ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿದುಬಿಡು ಜೀವವೇ

-ಆಝಾದ್ ಖಂಡಿಗ

ಹರಿದುಬಿಡು ಜೀವವೇ
ಅಘನಾಶಿನಿಯಂತೆ..
ಯಾವುದೇ ತಡೆಗೋಡೆಗಳಿಲ್ಲದೆ.

ಆರೋಪಿಯ ಸಾವಿಗೂ
ಅಪರಾಧಿಯ ಸಾವಿಗೂ
ಸಾಸಿವೆಯಷ್ಟೂ ವ್ಯತ್ಯಾಸವಿಲ್ಲ,
ಮರುಕಪಟ್ಟಿದ್ದು ಆತ್ಮ ಮಾತ್ರ‌.
ಸುಖಪಟ್ಟ ನಾಲಿಗೆಗಷ್ಟೇ ಗೊತ್ತು
ಉಪ್ಪು ಉಳಿ ಖಾರದ ರುಚಿ.

ಮತ್ತೆ ಪ್ರಜ್ವಲಿಸು ಜೀವವೇ
ಇರುಳ ಚಂದಿರನಂತೆ..
ಯಾವುದೇ ತಡೆಬೇಲಿಗಳಿಲ್ಲದೆ…

ಮತ್ತೇರಿದ ನೆತ್ತಿಯೂ
ಮಧ್ಯರಾತ್ರಿಯಲ್ಲೇ ಎಚ್ಚರಿಸುತ್ತೆ,
ಮತ್ತೆಂದೂ ಹಸ್ಬಿ-ರಬ್ಬಿ ಗುಣುಗದೆ
ಮಲಗಬೇಡ, ಕಾಲೂರಬೇಡವೆಂದು.
ಮೂರ್ಖ ಕನಸಿಗೇನೂ ಗೊತ್ತಾಗಲ್ಲ
ಮಧ್ಯಾಹ್ನ ಕಳೆದರೂ, ನಿದ್ದೆ ನನ್ನದಲ್ಲವೆಂದು.

ಮತ್ತೆ ಜೋರಾಗಿ ಬೀಸು ಜೀವವೇ
ದನುಷ್ಕೋಡಿಯ ಕಿನಾರೆಯಂತೆ,
ಎಂದಿಗೂ ವಿಶ್ರಮಿಸದ ಗಾಳಿಯಂತೆ…

ದಿನದ ಬಿಸಿಲಿಗೆ ಬಾಡದೆ,
ರಾತ್ರಿಯ ಚಳಿಗೆ ನಡುಗುತಿದೆ,
ಬಸವಳಿದ ಜೀವ,​ಕಣ್ಣೀರ ಹನಿಗಳ
ಒಡಲಲ್ಲಿ ಅಡಗಿದ
ಮುತ್ತಿನ ಬೆಳಕ ಕಂಡು.

ಮತ್ತೆ ಚಿಗುರಿಸು ಜೀವವೇ
ಅಮರಾವತಿ ಹೂವಿನಂತೆ,
ಎಂದೂ ಬಣ್ಣ ಕಳೆಯದ ದಳಗಳಂತೆ.

ಕಳೆದುಹೋದ ದಶಕಗಳ
ತವಕದಲ್ಲಿ ಮರೆತ ಮನಕೆ
ಮತ್ತೆ ನೆನಪಿಸು ಅತ್ಮವೇ
ಕಳೆದದ್ದು ಮೌನ,
ಕಳೆಯಬೇಕಿರೋದು ಧ್ಯಾನ,
ಕಳೆಯುತ್ತಿರೋದು
ಬರೀ ಶೂನ್ಯ.

‍ಲೇಖಕರು Admin

12 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading