಅನುರಣಿಸುತ್ತಿದೆ, ಪುಷ್ಪ ಸಂಪತ್ತು ವಿಹಗಗಳ ಅರಮನೆಗಳಾಗಿವೆ, ಪರಿಸರದಲ್ಲಿ ಸಂಗೀತ ಮಿಡಿಯುತ್ತಿರುವುದು ಅನಕ್ಷರಸ್ಥರಿಗೆ ಮತ್ತು ಅದೀಕ್ಷಿತರಿಗೂ ಅನುಭವಕ್ಕೆ ಬರುತ್ತದೆ.

ಅಸಂಖ್ಯ ರೀತಿಗಳಲ್ಲಿ ನಾದವನ್ನು ಪಾಲಿಸಿ, ಪೋಷಿಸಿ, ಪ್ರಸಾರ ಮಾಡಲೆಂದೇ ಈ ಗ್ರಾಮ ಸೃಷ್ಟಿಯಾಗಿದೆಯೋ ಎಂಬಂತೆ ಇಲ್ಲಿನ ಪ್ರತಿಭಾನ್ವಿತ ನಿವಾಸಿಗಳು ಕೇವಲ ವಿದ್ವಾಂಸರಾಗಿ ಅಲ್ಲ, ಮುಂದಿನ ಅಗಣಿತ ಪೀಳಿಗೆಗಳಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪಿಟೀಲು ವಿದ್ವಾಂಸರಾಗಿದ್ದ ಆರ್.ಕೆ.ವೆಂಕಟರಾಮಾಶಾಸ್ತ್ರಿಗಳು ಗಾಯಕ ಟೈಗರ್ ವರದಾಚಾರ್ಯರನ್ನು ಸುಮಾರು 1900ರ ಆದಿಭಾಗದಲ್ಲಿ ರುದ್ರಪಟ್ಣಕ್ಕೆ ಕರೆತಂದರು. ಇಲ್ಲಿದ್ದ ಸಂಗೀತಮಯ ಪರಿಸರವನ್ನು ಕಂಡ ವರದಾಚಾರ್ಯರು ಉದ್ಗರಿಸಿದರು- “ತಮಿಳುನಾಡಿಗೆ ತಂಜಾವೂರು ಹೇಗೋ ಕನ್ನಡನಾಡಿಗೆ ರುದ್ರಪಟ್ಣ ಹಾಗೆ” ಎಂದು.

ನಮ್ಮ ಕಾರು ಮೈಸೂರು-ಹಾಸನದ ಹೆದ್ದಾರಿಯನ್ನು ದಾಟಿ ಗ್ರಾಮೀಣ ಶೈಲಿಯ ಸಿಂಗಾರದಿಂದ ಅಲಂಕೃತವಾದ ಅತ್ಯಂತ ಸಾಮಾನ್ಯವಾದ ಹಳ್ಳಿಯ ಹಾದಿಗೆ ತಿರುಗಿದಾಗ, ‘ಸಂಗೀತ ಗ್ರಾಮಕ್ಕೆ ದಾರಿ’ ಎಂದು ಸುದ್ದಿ ಕೊಡುತ್ತದೆ ಒಂದು ಫಲಕ. ಈ ಫಲಕ ವಿಶಿಷ್ಟವೂ ಅಪರೂಪದ್ದೂ ಆಗಿದೆ ಎನಿಸಿತು. ಏಕೆಂದರೆ, ಸಂಗೀತದೊಡನೆ ನಂಟು ಎಷ್ಟೇ ನಿಬಿಡವಾದುದಾಗಿರಲಿ, ಭಾರತದಲ್ಲಿ ಯಾವುದೇ ಸ್ಥಳವನ್ನೂ ಫಲಕದ ಮೂಲಕ ‘ಸಂಗೀತ ಗ್ರಾಮ’ ಎಂದು ಘೋಷಿಸಿರುವ ಕುರಿತು ನಾವೆಲ್ಲೂ ಕೇಳಿಲ್ಲ. ಆದರೆ ರುದ್ರಪಟ್ಣದ ಆತ್ಮಕ್ಕೆ ಸಂಗೀತ ಸ್ವಭಾವಸಹಜವಾಗಿಯೂ ಅಂತದ್ರ್ರವ್ಯವಾಗಿಯೂ ಇರುವುದರಿಂದ ಈ ಹೆಸರಿನಿಂದ ನಮಗೆ ಆಶ್ಚರ್ಯವೇನೂ ಆಗುವುದಿಲ್ಲ. ಬದಲಿಗೆ ಇದು ರುದ್ರಪಟ್ಣ ಸಂಪಾದಿಸಿರುವ ಗೌರವ. ಇಲ್ಲಿಗೆ ಸಮೀಪದಲ್ಲಿರುವ ಮೈಸೂರು, ಹಾಸನ ಮತ್ತು ಚಿಕ್ಕಮಗಳೂರುಗಳಲ್ಲಿನ ಹಿರಿಯ ವಿದ್ವಾಂಸರು ರುದ್ರಪಟ್ಣವನ್ನು ‘ಸಂಗೀತ ಗ್ರಾಮ’ ಎಂದೇ ಕರೆಯುತ್ತಿದ್ದರು ಎನ್ನಲಾಗುತ್ತದೆ. 

ಮೈಸೂರಿನ ಅರಸು ಮನೆತನದ ಕಲಾ ಪೋಷಕರು ಆಸ್ಥಾನ ವಿದ್ವಾಂಸರನ್ನು ಮತ್ತು ಅರಮನೆಯಲ್ಲಿ ಕಛೇರಿ ನೀಡುವ ಸಂಗೀತಗಾರರನ್ನು ಆಯ್ಕೆ ಮಾಡುವಾಗ, ರುದ್ರಪಟ್ಣದ ವಿದ್ವಾಂಸರಿಂದ ‘ಭಲೇ’ ಎನಿಸಿಕೊಂಡಿದ್ದ ಸಂಗೀತಗಾರರನ್ನು ಆದ್ಯತೆಯ ಮೇರೆಗೆ ಪರಿಗಣಿಸುತ್ತಿದ್ದರು ಎನ್ನುವ ವಿಷಯವನ್ನು ಹಲವು ಹಿರಿಯ ಸಂಗೀತಗಾರರು ಮತ್ತು ಸಂಗೀತ ಶಾಸ್ತ್ರಜ್ಞರು ಪ್ರಮಾಣೀಕರಿಸುತ್ತಾರೆ.

ರುದ್ರಪಟ್ಣದಲ್ಲಿ ವಿದ್ವತ್ತಿನ ಮತ್ತು ಸಂಗೀತದ ಗುಣಮಟ್ಟ ಎಷ್ಟು ಉನ್ನತವಾದುದಾಗಿತ್ತು ಎಂದರೆ, ಇಲ್ಲಿನ ವಿದ್ವಾಂಸರ ಅನುಮೋದನೆ ಪಡೆಯುವುದು ಸುಲಭದ ಮಾತಾಗಿರಲಿಲ್ಲ! ಆದ್ದರಿಂದ ದಾರಿಯಲ್ಲಿ ಕಂಡ ಫಲಕ ಈ ಗ್ರಾಮ ಸಂಗೀತಕ್ಕೆ ಎಷ್ಟು ಹತ್ತಿರವಾಗಿದೆ ಎನ್ನುವುದನ್ನು ಸಾರಿ ಹೇಳುವುದು ಸರಿಯಾಗಿಯೇ ಇದೆ!  ಮುಂದಿನ ತಲೆಮಾರುಗಳಿಗೆ ರುದ್ರಪಟ್ಣದ ಇತಿಹಾಸದ ಕುರಿತು ಮಾಹಿತಿ ನೀಡುವ ಉದ್ದೇಶದಿಂದ 1980ರಲ್ಲಿ ನೆಟ್ಟ ‘ಸಂಗೀತ ಗ್ರಾಮಕ್ಕೆ ದಾರಿ’ ಎಂಬ ಬರಹವನ್ನು ಹೊತ್ತ ಫಲಕ, ಆ ಇತಿಹಾಸದ ಕುರಿತು ಗೌರವ ಮೂಡಿಸಿ, ಸದಾ ಸ್ಮರಣೆಯಲ್ಲಿರಿಸುತ್ತದೆ. 

ಹಲವು ದಶಕಗಳವರೆಗೆ ಈ ಗ್ರಾಮ ಮತ್ತು ಇಲ್ಲಿನ ಜನಸಮುದಾಯ ಬಹುಮಟ್ಟಿಗೆ ಮರೆವಿನ ತೆರೆಯೊಳಗೆ ಉಳಿದುದರಿಂದ ಇಲ್ಲಿನ ಬಹುಮಂದಿ ಸುಶಿಕ್ಷಿತ ವ್ಯಕ್ತಿಗಳು.

1930ರ ದಶಕದಲ್ಲಿ ರುದ್ರಪಟ್ಣದ ಶಾಂತಿಯುತ ಜೀವನವನ್ನು ಕದಡಿದ ಪ್ಲೇಗ್ ರೋಗದ ಭೀಕರ  ಹಾವಳಿಗೆ ತುತ್ತಾದರು. ಇಲ್ಲಿ ಮತ್ತೆ ‘ಸಂಗೀತದ ಸುವರ್ಣ ಯುಗ’ದ ಕುರಿತ ನೆನಪುಗಳು ಮರುಕಳಿಸುವಂತೆ ಮಾಡಲು ಗ್ರಾಮವನ್ನು ಜೀರ್ಣೋದ್ಧಾರ ಮಾಡಿ ಪುನಸ್ಸಂಸ್ಥಾಪಿಸಬೇಕಾಯಿತು. ಆಹಾರ ಮತ್ತು ಉದ್ಯೋಗಗಳನ್ನು ಅರಸುತ್ತ ಸಾವಿರಾರು ಜನ ಈ ಗ್ರಾಮವನ್ನು ತೊರೆದಿದ್ದರು. ಹೀಗೆ ಪ್ಲೇಗ್‍ನಿಂದಾದ ವಿನಾಶ ಈ ಪ್ರದೇಶವನ್ನು ಕೆಲವು ದಶಕಗಳ ಕಾಲ ಮೌನದಲ್ಲಿ ಮುಳುಗಿಸಿದುದು ಮಾತ್ರವಲ್ಲ, ಇಲ್ಲಿ ತಾಳೆಗರಿಯಲ್ಲಿ ದಾಖಲಿಸಿದ್ದ ಶಾಸ್ತ್ರಗ್ರಂಥಗಳು ಕಳೆದುಹೋಗುವಂತೆ ಮಾಡಿತು. ಈಗ ತಮಿಳುನಾಡಿನ ತಿರುವಯ್ಯಾರಿನಲ್ಲಿ ಸಂತ ತ್ಯಾಗರಾಜರಿಗೆ ಶ್ರದ್ಧಾಸಮರ್ಪಣೆ ಮಾಡಲೋಸುಗ ವಿದ್ವಾಂಸರು ಕಲೆಯುವಂತೆಯೇ ಪುನಶ್ಚೇತನಗೊಂಡ ರುದ್ರಪಟ್ಣದಲ್ಲೂ ಸಂತ ವಾಗ್ಗೇಯಕಾರರ ಗೌರವಾರ್ಥ ನಡೆಯುವ ವಾರ್ಷಿಕ ಸಂಗೀತೋತ್ಸವದಲ್ಲಿ ಸಂಗೀತಗಾರರು ಸೇರಿ ಗೋಷ್ಠಿಗಾಯನವನ್ನು ಹಾಗೂ ವ್ಯಕ್ತಿಗತವಾದ ಕಛೇರಿಗಳನ್ನು ನಡೆಸಿಕೊಡುತ್ತಾರೆ. 

ಇತರ ಹಳ್ಳಿಗಳಂತೆ ರುದ್ರಪಟ್ಣ ಗ್ರಾಮವನ್ನು ಪ್ರವೇಶಿಸುವವರನ್ನೂ ದೊಡ್ಡ ಆಲದಮರವೊಂದು ಸ್ವಾಗತಿಸುತ್ತದೆ ಮತ್ತು ಆ ಫಲಕ ಎಷ್ಟೇ ಸಾಧಾರಣ ಎನಿಸಿದರೂ ಗ್ರಾಮದ ‘ಹೆಸರು ಹಾಗೂ ಹೆಮ್ಮೆ’ಯನ್ನು ಬೆಳಗುತ್ತಿರುವಂತೆ ಭಾಸವಾಗುತ್ತದೆ. ಕರ್ನಾಟಕದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದಕ್ಷಿಣದ ತುದಿಯಲ್ಲಿರುವ ಈ ಗ್ರಾಮ, ಕಾವೇರೀ ನದೀತೀರದಲ್ಲಿರುವ ಸುತ್ತಮುತ್ತಲಿನ 14 ಹಳ್ಳಿಗಳಲ್ಲಿ ಬಹಳ ಪ್ರಮುಖವೂ ಚಟುವಟಿಕೆಯ ಸ್ಥಾನವೂ ಆಗಿದೆ.

ತುರುಗಳ ಮಂದೆ, ಬೆರಣಿ ತಟ್ಟುವವರು, ಸೈಕಲ್ ರಿಪೇರಿ ಮಾಡುವವರು, ಕಾರ್ಯನಿರತ ಕ್ಷೌರಿಕರು, ವಿಶಾಲವಾದ ಭತ್ತದ ಗದ್ದೆಗಳು, ತೆಂಗು ಅಡಿಕೆಯ ತೋಟಗಳು, ಶುಂಠಿ, ಅರಿಶಿನ ಮತ್ತು ರಾಗಿ ಹೊಲಗಳು, ಕೆರೆತೊರೆಗಳು ಮತ್ತು ಹಳ್ಳಿಯ ಪೂರ್ವ ದಿಕ್ಕಿನಲ್ಲಿ ಉತ್ಸಾಹದಿಂದುಕ್ಕುವ ಕಾವೇರಿ ನದಿಯನ್ನು ತಲುಪಲು ಇರುವ ಹಚ್ಚಹಸಿರಾದ ಕಿರುದಾರಿಗಳು ಇವೆಲ್ಲವನ್ನೂ ಹಾದುಹೋಗುವಾಗ ಇಡೀ ಗ್ರಾಮ ನಿಸರ್ಗದೊಂದಿಗೆ ಸಂಪೂರ್ಣ ಸಾಮರಸ್ಯದಿಂದಿರುವುದು ಕಂಡುಬರುತ್ತದೆ. “ಈ ಪುಣ್ಯನದಿ ಧರ್ಮಜಾತಿಗಳ, ಬಡವಬಲ್ಲಿದರ, ಶಿಕ್ಷಿತ-ಅಶಿಕ್ಷಿತರ ನಡುವಿನ ಗಡಿಗೆರೆಗಳನ್ನು ಅಳಿಸಿ ಹರಿಯುತ್ತದೆ. ಬಾಳಿಗೆ ಸಂಜೀವಿನಿಯಂತಿರುವ ಈ ನದಿಯ ಶಾಂತ ಮತ್ತು ಅಕ್ಷುಬ್ಧವಾದ ಹರಿವು ಎಂದೆಂದಿಗೂ ಸಾಮರಸ್ಯವನ್ನು ನಿರ್ವಹಿಸಬಲ್ಲ ಶಕ್ತಿಯ ಪ್ರತೀಕವಾಗಿದೆ” ಎನ್ನುತ್ತಾರೆ ನದೀತೀರದಲ್ಲಿರುವ ದೇವಾಲಯದ ವೇದವಿದ್ವಾಂಸರು.

ರುದ್ರಪಟ್ಣ ಕಾವೇರಿಯ ಬಲದಂಡೆಯ ಮೇಲ್ಭಾಗದಲ್ಲಿದೆ. ಇಲ್ಲಿ ನದಿಗೆ ‘ಮರುದ್ವತೀ’ ಎಂಬ ಹೆಸರಿದೆ. ನದಿಯ ಮೇಲೆ ಹಾದುಬರುವ ಗಾಳಿಯ ಮೊರೆತ ನದಿಯಲ್ಲಿ ಉಕ್ಕೇರುವ ತೆರೆಗಳನ್ನು ಹುಟ್ಟುಹಾಕುವುದರಿಂದ ನದಿಗೆ ಈ ಹೆಸರು ಬಂದಿತು ಎಂದು ಗ್ರಾಮದ ವೇದಪಂಡಿತರು ವಿವರಿಸುತ್ತಾರೆ. ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಚಿಮ್ಮುತ್ತ ಬಂದು ರುದ್ರಪಟ್ಣದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಕಾವೇರಿ ಬುದ್ಬುದಗಳಿಂದ ಕೂಡಿ ನೊರೆನೊರೆಯಾಗಿ ಕಂಡರೂ ಉದ್ವೇಗವಿಲ್ಲದೆ ಸಂಗೀತಮಯವಾಗಿ ಪ್ರವಹಿಸುತ್ತಾಳೆ.

ಈ ಪವಿತ್ರ ನದೀತಟದಲ್ಲಿ ಬೀಸಿಬರುವ ತಂಗಾಳಿಯನ್ನು ಮತ್ತು ಜುಳುಜುಳು ಹರಿಯುವ ನದಿಯ ಮಧುರ ನಾದವನ್ನು ಅನುಭವಿಸುತ್ತ ಕುಳಿತವರಿಗೆ ತೆರೆಗಳು ಗುಳುಗುಳಿಸುತ್ತ ಕಲ್ಲುಬಂಡೆಗಳಿಗೆ ಅಪ್ಪಳಿಸುವ ಸದ್ದು ನಾದದೊಂದಿಗೆ ಲಯವನ್ನು ಬೆಸೆಯುತ್ತಿರುವಂತೆ ಭಾಸವಾಗುತ್ತದೆ. ಆ ಎರಡು ದೊಡ್ಡ ಗಾತ್ರದ ಕಲ್ಲುಗಳು – ಚಿಕ್ಕ ನಂದಿಕಲ್ಲು ಮತ್ತು ದೊಡ್ಡ ನಂದಿಕಲ್ಲುಗಳು ಮಳೆಯನ್ನು ಹಾಗೂ ನೀರಿನ ಹರಿವನ್ನು ಅಳೆಯಲು ಎಂದಿನಿಂದ ಅಲ್ಲಿವೆ ಎಂದು ವಿವರಿಸುತ್ತಾರೆ ಮಂಜುನಾಥ್. ನದಿಯ ಸುತ್ತಮುತ್ತಲ ಹಳ್ಳಿಗರೆಲ್ಲರಿಗೂ ಸ್ನಾನಕ್ಕೆ ಅವಕಾಶ ನೀಡಿರುವುದರಿಂದ ರುದ್ರಪಟ್ಣದ ಕಡೆಯ ತೀರದಲ್ಲಿರುವ ಸುಮಾರು ಐವತ್ತು ಕಲ್ಲುಗಳಿಗೆ, ಅಲ್ಲಿ ನಿಯಮಿತವಾಗಿ ಪುಣ್ಯಸ್ನಾನಕ್ಕಿಳಿಯುತ್ತಿದ್ದ ಒಬ್ಬರಲ್ಲ ಒಬ್ಬ ವ್ಯಕ್ತಿಯ ಹೆಸರನ್ನು ಇರಿಸಲಾಗಿದೆ. 

ಚೆನ್ನಕೇಶವ ಮತ್ತು ಕಾಡುಮಲ್ಲೇಶ್ವರ ದೇವಸ್ಥಾನಗಳೆರಡೂ ಈ ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಅತ್ಯಂತ ಪುರಾತನ ದೇವಾಲಯಗಳು. ನದಿಯ ಪೂರ್ವ ತೀರದಲ್ಲಿನ ಪ್ರಸನ್ನ ರಾಮೇಶ್ವರ ದೇವಸ್ಥಾನಕ್ಕೆ ಅತಿ ಸನಿಹದಲ್ಲಿರುವ ಎತ್ತರದ ವೃಕ್ಷಗಳ ತೋಪೊಂದು ಈ ದೇವಾಲಯಕ್ಕೆ ರಮ್ಯ ಮತ್ತು ಗ್ರಾಮ್ಯ ಹಿನ್ನೆಲೆಯನ್ನು ಒದಗಿಸಿದೆ. ನದಿಯಲ್ಲಿ ವಿಪುಲವಾಗಿ ಕಂಡುಬರುವ ಕಪ್ಪು ಮತ್ತು ಕಂದು ಬಣ್ಣದ ಕಲ್ಲುಗಳು ಗ್ರಾಮದ ದರ್ಶನೀಯತೆಯನ್ನು ಹೆಚ್ಚಿಸಿವೆ. ಹೊಲಗದ್ದೆಗಳಲ್ಲಿರುವ ಹಸಿರಿನ ವಿವಿಧ ಛಾಯೆಗಳು ಪೋಸ್ಟ್‍ಕಾರ್ಡ್‍ನಲ್ಲಿ ಮುದ್ರಣಗೊಳ್ಳುವ ಗ್ರಾಮದ ಪ್ರತಿಕೃತಿಗಳಿಗೆ ಮನೋಹರವಾದ ಚಿತ್ರಗಳನ್ನು ಒದಗಿಸಿವೆ.

ರುದ್ರಪಟ್ಣದಲ್ಲಿ ಇತ್ತೀಚೆಗೆ 13,000 ಚದರಡಿಯ ನಿವೇಶನದ ಮೇಲೆ ನಿರ್ಮಾಣಗೊಂಡಿರುವ ಸಪ್ತಸ್ವರ ಧ್ಯಾನ ಮಂದಿರ ಬಹು ವೈವಿಧ್ಯವುಳ್ಳ ಹಸಿರಿನ ಪರಿಸರಕ್ಕೆ ಸದಭಿರುಚಿಯಿಂದ ತೆರೆದುಕೊಳ್ಳುತ್ತದೆ. 

ಈ ಧ್ಯಾನಮಂದಿರದ ಕಟ್ಟಡ ತಂಬೂರಿಯ ಆಕಾರದಲ್ಲಿ ನಿರ್ಮಾಣಗೊಂಡಿದ್ದು, ಸಪ್ತಸ್ವರಗಳನ್ನು ಪ್ರತಿನಿಧಿಸುವ ಸಪ್ತ ಗೋಪುರಗಳನ್ನು ಹೊಂದಿದೆ. ಕಟ್ಟಡದೊಳಗೆ ಸಂತ-ವಾಗ್ಗೇಯಕಾರರ ಪ್ರತಿಮೆಗಳಿವೆ.

2002ರಲ್ಲಿ ರುದ್ರಪಟ್ಣ ಸಂಗೀತೋತ್ಸವ ಸಮಿತಿ ರಚನೆಗೊಂಡಿದ್ದು, ಪ್ರತಿವರ್ಷ ಕರ್ನಾಟಕ ಸಂಗೀತದ ಸಂತ-ವಾಗ್ಗೇಯಕಾರರ ಸ್ಮರಣೆಯಲ್ಲಿ ನಡೆಯುವ ಉತ್ಸವಗಳಲ್ಲಿ ಮಾತ್ರವಲ್ಲ, ಇತರ ಸಂದರ್ಭಗಳಲ್ಲೂ ಎಲ್ಲಡೆಗಳಿಂದ ಸಂಗೀತಗಾರರನ್ನು ಆಕರ್ಷಿಸುತ್ತದೆ.

Pictures of Rudrapatnam Village 
by Rudrapatnam S. Ramakanth

ರುದ್ರಪಟ್ಣ ಅಸ್ತಿತ್ವಕ್ಕೆ ಬಂದದ್ದು ಯಾವಾಗ?

| ಮುಂದಿನ ವಾರ ಓದಿ.. |

‍ಲೇಖಕರು Admin

March 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಈ ನಾದಮಂಟಪದ ನಿರ್ಮಾಣಕ್ಕೆ ಶ್ರಮಿಸಿದವರು ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ಅವರು. ಅಂತೆಯೇ ದ್ವಾದಶ ಸ್ವರ ಸ್ಥಂಭಗಳ ಭವನವನ್ನೂ ನಿರ್ಮಿಸಿದ್ದಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: