-ಮಾಲತಿ ಗೋರೆಬೈಲ್
ನಾರಾಯಣನ್ ಮನೆ ಸುಜಾತಾ ಮಗಳು ವಿಜಿ ದಣಪೆ ದಾಟವಾಗ ಸರಗೋಲು ತಾಗಿ ಅಚಿಗಿದ್ದ ತ್ವಾಟದ ಇಳಕ್ಲಿಗೆ ಬಿದ್ದಬುಟತಂತೆ…ಪಾಪ,
ಹಾಳಾಗ್ಲಿ….ಮನಿಗೆ ಬಂದು ಹೋಪವಕೆ ದಣಪೆ ಸರಗೋಲು ಸರಿ ಹಾಕಿಕ್ ಹೋಪ್ಲೆ ಗೊತ್ತಾಗ್ತಿಲ್ಲ್ಯಕ್ಕು…
ದನ- ಗಿನ ಎಲ್ಲಾ ಬಂದು ಎನ್ನ ಹೂವಿನ ಹಿತ್ಲೆಲ್ಲ ಹಾಳ್ ಮಾಡ್ಬುಡ್ತು…ಎನ್ನುವ ಗೊಣಗಾಟಗಳು ಈಗಲೂ ಮಲೆನಾಡಿನಲ್ಲಿ ಕೇಳಿಬರುತ್ತವೆ..
ಏನಿದು…ಸರಗೋಲು,ದಣಪೆ ಎಂದಿರಾ? ಉತ್ತರ ಕನ್ನಡದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿರುವ ಶಬ್ಧವಿದು.ದಣಪೆ ಎಂದರೆ ಗೇಟ್ ಎನ್ನುವ ಅರ್ಥ..ಅದನ್ನು ದಾಟಲುಬಳಸುವ ಸರಿದಾಡುವಂತಿರುವ ಕೋಲು ಸರಗೋಲು.
ಈ ದಣಪೆ ತಯಾರಾಗುತ್ತಿದ್ದುದು ಎರಡು ಮರದ ಕಂಬಗಳಿಂದ.. ನಿರ್ದಿಷ್ಟ ಅಂತರದಲ್ಲಿ ಎರಡೂ ಕಂಬಗಳನ್ನು ನಿಲ್ಲಿಸಿ ನಾಲ್ಕು ನೇರವಾಗಿರುವ ಬಿದಿರಿನ ಗಳಗಳನ್ನು ಕಂಬದ ನಡುವೆ ಕೊರೆದ ರಂಧ್ರಗಳೊಳಗೆ ಸಿಗಿಸಿ ಕೋಲುಗಳು ಸರಿದಾಡುವಂತೆ ಮಾಡುತ್ತಿದ್ದರು.ಈಗೀಗ ಸಿಮೆಂಟ್ ಕಂಬಗಳನ್ನು ನಿಲ್ಲಿಸುವುದುಂಟು..ಸರಗೋಲಿನ ಪಾತ್ರ ಹಾಗೆಯೇ ಮುಂದುವರಿದಿದೆ.ವಿಶೇಷವಾಗಿ ತೋಟ,ಗದ್ದೆ ಹಿತ್ತಲ ರಕ್ಷಣೆಗಾಗಿ ದಣಪೆ ಕಟ್ಟಿ ಸರಗೋಲು ಹಾಕಿಡುವುದು ಪದ್ಧತಿ..ಆಧುನಿಕ ವ್ಯವಸ್ಥೆಯಲ್ಲಿ ಗೇಟುಗಳು ಸುಸಜ್ಜಿತವಾಗಿ ನಿರ್ಮಾಣವಾದರೂ ಹಳ್ಳಿಗಳ ಮನೆ ಸುತ್ತ ವಿಶಾಲ ಜಾಗ ಇರುವುದರಿಂದ ಕಂಪೌಂಡ್ ನಿರ್ಮಾಣ ದುಸ್ತರವೇ ಸರಿ.ಆದ ಕಾರಣ ಈಗಲೂ ಹಳ್ಳಿಗಳಲ್ಲಿ ಜಮೀನು,ಮನೆಯ ಸುತ್ತ ತಂತಿ ಬೇಲಿ ನಿರ್ಮಿಸಿ ಗೇಟ್ ವ್ಯವಸ್ಥೆಗಾಗಿ ದಣಪೆ- ಸರಗೋಲುಗಳನ್ನೇ ನಿರ್ಮಿಸುತ್ತಿರುವುದರಿಂದ ಇವು ವಿಶೇಷ ಸ್ಥಾನ ಪಡೆದು ಮೂಲ ಸ್ವರೂಪವನ್ನು ಉಳಿಸಿಕೊಂಡಿವೆ…
ನಮ್ಮ ಬಾಲ್ಯದ ದಿನಗಳಲ್ಲಿ ಸರಗೋಲು ದಾಟುವದೂ ಒಂದು ಸರ್ಕಸ್ಸೇ ಆಗಿರುತ್ತಿತ್ತು.ಜೋರಾಗಿ ಸರಿಸಿದರೆ ಕೋಲು ಬಿದ್ದು ಸಪ್ಪಳವಾಗುತ್ತಿತ್ತು.ಅಪ್ಪಯ್ಯನಿಗೆ ಗೊತ್ತಾಗದಂತೆ ಕಾಡು,ಗುಡ್ಡ ತಿರುಗಲು ಓಡುವ ಹರಸಾಹಸ ನಡೆಯುತ್ತಿದ್ದುದೂ ಈ ಸರಗೋಲಿನ ಅಡಿಯಲ್ಲಿಯೇ…ಅತೀ ಕೆಳಗಿನ ಕೋಲಿಗೆ ಕಾಲು ತಾಗಿಸಿ ಮಧ್ಯದ ಕೋಲನ್ನು ನಿಧಾನಕ್ಕೆ ಇಳಿಬಿಟ್ಟು ಆಚೆ ದಾಟಿ ಮತ್ತೆ ಸರಗೋಲನ್ನು ಯಥಾ ಸ್ಥಾನಕ್ಕೆ ಏರಿಸಿ ಹೋಗಬೇಕಾಗುತ್ತಿತ್ತು.ಅದೆಷ್ಟೋ ಸಲ ಶಾಲಾ ಪಂದ್ಯಾಟದ ಪ್ರ್ಯಾಕ್ಟೀಸ್ ಗಾಗಿ ದಣಪೆಯ ಸರಗೋಲು
ಹೈ ಜಂಪ್ ಸ್ಟ್ಯಾಂಡ್ ಆಗಿಯೂ ಬದಲಾಗುತ್ತಿತ್ತು!!.
ಕಾಲು ಉಳುಕಿಸಿಕೊಂಡು ಅಮ್ಮನ ಕೈಲಿ ಉಗಿಸಿಕೊಂಡು ಔಷಧಿ ಹೆಚ್ಚಿಸಿಕೊಳ್ಳಬೇಕಾಗುತ್ತಿತ್ತು..ಈಗಿನ ಸೀಸಾ( ಆಡುಮಣೆ) ಆಟದ ರೀತಿಯಲ್ಲಿ ತೂಗಾಡಿ ಸರಗೋಲು ಮುರಿದು ಬಿದ್ದು ,ನಂತರದ ಪರಿಣಾಮಕ್ಕೆ ಹೆದರಿ ಓಡಿಬಿಡುತ್ತಿದ್ದೆವು!
ಅಪ್ಪಯ್ಯ ಮನೆಯಲ್ಲಿ ಇಲ್ಲದ ಸಮಯ ನೋಡಿ ನಾನು ಮತ್ತು ಅಣ್ಣ ಇಂತಹ ಕಿತಾಪತಿಗೆ ಅಣಿಯಾಗುತ್ತಿದ್ದೆವು..
ರಾತ್ರಿ ಮಲಗುವ ಮುನ್ನ ಮನೆಯ ಎದುರಿಗಿನ ದಣಪೆಯ ಸರಗೋಲು ಹಾಕಿರುವರೋ ಇಲ್ಲವೋ ಎಂದು ಪರಿಶೀಲಿಸುವುದು ಕಡ್ಡಾಯವಾಗಿತ್ತು.ಒಂದೇ ಒಂದು ಸರಗೋಲು ಸರಿದಾಡಿದರೂ ಬವ್ ವವ್ ಎನ್ನುವ ನಾಯಿ ಇರುತ್ತಿದುದರಿಂದ ಕಳ್ಳಕಾಕರ ಭಯವೂ ಕಮ್ಮಿ ಇತ್ತು.. ಯಾರೇ ಮನೆಗೆ ಬಂದರೂ ಈ ಸರಗೋಲು ಕರೆಗಂಟೆಯಾಗಿಯೂ,ಕೆಲಸ ನಿರ್ವಹಿಸುತ್ತಿತ್ತು.
ಈ ಸರಗೋಲು ದಾಟುವಾಗ ಎಚ್ಚರವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ.ಕೇವಲ ಮಧ್ಯದ ಸರಗೋಲನ್ನಷ್ಟೇ ತೆಗೆದು ನುಸುಳಲು ಯತ್ನಿಸಿ ಮುಂದೆ ಮುಕ್ಕರಿಸಿ ಬಿದ್ದು ಕೈ ಕಾಲು ಪೆಟ್ಟಾಗಿರುವ ಉದಾಹರಣೆಯೂ ಇವೆ…ಮೇಯಲು ಬಿಟ್ಟ ಆಕಳುಗಳಿಗೆ ಧಿಡೀರ್ ಮನೆ ಒಡತಿಯ ನೆನಪಾಗಿ ವೇಗದಲ್ಲಿ ಬಂದು ಸರಗೋಲು ಕೋಡಿಗೆ ಸಿಕ್ಕಿಸಿಕೊಂಡು ಒದ್ದಾಡಿ ಅಪಾಯ ತಂದುಕೊಂಡದ್ದೂ ಇದೆ..ಹಾಗೆಯೇ ಮಹಿಳೆಯರ ಪ್ರಿಯವಾದ ಹೂದೋಟ,ತರಕಾರಿ,ಸೊಪ್ಪಿನ ಕಣಗಳೆಲ್ಲ ಜಾನುವಾರುಗಳಿಗೆ ಬಲಿಯಾಗುತ್ತಿದ್ದುದೂ ಇದೇ ಸರಗೋಲಿನ ಆವಾಂತರದಿಂದಲೇ!
ಆದಾಗ್ಯೂ ಇಂದಿನ ತಲೆಮಾರಿಗೂ ಮುಂದುವರೆದು ದಣಪೆ- ಸರಗೋಲಿನ ಸಂಭ್ರಮ ಕಾಣುತ್ತಿರುವುದು ಒಂದು ರೀತಿಯಲ್ಲಿ ಸಂತೋಷವೇ…ನಮ್ಮ ಸಂಸ್ಕೃತಿ, ಗ್ರಾಮ್ಯ ಬದುಕಿನ ಅಂಗವೇ ಆಗಿರುವ ಈ ಸರಗೋಲು
ಸದಾ ನಮ್ಮೊಂದಿಗೇ ಬೆರೆತುಬಿಡಲಿ ಎಂದು ಆಶಿಸೋಣ ಅಲ್ಲವೇ…?






0 Comments