ಇಂಟರ್ನೆಟ್ ಎಂಬ ವಾಸ್ತವ ಜಗತ್ತು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

‍ಮನುಷ್ಯ ಆದಿಮಾನವನ ಕಾಲದಿಂದಲೂ ತನ್ನ ಇರುವಿನ ಸುತ್ತ ಕೋಟೆ ಕೊತ್ತಲೆಗಳ ಜೊತೆಗೆ ಕಟ್ಟಳೆಗಳನ್ನೂ ಕಟ್ಟಿಕೊಂಡು ಬಂದಿದ್ದಾನೆ. ಸ್ವಾತಂತ್ರ್ಯ, ಪ್ರಾಬಲ್ಯ ಹಾಗೂ ಸಹಬಾಳ್ವೆಯ ಬದುಕು ಇದರ ಉದ್ದೇಶವಾಗಿದ್ದಿತ್ತು. ಭಾಷೆ, ಸಂಸ್ಕೃತಿಗಳ ಬೆಳವಣಿಗೆ, ಹೊಸ ಭೂಪ್ರದೇಶಗಳ ಅನ್ವೇಷಣೆ, ಪ್ರಾದೇಶಿಕ, ಭಾಷಿಕ ಹಾಗೂ ವಿದೇಶಿ ಕಾನೂನು ರಚನೆಗೆ ನಿಧಾನವಾಗಿ ಅಡಿಗಲ್ಲುಗಳಾದವು. ಆಧುನಿಕ ಜಗತ್ತಿನ ತಂತ್ರಜ್ಞಾನದ ಬೆಳವಣಿಗೆ ಕಾನೂನು ಸುವ್ಯವಸ್ಥೆಯ ಸಲುವಾಗಿ ಇಂಟರ್ನೆಟ್ ಎಂಬ ವಾಸ್ತವ ಜಗತ್ತಿನಲ್ಲಿಯೂ ತನ್ನದೇ ಆದ ನಿಯಂತ್ರಣವನ್ನು ಹೊಂದಲು ಇದೇ ವರ್ಗೀಕರಣದ ಮಾದರಿ ಅನುಸರಿಸುವುದನ್ನು ನೋಡಬಹುದು.

ಒಬ್ಬ ವ್ಯಕ್ತಿ ತನ್ನ ಸುತ್ತಲಿನ ಪ್ರಪಂಚದಲ್ಲಿ ತನ್ನಿಚ್ಛೆಯಂತೆ ಇರುವುದರ ಜೊತೆಗೆ, ತನ್ನ ಮಾನವ ಸಹಜ ಗುಣಗಳಿಂದ ಬಂದಿರುವ ಎಲ್ಲ ರೀತಿಯ ಭಾವನೆಗಳನ್ನು ಹೊರಗೆಡುವುತ್ತಾನೆ. ಕ್ರೋಧ, ಮದ, ಮಾತ್ಸರ್ಯ ಇತ್ಯಾದಿಗಳನ್ನು ತನ್ನ ಮಾತಿನಿಂದ, ಬರಹಗಳಿಂದ, ನೆಡೆಯಿಂದ ತೋರ್ಪಡಿಸಿದರೂ, ತನ್ನ ಅಸ್ಥಿತ್ವವನ್ನು, ಅಂತಸ್ತನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ತನ್ನೆಲ್ಲಾ ಹೆಜ್ಜೆಗಳಲ್ಲೂ ಮಾಡುತ್ತಲೇ ಇರುತ್ತಾನೆ.

ಇದೆಲ್ಲದರ ಜೊತೆಗೆ ಯಾರಿಗೂ ಅರಿವಾಗದಂತಹ, ಬೇರೆಯವರಿಗೆ ತೋರ್ಪಡಿಸಿಕೊಳ್ಳಲು ಇಚ್ಛಿಸದ ಮುಖವಾಡವನ್ನೂ ಹೊಂದಿರುತ್ತಾನೆ. ಬಹುಶಃ ಜಗತ್ತಿನಲ್ಲಿ ನಡೆಯುತ್ತಿರುವ ಅದೆಷ್ಟೋ ಕಳ್ಳತನ, ಕಪಟತನ, ಹುಂಬತನ ಇತ್ಯಾದಿ ಈ ಎರಡನೇ ಮುಖಕ್ಕೆ ಸಂಬಂಧಿಸಿದ್ದು, ಕಾನೂನಿನ ಅವಶ್ಯಕತೆ ನಮಗೆ ಹೆಚ್ಚಾಗಿ ಇಲ್ಲಿ ಕಂಡುಬರುತ್ತದೆ ಎನಿಸುತ್ತದೆ.

ಭಾಷೆ, ಬೆಳೆದು ಬಂದ ಸಮುದಾಯ, ಶಿಕ್ಷಣ, ತನ್ನ ಸ್ವಾತಂತ್ರ್ಯ, ಹಕ್ಕುಗಳು ಇತ್ಯಾದಿಯನ್ನು ಅರಿತುಕೊಳ್ಳುವ ಜಾಣ್ಮೆ ಹಾಗೂ ಬುದ್ಧಿವಂತಿಕೆ ವ್ಯಕ್ತಿಯನ್ನು ಸಮಾಜದಲ್ಲಿ ಒಟ್ಟಿಗೆ ಬದುಕುವ ಅರ್ಹತೆಯನ್ನು ನಿಶ್ಚಯಿಸುತ್ತವೆ. ಇವೆಲ್ಲವೂ ದಿನಗಳಲ್ಲಿ ಇದು ಅಂತರ್ಜಾಲದ ವಾಸ್ತವ ಜಗತ್ತಿಗೂ ಅನ್ವಯಿಸುತ್ತದೆ.

ದಶಕಗಳ ಹಿಂದೆ ಗಣಕಯಂತ್ರಗಳನ್ನು ಒಟ್ಟುಗೂಡಿಸಲು ಸಾಧ್ಯವಾಗಿಸಿದ ತಂತ್ರಜ್ಞಾನದ ಆವಿಷ್ಕಾರವಾದ ಇಂಟರ್ನೆಟ್, ಮನುಷ್ಯನಿಗೆ ಯಾಂತ್ರಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ತನ್ನಿರುವಿಕೆಯನ್ನು ತೋರಿಸಿಕೊಳ್ಳಲು ಹೊಸತೊಂದು ಜಗತ್ತನ್ನೇ ಸೃಷ್ಟಿಸಿಕೊಟ್ಟಿದೆ. ಒಬ್ಬ ವ್ಯಕ್ತಿಗೆ ಒಂದೇ ಪಾಸ್‌ಪೋರ್ಟ್, ಆಧಾರ್, ಪ್ಯಾನ್‌ಕಾರ್ಡ್ ಎಂಬ ನಿಜ ಜಗತ್ತಿನ ಸಂಕೋಲೆಗಳನ್ನು ಮುರಿದು, ಎಷ್ಟು ಬೇಕಾದರೂ ವೇಷ ಹಾಕಿಕೊಳ್ಳಬಹುದಾದ ಸಾಧ್ಯತೆಯನ್ನು ಇಂಟರ್ನೆಟ್ ತೋರಿಸಿಕೊಟ್ಟಿತು.

ಜೀವನ ನಡೆಸಲು ಮಾತನಾಡುತ್ತಿದ್ದ, ಇತರರೊಂದಿಗೆ ವ್ಯವಹರಿಸುತ್ತಿದ್ದ ರೀತಿ ರಿವಾಜುಗಳಲ್ಲಿ ಅತಿ ವೇಗವಾದ ಬದಲಾವಣೆ ಸಾಧ್ಯವಾಗಿದ್ದೂ ಕೂಡ ಇದರಲ್ಲೇ. ಹೇಗೆ? ಎಂಬ ಪ್ರಶ್ನೆ ನಿಮಗೆ ತಕ್ಷಣ ಹೊಳೆದಿದ್ದಲ್ಲಿ ಒಮ್ಮೆ ಯೋಚಿಸಿ: ಮಾಹಿತಿ ಯುಗದಲ್ಲಿ ಕೈಬೆರಳಿನ ಅಂತರದಲ್ಲಿ ಹತ್ತಾರು ಸಾವಿರ ಜನರು ಒಂದು ವಿಷಯದ ಬಗ್ಗೆ ಮಾತನಾಡುವುದನ್ನು ಕ್ಷಣಾರ್ಧದಲ್ಲೇ ಓದಿ, ಗ್ರಹಿಸಿ (ಸಾಧ್ಯವಾದಷ್ಟೂ), ನಮ್ಮೆದುರಿಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ನಮ್ಮದೇ ಎನ್ನುವಂತಹ ವಿಮರ್ಶೆ ಕೊಡಲು, ಚರ್ಚೆ ನಡೆಸಲು ನಿಮ್ಮ ಫೇಸ್‌ಬುಕ್ (ಎಫ್.ಬಿ), ವಾಟ್ಸ್‌ಆಫ್, ಟ್ವಿಟರ್ ಸಾಧ್ಯ ಮಾಡುತ್ತಿವೆಯಲ್ಲವೇ?

ವಿದ್ಯುನ್ಮಾನ ಸಂವಹನದ ಬೆಲೆ ಇಳಿಯುತ್ತಾ ಬಂದಂತೆಲ್ಲ, ಮೊಬೈಲ್ ರಸ್ತೆ ಬದಿಯ ವ್ಯಾಪರಿಗಳಿಗೂ ಎಟುಕುವಂತಾದಾಗ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ಅಮೆರಿಕಾದಂತಹ ದೊಡ್ಡಣ್ಣನಿಂದ ಹಿಡಿದು ಎಲ್ಲರಿಗೂ ಸಂವಹನ ರೂಪದಲ್ಲಿರುವ ಸಂದೇಶಗಳ ಮೇಲೂ ಕಡಿವಾಣ ಹಾಕಬೇಕು ಎಂದೆನಿಸಿದ್ದು, ಆದಿಮಾನವನ ಕಾಲದಿಂದಲೂ ನಡೆದುಕೊಂಡು ಬಂದಿರುವ ಮಾನವನ ಸಹಜಗುಣ ಎನ್ನಬಹುದು.

ಕಮ್ಯೂನಿಸ್ಟ್ ಸರ್ಕಾರಗಳಿರುವ ಚೀನಾ ಇತ್ಯಾದಿಗಳು ತಮ್ಮ ಇಡೀ ದೇಶದ ಮೇಲೆ ನಿರ್ಬಂಧಗಳನ್ನು ಹೇರಿ, ಇಂಟರ್ನೆಟ್ ಸೇವೆಗಳನ್ನು ನೀಡುವ ಸೇವಾದಾತರ ಮೂಗಿಗೇ ದಾರ ಹಾಕಿರುವ ಉದಾಹರಣೆಗಳೂ ಇದಕ್ಕಿಂತ ವಿಭಿನ್ನವಲ್ಲ. ವ್ಯಕ್ತಿಗತವಾಗಿದ್ದ ವಾಕ್ ಸಮರಗಳು, ಎಫ್.ಬಿ ಪೋಸ್ಟ್, ಟ್ವೀಟ್, ವಾಟ್ಸ್‌ಆಪ್‌ನಂತಹ ಟೆಲಿಗ್ರಾಂಗಳಂತೆ  ಸಂದೇಶಗಳಿಗೂ, ಅದರಲ್ಲಿನ ಅಕ್ಷರಗಳಿಗೂ ಮಿತಿ ಇದ್ದರೂ ಲೇಖನಿಯ ಹರಿತವನ್ನು ಹೊಂದಿದ್ದು, ದೇಶ-ವಿದೇಶಗಳ ಎಲ್ಲ ಎಲ್ಲೆಗಳನ್ನೂ ಮೀರಿ ಪ್ರಸಿದ್ಧ, ಖ್ಯಾತ ವ್ಯಕ್ತಿ, ಸಂಸ್ಥೆ, ಸರ್ಕಾರಗಳಿಗೆ ಕಂಟಕವಾಗುವುದನ್ನು ಮೊದಲೇ ಎಣಿಸಲೂ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿದ್ದವರಿಗೆ ಕಾನೂನು ಒಂದು ಮಂತ್ರದಂಡದಂತೆ ಕಾಣಿಸಿದ್ದಿರಬೇಕು.

ಎಡ್ವರ್ಡ್ ಸ್ನೋಡೆನ್ ನಂತಹ “ವಿಷಲ್ ಬ್ಲೋಅರ್‌”ಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದು, ಹುಟ್ಟೂರಿನಿಂದಲೇ, ದೇಶದಿಂದಲೇ ದೂರ ಇಡುವ ಕಾನೂನು ಒಂದೆಡೆಯಾದರೆ, ಅದೇ ಕಾನೂನು ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದ ಅನಿಸಿಕೆಗಳ ಎಳೆಯೊಂದನ್ನು ಮಾತ್ರ ಕಾರಣ ಮಾಡಿ ಮುಗ್ದರನ್ನು, ಅಮಾಯಕರನ್ನು, ಇನ್ನೂ ವಾಸ್ತವ ಜಗತ್ತನ್ನು ಪೂರ್ಣ ಅರಿಯದ ನೆಟಿಜನ್ ರನ್ನು  ಜೈಲು ಸೇರುವ, ಸಮಾಜದಿಂದ ತಿರಸ್ಕಾರಕ್ಕೊಳಗಾಗುವ, ದೂಷಿಸಲ್ಪಡುವ ಸಂಕಷ್ಟಗಳಿಗೂ ಒಡ್ಡುತ್ತದೆ. ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆಯೂ ಚಿಕ್ಕದೇನಲ್ಲ.

ಮನುಷ್ಯ ಮುಕ್ತವಾಗಿ ಚಿಂತಿಸಬಲ್ಲ, ಮಾತನಾಡಬಲ್ಲ, ಸ್ವತಂತ್ರವಾಗಿ ಇರಬಲ್ಲ ಆದರೆ – ಇಂಟರ್ನೆಟ್ ಎಂಬ ವಾಸ್ತವ ಜಗತ್ತಿನಲ್ಲಿ ಅದೃಶ್ಯನಾಗಿಯೂ ಇರಬಲ್ಲ. ಈ ಯೋಚನೆ ಅವನ ತೀಕ್ಷ್ಣ ಬುದ್ದಿಗೆ ಒಂದೆಡೆ ಮುಗ್ಧನಾಗಿ, ಶ್ರಮಜೀವಿ, ಸೌಮ್ಯಜೀವಿ ಎಂದು ತೋರಿಸಿಕೊಳ್ಳುತ್ತಲೇ, ನಿಜ ಜೀವನದಲ್ಲಿ ಆಡದ ಮಾತುಗಳನ್ನು, ಬಿಚ್ಚಿಡದ ಗುಟ್ಟುಗಳನ್ನು, ಶಕ್ತಿ ಪ್ರದರ್ಶನಕ್ಕೆ ಸಾಧ್ಯವಾಗದೆಡೆ ಮಾತಿನ ಬಾಣವನ್ನು ಹರಿದುಬಿಡುವ, ಅದೂ ಅದೃಶ್ಯರೂಪದ ‘False Identity’ಯ ಅಥವಾ ‘Invisible Man’ ನಂತಹ ರೋಚಕ ಮುಖವಾಡಗಳು ಕಾದಂಬರಿಯ ಪುಸ್ತಕಗಳಿಂದ ಹೊರಬಂದ ಶಸ್ತ್ರಾಸ್ತ್ರಗಳಂತೆ ತೋರಿದವು.

ಮನುಷ್ಯ ನಿಧಾನವಾಗಿ ವಾಸ್ತವ ಬದುಕಿನ ಪ್ರಜೆಯಾಗುತ್ತಾ ಹೋದ. ಮರ್ಯಾದೆ, ಅಂತಸ್ತು, ಅಧಿಕಾರ ಇತ್ಯಾದಿಗಳೆಲ್ಲವುಗಳಿಗಿಂತ ಭಿನ್ನವಾದ ಸೋಷಿಯಲ್ ಮೀಡಿಯಾ ಐಡೆಂಟಿಟಿ ಮತ್ತು ಸ್ಟೇಟಸ್ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಾ ಬಂತು. ಆದರೆ, ನಿಜ ಜೀವನದಲ್ಲಿರುವ ‘ಕಾನೂನು’ ಎಂಬ ಛಡಿ ಏಟಿನ ಭಯ ಇಲ್ಲದಿರುವುದು, ಮತ್ತೊಬ್ಬರ ಜೀವನದಲ್ಲಿ ನಾವು ಮೂಗು ತೂರಿಸುವುದು, ಬೇರೆಯವರಿಗೆ ನೋವುಂಟು ಮಾಡುವುದು ತಪ್ಪು ಎನ್ನುವ ಭಾವನೆಗಳು ಶೂನ್ಯ ಎನ್ನುವಷ್ಟು ಕುರುಡು ಜಾಣ್ಮೆ ತೋರುವ ಸಾಧ್ಯತೆಗಳು ಇಂಟರ್ನೆಟ್‌ನಲ್ಲಿ ಸರ್ವೇ ಸಾಮಾನ್ಯ.

ಮಕ್ಕಳಿಗೆ ಮನೆಯಲ್ಲಿ, ಶಾಲೆಯಲ್ಲಿ, ಆಟದ ಮೈದಾನದಲ್ಲಿ ಕಲಿಸುವ, ಅವರೇ ಖುದ್ದು ಕಲಿಯಲು ಸಾಧ್ಯವಿರುವ ಸೂಕ್ಷ್ಮತೆಗಳನ್ನು ಇಂಟರ್ನೆಟ್ ಬಳಕೆದಾರರಿಗೆ ಕಲಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಹೊಸದಾಗಿ ಇಂಟರ್ನೆಟ್ ಬಳಕೆಗೆ ಮುಂದಾಗುತ್ತಿರುವ ಮಾಹಿತಿ ತಂತ್ರಜ್ಞಾನ ಪೀಳಿಗೆಗೆ ವಾಸ್ತವತೆಯ ಅರಿವುಂಟು ಮಾಡುವುದು, ಕಾನೂನಿನ ಕಾಲಂಗಳ ಭಾಷೆ ಕಲಿಸುವುದು, ಇಂಟರ್ನೆಟ್ ಸೇವಾದಾತರ ಪ್ರೈವಸಿ ಪಾಲಿಸಿಗಳನ್ನು ಓದುವ ಅಭ್ಯಾಸ ಬೆಳೆಸುವುದು ಇಂತಹ ಅನೇಕ ಕೆಲಸಗಳು ಪ್ರಾಥಮಿಕ ಕಲಿಕೆಗಳ ಪಟ್ಟಿಯಲ್ಲಿ ಇರಬೇಕಾದ ಅಂಶಗಳು.

ನಮ್ಮ ನಾಯಕರುಗಳಂತೆ, ಇಂಟರ್ನೆಟ್‌ನ ಸಮುದಾಯ, ಗುಂಪು ಇತ್ಯಾದಿಗಳನ್ನು ಕಟ್ಟುವ ಜನಸಾಮಾನ್ಯರು ಇಲ್ಲಿ ಸಮಾನ ಮನಸ್ಕರ ಸಮುದಾಯ ರೂಪಿಸುವಲ್ಲಿ ಶ್ರಮಿಸುವಾಗ, ಮಾನವೀಯ ಸೂಕ್ಷ್ಮತೆಗಳ ಬಗ್ಗೆ, ಪ್ರಾಥಮಿಕ ಶಿಕ್ಷಣದ ಬಗ್ಗೆ ಎಷ್ಟು ಗಮನವಿರಿಸುತ್ತಾರೆ ಎಂಬುದು ಮತ್ತೊಂದು ಪ್ರಶ್ನೆ. ಇದು ಸೇವಾದಾತರ ಜವಾಬ್ದಾರಿಗೆ ಸೇರಬೇಕು ಎಂಬುದು ನನ್ನ ವಾದ.

ಮುಂದುವರಿಯುವುದು… ‍

‍ಲೇಖಕರು ಓಂಶಿವಪ್ರಕಾಶ್

December 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: