ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊರಚ ಬಂಧುಗಳೇ ನನ್ನ ಮಾರ್ಗದರ್ಶಕರು..

ಡಾ. ಗಿರಿಧರರಾವ್ ಹವಲ್ದಾರ ಅವರ ಸಂಶೋಧನಾ ಕೃತಿ ‘ಕೊರಚರು ಒಂದು ಸಾಂಸ್ಕೃತಿಕ ಅಧ್ಯಯನ’

ಈ ಕೃತಿಯನ್ನು ‘ಗುಡಿಸಲು ಪ್ರಕಾಶನ’ ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ.

-ಡಾ. ಗಿರಿಧರರಾವ್ ಹವಲ್ದಾರ

ಯಾವಾಗಲೂ ಸುಮ್ಮನಿರದೇ ಏನನ್ನಾದರೂ ಪ್ರಶ್ನೆ ಮಾಡುತ್ತಲೇ ಇರುವುದು ನನ್ನ ಅಭ್ಯಾಸ. ನಾವು ಚಿಕ್ಕವರಿದ್ದಾಗ ಸುಗ್ಗಿಯ ಕಾಲದಲ್ಲಿ ನಮ್ಮ ಹಳ್ಳಿಗೆ ‘ಚೆಂಚರು’ (ಭಾರತದ ದಕ್ಷಿಣ ಭಾಗದಲ್ಲಿರುವ ಬುಡಕಟ್ಟು ಜನಾಂಗ) ಬರುತ್ತಿದ್ದರು. ‘ಆಡವಿ ಚೆಂಚರು ಬಂದ್ರು, ಆಡವಿ ಚೆಂಚರು ಬಂದ್ರು’ ಎಂದು ನಾವು ಅವರನ್ನು ನೋಡಿ ಹೆದರಿಕೊಂಡು ಮನೆಯಲ್ಲಿ ಅಡಗಿಕೊಳ್ಳುತ್ತಿದ್ದೆವು. ‘ಅಡವಿಯಲ್ಲಿರುವ ಅವರು ಕಳ್ಳರೆಂದೂ, ಕಳವು ಮಾಡುವುದಕ್ಕಾಗಿಯೇ ಅವರು ಸುಗ್ಗಿಯ ಕಾಲದಲ್ಲಿ ಅಡವಿಯಿಂದ ಬಂದಿರುತ್ತಾರೆ೦ದೂ’ ಕೇಳಿದ್ದೆವು. ಅವರು ಯಾರು? ಅವರೇಕೆ ಅಡವಿಯಲ್ಲಿಇದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳು ಆಗ ಮನಸ್ಸಿನಲ್ಲಿ ಉದ್ಭವಿಸಿ ಹಾಗೇ ಉಳಿದಿದ್ದವು.

ನನ್ನ ಸೋದರ ಮಾವ ಶ್ರೀ ನರಸಿಂಹ ಶಾಸ್ತ್ರಿಗಳು ಆಂಧ್ರ ಪ್ರದೇಶದಲ್ಲಿ ಸರ್ಕಾರಕ್ಕೆ ಬೇಕಾಗಿದ್ದ ಅಂಕಿ ಅಂಶಗಳ ಸಂಗ್ರಹಕ್ಕಾಗಿ ಲಂಬಾಣಿ ಜನಾ೦ಗದ ಕುರಿತಾಗಿ ಸರ್ವೆ ಮಾಡಿದ್ದರು. ಆಗ ಅವರು ಹೇಳಿದ ವಿಷಯಗಳನ್ನು ನನ್ನ ತಾಯಿಯಿಂದ ನಾನು ಕೇಳಿ ತಿಳಿದಿದ್ದೆನು. ಈ ಆಸಕ್ತಿಯಿಂದಲೇ ನಾನು ಮುಂದೆ ನಮ್ಮ ಪ್ರದೇಶದಲ್ಲಿದ್ದ ಲಂಬಾಣಿ ಜನರ ಜೀವನ ವಿಧಾನವನ್ನು ನೋಡಿ, ಕೇಳಿ ತಿಳಿಯಲು ಪ್ರಯತ್ನಿಸಿದೆನು. ಲಂಬಾಣಿ ಭಾಷೆಗೆ ಆಗ ಲಿಪಿ ಇಲ್ಲವೆಂಬ ಅಂಶವು ತಿಳಿದು ಬಂದು, ಏಕೆ ಹೀಗೆ? ಎಂಬ ಪ್ರಶ್ನೆಯು ನನ್ನನ್ನು ಕಾಡಿತ್ತು. ಹೈಸ್ಕೂಲಿನಲ್ಲಿದ್ದಾಗ ತರಗತಿಯಲ್ಲಿ ನನ್ನ ಶಿಕ್ಷಕರು ‘ಮುಂದೆಯರ‍್ಯಾರು ಏನು ಮಾಡುತ್ತೀರಿ?’ ಎಂದು ಕೇಳಿದಾಗ ನಾನು ‘ಭಾಷಾ ಶಾಸ್ತ್ರ ಓದಿ ಲಂಬಾಣಿ ಭಾಷೆಗೆ ಲಿಪಿ ಕಂಡುಹಿಡೀತೀನಿ’ ಎಂದುಉತ್ತರಿಸುತ್ತಿದ್ದೆ.

ಯಾವಾಗಲೂ ಏನನ್ನಾದರೂ ಪ್ರಶ್ನೆ ಮಾಡುತ್ತಲೇ ಇರುವ ನನ್ನ ಹುಟ್ಟುಗುಣ. ನನ್ನ ಬಾಲ್ಯದಲ್ಲಿ ನಮ್ಮೂರಿಗೆ ಬಂದು ಹೋಗುತ್ತಿದ್ದ, ಕಳ್ಳರು ಎನ್ನಿಸಿಕೊಂಡಿದ್ದ ಚೆಂಚರು, ನನ್ನ ಸೋದರಮಾವ (ಸರ್ಕಾರಕ್ಕೆ ಅಂಕಿ ಅಂಶಗಳ ಸಂಗ್ರಹಕ್ಕಾಗಿ) ಲಂಬಾಣಿಗಳ ಕುರಿತಾಗಿ ಮಾಡಿದ ಸರ್ವೆ ಮಾಹಿತಿ, ಲಂಬಾಣಿ ಭಾಷೆಗೆ ಲಿಪಿ ಇಲ್ಲದಿರುವ ಅಂಶ ಇವೆಲ್ಲವೂ ನನ್ನನ್ನು ಸಂಶೋಧನೆಯಲ್ಲಿತೊಡಗುವAತೆ ಪ್ರೇರೇಪಿಸಿದ ಪ್ರಮುಖ ಅಂಶಗಳಾಗಿವೆ.

ತು೦ಗ ಭದ್ರಾ ಗ್ರಾಮೀಣ ಬ್ಯಾಂಕ್‌ ಉದ್ಯೋಗಿಯಾಗಿದ್ದ ನಾನು ಸಂಶೋಧನಾ ಕ್ಷೇತ್ರದಲ್ಲಿ ಏನನ್ನಾದರೂ ಮಾಡಬೇಕು ಎಂದುಕೊಳ್ಳುತ್ತಿದ್ದ ಸಮಯದಲ್ಲಿ ನನಗೆ ಹೂವಿನ ಹಡಗಲಿಯ ಬಿ. ಆರ್. ಕಾಲೇಜಿನಲ್ಲಿಅಧ್ಯಾಪಕರಾಗಿದ್ದ ಡಾ. ಕರಿಶೆಟ್ಟಿ ರುದ್ರಪ್ಪನವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡಲು ಇರುವ ಅವಕಾಶಗಳ ಬಗ್ಗೆ ತಿಳಿಸಿದರು. ‘ಇದುವರೆಗೂ ಯಾರೂ ಮಾಡಿರದ ಹೊಸ ವಿಷಯದಲ್ಲಿ ಮಾತ್ರ ನಾನು ಸಂಶೋಧನೆ ಮಾಡಬೇಕು’ ಎಂಬುದು ನನ್ನ ನಿರ್ಧಾರವಾಗಿತ್ತು. ನಾನು ಕೆಲಸ ಮಾಡುತ್ತಿದ್ದ ಹರಪನಹಳ್ಳಿ ತಾಲೂಕಿನ ಪಕ್ಕದಲ್ಲಿಯೇ ಇರುವ ಅನೇಕ ಕೊರಚರ ಹಟ್ಟಿಗಳನ್ನು ನೋಡಿದಾಗ ಇವರ ಸಂಸ್ಕೃತಿಯ ಬಗ್ಗೆಯೇ ನಾನು ಏಕೆ ಸಂಶೋಧನೆ ಮಾಡಬಾರದು? ಎಂದುಕೊ೦ಡೆ.

ಈಗಾಗಲೇ ಕೊರಚ ಜನಾಂಗದ ಕುರಿತಾಗಿ ಯಾರಾದರೂ ಸಂಶೋಧನೆ ಮಾಡಿದ್ದರೆ? ಎಂಬ ಪ್ರಶ್ನೆ ಮೂಡಿದ್ದರಿಂದ, ಕರ್ನಾಟಕದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಗುಲ್ಬರ್ಗ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ಆ ವಿಶ್ವವಿದ್ಯಾಲಯಗಳಲ್ಲಿ ಕೊರಚರ ಸಂಸ್ಕೃತಿಯ ಬಗ್ಗೆ ಈ ಹಿಂದೆ ಯಾರಾದರೂ ಸಂಶೋಧನೆ ಮಾಡಿದ್ದಾರೆಯೇ? ಎಂಬ ಮಾಹಿತಿ ಕೇಳಿದೆ. ಇದುವರೆಗೂ ಯಾವ ವಿಶ್ವವಿದ್ಯಾಲಯದಲ್ಲೂ ಕೊರಚ ಜನಾಂಗದ ಕುರಿತಾಗಿ ಸಂಶೋಧನಾ ಅಧ್ಯಯನಗಳು ನಡೆದಿಲ್ಲವೆಂಬ ಮಾಹಿತಿ ದೊರೆಯಿತು. ಹೀಗಾಗಿ ವಿಶ್ವವಿದ್ಯಾಲಯಗಳಿಂದ ಧೃಢೀಕರಣ ಪತ್ರವನ್ನು ಪಡೆದ ನಂತರ ನಾನು ಅಧ್ಯಯನದಲ್ಲಿ ತೊಡಗಿದ್ದು, ಕರ್ನಾಟಕದಲ್ಲಿ ‘ಕೊರಚ’ ಜನಾಂಗದ ಕುರಿತು ಅಧ್ಯಯನ ಮಾಡಿದವರಲ್ಲಿ ನಾನು ಮೊಟ್ಟ ಮೊದಲಿಗನಾಗಿದ್ದೇನೆ.

‘ಕೊರಚರು-ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನೆ ಮಾಡುವುದಕ್ಕಾಗಿ ಹಂಪಿ, ಕನ್ನಡ ವಿಶ್ವವಿದ್ಯಾಲಯದಲ್ಲಿ (ಡಿ. ಲಿಟ್) ನೋಂದಣಿಗಾಗಿ ಅರ್ಜಿ ಸಲ್ಲಿಸಿದೆ. ಸಂದರ್ಶನದಕರೆ ಪತ್ರ ಅಂಚೆಯಲ್ಲಿ ಬರುವುದುತಡವಾಗಿ, ಸಂದರ್ಶನಕ್ಕೆ ಹಾಜರಾಗದೇ, ಮೊದಲ ಬಾರಿಯ ಅವಕಾಶದಿಂದ ವಂಚಿತನಾದೆ. ‘ಮರಳಿ ಯತ್ನವ ಮಾಡು’ ಎನ್ನುವಂತೆ ಮತ್ತೆ ಒಂದು ವರ್ಷದ ನಂತರ ನೋಂದಣಿಗಾಗಿ ಪ್ರಯತ್ನಿಸಿ ಯಶಸ್ವಿಯಾದೆ.

ಮುಂದೆ, ಕೊರಚರ ಕುರಿತಾಗಿ ಮಾಹಿತಿ ಪಡೆಯಲು ಕೆಲವು ಪುಸಕ್ತಗಳನ್ನು ಸಂಗ್ರಹಿಸಿ ಓದಿದೆ. ಅವರು ತಮಿಳು ನಾಡಿನ ‘ಕುಳುವ’ ಜನಾಂಗಕ್ಕೆ ಸೇರಿದವರೆಂದೂ, ಅವರಲ್ಲಿ ನಾಲ್ಕು ಪಂಗಡಗಳಿರುವುದಾಗಿಯೂ ತಿಳಿದು ಬಂತು. ಆ ನಾಲ್ಕೂ ಪಂಗಡಗಳನ್ನೂ ಒಟ್ಟಾಗಿ ಸೇರಿಸಿಯೇ ಬ್ರಿಟೀಷರ ಕಾಲದಿಂದಲೂ ಅಧ್ಯಯನ ಮತ್ತು ಮಾಹಿತಿ ಸಂಗ್ರಹಣಾ ಕಾರ್ಯಗಳು ನಡೆದಿರುವುದನ್ನು ಗಮನಿಸಿದೆ. ಒಂದು ಪಂಗಡಕ್ಕೂ, ಇನ್ನೊಂದು ಪಂಗಡಕ್ಕೂ ಪ್ರಮುಖವಾಗಿ ಇರುವ ಸಾಂಸ್ಕೃತಿಕ ಭಿನ್ನತೆಗಳನ್ನು ಗಮನಿಸಿದೆ.

ಬ್ರಾಹ್ಮಣರಲ್ಲಿರುವ ವೈಷ್ಣವ, ಸ್ಮಾರ್ಥ, ಕಣ್ವ ಮುಂತಾದ ವಿವಿಧ ಪಂಗಡಗಳ ಆಚರಣೆಗಳು, ಅವರ ಆಚಾರ್ಯ ಪರಂಪರೆ, ಮಠಗಳು, ನಂಬಿಕೆಗಳು ಇತ್ಯಾದಿಗಳಲ್ಲಿ ನಾವು ಅನೇಕ ಪ್ರತ್ಯೇಕತೆಗಳನ್ನು ಸ್ಪಷ್ಟವಾಗಿ ಕಾಣುತ್ತಿರುವಾಗ, ಬ್ರಾಹ್ಮಣ ಸಂಸ್ಕೃತಿಯ ಅಧ್ಯಯನವೆ೦ದು ನಾವು ಎಲ್ಲಾ ಬ್ರಾಹ್ಮಣ ಪಂಗಡಗಳನ್ನೂ ಒಟ್ಟಾಗಿ ಸೇರಿಸಿ ಮಾಡುವಅಧ್ಯಯನವು ಹೇಗೆ ಬ್ರಾಹ್ಮಣ ಸಂಸ್ಕೃತಿಯ ಪರಿಪೂರ್ಣ ಅಧ್ಯಯನ ಆಗಲಾರದೋ, ಅದೇ ರೀತಿ ಕುಳುವರಲ್ಲಿ ಇರುವ ಎಲ್ಲಾ ಪಂಗಡಗಳನ್ನು ಒಟ್ಟಿಗೆ ಸೇರಿಸಿ ಮಾಡಿರುವ ಇದುವರೆಗಿನ ಅಧ್ಯಯನಗಳು ‘ಕುಳುವ’ ಜನಾಂಗದ ಒಟ್ಟು ಸಂಸ್ಕೃತಿಯ ಅಧ್ಯಯನವಾಗಲಾರದು ಎಂದು ನನಗೆ ಅನಿಸಿದ್ದರಿಂದ, ‘ಕುಳುವ’ ಜನಾಂಗದಲ್ಲಿರುವ ಒ೦ದು ಪಂಗಡವಾದ ಕೊರಚರ ಸಂಸ್ಕೃತಿಯು ಉಳಿದ ಮೂರು ಪಂಗಡಗಳಿಗಿ೦ತ ಭಿನ್ನವಾಗಿರುವುದರಿಂದ ಹಾಗೂ ಅವರು ಬುಡಕಟ್ಟು ಗುಣ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡು ಬದುಕುತ್ತಿರುವ ಕಾರಣಕ್ಕಾಗಿ ‘ಕೊರಚ’ ಜನಾಂಗದ ಕುರಿತು ನಾನು ಪ್ರತ್ಯೇಕವಾದ ಅಧ್ಯಯನಕ್ಕೆ ತೊಡಗಿದೆ.

ಸಂಶೋಧನೆ ಮತ್ತು ಅಧ್ಯಯನವನ್ನು ಪ್ರಾರಂಭಿಸಿದ ನನಗೆ ಈ ಸಂದರ್ಭದಲ್ಲಿಅಧಿಕೃತವಾಗಿ ಮಾರ್ಗದರ್ಶಕರು ಇಲ್ಲದ್ದರಿಂದ (ಡಿ.ಲಿಟ್‌ಗೆ ಮಾರ್ಗದರ್ಶಕರು ಇರುವುದಿಲ್ಲ), ಈ ಹಿಂದೆ ಕುಳುವ ಜನಾಂಗದ ಬಗ್ಗೆ ಮಾಡಿದ ಸಂಶೋಧನಾತ್ಮಕ ಲೇಖನಗಳು, ತಮ್ಮಲ್ಲಿದ್ದ ಪುಸ್ತಕಗಳನ್ನು ನೀಡಿ ನನಗೆ ಸಹಕರಿಸಿದ ಅನೇಕ ಹಿರಿಯ ವಿದ್ವಾಂಸರುಗಳು, ಮುಖ್ಯವಾಗಿ ಕ್ಷೇತ್ರಕಾರ್ಯದಲ್ಲಿ ತಮ್ಮ ಸಂಸ್ಕೃತಿಯ ಕುರಿತಾಗಿ ಸ್ವಲ್ಪವೂ ಬೇಸರಿಸದೇ, ನಾನು ಕೇಳಿದ್ದನ್ನೆಲ್ಲಾ ಹೇಳುತ್ತಿದ್ದ ನನ್ನ ಕೊರಚ ಬಂಧುಗಳೇ ನನಗೆ ಈ ಸಂಶೋಧನಾ ಅಧ್ಯಯನಕ್ಕೆ ಮಾರ್ಗದರ್ಶಕರಾದರು.

ನಾನು ಬ್ಯಾಂಕ್‌ ಉದ್ಯೋಗಿಯಾಗಿದ್ದುದರಿ೦ದ ನನಗಿದ್ದ ಅನೇಕ ಇತಿಮಿತಿಗಳ ನಡುವೆಯೇ ನಾನು ನನ್ನ ಸಂಶೋಧನಾ ಕಾರ್ಯವನ್ನು ಮುಂದುವರಿಸಿದೆ. ‘ನಿರಂತರವಾದ ಅಧ್ಯಯನದಿ೦ದ ಪಡೆದ ಅನುಭವ ಗಾಢವಾದಷ್ಟು, ಸಂಶೋಧನೆಗೆ ಬೇಕಾದ ಕಾಲಾವಧಿ ಕಡಿಮೆಯಾಗುತ್ತದೆ ಮತ್ತು ಹೆಚ್ಚಿನ ಕ್ಷೇತ್ರಕಾರ್ಯದಿಂದ ಮಾತ್ರ ಪೂರ್ಣ ಪ್ರಮಾಣದ ವಿಷಯ ಸಂಗ್ರಹಣೆ ಸಾಧ್ಯ’ ಎಂಬ ಅನುಭವಿ ಸಂಶೋಧಕರ ಮಾತಿನಂತೆ, ನಿರಂತರ ಅಧ್ಯಯನದೊಡನೆ, ಕರ್ನಾಟಕದಲ್ಲಿ ಕೊರಚರು ಹೆಚ್ಚಾಗಿ ನೆಲೆಗೊಂಡಿರುವ ಜಿಲ್ಲೆಗಳಿಗೆ ಅನೇಕ ಬಾರಿ ಭೇಟಿ ನೀಡಿ, ಒಂದೊ೦ದು ಜಿಲ್ಲೆಯಲ್ಲೂ ಕನಿಷ್ಠ ನಾಲ್ಕೈದು ಹಟ್ಟಿಗಳನ್ನು ಸಂಪರ್ಕಿಸಿ, ವಕ್ತೃಗಳನ್ನು ಸಂದರ್ಶಿಸಿ, ವಿಷಯಗಳನ್ನು ಧ್ವನಿ ಮುದ್ರಿಸಿಕೊಂಡು. ಕೆಲವು ಛಾಯಚಿತ್ರಗಳನ್ನು ಸಂಗ್ರಹಿಸಿ, ಕ್ಷೇತ್ರಕಾರ್ಯದಲ್ಲಿ ಸಾಮಾನ್ಯವಾಗಿ ಬಳಸುವ ಮೂರು ಪದ್ಧತಿಗಳಾದ ಸಂದರ್ಶನ (Interview method) ಆವಲೋಕನ (Observation method) ಪ್ರಶ್ನಾವಳಿಗಳೊಂದಿಗೆ (Questionnaire method) ನಾನು ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ನಾನು ಕೊರಚರ ಸಾಂಸ್ಕೃತಿಕ ಗುಣಲಕ್ಷಣಗಳನ್ನು ವಿಶೇಷವಾಗಿ ದಾಖಲಿಸಲು ಪ್ರಯತ್ನಿಸಿದ್ದು, ಮರೆಯಾಗಲಿರುವ ಅವರ ಪ್ರಮುಖ ಬುಡಕಟ್ಟು ಲಕ್ಷಣಗಳನ್ನು ಗ್ರಂಥಸ್ಥವನ್ನಾಗಿಸುತ್ತಾ, ಅವರು ಇತರ ಪಂಗಡಗಳೊ೦ದಿಗೆ ಹೊಂದಿರುವ ಭಿನ್ನತೆಯನ್ನು ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸಿದ್ದೇನೆ.

೨೫ ವರ್ಷಗಳ ಹಿಂದೆಯೇ ನಾನು ಈ “ಕೊರಚರು ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಹಂಪಿ, ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಿ. ಲಿಟ್ ಪಡೆದಿದ್ದು, ಅನಿವಾರ್ಯ ಕಾರಣಗಳಿಂದ ನನ್ನ ಈ ಡಿ.ಲಿಟ್ ಮಹಾ ಪ್ರಬಂಧವನ್ನು ಪ್ರಕಟಿಸುವಲ್ಲಿ ವಿಳಂಬವಾಗಿದೆ. ಈಗ ಆ ಮಹಾ ಪ್ರಬಂಧವು ಪ್ರಕಟಣೆಗೊಂಡು ತಮ್ಮ ಕೈ ಸೇರಿದೆ.

ಈ ೨೫ ವರ್ಷಗಳ ಅವಧಿಯಲ್ಲಿ ಮತ್ತೆ ಕೆಲವರು ‘ಕೊರಚ’ ಜನಾಂಗದಕುರಿತಾಗಿ ಸಂಶೋಧನೆಗಳನ್ನು ಕೈಗೊಂಡು ಡಾಕ್ಟರೇಟ್ ಪಡೆದಿದ್ದಾರೆ. ನನ್ನ ಅಪ್ರಕಟಿತ ಮಹಾಪ್ರಬಂಧದಲ್ಲಿರುವ ವಿವಿಧ ಮಾಹಿತಿಯನ್ನು ನನ್ನ ಹೆಸರನ್ನು ಉಲ್ಲೇಖಿಸಿ ಮತ್ತು ಉಲ್ಲೇಖಿಸದೆಯೇ ಅವರು ಬಳಸಿಕೊಂಡಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರವು ೨೦೦೮ರಲ್ಲಿ ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆಯ ಅಡಿಯಲ್ಲಿ ಪ್ರಕಟಿಸಿದ ’ಕೊರಮ’ ಪುಸ್ತಕದಲ್ಲಿ ನನ್ನ ಅಪ್ರಕಟಿತ ಮಹಾಪ್ರಬಂಧದಲ್ಲಿರುವ ಕೆಲವು ಮಾಹಿತಿಗಳನ್ನು ಯಾವುದೇ ಬದಲಾವಣೆಯೂ ಇಲ್ಲದೇ ಯಥಾವತ್ತಾಗಿ ನನ್ನ ಮಹಾಪ್ರಬಂಧದ ಅಥವಾ ನನ್ನ ಹೆಸರಿನ ಉಲ್ಲೇಖವಿಲ್ಲದೆಯೇ ಬಳಸಿಕೊಳ್ಳಲಾಗಿದೆ. ಇನ್ನೂ ಮುಂದುವರಿದು ಒಬ್ಬರು ‘ಕರ್ನಾಟಕದಲ್ಲಿ ಕೊರಚ ಜನಾಂಗದ ಕುರಿತಾಗಿ ಮೊದಲು ಸಂಶೋಧನೆ ಮಾಡಿದ್ದು ನಾನೇ’ ಎಂಬುದಾಗಿ ವಿವಿಧ ವೇದಿಕೆಗಳಲ್ಲಿ ಹೇಳಿಕೊಂಡಿರುವುದು ಕೂಡಾ ನನಗೆ ತಿಳಿದು ಬಂದಿದೆ.

ನಾನು ಸಂಶೋಧನಾ ಕಾರ್ಯದಲ್ಲಿ ತೊಡಗಿದಾಗ ನನಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅನೇಕರು ಸಹಕಾರ ನೀಡಿದ್ದಾರೆ. ಈಗಾಗಲೇ ನಮ್ಮನ್ನುಅಗಲಿರುವ ನನ್ನ ತಂದೆ ಹೆಚ್. ಕೃಷ್ಣಮೂರ್ತಿರಾವ್, ಅಣ್ಣ ಹೆಚ್. ಶೇಷಗಿರಿರಾವ್, ಅಳಿಯ ಕೆ. ಸುದರ್ಶನ, ನನ್ನ ಬದುಕಿಗೆತಿರುವು ನೀಡಿದ ಹಾಗು ಸಂಶೋಧನೆಗೆ ಮಾರ್ಗದರ್ಶನ ನೀಡಿದ ಗುರುಗಳಾದ ಎಸ್. ಎಸ್. ಹಿರೇಮಠ, ನನ್ನೊಡನೆ ಎರಡು ವರ್ಷಗಳ ಕಾಲ ನಿರಂತರವಾಗಿ ಕ್ಷೇತ್ರಕಾರ್ಯದಲ್ಲಿ ಪಾಲ್ಗೊಂಡ ಗೆಳೆಯ ಕೊರವರ ನಾಗೇಂದ್ರಪ್ಪ, ಆಗಿನ ಸಹ್ಯಾದ್ರಿಗ್ರಾಮೀಣಾ ಬ್ಯಾಂಕಿನ ಆನವಟ್ಟಿ ಶಾಖೆಯಲ್ಲಿ ಶಾಖಾಧಿಕಾರಿಯಾಗಿದ್ದ ಮಹಬಲೇಶ್ವರ ಮತ್ತು ನಾಗಭೂಷಣ ಶ್ರೇಷ್ಠಿ ಇವರೆಲ್ಲರ ಸಹಕಾರವನ್ನು ನಾನು ಸ್ಮರಿಸುತ್ತೇನೆ.

ಅಣ್ಣ ಹೆಚ್. ನಾಗಭೂಷಣರಾವ್, ತಮ್ಮ ರಂಗನಾಥ ಹವಲ್ದಾರ್, ಅಧ್ಯಯನ ಪ್ರಬಂಧವನ್ನು ಬೆರಳಚ್ಚಿಸಿದ ಹಾಗೂ ಕ್ಷೇತ್ರ ಕಾರ್ಯದಲ್ಲಿ ಅನೇಕ ಕೊರಚರ ಹಟ್ಟಿಗಳಿಗೆ ನನ್ನೊಡನೆ ಬಂದು ಧ್ವನಿ ಮುದ್ರಣ ಹಾಗೂ ಮಾಹಿತಿ ಸಂಗ್ರಹಣೆಯ ಕಾರ್ಯದಲ್ಲಿ ನನ್ನೊಡನಿದ್ದ ನನ್ನ ಪತ್ನಿ ಟಿ. ವಿಜಯಲಕ್ಷ್ಮಿ ನನ್ನ ಮಕ್ಕಳಾದ ಅವನಿಧರ, ಇಂದುಧರ ಹಾಗು ಸಹಕಾರ ನೀಡಿದ ಕುಟುಂಬದ ಇತರ ಸದಸ್ಯರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ.

ಹೂವಿನ ಹಡಗಲಿಯ ಡಾ. ಕರಿಶೆಟ್ಟಿ ರುದ್ರಪ್ಪನವರು, ಅರಸೀಕೆರೆಯ ಎನ್. ದೇವೇಂದ್ರಪ್ಪ, ಹಡಗಲಿಯ ಪೀರಭಾಷಾ, ಮೆಟ್ರಿಯ ಗಂಗಾಧರ ಹೊನ್ನಳ್ಳಿ, ಬಳ್ಳಾರಿಯ ಡಾ. ವೆಂಕಟಯ್ಯಅಪ್ಪಗೆರೆ, ಧಾರವಾಡದ ಸ್ನೇಹಿತರಾದ ಮುಕುಂದ ಮೈಗೂರು, ಬೆಂಗಳೂರಿನ ಕಾರ್ಮಿಕ ಮುಖಂಡರಾದಎಸ್. ವೈ. ಗುರುಶಾಂತ್, ಬಾಗೇಪಲ್ಲಿಯ ಸಿಪಿಎಂ ಗೆಳೆಯರು, ಹರಪನಹಳ್ಳಿಯ ಗೆಳೆಯ ಛಾಯಾಗ್ರಾಹಕ ಮಧು ಬಗರೆ, ಬಿಜಾಪುರದ ಬಿ. ಬಿ. ಹಂಡರಗಲ್, ಹೆಚ್. ಕೆ. ಶ್ಯಾಮರಾವ್ ಹುರಳಿಹಾಳು ಹೀಗೆ ಅನೇಕರು ತಮ್ಮಲ್ಲಿರುವ ಪುಸ್ತಕಗಳನ್ನು ನೀಡಿ, ಮಾಹಿತಿಯನ್ನು ಒದಗಿಸಿ, ಕ್ಷೇತ್ರಕಾರ್ಯಕ್ಕೆ ಹೋದಾಗ ಎಲ್ಲಾ ಬಗೆಯ ಸಹಕಾರವನ್ನು ನೀಡಿದ್ದಾರೆ. ಇವರೆಲ್ಲರಿಗೂ ಕೂಡಾ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ಹಂಪಿ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಹೆಚ. ಜೆ. ಲಕ್ಕಪ್ಪಗೌಡರು ಮತ್ತು ಹಿರಿಯ ವಿದ್ವಾಂಸರುಗಳಾದ ಡಾ. ಹಿ. ಚಿ. ಬೋರಲಿಂಗಯ್ಯ, ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಕೆ. ವಿ. ನಾರಾಯಣ, ಡಾ. ರಹಮತ್‌ ತರೀಕೆರೆ ಅವರಿಗೂ ಕೂಡಾ ಕೃತಜ್ಞತೆಗಳನ್ನು ತಿಳಿಸುತ್ತೇನೆ.

ಈ ನನ್ನ ಡಿ. ಲಿಟ್ ಮಹಾ ಪ್ರಬಂಧವನ್ನು ನಾನು ೨೦೦೫ರಲ್ಲಿ ಪ್ರಕಟಿಸಲು ನಿರ್ಧರಿಸಿ, ಮುನ್ನುಡಿ ಬರೆದುಕೊಡಲು ವಿನಂತಿಸಿದಾಗ, ಸಂತೋಷದಿ೦ದ ಒಪ್ಪಿ, ಅವರಿಗಿದ್ದಅನಾರೋಗ್ಯ ಮತ್ತುದೃಷ್ಠಿ ದೋಷದ ಮಧ್ಯೆಯೂ ಮುನ್ನುಡಿಯನ್ನು ಬಾಯಲ್ಲಿ ಹೇಳಿ, ನನ್ನಿಂದಲೇ ಬರೆಯಿಸಿದ ಹಾಗೂ ನನ್ನ ಸಂಶೋಧನೆಗೆ ಅನೇಕ ಬಗೆಯ ಸಹಕಾರ ನೀಡಿದ ಹಿರಿಯ ವಿದ್ವಾಂಸರೂ, ಸಂಶೋಧಕರೂ ಆಗಿದ್ದ, ಬೆಂಗಳೂರಿನ ದಿವಂಗತ ಎನ್. ಪಿ. ಶಂಕರ ನಾರಾಯಣರಾವ್‌ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಮರಿಸುತ್ತೇನೆ. ಆ ಮುನ್ನುಡಿಯನ್ನೇ ಯಥಾವತ್ತಾಗಿ ಮುದ್ರಿಸಲಾಗಿದೆ.

ತಮ್ಮ ಸಂಸ್ಕೃತಿಯ ಒಳಪದರುಗಳನ್ನೆಲ್ಲಾ ಬಿಚ್ಚಟ್ಟು ಅಧ್ಯಯನಕ್ಕೆ ಸಹಕರಿಸಿದ ಕರ್ನಾಟಕದ ವಿವಿಧ ಹಟ್ಟಿಗಳ ಮುಖ್ಯವಾಗಿ ಹಿಕ್ಕಿಮಗೆರೆ, ಮಾಚಿಹಳ್ಳಿ, ಯಲ್ಲಾಪುರ, ಶಿವಪುರ, ಬತ್ತನಹಳ್ಳಿ, ಅಗ್ರಹಾರ, ಎರೆಡೆತ್ತಿನ ಹಳ್ಳಿ, ಲಿಂಗಾನಹಳ್ಳಿ, ಸಂಡೂರು, ಆನವಟ್ಟಿ, ಕೆ.ಮರೆಮ್ಮನಹಳ್ಳಿ, ರಾಜಾನುಕುಂಟೆಯ ನನ್ನ ಕೊರಚ ಬಂಧುಗಳಿಗೆ ಈ ಅಧ್ಯಯನ ಪ್ರಬಂಧವನ್ನು ಅರ್ಪಿಸಿದ್ದು, ಅವರೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಇದರೊಂದಿಗೆ ತಮ್ಮ ಸಂಸ್ಕೃತಿಯು ಕೊರಚರ ಸಂಸ್ಕೃತಿಯೊಡನೆ ಹೇಗೆ ಭಿನ್ನವಾಗಿದೆ ಎಂಬುದಕ್ಕೆ ಸಂಬ೦ಧಿಸಿದ೦ತೆ ಅನೇಕ ಮಾಹಿತಿಗಳನ್ನು ನೀಡಿದ ಹರಿಯಮ್ಮನಹಳ್ಳಿ, ಅಗ್ರಹಾರ ಮತ್ತು ಸಂಡೂರಿನ ಕೊರವ ಬಂಧುಗಳು, ಮೆಟ್ರಿ ಮತ್ತು ಕೊಪ್ಪಳದ ಕುಂಚೀಕೊರವ ಬಂಧುಗಳು ಹಾಗೂ ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿಯ ಕೊರಮ ಬಂಧುಗಳಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಈ ಪುಸ್ತಕ ವಿನ್ಯಾಸ ಮಾಡಿರುವ ನನ್ನ ಮಗ ಅವನಿಧರ ಹವಲ್ದಾರ್ ಮತ್ತು ಪುಸ್ತಕವನ್ನು ಮುದ್ರಿಸಿದ ಗ್ರಾಫಿಕ್ ಮೀಡಿಯಾ, ಬೆಂಗಳೂರು ಇವರಿಗೆ ಮತ್ತು ಈ ಕೆಲಸದಲ್ಲಿ ನೆರವಾದ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ತಿಳಿಸುವೆ.

‍ಲೇಖಕರು Admin

3 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading