-ಸಾಮಂತ್ರಿ ಜ್ಯೋತಿ
ಹಾರುವ ಚಿಟ್ಟೆ ; ಆರಿದ ಕಾಫಿ..
ಹಿಟ್ಟು ಕಲಸಿ ಹಂಚಿಗಾಗಿ ತಡಕಾಡುವಾಗ
ಮೂಲೆಗೆ ಸೇರಿದ ಕಬ್ಬಿಣದ ಚೂರು
ಥೇಟ್ ಒಂದು ಕಾಲದ ಗಟ್ಟಿ ಬಂಧದಂತೆ
ಜೇಡವಿಡಿದು ಮಲಗಿದೆ; ತೆರವುಗೊಳಿಸುವ
ತುಸುವೇ ಸಮಯಕೆ ಜೊತೆಯಾಗುವ ಈ
ರಾಶಿ ಪಾತ್ರೆಗಳ ನಿಷ್ಪಾಪಗೊಳಿಸುವ
ಸಿಂಕಿನ ಪವಿತ್ರ ಕಾಯಕದಲ್ಲಿ
ಬದುಕಿನ ಎಷ್ಟೋ ಮಜಲುಗಳನ್ನ
ದೋಸೆಯ ಬದಿಗಳ ಬೇಯಿಸುವಂತೆ
ಮನಸು ಬೆರಗುಗೋಳಿಸುವ ನಡುವೆಲ್ಲೋ
ನಾಲ್ಕು ವರ್ಷದ ಹಿಂದೆ ಕುಡಿದ
ಹದವಾದ ಫಿಲ್ಟರ್ ಕಾಫಿ ನೆನಪಾಗಿ
ಪರಮಾರ್ಥವನು ಮೊಟಕುಗೊಳಿಸಿ
ಕೆನೆಬರದ ಹಾಲಿನ ಕುದಿಯೊಡಲಿಗೆ
ಸಿಹಿ-ಕಹಿಗಳ ಬೆರೆಸಿ ಸೋಸಿದರೆ
ಜೊತೆಗಾಗಿ ಎಲ್ಲರೂ ತೊರೆದವಳಿಗಾಗಿ
ತಾವಿರುವೆವೆಂಬ ಅಭಯದಲ್ಲಿ
ಸ್ಪರ್ಧೆಯ ಶೂರರಂತೆ ಮೇಜಿಗ್ಹಾರುತಾವೆ
ಒಂದು ಮೈದುಂಬಿದ್ಹಾಳೆಯ ಮೇಲೆ
ಬೆಳಕ ಬಿಸಾಕಿ ಕೂರಲು
ಶತಮಾನಗಳ ಶರತ್ತುಗಳ ರಾಯಭಾರಗಳು
ಬಿಸಿಯೇರುತ್ತವೆ; ಆಕೆಯನ್ನ ಒಳಗಿಟ್ಟು
ಕಟ್ಟಿದ ಸುತ್ತಲಿನ ಇಟ್ಟಿಗೆ ಸಿಮೆಂಟುಗಳು
ಕ್ಯೂರಿಂಗ್ ಗೆ ತಣ್ಣೀರಿಡಿದು ನಿಂತ
ರುವಾರಿಗಳು ಕೆಣಕುತಾರೆ!!
ಎಲ್ಲರ ಮನದಣಿವಿಗೆ ನಿಂತು
ವರುಷಗಳಾಯಿತು…
ಹೊಟ್ಟೆಗಾಗಿ ಕಾದ ರೊಟ್ಟಿ ಹಿಟ್ಟು
ಒಣಗಿತು..
ಆಸೆಯಿಂದ ಬಸಿದ ಕಾಫಿ
ತಣ್ಣಗಾಯಿತು..
ನೆಮ್ಮದಿ ನಿರಾಳತೆ
ತ್ಯಾಗದ ಕಿರೀಟ
ಸಂತೆಯ ತರಕಾರಿಗಳಂತೆ…
ಸಂತೆಗೆ ಅವರವರೇ ಹೋಗಬೇಕು..
ಬದುಕು
ಸ್ವಚ್ಛಂದವಾಗಿ ಹಾರುವ
ಚಿಟ್ಟೆಯಾಗಬಹುದು..
ಆರಿಹೋದ ಕಾಫಿಯೂ
ಆಗಬಹುದು..






0 Comments