ಗುರುರಾಜ ಕೋಡ್ಕಣಿ ಅವರ ‘ಅಪರಿಚಿತ ನೆರಳುಗಳು’
ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಚೇತನ ಭಾರ್ಗವ ಅವರ ಬರಹ ಇಲ್ಲಿದೆ.
-ಚೇತನ ಭಾರ್ಗವ
ಗುರುರಾಜ ಕೊಡ್ಕಣಿ ರವರ “ಅಪರಿಚಿತ ನೆರಳುಗಳು”ಪುಸ್ತಕವು ಭಯ, ಆತಂಕ, ನಿಗೂಢತೆ ಮೂಢನಂಬಿಕೆ ಮತ್ತು ಮನೋವಿಜ್ಞಾನದ ಸಂಗಮದಂತಿರುವ ಕುತೂಹಲ ಮೂಡಿಸುವ ವಿಭಿನ್ನವಾದ ಸೈಕೋ ಥ್ರಿಲ್ಲರ್ ಕಥೆಗಳ ಸಂಕಲನ.
ಈ ಕೃತಿಯ ಕಥೆಗಳಲ್ಲಿ ಭಯ, ನಿಗೂಢತೆ ಮನುಷ್ಯನ ಮಾನಸಿಕ ಸ್ಥಿತಿ ಮತ್ತು ನಂಬಿಕೆಗಳು ಎದ್ದು ಕಾಣುತ್ತವೆ. ಅಲ್ಲದೇ ಲೇಖಕರು ಇಲ್ಲಿ ಕೇವಲ ದೆವ್ವ ಭೂತ ಅಥವಾ ಅತೀಂದ್ರಿಯ ಘಟನೆ ಗಳಿಗೆ ಮಾತ್ರ ಕಥೆಯನ್ನು ಸೀಮಿತಗೊಳಿಸದೆ ಇದರ ಹಿಂದೆ ಇರಬಹುದಾದ ಮಾನವನ ಮನಸ್ಸಿನಲ್ಲಿ ಅಡಗಿರುವ ಮಾನಸಿಕ ಕಾಯಿಲೆಗಳ ಬಗ್ಗೆ ಓದುಗನಿಗೆ ಒರೆ ಹಚ್ಚುವಂತೆ ಮಾಡಿರುವುದು ಗಮನಾರ್ಹ. ಆ ನಿಟ್ಟಿನಲ್ಲಿ ಈ ಪುಸ್ತಕದಲ್ಲಿರುವ ಕಥೆಗಳು ಸಾಮಾನ್ಯ ಭಯಾನಕ ಕಥೆಗಳಿಗಿಂತ ವಿಭಿನ್ನವಾಗಿದೆ ಎಂದು ನನ್ನ ಅನಿಸಿಕೆ.
ಕೆಲವರು ದೇವರಿದ್ದಾನೆ ಎಂದು ನಂಬಿದರೆ, ಇನ್ನು ಕೆಲವರು ಅದೆಲ್ಲ ಭ್ರಮೆ ದೇವರಿಲ್ಲವೆಂದು ವಾದಿಸುತ್ತಾರೆ. ಮತ್ತೆ ಕೆಲವರು ದೇವರಿದ್ದ ಮೇಲೆ ದೆವ್ವ ಪಿಶಾಚಿ ಎಲ್ಲವೂ ಇರುತ್ತದೆ ಎಂದು ವಾದಿಸುತ್ತಾರೆ. ಇವೆಲ್ಲವೂ ಅವರವರ ನಂಬಿಕೆಗೆ ಬಿಟ್ಟ, ತರ್ಕಕ್ಕೆ ನಿಲುಕದ ವಿಷಯ. ಆದರೆ ಸಾಮಾನ್ಯವಾಗಿ ಅಸ್ಪಷ್ಟವಾದ ಬೆಳಕಿನಲ್ಲಿ ನೆರಳು ಹೇಗೆ ಗೋಚರಿಸುತ್ತದೆಯೋ, ಹಾಗೆಯೇ ಮಾನವನ ಮನಸ್ಸಿನಲ್ಲಿ ಸ್ಪಷ್ಟತೆ ಇಲ್ಲದಿದ್ದಾಗ, ಆತಂಕ ತುಂಬಿಕೊಂಡು ಅವ್ಯಕ್ತವಾದ ಭಯ ಹುಟ್ಟಿಕೊಳ್ಳುತ್ತದೆ. ಅದು ದೆವ್ವ ಭೂತ ಪಿಶಾಚಿಯ ರೂಪ ತಾಳಿ ನಮ್ಮನ್ನು ಅಪರಿಚಿತ ನೆರಳಂತೆ ಕಾಡುತ್ತದೆ.
ಈ ಪುಸ್ತಕದಲ್ಲಿ “ಮನೆ ನಂಬರ್ 49/9”, “ವಿಲಕ್ಷಣ” “ವೆಂಡಿಗೋ” ಮತ್ತು “ಅಭಿಶಾಪ” ನಾಲ್ಕು ಕಥೆಗಳಿವೆ. ಈ ನಾಲ್ಕು ಕಥೆಗಳು ಕಥೆಯ ರಹಸ್ಯದ ಸೊಗಡನ್ನು ಕೊನೆಯವರೆಗೂ ಕಾಪಾಡಿಕೊಂಡು ಮುಂದೆ ಏನಾಗಬಹುದೆಂಬ ಕುತೂಹಲವನ್ನು ಹಂತ ಹಂತವಾಗಿ ಹೆಚ್ಚಿಸುತ್ತದೆ. ಕೆಲವು ಘಟನೆಗಳು ಭಯವನ್ನು ಉಂಟು ಮಾಡಿದರೆ ಇನ್ನು ಕೆಲವು ಘಟನೆಗಳು ನಿಜ ಯಾವುದು? ಭ್ರಮೆ ಯಾವುದು? ನಂಬಿಕೆ ಯಾವುದೆಂಬುವ ರೋಚಕತೆಯನ್ನು ಚಿಂತಿಸುವಂತೆ ಮಾಡುತ್ತದೆ. ಕಥೆಯಲ್ಲಿರುವ ಕೆಲವು ಅನಿರೀಕ್ಷಿತ ತಿರುವುಗಳು ಓದುಗನನ್ನು ಸೆರೆ ಹಿಡಿಯುವುದರ ಜೊತೆಗೆ ಓದುಗನ ಕಲ್ಪನಾ ಶಕ್ತಿಗೂ ಕೆಲಸ ಕೊಡುತ್ತದೆ. ಮುಂದೇನಾಗಬಹುದೆಂಬ ನಿರೀಕ್ಷೆ, ಸತ್ಯ ಯಾವಾಗ ಹೊರಬರುತ್ತದೆ ಎಂಬ ಕುತೂಹಲ, ಘಟನೆಗಳ ನಡುವಿನ ಸಂಬಂಧಗಳನ್ನು ಓದುವಾಗ ರೋಚಕವೆನಿಸುತ್ತದೆ.
ಮನೆ ನಂಬರ್ 49/9 ನಲ್ಲಿ ವಾಸವಿದ್ದವರೆಲ್ಲ ಕೊಲೆಯಾಗಿಯೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಿರುತ್ತಾರೆ. ಆ ಮನೆ ದೆವ್ವದ ಮನೆಯೆಂದೇ ಬಿಂಬಿತವಾಗಿರುತ್ತದೆ. ದೇವರನ್ನೇ ನಂಬದ ಪರಮನಾಸ್ತಿಕ, ಮೂಢನಂಬಿಕೆಗಳ ಚರ್ಮ ಸುಲಿಯುವಂತೆ ಬರೆಯುತ್ತಿದ್ದ ಪತ್ರಕರ್ತ ವಿಕಾಸ್ ಆ ಮನೆಗೆ ಬಾಡಿಗೆದಾರನಾಗಿ ಬರುತ್ತಾನೆ. ಸ್ವಲ್ಪ ದಿನದ ನಂತರ ಆತನೇ ತನ್ನ ಪ್ರೀತಿಯ ಮಡದಿ ಹಾಗೂ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮಗಳನ್ನು ಕೊಂದನೆಂದು ಅಪರಾಧಿಯ ಸ್ಥಾನದಲ್ಲಿ ನಿಲ್ಲುತ್ತಾನೆ. “ನಾನು ಈ ಕೊಲೆಯನ್ನು ಮಾಡಿಲ್ಲ” ಇದು ಕ್ಷುದ್ರ ಭೈರವಿಯ ಕಾಟ. ಈ ಮನೆಯಲ್ಲಿ ಕಾಣದ ಶಕ್ತಿ ಇದೆ ಎಂದು ಪರಿಪರಿಯಾಗಿ ಹೇಳಿದರು ಅವನ ಮಾತನ್ನು ಯಾರು ಪರಿಗಣಿಸುವುದಿಲ್ಲ. ನಂತರ ಈ ರಹಸ್ಯವನ್ನು ಭೇದಿಸಲು ಆತನ ಸಹೋದ್ಯೋಗಿ ಪರ್ವ ಅಮಾವಾಸ್ಯೆಯ ಕರಾಳ ರಾತ್ರಿಯಂದು, ತನ್ನ ಮನೆಯಲ್ಲಿ ಮಡದಿ ಮಗಳು ಮಲಗಿರುವುದು ಖಾತ್ರಿ ಆದ ಮೇಲೆ, ನಂಬರ್ 49/9 ಮನೆಯ ರಹಸ್ಯವನ್ನು ಭೇದಿಸಲು, ಆ ಮನೆಯನ್ನು ಪ್ರವೇಶಿಸುತ್ತಾನೆ. ಆತನೂ ಕೂಡ ಅದೇ ಮನೆಯಲ್ಲಿ ತನ್ನ ಹೆಂಡತಿ ಮತ್ತು ಮಗಳ ಕೊಲೆಯನ್ನು ಮಾಡುತ್ತಾನೆ. ಹಾಗಾದರೆ ತಮ್ಮ ಮನೆಯಲ್ಲಿ ಮಲಗಿದ್ದ ಪರ್ವನ ಹೆಂಡತಿ ಮಗಳು ಈ ಮನೆಗೆ ಹೇಗೆ ಬಂದರು? ವಿಕಾಸ್ ಮತ್ತು ಪರ್ವ ನ ಸಂಬಂಧವೇನು? ವಿಕಾಸ್ ನಿಜವಾಗಿಯೂ ಮನೋರೋಗಿಯೆ ಎಂದೆಲ್ಲ ಮೂಡುವ ಹತ್ತು ಹಲವು ಪ್ರಶ್ನೆಗಳ ಉತ್ತರವನ್ನು ಈ ಕಥೆ ರೋಚಕವಾಗಿ ತೆರೆದಿಡುತ್ತದೆ.
ಶಮಂತಕನಿಗೆ ರಾತ್ರಿ ಬೀಳುವ ಹುಲಿಯ ಕನಸು ಅಪಾಯದ ಮುನ್ಸೂಚನೆಯನ್ನು ನೀಡುತ್ತಿರುತ್ತದೆ. ಪ್ರತಿ ಬಾರಿ ಹುಲಿಯ ಕನಸು ಬಿದ್ದಾಗಲೂ ಆತನ ಮನೆಯಲ್ಲಿ ಮೃತ್ಯು ಸಂಭವಿಸಿರುತ್ತದೆ. ಒಂದು ಕನಸಿಗೆ ಯಾರನ್ನಾದರೂ ಕೊಲ್ಲುವ ಶಕ್ತಿ ಇದೆಯೇ? ಇದು ಕಾಕತಾಳಿಯವೋ? ಅಥವಾ ಆತನ ಭ್ರಮೆಯೋ ಎಂದು ತಿಳಿಯಲು, ವೆಂಡಿಗೋ ಕೈನೆಸಿಸ್ ಎಂದರೇನು? ನರ ಮಾಂಸ ತಿನ್ನುವ ಕ್ಷುದ್ರಶಕ್ತಿಯ ಮಾಲೀಕ ಹಿಮದ ರಾಕ್ಷಸ ವಿಟಿಕೋ ವಿಗೆ ನರಮಾಂಸದ ನೈವೇದ್ಯ ಸಮರ್ಪಿಸಿ ಆರಾಧಿಸಿದರೆ ಅತಿಮಾನುಷ ಶಕ್ತಿ ಪಡೆದು ಅಮರರಾಗುವರೆ? ಇದನ್ನು ಕಂಡು ಹಿಡಿಯಲು ಹೋದ ವಿದ್ಯಾರ್ಥಿ ವಸಂತ್ ಏನಾದ? ಹಾಗೆಯೇ ತಲತಲಾಂತರದಿಂದ ಕಾಡುವ ಶಾಪ ನಿಜವೇ? ರವಿ ತನ್ನಮ್ಮನ ದೇಹದಲ್ಲಿ ದೆವ್ವ ಹೊಕ್ಕಿದೆ ಎನ್ನಲು ಕಾರಣವೇನು? ಎನ್ನುವ ಕುತೂಹಲ ಭರಿತ ರೋಚಕವಾದ ಕಥೆಯನ್ನು ತಿಳಿಯಲು ಗುರುರಾಜ್ ಕೊಡ್ಕಣಿ ರವರ ಅಪರಿಚಿತ ನೆರಳುಗಳು ಪುಸ್ತಕವನ್ನು ತಪ್ಪದೆ ಓದಬೇಕು .
ಲೇಖಕರ ಸರಳ ನಿರೂಪಣಾ ಶೈಲಿ ಈ ಪುಸ್ತಕದ ಮೆರಗನ್ನು ಹೆಚ್ಚಿಸುತ್ತದೆ. ಓದುಗನ ಕಣ್ಣಿಗೆ ಕಟ್ಟುವಂತೆ ಲೇಖಕರು ಈ ನಾಲ್ಕು ಕಥೆಯನ್ನು ಬರಹದ ರೂಪದಲ್ಲಿ ಚಿತ್ರಿಸಿದ್ದಾರೆ. ಪುಸ್ತಕ ಓದಿ ಮುಗಿದ ಮೇಲೆ ಹಾರರ್ ಥ್ರಿಲ್ಲರ್ ಸಿನಿಮಾ ವನ್ನು ನೋಡಿದ ಅನುಭವವನ್ನು ನೀಡುತ್ತದೆ. ಇವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚಿನ ಕೃತಿಗಳು ಅರ್ಪಣೆಯಾಗಲಿ. ಈ ಕೃತಿಯು ನಿಮ್ಮೆಲ್ಲರ ಗ್ರಂಥಾಲಯದಲ್ಲಿ ಸೇರಲಿ
ಒಟ್ಟಿನಲ್ಲಿ ಅಪರಿಚಿತ ನೆರಳುಗಳು ಕೇವಲ ಭಯವನ್ನು ಹುಟ್ಟಿಸುವ ಥ್ರಿಲ್ಲರ್ ಕಥೆಗಳಲ್ಲ ಮನುಷ್ಯನ ಮನಸ್ಸಿನಲ್ಲಿರುವ ಅಪರಿಚಿತ ಭಯ ನಂಬಿಕೆ ಅನುಮಾನಗಳನ್ನು ಪರಿಚಯಿಸುವ ವಿಭಿನ್ನ ಕೃತಿ. ಪುಸ್ತಕ ವನ್ನು ಓದಿದ ನಂತರವೂ ಕಥೆಯ ನೆರಳುಗಳು ನಮ್ಮ ಮನಸ್ಸಿನಲ್ಲಿ ಉಳಿಯುವುದೇ ಈ ಕೃತಿಯ ವಿಶೇಷತೆ.






0 Comments