ವಿದ್ಯಾ ಭರತನಹಳ್ಳಿಯವರ ‘ತೇರ ನಡುವಿನ ಮೌನ’
‘ಭಾವನಾ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಸುಬ್ರಾಯ ಚೊಕ್ಕಾಡಿ ಅವರ ಬರಹ ಇಲ್ಲಿದೆ.
-ಸುಬ್ರಾಯ ಚೊಕ್ಕಾಡಿ
ಕವಯಿತ್ರಿ,ಕಥೆಗಾರ್ತಿ,ಪತ್ರಕರ್ತೆ,ಸಂಗೀತಾಸಕ್ತೆ,ಪುಷ್ಪಪ್ರಿಯೆ,ಗಾರ್ಡನಿಂಗ್..ಹೀಗೆ ಅನೇಕ ಆಸಕ್ತ ವಿಷಯಗಳಲ್ಲಿ ತೊಡಗಿಕೊಂಡಿರುವ -ನನ್ನ ಆತ್ಮೀಯರಾದ ವಿದ್ಯಾ ಭರತನಹಳ್ಳಿಯವರ ಎರಡನೇ ಕವನಸಂಕಲನ “ತೇರ ನಡುವಿನ ಮೌನ”. ಇತ್ತೀಚೆಗಷ್ಟೇ ಅವರ ಕಥಾಸಂಕಲನ “ಬೇಸೂರ್” ಪ್ರಕಟವಾಗಿತ್ತು! ಈಗ ಈ ಕವನ ಸಂಕಲನ! ಅಂದ್ರೆ, ದೀರ್ಘಕಾಲ ಮರೆಯಲ್ಲೇ ಉಳಿದಿದ್ದ ಅವರ ಕಲಾಸಕ್ತಿಯು ಎಚ್ಚರಗೊಂಡು ಚುರುಕಿನಿಂದ ಹೊರಗೆ ಬಂದಂತಿದೆ!
ವಿದ್ಯಾ ಅವರ ಮೊದಲ ಸಂಕಲನದ ಕವಿತೆಗಳನ್ನು ನಾನು ಓದಿಲ್ಲ. ಈ ಎರಡನೇ ಸಂಕಲನದ 38 ಕವಿತೆಗಳ ಪೈಕಿ ಕೆಲವನ್ನು ಆಗೀಗ ಓದಿದ್ದೆ. ಇಷ್ಟ ಪಟ್ಟಿದ್ದೆ. ಈಗ ಎಲ್ಲ ಕವಿತೆಗಳನ್ನು ಒಟ್ಟಾಗಿ ಓದುವ ಅವಕಾಶ ಸಿಕ್ಕಿತು.
ಸಂಕಲನಕ್ಕೆ ಕೊಟ್ಟ ಹೆಸರೇ ಅರ್ಥ ಪೂರ್ಣವಾದುದು.ಕವಿಯ ಕೆಲಸವೇ ಅದು. ತೇರಗದ್ದಲದ ನಡುವೆಯೂ ಅಡಗಿರುವ ಮೌನವನ್ನು ಹಿಡಿಯುವುದು. ಪದಗಳ ನಡುವೆ ಅವಿತಿರುವ ಮೌನವನ್ನು ಗುರುತಿಸಿ ಹಿಡಿಯುವುದು.ಕವಿ ಎಲ್ಲ ಅರ್ಥದಲ್ಲೂ ಸಂತೆಯಲ್ಲಿ ನಿಂತ ಕಬೀರನೇ.ವಿದ್ಯಾ ಬರೀತಾರೆ:
ಶಬ್ದದ ಗಲಾಟೆಯಲ್ಲಿ
ಮೌನ ಹುಡುಕಬೇಕಿದೆ
ಈ ಬೀದಿಯಲ್ಲಿಯ ಧೂಳು
ಕೂಡ ಶಬ್ದದ ತೇರ ಎಳೆಯುತ್ತದೆ.
(ತೇರ ನಡುವಿನ ಮೌನ).
ಕವಿಕರ್ಮವೇ ಅದು: ಶಬ್ದದೊಳಗಿನ ನಿಶ್ಶಬ್ದವನ್ನು, ಕಾಣುವ ಲೋಕದಾಚೆಗಿನ ಕಾಣದ ಲೋಕವನ್ನು,ನೋಡುವ ಲೋಕದಲ್ಲಿ ತನಗೆ ಮಾತ್ರ ಕಾಣುವುದನ್ನು..ಕಾಣುವ ಕೇಳುವ ಹಾಗೂ ಕಾಣಿಸುವ, ಕೇಳಿಸುವ ಕೆಲಸವನ್ನು ಕವಿ ನಿರಂತರವಾಗಿ ಮಾಡ್ತಾ ಇರ್ತಾನೆ.ವಿದ್ಯಾ ಅವರ ಕಾವ್ಯ ಕರ್ಮದ ಸ್ವರೂಪವೂ ಅದೇ.
ವಿದ್ಯಾ ಅವರದು ಅಬ್ಬರದ ದನಿಯಲ್ಲ. ಅವರದು ಸ್ತ್ರೀವಾದಿ ದನಿಯೂ ಅಲ್ಲ. ಆದರೆ ಸಹಜವಾಗಿಯೇ ಸ್ತ್ರೀ ಸಂವೇದನೆಯ ಹಿನ್ನೆಲೆ ಇಲ್ಲಿನ ಕೆಲವು ಕವಿತೆಗಳಿಗಿವೆ. ಕೆಲವಲ್ಲಿ ಮಾತ್ರ ಏರುದನಿ ಕಾಣಿಸ್ತದೆ.ಉದಾ:
….ಧರಿಸಿರಬೇಕು
ಕಬ್ಬಿಣದ ಕವಚವನ್ನು
ಮನೆಮನೆಯ ಹೆಣ್ಣು ಜೀವಗಳು
ಹಿಡಿದಿರಬೇಕು ಕೈಕತ್ತಿಯನ್ನು
ಕಟ್ಟಿಕೊಂಡಿರಬೇಕು
ಬೆಂಕಿಯಂಗಿಯನ್ನು
ಮೈಮುಟ್ಟ ಬಂದವರು
ಭಸ್ಮವಾಗಿಬಿಡಬೇಕು.
ನೋವು ಕೊಡುವ ಜಗತ್ತಲ್ಲಿ
ಬಾಡಿದ ಹೂಗಳಂತಿರಬಾರದು..
(ನಾನು ನಾನಾಗಬೇಕು)
ಇವಲ್ಲದೆ,ಕೇಳದಿರಲಿ ಪ್ರಭು, ಹೆಸರೇಕೆ?, ನಕ್ಷತ್ರ ಮಾರ್ಗ, ಮುಖವಿಲ್ಲ, ಗಯಾದಲ್ಲೊಂದು ದಿನ,.. ಮೊದಲಾದ ಕವಿತೆಗಳು ನನಗೆ ಇಷ್ಟವಾದವು.
ಕಾವ್ಯವಸ್ತುವಿಗೆ ಕೊಡುವಷ್ಟೇ ಗಮನವನ್ನು ಕಾವ್ಯ ಶಿಲ್ಪಕ್ಕೂವಿದ್ಯಾ ಅವರು ಗಮನ ಕೊಡಬೇಕಾಗಿದೆ. ಕವಿತೆಯಲ್ಲಿ ನಿಲುಗಡೆಯ ಉಸಿರ್ದಾಣವನ್ನು ನೀಡುವ ಮೂಲಕ ಚರಣಗಳ ಸಂಯೋಜನೆ ಮೊದಲಾದ ಅಂಶಗಳ ಕಡೆಗೆ ಕವಯಿತ್ರಿ ಗಮನ ಹರಿಸಬೇಕಾಗಿದೆ.
ಮುಂದಿನ ಸಂಕಲನದಲ್ಲಿ ಇದನ್ನು ನಿರೀಕ್ಷಿಸಬಹುದೇ?
ಕವಿ ಕಮಲಾಕರ ಭಟ್ ಅವರ ಮೌಲಿಕವಾದ ಸುದೀರ್ಘ ಮುನ್ನುಡಿಯು ಸಂಕಲನದ ಮೌಲ್ಯವನ್ನು ಹೆಚ್ಚಿಸಿದೆ.






0 Comments