ಡಾ. ಎಸ್. ಜಯಶ್ರೀನಿವಾಸ ರಾವ್ ಅವರ ಅನುವಾದದ ಕೃತಿ ‘ರೆಕ್ವಿಯೆಮ್’
ಮಿಂಚುಳ್ಳಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಮುನ್ನುಡಿಯಿಂದ ಆಯ್ದ ಭಾಗ ಇಲ್ಲಿದೆ.
–ಮಧು ಬಿರಾದಾರ
ಕನ್ನಡ ಅನುವಾದ ಪರಂಪರೆಗೆ ಶತಮಾನದ ಚರಿತ್ರೆ ಇದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಜಾಗತಿಕ ನೆಲೆಯಲ್ಲಿ ನೋಡುವ ಆ ಬಗೆಯಲ್ಲಿ ಅವಿರತ ಕೆಲಸ ಮಾಡಿದ ಮಹನೀಯರು ಪಂಜೆ ಮಂಗೇಶರಾಯ, ಹಟ್ಟಿಯಂಗಡಿ ನಾರಾಯಣರಾಯ ಮತ್ತು ಬಿ.ಎಂ.ಶ್ರೀ ಮುಖ್ಯರು. ಹೊಸಗನ್ನಡ ಕಾವ್ಯ ಜಗತ್ತಿಗೆ ಭಾಷೆ, ಲಯ, ವಸ್ತು ಮತ್ತು ಪ್ರಾಯೋಗಿಕ ದಾರಿ ತೋರಿದ್ದು ಶ್ರೀಯವರ ‘ಇಂಗ್ಲೀಷ್ ಗೀತಗಳು’. ಅಲ್ಲಿಂದ ಜಗತ್ತಿನ ಬೇರೆ ಬೇರೆ ಭಾಷೆಯಿಂದ ಸಾಕಷ್ಟು ಕಾವ್ಯ ಕನ್ನಡಕ್ಕೆ ಬಂದಿರುವುದು ತಿಳಿದಿರುವ ಸಂಗತಿ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳು ಏನೆಂದರೆ ಒಂದು ‘ಬಾಲ್ಟಿಕ್ ಕಡಲ ಗಾಳಿ’ ಇನ್ನೊಂದು ‘ರೆಕ್ವಿಯೆಮ್’ ಈ ಎರಡೂ ಅನುವಾದಿಸಿದ ಡಾ. ಎಸ್. ಜಯಶ್ರೀನಿವಾಸ ರಾವ್ ಅವರು ಭಿನ್ನವಾಗಿ ಕಾಣುತ್ತಾರೆ. ಕಾರಣ, ಈ ಅನುವಾದದ ಹಿಂದಿನ ಆಯ್ಕೆ. ‘ಬಾಲ್ಟಿಕ್ ಕಡಲ ಗಾಳಿ’ ಬಾಲ್ಟಿಕ್ ಗಣರಾಜ್ಯಗಳಾದ ಲ್ಯಾಟ್ವಿಯಾ, ಎಸ್ಟೊನಿಯಾ ಮತ್ತು ಲಿಥುವೇನಿಯಾ ದೇಶಗಳ ಕವಿತೆಗಳ ಗುಚ್ಛವಾಗಿದೆ. 1994-ರ ವರೆಗೆ ಲ್ಯಾಟ್ವಿಯಾ, ಎಸ್ಟೊನಿಯಾ ಮತ್ತು ಲಿಥುವೇನಿಯಾ ರಷ್ಯಾ ಮತ್ತು ಜರ್ಮನಿಯ ಸರ್ವಾಧಿಕಾರಿಕ್ಕೆ ತಿರುಗಿ ತಿರುಗಿ ತುತ್ತಾಗಿ ಅವರ ಸಾಮ್ರಾಜ್ಯ ವಿಸ್ತರಣೆಗೆ ಬಲಿಯಾಗಿ ನರಳಾಡಿದ ದೇಶಗಳಾಗಿವೆ. ಬಹುತೇಕ ಈ ದೇಶಗಳು ಅಸ್ತಿತ್ವದಲ್ಲಿವೆ ಎಂದು ಯುರೋಪಿನವರನ್ನು ಹೊರತುಪಡಿಸಿ ಇನ್ನಾರಿಗೂ ಗೊತ್ತಿರಲಿಲ್ಲವೆಂದೆನಿಸುತ್ತದೆ. ಹಾಗೆ ಸಾಹಿತ್ಯ ಜಗತ್ತಿನಿಂದ ಈ ಮೂರು ಭಾಷೆಗಳ ಸಾಹಿತ್ಯ ಇನ್ನೂ ಅಜ್ಞಾತವಾಗಿದೆ ಎನಿಸುತ್ತದೆ. ಕನ್ನಡಕ್ಕೂ ಅಷ್ಟೇ. ಹೀಗೆ, ಈ ‘ಬಾಲ್ಟಿಕ್ ಕಡಲ ಗಾಳಿ’ ಸಂಕಲನ ಕನ್ನಡ ಕಾವ್ಯ ಜಗತ್ತಿಗೆ ಸೇರ್ಪಡೆಯಾದ ಅತ್ಯಂತ ಅಜ್ಞಾತವಾದ ಕಾವ್ಯ. ಇಂತಹ ಮಹತ್ವದ ಅನುವಾದದ ಮೂಲಕ ಜಯಶ್ರೀನಿವಾಸ ರಾವ್ ಅವರು ಚರಿತ್ರಾರ್ಹ ಮತ್ತು ಸ್ಮರಣೀಯ ಕೆಲಸ ಮಾಡಿದ್ದಾರೆಂದು ಹೇಳಬಹುದು. ವಿಶೇಷವೆಂದರೆ ಈ ‘ಬಾಲ್ಟಿಕ್ ಕಡಲ ಗಾಳಿ’ ಮತ್ತು ‘ರೆಕ್ವಿಯೆಮ್’ ಸಂಕಲನದ ಹಿಂದೆ ರಷ್ಯಾ ಮತ್ತು ಜರ್ಮನಿಯ ಸರ್ವಾಧಿಕಾರಕ್ಕೆ ಬಲಿಯಾದ ಅಸಹಾಯಕ ಧ್ವನಿಗಳ ನರಳಾಟವಿದೆ. ಈ ಎರಡೂ ಸಾಮಾನ್ಯವಾಗಿ ಮೊದಲ ಮತ್ತು ಎರಡನೆಯ ಮಹಾಯುದ್ಧದ ಸಂದರ್ಭ ಅಥವಾ 1900-ರಿಂದ 1980-ರ ಮಧ್ಯೆ ರಚನೆಯಾದ ಕವಿತೆಗಳೆ ಆಗಿವೆ. ಆ ಕಾಲದ ಚರಿತ್ರೆ ಅರ್ಥೈಸಲು ಇದು ಸಹಾಯಕವೆಂದೆ ಹೇಳಬಹುದು.
ರಷ್ಯಾದ ಕಾವ್ಯ ಎಂದಾಗ ಮೊದಲು ನೆನಪಿಗೆ ಬರುವುದು ಶಾ. ಬಾಲುರಾವ್. ಅವರು ರಷ್ಯನ್ ಭಾಷೆ ಕಲಿತು ಆನಾ ಆಹ್ಮತೋವಾ ಅವರ ‘ರಿಕ್ವಿಯಂ ಮತ್ತಿತರ ನೂರು ಕವಿತೆಗಳು’ ಸಂಕಲನ ಅನುವಾದಿಸಿದ್ದಾರೆ. ಜೊತೆಗೆ ರಷ್ಯಾದ ಆಧುನಿಕ ಕಾವ್ಯ ಮತ್ತು ಬದಲಾದ ಕಾವ್ಯ ಮಾರ್ಗಗಳ ಕುರಿತು ಪರಿಚಯಾತ್ಮಕ ಪ್ರಸ್ತಾವನೆಯನ್ನು ಬರೆದಿದ್ದಾರೆ. ಇದು ರಷ್ಯನ್ ಕಾವ್ಯ ಓದುಗರಿಗೆ ಒಳ್ಳೆಯ ಮಾಹಿತಿ ಒದಗಿಸುತ್ತದೆ. ಹಾಗೆಯೇ ಬುದ್ದಣ್ಣ ಹಿಂಗಮಿರೆಯವರು ಕೂಡ ರಷ್ಯನ್ ಸಾಹಿತ್ಯದಲ್ಲಿ ಎಂ.ಎ. ಓದಿ ಹಲವಾರು ಅಲ್ಲಿಯ ಕವಿಗಳ ಕವಿತೆಗಳನ್ನು ಅನುವಾದಿಸಿದ್ದಾರೆ. ಉದಾಹರಣೆಗೆ – ರಷ್ಯನ್ ಹೊಸ ಕವಿತೆಗಳು, ತರಾಸ್ ಷೆವ್‌ಚೆಂಕೊ (Taras Shevchenko) ಕವಿತೆಗಳು, ಅವೆತಿಕ್ ಇಸ್ಸಾಕ್ಯಾನ್ (Avetik Isahakyan) ಕಾವ್ಯ, ಪುಷ್ಕಿನ್ (Alexander Pushkin) ಕವಿತೆಗಳು, ಬೈಲೊರಷ್ಯನ್ ಕವಿತೆಗಳು ಮುಂತಾದವು. ಹಾಗೆ ಕುಮಾರ್ ಎಸ್. ಅವರು ಮರೀನಾ ತ್ಸ್ವಿತಯೇವಾ (Marina Tsvetaeva) ಅವರ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ನಾನು ಗಮನಿಸಿದಂತೆ ಇಷ್ಟು ರಷ್ಯಾದಿಂದ ಕನ್ನಡಕ್ಕೆ ಬಂದ ಕಾವ್ಯವಾಗಿದೆ.
ನನಗೆ ರಷ್ಯನ್ ಮತ್ತು ಇಂಗ್ಲಿಷ್ ಭಾಷೆಯ ತಿಳುವಳಿಕೆ ಅಷ್ಟಕಷ್ಟೆ. ಶಾ. ಬಾಲುರಾವ್ ಅವರ ‘ರಿಕ್ವಿಯಂ’ ಮತ್ತು ಜಯಶ್ರೀನಿವಾಸ ರಾವ್ ಅವರ ‘ರೆಕ್ವಿಯೆಮ್’ ಎರಡೂ ಒಂದೇ ಸಂಕಲನ. ಶಾ. ಬಾಲುರಾವ್ ಅವರು ಆನಾಳ ಮುಖ್ಯವಾದ ಸಂಕಲನಗಳ ಕವಿತೆಗಳ ಜೊತೆಗೆ ‘ರಿಕ್ವಿಯಂ’ ಕೂಡ ಅನುವಾದಿಸಿದ್ದಾರೆ. ಆದರೆ ಜಯಶ್ರೀನಿವಾಸ ರಾವ್ ಅವರು ‘ರೆಕ್ವಿಯೆಮ್’ ಹೆಸರಿನ ಸಂಕಲನ ಮಾತ್ರ ಅನುವಾದಿಸಿದ್ದಾರೆ. ಇದರಲ್ಲಿಯ ಒಟ್ಟು ಕೂಡಿಸಿದರೆ 15 ಕವಿತೆಗಳು ಮಾತ್ರ ಇವೆ. ಆದರೆ ಇಲ್ಲಿಯ ಕವಿತೆಗಳು ಆನಾಳ ಬದಲಾದ ಬದುಕಿನ ಗತಿ ಮತ್ತು ತನ್ನ ಬದುಕಿನ ಸ್ಥಿತ್ಯಂತರವನ್ನು ಆರ್ತವಾಗಿ ಮನೋಜ್ಞವಾಗಿ ಚಿತ್ರಿಸಿರುವುದನ್ನು ಕಾಣಬಹುದು. ಈ ಸಂಕಲನ ಪ್ರತ್ಯೇಕವಾಗಿ ಅನುವಾದಿಸಿರುವುದರಿಂದ ಅಧ್ಯಯನದ ದೃಷ್ಟಿಯಿಂದ ಮತ್ತು ಆ ಕಾಲದ ರಷ್ಯನ್ ಜಗತ್ತನ್ನು ಅರ್ಥೈಸಲು ಇನ್ನಷ್ಟು ಸುಲಭವೆನಿಸುತ್ತದೆ. ಈ ಇಬ್ಬರ ಅನುವಾದದಲ್ಲೂ ಒಂದಿಷ್ಟು ಬದಲಾವಣೆಗಳಿವೆ. ಕವಯಿತ್ರಿಯನ್ನು ಆನಾ ಆಹ್ಮತೋವಾ ಮತ್ತು ಸಂಕಲನವನ್ನು ‘ರಿಕ್ವಿಯಂ’ ಎಂದು ಅದನ್ನು ‘ಶಾಂತಿಗೀತೆ’ ಎಂದು ಶಾ. ಬಾಲುರಾವ್ ಅನುವಾದಿಸಿದರೆ, ಜಯಶ್ರೀನಿವಾಸ ರಾವ್ ಅವರು ಕವಯಿತ್ರಿಯನ್ನು ಆನ್ನಾ ಅಖ್ಮತೋವಾ ಮತ್ತು ಸಂಕಲನವನ್ನು ‘ರೆಕ್ವಿಯೆಮ್’ ಎಂದು, ಅದನ್ನು ‘ಚರಮಗೀತೆ’ ಎಂದು ಅನುವಾದಿಸಿದ್ದಾರೆ. ಈ ಇಬ್ಬರೂ ಅನುವಾದಿಸಿದ ಕಾಲಮಾನ ಬೇರೆ ಬೇರೆ ಆದರೂ ಕನ್ನಡ ಕಾವ್ಯ ಜಗತ್ತಿಗೆ ತಾಜಾ ಎನ್ನುವಂತೆ ಅನುವಾದಿಸಿದ್ದು ಹೆಚ್ಚುಗಾರಿಕೆ ಎನ್ನಬಹುದು.
ಜಯಶ್ರೀನಿವಾಸ ರಾವ್ ಅವರ ಅನುವಾದದ ವಿಶೇಷವೆಂದರೆ ತೀರಾ ಚಾಲ್ತಿಯಲ್ಲಿರುವ ಮತ್ತು ಪ್ರಾದೇಶಿಕವಾಗಿ ಬಳಕೆಯಲ್ಲಿರುವ ಪದಗಳ ಬಳಕೆಯ ಜೊತೆಗೆ ಇಂಗ್ಲಿಷ್ ಮೂಲದ ಅನುವಾದಕರ ಹೆಸರು, ಮತ್ತು ಪ್ರತಿ ಕವಿತೆ ಕೆಳಗೆ ಟಿಪ್ಪಣಿ ರೂಪದಲ್ಲಿ ಇಂಗ್ಲಿಷ್ ಕವಿತೆಯ ಹೆಸರು ಕೊಟ್ಟಿದ್ದಾರೆ. ಕವಿತೆಯಲ್ಲಿ ಬರುವ ರಷ್ಯನ್ ಮೂಲದ ವಿಶೇಷ ಹೆಸರುಗಳಿಗೆ ಕೂಡ ಟಿಪ್ಪಣಿ ಕೊಟ್ಟಿದ್ದಾರೆ. ಈ ಎಲ್ಲವೂ ಸಾಮಾನ್ಯ ಓದುಗರಿಗೆ ಸಹಾಯವಾದಂತೆ ವಿಶೇಷ ಅಧ್ಯಯನ ಮಾಡುವವರಿಗೆ ಪೂರಕ ಮಾಹಿತಿ ಒದಗಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಆಪ್ತವಾಗಿ ಓದಿಸಿಕೊಳ್ಳುವ ಗುಣವಿದೆ. ನನಗೆ ಅನುವಾದ ತುಂಬಾನೆ ಇಷ್ಟವಾಯಿತು. ಕಾರಣ ಪಿಎಚ್ಡಿ ಮಾಡುವ ಸಂದರ್ಭದಲ್ಲಿ ಶಾ. ಬಾಲುರಾವ್ ಅವರ ಅನುವಾದ ಓದಿದ್ದೆ. ಅಲ್ಲಿ ನನಗೆ ಆನಾಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಯಿತು ನಿಜ. ಆದರೆ ‘ರಿಕ್ವಿಯಂ’ ಪ್ರತ್ಯೇಕವಾಗಿ ನೋಡದೆ ಒಟ್ಟಾಗಿ ನೋಡುವಂತಾಗಿತ್ತು. ಈ ‘ರೆಕ್ವಿಯೆಮ್’ ಓದುವಾಗ ಈ ಸಂಕಲನದ ವಿಶೇಷತೆ ಮನವರಿಕೆ ಆಯಿತು. ಬಹುಶಃ ಆಗ ನನಗೆ ಈ ಬಗೆಯಲ್ಲಿ ನೋಡುವಂತಾಗಿದ್ದಿದ್ದರೆ ಆನಾಳ ಕುರಿತು ಬರವಣಿಗೆ ಬೇರೆಯಾಗಿರುತಿತ್ತು. ಏನಾದರೂ ಸರಿ, ಇವಾಗಾದರು ಈ ಸಂಕಲನದ ಮೂಲಕ ಇನ್ನಷ್ಟು ಆ ಕಾಲಮಾನ ಮತ್ತು ಆನಾಳನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಯಿತೆಂದೇ ಹೇಳಬಹುದು. ಇನ್ನೂ ನನಗೆ ಈ ಸಂಕಲನದಲ್ಲಿ ವಿಶೇಷ ಗಮನ ಸೆಳೆದ ಶಬ್ದಗಳೆಂದರೆ – ‘ಖಣಖಣಿಕೆ,’ ‘ಚೌಕಿದಾರ,’ ‘ಕವಿಸಿದ್ದಾಳೆ,’ ‘ಬೆಣೆಲಿಪಿ’ ಮತ್ತು ‘ಶ್ವೇತತಾಪ’ ಮುಂತಾದವುಗಳು.
ಜಾಗತಿಕ ಸಾಹಿತ್ಯದಲ್ಲಿ ಮಹತ್ವದ ಕವಯಿತ್ರಿಯಾದ ಆನಾಳ ‘ರೆಕ್ವಿಯೆಮ್’ ಅನುವಾದ ಮಾಡಿದ ಜಯಶ್ರೀನಿವಾಸ ರಾವ್ ‘ಬಾಲ್ಟಿಕ್ ಕಡಲ ಗಾಳಿ’-ಯಂತೆ ವಿಶೇಷವಾದ ಕೃತಿಯನ್ನು ಕನ್ನಡ ಕಾವ್ಯ ಲೋಕಕ್ಕೆ ಕೊಡುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ. ನನಗೆ ವೈಯಕ್ತಿಕವಾಗಿ ಖುಷಿ ಮತ್ತು ಹೆಮ್ಮೆ ಎನಿಸಿದೆ. ತೀರಾ ಮುಜುಗರದ ಸಂಗತಿ ಎಂದರೆ ಕಿರಿಯವನಾದ ನನಗೆ ಈ ಸಂಕಲನ ಕುರಿತು ಬರೆಯಲು ಅವಕಾಶ ಒದಗಿಸಿ ಕೊಟ್ಟಿದ್ದು. ನನಗೆ ಜಾಗತಿಕ ಸಾಹಿತ್ಯದ ಬಗ್ಗೆ ವಿಶೇಷವಾದ ಒಲವಿದೆ. ಅದರಲ್ಲೂ ಆನಾ, ಸಾರಾ, ಬ್ರೆಕ್ಟ್, ನೆರೂಡ, ಬೋದಿಲೇರ್ ಅವರ ಕವಿತೆಗಳು ತುಂಬಾನೇ ಇಷ್ಟ. ಆದರೆ ಈ ಸಂಕಲನದ ಕುರಿತು ಬರೆಯಲು ಕೇಳಿದಾಗ ನಯವಾಗಿ ಕಷ್ಟವೆಂದೆ. ಆದರೆ ಜಯಶ್ರೀನಿವಾಸ ಅವರು ಬಿಡುವಂತೆ ಕಾಣಲಿಲ್ಲ. ನನಗೂ ಖಡಾಖಂಡಿತವಾಗಿ ಆಗುವುದಿಲ್ಲ ಎಂದು ಹೇಳಲು ಧೈರ್ಯ ಸಾಲಲಿಲ್ಲ. ಒಪ್ಪಿದೆ. ಆದರೆ ಬರೆಯಲು ಭಾರಿ ಕಷ್ಟಪಟ್ಟೆ. ಕಾರಣ ನನಗೆ ಏಕಾಂತ ಇದ್ದರೆ ಮಾತ್ರ ಬರವಣಿಗೆ ಸಾಧ್ಯ. ಇವತ್ತಿನ ನಮ್ಮ ಉದ್ಯೋಗ ಮತ್ತು ಸಂಸಾರಿಕ ಜೀವನದ ಮಧ್ಯೆ ಬಿಡುವಿನ ಸಮಯ ಸಿಗುವುದು ಕಷ್ಟ. ಹಾಗೆ ಈ ಸಂದರ್ಭದಲ್ಲಿ ವಿಶೇಷವಾಗಿ ಶಾ. ಬಾಲುರಾವ್ ಅವರನ್ನು ನೆನೆಯುವೆ. ಕಾರಣ ನನಗೆ ಈ ಬರವಣಿಗೆ ಮಾಡಲು ಮತ್ತು ಜಾಗತಿಕ ಸಾಹಿತ್ಯದ ಕುರಿತು ಅಧ್ಯಯನ ಮಾಡುವಾಗ ಆನಾ ಮತ್ತು ಬ್ರೆಕ್ಟ್ ಬಗ್ಗೆ ಸಾಕಷ್ಟು ಮಾಹಿತಿ ಅವರ ಅನುವಾದದಿಂದ ಸಿಕ್ಕಿದೆ. ಈ ಬಗೆಯ ಅವಕಾಶಕ್ಕಾಗಿ ಶರಣು. ತಮಗೆ ಶುಭಾಶಯಗಳು.






0 Comments