-ನಾ ದಿವಾಕರ
ತಳಸಮಾಜದ ಶೈಕ್ಷಣಿಕ ಸಂವೇದನೆಯನ್ನು ಅರಿಯದ ಅಧ್ಯಾತ್ಮ ಸದಾ ಪ್ರಶ್ನಾರ್ಹವಾಗುತ್ತದೆ
ವಾಣಿಜ್ಯೀಕರಣಕ್ಕೊಳಾಗಿರುವ (Commercialised) ಎರಡು ಸಾಂಸ್ಥಿಕ ವಿದ್ಯಮಾನಗಳು ತಮ್ಮ ಅಸ್ತಿತ್ವ ಮತ್ತು ಭವಿಷ್ಯದ ಸುಭದ್ರತೆಗಾಗಿ ಮಾರುಕಟ್ಟೆ ಪ್ರಕ್ರಿಯೆಗೊಳಗಾದಾಗ (Marketisation Process) ಅಲ್ಲಿ ಪ್ರಧಾನವಾಗಿ ಕಾಣುವುದು ವ್ಯಾಪಾರ ವಹಿವಾಟು ಕುದುರಿಸುವ ಒಂದು ಧೋರಣೆ. ಸಹಜವಾಗಿ ಈ ಅನುಸಂಧಾನದಲ್ಲಿ ಭೂಮಿ ಮತ್ತು ತತ್ಸಂಬಂಧಿ ಸ್ಥಿರಾಸ್ತಿಯ ಪ್ರಶ್ನೆಯೇ ಪ್ರಧಾನವಾದಾಗ, ಭವಿಷ್ಯದ ಲಾಭ, ಮಾರುಕಟ್ಟೆಯ ಗ್ರಾಹಕರ ಆಕರ್ಷಣೆ, ಹಣಕಾಸು ನಿಧಿಯ ಸಂಚಯ ಹಾಗೂ ಒಂದು ವಾಣಿಜ್ಯ ಸಾಮ್ರಾಜ್ಯದ (Commercial Empire) ಕನಸುಗಳು ಗರಿಗೆದರುತ್ತವೆ. ಈ ಎರಡು ವಿದ್ಯಮಾನಗಳು ಆಧ್ಯಾತ್ಮಿಕ ಹಾಗೂ ಧಾರ್ಮಿಕ ನೆಲೆಗಳಲ್ಲಿ ಪ್ರಕಟವಾದಾಗ ಅಲ್ಲಿ ಸಾಮಾಜಿಕ ಮೌಲ್ಯಗಳೂ ಗೌಣವಾಗಿಬಿಡುತ್ತದೆ. ಭಾರತೀಯ ಸಮಾಜದ ಮೇಲೆ ಇಂದಿಗೂ ಬಿಗಿ ಹಿಡಿತ ಸಾಧಿಸಿರುವುದು ಈ ಎರಡು ವಿದ್ಯಮಾನಗಳೇ.
ಈ ಎರಡು ಚಕ್ರಗಳ ಜಗನ್ನಾಥ ರಥ (Juggernaut) ಚಲಿಸಲಾರಂಭಿಸಿದರೆ ಬೆಳವಣಿಗೆಯ ಹಾದಿಗೆ ಎದುರಾಗುವ ಎಲ್ಲ ಸಾಂಸ್ಥಿಕ, ಮಾನವೀಯ, ಸಂವೇದನಾಶೀಲ, ಪ್ರಜಾತಾಂತ್ರಿಕ ಸ್ಥಾವರಗಳೂ ನಿಶ್ಶೇಷವಾಗುತ್ತವೆ. ಆಧುನಿಕ ಬುಲ್ಡೋಜರ್ ಇದರ ಯಾಂತ್ರಿಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದೇ ಹೆಸರಾಗಿರುವ ಮೈಸೂರು ಎರಡು ಕಾರಣಗಳಿಗೆ ಖ್ಯಾತಿ ಪಡೆದಿದೆ. ಮೊದಲನೆಯದು ಇಲ್ಲಿನ ರಾಜಪ್ರಭುತ್ವದ (ಒಡೆಯರ್) ಆಳ್ವಿಕೆಯಲ್ಲಿ ಜಾರಿಯಾದ ಶೈಕ್ಷಣಿಕ ಸಂಸ್ಥೆಗಳು ಮತ್ತು ಜನಪರ ಆಡಳಿತ ನೀತಿಗಳು. ಎರಡನೆಯದು ಸಮಕಾಲೀನವಾಗಿ ಇಲ್ಲಿ ಸಾಹಿತ್ಯ-ಕಲೆ-ಶಿಕ್ಷಣಗಳ ಮೂಲಕ ಲೆಸಿರುವ ಸಾರ್ವಜನಿಕ ವಿವೇಕ (Public Wisdom). ಇದರೊಟ್ಟಿಗೇ ಎಲ್ಲ ಧರ್ಮ-ಅಧ್ಯಾತ್ಮದ ಸಾಂಸ್ಥಿಕ ಅಸ್ಮಿತೆಗಳಿಗೂ ಮೈಸೂರು ನೆಲೆ ಕಲ್ಪಿಸಿದೆ. ಹಾಗಾಗಿ ಧರ್ಮ-ಸಂಸ್ಕೃತಿ-ಅಧ್ಯಾತ್ಮ ಮತ್ತು ಶಿಕ್ಷಣದ ಮೇಳೈಸುವಿಕೆಯ ವಾತಾವರಣದಲ್ಲಿ ʼ ವಿವೇಕ ʼವೂ ಸಹ ಇದೆ ಎಂಬ ನಂಬಿಕೆ ಇದೆ.
ಚರಿತ್ರೆಯ ನೆಲಸಮ ಕ್ರಿಯೆ
ಆದರೆ 2022ರ ಫೆಬ್ರವರಿ 7ರ ರಾತ್ರಿ 11.30ರ ವೇಳೆ ʼ ಬುಲ್ಡೋಜರ್ ʼ ಎಂಬ ಯಾಂತ್ರಿಕ ಮಾಂತ್ರಿಕನ ಕಾಲಡಿಯಲ್ಲಿ 140 ವರ್ಷಗಳ ಇತಿಹಾಸ ಇದ್ದ ʼ ಹೆಣ್ಣು ಮಕ್ಕಳ ʼ ಸರ್ಕಾರಿ ಶಾಲೆಯೊಂದು ಶಾಶ್ವತವಾಗಿ ಹೊಸಕಿ ಹಾಕಲ್ಪಟ್ಟಿತು. ಈ ನೆಲಸಮ ಕಾರ್ಯಾಚರಣೆಯನ್ನು ಜಿಲ್ಲಾ ಆಡಳಿತದ ರಕ್ಷಣೆಯಲ್ಲಿ ನಡೆಸಿದ್ದು ವರ್ತಮಾನದ ದುರಂತವಾದರೂ, ಅದು ನ್ಯಾಯಾಲಯದ ಸಮ್ಮತಿಯನ್ನೂ ಪಡೆದಿತ್ತು. ಈ ಚರಿತ್ರೆಯ ಸಮಾಧಿಯ ಮೇಲೆ ಸ್ವಾಮಿ ವಿವೇಕಾನಂದ ಸ್ಮಾರಕ ಮತ್ತು ಸಾಂಸ್ಕೃತಿಕ ಯುವ ಕೇಂದ್ರವನ್ನು ನಿರ್ಮಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಇದನ್ನು ಇತ್ತೀಚೆಗಷ್ಟೇ ಉದ್ಘಾಟಿಸಿದ್ದಾರೆ. ನೆಲಸಮವಾದ ಹೆಣ್ಣುಮಕ್ಕಳ ಕನಸನ್ನು ಸ್ಮರಿಸುವುದಕ್ಕಾದರೂ ಅಂದಿನ ವೇದಿಕೆಯ ಮೇಲೆ ʼ ಹೆಣ್ಣು ʼ ಇರಬೇಕಿತ್ತು. ಇರಲಿಲ್ಲ. ಇದು ಸಮಕಾಲೀನ ಪುರುಷಾಧಿಪತ್ಯದ ಮತ್ತೊಂದು ಮುಖ.
ಮೈಸೂರಿನಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಆಸರೆಯಲ್ಲಿ ಈ ʼಭವ್ಯ ಸ್ಮಾರಕʼ ನಿರ್ಮಿಸಲಾಗಿದ್ದು, ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ವಿವಿಧೋದ್ದೇಶಗಳಿಗಾಗಿ ಎಂದು ಹೇಳಲಾಗಿದೆ. ಈ ಉದ್ದೇಶಗಳು ಎಷ್ಟೇ ಉನ್ನತ-ಉದಾತ್ತ ಆಗಿದ್ದರೂ, ಈ ಔದಾತ್ಯದ ನೆಲದಲ್ಲಿದ್ದ ಮಹಾರಾಣಿ ಕೆಂಪರಾಜಮ್ಮಣ್ಣಿ ಅವರು 1880ರ ಆಸುಪಾಸಿನಲ್ಲಿ ಹೆಣ್ಣುಮಕ್ಕಳಿಗಾಗಿಯೇ ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆ, ಧಾರ್ಮಿಕ-ಆಧ್ಯಾತ್ಮಿಕ ಔದಾತ್ಯಗಳಿಗಾಗಿ ನೆಲಸಮವಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು ? ಹೊಸ ಸ್ಮಾರಕ ಭವನವು ಯೋಗ ಸೌಕರ್ಯಗಳು, ಗ್ರಂಥಾಲಯ ಮತ್ತು ಧ್ಯಾನ ಕೇಂದ್ರಗಳನ್ನು ಒಳಗೊಂಡಿದೆ. ಈ ಮೂರೂ ಪ್ರಕ್ರಿಯೆಗಳ ಸ್ಥಾಯಿ ಭಾವವನ್ನು ಸಮಾಜದ ಪ್ರಗತಿಗೆ ಕಾರಣವಾಗುವ ʼ ಶಿಕ್ಷಣ ́ದಲ್ಲಿ ಗುರುತಿಸಲು ಸಾಧ್ಯವಾದರೆ, ಎನ್‌ಟಿಎಮ್‌ಎಸ್ ಶಾಲೆಯ ಚಾರಿತ್ರಿಕ ಮಹತ್ವ, ಸಮಕಾಲೀನ ಪ್ರಾಮುಖ್ಯತೆ ಮತ್ತು ಬೌದ್ಧಿಕ ಪ್ರಸ್ತುತತೆಯನ್ನೂ ಅರ್ಥಮಾಡಿಕೊಳ್ಳಬಹುದು.
ನೆಲಸಮವಾದ ಶಿಕ್ಷಣ ದೇಗುಲವನ್ನು ಮತ್ತೊಂದು ಸ್ಥಾವರಕ್ಕೆ ವರ್ಗಾಯಿಸುವ ಔದಾರ್ಯವನ್ನು ಜಿಲ್ಲಾಡಳಿತ ತೋರಿದೆ. ಸಮೀಪದಲ್ಲೇ ಇರುವ ಸರ್ಕಾರಿ ಮಹಾರಾಣಿ ಶಿಕ್ಷಕ ತರಬೇತಿ ಸಂಸ್ಥೆ (MTTI)ಯ ಆವರಣದಲ್ಲಿ ಸ್ಥಾಪಿಸಿದ NTMS ಶಾಲೆ ಬಹುಶಃ ಈಗ ವಿದ್ಯಾರ್ಥಿನಿಯರೇ ಇಲ್ಲದೆ, ಮುಚ್ಚುವ ಹಂತ ತಲುಪಿರುವುದಾಗಿ ಹೇಳಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಮುಚ್ಚಲಾಗಿರುವ 93 ಸಾವಿರ ಶಾಲೆಗಳ ಪೈಕಿ ಇದೂ ಒಂದು ಎನ್ನುವುದು ಸಮಾಧಾನ ತರುವ ಮಾತಲ್ಲ. ನೆಲಸಮವಾದ ಎನ್‌ಟಿಎಮ್‌ಎಸ್ ಶಾಲೆಯ ಕಟ್ಟಡ, ಶಾಲೆ ಆರಂಭವಾದ ದಿನದಿಂದಲೂ ಹೆಣ್ಣು ಮಕ್ಕಳಿಗೆ ಅಕ್ಷರದಾಸರೆ ನೀಡಿರಲಿಲ್ಲ. ತದನಂತರದಲ್ಲಿ ಇಲ್ಲಿಗೆ ವರ್ಗಾವಣೆಯಾಗಿತ್ತು ಎಂದು ಸಮಜಾಯಿಷಿ ನೀಡುವ ʼ ಅವಿವೇಕಿʼ ಸಮಾಜಕ್ಕೆ, ಈ ಸ್ಥಾವರದ ಹಿಂದೆ ಅಡಗಿದ್ದ ಚಾರಿತ್ರಿಕ ಮೌಲ್ಯ, ಶೈಕ್ಷಣಿಕ ಸಂವೇದನೆ ಮತ್ತು ಬಡ-ಕೆಳಮಧ್ಯಮ-ಗ್ರಾಮೀಣ ಹೆಣ್ಣು ಮಕ್ಕಳ ಓದುವ ಹಂಬಲದ ಆಂತರಿಕ ಮೌಲ್ಯ ಅರ್ಥವಾಗುವುದೇ ಇಲ್ಲ.
ರಕ್ಷಣೆಯ ಹೋರಾಟ-ಹಿನ್ನಡೆ
2011 ರಿಂದ ಕೊನೆಯ ಗಳಿಗೆಯವರೆಗೂ ಈ ಸಂಸ್ಥೆ/ಕಟ್ಟಡವನ್ನು ಉಳಿಸಿಕೊಳ್ಳಲು ಹೋರಾಡಿದ ಮೈಸೂರಿನ ʼ ಪ್ರಜ್ಞಾವಂತ-ಪ್ರಗತಿಪರ-ಸಂವೇದನಾಶೀಲ ʼ ಮನಸ್ಸುಗಳಿಗೆ ಅಲ್ಲಿ ಕಾಣುತ್ತಿದ್ದುದು ರಾಜಪ್ರಭುತ್ವದ ಅಥವಾ ಒಡೆಯರ್ ವಂಶದ ಪರಂಪರೆ (Heritage) ಮಾತ್ರ ಅಲ್ಲ. ಅದು ಪಾರಂಪರಿಕ ಕಟ್ಟಡ ಎಂದು ಗುರುತಿಸಲ್ಪಟ್ಟಿರಲಿಲ್ಲ. ಈ ಹಣೆಪಟ್ಟಿ ಇಲ್ಲದಿದ್ದರೆ ಯಾವಾಗ ಬೇಕಾದರೂ ಬುಲ್ಡೋಜರ್‌ಗೆ ಆಹಾರವಾಗಬಹುದು ಎಂಬ ನಿಯಮವೂ ಇಲ್ಲವಲ್ಲಾ ? ಅಥವಾ ಯಾರು ಬೇಕಾದರೂ ಇದನ್ನು ಕೆಡವಿ ತಮ್ಮದೇ ಆದ ಬೌದ್ಧಿಕ ಸಾಮ್ರಾಜ್ಯದ ಸಂಕೇತವನ್ನು ನಿರ್ಮಿಸಬಹುದು ಎಂಬ ನಿಯಮವೂ ಇಲ್ಲ. ಇದು ಮೂಲತಃ ಸಾಮಾಜಿಕ ಸಂವೇದನೆಯ ಪ್ರಶ್ನೆ. ಎರಡು ವರ್ಷಗಳ ಮುನ್ನ ಬಂಗಾರಪೇಟೆಯಲ್ಲಿ 1967-71ರಲ್ಲಿ ನಾನು ಓದಿದ ಪ್ರಾಥಮಿಕ ಶಾಲೆಯ ಕಟ್ಟಡ ನೆಲಸಮವಾಗಿದ್ದನ್ನು ಕಂಡಾಗ ಕಣ್ಣು ತುಂಬಿಬಂದಿತ್ತು. ಇದು ವ್ಯಕ್ರಿಗತ ಭಾವನೆ ನನ್ನೊಳಗೇ ಕರಗಿಹೋಗುವಂತಹುದು.
ಆದರೆ ಇಂತಹ ಒಂದು ಭಾವನೆ ಒಂದು ನಗರದ ಜನತೆಯಲ್ಲಿ ಆಳವಾಗಿ ಬೇರೂರಿದ್ದಾಗ, ಆ ವಿವೇಕಯುತ ಸಮಾಜಕ್ಕೆ , ಹೊಸಕಿಹಾಕಲಾದ ಎನ್‌ಟಿಎಮ್‌ಎಸ್ ಶಾಲೆಯ ಅವಶೇಷದ ಪ್ರತಿಯೊಂದು ತುಣುಕುಗಳಲ್ಲೂ ಸ್ಥಳಾಂತರಗೊಂಡ ಕೆಲವೇ ಸಂಖ್ಯೆಯ ಹೆಣ್ಣು ಮಕ್ಕಳ ಮನದಾಳದ ನೋವು ಗೋಚರಿಸುತ್ತದೆ. “ ಶಾಲೆಯನ್ನೇನೂ ಮುಚ್ಚಿಲ್ಲ ಕಟ್ಟಡ ಮಾತ್ರ ಬದಲಾಗಿದೆ ” ಎನ್ನುವ ವ್ಯಾಪಾರಿ ಮನಸ್ಥಿತಿಯವರಿಗೆ (ಕೆಲವು ಹೋರಾಟಗಾರರನ್ನೂ ಒಳಗೊಂಡಂತೆ) ಈ ನೋವು ಅರ್ಥವಾಗುವುದಿಲ್ಲ. ಈಗ ಹೊಸ ಜಾಗದಲ್ಲಿರುವ ಶಾಲೆಯನ್ನು ಮುಚ್ಚಿದರೂ ಈ ಸಮಾಜಕ್ಕೆ ಬೇಸರವಾಗುವುದಿಲ್ಲ. ಏಕೆಂದರೆ ಇದು ವಿಕಸಿತ ಭಾರತದ ಪಯಣದ ಒಂದು ಸಣ್ಣ ಕವಲು ಮಾತ್ರ.
ಈ ಸಂವೇದನೆ ಬೆಳೆಯುವುದು ಶಾಲೆ ಮತ್ತು ಶಿಕ್ಷಣದ ನಡುವೆ ಇರುವ ನೈಸರ್ಗಿಕ ಸಂಬಂಧವನ್ನು (Organic Relation) ಅರ್ಥಮಾಡಿಕೊಂಡಾಗ ಮಾತ್ರ. ಈ ಸಂಬಂಧವನ್ನು ಶಾಶ್ವತವಾಗಿ ಕಾಪಿಟ್ಟುಕೊಂಡು, ಭವಿಷ್ಯದ ತಲೆಮಾರುಗಳಿಗೂ ಆಸರೆ ನೀಡುವ ಔದಾತ್ಯ ನಮ್ಮ ಸಮಾಜದಲ್ಲಿದ್ದರೆ ಬಹುಶಃ ಕೆಡವಿಹಾಕಲಾದ ಎನ್‌ಟಿಎಮ್‌ಎಸ್ ಕಟ್ಟಡ ಕೇವಲ ಸ್ಥಾವರವಾಗಿ ಕಾಣುವುದಿಲ್ಲ. ಅದು ಒಬ್ಬ ವ್ಯಕ್ತಿಯ ಪ್ರತಿಮೆಯಲ್ಲ, ದಾರ್ಶನಿಕರ ಸ್ಮಾರಕವಲ್ಲ, ದೈವೀಕ ಮೂರ್ತಿಯೂ ಅಲ್ಲ, 140 ವರ್ಷಗಳ ಇತಿಹಾಸವನ್ನು ಒಡಲೊಳಗೆ ಇಟ್ಟುಕೊಂಡು ಸಾವಿರಾರು ಹೆಣ್ಣು ಮಕ್ಕಳಿಗೆ ಅಕ್ಷರವನ್ನು ಕಲಿಸುತ್ತಿದ್ದ, ಅರಿವು ಮೂಡಿಸುತ್ತಿದ್ದ, ಜ್ಞಾನವನ್ನು ಹಂಚುತ್ತಿದ್ದ ಒಂದು ಜಂಗಮ ರೂಪದ ಸ್ಥಾವರ. ಮೈಸೂರಿನ ಕೆಲವು ಪ್ರಜ್ಞೆ ಇರುವ ಮನಸ್ಸುಗಳಿಗಾದರೂ ಇದು ಅರ್ಥವಾಗಿತ್ತು.
ಇದರ ಪರಿಣಾಮವೇ 10 ವರ್ಷಗಳಿಗೂ ಮೀರಿದ ಹೋರಾಟ, ನ್ಯಾಯಾಲಯದ ವ್ಯಾಜ್ಯ, 2021-22ರಲ್ಲಿ 78 ದಿನಗಳ ಸತತ ಧರಣಿ ಮುಷ್ಕರ, ಸಾರ್ವಜನಿಕ ಮೆರವಣಿಗೆ (Rally), ಸರ್ಕಾರಗಳಿಗೆ, ʼ ಜನಪ್ರತಿನಿಧಿಗಳಿಗೆ ʼ ಸಲ್ಲಿಸಿದ ಮನವಿ ಪತ್ರಗಳು ಮತ್ತು ಸಾಮೂಹಿಕವಾಗಿ ಧ್ವನಿಸಿದ “ ಎನ್‌ಟಿಎಮ್‌ಎಸ್ ಶಾಲೆ ಉಳಿಸಿ ” ಎಂಬ ಘೋಷಣೆ. ಈ ದನಿಗಳ ಹಿಂದೆಯೂ ಅಧ್ಯಾತ್ಮದ ಹಸಿವು, ಧಾರ್ಮಿಕ ನಂಬಿಕೆ, ವಿವೇಕಾನಂದರ ಬಗ್ಗೆ ಗೌರವ ಎಲ್ಲವೂ ಇರಲು ಸಾಧ್ಯವಿದೆ. ಆದರೆ ಈ ಎದೆಯ ಭಾವವನ್ನು ಮೀರಿ ಹೋರಾಟಕ್ಕೆ ನಿಲ್ಲಲು ಕಾರಣವಾಗಿದ್ದು, ಎನ್‌ಟಿಎಮ್‌ಎಸ್ ಶಾಲೆಯ ಚಾರಿತ್ರಿಕ ಮಹತ್ವ ಮತ್ತು ಆ ಹಳೆಯ ಸ್ಥಾವರದಲ್ಲಿ ಅಕ್ಷರ ಧ್ಯಾನ ಮಾಡುತ್ತಿದ್ದ ನೂರಾರು ಹೆಣ್ಣು ಮಕ್ಕಳ ಭವಿಷ್ಯದ ಕಾಳಜಿ ಮತ್ತು ಸಾಮಾಜಿಕ ಸಂವೇದನೆ. (ಈ ಹೋರಾಟದ ಒಳಗಿದ್ದವರೂ ಕೊನೆಯ ಹಂತದಲ್ಲಿ ಬೇಲಿ ಹಾರಿದ್ದು ದುರದೃಷ್ಟಕರವಾದರೂ ಒಪ್ಪಲೇಬೇಕಾದ ಕಟು ಸತ್ಯ)
ಅಧ್ಯಾತ್ಮ-ಧರ್ಮ ಮತ್ತು ಮಾರುಕಟ್ಟೆ
ವಿವೇಕ ಸ್ಮಾರಕದ ಉದ್ಘಾಟನೆಯಾದ ನಂತರವೂ ಕಾಡುವ ಪ್ರಶ್ನೆ ಒಂದೇ. ರಾಮಕೃಷ್ಣ ಆಶ್ರಮದವರಿಗೆ ವಿವೇಕಾನಂದರ ಸ್ಮಾರಕ ನಿರ್ಮಿಸಲು ಈ ಜಾಗವೇ ಏಕೆ ಬೇಕಿತ್ತು ? ಕಟ್ಟಡಕ್ಕೆ ಹೊಂದಿಕೊಂಡಂತಿದ್ದ ನಿರಂಜನ ಮಠದಲ್ಲೂ ಅವರು ತಂಗಿದ್ದರು ಎಂಬ ಪ್ರತೀತಿ ಇದೆ. ಸಮೀಪದ ಸದ್ವಿದ್ಯಾ ಶಾಲೆಯಲ್ಲೂ ತಂಗಿದ್ದರು ಎನ್ನಲಾಗುತ್ತದೆ. 130 ವರ್ಷಗಳ ಹಿಂದೆ ಜಂಗಮ ಸಂತರೊಬ್ಬರು ತಂಗಿದ್ದ ಜಾಗದಲ್ಲಿ ಅವರ ಹೆಸರಿನ ಸ್ಥಾವರ ನಿರ್ಮಿಸಲು ಶಿಕ್ಷಣದ ದೇಗುಲವನ್ನು ಹೊಸಕಿ ಹಾಕುವುದನ್ನು ಹೇಗೆ ವ್ಯಾಖ್ಯಾನಿಸುವುದು ? ಚರಿತ್ರೆಯನ್ನು ಭಾವನಾತ್ಮಕವಾಗಿ ನೋಡುವುದು ಬೇರೆ, ಶ್ರದ್ದಾನಂಬಿಕೆಗಳನ್ನು ಕೇಂದ್ರೀಕರಿಸಿ ವ್ಯಾಖ್ಯಾನಿಸುವುದು ಬೇರೆ. ಈಗಿನ ಭವ್ಯ ಕಟ್ಟಡದಲ್ಲಿ ನಡೆಸಲಾಗುವ ಧ್ಯಾನ, ಯೋಗ ಮತ್ತು ಗ್ರಂಥಾಲಯದ ಓದು, ಎನ್‌ಟಿಎಮ್‌ಎಸ್ ಶಾಲಾ ಕಟ್ಟಡದಲ್ಲೂ ಸಾಧ್ಯವಾಗಬಹುದಿತ್ತು. ಈ ಮೂರೂ ಪ್ರಕ್ರಿಯೆಗಳ ಔದಾತ್ಯವನ್ನು ಬೌದ್ಧಿಕ ನೆಲೆಯಲ್ಲಿ ನೋಡಿದಾಗ ಇದು ಹೌದು ಎನಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿಟ್ಟಾಗ ಮೂರೂ ಸಹ ವಿನಿಮಯದ ಸರಕುಗಳಾಗಿಬಿಡುತ್ತವೆ.
ವರ್ತಮಾನದ ಭಾರತದಲ್ಲಿ ಅಧ್ಯಾತ್ಮ ಮತ್ತು ಧರ್ಮ ಎರಡೂ ಸಹ ಸಾಂಸ್ಥಿಕವಾಗಿ ಮಾರುಕಟ್ಟೆ ಪ್ರಕ್ರಿಯೆಗೊಳಗಾಗಿವೆ (Marketisation process). ಕಳೆದ ಮೂರು ದಶಕಗಳಲ್ಲಿ ಕಾರ್ಪೋರೇಟಿಕರಣಕ್ಕೂ ಒಳಗಾಗಿವೆ. ಹಾಗಾಗಿಯೇ ಮಾರುಕಟ್ಟೆಯಲ್ಲಿರಬಹುದಾದ ಭ್ರಷ್ಟಾಚಾರ, ಲಾಭದಾಹ, ಹಣದ ಲೂಟಿ, ಸ್ವಜನಪಕ್ಷಪಾತ ಎಲ್ಲವೂ ಧಾರ್ಮಿಕ ಸಂಸ್ಥೆಗಳನ್ನೂ ಆಕ್ರಮಿಸಿವೆ. ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಒಂದು ನಿದರ್ಶನ. ಈ ಸಾಂಸ್ಥೀಕರಣದ ಮತ್ತೊಂದು ಆಯಾಮವನ್ನು ಮೈಸೂರಿನ ವಿವೇಕಾನಂದ ಸ್ಮಾರಕದಲ್ಲಿ ಕಾಣಬಹುದು. ನಗರದ ಹೃದಯಭಾಗದಲ್ಲಿರುವ ಈ ನಿವೇಶನದ ಮಾರುಕಟ್ಟೆ ಮೌಲ್ಯ, ಬಹುಶಃ ಭಕ್ತಿ, ಶ್ರದ್ಧೆಗಳನ್ನೂ ಮೀರಿ ನಿರ್ಣಾಯಕವಾಗಿ ಪರಿಣಮಿಸಿದೆ.
ಶಿಕ್ಷಣ ದೇಗುಲಗಳ ನಿಷ್ಕ್ರಿಯ ಮೌನ
ಹತ್ತು ವರ್ಷಗಳ ಎನ್‌ಟಿಎಮ್‌ಎಸ್ ಉಳಿಸಿ ಹೋರಾಟದುದ್ದಕ್ಕೂ ಗುರುತಿಸಬಹುದಾದ ಸಮಾನ ಅಂಶ ಎಂದರೆ, ಇದಕ್ಕೆ ಹೊಂದಿಕೊಂಡಂತೆಯೇ, ಸಮೀಪದಲ್ಲೇ, ಆಸುಪಾಸಿನಲ್ಲೇ ಇರುವ ಇತರ ಶಿಕ್ಷಣ ಸಂಸ್ಥೆಗಳ ನಿರ್ಲಿಪ್ತತೆ ಅಥವಾ ಮೌನ ಸಮ್ಮತಿ. ಈ ಪ್ರತಿಷ್ಠಿತ ಸಂಸ್ಥೆಗಳ ಆಡಳಿತ ಮಂಡಲಿಗಳಿಗೆ, ಪಕ್ಕದಲ್ಲೇ ಇರುವ ಒಂದು ಚಾರಿತ್ರಿಕ ಶಾಲೆಯ ಅವಸಾನ ಹೇಗೆ ಕಾಣಬೇಕಿತ್ತು ? ಮುಚ್ಚಿದರೆ ಮುಚ್ಚಲಿ ಅಲ್ಲಿನವರೆಲ್ಲರೂ ನಮ್ಮಲ್ಲಿಗೆ ಬರುತ್ತಾರೆ ಎಂಬ ಮಾರುಕಟ್ಟೆ ಲೋಭ ಅಥವಾ ಅಯ್ಯೋ ಬಡ ಹೆಣ್ಣು ಮಕ್ಕಳ ಶಿಕ್ಷಣ ಮತ್ತು 140 ವರ್ಷಗಳ ಚರಿತ್ರೆ ಅಳಿಸಿಹೋಗುವುದಲ್ಲಾ ಎಂಬ ನೋವು, ಈ ಎರಡು ದೃಷ್ಟಿಗಳು ಮಾತ್ರ ಸಾಧ್ಯ. ಸುತ್ತಲಿರುವ ಎಲ್ಲ ಸಂಸ್ಥೆಗಳೂ ಆಯ್ಕೆ ಮಾಡಿದ್ದು ಮೊದಲನೆಯದನ್ನು ಎನ್ನುವುದು ನಿಸ್ಸಂದೇಹ ಸತ್ಯ
ಇಲ್ಲಿ ವಿವೇಕಾನಂದರು ಈಗ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬ ಭ್ರಮಾತ್ಮಕ ಪ್ರಶ್ನೆ ಅಪ್ರಸ್ತುತ. ಅಥವಾ ಶಿಕ್ಷಣದ ಬಗ್ಗೆ ವಿವೇಕರು ಏನು ಹೇಳಿದ್ದಾರೆ ಎನ್ನುವುದು ಕೇವಲ ಬೌದ್ಧಿಕ ಕಸರತ್ತು. ಈ ಎರಡೂ ಅಂಶಗಳನ್ನು ಬದಿಗಿಟ್ಟು ನೋಡಿದಾಗಲೂ ನಮ್ಮನ್ನು ಕಾಡಬೇಕಿರುವುದು, 80 ವರ್ಷಗಳ ಸ್ವತಂತ್ರ-ಪ್ರಜಾಸತ್ತಾತ್ಮಕ ಆಡಳಿತದಲ್ಲಿ ನಮ್ಮ ದೇಶದ ಅಧ್ಯಾತ್ಮ ಮತ್ತು ಧರ್ಮ ತಂತಮ್ಮ ಮೂಲ ತಾತ್ವಿಕತೆಯನ್ನು ಏಕೆ ಕಳೆದುಕೊಂಡಿವೆ ಎಂಬ ಪ್ರಶ್ನೆ. ಅಧ್ಯಾತ್ಮ ಕೇಂದ್ರಗಳು ನಿರ್ಮಿಸುವ ಶಾಲೆಗಳು, ಆಸ್ಪತ್ರೆಗಳು ಪ್ರಾಥಮಿಕ ಹಂತದಿಂದಲೇ ಜನಸಾಮಾನ್ಯರನ್ನು ಸುಲಿಗೆ ಮಾಡುವ ವ್ಯಾಪಾರಿ ಕೇಂದ್ರಗಳಾಗಿರುವಾಗ, ಧಾರ್ಮಿಕ ಸಂಸ್ಥೆಗಳು ಕೇವಲ ಭೂಮಿ ಮತ್ತು ಚಿನ್ನದ ಸಂಗ್ರಹಾಲಯಗಳಾಗಿರುವಾಗ ಈ ಪ್ರಶ್ನೆ ಅಧ್ಯಾತ್ಮದ ಅನುಯಾಯಿಗಳನ್ನು , ಧರ್ಮನಿಷ್ಠರನ್ನು ಕಾಡಲೇಬೇಕಲ್ಲವೇ ?
ಆದರೆ ಎನ್‌ಟಿಎಮ್‌ಎಸ್ ಸಂದರ್ಭದಲ್ಲಿ ಮೈಸೂರಿನ ಅಧ್ಯಾತ್ಮ-ಧರ್ಮ ಕೇಂದ್ರಗಳಿಗೆ ಈ ಪ್ರಶ್ನೆ ಕಾಡಲೇ ಇಲ್ಲ. ಈ ಸಾಂಸ್ಥಿಕ ಕೇಂದ್ರಗಳಿಂದಲೇ ತಮ್ಮ ರಾಜಕೀಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ So called ʼ ಜನಪ್ರತಿನಿಧಿಗಳಿಗೆ ʼ ಈ ಪ್ರಶ್ನೆ ಕಾಡಿದರೂ, ಸಾಂಸ್ಥಿಕ ಗೆರೆಗಳನ್ನು ದಾಟಿ ಹೋಗುವ ಇಚ್ಛಾಶಕ್ತಿ ಇರಲಿಲ್ಲ. ಈಗ ನಮ್ಮೊಡನಿಲ್ಲದ, ಈಗಲೂ ನಮ್ಮ ನಡುವೆಯೇ ಇರುವ ಚುನಾಯಿತ-ಪರಾಜಿತ ಜನಪ್ರತಿನಿಧಿಗಳಿಗೆ ಎನ್‌ಟಿಎಮ್‌ಎಸ್ ಶಾಲೆ ಉಳಿಸಿ ಹೋರಾಟ ಪ್ರಧಾನವಾಗಿ ಕಂಡಿತ್ತೇ ಹೊರತು, ಈ ಹೋರಾಟದ ಮೂಲ ಸ್ಥಾಯಿಯಾಗಿದ್ದ ಚಾರಿತ್ರಿಕ ಶಾಲೆಯ ಉಳಿವು ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಗೋಚರಿಸಲೇ ಇಲ್ಲ. ತತ್ಪರಿಣಾಮವಾಗಿ ಮೈಸೂರಿನ ಸಂವೇದನಾಶೀಲ ಮನಸ್ಸುಗಳು 78 ದಿನಗಳ ಸತತ ಮುಷ್ಕರದ ಹೊರತಾಗಿಯೂ ಸೋಲನುಭವಿಸಬೇಕಾಯಿತು.
ಮಾರುಕಟ್ಟೆ ಜಗುಲಿಯಲ್ಲಿ ಸಂವೇದನೆ
ಧಾರ್ಮಿಕ/ಆಧ್ಯಾತ್ಮಿಕ ಸಂಸ್ಥೆಗಳ ಕಾರ್ಪೋರೇಟೀಕರಣ (Corporatisation) ಮತ್ತು ಅದರಿಂದ ಆಳವಾಗಿ ಬೇರೂರುವ ವ್ಯಾಪಾರಿ ಮನಸ್ಥಿತಿ ಹೇಗೆ ನಾಗರಿಕತೆಯ ಸೂಕ್ಷ್ಮ ಸಂವೇದನೆಗಳನ್ನೂ ಹೊಸಕಿಹಾಕಿಬಿಡುತ್ತದೆ ಎನ್ನುವುದಕ್ಕೆ ಎನ್‌ಟಿಎಮ್‌ಎಸ್ ಶಾಲೆಯ ಅವಸಾನ ಸಾಕ್ಷೀಭೂತವಾಗಿ ನಿಲ್ಲುತ್ತದೆ. ನೆಲದ ಕಾನೂನು (Law of the Land ) ಮತ್ತು ಶಾಸನವಿಹಿತ ನಿಬಂಧನೆಗಳನ್ನು (Statutory provisions) ಗೌರವಿಸುತ್ತಲೇ, ನಾಗರಿಕತೆಯ ಬಯಲಲ್ಲಿ ನಿಂತು ನೋಡಿದಾಗ, 2022ರ ಫೆಬ್ರವರಿ 7 ರ ರಾತ್ರಿ 11.30ಕ್ಕೆ ಬುಲ್ಡೋಜರ್ ಚಕ್ರದ ಕೆಳಗೆ ನಲುಗಿಹೋದದ್ದನ್ನು ಏನೆಂದು ವ್ಯಾಖ್ಯಾನಿಸಲು ಸಾಧ್ಯ ? ಖಂಡಿತವಾಗಿಯೂ ಅದು ಪಾರಂಪರಿಕ ಕಟ್ಟಡ ಅಲ್ಲ, ಅಕ್ಷರದಾಸರೆಯ ಸ್ಥಾವರವೂ ಅಲ್ಲ. ಅಲ್ಲಿ ನಾಮಾವಶೇಷವಾಗಿದ್ದು ಶಿಕ್ಷಣ ಎಂಬ ಮೌಲ್ಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಎಂಬ ಉದಾತ್ತ ಕನಸು
ಬಹುಶಃ ವಿಕಾಸದ ಹಾದಿಯಲ್ಲಿ ಭಾರತ ಇವೆಲ್ಲವನ್ನೂ ಭಾವನಾತ್ಮಕ (Emotional) ಅಥವಾ ಭಾವುಕ (Sentimental) ವ್ಯಾಖ್ಯಾನಗಳು ಎಂದೇ ಪರಿಭಾವಿಸುತ್ತವೆ. ಕಾಲ ಬದಲಾಗುತ್ತಿದೆ, ನಾವೂ ಬದಲಾಗಬೇಕು, Change is Inevitable (ಬದಲಾವಣೆ ಅನಿವಾರ್ಯ) ಎಂಬ ಸೂತ್ರವನ್ನು ಮಾರುಕಟ್ಟೆಯ ಪರಿಭಾಷೆಯಲ್ಲಿ ಅಳವಡಿಸಿಕೊಂಡಿರುವುದರಿಂದ, ಈ ಬದಲಾವಣೆಯ ಪರ್ವದಲ್ಲಿ ಮನುಷ್ಯ ಸಮಾಜಕ್ಕಿರಬೇಕಾದ ಸೂಕ್ಷ್ಮ ಸಂವೇದನೆಗಳೂ ಸಹ ವಿನಿಮಯ ಸರಕುಗಳಾಗಿಬಿಡುತ್ತವೆ. ಈ ಮಾರಾಟ ಪ್ರಕ್ರಿಯೆಯಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನ ವಿವೇಕವೂ ಬಿಕರಿಯಾಗಿದೆ. ಇಡೀ ಪ್ರಕ್ರಿಯೆಯ ಪ್ರತೀಕವಾಗಿ ನಗರದ ಹೃದಯ ಭಾಗದಲ್ಲಿ “ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ- ವಿವೇಕ ಸ್ಮಾರಕ ” ಎದ್ದು ನಿಂತಿದೆ.
ಈ ಸಂದಿಗ್ಧತೆಯ ನಡುವೆ ವಿವೇಕಾನಂದರ ಮರು ಓದು, ಸಂಸ್ಕೃತಿಯ ಮರುನಿರ್ವಚನೆ ಹಾಗೂ ಅಧ್ಯಾತ್ಮ-ಧರ್ಮ-ರಾಜಕಾರಣ ಮತ್ತು ಮಾರುಕಟ್ಟೆ ಸಂಬಂಧಗಳ ಮರುವ್ಯಾಖ್ಯಾನ ಆಗಲೇಬೇಕಿದೆ. ಈ ಸಂವಾದದ ಆವರಣದಲ್ಲಿ ಶಿಕ್ಷಣದ ಕಾರ್ಪೋರೇಟೀಕರಣ ಮತ್ತು ವ್ಯಾಪಾರೀಕರಣದ ನಿಷ್ಕರ್ಷೆಯೂ ಆಗಬೇಕಿದೆ.






0 Comments