-ಮಂಜುಳ ಡಿ
ತಪ್ಪೇನು…
ಘೋರ ವನದ ನಡುವೆ
ರಥ ನಿಂತು ಸೀತೆ ಇಳಿವಾಗ
ನೀ ಮಾಡಿಕೊಂಡ ನಿಯಮಗಳು
ನನ್ನ ತಪ್ಪೇನು! ಅವಳಾತ್ಮ ಚೀರಿಡಲಿಲ್ಲವೇ
ನಟ್ಟ ನಡುರಾತ್ರಿ
ದಿಟ್ಟನೆದ್ದು ನಡೆದ ಸಿದ್ದಾರ್ಥ
ಅವ ನಡೆದ ಹಾದಿಗೆ ಹತ್ತಿದ ಯಶೋಧೆಯ ನೋಟ
ನೀನೇ ಬದುಕೆಂದು ಬಂದ ನನ್ನ ತಪ್ಪೇನು!
ರಾಧೆ ನಿನಗಾಗಿ ಮಾತ್ರ ಮುಡಿಪು
ಕೃಷ್ಣ ರುಕ್ಮಿಣಿ ಸಖಿಯರೊಂದಿಗೆ ಸುಖಿಸುವಾಗ
ತಲ್ಲಣಿಸಲಿಲ್ಲವೇ ರಾಧೆಯ ಮನ
ನಿನಗಾಗಿಯೇ ತಪಿಸುವ ನನ್ನ ತಪ್ಪೇನು!!
ಶತಮಾನಗಳ ಗೌರಿಯ ತಪ
ಪ್ರತಿ ಜನ್ಮದ ಪರೀಕ್ಷೆ ದಾಟಿದ ಅರ್ಧಾಂಗಿ
ಅಕ್ಕ ಗಂಗೆ ಶಿವನ ಮುಡಿಗೇರುವಾಗ
ತನ್ನ ತಪ್ಪೇನು! ಎಂದು ಘರ್ಜಿಸಿಯೇ ಕಾಳಿಯಾದಳೇ!!
ಸಹನೆ ಕ್ಷಮೆ ತಾಳ್ಮೆ ಶಕ್ತಿ ಸ್ವರೂಪಿ ಗುಣಗಳ
ಪ್ರತೀಕವನ್ನಾಗಿಸಿ ಎಲ್ಲಾ ಗೆರೆಗಳಾಚೆ
ಸಗುವ ಅವಕಾಶವಿಟ್ಟೇ ದೈವವನ್ನೂ
ಸೃಷ್ಟಿಸಿದ ಪುರುಷ ಪ್ರಧಾನತೆ ಹಾಸು
ಕರ್ಮದ ಹಾದಿ ಹಿಂದಿರುಗಿದೆಯೇ
ಇಂದು ಸ್ತ್ರೀ ನೀ ಕಲಿಸಿದ ಪಾಠ
ನಿನ್ನ ಹಾದಿಯಲ್ಲಿಯೇ ಸಾಗಿದರೆ
ಅದರಲ್ಲಿ ತಪ್ಪೇನು…!






0 Comments