ಪೌರಕಾರ್ಮಿಕರ ಬದುಕು ಹಸನಾಗುವುದು ಯಾವಾಗ?

ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್

ಸಾಮಾನ್ಯವಾಗಿ ತಿಂಗಳಲ್ಲಿ ಒಮ್ಮೆಯಾದರೂ ನಮ್ ಮನೆಗೆ ಪೌರಕಾರ್ಮಿಕರು ಬಂದು ಕೆ.ಟಿ.ಶಿವಪ್ರಸಾದ್ ಅವರನ್ನ ಮಾತನಾಡಿಸಿಕೊಂಡು ಹೋಗುವುದು ಅವರ ರೂಢಿ. ಅದರಂತೆ ನಿನ್ನೆ ಮನೆಗೆ ಬಂದ್ರು ನಾನು ಒಳಗೆ ಬನ್ನಿ ಹೇಗಿದ್ದಿರಾ… ಚೆನ್ನಾಗಿದ್ದೀರಾ… ಕೊರೊನಾ ಡ್ಯೂಟಿ ಹೇಗಿದೆ ಏನ್ ಸಮಾಚಾರ ಹೀಗೆ ಅವರ ಕುಶಲೋಪಚಾರ ವಿಚಾರಿಸುತ್ತಿದ್ದಂತೆ, ಅಯ್ಯೋರಿಲ್ಲವಮ್ಮ ಅಂದ್ರು ಯಾಕೆ ಅಂದೆ. ಸುಮ್ನೆ ಅವ್ರನಾ ಮಾತಾಡಿಸಿಕೊಂಡು ಹೋಗೋಣ ಅಂತ ಬಂದ್ವಿ ಅಂದ್ರು. ಹೌದಾ ಅಂತೇಳಿ ಅವರನ್ನ ಒಳಗೆ ಕುಳಿತುಕೊಳ್ಳಿ ಕರೆಯುತ್ತೇನೆಂದು ಹೇಳಿ ಕೆ.ಟಿ.ಶಿವಪ್ರಸಾದ್ ಅವರಿಗೆ ಪೌರಕಾರ್ಮಿಕರು ಬಂದಿರುವ ವಿಷಯ ಮುಟ್ಟಿಸಿದೆ. ಸ್ಟೂಡಿಯೋದಲ್ಲಿ ಬುಕ್ ಓದುತ್ತಿದ್ದ ಅವರು ಪೌರಕಾರ್ಮಿಕರ ದನಿ ಕೇಳುತ್ತಿದ್ದಂತೆ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಬಹಳ ಕೌತುಕದಿಂದ ಹೊರಗೆ ಬಂದ್ರು.

ಕೆ.ಟಿ.ಶಿವಪ್ರಸಾದ್‍ಗೂ ಪೌರಕಾರ್ಮಿಕರಿಗೂ ಒಡನಾಟ ಬಹಳ ಹಳೆಯದು ಪೌರಕಾರ್ಮಿಕರ ಮುಖನೋಡಿದ ತಕ್ಷಣ ಶಿವಪ್ರಸಾದ್ ನಸುನಗುತ್ತಾ ಏನ್ರಪ್ಪ ಸಮಾಚಾರ ಹೇಗಿದ್ದಿರಾ ಕುಳಿತುಕೊಳ್ಳಿ ಎಂದು ಹೇಳುತ್ತಾ ಅವರೆಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಾ ಆರೋಗ್ಯದ ಬಗ್ಗೆ ನೀವು ಕಾಳಜಿವಹಿಸಿ ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕು ಸಾಗಿಸಬೇಕಾಗಿದೆ ಎಂದು ಅವರಿಗೆ ಎಚ್ಚರಿಕೆಯನ್ನು ಹೇಳುತ್ತಾ ಅವರ ಕಷ್ಟಸುಖಗಳನ್ನು ಕೇಳುವಷ್ಟರಲ್ಲಿ ನಾನು ಅವರೆಲ್ಲರಿಗೂ ಕಾಫಿ ರೆಡಿ ಮಾಡಿಕೊಂಡು ಬಂದು ಕೊಟ್ಟು ನಾನು ಕೂಡ ಅವರೊಟ್ಟಿಗೆ ಕುಳಿತುಕೊಂಡು ಕಾಫಿ ಹೀರುತ್ತಲೇ ಅವರ ದುಃಖದುಮ್ಮಾನಗಳನ್ನು ಆಲಿಸಿದೆವು. ಪೌರಕಾರ್ಮಿಕರೊಬ್ಬರು ಹೀಗೆ ಮಾತನಾಡುತ್ತಾ ನಮ್‍ಗೇನಿಲ್ಲ ಸರ್ ಸರ್ಕಾರದವ್ವರು ನಮ್‍ಜನಕ್ಕೆಲ್ಲಾ ಇರೋಕೆ ಒಂದು ಮನೆ ಈಗ ಏನ್ ಗುತ್ತಿಗೆ ಆಧಾರದ ಮೇಲೆ ಕೆಲ್ಸ ಮಾಡ್ತಾ ಇದ್ದಾರಲ್ಲ ಅವ್ರಗೆಲ್ಲಾ ಕೆಲ್ಸವೊಂದು ಖಾಯಂ ಮಾಡಿದರೇ ನಮ್ಗೆ ಅಷ್ಟೇ ಸಾಕು ಈಗ ಬಂದಿರೋ ಕೊರೊನಾದಿಂದ ನಮಗೂ ಬೇಕಲ್ಲವಾ ಭದ್ರತೆ ಅಂದ್ರು.

ನಾನು ಹೌದಾ… ಯ್ಯಾಕೆ ನಿಮ್‍ಗಿನ್ನೂ ಮನೆಕೊಟ್ಟಿಲ್ಲವಾ ಅನ್ನುತ್ತಿದ್ದಂಗೆ ಅವರೆಲ್ಲಾ ಅಯ್ಯೋ… ಅಮ್ಮ ಅಯ್ಯೋರು ಜಯರಾಂಣ್ಣ ದಲಿತ ಸಂಘರ್ಷ ಸಮಿತಿಯವರ ಹೋರಾಟದ ಫಲವಾಗಿ ಒಂದಷ್ಟು ಜನಕ್ಕೆ ಮನೆ ಸಿಕ್ಕಿದೆ ಕಣ್ಣಮ್ಮ… ಆದರೆ ಇನ್ನೂ ಒಂದಷ್ಟು ಜನಕ್ಕೆ ಮನೆ ಇಲ್ಲ ಕಣಮ್ಮ ಒಂದೇ ಮನೆಲ್ಲೀ ನಾಲ್ಕೈದು ಕುಟುಂಬ ಜೀವನ ಮಾಡ್ತಾ ಇದ್ದೀವಿ ಇನ್ನೂ ಎಷ್ಟೋ ನಮ್ ಜನ ಗುತ್ತಿಗೆ ಆಧಾರದಲ್ಲಿ ಕೆಲ್ಸ ಮಾಡ್ತಾ ಅವ್ರೆ. ಅವರು ಏನಾದ್ರು ಸತ್ತರೆ ಸರಕಾರದಿಂದ ಏನೂ ಪರಿಹಾರ ಸಿಗಲ್ಲ ಖಾಯಂ ಮಾಡಿದ್ದರೆ ಒಂದಿಷ್ಟು ಅವ್ರ ಮಕ್ಕಳಿಗಾದ್ರು ಅನುಕೂಲ ಆಗುತ್ತೆ ಅಮ್ಮ ನಾವು ಎಷ್ಟು ಅಂತ ಸರಕಾರಕ್ಕೆ ಕೇಳೋದಮ್ಮ ಬಡವರ ಬಗ್ಗೆ ಕಾಳಜಿ ಇಲ್ಲ ಕಣಮ್ಮ  ಏನ್ ಮಾಡೋದು ನಾವು ಮಾಡೋ ಕೆಲ್ಸ ಯಾರ್ ಮಾಡ್ತಾರಮ್ಮ ಎಂದು ನೊಂದುಕೊಂಡು ನುಡಿದ್ರು.

ನಾವು ಬೆಳಗ್ಗೆ ಎದ್ದು ಪಟ್ಟಣದಲ್ಲಿ ಒಂದು ಸುತ್ತು ಬಂದರೆ ಸಾಕು ಪೌರಕಾರ್ಮಿಕರು ಪಡುವ ಕಷ್ಟ ಅವರು ಮಾಡುವ ಕೆಲಸ ನಮ್ಮ ಕಣ್ಣಿಗೆ ಕಾಣುತ್ತದೆ ನಮಗೆ ಅಸಹ್ಯ ಎನ್ನಿಸುವ ಕೆಲಸವನ್ನು ಅವರು ಮಾಡಿದಂತೆ ಕಂಡರೂ ಅವರೆಲ್ಲಾ ನಮ್ಮ ಪಾಲಿನ ದೇವರಿದ್ದಂತೆ ಇಂದು ನಾವೆಲ್ಲಾ ಕೈ ತುಂಬಾ ಒಳ್ಳೆಯ ಹಣ ಬರುವ ಕೆಲಸವನ್ನು ಮಾತ್ರ ಹುಡುಕುತ್ತೇವೆ ಒಂದು ವೇಳೆ ಪೌರಕಾರ್ಮಿಕರೇ ಇಲ್ಲವೆಂದಿದ್ದರೆ ಇಂದು ನಮ್ಮ ಆರೋಗ್ಯದ ಪರಿಸ್ಥಿತಿ ಏನಾಗುತ್ತಿತ್ತು ಪರಿಸರ ಏನಾಗುತ್ತಿತ್ತು ಎನ್ನುವುದನ್ನು ನಾವೇ ಯೋಚಿಸಬೇಕು.

ದಿನಾ ಬೆಳಗ್ಗೆಯೇ ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಬಿಟ್ಟು ಕುಟುಂಬದವರನ್ನು ಬಿಟ್ಟು ಹೆಂಗಸರು ಗಂಡಸು ಬೀದಿಯಲ್ಲಿ ಪೊರಕೆ ಹಿಡಿದುಕೊಂಡು ಚಳಿ ಮಳೆ ಎನ್ನದೇ ನಾವು ಉಪಯೋಗಿಸಿ ಬೀದಿ ಬದಿ ಎಸೆಯುವ ಅತ್ಯಂತ ವಿಷಕಾರಿಯಾದ ವಸ್ತುಗಳನ್ನು ಕೊಳೆತ ಪ್ರಾಣಿಗಳ ದೇಹವನ್ನು ಮತ್ತು ಇತರೆ ತ್ಯಾಜ್ಯಗಳನ್ನು ಯಾವುದೇ ಮುಲಾಜಿಲ್ಲದೇ ಎತ್ತಿಕೊಂಡು ಕಸದ ಬುಟ್ಟಿಯೊಳಗೆ ಎಸೆಯುತ್ತಾರೆ ನಮಗೆ ಇದು ನೋಡುವುದಕ್ಕೆ ಬಹಳ ಸರಳವಾಗಿ ಕಂಡರೂ ಸಹ ನಾವು ಅವರ ಸ್ಥಾನದಲ್ಲಿದ್ದರೆ ಯಾವ ರೀತಿಯ ಭಾವನೆ ಇರುತ್ತಿತ್ತೋ ಅದೇ ಭಾವನೆ ಅವರಲ್ಲಿಯೂ ಇರುತ್ತದೆ ಪಾಪ ಅವರ ಕಷ್ಟ ಅವರಿಗೆ ಗೊತ್ತು ಇದೆಲ್ಲಾ ಅವರು ಮಾಡುವುದು ಅವರ ಹೊಟ್ಟೆಪಾಡಿಗಾಗಿ ಅವರು ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದರೂ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮ್ಮ ಸರಕಾರ ಅವರನ್ನು ಪ್ರಾಣಿಗಿಂತ ಕಡೆಯ ಜೀವನವನ್ನು ನಡೆಸುವಂತೆ ಮಾಡಿದೆ. ನಮ್ಮಲ್ಲಿ ದುಡಿಯುವ ಪೌರಕಾರ್ಮಿಕರಲ್ಲಿ ಅರ್ಧದಷ್ಟು ಮಂದಿಗೆ ಇನ್ನೂ ಕೆಲಸ ಖಾಯಂ ಮಾಡಿಲ್ಲ ಗುತ್ತಿಗೆಯವರಿಗೆ ಸರಕಾರವು ತನ್ನ ಲಾಭಕ್ಕಾಗಿ ಟೆಂಡರ್ ಕರೆದು ಕೆಲ್ಸ ನೀಡುತ್ತಿರುವುದು ಖೇದದ ಸಂಗತಿ.

ನಿಜವಾಗಿಯೂ ನಾವು ಅವರು ಬದುಕನ್ನ ಯಾವ ರೀತಿ ನಡೆಸುತ್ತಿದ್ದಾರೆ ಎಂದು ನೋಡಬೇಕಾದರೆ ಅವರು ವಾಸಿಸುತ್ತಿರುವ ಕೇರಿಗಳಿಗೆ ಒಮ್ಮೆ ಹೋಗಿ ನೋಡಬೇಕು ಆಗ ತಿಳಿಯುತ್ತದೆ. ಅವರ ಬದುಕು ಮತ್ತು ಬವಣೆ ಹಾಸನದ ನಿರ್ಮಲ ನಗರದಲ್ಲಿ ಸುಮಾರು 250 ಮಂದಿ ವಾಸ ಮಾಡುತ್ತಿದ್ದಾರೆ. ಇವರ ಮನೆಗಳನ್ನು ನಮ್ಮ ಜನಪ್ರತಿನಿಧಿಗಳು ಅಧಿಕಾರಿಗಳು ಸದಾ ದೀನದಲಿತರ ಶ್ರೇಯೋಭಿವೃದ್ದಿಗಾಗಿ ದುಡಿಯುತ್ತಿರುವ ಮಹಾನ್ ನಾಯಕರು ಹೋಗಿ ನೋಡಿದರೆ ವಾಸ್ತವ ತಿಳಿಯುತ್ತದೆ. ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಪೌರಕಾರ್ಮಿಕರಿದ್ದಾರೆ ಎಲ್ಲರ ಬದುಕು ಇದೇ ರೀತಿ ನಮ್ಮ ಜನನಾಯಕರು ಮೈಕ್‍ಗಳಲ್ಲಿ ಪುಕ್ಕಟ್ಟೆ ಭಾಷಣ ಬೀಗಿದು ಅಮಾಯಕ ಜನರ ಬಳಿ ಮತಗಿಟ್ಟಿಸಿಕೊಂಡು ಆ ಮೇಲೆ ಅವರ ಮೇಲೆ ಸವಾರಿ ಮಾಡುತ್ತಾರಲ್ಲ ಇದು ಬಹಳ ಅಮಾನುಷವಾದುದು.

ಕೊರೋನಾ ಸೋಂಕು ಇಡೀ ವಿಶ್ವದಲ್ಲಿಯೇ ಭೀತಿ ಸೃಷ್ಟಿಸಿ ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ರೋಗದ ಭೀತಿಯ ಕಾರ್ಮೊಡದಲ್ಲಿಯೇ ಸೈನಿಕರ ರೀತಿ ಸದ್ದಿಲ್ಲದೆ ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಸ್ವಚ್ಚ ವಾತಾವರಣ ನಿರ್ಮಿಸುತ್ತಿದ್ದಾರೆ. ಯಾವುದೇ ಪ್ರಚಾರ ಗಿಟ್ಟಿಸಿಕೊಳ್ಳದೆ ಶತಶತಮಾನಗಳಿಂದ ನಮ್ಮ ಪರಿಸರವನ್ನು ಕಾಪಾಡುತ್ತಿರುವ ನಿಜವಾದ ಪರಿಸರ ಪ್ರೇಮಿಗಳು ಪೌರಕಾರ್ಮಿಕರು ಇವರು ನಮ್ಮ ಪಾಲಿನ ದೇವರಿದ್ದಂತೆ. ಕೊರೊನಾ ಇವರಿಗೆ ಭೀತಿ ಇಲ್ಲವೆಂದಲ್ಲ ಅದರ ನಡುವೆಯೇ ಧೈರ್ಯದಿಂದ  ನಗರ ಸ್ವಚ್ಚತೆಗೆ ಶ್ರಮಿಸುತ್ತಿದ್ದಾರೆ ಇವರ ಆರೋಗ್ಯವೂ ಅತಿಮುಖ್ಯ. ಸಾಮಾಜಿಕ ಅಂತರ ಕಾಪಾಡಬೇಕು ಮಹಡಿಯ ಮೇಲೆ ಚಪ್ಪಾಳೆ ಹೊಡೆಯಬೇಕು ಎನ್ನುತ್ತಾರೆ ಇವರಿಗೆಲ್ಲಿದೆ ಮಹಡಿ ಒಂದೇ ಚಿಕ್ಕಕೋಣೆಯಲ್ಲಿ ಐದಾರು ಕುಟುಂಬ ನಾವು ವಾಸ್ತವವನ್ನು ತಿಳಿಯದೆ ಮಾತಾನಾಡುತ್ತಿದ್ದೇವೆ ವಾಸ್ತವ ಅರಿತಾಗ ಅದರ ನೋವು ತಿಳಿಯುತ್ತದೆ.

ರಸ್ತೆ ಬೀದಿ ಎಲ್ಲ ಸ್ವಚ್ಚವಾಗಿದ್ದರೆ ಬೀದಿಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಖುಷಿಯೋ ಖುಷಿ ಅದೇ ಗಲೀಜಾಗಿದ್ದರೆ ಪೌರಕಾರ್ಮಿಕರಿಗೆ ಹಿಡಿಶಾಪ ಹಾಕುತ್ತೇವೆ ಆದರೆ ಪ್ರತಿನಿತ್ಯ ಇಡೀ ಊರ ಮಲೀನವನ್ನು ತೆಗೆದು ಪರಿಸರ ಕಾಪಾಡುತ್ತಿರುವವರ ಬಗ್ಗೆ ಯಾರಾದರೂ ಮಾತನಾಡುತ್ತಿದ್ದೇವಾ ಅವರ ಕಷ್ಟ ನೋವುಗಳಿಗೆ ಸ್ಪಂದಿಸುತ್ತಿದ್ದೇವಾ ಎಂಬುದನ್ನು ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಗಲೀಜು ಕೊಳಕು ಅಸಹ್ಯ ಎಂಬ ಪದಗಳೇ ಗೊತ್ತಿಲ್ಲದಂತೆ ನಿತ್ಯ ತಮ್ಮ ಕಾಯಕದ ಮೂಲಕ ಶಿವನನ್ನು ಕಾಣುವ ಕಾಯಕಯೋಗಿಗಳು ಆದರೆ ಇವರ ಬದುಕು ಮಾತ್ರ ಶೋಚನೀಯ.

1970ರ ಗುತ್ತಿಗೆ ಕಾರ್ಮಿಕ ಪದ್ಧತಿ ಮತ್ತು ನಿಯಂತ್ರಣ ಕಾಯಿದೆ ಪ್ರಕಾರ ವರ್ಷಪೂರ್ತಿ ಎಲ್ಲಿ ಕೆಲಸವಿರುತ್ತದೆಯೋ ಅಂಥ ಸ್ಥಳಗಳಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರು ಇರುವಂತಿಲ್ಲ ತಾತ್ಕಾಲಿಕ ಮತ್ತು ಮಧ್ಯಂತರ ಕಾರ್ಯಗಳಿಗೆ ಎಲ್ಲಿ ಜನರ ಅಗತ್ಯವಿರುತ್ತದೊ ಅಂತ ಸಂದರ್ಭದಲ್ಲಿ ಮಾತ್ರ ಮಧ್ಯಂತರ ಗುತ್ತಿಗೆ ಕಾರ್ಮಿಕರ ಪದ್ಧತಿ ಪ್ರಕಾರ ಅರೆಕಾಲಿಕ ಕಾರ್ಮಿಕರ ನೇಮಕವಾಗಬೇಕು ಈ ಕಾಯಿದೆ ಪ್ರಕಾರ ಸಮಾನ ಕೆಲಸಕ್ಕೆ ಸಮಾನವೇತನ ಕ್ಯಾಂಟೀನ್ ವ್ಯವಸ್ಥೆ ಅವರು ತಮ್ಮ ಊರುಗಳಿಗೆ ಹೋಗಿ ಬರಲು ಹಣಪಾವತಿ ಸೇರಿದಂತೆ ಎಲ್ಲ ಸವಲತ್ತು ಕಲ್ಪಿಸಬೇಕು. ಆದರೆ ಇದು ಪಾಲನೆಯಾಗುತ್ತದೆಯೇ? ಖಂಡಿತ ಇಲ್ಲ ಪೌರಕಾರ್ಮಿಕರಿಗಾಗಿ ಹತ್ತು ವರ್ಷಗಳಿ ಕಾಲ ಗುತ್ತಿಗೆ ಕಾರ್ಯನಿರ್ವಹಿಸಿದವರಿಗೆ ಪಿಂಚಣಿ ವೇತನ ನೀಡಬೇಕೆಂದು ಕೇಂದ್ರ ಸರಕಾರದ ಆದೇಶವಿದೆ ಇದನ್ನು ಯಾವ ರಾಜ್ಯವೂ ಕಡ್ಡಾಯವಾಗಿ ಜಾರಿಗೊಳಿಸಿಲ್ಲ. ಇಡೀ ನಗರವೇ ಸ್ಚಚ್ಚ ಮಾಡುತ್ತಾರೆ ಆದರೆ ಅವರ ಬದುಕು ಮಾತ್ರ ಕರಾಳ. ನೆಮ್ಮದಿಯೆಂಬುದು ಬರೀ ಮರೀಚಿಕೆ ಜೀವನವೇ ನರಕಯಾತನೆ ಎಷ್ಟೊ ಮಂದಿಗೆ ಮನೆಗಳಿಲ್ಲ ಗುಡಿಸಲು ಜೋಪಡಿ ಶಡ್ ಗಳಲ್ಲಿ ವಾಸ ಮಾಡುತ್ತಿದ್ದಾರೆ.

ತಮಗೆ ಬರುವ ಆದಾಯದಲ್ಲಿ ಒಂದು ಹೊತ್ತಿನ ಕೂಳಿಗೂ ಪರದಾಡುವ ಸ್ಥಿತಿ ಇರುವಾಗ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತವೇ ಇಲ್ಲ. ಶಿಕ್ಷಣ ಕೊಡಿಸುವ ಆಸೆ ಇದ್ದರೂ ಅವರ ಕೈಯಲ್ಲಿ ಆಗುತ್ತಿಲ್ಲ. ಅಲ್ಲದೇ ಪೌರಕಾರ್ಮಿಕರಾಗಿ ಕೆಲಸ ಮಾಡುವ ಬಹುತೇಕರು ಅನಕ್ಷರಸ್ಥರಾಗಿರುವುದು ಇದಕ್ಕೆ ಕಾರಣವೆಂದರೆ ತಪ್ಪಾಗಲಾರದು. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಿಯೇ ಮುಂದುವರಿಯುತ್ತಿರುವುದು ನೋವಿನ ಸಂಗತಿ. ಶಿಕ್ಷಣ ಸಾಮಾಜಿಕ ಸಮಾನತೆ ಇವರ ಪಾಲಿಗೆ ಗಗನ ಕುಸುಮ. ಒಟ್ಟಿನಲ್ಲಿ ಪೌರಕಾರ್ಮಿಕರ ಬದುಕು ಹಸನಾಗಲು ಇನ್ನೂ ಎಷ್ಟು ವರ್ಷಗಳು ಬೇಕೋ?

‍ಲೇಖಕರು nalike

July 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasundhara K M

    ನಿಮ್ಮ ಕೊನೆಯ ಪ್ರಶ್ನೆ ನನ್ನದೂ ಆಗಿದೆ. ನಮ್ಮೊಡನಿರುವ ಹಲವರ ಬದುಕು ಇಂದಿಗೂ ಶೋಚನೀಯವೇ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: