ಅವಧಿ Archive ನಿಂದ: ಕೆ ವಿ ತಿರುಮಲೇಶ್ ಕಣ್ಣಲ್ಲಿ ಆತ್ಮಹತ್ಯೆ

ಇಂದು ಹೆಸರಾಂತ ಸಾಹಿತಿ ಕೆ ವಿ ತಿರುಮಲೇಶ್ ಅವರ ಹುಟ್ಟುಹಬ್ಬ.

ಈ ಹಿನ್ನೆಲೆಯಲ್ಲಿ ಈ ಹಿಂದೆ ಅವರೇ ಬರೆದ ಒಂದು ಲೇಖನ ನಿಮಗಾಗಿ-

ಆತ್ಮಹತ್ಯೆ

ಕೆ.ವಿ. ತಿರುಮಲೇಶ್

 

“Any man’s death diminishes me, because I am involved in Mankind; And therefore never send to know for whom the bell tolls; it tolls for thee.”

– John Donne …

‘ಅವಧಿ’ಯಲ್ಲಿ ಈಚೆಗೆ ತಾನೆ ಆತ್ಮಹತ್ಯೆಯ ವಿಚಾರದಲ್ಲಿ ಬಂದ ಲೇಖನವನ್ನು ಓದಿದೆ: ಅಸಾಧಾರಣ ಸಮಸ್ಯೆಗಳನ್ನು ಎದುರಿಸುತ್ತ ಸಾಹಸದಿಂದ ಬದುಕುತ್ತಿರುವ ಶ್ರೀನಿವಾಸ್ ಕಾರ್ಕಳಅವರಿಗೆ ಅಭಿನಂದನೆಗಳು. ಆತ್ಮಹತ್ಯೆಯ ಕುರಿತಾದ ಗೌರಿ ಲಂಕೇಶ್ ಅವರ ಮಾತುಗಳೂ ಮನನೀಯವಾಗಿವೆ. ಎಷ್ಟೇ ಕಷ್ಟಕರವಾದರೂ ಬದುಕುವುದರಲ್ಲಿ ಸಕಾರಾತ್ಮಕವಾದ್ದು ಅದೇನೊ ಇದೆ (ಅದೇನೆಂದು ನಮಗೆ ಸ್ಪಷ್ಟವಾಗದೆ ಇದ್ದರೂ) ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಾಕತಾಳೀಯವೆಂಬಂತೆ, ಈ ಲೇಖನ ಬಂದ ಸಂದರ್ಭದಲ್ಲೇ ನಾನು ಅಲ್ಬರ್ಟ್ ಕಮೂ ಬರೆದ ‘ದ ಮಿಥ್ ಆಫ್ ಸಿಸಿಫಸ್’ ಓದುತ್ತಿದ್ದೆ. ಆತ್ಮಹತ್ಯೆಯ ಕುರಿತಾಗಿ ಬಹಳಷ್ಟು ಚಿಂತಿಸಿದವನು ಕಮೂ. ಅವನ ಪ್ರಕಾರ ಬದುಕುವುದಕ್ಕೆ ಎಷ್ಟು ಕಾರಣಗಳಿವೆಯೋ ಬದುಕದಿರುವುದಕ್ಕೂ (ಎಂದರೆ ಆತ್ಮಹತ್ಯೆಗೂ) ಅಷ್ಟೇ ಕಾರಣಗಳಿವೆ.

ಒಬ್ಬಾತ ‘ನಿಜವಾಗಿಯೂ’ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎನ್ನುವುದನ್ನು ಯಾರೂ ಹೇಳಲಾರರು. ಸ್ವತಃ ವ್ಯಕ್ತಿಗೂ ಅದು ಸ್ಪಷ್ಟವಾಗಿರುವುದಿಲ್ಲ. ನಿಮಿಷ ಮಾತ್ರದಲ್ಲಿ ನಡೆಯುವ ಈ ಸ್ವಯಂ ಹತ್ಯೆಯ ಹಿಂದೆ ಜೀವಿತದಲ್ಲಿ ಒಟ್ಟೈಸಿದ ಅನೇಕ ಕಹಿ ಅನುಭವಗಳದ್ದೊಂದು ಟೈಮ್ ಬಾಂಬ್ ಇರುತ್ತದೆ. ಅದನ್ನು ಸಿಡಿಯುವಂತೆ ಮಾಡಲು ಒಂದು ಬೆಂಕಿ ಕಣದಂತೆ ಬರುವ ಪ್ರೇರೇಪಣೆ ಅದರಷ್ಟಕ್ಕೇ ಅಷ್ಟೇನೂ ಮಹತ್ವದ್ದಾಗಿ ಇರಲಾರದು: ಸದಾ ಮಾತಾಡಿಸುತ್ತಿದ್ದ ಒಬ್ಬಾತ ಒಂದು ದಿನ ಮುಖ ತಿರುಗಿಸಿ ಹೋದರೆ ಅಷ್ಟೇ ಸಾಕು—ಸಿಡಿಮದ್ದನ್ನು ಸಿಡಿಸುವುದಕ್ಕೆ!

The last straw on the camel’s back ಏನು ಬೇಕಾದರೂ ಆಗಬಹುದು. ಅದರಷ್ಟಕ್ಕೇ ಅದು ಕ್ಷುಲ್ಲಕ, ಆದರೆ ಅದೊಂದು ಟ್ರಿಗ್ಗರ್ ಆಗಿ ಕೆಲಸ ಮಾಡಬಹುದು. ಈ  ಟ್ರಿಗ್ಗರ್ ಯಾವುದು ಎಂದು ಪೂರ್ವಭಾವಿಯಾಗಿ ಹೇಳಲಾರೆವು. (ಪ್ರಿಯಕರ ಫೋನ್ ಕರೆ ಸ್ವೀಕರಿಸಲಿಲ್ಲ ಎನ್ನುವುದಕ್ಕೆ ಬದುಕು ಮುಗಿಸಿದವರಿದ್ದಾರೆ ಎಂದು ಕೇಳಿದ್ದೇನೆ.)  ಕೋಪ, ತಾಪ, ಅವಮಾನ, ಅನುಮಾನ, ಮರ್ಯಾದೆ, ದ್ವೇಷ, ಸೋಲು, ಕಾಯಿಲೆ, ಮಕ್ಕಳ ಸಾವಿನ ದುಃಖ, ಸಂಗಾತಿಯ ಸಾವು, ವಿಚ್ಛೇದನ, ಒಂಟಿತನ, ಅಚಾನಕವಾದ ಮಾನಸಿಕ ಆಘಾತ…. ಆಗಲೇ ನಮಗೆ ಸಾಂತ್ವನ ನೀಡುವುದಕ್ಕೆ ಜನ ಬೇಕಾಗುವುದು. ಉಪದೇಶ ಬೇಡ, ಜತೆ ಬೇಕು.

ಹಲವು ವರ್ಷಗಳ ಹಿಂದೆ ನಾನೊಂದು ‘ಅನ್ವೇಷಣೆ: ರೂಮು’ ಎಂಬ ಕತೆ ಬರೆದಿದ್ದೆ. ಒಬ್ಬ ವ್ಯಕ್ತಿ ಒಂದೂರಿಗೆ ಬಂದು ಹೋಟೆಲೊಂದರಲ್ಲಿ ಇಳಿದುಕೊಳ್ಳುತ್ತಾನೆ. ನಂತರ ಸೆಕೆಂಡ್ ಶೋ ಸಿನೆಮಾಕ್ಕೆ ಹೋಗಿ ಬರುತ್ತಾನೆ. ಬಂದಾಗ ಇಡೀ ಹೋಟೆಲು ಕತ್ತಲಲ್ಲಿ ಮುಳುಗಿರುತ್ತದೆ; ಆದರೆ ಒಂದು ಕೋಣೆಯಲ್ಲಿ ಮಾತ್ರ  ಬಾಗಿಲು ಅರ್ಧ ತೆರೆದಿದ್ದು, ಅದರೊಳಗೆ ಬೆಳಕಿರುತ್ತದೆ.  ಮರುದಿನ ಮುಂಜಾನೆಗೇ ಹೋಟೆಲಿನಲ್ಲಿ ಗದ್ದಲ ಕೇಳಿಸುತ್ತದೆ. ನೋಡಿದರೆ ಒಬ್ಬ ಮನುಷ್ಯ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡದ್ದು ಕಂಡುಬರುತ್ತದೆ.

ಆ ಮನುಷ್ಯನ ಕೋಣೆಯೇ ನಿನ್ನೆ ಮಧ್ಯರಾತ್ರಿ ತೆರೆದಿದ್ದುದು ಎನ್ನುವುದು ನಮ್ಮ ವ್ಯಕ್ತಿಗೆ ಗೊತ್ತಾಗುತ್ತದೆ. ಬಹುಶಃ ನಾನವನನ್ನು ತಡೆಯಬಹುದಿತ್ತು ಎಂಬ ‘ಅಬ್ಸರ್ಡ್’ ವಿಚಾರವೊಂದು ಅವನ ಮನಸ್ಸಿನಲ್ಲಿ ಹಾದುಹೋಗುತ್ತದೆ. ಆದರೆ ಅದು ನಿಜಕ್ಕೂ ಅಬ್ಸರ್ಡ್ ವಿಚಾರವೇ? ಕಮೂನ ಮಾತುಗಳನ್ನು ಓದುತ್ತಿದ್ದಂತೆ, ಮಾತ್ರವಲ್ಲ ಡಿವೈಎಸ್ಪಿ ಗಣಪತಿಯೇ ಮುಂತಾದವರ ಯಾವುದೇ ಆತ್ಮಹತ್ಯೆಯ ಕುರಿತು ಕೇಳಿದಾಗಲೂ, ನನಗೆ ಈ ಕತೆ ನೆನಪಾಗುತ್ತದೆ.

ಆತ್ಮಹತ್ಯೆಗೆ ಹಲವಾರು ಕಾರಣಗಳಿರುತ್ತ ಆತ್ಮಹತ್ಯೆ ಮಾಡಿಕೊಂಡವರೆಲ್ಲಾ ಹೇಡಿಗಳೆಂದು ಹೇಳಲು ಬರುವುದಿಲ್ಲ. ಅತ್ಯಂತ ಧೈರ್ಯವಂತರಾಗಿದ್ದೂ ಆತ್ಮಹತ್ಯೆ ಮಾಡಿಕೊಂಡ ಹಲವರಿದ್ದಾರೆ. ಗೌರಿ ಲಂಕೇಶರ ಲೇಖನ ಓದುತ್ತಿದ್ದಂತೆ ನಾನೆಲ್ಲೋ ಬಹಳ ಹಿಂದೆ ಓದಿದ ಪ್ರಸಂಗವೊಂದು ನೆನಪಿಗೆ ಬಂತು: ಒಬ್ಬ ಕ್ರಾಂತಿಕಾರಿ ಕವಿ ಅವನ ಜನಪ್ರಿಯತೆಯ ಉತ್ತುಂಗ ಶಿಖರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ಅದಕ್ಕಾಗಿ ಅವನನ್ನು ಹಲವರು ಟೀಕಿಸುತ್ತಾರೆ; ಹಾಗೆ ಟೀಕಿಸಿದವರಲ್ಲಿ ಅವನದೇ ವಯಸ್ಸಿನ ಇನ್ನೊಬ್ಬ ಕ್ರಾಂತಿಕಾರಿ ಕವಿಯೂ ಇರುತ್ತಾನೆ. ಕೆಲವೇ ವರ್ಷಗಳ ನಂತರ ಈ ಟೀಕಿಸಿದ ಕವಿಯೇ ಸ್ವತಃ ಆತ್ಮಹತ್ಯೆಗೆ ಶರಣಾಗುತ್ತಾನೆ.

ಇಬ್ಬರೂ ಕ್ರಾಂತಿಕಾರಿ ರಶಿಯನ್ ಕವಿಗಳು; ಮೊದಲನೆಯವನು ಸರ್ಜೈ ಎಸೆನಿನ್ (30ನೇ ವರ್ಷದಲ್ಲಿ), ಎರಡನೇಯವನು ವ್ಲಾಡಿಮಿರ್ ಮಾಯಕೋವಸ್ಕಿ (37ನೇ ವರ್ಷದಲ್ಲಿ). ಹೀಗೆ ಯಾವ ಯಾವುದೋ ಕಾರಣಕ್ಕೆ ತಮ್ಮನ್ನು ತಾವು ಕೊಂದುಕೊಂಡ ಅನೇಕ ಕವಿಗಳು ಕಲಾವಿದರು ಇದ್ದಾರೆ: ಅರ್ನಸ್ಟ್ ಹೆಮಿಂಗ್ವೇ, ಆ್ಯನ್ ಸೆಕ್ಸ್ಟನ್, ವರ್ಜೀನಿಯಾ ವೂಲ್ಫ್, ಜಾನ್ ಬೆರ್ರಿಮ್ಯಾನ್ ಕೆಲವು ಲೋಕಪ್ರಸಿದ್ಧ ಹೆಸರುಗಳು.

ಎಸೆನಿನ್ ಆತ್ಮಹತ್ಯೆಗೆ ಮೊದಲು ತನ್ನದೇ ರಕ್ತದಲ್ಲಿ ಒಂದು ಕವಿತೆ ಬರೆದಿಟ್ಟು ಹೋಗುತ್ತಾನೆ. ಅದರ ಇಂಗ್ಲಿಷ್ ಅನುವಾದ ಹೀಗಿದೆ:

Goodbye, my friend…

There’s nothing new in dying now

Though living is no newer

(Esenin)

ಅವನನ್ನು ಟೀಕಿಸಿ ಮಾಯಕೋವ್ಸಕಿ ಬರೆದ ಕವಿತೆ ಅದಕ್ಕೆ ನೇರ ಉತ್ತರದಂತಿದೆ:

It’s not difficult to die.

To make life

Is more difficult by far.

(Mayakovsky)

ಎಸೆನಿನ್ ಸತ್ತ ಐದು ವರ್ಷಗಳಲ್ಲಿ ತಾನೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಮಾಯಕೋವಸ್ಕಿಗೆ ತನ್ನದೇ ಮಾತುಗಳು ನೆನಪಾಗಲಿಲ್ಲವಲ್ಲ! ಹೇಗೆ ಅವನನ್ನು ಕೇಳುವುದು? ಸತ್ತವರು ಪ್ರಶ್ನಾತೀತರು.

ಸಾಯುವವರೆಗೆ ಪ್ರತಿಯೊಬ್ಬ ಮನುಷ್ಯನೂ ಆತ್ಮಹತ್ಯೆಯ ಗಡುವಿನಲ್ಲೇ ಇರುತ್ತಾನೆ ಎನ್ನುವುದನ್ನು ಮರೆಯಬಾರದು.

‍ಲೇಖಕರು Admin

January 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shama, Nandibetta

    “ಸಾಯುವವರೆಗೆ ಪ್ರತಿಯೊಬ್ಬ ಮನುಷ್ಯನೂ ಆತ್ಮಹತ್ಯೆಯ ಗಡುವಿನಲ್ಲೇ ಇರುತ್ತಾನೆ ಎನ್ನುವುದನ್ನು ಮರೆಯಬಾರದು.”

    How true sir. Thanks a lot for the write up

    ಪ್ರತಿಕ್ರಿಯೆ
  2. ಸತ್ಯಕಾಮ ಶರ್ಮಾ

    “We know very well why people become mentally ill. What we don’t understand is why people survive the traumas of their lives as well as they do. We know exactly why certain people commit suicide. We don’t know, within the ordinary concepts of causality, why certain others don’t commit suicide. All we can say is that there’s a force, the mechanics of which we don’t fully understand, that seems to operate routinely in most people to protect and to foster their mental health even under the most adverse conditions.”-M. Scott Peck, Psycotherapist ತನ್ನ ‘The Road Less Travelled’ ಪುಸ್ತಕದಲ್ಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: