ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ

ವಿನಾಯಕ ರಾ. ಕಮತದ ಸಂಪಾದನೆಯ ‘ರಾಜಶೇಖರ ಕುಕ್ಕುಂದಾ ಮಕ್ಕಳ ಕಾವ್ಯ ಸ್ಪಂದನ ಕುಂದದ ಕುಕಿಲು’

‘ಅವ್ಯಕ್ತ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಸಂಪಾದಕರ ಮಾತು ಇಲ್ಲಿದೆ.

-ಡಾ. ವಿನಾಯಕ ರಾ. ಕಮತದ

ಅಂಗಳದಲ್ಲಿ ಆಡಲು ತಿಂಗಳ ಬೆಳಕನು ಕೊಟ್ಟ ಚಂದ್ರ
ನೋಡಲು ಕಾದು ಕಾದು ಕೈಯಲಿ ಛತ್ರಿ ಹಿಡಿದು ಬಂದ

ಮೊಬೈಲ್ ಒಳಗೆ ಮುಳುಗಿದ ಮಕ್ಕಳು ಕತ್ತು ಎತ್ತಲೆಯಿಲ್ಲ.
ಮಳೆ ಬಂದ್ರೂ ಆಡದ ಮಕ್ಕಳ, ಚಂದ್ರ ನೋಡಿರಲೇ ಇಲ್ಲ!
ಜಗತ್ತು ಇಂಥ ವಿಸ್ಮಯಗಳಿಂದಲೇ ತುಂಬಿಕೊಂಡಿದೆ ಅಲ್ಲವೆ?

ಕಾಲದ ಹೆಜ್ಜೆಗಳು ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ. ಬಂದವುಗಳು ಎಷ್ಟು ಕಾಲ ಕಾಲೂರಿ ನಿಲ್ಲುತ್ತವೆ? ಎಂದು ಹೇಳಲಾಗುವುದಿಲ್ಲ. ಹಾಗೆ ಕೇಳಲೂ ಬಾರದು. ಏಕೆಂದರೆ ನಿಲ್ಲುವ, ನಡೆಯುವ ಕ್ರಿಯೆ ಸೃಜನಶೀಲವಾದದ್ದು. ನಿಲುಗಡೆಗೂ ಚಲನಶೀಲತೆಗೂ ಅವುಗಳದ್ದೇ ಆದ ಸೊಬಗು, ಸೊಗಸುಗಳಿವೆ. ಇವು ಪ್ರಕೃತಿಯಷ್ಟೇ ರಮ್ಯ, ಅದ್ಭುತ, ವಿಸ್ಮಯ, ನಿಗೂಢವೂ ಆಗಿರುತ್ತವೆ. ನಡೆಯುವಾಗ ನಿಲುಗಡೆಗಳು ಒದಗಿ ಬರುತ್ತವೆಯೇ ಹೊರತು; ನಿಲ್ಲುವುದಕ್ಕಾಗಿಯೇ ನಡೆಯುವುದಿಲ್ಲ. ನಡೆವ ಹಾದಿ ಎಲ್ಲರಿಗೂ ಅಪರಿಚಿತವೇ ಆಗಿರುವುದರಿಂದ ಎಲ್ಲರೂ ಶೋಧಕರಾಗಿರುವುದಿಲ್ಲ. ಅನುಕರಣೆ ಮಾಡುವವರು, ಅನುಸರಣೆ ಮಾಡುವವರು ಇದ್ದೇ ಇರುತ್ತಾರೆ. ಅಂಥವರಿಗೆ ನಡೆದು ಹೋದವರ ನಿಲುಗಡೆಗಳು ನೆರವಾಗುತ್ತವೆ. ಈ ಮಾತು ಜೀವನ ಪಯಣಕ್ಕೂ, ಸಾಹಿತ್ಯ ಪಯಣಕ್ಕೂ ಅನ್ವಯಿಸುತ್ತದೆ. ಹೀಗಾಗಿ ಇಲ್ಲಿ ಹೆಚ್ಚು-ಕಡಿಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಪ್ರಸ್ತುತ ರಾಜಶೇಖರ ಕುಕ್ಕುಂದಾ ಅವರು ಅರವತ್ತರ ಮರು ಅರಳುವಿಕೆಯಲ್ಲಿ ನಲವತ್ತಕ್ಕೂ ಹೆಚ್ಚು ವರ್ಷಗಳ ಲವಲವಿಕೆಯಲ್ಲಿದ್ದಾರೆ. ಈ ಸಂಭ್ರಮವು ಇನ್ನಷ್ಟು ಕಳೆಗಟ್ಟಲಿ ಎಂಬಂತೆ ‘ಕುಂದದ ಕುಕಿಲು’ ಕೃತಿ ತಮ್ಮೆಲ್ಲರ ಕೈ ಸೇರುತ್ತಿದೆ. ಇಂಥದೊಂದು ಆಲೋಚನೆ ಇದೆ ಎಂದು ರಾಜಶೇಖರ ಕುಕ್ಕುಂದಾ ಅವರು ವಿಚಾರ ಹಂಚಿಕೊಂಡಾಗಲೇ ಡಾ. ಆನಂದ ಪಾಟೀಲ ಸರ್ ಈ ಅಂದದ ಶೀರ್ಷಿಕೆಯನ್ನು ನೀಡಿದರು. ಅವರೇ ಸಂಪಾದಕರಾಗಲಿ ಎಂಬುದು ಕವಿಗಳಂತೆ ನನ್ನದೂ ಅಭಿಪ್ರಾಯವಾಗಿತ್ತು. ಆದರೆ, “ಪ್ರಾಯ ಇರುವಾಗಲೇ ಕೆಲಸ ಆಗಬೇಕು”. ಎಂದು ಸಂಪಾದನೆಯ ಹೊಣೆಗಾರಿಕೆಯನ್ನು ನನ್ನ ಹೆಗಲಿಗೆ ಹಾಕಿದರು. ಮಾಸದ ನೆನಪುಗಳ ಈ ಹೊತ್ತಿಗೆ ಸಿದ್ಧಗೊಳಿಸಲು ತಿಂಗಳ ಅವಧಿಯೂ ಇರಲಿಲ್ಲ. ಚಿಕ್ಕ ಸಮಯದಲ್ಲಿ ಚೊಕ್ಕದಾಗಿ ಕಾರ್ಯ ನಿರ್ವಹಿಸಲು, ಶಿಸ್ತುಬದ್ಧ ಯೋಚನೆಗಳು ಯೋಜನೆಗಳಾಗಿದ್ದರಿಂದಲೇ ಈ ಕಾರ್ಯ ಸಾಧ್ಯವಾಯಿತು. ಸಂಪಾದನಾ ಕಾರ್ಯಕ್ಕೆ ಡಾ. ಆನಂದ ಪಾಟೀಲ ಸರ್ ಮತ್ತು ಶ್ರೀಧರ ಪಿಸ್ಸೆ ಅವರು ಅಡಿಗಡಿಗೂ ಮಾರ್ಗದರ್ಶನ ನೀಡಿರುವುದನ್ನಿಲ್ಲಿ ಮನದುಂಬಿ ನೆನೆಯುತ್ತೇನೆ.

ರಾಜಶೇಖರ ಕುಕ್ಕುಂದಾ ಅವರು ತುಂಬಾ ಶಿಸ್ತಿನವರು. ಸರ್ವವೂ ಉತ್ಕೃಷ್ಟ ಎಂಬ ನಿಲುವಿನವರು. ಬಹು ಹಿಂದಿನಿಂದಲೂ ಸಂಗ್ರಹಿಸುತ್ತ ಬಂದಿದ್ದ ಅಪರೂಪದ ಲೇಖನಗಳನ್ನು ಹಂತ ಹಂತವಾಗಿ ಪೂರೈಸಿದರು, ಸಹೃದಯರೆಲ್ಲರೂ ಸಹ ಒಂದು ತಿಂಗಳ ಅವಧಿಯಲ್ಲಿಯೇ ಲೇಖನ ಬರೆದು ಕಳಿಸಿ ಸಂಪಾದನಾ ಕಾರ್ಯ ಯಶಸ್ವಿಯಾಗಿಸಿದ್ದಾರೆ. ಮೊದಲಿಗೆ ಐದು ಕೃತಿಗಳನ್ನು ಇಟ್ಟುಕೊಂಡು ವಿಭಾಗ ಮಾಡಿದರಾಯಿತು ಎಂದು ಯೋಚಿಸಿದ್ದೆ. ಲೇಖನಗಳನ್ನು ಗಮನಿಸಿದಂತೆ ಯೋಚನೆ ಬದಲಾದವು. ಈ ಕುರಿತು ಪಾಟೀಲ ಸರ್ ಅವರೊಂದಿಗೆ ಚರ್ಚಿಸಿದಾಗ “ನೀನೇ ಸರ್ವ ಸ್ವತಂತ್ರ, ನಿನಗೆ ಸರಿ ಅನಿಸಿದ್ದನ್ನು ಮಾಡು” ಎಂದರು. ಕವಿಗಳು ಮತ್ತು ನಾನು ಮುಕ್ತವಾಗಿ ಚರ್ಚೆ ಮಾಡಿ ಕೊನೆಗೆ ಬಾಲ ಸ್ಪಂದನ, ಭಾವ ಸ್ಪಂದನ, ಕಾವ್ಯ ಸ್ಪಂದನ ಮತ್ತು ಪತ್ರಿಕಾ ಸ್ಪಂದನ ಎಂಬ ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡೆವು. 100 ಪುಟಗಳ ಆಸುಪಾಸಿನಲ್ಲಿದ್ದ ನಮ್ಮ ನಿರೀಕ್ಷೆ 300 ಪುಟಗಳಿಗೆ ಬಂದು ನಿಂತದ್ದು ನಮಗೇ ಆಶ್ಚರ್ಯವಾಗಿದೆ.

ಬರೆಹಗಾರ ಹೊರಗನ್ನು ತನಗಿಷ್ಟ ಆಗುವ ರೀತಿ ಒಳ ತೆಗೆದುಕೊಂಡು, ತನ್ನದಾಗಿಸಿಕೊಳ್ಳುತ್ತಾನೆ. ತನ್ನ ಒಳಗನ್ನು ಹೊರ ಹಾಕುತ್ತಲಿರುತ್ತಾನೆ. ಇಂತಹ ಪ್ರಕ್ರಿಯೆ ವ್ಯಕ್ತಿನಿಷ್ಟವಾಗಿರುವುದರಿಂದ, ವ್ಯಕ್ತಿಯಿಂದ ವ್ಯಕ್ತಿಗಳಿಗೆ ಭಿನ್ನವಾಗಿಯೇ ಇರುತ್ತದೆ. ಮಕ್ಕಳ ಸಾಹಿತ್ಯವು ಜಾನಪದ ಮೌಖಿಕ ಸಾಹಿತ್ಯದಷ್ಟೇ ಹಳೆಯದಾಗಿದ್ದರೂ, ನವೋದಯ ಕಾಲಕ್ಕೆ ಪಠ್ಯಪುಸ್ತಕದ ಜರೂರತ್ತಿಗೆ ಕನ್ನಡ ಸಾಹಿತ್ಯದಲ್ಲಿ ಮಕ್ಕಳಿಗಾಗಿ ಎಂಬ ನಿಲುವಿನೊಂದಿಗೆ ಬರೆಯಲ್ಪಟ್ಟಿತು. ಈ ಹಂತದಲ್ಲಿ ಹೆಸರಾಂತ ಹಿರಿಯ ಸೃಜನಶೀಲ ಕವಿಗಳಿಂದ ಸೊಗಸಾದ ಪದ್ಯಗಳು ಮೂಡಿ ಬಂದವು. ನವ್ಯದ ಕಾಲಕ್ಕೆ ಬಡವಾದ ಮಕ್ಕಳ ಸಾಹಿತ್ಯದ ಕೈ ಹಿಡಿದು ನಡೆಸಿದವರು ಶಿಕ್ಷಕ ಸಮುದಾಯದವರು. ಈ ಹಂತದಲ್ಲಿ ಪಂಜೆ ಮಂಗೇಶರಾಯರು ಹಾಕಿಕೊಟ್ಟ ರೂಪರೇಷೆಗಳನ್ನು ಪಾಲಿಸುವ ಭರದಲ್ಲಿ ಸ್ವಂತಿಕೆಯ ಅನುಪಸ್ಥಿತಿ ಏಕತಾನತೆಯನ್ನು ಉಂಟು ಮಾಡಿತು ಎಂದರೆ ತಪ್ಪಾಗಲಾರದು. ಇದಾದ ಬಳಿಕ ವಿವಿಧ ಕ್ಷೇತ್ರದ ವಿವಿಧ ಮನೋಭೂಮಿಕೆಯುಳ್ಳ ಕವಿ ಲೇಖಕರು ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರಿಂದ ಕನ್ನಡ ಮಕ್ಕಳ ಸಾಹಿತ್ಯ ಹೊಸ ಸ್ವರೂಪವನ್ನು ಪಡೆದುಕೊಳ್ಳತೊಡಗಿತು. ಪಾಶ್ಚಾತ್ಯ ಸಾಹಿತ್ಯದ ಓದಿನ ಹರವುಳ್ಳ ಡಾ. ಆನಂದ ಪಾಟೀಲ ಸರ್ ಮಕ್ಕಳಿಗಾಗಿ ಬರೆಯುವುದು ಎಂಬ ಪರಿಕಲ್ಪನೆಯೇ ತಪ್ಪು ಎಂಬ ನಿಲುವನ್ನು ಪ್ರತಿಪಾದಿಸುತ್ತ, “ಬಾಲ್ಯ ಸಾಹಿತ್ಯ ಎಂದು ಕರೆಯುವುದೇ ಸರಿಯಾದದ್ದು, ಏಕೆಂದರೆ ಲೇಖಕರು ತಮ್ಮೊಳಗಿನ ಬಾಲ್ಯದ ತುಡಿತಕ್ಕಾಗಿ ಬರೆಯುವುದು ಸಹಜವಾಗಿರುತ್ತದೆ. ಯಾವುದು ಸಹಜವಾಗಿರುತ್ತದೆಯೋ ಅದು ಪ್ರಕೃತಿಯಂತೆ ಸುಂದರವೂ ಆಗಿರುತ್ತದೆ. ಸೃಜನಶೀಲ ಬರವಣಿಗೆಯು ಉದ್ದೇಶನಿಷ್ಟವಾಗಿರುವುದಿಲ್ಲ.” ಎಂಬೆಲ್ಲ ವಿಚಾರಗಳನ್ನು ಮುನ್ನೆಲೆಗೆ ತಂದರು.

ಕುಕ್ಕುಂದಾ ಅವರು ಮಾತ್ರ ಇದಾವುದರ ಗೊಡವೆಗೂ ಹೋಗದೆ ತಮಗೆ ಸಿದ್ಧಿಸಿದ ಶೈಲಿಯನ್ನೇ ಅನುಸರಿಸುತ್ತ ನವೋದಯ ಕಾಲದ ಗೇಯತೆಯನ್ನು, ಶಿಕ್ಷಕ ಸಮುದಾಯದ ಸರಳತೆಯನ್ನು ಮೈಗೂಡಿಸಿಕೊಂಡು ವ್ಯಂಗ್ಯ, ತಿಳಿ ಹಾಸ್ಯವನ್ನು ಹಿತಮಿತವಾಗಿ ಬೆರೆಸಿಕೊಂಡು ಸ್ವಂತಿಕೆಯನ್ನು ರೂಪಿಸಿಕೊಂಡರು. ಸೈದ್ಧಾಂತಿಕ ಭಿನ್ನತೆಗಳೇನೇ ಇದ್ದರೂ. ಮಾನವೀಯ ಸಂಬಂಧಗಳಿಗೆ ಮಹತ್ವ ಕೊಡುವ ಭಾವಜೀವಿಯಾದ ರಾಜಶೇಖರ ಕುಕ್ಕುಂದಾ ಅವರು ಕವಿತೆಗಳ ರಚನೆಯಲ್ಲಿ ಮಾತ್ರ ಭಾವತೀವ್ರತೆಗೂ ಹೆಚ್ಚಿನ ಪ್ರಾಶಸ್ತ್ಯವನ್ನು ಪದ ಸಂಯೋಜನೆಗೆ ನೀಡಿರುವುದು ಕಂಡು ಬರುತ್ತದೆ. ಪ್ರಾದೇಶಿಕ ಭಾಷೆಯನ್ನು ಸೊಗಸಾಗಿ ಬಳಸಬಲ್ಲ ಕೌಶಲ್ಯವಿದ್ದರೂ ಬುದ್ಧಿಪೂರ್ವಕವಾಗಿಯೇ ಗ್ರಾಂಥಿಕ ಭಾಷೆಯನ್ನು ಅನುಸರಿಸಿದ್ದಾರೆ. ಈ ಮೂಲಕ ಕರುನಾಡಿನ ಮಕ್ಕಳ ಮನೆ ಮಾತಾಗಿದ್ದಾರೆ. ನನ್ನ ಮಗಳು ಸುಭಾಷಿಣಿ, ಮಗ ಸಿದ್ಧಾರೂಢನು ಇವರ ಹಲವು ಕವಿತೆಗಳನ್ನು ತುದಿನಾಲಿಗೆ ಮೇಲೆ ಕುಣಿಸುತ್ತಾರೆ. ಕುಕ್ಕುಂದಾ ಅವರ ಈ ಸಂಪಾದಿತ ಕೃತಿಯಲ್ಲಿ ‘ಬಾಲ ಸ್ಪಂದನ’ದಲ್ಲಿ ಮಕ್ಕಳ ಅಭಿಪ್ರಾಯ, ‘ಭಾವ ಸ್ಪಂದನ’ದಲ್ಲಿ ಸ್ನೇಹಿತರು ಕಂಡಂತೆ ಲೇಖಕರು ಬೆಳೆದು ಬಂದ ರೀತಿಯನ್ನು ಕಾಣಬಹುದಾಗಿದೆ ಹಾಗೂ ಮುನ್ನುಡಿ, ಬೆನ್ನುಡಿಗಳು ಸೇರಿಕೊಂಡಿವೆ. ವಿವಿಧ ಲೇಖಕರ ಭಿನ್ನ-ಭಿನ್ನ ದೃಷ್ಟಿಕೋನದ ಬರಹಗಳು ಕಾವ್ಯದ ವಿಸ್ತಾರ ಪಡೆದಿರುವುದು ‘ಕಾವ್ಯ ಸ್ಪಂದನದಲ್ಲಿ ಬಿತ್ತರವಾಗಿದೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕೃತಿಗಳ ಅವಲೋಕನ ‘ಪತ್ರಿಕಾ ಸ್ಪಂದನ’ದಲ್ಲಿ ಇವೆ. ಸಂಪಾದನೆಯ ಕಾರ್ಯಭಾರವನ್ನು ವಹಿಸಿ ಇಂಥದೊಂದು ಮಹತ್ವದ ಕೃತಿ ರೂಪಗೊಳ್ಳಲು ಕಾರಣರಾದ ಅವ್ಯಕ್ತ ಪ್ರಕಾಶನದ ವಸು ವತ್ಸಲೆ ಅವರನ್ನೊಳಗೊಂಡು ಸರ್ವರನ್ನೂ ನೆನೆಯುತ್ತ ರಾಜಶೇಖರ ಕುಕ್ಕುಂದಾ ಅವರಿಗೆ ಶುಭ ಕೋರುತ್ತೇನೆ.

‍ಲೇಖಕರು Admin

4 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading