ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಆರ್ ಬ್ರಹ್ಮಾನಂದ ಶತಮಾನೋತ್ಸವದ ನೆನಪಿನಲ್ಲಿ..

ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ ದಿ. ಪಿ. ಆರ್. ಬ್ರಹ್ಮಾನಂದ

ನಾಳೆ(27 ಸೆಪ್ಟೆಂಬರ್) ಅವರ 100ನೇ ಜನ್ಮದಿನ..

ಅವರ ಶತಮಾನೋತ್ಸವದ ನೆನಪಿನಲ್ಲಿ ಅವರ ಚಿಂತನೆಗಳು, ಸಾಧನೆಗಳು ಹಾಗೂ ಅವರ ಸರಳ ವ್ಯಕ್ತಿತ್ವವನ್ನು ಅವರ ಸಹೋದರ ಪಾಲಹಳ್ಳಿ ವಿಶ್ವನಾಥ್ ಅವರು ಇಲ್ಲಿ ಹಂಚಿಕೊಂಡಿದ್ದಾರೆ.

-ಪಾಲಹಳ್ಳಿ ವಿಶ್ವನಾಥ್

ಪಿ ಆರ್ ಬ್ರಹ್ಮಾನಂದ ಒಬ್ಬ ಮಹಾನ್ ಮತ್ತು ಮಾನವೀಯ ಅರ್ಥಶಾಸ್ತ್ರಜ್ಞ

ಸುಮಾರು 69 ವರ್ಷಗಳ ಹಿಂದೆ, 31 ವರ್ಷದ ಒಬ್ಬ ಯುವಕ ಹಳೆಯ ಸಾಂತಾಕ್ರೂಝ್ ವಿಮಾನ ನಿಲ್ದಾಣದಿಂದ ವಿಮಾನ ಹತ್ತುತ್ತಿದ್ದ. ಆ ಕಾಲದಲ್ಲಿ ಮುಂಬೈ ಮಹಾನಗರದ ವಿಮಾನ ನಿಲ್ದಾಣ ಕೂಡ ಒಂದು ದೊಡ್ಡ ಹ್ಯಾಂಗರ್ ಅಷ್ಟೇ ಇತ್ತು. ತಲೆಗೂದಲು ಕಳೆದುಕೊಳ್ಳುತ್ತಿದ್ದ, ಸೂಟ್ ಧರಿಸಿದ್ದ ಆ ಯುವಕನ ಮುಖದಲ್ಲಿ ಮುಜುಗರ ಕಾಣುತ್ತಿತ್ತು. ಅದು ಸಹಜವಾಗಿತ್ತು: ಸಾಮಾನ್ಯವಾಗಿ ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದ ಅವರು, ಈಗ ಟೈ ಧರಿಸಿ, ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಹೋಗಲಿದ್ದರು. ತಮ್ಮ ಪ್ರೀತಿಯ ಅಧ್ಯಾಪಕರನ್ನು ವಿದೇಶಕ್ಕೆ ಬೀಳ್ಕೊಡಲು ಅನೇಕ ವಿದ್ಯಾರ್ಥಿಗಳು ಬಂದಿದ್ದರು; ಆ ಅಪ್ಪಟ ದೇಸೀ ಮನುಷ್ಯ ಈ ಸೂಟು-ಬೂಟಿನಲ್ಲಿ ಹೇಗೆ ಕಾಣುತ್ತಾರೆ ಎಂಬ ಕುತೂಹಲ ಅವರಿಗೆ. ‘ನಾವು ಅವರಿಗೆ ಟೈ ಕಟ್ಟಿಕೊಳ್ಳಲು ಕಲಿಸಿದೆವು’ ಎಂದೂ ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಇದನ್ನೆಲ್ಲಾ ವಿಸ್ಮಯದಿಂದ ನೋಡುತ್ತಿದ್ದವರು ಆ ವಿಮಾನ ಹತ್ತಲಿದ್ದ ಯುವಕನ ತಂಗಿ ರಾಮೇಶ್ವರಿ ಮತ್ತು ಕಡೆಯ ತಮ್ಮ—ನಾನು (ವಿಶ್ವನಾಥ್). ಕುಟುಂಬದಿಂದ ಮೊದಲ ಬಾರಿಗೆ ಯಾರೋ ವಿದೇಶಕ್ಕೆ ವಿಮಾನದಲ್ಲಿ ಹೋಗುತ್ತಿದ್ದಾರೆಂದು, ಅವರಿಗೆ ಏನಾದರೂ ಸಹಾಯ ಮಾಡಿ ಎಂದು ಮನೆಯಿಂದ ನಮ್ಮಿಬ್ಬರನ್ನೂ ಬೆಂಗಳೂರಿನಿಂದ ಕಳುಹಿಸಿದ್ದರು.

1926ರಲ್ಲಿ ಜನಿಸಿದ ನಮ್ಮ ಹಿರಿಯಣ್ಣ ಪಿ. ಆರ್. ಬ್ರಹ್ಮಾನಂದ (PRB), ‘ತಾಯಿನಾಡು’ ಪತ್ರಿಕೆ ಖ್ಯಾತಿಯ ಕನ್ನಡದ ಪ್ರಸಿದ್ಧ ಪತ್ರಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪಿ. ಆರ್. ರಾಮಯ್ಯ ಅವರ ಪುತ್ರ. ಅವರ ತಾಯಿ ಪಿ. ಆರ್. ಜಯಲಕ್ಷಮ್ಮ ಪ್ರಸಿದ್ಧ ಸಮಾಜ ಸೇವಕಿ ಮತ್ತು ಬೆಂಗಳೂರಿನ ಉಪಮೇಯರ್ ಆಗಿದ್ದವರು. ಬ್ರಹ್ಮಾನಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ, 1946ರಲ್ಲಿ ಪ್ರೊಫೆಸರ್ ಸಿ. ಎನ್. ವಕೀಲ್ ಅವರ ಸಂಶೋಧನಾ ಸಹಾಯಕರಾಗಿ ಮುಂಬೈ ವಿಶ್ವವಿದ್ಯಾಲಯವನ್ನು ಸೇರಿದರು. 1980ರ ದಶಕದ ಕೊನೆಯಲ್ಲಿ ಬೆಂಗಳೂರಿಗೆ ಮರಳುವವರೆಗೂ ಅವರ ಸಂಪೂರ್ಣ ಶೈಕ್ಷಣಿಕ ಜೀವನವನ್ನು ಆ ವಿಶ್ವವಿದ್ಯಾಲಯದಲ್ಲಿಯೇ ಕಳೆದರು.

ಬ್ರೆಜಿಲ್‌ನಲ್ಲಿ ಅವರು ತಮ್ಮ ಹೊಸ ಸಿದ್ಧಾಂತದ ಬಗ್ಗೆ ಪ್ರಬಂಧ ಮಂಡಿಸಿದ್ದರು. ಅವರು ಮತ್ತು ಅವರ ಗುರುಗಳು ಪ್ರತಿಪಾದಿಸಿದ ಈ ಸಿದ್ಧಾಂತ ದೇಶದಲ್ಲಿ ಆಗಲೇ ಸ್ವಲ್ಪ ಸದ್ದು ಮಾಡಿತ್ತು. ಎರಡನೇ ಪಂಚವಾರ್ಷಿಕ ಯೋಜನೆಗಾಗಿ ಆಗಲೇ ಮಂಡಿಸಲಾಗಿದ್ದ ಖ್ಯಾತ ಪ್ರೊ. ಮಹಾಲನೋಬಿಸ್ ಮಾದರಿಗೆ ಪರ್ಯಾಯವಾಗಿ, ಬಹುತೇಕ ವಿರೋಧಿ ಎನಿಸುವಂತಿತ್ತು ಈ ಸಿದ್ಧಾಂತ! ಆಗಿನ ಸರ್ಕಾರದ ಆದ್ಯತೆ ಕೈಗಾರಿಕೆ ಮತ್ತು ಆಧುನಿಕ ಯಂತ್ರಗಳ ನಿರ್ಮಾಣವಾಗಿತ್ತು. ಆದ್ದರಿಂದ ಕೃಷಿ ಮತ್ತು ವೇತನ ಸರಕುಗಳಿಗೆ (ಸಾಮಾನ್ಯ ಬಳಕೆಯ ಸರಕುಗಳು) ಒತ್ತು ನೀಡಿದ ಬ್ರಹ್ಮಾನಂದರ ದೃಷ್ಟಿಕೋನವು (Wage Goods Model) ಆ ಕಾಲದಲ್ಲಿ ಭಾರತದಲ್ಲಿದ್ದ ಅರ್ಥಶಾಸ್ತ್ರದ ಚಿಂತನೆಯ ಧಾಟಿಗೆ ವಿರುದ್ಧವಾಗಿತ್ತು. ಇವೆಲ್ಲವನ್ನೂ ಅವರು ಮತ್ತು ಅವರ ಗುರುಗಳಾದ ಸಿ. ಎನ್. ವಕೀಲರು ಆ ಸಮಯದಲ್ಲೇ ಹೊರತಂದ Planning for an Expanding Economy (ವಿಸ್ತರಿಸುತ್ತಿರುವ ಆರ್ಥಿಕತೆಗಾಗಿ ಯೋಜನೆ) ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದರು. 20ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರಕಟವಾದ ಅರ್ಥಶಾಸ್ತ್ರದ ಬಹುಮುಖ್ಯ ಪುಸ್ತಕಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ.

ಬ್ರೆಜಿಲ್‌ನಿಂದ ಹಿಂದಿರುಗಿದ ನಂತರ ಬ್ರಹ್ಮಾನಂದ ಆ ಸೂಟ್ ಅನ್ನು ಕಳಚಿಟ್ಟು ಮತ್ತೆ ಖಾದಿ ಬಟ್ಟೆಗಳಿಗೆ ವಾಪಸ್ ಹೋದರು. 1955ರಿಂದ ಅವರ ಸಿದ್ಧಾಂತಕ್ಕೆ ದೆಹಲಿಯ ವಲಯಗಳಲ್ಲಿ ಬಹಳ ವರ್ಷಗಳ ಕಾಲ ವಿರೋಧವಿತ್ತು. ಆದರೆ ನಂತರದ ವರ್ಷಗಳಲ್ಲಿ ಅವರ ಚಿಂತನೆಗಳಿಗೆ ಮನ್ನಣೆ ದೊರಕಿತು. ಕೃಷಿ ಮುಖ್ಯವಾಯಿತು, ಹಸಿರು ಕ್ರಾಂತಿಯೂ ನಡೆಯಿತು. ಅವರು ತಮ್ಮ Wage Goods ಮಾದರಿಯನ್ನು ಜೀವನಪರ್ಯಂತ ಪರಿಷ್ಕರಿಸುತ್ತಲೇ ಹೋದರು. ಆದರೆ ಬ್ರಹ್ಮಾನಂದ ಅವರ ದೃಷ್ಟಿ ಅರ್ಥಶಾಸ್ತ್ರದ ಒಂದೆರಡು ವಿಷಯಗಳಿಗೆ ಸೀಮಿತವಾಗಲಿಲ್ಲ: “ಅವರದ್ದು ನಿಜಕ್ಕೂ ಬಹುಮುಖ ಪ್ರತಿಭೆಯ ಮನಸ್ಸಾಗಿತ್ತು; ಅದು ಅರ್ಥಶಾಸ್ತ್ರದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಮುಕ್ತವಾಗಿ ಸಂಚರಿಸಿತು” (ಪ್ರೊಫೆಸರ್ ದಿಲೀಪ್ ನಾಚನೆ). ಅಭಿವೃದ್ಧಿಶೀಲ ದೇಶಗಳಿಗಾಗಿ ಅಭಿಜಾತ ಅರ್ಥಶಾಸ್ತ್ರವನ್ನು (Classical Economics) ಪುನರ್‌ನಿರ್ಮಿಸುವುದು ಅರ್ಥಶಾಸ್ತ್ರದ ಸಿದ್ಧಾಂತಕ್ಕೆ ಅವರ ಪ್ರಮುಖ ಕೊಡುಗೆಯಾಗಿತ್ತು. ಸಮಾಜ ಕಲ್ಯಾಣ ಅರ್ಥಶಾಸ್ತ್ರದ (Welfare Economics—ಅಂದರೆ ಆರ್ಥಿಕ ನೀತಿಗಳು ಮತ್ತು ಸಂಪನ್ಮೂಲಗಳ ಹಂಚಿಕೆ ಇತ್ಯಾದಿ) ಅನೇಕ ತತ್ವಗಳಿಗೆ ಅವರು ಪರಿಕಲ್ಪನಾತ್ಮಕ ಪರಿಷ್ಕರಣೆಗಳನ್ನು ಒದಗಿಸಿದರು. ಅವರ ಕೆಲವು ವಿಚಾರಗಳು ಜನಪ್ರಿಯವಾಗಿ ‘Bombay School of Thought’ ಎಂದು ಕರೆಯಲ್ಪಟ್ಟ ಚಿಂತನಾ ಪರಂಪರೆಯ ಭಾಗವಾದವು.

ಅವರೂ ಮೊದಲಿನಿಂದಲೂ ಬಹಳ ಅಧ್ಯಯನಶೀಲರಾಗಿದ್ದು, ಪಶ್ಚಿಮದ ಮುಖ್ಯ ಸಿದ್ಧಾಂತಗಳನ್ನೆಲ್ಲಾ ಅರ್ಥ ಮಾಡಿಕೊಂಡಿದ್ದರು. ಅವರು ಖ್ಯಾತ ಅರ್ಥಶಾಸ್ತ್ರಜ್ಞ ಪಿಗೂ (Pigou) ಅವರ ಬಗ್ಗೆ ಬರೆದ ಬಹಳ ಒಳ್ಳೆಯ ಲೇಖನವನ್ನು ಓದಿದ್ದ ಯಾರೋ, “ನೀವು ಯಾವಾಗ ಕೇಂಬ್ರಿಡ್ಜ್‌ನಲ್ಲಿ ಇದ್ದಿರಿ?” ಎಂದು ಕೇಳಿದರಂತೆ! ಆ ಸಮಯದಲ್ಲಿ ಬ್ರಹ್ಮಾನಂದ ಇಂಗ್ಲೆಂಡ್ ನೋಡೇ ಇರಲಿಲ್ಲ. 1960ರ ದಶಕದಲ್ಲಿ ಕೇಂಬ್ರಿಡ್ಜ್‌ನ ಮಹಾನ್ ಅರ್ಥಶಾಸ್ತ್ರಜ್ಞ ಪಿಯೆರೊ ಸ್ರಾಫಾ (Piero Sraffa) ಬರೆದಿದ್ದ ಮಹತ್ವದ ಸಣ್ಣ ಪುಸ್ತಕವೊಂದರಲ್ಲಿ ಅವರು ಆಳವಾಗಿ ತೊಡಗಿಸಿಕೊಂಡು, ಅದರ ಕುರಿತು ಬರೆದ ಲೇಖನಗಳನ್ನು ಸ್ವತಃ ಸ್ರಾಫಾರೇ ಇಷ್ಟಪಟ್ಟಿದ್ದರಂತೆ. (ಅವರ ಉತ್ಸಾಹ ಎಷ್ಟಿತ್ತು ಎಂದರೆ ಒಮ್ಮೆ ಅವರು ಆ ಪುಸ್ತಕವನ್ನು ನನಗೂ ಕೆಲವು ಸೋದರಸಂಬಂಧಿಗಳಿಗೂ ವಿವರಿಸಲು ಪ್ರಯತ್ನಿಸಿದ್ದರು!). ಅದಲ್ಲದೆ ತಮ್ಮ ಕಾಲದ ಅನೇಕ ಶ್ರೇಷ್ಠ ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರಿಗೆ ಬ್ರಹ್ಮಾನಂದರು ಮತ್ತು ಅವರ ಕೊಡುಗೆಗಳ ಪರಿಚಯವಿತ್ತು. 1966ರಲ್ಲಿ ಕೆ.ಜಿ.ಎಫ್.ನಿಂದ ಬೆಂಗಳೂರಿಗೆ ಡಾ. ವಿಕ್ರಮ್ ಸಾರಾಭಾಯಿ ಅವರೊಂದಿಗೆ ಮೂರು ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣಿಸಿದ ಘಟನೆ ನನಗೆ ನೆನಪಿದೆ. ಆ ಸಂದರ್ಭದಲ್ಲಿ ಆ ಪ್ರಸಿದ್ಧ ವಿಜ್ಞಾನಿ, ಪ್ರೊಫೆಸರ್ ಲಿಯೋಂಟಿಫ್ (ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ನೋಬೆಲ್ ಪ್ರಶಸ್ತಿ ಪುರಸ್ಕೃತರು) ಹಲವಾರು ಸಂದರ್ಭಗಳಲ್ಲಿ ತಮ್ಮೊಂದಿಗೆ PRB ಅವರ ಬಗ್ಗೆ ಮಾತನಾಡಿದ್ದರೆಂದು ಹೇಳಿದರು.

ಅವರು ಸುಮಾರು 30 ಪುಸ್ತಕಗಳನ್ನು ಬರೆದರು; ಪ್ರತಿಯೊಂದು ಪುಸ್ತಕವೂ ತನ್ನದೇ ಆದ ಮಹತ್ವವನ್ನು ಹೊಂದಿತ್ತು, ಇವುಗಳಲ್ಲಿ ಹಲವಾರು ಸರ್ವಕಾಲಿಕ ಆಕರ ಗ್ರಂಥಗಳಾಗಿವೆ. ಅವರ ನಿಧನಕ್ಕೆ ಒಂದೆರಡು ವರ್ಷಗಳ ಮುನ್ನ ಬರೆದ ಕೊನೆಯ ಎರಡು ಪುಸ್ತಕಗಳನ್ನು ವಿಶೇಷವಾಗಿ ಉಲ್ಲೇಖಿಸಬೇಕು. Nobel Economics ಎನ್ನುವ ಪುಸ್ತಕದಲ್ಲಿ ನೋಬೆಲ್ ಪುರಸ್ಕೃತರ ಬಗ್ಗೆ ಮತ್ತು ಅವರ ಕೊಡುಗೆಗಳ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಅದಲ್ಲದೆ ನೋಬೆಲ್ ಪ್ರಶಸ್ತಿಗೆ ಅರ್ಹರಿದ್ದು, ಆದರೆ ಪಡೆಯದೇ ಇದ್ದವರ ಬಗ್ಗೆಯೂ ಅಧ್ಯಾಯಗಳಿರುವ ಈ ಪುಸ್ತಕವನ್ನು ನೋಬೆಲ್ ವಿಜೇತ ಇಂಗ್ಲೆಂಡಿನ ರಾಬರ್ಟ್ ಸೋಲೋ (Robert Solow) ಅವರು, “ಒಬ್ಬನೇ ವ್ಯಕ್ತಿ ಇಷ್ಟೆಲ್ಲಾ ಜೀರ್ಣಿಸಿಕೊಂಡು ಬರೆದಿರುವುದು ಅದ್ಭುತ!” ಎಂದಿದ್ದರು. ಇದೇ ಧಾಟಿಯಲ್ಲಿ ಮುಂಬೈನಲ್ಲಿ 2005ರಲ್ಲಿ ನಡೆದ ಮೊದಲನೆಯ ಬ್ರಹ್ಮಾನಂದ ಸ್ಮಾರಕ ಉಪನ್ಯಾಸದಲ್ಲಿ ಸ್ವತಃ ಅರ್ಥಶಾಸ್ತ್ರಜ್ಞರಾದ ದಿವಂಗತ ಐ. ಜಿ. ಪಟೇಲ್, “ಅಗಾಧ ಪಾಂಡಿತ್ಯವಿದ್ದ ಕೆಲವೇ ಮಂದಿಯಲ್ಲಿ ಬ್ರಹ್ಮಾನಂದ ಒಬ್ಬರು” ಎಂದು ಹೇಳಿದ್ದರು. ಅವರ ಕಟ್ಟಕಡೆಯ ಪುಸ್ತಕ An Economic History of India in the 19th Century (19ನೆಯ ಶತಮಾನದ ಭಾರತದ ಆರ್ಥಿಕ ಇತಿಹಾಸ) ವನ್ನು ಹಲವಾರು ವಿದ್ವಾಂಸರು ಅತ್ಯುತ್ತಮ ಮತ್ತು ವಿಶಿಷ್ಟ ಕೃತಿ ಎಂದು ಪ್ರಶಂಸಿಸಿದ್ದಾರೆ. ಈ ಪುಸ್ತಕವನ್ನು ಬರೆಯುವಾಗ ಅವರು ನಮ್ಮ ಮುಂಬೈ ಮನೆಯಲ್ಲಿ ತಂಗುತ್ತಿದ್ದರು; 75ನೆಯ ವಯಸ್ಸಿನಲ್ಲಿ ಅಲ್ಲಿಯ ಹಲವಾರು ಹಳೆಯ ಗ್ರಂಥಾಲಯಗಳ ಧೂಳನ್ನು ಕುಡಿದು ರಚಿಸಿದ ಕೃತಿ ಇದು.

ಅವರು ಕೇವಲ ಕುರ್ಚಿಯಲ್ಲಿ ಕುಳಿತು ಅರ್ಥಶಾಸ್ತ್ರವನ್ನು ಚರ್ಚಿಸುವ ಪಂಡಿತರಾಗಿರಲಿಲ್ಲ. ಹಣದುಬ್ಬರದಂತಹ ವಿವಿಧ ಸಮಸ್ಯೆಗಳ ಕುರಿತು ಅವರು ಸರ್ಕಾರಕ್ಕೆ ಜ್ಞಾಪಕ ಪತ್ರಗಳನ್ನು (memorandums) ಕಳುಹಿಸುತ್ತಿದ್ದರು. ಪ್ರತಿವರ್ಷವೂ ಬಜೆಟ್ ಬಗ್ಗೆ ಸಕಾರಾತ್ಮಕ ಟೀಕೆಗಳನ್ನು ಮಾಡುತ್ತಿದ್ದರು. ಭಾರತೀಯ ವಿಶ್ವವಿದ್ಯಾಲಯಗಳ ಅನೇಕ ಅಧ್ಯಾಪಕರಿಗೆ ಅವರು ಬಹಳ ಹತ್ತಿರವಾಗಿದ್ದರು. ಅವರು ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದರು ಮತ್ತು ಗ್ರಾಮೀಣ ಅಥವಾ ಕಡಿಮೆ ಪರಿಚಿತ ಕಾಲೇಜುಗಳಿಗೂ ಭೇಟಿ ನೀಡುತ್ತಿದ್ದರು. ಅವರು ಅಲ್ಲಿನ ಕಿರಿಯ ಅಧ್ಯಾಪಕರಿಗೆ ಯೋಚಿಸಲು ಮತ್ತು ಸಂಶೋಧನಾ ಲೇಖನಗಳನ್ನು ಬರೆಯಲು ಉತ್ತೇಜಿಸುತ್ತಿದ್ದರು. ವಿಶಾಲ  ಶೈಕ್ಷಣಿಕ ಜಗತ್ತಿನ ಪರಿಚಯವೇ ಇಲ್ಲದಿದ್ದ ಅನೇಕ ಯುವ ಅಧ್ಯಾಪಕರಲ್ಲಿ ಅದು ಆತ್ಮವಿಶ್ವಾಸವನ್ನು ಮೂಡಿಸಿತು. ಪ್ರತಿ ವರ್ಷವೂ ನಡೆಯುತ್ತಿದ್ದ ಅಖಿಲ ಭಾರತೀಯ ಅರ್ಥಶಾಸ್ತ್ರದ ಸಮ್ಮೇಳನದಲ್ಲಿ ಬ್ರಹ್ಮಾನಂದ ಬಹಳ ಜನಪ್ರಿಯ ವ್ಯಕ್ತಿಯಾಗಿದ್ದರು. ಅವರನ್ನು ಯುವ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸುತ್ತುವರಿಯುವುದನ್ನು ನೋಡಿದಾಗ ನನಗೆ ನಮ್ಮ ವಿಜ್ಞಾನ ಕ್ಷೇತ್ರದಲ್ಲಿಯ ಜೆ. ವಿ. ನಾರ್ಲೀಕರ್ ನೆನಪಿಗೆ ಬರುತ್ತಿದ್ದರು. ಬ್ರಹ್ಮಾನಂದರಿಗೆ ಬಹಳ ಹತ್ತಿರವಿದ್ದ ಮತ್ತೊಂದು ಯೋಜನೆ Indian Economic Journal. ಸುಮಾರು 50 ವರ್ಷಗಳ ಕಾಲ ಅವರು ಪೋಷಿಸಿಕೊಂಡು ಬಂದಿದ್ದ ಈ ನಿಯತಕಾಲಿಕೆ ಅವರ ಅತ್ಯಂತ ಪ್ರಿಯ ಯೋಜನೆಗಳಲ್ಲಿ ಒಂದಾಗಿತ್ತು. ಬಹಳ ಮುತುವರ್ಜಿ ವಹಿಸಿ ಅವರು ಯುವ ಅಧ್ಯಾಪಕರಿಂದ ಈ ನಿಯತಕಾಲಿಕೆಗೆ ಲೇಖನಗಳನ್ನು ಬರೆಸುತ್ತಿದ್ದರು.

1960ರ ದಶಕದ ಮಧ್ಯಭಾಗದಲ್ಲಿ ನಾನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಲು ನಿರ್ಧರಿಸಿದಾಗ, ಅವರು ಅದನ್ನು ಬಹಳವಾಗಿ ವಿರೋಧಿಸಿದರು. ಜನರು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವುದನ್ನು ಅವರು ಒಪ್ಪುತ್ತಿರಲಿಲ್ಲ; ತಮ್ಮ ಸಹೋದರನ ವಿಷಯದಲ್ಲೂ ಅವರು ವಿನಾಯಿತಿ ನೀಡಲಿಲ್ಲ! ಅವರು ಈ ಧ್ಯೇಯವಾಕ್ಯವನ್ನು ಅನುಸರಿಸುತ್ತಿದ್ದರು:“ನಾವು ಇತರ ದೇಶಗಳಂತೆ ವಿವಿಧ ಕ್ಷೇತ್ರಗಳಲ್ಲಿ ಅನೇಕ ಮೂಲಭೂತ ಮತ್ತು ಮಹತ್ವದ ವಿಚಾರಗಳನ್ನು ಸೃಷ್ಟಿಸಬಲ್ಲೆವು ಎಂಬುದು ನನ್ನ ನಂಬಿಕೆ. ಪಾಶ್ಚಾತ್ಯ ಜಗತ್ತು ಅದನ್ನು ಮೆಚ್ಚಬಹುದು ಅಥವಾ ಗುರುತಿಸದೇ ಇರಬಹುದು. ನಾವು ನಮ್ಮದೇ ಚೌಕಟ್ಟಿನೊಳಗೆ ಯೋಚಿಸಬೇಕು. ನಾವು ಬಹಳ ದೊಡ್ಡ ದೇಶ, ಮತ್ತು ನಮ್ಮ ಸಂಸ್ಕೃತಿಯೂ ಬಹಳ ಹಳೆಯದು… ನಾವು ವಿದೇಶಿ ಮತ್ತು ಶ್ರೀಮಂತ ದೇಶಗಳ ವಿದ್ವಾಂಸರು ಹಾಗೂ ಅರ್ಥಶಾಸ್ತ್ರಜ್ಞರ ಮೇಲೆ ಅವಲಂಬಿತರಾಗಬಾರದು.”

ಅವರು ಬಹಳ ತೀವ್ರ ಸ್ವಭಾವದ ವ್ಯಕ್ತಿಯಾಗಿದ್ದರು. ಅವರಿಗೆ ಕ್ರಿಕೆಟ್ ನೋಡುವುದು ಬಹಳ ಇಷ್ಟ; ಪಂದ್ಯ ನಡೆಯುತ್ತಿರುವಾಗ ಯಾವುದೇ ರೀತಿಯ ಅಡಚಣೆಯನ್ನು ಅವರು ಸಹಿಸುತ್ತಿರಲಿಲ್ಲ . ತಮ್ಮ ಜೀವನದ ಕಡೆಯ ದಶಕದಲ್ಲಿ ಅವರು ಕಂಪ್ಯೂಟರ್‌ಗಳ ಬಳಕೆಯಲ್ಲಿ ಸಾಕಷ್ಟು ಪರಿಣತಿ ಗಳಿಸಿದ್ದರು ಮತ್ತು ಬೀಥೋವನ್ ಹಾಗೂ ಮೊಝಾರ್ಟ್ ಅವರ ಸಾಂಪ್ರದಾಯಿಕ ಪಾಶ್ಚಾತ್ಯ ಸಂಗೀತವನ್ನು (Classical Music) ಕೇಳುವುದನ್ನು ಬಹಳ ಇಷ್ಟಪಡುತ್ತಿದ್ದರು. 1996ರಲ್ಲಿ ಅವರಿಗೆ Outstanding Economist Award ದೊರೆಯಿತು ಮತ್ತು 2002ರಲ್ಲಿ ಅವರನ್ನು International Economic Associationನ ಗೌರವಾಧ್ಯಕ್ಷರನ್ನಾಗಿ ನೇಮಿಸಲಾಯಿತು.

2003ರ ಜನವರಿಯಲ್ಲಿ ಅವರು ನಿಧನರಾದಾಗ, ಕುಟುಂಬಕ್ಕೆ ಅನೇಕ ವಿದ್ವಾಂಸರಿಂದ ಸಂತಾಪ ಸಂದೇಶಗಳು ಬಂದವು. ಅವುಗಳಲ್ಲಿ ಎರಡು ಇಲ್ಲಿವೆ:ಮಹಾನ್ ಅರ್ಥಶಾಸ್ತ್ರಜ್ಞ ಪಾಲ್ ಸ್ಯಾಮ್ಯುಯೆಲ್ಸನ್ ಹೀಗೆ ಬರೆದಿದ್ದರು: “20ನೇ ಶತಮಾನದ ಅರ್ಥಶಾಸ್ತ್ರದ ಪ್ರಗತಿಗೆ ಇಷ್ಟೊಂದು ದೊಡ್ಡ ಕೊಡುಗೆಯನ್ನು ಉತ್ಸಾಹಭರಿತ ಮತ್ತು ಸುಂದರ ರೀತಿಯಲ್ಲಿ ನೀಡಿದ ವ್ಯಕ್ತಿ.” ಡಾ. ಮನಮೋಹನ್ ಸಿಂಗ್ ಹೀಗೆ ಹೇಳಿದರು: “ಅನೇಕ ಸಂದರ್ಭಗಳಲ್ಲಿ ವಿವೇಕಯುತ ಮತ್ತು ವಸ್ತುನಿಷ್ಠ ಸಲಹೆಗಾಗಿ ನಾನು ಅವರ ಕಡೆಗೆ ತಿರುಗುತ್ತಿದ್ದೆ. ಅವರು ನಮ್ಮ ದೇಶದ ಅನೇಕ ವಿದ್ವಾಂಸರಿಗೆ ಸ್ನೇಹಿತ, ತತ್ತ್ವಜ್ಞಾನಿ ಮತ್ತು ಮಾರ್ಗದರ್ಶಿಯಾಗಿದ್ದರು.”

ಬ್ರಹ್ಮಾನಂದ, ನಿನಗೆ 100ನೇ ಹುಟ್ಟುಹಬ್ಬದ ನೆನಪಿನ ಪ್ರಣಾಮಗಳು!

‍ಲೇಖಕರು Admin

26 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading