ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕಿನ ಬಗ್ಗೆ ಚಿಂತಿಸುವಂತೆ ಮಾಡುವ ‘ಅಜ್ಞಾತವಾಸ’ 

ಪಾಲಹಳ್ಳಿ ವಿಶ್ವನಾಥ್ ಅವರ ನಾಟಕ ಕೃತಿ ‘ಅಜ್ಞಾತವಾಸ’ 

ಈ ಕೃತಿಯ ಕುರಿತ ಸಂಪಿಗೆ ತೋಂಟದಾರ್ಯ ಅವರ ಬರಹ ಇಲ್ಲಿದೆ.

-ಸಂಪಿಗೆ ತೋಂಟದಾರ್ಯ

ಮಹಾಭಾರತದಲ್ಲಿ ಬರುವ ಪಾಂಡವರ ಅಜ್ಞಾತ ವಾಸ ಪ್ರಸಂಗವನ್ನು ನೆಪ ಮಾಡಿಕೊಂಡು, ಪ್ರೊ.ವಿಶ್ವನಾಥ್ ಅವರು, ತಮ್ಮದೇ ಆದ ವಿಶಿಷ್ಟ ಕಲ್ಪನೆಗಳಿಂದ ಈ “ಅಜ್ಞಾತ ವಾಸ” ನಾಟಕ ರಚಿಸಿದ್ದಾರೆ. ನಾಟಕದಲ್ಲಿ ಪೌರಾಣಿಕತೆ, ಆಧುನಿಕತೆಗಳ ವಿಚಾರಗಳನ್ನು ಬೆರೆಸಿ, ಸರಳ ಆದರೆ ಗಂಭೀರ ಅರ್ಥ ಹೊಂದಿರುವ ಆಡುನುಡಿಗಳ ಸಂಭಾಷಣೆಗಳನ್ನು ಹೆಣೆಯಲಾಗಿದೆ. ನಾಟಕವನ್ನು ಓದುತ್ತಿದ್ದರೆ ಆಧುನಿಕ ಪ್ರಪಂಚದ ಅಸಂಗತತೆಯ ತಾತ್ವಿಕತೆಯು ಒಳನುಗ್ಗಿ, ಮನುಷ್ಯರ ಸ್ಥಿತಿಗತಿಯು ಅನಾದಿಕಾಲದಿಂದಲೂ ಒಂದೇ ಸಮನಾಗಿ ಹರಿದು ಬರುತ್ತಿರುವುದೇನೋ ಎನಿಸುವಂತಾಗುತ್ತದೆ. ಕಲ್ಪನೆಗಳು ಹಲವಾರು ಕಡೆ ಉತ್ಪ್ರೇಕ್ಷೆ ಮಟ್ಟವನ್ನು ಬೇಕಂತಲೇ ತಲುಪಿ ಮಾನವ ಸಮಾಜದ ಒಳಹೊರಗನ್ನು ತೋರಿಸಲು ಪ್ರಯತ್ನಿಸುತ್ತವೆ. 

ನಕುಲ ಸಹದೇವರು ಪಾಂಡವರಲ್ಲಿ ನಗಣ್ಯರಾಗಿದ್ದರೂ, ತ್ರಿಕಾಲ ಜ್ಞಾನಿಗಳು ಮತ್ತು ಇಬ್ಬರೂ ಏಕೋಭಾವದವರಾಗಿದ್ದರು ಎಂದು ‌ತೋರಿಸಲು ಅವರ ಮಾತುಗಳಲ್ಲೆ ವ್ಯಕ್ತವಾಗುವಂತೆ ಮಾಡಲಾಗಿದೆ.ಅಜ್ಞಾತ ವಾಸದಲ್ಲಿ ಕುಂತೀ ಪುತ್ರರು ತಮ್ಮ ಚಹರೆ ಬದಲಿಸಿಕೊಂಡಿದ್ದರೂ ಇವರು ಮಾತ್ರ ಹಾಗೇ ಇರುತ್ತಾರೆ. ಯಾಕೆಂದರೆ ಇವರನ್ನು ಯಾರು ಲಕ್ಷಿಸುವುದಿಲ್ಲ ಮತ್ತು ಇವರು ಗೊತ್ತೂ ಇರುವುದಿಲ್ಲ. ಅದಕ್ಕಾಗೇ ದುರ್ಯೋಧನ ಶತ್ರು ರಾಜ್ಯವಾದ, ಮರುಭೂಮಿಯಲ್ಲಿ ಇರುವ, ವಿರಾಟನಗರ ವನ್ನು ಅಜ್ಞಾತ ವಾಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. 

ಮತ್ತು, ಯುಧಿಷ್ಠಿರ ಒಂದು ಕಡೆ ಹೇಳುತ್ತಾನೆ; ಅದೇ ಮುಖ್ಯ. ಪಾತ್ರಗಳಲ್ಲಿ ನಾವು ತಲ್ಲೀನರಾಗಿರ ಬೇಕು .ನಮಗೇ ಗೊತ್ತಾಗಬಾರದು ನಾವು ಯಾರೆಂದು !ಹಾಗೇ ನಾಟಕದಲ್ಲಿ, ಕುಂತೀ ಪುತ್ರರು, ಮಹಾಭಾರತದ ಕಥೆಗಳಿಗೇ ಹೋಗಿ, ವ್ಯಾಸ ಮಹರ್ಷಿ, ನಳ, ಏಕಲವ್ಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲೆ ತಲ್ಲೀನರಾದಂತೆ ಆಡುತ್ತಾರೆ. ಯುಧಿಷ್ಠಿರನಂತು ವ್ಯಾಸ ಮಹರ್ಷಿ, ನಿಯೋಗ ಪದ್ಧತಿ ಅನುಸರಿಸಿ ಕುರುವಂಶ ಬೆಳೆಯಲು ಕಾರಣವಾಗಿದ್ದನ್ನು ಸಾಕಷ್ಟು ನೇರವಾಗಿ ಎಳೆ ಎಳೆಯಾಗೇ ಚಿತ್ರಿಸುತ್ತಾನೆ. ಇದಕ್ಕೆ ನಕುಲ ಸಹದೇವರ ಸಾಥ್ ಸಿಗುತ್ತದೆ.!!

ಆದರೂ, ನಾಟಕದ ಮಾತುಗಳಲ್ಲಿ ಅನೇಕ ಕಡೆ ತುಂಬಾ ಒಳಾರ್ಥಗಳನ್ನು ಕಾಣಬಹುದಾಗಿದೆ.ಉದಾಹರಣೆಗೆ :

1. ಅಜ್ಞಾತವಾಗುವ ನಗರದಲ್ಲಿ ಅಜ್ಞಾತ ವಾಸ ಮಾಡಿದರೆ ನಿಜವಾಗಿಯೂ ಅಜ್ಞಾತವಾಸ ಮಾಡಿದ ಹಾಗೆ ಆಗುತ್ತದೆಯೆ ?.

2. ಒಬ್ಬ ಮನುಷ್ಯ ಇರ್ತಾನೆ ಅಂದುಕೊಳ್ಳಿ. ಅವನನ್ನು ನಾವು ಅವನು ಅಂದುಕೋತೀವಿ. ಆದರೆ ಅವನು ಅವನಾಗಿರುವುದಿಲ್ಲ. ಕೆಲವು ಸತಿ ಅವನಿಗೂ ಅದು ಗೊತ್ತಿರುವುದಿಲ್ಲ. !

3. ಚಕ್ರವರ್ತಿ — ಚಿಟ್ಟೆ ಕನಸುಗಳ ಪ್ರಸಂಗ –  ಅ) . ಏನೇ ಇರಲಿ , ಆಸ್ಥಾನದಲ್ಲಿ ಎಲ್ಲರನ್ನೂ ‌ಕೇಳಲು ಶುರು ಮಾಡಿದರು. ವಿರಾಟದಲ್ಲಿ ಚಕ್ರವರ್ತಿ, ಕನಸಿನ ಚಿಟ್ಟೆಯೋ ಅಥವಾ ಚಿಟ್ಟೆಯ ಕನಸಿನ ಚಕ್ರವರ್ತಿಯೋ?

ಆ). ಪಾಂಚಾಲಿ: (ನಗುತ್ತಾ) ಆರ್ಯಪುತ್ರರಿಗೆ ಈಗ ಚಿಟ್ಟೆಯ ಕನಸು ಪ್ರಾರಂಭವಾಗುತ್ತಿದೆಯೇ ?

ಯುಧಿಷ್ಠಿರ : (ನಗುತ್ತಾ) ಇದು ಚಿಟ್ಟೆಯ ನಿಜ ಜೀವನ ಪಾಂಚಾಲಿ ! ಈ ಚಿಟ್ಟೆಗೆ ಈಗ ಎಲ್ಲಿಂದಲೋ ಸೌಗಂಧಿಕಾ ಪುಷ್ಪದ ಸುವಾಸನೆ ಬರುತ್ತಿದೆ. ಹೋಗಿ ನೋಡೋಣವೇ ಮಹಾರಾಣಿ ?

4. ಯುಧಿಷ್ಠಿರ : ಯುದ್ಧವಿಲ್ಲದೆ ಬೇರೆ ದಾರಿಯೇ ಇಲ್ಲವೆ ಪಾಂಚಾಲಿ ‌? ಕ್ಷತ್ರಿಯ ಧರ್ಮವಿರುವುದು ಪ್ರಜಾಪಾಲನೆಗಾಗಿ, ಪ್ರಜಾ ನಾಶಕ್ಕಲ್ಲ.

ಇಡೀ ನಾಟಕವೇ ಪಾತ್ರಗಳ ಅಸ್ತಿತ್ವಗಳ, ಬದುಕಿನ ವೈರುಧ್ಯಗಳ, ಬದುಕಿನ ಶೋಧನೆಗಳನ್ನು, ಅವುಗಳ ಹಿಂದಿರುವ ತಾತ್ವಿಕತೆ ಜಾಡನ್ನೂ ಆಡು ಮಾತುಗಳಲ್ಲೇ ತೋರಿಸುತ್ತದೆ. ಒಟ್ಟಾರೆ, ವಿಶಿಷ್ಟ ಕಲ್ಪನೆಗಳು, ತಾತ್ವಿಕತೆ ಹಿನ್ನಲೆಗಳು, ವೈಚಾರಿಕತೆ ವಿಡಂಬನೆ, ತುಂಟತನ, ಹಾಸ್ಯಗಳು, ಸಾಕ್ಷಿ ಪ್ರಜ್ಞೆ ನಿಲುವಿಂದ ಸಮ್ಮಿಶ್ರಗೊಂಡು, ಈ ಅಜ್ಞಾತವಾಸ ನಾಟಕ, ಅನೇಕ ಆಯಾಮಗಳನ್ನು ಒಳಗೊಂಡಿದ್ದು, ಓದುಗನನ್ನು ಎತ್ತಿಕೊಂಡು ಎತ್ತೆತ್ತಲೋ ತಿರು ತಿರುಗಿಸುತ್ತಾ, ಬಗೆ ಬಗೆಯ ದೃಶ್ಯಗಳನ್ನು ಮನಸ್ಸಿನಲ್ಲಿ ಮೂಡಿಸುತ್ತಾ, ರಂಜಿಸುತ್ತಲೇ ಬದುಕಿನ ಬಗ್ಗೆ ಚಿಂತಿಸುವಂತೆ ಮಾಡುವಂತಿದ್ದು, ಪಂಡಿತ ಪಾಮರರಿಬ್ಬರಿಗೂ ರುಚಿಸುತ್ತದೆ‌. 

ಇಂತಹ ವಿಶಿಷ್ಠವಾದ ನಾಟಕವೊಂದನ್ನು ನೀಡಿದ ಪ್ರೊ.ಪಾಲಹಳ್ಳಿ ವಿಶ್ವನಾಥ್ ಅವರಿಗೆ ಹೃತ್ಪೂರ್ವಕ‌ವಾಗಿ ಅಭಿನಂದಿಸುತ್ತೇನೆ. 

‍ಲೇಖಕರು Admin

5 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading