ಭಾಷೆಯ ಪ್ಯೂರಿಸ್ಟ್ ಗಳು ಲ್ಯಾಟಿನಿಗೆ ಗುಲಾಮರೇ…

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ  ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ

|ಕಳೆದ ಸಂಚಿಕೆಯಿಂದ|

ಬಿಲ್ ಕೊಟ್ಟು ಆಚೆ ಬರೋ ಅಷ್ಟರಲ್ಲಿ ಗೋಡೆಯ ಮೇಲೆ “ಇಂಡಿಪೆಂಡೆಂನ್ಸಿಯಾ” ಎಂದು ಬರೆದಿದ್ದರು. “ನಾವು ಹೋಗೋ ಮುಂಚೆ ಇದು ಇರಲ್ಲಿಲ್ಲ ಅಲ್ವಾ ಎಲೆನಾ, ಇದೇನು ಇಷ್ಟು ಬೇಗ ಬರೆದು ಬಿಟ್ಟಿದ್ದಾರೆ” ಎಂದು ಚಕಿತಳಾಗಿ ಹುಡುಗಿ ಅದನ್ನ ಮುಟ್ಟೋದಕ್ಕೆ ಹೋದಳು. “ತಡಿ ತಡಿ ಹಾಗೆಲ್ಲಾ ಮಾಡಬೇಡ ಇದನ್ನ ಯಾರು ಬರೆದಿದ್ದಾರೋ ನೋಡಬೇಕು ನಮ್ಮವರೇ ಯಾವಾಗಲೂ ಬರೆಯೋದಿಲ್ಲ ಬೇರೆಯವರೂ ಬರೆದು ನಮ್ಮ ಹೆಸರಿಗೆ ಹಾಕಿ ಆಮೇಲೆ ಪೊಲೀಸರಿಂದ ಒದೆ ತಿನ್ನುವ ಹಾಗೆ ಆಗುತ್ತದೆ” ಎಂದು ಅಂದಳು.

ಇದು ಕೋತಿ ಮೇಕೆ ಮೂತಿಗೆ ಮೊಸರು ಬಳಿದ ಕಥೆ ಎಂದು ಅಂದುಕೊಂಡು “ಇಂತಹ ರಾಜಕೀಯವೆಲ್ಲಾ ಆಗುತ್ತಾ” ಎಂದು ಕೇಳಿದಳು ಹುಡುಗಿ. “ಅಯ್ಯೋ ಏನು ಕೇಳುತ್ತೀಯಾ ಇದು ಹೀಗೆ ಇಲ್ಲೆಲ್ಲಾ ನಮ್ಮ ಹೋರಾಟ ಎಂದು ಚೆಂದಾ ಎತ್ತಿ ಪಾರ್ಟಿ ಮಾಡಿದ ಜನರನ್ನ ಸಹ ನಾನು ತೋರಿಸುತ್ತೇನೆ ಸುಮ್ಮನಿರು” ಎಂದು ಅಂದಾಗ ಎಲೆನಾ ಇವರ ರಾಜಕೀಯವೂ ನಮ್ಮ ಹಾಗೆ ಇದೆ ಎಂದು ನಕ್ಕು ಸುಸ್ತಾದಳು.

“ಏನ್ ನಗ್ತಿದೀಯ, ನಮ್ಮ ಹೋರಾಟ ನಿನಗೆ ಜೋಕಾ?” ಎಂದು ಕೋಪದಿಂದಲೇ ಕೇಳಿದಳು ಎಲೆನಾ. “ಇಲ್ಲಪ್ಪ ಇಲ್ಲಪ್ಪ ಖಂಡಿತಾ ಇಲ್ಲ ನಿನ್ನ ದೇಶದಲ್ಲಿ ನಾನು ನಿನ್ನ ಹೋರಾಟವನ್ನ ಜೋಕ್ ಮಾಡುತ್ತೀನಾ? ಅಷ್ಟೇ ಆಮೇಲೆ ನನ್ನನ್ನ ರಾಜದ್ರೋಹದ ಅಡಿಯಲ್ಲಿ ನೀನು ನನ್ನನ್ನ ಬಂಧಿಸಲೂಬಹುದು” ಎಂದು ಹುಡುಗಿ ಅಲ್ಲೂ ಒಂದು ಜೋಕ್ ಮಾಡಲು ಹೋದಳು. ಅದು ಯಾವ ಲೆವೆಲ್ಲಿಗೂ ವರ್ಕ್ ಆಗಲಿಲ್ಲ. “ಮುಂದಿನ ಮಹಿಳಾ ಸ್ಟ್ಯಾಂಡಪ್ ಕಮೀಡಿಯನ್” ಬಿರುದು ಅವಳ ಜೀವನದಲ್ಲಿ ಮತ್ತೆ ಬರೋದಕ್ಕೆ ಸಾಧ್ಯವೇ ಇಲ್ಲ ಎಂದು ಅರಿವಾಯಿತು. ಹಾಗಿದ್ದರೂ ಎಲೆನಾ “ಬಾ ಅದೇನು ನೋಡಿಕೊಂಡು ಬರೋಣ” ಎಂದು ಹುಡುಗಿಯನ್ನು ಎಳೆದುಕೊಂಡು ಹೋದಳು.

“ನಂಗೊಂದು ಪ್ರಶ್ನೆ ಇದೆ, ನೀವು ಯಾಕೆ ಕತಲಾನ್ ಲಿಪಿಯನ್ನು ಅಭಿವೃದ್ಧಿ ಪಡಿಸಲ್ಲಿಲ್ಲ? ಅಷ್ಟು ವರ್ಷ ಹಳೆಯ ಭಾಷೆಗೆ ಮುಂಚಿಂದಾನೂ ಲಿಪಿ ಇಲ್ಲದಿದ್ದರೂ ಅಂತಹ ಕೆಲಸ ಮಾಡಬೇಕಿತ್ತಪ್ಪ. ನಮ್ಮ ದೇಶದಲ್ಲಿ ಲಿಪಿ ಇಲ್ಲದ ಭಾಷೆಗಳಿಗೆ ಅಂಥದ್ದನ್ನು ಮಾಡುವ ಹುಮ್ಮಸ್ಸು ಕೂಡ ಯುವಜನತೆಗೆ ಬಂದಿದೆ. ಲಾಟಿನ್ ಇಂದ ಎರವಲು ಪಡೆದುಕೊಂಡೇ ಯಾಕಿದ್ದೀರಿ. ಏನೋ ನಾಲ್ಕೈದು ಅಕ್ಷರಗಳನ್ನ ನಿಮ್ಮ ಉಚ್ಛಾರಣೆಗೆ ಬದಲಾಯಿಸಿಕೊಂಡಿದ್ದೀರ ಹೊರತಾಗಿ ನನ್ನಂತಹ ಮಾಜಿ ಬ್ರಿಟಿಷ್ ವಸಾಹತುಶಾಹಿಯ ದೇಶದಿಂದ ಬಂದವಳಿಗೆ ಇದು ಇಂಗ್ಲಿಷೆಂದೇ ಅನಿಸುತ್ತದೆ.

ನಾವು ಕನ್ನಡದೋರು ನೋಡು ಕನ್ನಡ ಲಿಪಿಯನ್ನೂ ಹೊಸ ಹುಡುಗ ಹುಡುಗಿಯರಿಗೆ ಆನ್‌ಲೈನ್‌ನಲ್ಲಿ ಹೇಳಿಕೊಡುತ್ತೇವೆ. ನೀವುಗಳು ಅಂತದೆಲ್ಲಾ ಮಾಡಬೇಕು. ಮೊದಲನೆಯದಾಗಿ ನೋಡಿದ ತಕ್ಷಣ ನಿಮ್ಮ ಭಾಷೆಯೆಂದು ಗೊತ್ತಾಗಬೇಕು. ನನಗೆ ನಿಮ್ಮ ಭಾಷೆ, ಸ್ಪಾನಿಷ್, ಜರ್ಮನ್ ಎಲ್ಲವೂ ಓದೋದಕ್ಕೆ ಸಾಧ್ಯ ಯಾಕೆಂದರೆ ನೀವೆಲ್ಲಾ ಲ್ಯಾಟಿನಿಂದ ಎರವಲು ಪಡೆದವರು. ಇಷ್ಟಿಷ್ಟು ವರ್ಷ ಇತಿಹಾಸ ಹೊಂದಿರುವ ಭಾಷೆಗೆ ನೀವು ಇಷ್ಟೂ ಮಾಡದಿದ್ದರೆ ಹೇಗೆ?” ಎಂದು ಹುಡುಗಿ ದೊಡ್ಡ ಭಾಷಣ ಕೊಡಲು ಶುರುಮಾಡಿದಳು. ಹಾಗೆ ನೋಡಿದರೆ ಯುರೋಪಿಯನ್ ಭಾಷೆಗಳು ಅರ್ಧ ಗ್ರೀಕ್, ಇನ್ನರ್ಧ ಲ್ಯಾಟಿನಿಂದಲೇ ಅಭಿವೃದ್ಧಿಯಾಗಿದ್ದು.

ಅವರವರ ಲಿಪಿ ಸುಧಾರಣೆಗೆ ಅಷ್ಟೇನೂ ಕಷ್ಟ ಪಡಲ್ಲಿಲ್ಲ. ಅವರ ಭಾಷಿಕರು ಢಾಳಾಗಿ ಇರುವ ಕಾರಣ ಅವರ ಸೈನ್ಸು, ಟೆಕ್ನಾಲಜಿ ಪೂರ್ತಿ ಅವರ ಭಾಷೆಯಲ್ಲಿಯೇ ಇರುವ ಕಾರಣ ಭಾಷೆ ಮಾತಾಡುವರ ಅಥವಾ ಓದುವವರ ಸಂಖ್ಯೆ ಏನು ಇಳಿಮುಖವಾಗಿಲ್ಲ. ಅವರ ಪ್ರಾಥಮಿಕ ಹಂತದ ಶಿಕ್ಷಣವೆಲ್ಲವೂ ಅವರ ಭಾಷೆಯಲ್ಲಿಯೇ ಇರುವ ಕಾರಣ ಮಕ್ಕಳೂ ಕಲಿಯುತ್ತಿದ್ದಾರೆ ಆದರೆ ಹೀಗೆ ಫೆಡರಲಿಸಮ್ ಅನ್ನುವ ವಿಷಯಕ್ಕೆ ಬಂದು ಬೇರೆ ದೇಶ ಎಂದು ಮಾಡುವ ಹೋರಾಟದಲ್ಲಿ , “ನಮ್ಮದೂ ನಮ್ಮದು ಇದು ಒರಿಜಿನಲ್” ಅನ್ನೋ ವ್ಯಸನಕ್ಕೆ ಬಿದ್ದ ಹೋರಾಟಗಾರರಿಗೆ ಲಿಪಿ ಸುಧಾರಣೆ ತಲೆಗೆ ಹತ್ತಲೇ ಇಲ್ಲ.

ಹೊಸಬರೆಲ್ಲಾ ಬರಿ ಇದೇ ಪ್ರಶ್ನೆ ಕೇಳಿ ಕೇಳಿ ಇವರಿಗೆ ಇದರ ಬಗ್ಗೆ ಆಲೋಚನೆ ಬಂದಿರೋದು. ಆದರೆ ತುಂಬಾ ವರ್ಷ ಹೀಗೆ ಇದ್ದಿದ್ದರಿಂದ ಭಾಷೆಯ ಪ್ಯೂರಿಸ್ಟ್ ಗಳು ಈಗಲೂ ಲ್ಯಾಟಿನಿಗೆ ಗುಲಾಮರೇ. ಅವರಿಗೆ ಲಿಪಿ ಸುಧಾರಣೆ ಎಂದಾಕ್ಷಣ ಹೋರಾಟವನ್ನು ಬಿಟ್ಟು ಹೋಗುವ ಲಕ್ಷಣ ತುಂಬಾ ಇತ್ತು. ಆ ಭಯ ಈಗಿನ ಪೀಳಿಗೆಯ ಹೋರಾಟಗಾರರಿಗೆ ಇದ್ದಿದ್ದೆ. ಅದಕ್ಕೆ ಇಂತದ್ದನ್ನ ಅವರು ಜಾಸ್ತಿ ಮಾತಾಡುತ್ತಿರಲ್ಲಿಲ್ಲ. ಹೊರಗಿಂದ ಬಂದ ಹುಡುಗಿಯಂತವರು ಅವಳನ್ನು ಕೆಣಕಿದ ಹಾಗೆ ವಿರೋಧ ಪಕ್ಷದವರೂ ತಲೆ ತಿನ್ನುತ್ತಿದ್ದರು.

ಕತಲಾನ್ ರೈಟ್ ವಿಂಗ್ ಲಿಪಿ ಸುಧಾರಣೆ ಮಾಡಿದರೆ ಹೋರಾಟಕ್ಕೆ ಬೆಂಬಲವನ್ನೇ ಕೊಡೋದಿಲ್ಲ ಎಂದೆಲ್ಲಾ ಇವರಿಗೆ ಪತ್ರ ಬರೆದಿತ್ತು. ಹುಡುಗಿ ಇವನ್ನೆಲ್ಲಾ ಪೇಪರ್ ಓದಿ ತಿಳಿದುಕೊಂಡಿದ್ದಳು. ಆದರೂ ಎಲೆನಾಗೆ ಸ್ವಲ್ಪ ತಲೆ ತಿನ್ನೋಣ ಎಂದೇ ಇವನ್ನೆಲ್ಲಾ ಕೇಳುತ್ತಿದ್ದಳು.

“ಹಾಗೇನಿಲ್ಲ ನಾವೂ ಕೆಲಸ ಮಾಡಿದ್ದೇವೆ, 1909ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಕತಲಾನ್ ಮೊದಲ ಕಾಂಗ್ರೆಸಿನಲ್ಲಿ ಲಿಪಿ ಹೇಗಿರಬೇಕು ಎಂದು ಚರ್ಚೆ ಮಾಡಿಯೇ ಇದನ್ನು ಅನುಮೋದಿಸಿರುವುದು” ಎಂದು ಹೇಳಿದಾಗ ಗಂಡು ಮಕ್ಕಳು ನಯಾ ಪೈಸೆ ಕೆಲಸ ಮಾಡದಿದ್ದರೂ ಅಮ್ಮಂದಿರು ಒಪ್ಪಿಟ್ಟುಕೊಳ್ಳುವ ಹಾಗೆ ಹೇಳಿದ ಥರಹ ಭಾಸವಾಯಿತು. ಯಾವುದರ ಬಗ್ಗೆಯಾದರೂ ಒಂದು ಮಿತಿಗಿಂತ ಜಾಸ್ತಿ ಲವ್ ಆದರೆ ಅದು ಕುರುಡು ಪ್ರೇಮ ಆಗತ್ತೆ ಎಂಬುದಕ್ಕೆ ಉದಾಹರಣೆ ಇಲ್ಲಿ ಇತ್ತು.

“ನಾನೊಂದು ಕಥೆ ಹೇಳಬೇಕು, ನೀನು ಮಹಾಭಾರತದ ಬಗ್ಗೆ ಕೇಳಿದೆಯಾ?” ಎಂದು ಹುಡುಗಿ ಕೇಳಿದಳು, “ಯೆಸ್ ಯೆಸ್ ವಾರ್ ಕಥೆ ತಾನೆ, ಗೊತ್ತು” ಎಂದಳು ಎಲೆನಾ. “ಆದರೆ ನನಗೆ ಈ ಉದ್ದ ಕಥೆ ಬೇಡ, ಯು ನೋ ನೀನು ನನ್ನ ದೇಶಕ್ಕೆ ಬಂದಿರೋದರಿಂದ ನನ್ನ ದೇಶದ ಕಥೆ ಕೇಳು ಸಾಕು” ಎಂದಳು. “ಇಲ್ಲ ನಾನು ಧೃತರಾಷ್ಟ್ರ ಪ್ರೇಮ ಅನ್ನುವ ಬಗ್ಗೆ ನಿನಗೆ ಹೇಳೋದರಲ್ಲಿ ಇದ್ದೆ. ಅದನ್ನ ಹೇಳಬೇಕಾಗಿತ್ತು ಎನಿವೇ ಬಿಡು ನಾವು ಹೇರಿಕೆ ಮಾಡುವ ಮಂದಿ ಅಲ್ಲ” ಎಂದು ಹುಡುಗಿ ಮತ್ತಷ್ಟೂ ಕೆಣಕಿದಳು.

“ಏನ್ ಹಾಗೆಂದ್ರೆ ಏನು? ನಾವು ಹೇರಿಕೆ ಮಾಡ್ತೀವಾ, ಹೇಳು ಕಥೆ ಅದೇನ್ ಹೇಳ್ತಿಯೋ, ನಮ್ಮಷ್ಟು ಉದಾರಿಗಳು ಯಾರಿಲ್ಲ” ಎಂದು ಎಲೆನಾ ಕೋಪಗೊಂಡೇ ಹೇಳಿದಳು. “ಅಲ್ಲ ಆ ಥರಹ ಕೋಪಮಾಡಿಕೊಂಡೇನೂ ಕೇಳಬೇಕಾಗಿಲ್ಲ, ಸಮ್ಮರಿ ಏನೆಂದರೆ ಆ ರಾಜನಿಗೆ ಧರ್ಮ ಮತ್ತು ಮಕ್ಕಳ ಮೇಲಿನ ಪ್ರೀತಿಯ ಆಯ್ಕೆ ಇತ್ತು ಅವನ ಕುರುಡು ಪ್ರೀತಿ ಮಕ್ಕಳ ಮೇಲೆ ಇದ್ದ ಕಾರಣ ಅವನು ಅವರನ್ನ ಬೆಂಬಲಿಸಿದ, ಸರಿ ತಪ್ಪನ್ನು ಆಲೋಚನೆಯನ್ನೇ ಮಾಡಲ್ಲಿಲ್ಲ, ಅವನು ಬರಿ ಮಕ್ಕಳ ಪ್ರೀತಿಗೆ ಜೋತು ಬಿದ್ದ” ಎಂದಳು ಹುಡುಗಿ.

“ಆಮೇಲೇನಾಯಿತು?” ಎಂದು ಕೇಳಿದಳು ಎಲೆನಾ, “ಏನಿಲ್ಲ ಮಕ್ಕಳೆಲ್ಲಾ ಯುದ್ಧದಲ್ಲಿ ಸತ್ತರು” ಎಂದು ಕೂಲಾಗಿ ಹೇಳಿದಳು ಹುಡುಗಿ. “ಸೋ ನೀನೇನು ಹೇಳುತ್ತಿದ್ದೀಯಾ, ನಾನು ಸಾಯ್ತೀನಿ ಅಂತಾನಾ?” ಎಂದು ಕೋಪ ಮಾಡಿಕೊಂಡೇ ಹೇಳಿದಳು ಹುಡುಗಿ. “ನೀನ್ಯಾಕೆ ಸಾಯುತ್ತೀಯಾ? ಕುರುಡು ಪ್ರೀತಿಯಿದ್ದವರು ಅವರು ಪ್ರೀತಿಸುವವರನ್ನು ಕಳೆದುಕೊಳ್ಳುತ್ತಾರೆ ತಾವೇನು ಆ ಪ್ರಾಸೆಸಿನಲ್ಲಿ ಸಾಯಲ್ಲ ಬಿಡು” ಎಂದು ಹುಡುಗಿ ಹೇಳಿದಾಗ ಎಲೆನಾಗೆ ಇವಳ ಸರ್ಕಾಸಮ್ ಆರ್ಥವಾಯಿತು.

“ವಾಟೆವರ್, ಸೀ 1931ರಲ್ಲಿ ನೊರ್ಮಾಸ್ ಅರ್ಥಾಗ್ರಾಫೀಸ್ ಎಂಬ ಪುಸ್ತಕವನ್ನ ಮರಿಯಾ ಅಲ್ಕೋವೆರ್ ಮತ್ತು ಪಾಂಪೆ ಫಾಬ್ರಾ ಪ್ರಕಟ ಮಾಡಿದ್ದಾರೆ. ಇದು ರೊಮ್ಯಾನ್ಸ್ ಲ್ಯಾಂಗ್ವೇಜ್.. ಬಾ ಲೈಬ್ರರಿಗೆ ಹೋಗೋಣ ಅಲ್ಲಿ ಆ ಬುಕ್ ತೋರಿಸುತ್ತೇನೆ, ನಿನ್ನ ಕೊಬ್ಬೆಲ್ಲಾ ಇಳಿಸುತ್ತೇನೆ” ಎಂದು ಕೈಹಿಡಿದು ಧರಧರ ಕರೆದುಕೊಂಡು ಹೋದಳು ಎಲೆನಾ…

|ಮುಂದಿನ ಸಂಚಿಕೆಯಲ್ಲಿ |

December 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: