ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮು ಮತ್ತು ನೆರಳು….

-ಪಿ ಎಸ್ ಅಮರದೀಪ್

ಅಮ್ಮು..

ಆಕೆಯನ್ನು ಅವಳ ಗಂಡ ಕರೆಯುತ್ತಿದ್ದುದೇ ಹಾಗೆ.   

ಆಕೆಗೆ ದೊಡ್ಡದಾದ ಅಡುಗೆ ಮನೆ ಇಷ್ಟ.  ದೊಡ್ಡದಾದ ಎಲ್ ಶೇಪಿನ ಕಟ್ಟೆ ಪಕ್ಕದಲ್ಲೇ ಫ್ರಿಡ್ಜ್, ಕಟ್ಟೆಯ ಈ ತುದಿಗೆ ವಾಷಿಂಗ್ ಸಿಂಕ್, ಆ ತುದಿಗೆ ಮಿಕ್ಸರ್ ಜಾಗ,  ಕಟ್ಟೆ ಎದುರಿಗೆ ಸಾಲು ಸಾಲು ಡಬ್ಬಗಳಿಡಲು ಶೆಲ್ಫ್,  ತಕ್ಷಣ ಕಣ್ಣಿಗೆ ಬೀಳುವಂಥ ಪಾರದರ್ಶಕ ಗಾಜಿನ ಜಾರಿನಲ್ಲಿ ದಿನಸಿ ಸಾಮಾನು. ನಡುವೆ ಗಿರ್ ಅಂತ ತಿರುಗುತ್ತಾ ಕುಣಿಯಲು ಜಾಗ.  ಅಗೋ ದೇವರ ಮನೆಯಲ್ಲಿ ಪ್ರಶಾಂತವಾಗಿ ಕೂತು ಪೂಜೆಗೆ ಕೂತರೆ ಸಮಾಧಾನ ತರುವಂಥ ಹಾಲು ಬಣ್ಣದ ಗ್ರಾನೈಟ್ ಕಟ್ಟೆ, ಮೇಲೆ ತುಳುಕುವಷ್ಟು ಅಲ್ಲದಿದ್ದರೂ ಇಷ್ಟದ ದೇವಾನುದೇವತೆಗಳ ಫೋಟೋಗಳು,  ಜೊತೆಗೆ ಕೈಹಿಡಿದು ಆರತಿ ಬೆಳಗಲು ನಿಲ್ಲುವಷ್ಟು, ಮುತ್ತೈದೆಯರಿಗೆ ಕೂಡಿಸಿ ಕುಂಕುಮ ಕೊಡುವಷ್ಟು ಮಟ್ಟಸವಾದ ಜಾಗ ಹೀಗೆ.

ಇನ್ನು ಪಡಸಾಲೆ, ಬೆಡ್ ರೂಮಿನಲ್ಲಿ ಆಡಂಬರವೆನಿಸದ ಆದರೆ ಆಕರ್ಷಕ ನಿಸರ್ಗದ ಚಿತ್ರಗಳಿರಬೇಕು.  ಅಂಗಳವೆಂದರೆ ಅದು ಬರೀ ಅಂಗಳವಲ್ಲ, ವಿಧ ವಿಧ ಸಸಿಗಳನ್ನು, ಹೂವಿನ ಗಿಡಗಳನ್ನು ನೆಡಬೇಕು.  ಅದಕ್ಕೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಗೆ ಪೈಪ್ ಹಿಡಿದ ನೀರು ಬಿಡುತ್ತಾ, “ಹೂವು ಚೆಲುವೆಲ್ಲಾ ನಂದೆಂದಿತು….” ಹಾಡು ಗುನುಗುತ್ತಿರಬೇಕು.  ಅಯ್ಯೋ ಬಿಡಿ, ಹೇಳುತ್ತಾ  ಸಾಗಿದರೆ ಎರಡು ಪುಟದಷ್ಟಾದೀತು.

ಒಪ್ಪಿಗೆಯಿಂದಲೇ ಮದುವೆಯಾದ ಮುದ್ದುಗುಮ್ಮನೇ ಗಂಡ.   ಏನು ಮಾಡೋದು? ಸ್ವಂತ ಮನೆಯೆಂಬುದೇ ಇದ್ದಿಲ್ಲ.  ಜಾತ್ರೆಗೆ ಪಾತ್ರೆ ಸಾಮಾನು ಮಾರಲು ಬಂದು ಜಾತ್ರೆ ನಂತರ ಗಂಟು ಕಟ್ಟುವಂತೆ ಆಗಾಗ  ಖಾಲಿ ಮಾಡುತ್ತಿರಬೇಕಾದ ಬಾಡಿಗೆ ಮನೆಗಳೇ ಆಕೆಗೆ ಒಪ್ಪ ಮಾಡಲು ಸಿಕ್ಕಿದ್ದು.  ಅದರಲ್ಲೂ ಅದೆಷ್ಟು ಬಾಡಿಗೆ ಮನೆಗಳನ್ನು ಬದಲಾಯಿಸಿದರೂ ಪಡಸಾಲೆ, ಬೆಡ್ ರೂಮು ಬಿಡಿ.  ಇಷ್ಟದ ದೊಡ್ಡ ಅಡುಗೆ ಮನೆ ಹಾಗೂ ಗಿಡ ನೆಡುವಂಥ ಅಂಗಳವಿರುವ ಬಾಡಿಗೆ ಮನೆಗಳೇ ಸಿಗಲಿಲ್ಲ;  ಸ್ವಂತ ಮನೆ ಕಾಣುವವರೆಗೂ.  ಸ್ವಂತ ಮನೆಗೆ ಬಂದ ಮೇಲಾದರೂ ದೊಡ್ಡದಿತ್ತಾ ಅಡುಗೆ ಮನೆ? ಊಹೂಂ, ಅಲ್ಲೂ ಸಿಗಲಿಲ್ಲ.  ಇದ್ದುದರಲ್ಲೇ ತಟುಗು ಕಾಂಪೌಂಡಿನೊಳಗೆ, ಮನೆ ಮುಂದೆ  ಹಾಗೂ ಮಾಳಿಗೆ ಮೇಲೆ ಹತ್ತು ಹಲವು ಸಸಿಗಳನ್ನು ನೆಟ್ಟು ಮಣ್ಣು ಗೊಬ್ಬರ ಹಾಕಿ ಬಗೆ ಬಗೆಯ ಹೂವು, ಪೇರಲ ಹಣ್ಣು, ಸೊಪ್ಪು, ತುಪ್ಪರಿ ಈರೇಕಾಯಿ ಬಳ್ಳಿ, ಮೆಣಸಿನಕಾಯಿ ಹೀಗೆ ಏನೇನೋ ಅನ್ವೇಷಣೆಯಲ್ಲಿ ತೊಡಗಲು ಅವಕಾಶವಂತೂ ಸಿಕ್ತು.

ಅದೊಂದು ಬಾಡಿಗೆ ಮನೆಗೆ  ಪ್ರವೇಶಿಸುತ್ತಿದ್ದಂತೆ ಮನೆ ಮಾಲೀಕ; “ಈ ಮನೆಗೆ ಬಾಡಿಗೆ ಬಂದವರೆಲ್ಲಾ ಸ್ವಂತ ಮನೆ ಮಾಡಿಕೊಂಡೇ ಮನೆ ಖಾಲಿ ಮಾಡಿದ್ದಾರೆ.  ನಿಮಗೂ ಒಂದು ಸ್ವಂತ ಸೂರು ಆದಷ್ಟು ಬೇಗ  ಸಿಗಲಿ” ಅಂದರು.   ಆ ಮನೆಯಲ್ಲೇ  ಮಕ್ಕಳು ದೊಡ್ಡವಾದವು, ಜಾಣರಾದವು, ಗಂಡನ ಪ್ರತಿಭೆ ಗುರುತಿಸಿ ದಿನಪತ್ರಿಕೆಯಲ್ಲಿ ಹೆಸರು ಬಂದಿತು.   ಸ್ವಂತ ಮನೆಯ ಆಸೆಯೂ ಟ್ರಿಗರ್ ಆಗುತ್ತಿತ್ತು.  ಅಲ್ಲೂ ಅಡುಗೆ ಮನೆಯೆಂಬುದು ಗುಬ್ಬಚ್ಚಿ ಗೂಡೇ ಸರಿ.  ಆದರೇನಂತೆ ಮನೆ ಮಾಲಿಕರು ಅವನ ಪತ್ನಿ  ಮಕ್ಕಳು, ಎದುರು ಮನೆ, ಅಕ್ಕಪಕ್ಕದವರು ಎಲ್ಲಾ ಗಲಗಲಿಸಿ ನಕ್ಕು ಮಾತಾಡುವಂಥವರೇ ಇದ್ದರು.  ಹಾಗಾಗಿ ಅಡುಗೆ ಮನೆಯೆಂಬುದು ಕೊರತೆಯಾಗಿ ಹೆಚ್ಚು ಕಾಡಲಿಲ್ಲ ಅಮ್ಮುಗೆ.

ಗಂಡನ ಬಗ್ಗೆ ಹೇಳದಿದ್ದರೆ ಹೇಗೆ? ಪ್ರೀತಿಸಿ ಮದುವೆಯಾಗಿದ್ದರೂ ಇಷ್ಟು ಅಂಟಿಕೊಂಡಿರುತ್ತಿದ್ದಿಲ್ಲ, ಅಂಥ ಕಡು ವ್ಯಾಮೋಹಿ.  ಅಂಥವರಿಗೆ ಹೇಳಿ ಮಾಡಿಸಿದಂತೆ ಅಮ್ಮೂನಂಥ ಹೊಳಪಿನ ಅಪ್ಪನ ಹೋಲಿಕೆಯ ಮತ್ತು ಅಪ್ಪನ ಗೋದಿ ಬಣ್ಣದ ಅಮ್ಮನ ಪಡಿಯಚ್ಚಿನಂಥ ಇಬ್ಬರು ಗಂಡು ಮಕ್ಕಳು. 

ಗಂಡ ಆಫೀಸಿಗೆ ಮತ್ತು ಮಕ್ಕಳು ಶಾಲೆಗೆ ಹೋದ ನಂತರ ಅಮ್ಮೂ ದಿನನಿತ್ಯದ ಕೆಲಸಗಳ ಜೊತೆಗೆ ತನ್ನ ಕಸೂತಿ ಕೆಲಸ ಮಾಡುತ್ತಲೇ ಹಿಂದೆ ಮೊದಲ ಬಸುರಿಯಾಗಿದ್ದಾಗ ಮೊದಲನೆಯದು ಹೆಣ್ಣಾದರೆ ಇರಲೆಂದು ರಾಶಿ ರಾಶಿ ಡ್ರೆಸ್ ಹೊಲೆದಿಟ್ಟದ್ದನ್ನು ನೆನೆಸಿಕೊಳ್ಳುವುದು  ಅದೆಷ್ಟನೇ ಬಾರಿಯೋ?.   ಪ್ಚ್.. ಅಂದು ಮುಗಿಸುತ್ತಿದ್ದಳು.   ಯಾರಾದರೂ ಪರಿಚಯಸ್ಥ ಬಸುರಿ ಹೆಂಗಸರು ಕಂಡರೆ ಸಾಕು; “ಹೆಣ್ ಹಡಿಯೇ ಮಾರಾಯ್ತಿ… ನಾನು ಹೊಲಿದ ಅಷ್ಟೂ ಡ್ರೆಸ್ ಹಾಕಿ, ನೋಡಿ ಖುಷಿ ಪಡ್ತೀನಿ” ಅನ್ನುತ್ತಿದ್ದಳು. 

ಅಂಥ ಅಮ್ಮೂ ಅದೊಮ್ಮೆ ಹೊಸದಾಗಿ ಬಂದಿದ್ದ ಎದುರು ಮನೆಯ ಬ್ಯಾಂಕ್ ಉದ್ಯೋಗಿ ಮಹಿಳೆಯ  ಎರಡು ವರ್ಷದ ಮಗಳನ್ನು ಮನಸಾರೆ ಮನೆಗೆ ಎತ್ತಿಕೊಂಡು ಬಂದು ತಾನು ಹೊಲಿದ ಒಂದೊಂದು ಡ್ರೆಸ್ಸನ್ನು ಹಾಕಿ ನೋಡಿ ಖುಷಿಪಟ್ಟಿದ್ದಲ್ಲದೇ “ ನೋಡ್ರಿ, ಈ ಡ್ರೆಸ್ ಕಂದನಿಗೆ ಎಷ್ಟ್ ಚೆಂದ ಕಾಣ್ತದೆ” ಅಂದು ಬಟ್ಟೆಗಳ ಸಮೇತ ಕಂದನನ್ನು ದೃಷ್ಟಿ ತೆಗೆದು ಕಳುಹಿಸಿಕೊಟ್ಟಿದ್ದಳು.   

ಅದೇನಾಯ್ತೋ ಏನೋ, ಆ ರಾತ್ರಿ ಆ ಕೂಸು ಏರು ಜ್ವರ ಬಂದು ಶುರು ಮಾಡಿದ ಅಳು ನಿಲ್ಲಿಸಲೇ ಇಲ್ಲದ್ದಕ್ಕೆ  ಮರುದಿನ ಮಹಿಳೆ ಆ ಕಂದನನ್ನು ಅಮ್ಮೂಗೆ ಮುಟ್ಟಲೂ ಬಿಡಲಿಲ್ಲ. ಆ ದಿನದಲ್ಲಿ ವಿಚಿತ್ರ ತೊಳಲಾಟದಲ್ಲಿದ್ದ ಆ ಮಹಿಳೆಯ ಹೊಟ್ಟೆಯಲ್ಲಿ ಆಗಲೇ ಮತ್ತೊಂದು ಭ್ರೂಣ ಕದಲುತ್ತಿತ್ತು. ಅದನ್ನು ಬಹಿರಂಗಪಡಿಸಿರಲಿಲ್ಲವಷ್ಟೇ.  

ಅವತ್ತಿಂದ ಅಮ್ಮೂ ಬೇರೆಯವರ ಮಕ್ಕಳನ್ನು ಮುಟ್ಟಿ, ಮುದ್ದು ಮಾಡಿ ಮಾತಾಡಿಸುವುದನ್ನೇ ಬಿಟ್ಟಳು.   ಗಂಡನ ಮುಂದಲ್ಲದೇ ಇನ್ಯಾರಲ್ಲೂ ಅದನ್ನು ಹೇಳಿದ್ದಿಲ್ಲ.  ಗಂಡ ನೋಡಲು ಒರಟನಾದರೂ ಭಾವುಕ ಜೀವಿ.  ಸುಮ್ಮನೇ ಆಮ್ಮೂಗೆ ಸಮಾಧಾನ ಮಾಡುತ್ತಿದ್ದ.  ತಮ್ಮ ಮಕ್ಕಳೇ ಸಾಕು ಮುದ್ದು ಮಾಡಲು, ದೃಷ್ಟಿ ತೆಗೆಯಲು, ಆಗಾಗ ಗಂಡ ರೇಗಿಸಿದರೆ ಸಿಟ್ಟಲ್ಲಿ ಮಕ್ಕಳಿಗೆ ಒಂದೆರಡು ಏಟು ಹಾಕಿ ದು:ಖಪಡಲು  ಅಂತೆಲ್ಲಾ ಅಮ್ಮೂ ಚಿಗುರಾಗುತ್ತಾಳೆ.  ಇದಾಗಿ ನಾಲ್ಕೈದು ತಿಂಗಳೇ ಕಳೆದವು.

ರೂಢಿಯಂತೆ ಮೂರು ನಾಲ್ಕು ದಿನ ಗಂಡ ಕೆಲಸದ ಮೇಲೆ ಬೆಂಗಳೂರಿಗೆ ಹೋಗುವುದು, ನಾಟಕ, ಗೆಳೆಯರು ಹೀಗೆ ಮನೆಯಲ್ಲಿ ಇಲ್ಲದಾಗ ಅಮ್ಮೂ ತನ್ನಿಬ್ಬರ ಮಕ್ಕಳನ್ನು ಬೇಗ ಬೇಗ ಉಣಿಸಿ, ಹಾಸಿಗೆ ಹಾಸಿ ಸೊಳ್ಳೆ ಪರದೆ ಕಟ್ಟಿ ಅಕ್ಕ ಪಕ್ಕ ಮಲಗಿಸಿಕೊಳ್ಳುತ್ತಿದ್ದಳು.   ಆ ದಿನ ಅಮವಾಸ್ಯೆಯೂ ಅಲ್ಲ,  ಹುಣ್ಣಿಮೆಯೂ ದೂರವಿತ್ತು.  ಮಕ್ಕಳಾಗಲೇ ಮಲಗಿದ್ದರೆ ಗಂಡ ಇನ್ನು  ಎಚ್ಚರವಾಗಿದ್ದ. ಮಧ್ಯರಾತ್ರಿಗೆ ಮುನ್ನ ನೆನಪಾಗಿ ಕುದಿಸಿದ ಹಾಲನ್ನು ಫ್ರಿಡ್ಜಲ್ಲಿಡಲು ಎದ್ದು ಅಡುಗೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದರೆ ಬೀದಿ ದೀಪದ ಬೆಳಕಿನಲ್ಲಿ ಅಮ್ಮೂ ಕಂಡಂತೆ ಚಕ್ಕನೆ ಒಂದು ಚಿಕ್ಕ ಆಕೃತಿ ಅಡುಗೆ ಮನೆಯಲ್ಲಿದ್ದ ಕಿಟಕಿಯಿಂದ ಚಿಕ್ಕ ಅಡುಗೆ ಕಟ್ಟೆ ಮೇಲೆ ಚಂಗನೆ ಹಾರಿ ಬಂದು ಕುಳಿತಂಥ ನೆರಳು. 

ಅಮ್ಮೂ ಒಂದು ನಿಮಿಷ ತಟಸ್ಥಳಾಗಿ ನಿಂತು ನಂಬದಾದಳು.  

ಏನೋ ಭ್ರಮೆ ಇರಬಹುದೆಂದು ಲೈಟ್ ಹಾಕಿ  ಹಾಲನ್ನು ಫ್ರಿಡ್ಜಲ್ಲಿಟ್ಟು ಲೈಟ್ ಆಫ್ ಮಾಡುತ್ತಲೇ ಆ ಆಕೃತಿ ಕಟ್ಟೆ ಮೇಲಿಂದ ಜಿಗಿದು ತನ್ನ ಸೆರಗಿನ ಚುಂಗನ್ನು ಹಿಡಿದು ಗೋಗರೆಯುತ್ತಿರುವಂತೆ ಅಮ್ಮೂಗೆ ಭಾಸವಾಗುತ್ತದೆ.   ಹೀಗ್ಯಾಕಾಗುತ್ತಿದೆ ಅನ್ನೋದೇ ತಿಳಿಯುತ್ತಿಲ್ಲ.  ಅಲ್ಲಿಂದ ಪಡಸಾಲೆ ದಾಟಿದರೆ ಹಿಂದಿಂದೆಯೇ ಸೋತ ಹೆಜ್ಜೆಯಿಟ್ಟು ಹಿಂಬಾಲಿಸುತ್ತದೆ.  ತಿರುಗಿದರೆ ಎಲ್ಲಿ ಗದರುತ್ತಾಳೋ ಎಂಬಂತೆ ಸಜ್ಜ ಮೇಲೆ ಮುದುರಿ ಕುಳಿತುಕೊಳ್ಳುತ್ತದೆ.

ಇನ್ನು ಅಮ್ಮೂಗೆ ತಡೆಯಲಾಗಲಿಲ್ಲ. ಪಡಸಾಲೆಯಿಂದಲೇ ಗಂಡನನ್ನು ಕೂಗುತ್ತಾಳೆ; “ರೀ, ಇಲ್ ಬನ್ನಿ ಬೇಗ..”  ಗಂಡ ಬೆಡ್ ರೂಮಿನಿಂದ ಗಾಬರಿಯಿಂದ ಪಡಸಾಲೆಗೆ ಬಂದರೆ ಏನಿದೆ?  ಏನೂ ಕಾಣುತ್ತಿಲ್ಲ ಅವನಿಗೆ.  ಸುಮ್ಮನೇ ಅಮ್ಮೂನ ಕೈ ಹಿಡಿದು ತಿರುಗಿದ. ಚಿಕ್ಕ ಕೋಣೆಯಲ್ಲಿ ಕಿಟಕಿಯಿರದೇ ಸೆಖೆ ಬೇರೆ.  ಸೊಳ್ಳೆ ಕಾಟಕ್ಕೆ  ಪರದೆ ಕಟ್ಟಿದರೆ ಫ್ಯಾನ್ ಗಾಳಿ ಬಡಿಯುವುದಿಲ್ಲ. ಗೊಣಗುತ್ತಲೇ ಪರದೆಯೊಳಗೆ ಇಬ್ಬರೂ ಒಳಹೊಕ್ಕರು.  ಸ್ವಲ್ಪ ಹೊತ್ತಿಗೆ ಗಂಡ ನಿದ್ದೆಗೆ ಜಾರಿದರೆ ಅಮ್ಮೂಗೆ ಆ ನೆರಳಿನದೇ ಯೋಚನೆ; “ಯಾವುದಿದು, ನನ್ನ ಹಿಂದೆಯೇ ಯಾಕೆ ಬರ್ತಿದೆ, ನನ್ನ ಸೆರಗನ್ನೇ ಹಿಡಿದು ಗೋಗರೆಯುತ್ತೆ” ಅಂತ.  

ಅಚಾನಕ್ಕಾಗಿ ನೋಡಿದರೆ ಪರದೆ ಹೊರೆಗೆ ನಿಂತು ಅಮ್ಮೂನನ್ನು ಕೈಚಾಚಿ  ಕರೆಯುತ್ತಿದೆ.   ಅಬ್ಬಾ, ಗಂಡನನ್ನು ಎಬ್ಬಿಸಿದರೆ ಎಲ್ಲಿ ಬೈಯುತ್ತಾನೋ ಎಂದು ತಾನೇ ಪರದೆ ಸರಿಸಿ ಹೊರ ಬಂದು ಲೈಟ್ ಆನ್ ಮಾಡಿದರೆ ನೆರಳು ದು:ಖಿಸುತ್ತಾ ಸ್ಟೋರ್ ರೂಮಿನ ಕತ್ತಲೊಳಗೆ ಮಾಯ.

ಆ ರಾತ್ರಿ ಹಾಗೆ  ಕನಲುತ್ತಲೇ ನಿದ್ದೆಗೆ ಜಾರಿದಳು ಅಮ್ಮೂ.

ಮಾರನೇ ದಿನ ಬೆಳಿಗ್ಗೆ ಅಮ್ಮೂ ಅಂಗಳಕ್ಕೆ ನೀರು ಹಾಕಲೆಂದು ಹೊರ ಬಂದರೆ  ಅಕ್ಕಪಕ್ಕದ  ಮನೆಯವರೆಲ್ಲಾ ಗುಸುಗುಸು ಮಾತಾಡುತ್ತಾ ನಿಂತಿದ್ದಾರೆ. ಆಗಿದ್ದೇನೆಂದರೆ,  ಹಿಂದಿನ ದಿನ ಮಧ್ಯರಾತ್ರಿ ಎದುರು ಮನೆ ಬ್ಯಾಂಕ್ ಉದ್ಯೋಗಿ ಮಹಿಳೆಯ ಗರ್ಭದಲ್ಲಿದ್ದ ಏಳು ತಿಂಗಳ ಕೂಸು ಹೊಟ್ಟೆಯಲ್ಲೇ ತೀರಿಕೊಂಡು ತೀವ್ರ ರಕ್ತಸ್ರಾವವಾಗಿ  ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಟ್ಟೆಯಲ್ಲೇ ತೀರಿಕೊಂಡ ಕೂಸು ಹೆಣ್ಣಾಗಿತ್ತು.

ಅಮ್ಮೂ ದಿಗ್ಭ್ರಮೆಗೊಂಡು ನಿಂತೇ ಇದ್ದಳು….ಮತ್ತೀಗ ಯಾವ ನೆರಳೂ ಕಾಣುತ್ತಿಲ್ಲ…..

‍ಲೇಖಕರು Admin

3 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading