ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕುವ ಕಸುವಿರಲಿ ಸಾಕು

-ಮುತ್ತು ಬಳ್ಳಾ ಕಮತಪುರ

ಗಝಲ್

ನೋವಿನಲ್ಲಿ ಬದುಕುವ ಕಸುವಿರಲಿ ಸಾಕು
ಕುಹಕದಲ್ಲಿ ಖುಷಿ ಹಂಚುವ ನಗುವಿರಲಿ ಸಾಕು

ಕಿವಿಗಳಿಗೆ ಕೇಳಿಸಿಕೊಳುವಷ್ಟು ವ್ಯವಧಾನವಿರಲಿ
ಮಾತುಗಳಿಗೆ ಮಿಡಿಯುವ ಪ್ರೀತಿಯಿರಲಿ ಸಾಕು

ಪ್ರೇಮದ ನಶೆ ತುಂಬಿದ ನಯನ ಕುಕ್ಕದಷ್ಟರಲಿ
ಮಧುಬಟ್ಟಲು ತುಳುಕದಷ್ಟು ಎಚ್ಚರವಿರಲಿ ಸಾಕು

ಅರಳುವ ಹೂ ತುಳಿಯದಷ್ಟು ಜಾಗವಿರಲಿ
ದೇಹವು ಬಳಲದಷ್ಟು ಆಲಿಂಗನವಿರಲಿ ಸಾಕು

ದೇವನೊಲಿಮೆ ಪಡೆಯುವಷ್ಟು ಸಹನೆವಿರಲಿ
ಜೀವಭಾವಕೆ ಪದ ಕಟ್ಟುವಷ್ಟು ತಾಳವಿರಲಿ ಸಾಕು

ಜಗದ ಭಾರವನು ಹೊರುವಷ್ಟು ಬೇರುಗಳಿರಲಿ
ನೆರೆಯ ಕಷ್ಟ ತಿಳಿಯುವಷ್ಟು ಹೃದಯವಿರಲಿ ಸಾಕು

ಕಾಮನಬಿಲ್ಲಿಗೆ ನಿನ್ನ ಹೆಸರಿಸುವ ಸುಖವಿರಲಿ
ನಿನ್ನ ಆರಾಧಿಸಲು ನನಗೆ ಸಮಯವಿರಲಿ ಸಾಕು

ಬಾಹು ಬಂಧನದಲ್ಲಿ ಉಳಿಯುವಷ್ಟು ಉಸಿರಿರಲಿ
ನಿನ್ನ ನೋಡುವಷ್ಟು ಬಾನ ತುಂಬಾ ಬೆಳಕಿರಲಿ ಸಾಕು

ಸಾವು ನಂಬುವಷ್ಟು ಮನೆಯ ಹಾದಿ ತಿಳಿದಿರಲಿ ಸಾಕು
ಮುತ್ತುವಿನ ದೇಹ ಮುಚ್ಚುವಷ್ಟು ಕಲ್ಲುಗಳಿರಲಿ ಸಾಕು

‍ಲೇಖಕರು Admin

12 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading