ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೃಥ್ವಿ ಸೂರಿ ಅಂಕಣ – ಅದೃಷ್ಟದೇವತೆ (LADY LUCK)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು

ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.

ಮೂಲ – ರಾಜು ಜೆ಼ಡ್. ಮೊರೆ

ಕನ್ನಡಕ್ಕೆ – ಪೃಥ್ವಿ ಸೂರಿ

ಅಂಕಣ – ೧ ೦

ವಕೀಲಿಕೆಯ ‘ಪ್ರಾಕ್ಟಿಕಲ್ ಲಾ ಪ್ರಾಕ್ಟೀಸ್’ ಗೊತ್ತಿರುವ ಪರಿಚಿತ ಸಂಗತಿಗಳಲ್ಲಿ ಒಂದೆಂದರೆ, ಕೆಲವು ನ್ಯಾಯಾಧೀಶರನ್ನು ಅಥವಾ ನಿರ್ಧಿಷ್ಟ ಪೀಠಗಳಿಂದ ತಪ್ಪಿಸಿಕೊಳ್ಳುವುದು. ಬಾರ್ ನಲ್ಲಿ ಒಬ್ಬ ನ್ಯಾಯಾಧೀಶರ ಪೂರ್ವಾಗ್ರಹಗಳನ್ನೂ ಮತ್ತು ಅವರ ಒಲವಿನ ನಾಡಿಮಿಡಿತವನ್ನೂ ಚೆನ್ನಾಗಿ ಅಧ್ಯಯನ ಮಾಡಿರುತ್ತಾರೆ. ಆ ಪೀಠದ ಮುಂದೆ ಕೆಲವು ವಿಧದ ಪ್ರಕರಣಗಳನ್ನು ವಾದಿಸುವುದೆಂದರೆ, ಕಕ್ಷಿದಾರನ ಪ್ರಕರಣಕ್ಕೆ ವಕೀಲ ತಾನಾಗಿಯೇ ಮರಣಶಾಸನ ಬರೆದಂತೆ.

ಒಮ್ಮೆ ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿಗಳಿದ್ದರು, ಅವರು ವಕೀಲರಾಗಿದ್ದ ಸಂದರ್ಭದಲ್ಲಿ ಕಾರ್ಮಿಕ ಕಾನೂನಿನ ಪ್ರಾಕ್ಟೀಸ್ ತುಂಬ ಚೆನ್ನಾಗಿಯೇ ಇತ್ತು. ಸಹಜವಾಗಿ ಕಾರ್ಮಿಕರ ಪರವಾಗಿ ಅಪಾರವಾದ ಒಲವು ಮತ್ತು ಮಾಲೀಕರ ವಿರುದ್ಧ ಅಷ್ಟೇ ತೀವ್ರವಾದ ಅಸಮಾಧಾನವೂ ಇತ್ತು.

ಬಾಂಬೆ ಹೈಕೋರ್ಟಿನಲ್ಲಿ ಅನೇಕ ವರ್ಷಗಳ ನಂತರ, ಈ ನ್ಯಾಯಮೂರ್ತಿಗಳಿಗೆ ಕಾರ್ಮಿಕ ಮತ್ತು ಸೇವಾ (Labor and Service) ಕಾನೂನಿನ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಭಾಗೀಯ ಪೀಠದ (Division Bench) ನೇತೃತ್ವ ವಹಿಸುವ ಅವಕಾಶ ಸಿಕ್ಕಿತು.

ಅಲ್ಲಿಂದ ಅಸಲಿ ‘ಸಂಹಾರ’ ಶುರುವಾಯಿತು. ಅವರು ವಿಚಾರಣೆಯಲ್ಲಿ ಯಾವುದೇ ವಿಧದ ಕರುಣೆಯನ್ನು ಹೊಂದಿರಲಿಲ್ಲ. ಮಾಲೀಕರ ಪರ ವಕೀಲರಿಗೆ ಯಾವುದೇ ಮುಂದೂಡಿಕೆಯಾಗಲಿ, ಯಾವುದೇ ರಿಯಾಯಿತಿಯಾಗಲಿ ನೀಡುತ್ತಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಕಾರ್ಮಿಕರ ಪರವಾಗಿ ಹಾಜರಿದ್ದ ವಕೀಲರು ವಾದಿಸದ ಎಷ್ಟೋ ಅಂಶಗಳನ್ನು ಅವರ ಆದೇಶದಲ್ಲಿ ಕಾರ್ಮಿಕರ ಪರವಾಗಿ ಸೇರಿಸುತ್ತಿದ್ದರು. ಈ ಪೀಠದಿಂದ ತಪ್ಪಿಸುವುದು ಹೇಗೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ.

ಇದೇ ಸಮಯದಲ್ಲಿ, ಆಗಷ್ಟೇ ಸನದ್ (ವಕೀಲರ ಪರವಾಗಿನಿಗೆ) ಪಡೆದಿದ್ದ ಒಬ್ಬ ಸಾಲಿಸಿಟರ್ ಮಗ, ತನ್ನ ತಂದೆಗೆ ಸಹಜವಾಗಿಯೇ “ಈ ನ್ಯಾಯಮೂರ್ತಿಗಳ ಮಗ ತನ್ನ ಸಹಪಾಠಿಯಾಗಿದ್ದ. ಅವನೂ ಕೂಡ ನನ್ನಂತೆಯೇ ಒಂದು ವಾರದ ಹಿಂದೆಯಷ್ಟೇ ವಕೀಲನಾಗಿ ಸನದನ್ನು ಪಡೆದ” ಎಂದರು.

ಆ ಪ್ರತಿಷ್ಠಿತ ಸಾಲಿಸಿಟರ್ ರ ಸಂಸ್ಥೆಯು, ಈ ನ್ಯಾಯಮೂರ್ತಿಗಳಿಂದ ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದ ಅನೇಕ ಮಾಲೀಕರನ್ನು ಪ್ರತಿನಿಧಿಸುತ್ತಿದ್ದರು. ಮಗನ ಮಾತನ್ನು ಕೇಳಿದ ಸಾಲಿಸಿಟರ್ ಗೆ ತನ್ನ ಅದೃಷ್ಟವನ್ನು ನಂಬಲಾಗಲಿಲ್ಲ.

ಅವರು ತಮ್ಮ ಮಗನಿಗೆ, ಈ ಸಂಭ್ರಮ ಆಚರಿಸಲು ನ್ಯಾಯಮೂರ್ತಿಗಳ ಮಗನನ್ನು ಔತಣಕೂಟಕ್ಕೆ ಆಹ್ವಾನಿಸುವಂತೆ ಹೇಳಿದರು. ಆ ಕೂಟದಲ್ಲಿ, ಕೆಲವು ಪ್ರಕರಣಗಳಲ್ಲಿ ಆನ್ ರೆಕಾರ್ಡ್ ಅಡ್ವೊಕೇಟ್ ಆಗಿ ಕೆಲಸ ಮಾಡಲು ಯುವ ವಕೀಲನಿಗೆ ಒಳ್ಳೆಯ ಸಂಭಾನೆಯ ಆಫರ್ ನೀಡಲಾಯಿತು.

ನ್ಯಾಯಮೂರ್ತಿಗಳ ಮಗ, ನಾನು ತೀರ ಹೊಸಬ. ಇಷ್ಟು ದೊಡ್ಡ ಜವಾಬ್ದಾರಿಯ ನಿರ್ವಹಣೆ ಸಾಧ್ಯವಿಲ್ಲ ಎಂದರು.

ಆದರೆ ಸಾಲಿಸಿಟರ್, ಕೇಲವ ವಕಾಲತ್ತಿಗೆ ಸಹಿ ಮಾಡಿ, ತಮ್ಮ ಫೀಸ್ ಪಡೆದು, ಹಿರಿಯ ವಕೀಲರ ಜತೆಯಲ್ಲಿ ವಾದಿಸುವ ಸಮಯದಲ್ಲಿ ಇರುವುದಷ್ಟೆ ಎಂದು ಭರವಸೆಕೊಟ್ಟರು. ಉಳಿದೆಲ್ಲವನ್ನೂ ಸಂಸ್ಥೆಯ ವಕೀಲರ ತಂಡವೇ ನೋಡಿಕೊಳ್ಳುತ್ತದೆ ಎಂದೂ, ಇದೊಂದು ಒಳ್ಳೆಯ ಕಲಿಕೆಯ ಅನುಭವ ಎಂದೂ ಹೇಳಿದರು.

ನ್ಯಾಯಮೂರ್ತಿಗಳ ಮಗನಿಗೂ ತನ್ನ ಅದೃಷ್ಟವನ್ನು ನಂಬಲಾಗಲಿಲ್ಲ. ಆದರೆ, ಅದೃಷ್ಟದೇವತೆ ಅವನ ಪರವಾಗಿ ನಿಂತಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ನಾಮಕಾವಸ್ತೆಗೆ ವಕೀಲರಾಗುವುದಕ್ಕಾಗಿಯೇ ಪ್ರತಿ ಪ್ರಕರಣಕ್ಕೂ ಭಾರಿ ಮೊತ್ತದ ಶುಲ್ಕವನ್ನು ನಿಗಧಿಪಡಿಸಲಾಯಿತು.

ಯಾವಾಗ ಇದೆಲ್ಲವೂ ಸಂಭವಿಸಿತೋ, ಆ ಕಿರಿಯ ವಕೀಲರು ವಕಾಲತ್ತು ವಹಿಸಿದ್ದ ಎಲ್ಲಾ ಪ್ರಕರಣಗಳೂ ಆ ನ್ಯಾಯಾಧೀಶರ ಪೀಠದ ಪ್ರಕರಣ ಪಟ್ಟಿಯಿಂದ (cause list) ತಾನಾಗಿಯೇ ಹೊರಬಿದ್ದವು. ಸಾಮಾನ್ಯವಾಗಿ ನ್ಯಾಯಾಧೀಶರ ಹತ್ತಿರದ ಸಂಬಂಧಿಕರು ವಕೀಲರಾಗಿದ್ದಾಗ, ಆ ನ್ಯಾಯಾಧೀಶರು ಅವರ ಪ್ರಕರಣಗಳನ್ನು ವಿಚಾರಣೆ ನಡೆಸುವಂತಿಲ್ಲ. ಹಾಗಾಗಿ ಆ ಪ್ರಕರಣಗಳು ಬೇರೆ ಪೀಠದ ಮುಂದೆ ಎದುರುಗೊಳ್ಳುತ್ತಿದ್ದವು.

ಈ ಸುದ್ದಿ ಮಿಂಚಿನಂತೆ ಹರಡಿತು. ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದ ಹಲವಾರು ಅಟಾರ್ನಿಗಳು, ವಕೀಲರು ಸಾಲಾಗಿ ಬಂದು ಅವರ ಮಗನಿಗೆ ಚೆಕ್ ನೀಡಿ, ತಮ್ಮ ಕಕ್ಷಿದಾರರ (ಮಾಲೀಕರ) ವಕಾಲತ್ತುಗಳ ಮೇಲೆ ಆತನ ಸಹಿಯನ್ನು ಪಡೆಯತೊಡಗಿದರು.

ಆ ಒಂದೇ ಅವಧಿಯಲ್ಲಿ, ನ್ಯಾಯಮೂರ್ತಿಗಳ ಮಗ ಸ್ವಂತವಾಗಿ ಚಂದದ ಒನ್ ಬಿಎಚ್‌ಕೆ ಫ್ಲಾಟ್ ಮತ್ತು ಹೊಸ ಮಾರುತಿ ಎಸ್ಟೀಮ್ ಕಾರನ್ನು ಕೊಳ್ಳುವಷ್ಟು ಹಣಗಳಿಸಿದ.

ಕ್ರಿಮಿನಲ್ ಪ್ರಕರಣಗಳಲ್ಲಿ, ನ್ಯಾಯಾಧೀಶರು ಪ್ರಾಸಿಕ್ಯೂಷನ್ (ಸರ್ಕಾರದ) ಪರವಾಗಿ ಒಲವನ್ನು ಹೊಂದಿದ್ದರು.

ಹಾಗಾಗಿ ಕ್ರಿಮಿನಲ್ ಪ್ರಾಕ್ಟೀಸ್ ಮಾಡುತ್ತಿದ್ದ ವಕೀಲರೂ ಸಹ ತಮ್ಮ ಕಕ್ಷಿದಾರರನ್ನು ಕಾನೂನಿನ ಕಪಿಮುಷ್ಟಿಯಿಂದ ಬಿಡಿಸುವ ಮೊದಲು, ತಂದೆಯ (ನ್ಯಾಯಮೂರ್ತಿಗಳ) ಪೀಠದಿಂದ ತಪ್ಪಿಸಿಕೊಳ್ಳಲು ಮಗನನ್ನೇ ವಕೀಲರನ್ನಾಗಿ ನೇಮಿಸ ತೊಡಗಿದರು.

ಆ ನ್ಯಾಯಮೂರ್ತಿಗಳು ಏಳು ವರ್ಷಗಳ ಕಾಲ ಹಿರಿಯ ನ್ಯಾಯಾಧೀಶರಾಗಿ ನಂತರ ಕೊಲಿಜಿಯಂ ಸದಸ್ಯರಾಗಿಯೂ ಇದ್ದ ಅವಧಿಯಲ್ಲಿ, ಅವರ ಮಗ ಭಾರಿ ಹಣವನ್ನು ಗಳಿಸಿದ. ಅವರು ಇನ್ನೂ ಎರಡು ಅಪಾರ್ಟ್ಮೆಂಟ್‌ಗಳು ಮತ್ತು ದೊಡ್ಡ ಕಚೇರಿಯೊಂದನ್ನು ಹಾಗೂ ಐಷಾರಾಮಿ ಕಾರನ್ನೂ ಖರೀದಿಸಿದರು. ತನ್ನ ಕಚೇರಿ ನಿರ್ವಹಿಸುವ ಅನುಭವವಿದ್ದರೂ, ಅದೃಷ್ಟವಿಲ್ಲದ ಕೆಲವು ವಕೀಲರನ್ನು ಕೆಲಸಕ್ಕೆ ನೇಮಿಸಿಕೊಂಡರು.

ತಂದೆ ನಿವೃತ್ತರಾದ ಮೇಲೆ, ಆತನಿಗೆ ಹೆಚ್ಚಾಗಿ ಖಾಸಗಿ ಪ್ರಾಕ್ಟೀಸ್ ಇರಲಿಲ್ಲ. ಆದರೆ ಕೇಂದ್ರ ಸರ್ಕಾರದ ಪ್ಯಾನೆಲ್ ವಕೀಲರಾಗಿ ನೇಮಕಗೊಂಡರು. ಅದೃಷ್ಟದೇವತೆ ಅವರನ್ನು ಆಗಲೂ ಕೈಬಿಟ್ಟಿರಲಿಲ್ಲ. ಅಲ್ಲಿಯೂ ಆಕೆ ಅವರ ಮೇಲೆ ಕೃಪೆತೋರುತ್ತಲೇ ಇದ್ದಳು.

ಪ್ರಕರಣಗಳನ್ನು ಗೆಲ್ಲುವುದಕ್ಕೆ ಸರ್ಕಾರದಿಂದ ಪಡೆಯುತ್ತಿದ್ದ ಫೀಸಿಗಿಂತ ಹೆಚ್ಚಿನ ಹಣವನ್ನು ಪ್ರಕರಣಗಳನ್ನು ಸೋಲಿಸಲು ಎದುರು ವಕೀಲರೇ ಆತನಿಗೆ ಕೊಡುತ್ತಿದ್ದರು.

ಈಗ ನ್ಯಾಯಮೂರ್ತಿಗಳು ತೀರಿಕೊಂಡಿದ್ದಾರೆ. ಆದರೆ, ಅವರ ಮಗ ಈಗಲೂ ಯಾವುದೇ ಶ್ರಮವಿಲ್ಲದೆ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಕೆಲವರು ತಮ್ಮದೇ ದುರದೃಷ್ಟವನ್ನು ಶಪಿಸಿಕೊಂಡರೂ, ಆತನ ‘ಒಳ್ಳೆಯ ಅದೃಷ್ಟದ’ ಬಗ್ಗೆ ಯಾರೂ ಅಸೂಯೆ ಪಡುವುದಿಲ್ಲ!!

ಇದೇ ನಮ್ಮ ವೃತ್ತಿಯ ವಿಶೇಷತೆ. ಇಂಥಹ ಘಟನೆಗಳು ಎಷ್ಟು ಸಾಮಾನ್ಯವಾಗಿ ನಡೆಯುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿ, ಇವುಗಳನ್ನು ‘ಸಾಮಾನ್ಯ ಸಂಗತಿ’ಯಂತೆ ಒಪ್ಪಿಕೊಳ್ಳಲಾಗಿದೆ. ಬಹುಶಃ ಇದೇ ಕಾರಣಕ್ಕಾಗಿ ಈ ವೃತ್ತಿಯನ್ನು ಇಂದಿಗೂ ಉದಾತ್ತ ವೃತ್ತಿ (noble profession) ಎಂದು ಕರೆಯುತ್ತಿರಬಹುದು.

‍ಲೇಖಕರು Admin

12 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading