ಮೂಲ: ಲ್ಯಾಂಗ್ಸ್ಟನ್ ಹ್ಯೂಸ್
ಕನ್ನಡಕ್ಕೆ -ವೈ ಬಿ ಹಾಲಬಾವಿ
ವೈ ಬಿ ಹಾಲಬಾವಿ ಇವರು ಮೂಲತ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ ಕ್ಷೇತ್ರ. ಸಂಚಯ ಪತ್ರಿಕೆಯ ‘ಬೇಂದ್ರೆ ಸ್ಮೃತಿ’ ಪುಸ್ತಕ ಬಹುಮಾನ, ಎರಡು ಬಾರಿ ಸಂಕ್ರಮಣ ಪತ್ರಿಕೆಯ ‘ಸಂಕ್ರಮಣ’ ಕಾವ್ಯ ಪ್ರಶಸ್ತಿ, ಕಲಬುರ್ಗಿಯ ‘ಚಂದ್ರಶೇಖರ ಅಜಾದ್’ ಕಾವ್ಯ ಪ್ರಶಸ್ತಿಗಳು ಸಂದಿವೆ. ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಲ್ಯಾಂಗ್ಸ÷್ಟನ್ ಹ್ಯೂಸ್, ನ್ಯಾನಾವೋ ಸಕಾಕಿಯ ಭಾವಾನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಕವಿತೆ, ಗಜಲ್, ರುಬಾಯಿ, ಖಿತಾಗಳನ್ನೊಳಗೊಂಡ ಹಾಗೂ ಇಂಗ್ಲೀಷ ಕವಿತೆಗಳ ಭಾವಾನುವಾದ ಪುಸ್ತಕಗಳು ಪ್ರಕಟಣೆಗೆ ಸಿದ್ಧಗೊಂಡಿದೆ.
ಲ್ಯಾಂಗ್ಸ್ಟನ್ ಹ್ಯೂಸ್ ಅಮೇರಿಕಾ ಕಂಡ ಪ್ರಸಿದ್ಧ ಕವಿ, ಚಿಂತಕ, ಲೇಖಕ, ಸಾಮಾಜಿಕ ಹೋರಾಟಗಾರ. ಜಾಜ್ ಕಾವ್ಯದ ಪಿತಾಮಹರೆಂದು
ಪರಿಗಣಿಸಲಾಗುತ್ತಿದ್ದ ಇವರು ಹಾರ್ಲಂ ಪುನರುಜ್ಜೀವನ ಚಳುವಳಿಯ ಪ್ರಮುಖ ಮುಖಂಡರಾಗಿದ್ದರು. ಇವರು ಆಫ್ರೋ-ಅಮೇರಿಕನ್ ಜೀವನದ
ಸಂಕಷ್ಟಗಳು ಮತ್ತು ಕನಸುಗಳನ್ನು ತಮ್ಮ ಸಾಹಿತ್ಯದಲ್ಲಿ ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಳಿಸಿದವರು.
೧. ಸೂ ಚಿಕ್ಕಮ್ಮನ ಕತೆಗಳು
ಅವಳ ತಲೆತುಂಬಾ ತುಂಬಿಕೊ೦ಡಿವೆ ಕತೆಗಳು.
ಅವಳ ಹೃದಯತುಂಬಾ ತುಂಬಿಕೊ೦ಡಿವೆ ಕತೆಗಳು.
ಬೇಸಿಗೆ ರಾತ್ರಿಗಳಲಿ ಮನೆಯ ಮೊಗಸಾಲೆಯಲ್ಲಿ
ಕಂದು ಮೊಗದ ಕಂದನನು ತಬ್ಬಿಕೊಂಡಿದ್ದಾಳೆ ತನ್ನೆದೆಗೆ
ಹೇಳುತ್ತಾಳವಳು ತನ್ನ ಕತೆಗಳನ್ನು ಅವನಿಗೆ.
ಬಿರು ಬಿಸಿಲಲಿ ದುಡಿಯುತ್ತಿರುವ,
ಇರುಳ ಇಬ್ಬನಿಯ ಕಡು ಚಳಿಯಲಿ ನಡೆಯುತ್ತಿರುವ,
ಆಳದ ನದಿ ದಡಗಳಲಿ ದು:ಖದ ಹಾಡುಗಳನು ಹಾಡುತ್ತಿರುವ
ಗುಲಾಮರ ಕತೆಗಳು ಬೆರೆಯುತ್ತವೆ ತಮ್ಮಷ್ಟಕ್ಕೆ ಅವು
ಹಗುರವಾಗಿ ಕತ್ತಲೆ ನರಳುಗಳಲಿ ಹಾದೂ, ತಿರುಗಿ
ವೃದ್ಧೆಯ ಮೃದು ಧ್ವನಿಯ ಏರಿಳಿತದ ಹರಿವಿನಲಿ.
ಗೊತ್ತಿದೆ ಆಲಿಸುತ್ತಿರುವ ಆ ಕಪ್ಪು ಹುಡುಗನಿಗೆ,
ಅವಳು ಹೇಳುತ್ತಿರುವುದು ವಾಸ್ತವದ ಕತೆಗಳೆಂದು.
ಅವು ಅವಳದ್ದೇ ಬದುಕಿನಿಂದ ಬಂದವುಗಳೆ೦ದು.
ಯಾವುದೇ ಪುಸ್ತಕಗಳಿಂದ ಪಡೆದದ್ದು ಅಲ್ಲವೆಂದು.
ಬೇಸಿಗೆಯ ರಾತ್ರಿಯಲಿ
ಆ ಕಪ್ಪು ಹುಡುಗ ಶಾಂತವಾಗಿ
ಆಲಿಸುತ್ತಿದ್ದಾನೆ ಸೂ ಚಿಕ್ಕಮ್ಮನ ಕತೆಗಳನ್ನು.
೨. ಬೆಳ್ಳಿ ಮಳೆ ಸುರಿವ ಕಾಲ
ಬೆಳ್ಳಿ ಮಳೆ ಸುರಿವ ವೇಳೆ
ಇಳೆಯೊಳು ಮರಳಿದೆ ಹೊಸ ಜೀವಕಳೆ,
ಹಸಿರೊಡೆದಿದೆ ಹುಲ್ಲು ತಲೆಯೆತ್ತಿವೆ ಹೂವು,
ಬಯಲೆಲ್ಲ ಹರಡಿದೆ ಸೋಜಿಗವು
ಎಲ್ಲೆಲ್ಲೂ ಜೀವಜಾಲ,
ಜೀವಜಾಲ,
ಜೀವಜಾಲ ಸೊಬಗು!
ಬೆಳ್ಳಿ ಮಳೆ ಹೊತ್ತಲ್ಲಿ
ರೇಶಿಮೆ ರೆಕ್ಕೆಗಳನೆತ್ತಿಹವು ಪಾತರಗಿತ್ತಿ
ಕಾಮನ ಬಿಲ್ಲಿನ ಉಲುಹನು ಹಿಡಿಯಲು,
ಮೈದುಂಬಿದೆ ಮರಗಳಲಿ ಹೊಸ ಎಲೆಗಳ ಹಾಡು
ಅಗೋ! ಅಲ್ಲಿ, ಬಾನ ಕೆಳಗೆ ಬೀದಿ ಬದಿಗೆ
ಸಂತಸದಿ ಹಾಡುತಾ ಸಾಗುತಿಹರು-
ಹುಡುಗ ಹುಡುಗಿಯರೂ
ಬೆಳ್ಳಿ ಮಳೆಯ ಕಾಲಕ್ಕೆ
ವಸಂತವೂ ನೂತನ,
ಈ ಜೀವನವೂ ವಿನೂತನ.






0 Comments