ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಅವ್ವ ಎಂದರೆ ಅನನ್ಯ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 13

ಕೃತಿ – ನನ್ನವ್ವನ ಬಯೋಗ್ರಫಿ
ಲೇಖಕರು – ಜಯರಾಮಚಾರಿ

ಪ್ರಕಾಶಕರು – ಬಹುರೂಪಿ
ಬೆಲೆ – 150

ಜಯರಾಮಚಾರಿ ಅವರು ರಚಿಸಿದ ಅವ್ವನ ಕುರಿತಾದ ಕೃತಿಯ ಶೀರ್ಷಿಕೆಯೆ ಆಕರ್ಷಕವಾಗಿದೆ.ಅವ್ವ ಎಂಬ ಪದದಲ್ಲಿ ಒಂದು ನವಿರಾದ ಭಾವವಿದೆ,ಎಲ್ಲರ ಭಾವಕೋಶವನ್ನು ತಾಕುವ ಅಂತಃಕರಣದ ನಾದವಿದೆ.ಅವಳನ್ನು ಪದಗಳಲ್ಲಿ ಕಟ್ಟಿಹಾಕಲು ಆಗದ ಅಕ್ಷರಾತೀತ ವ್ಯಕ್ತಿತ್ವ ಅವ್ವನದು. ಎಲ್ಲರಿಗೂ ಅವರ ಅವ್ವ ಮುಗಿಯದ ಮಹಾಕಾವ್ಯ. ಕನ್ನಡದ ಹಲವು ಸೃಜನಶೀಲ ಮನಸ್ಸುಗಳು ತಾಯಿ ಕುರಿತಾಗಿ ಬರೆದಿದ್ದಾರೆ,ಬರೆಯುತ್ತಿದ್ದಾರೆ ಮುಂದೆ ಕೂಡ ಬರೆಯುತ್ತಾರೆ.ಆದರೆ ಅವಳು ಮಾತ್ರ ಯಾರ ಲೆಕ್ಕಣಿಕೆಯ ತೆಕ್ಕೆಗು ಸಿಕ್ಕಲ್ಲ,ಸಿಗುವುದಿಲ್ಲ. ಅವಳನ್ನು ಪದಗಳಲ್ಲಿ ಅಕ್ಷರಗಳಲ್ಲಿ ಕಟ್ಟಿಹಾಕಲು ಸಾಧ್ಯವಾಗದ ಸಂಗತಿ.

ಅವ್ವ ಎಂದರೆ ಅನನ್ಯ, ಅನಂತ, ಅವರ್ಣನೀಯ ಅನುಭೂತಿ.

ಪಿ.ಲಂಕೇಶ್ ಕೂಡ ಅವರ ಅವ್ವನ ಕುರಿತಾಗಿ ಬರೆದ ಕೆಲವು ಸಾಲುಗಳು ಇಂತಿದೆ.
“ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ,ದುಡಿತಕ್ಕೆ,ಮಕ್ಕಳಿಗೆ;
ಮೇಲೊಂದು ಸೂರು,ಅನ್ನ,ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ”
ಎಲ್ಲಾ ತಾಯಂದಿರ ಬಯಕೆಯು ಇದೆ ಆಗಿರುತ್ತದೆ. ಅವಳು ತನಗಾಗಿ ಬದುಕದೆ, ಮನೆ,ಮಕ್ಕಳು, ಮರ್ಯಾದೆ ಎಂದು ಇಡೀ ಬದುಕು ಒದ್ದಾಡುತ್ತಾ,
ಕೆಲವೊಮ್ಮೆ ಹುಸಿ ತೋರಿಕೆಗಾಗಿ ಹೈರಾಣಾಗುವ ಹೆಣ್ಣು ಜೀವವದು.

‘ನನ್ನವ್ವನ ಬಯೊಗ್ರಫಿ’ ಬರೆದ ಲೇಖಕರಾದ ಜಯರಾಮಚಾರಿ ಯವರು ತನ್ನವ್ವನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಲವು ಪ್ರತಿಭೆಯುಳ್ಳ ಇವರು ಮೆಟ್ರೋ ರೈಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲೇಖಕ ತಮ್ಮ ತಾಯಿಯ ಅಂತಿಮ ದಿನಗಳನ್ನು ಹೇಳುತ್ತಾ ಅವಳ ಇಡೀ ಬದುಕಿನ ಚಿತ್ರಣ ನೀಡಿದ್ದಾರೆ. ಕ್ಯಾನ್ಸರ್ ಎಂಬ ರೋಗ ತಗುಲಿ ತಾಯಿ ಒದ್ದಾಡುವಾಗ ಲೇಖಕ ಅನುಭವಿಸಿದ ಸಂಕಟ,ನೋವು, ಹತಾಶೆ ಕೆಲವೊಮ್ಮೆ ಕೋಪ ಎಲ್ಲವನ್ನೂ ಹೇಳಿದ ರೀತಿ ಮಾತ್ರ ಯಾತನಾಮಯ.

ಅವ್ವನ ಬದುಕಿನ ಘಟನಾವಳಿಗಳನ್ನು ಹಿನ್ನೋಟದಲ್ಲಿ ಹೇಳುತ್ತಾ,ಅವಳಲ್ಲಿನ ಮುಗ್ದತೆ, ಅಂತಃಕರಣ ಜೊತೆಗೆ ಕಾಯಕ ಜೀವಿಯಾದ ಅವಳಿಗೆ ಸಂಬಂಧಗಳ ಬಗ್ಗೆ ಇದ್ದ ಕಕ್ಕುಲಾತಿ ಕುರಿತು ಸಹಜವಾಗಿ ಹಂಚಿಕೊಂಡಿದ್ದಾರೆ. ಏಳು ಮಕ್ಕಳ ತಾಯಿಯಾಗಿ,ಮೊಮ್ಮಕ್ಕಳಿಗೆ ಅಜ್ಜಿಯಾಗಿ ಆಲದಮರದಂತಿದ್ದ ಅವ್ವ, ಜೀವನದ ಕೊನೆಯ ಘಳಿಗೆಯಲ್ಲಿ ನಿಸ್ಸಾಹಾಯಕಳಾಗಿ ಕಂಡಾಗ, ಆ ಸಂದರ್ಭ ಮನಮಿಡಿಯುವಂತಿದೆ.ಲೇಖಕರು ತಾಯಿಯ ರೋಗ, ಅದರ ಯಾತನೆ ಹೇಳುವ ಜೊತೆಗೆ ಅವಳ ಅಂತರಂಗವನ್ನು, ಅವಳ ಬದುಕಿನ ಹಲವು ಸನ್ನಿವೇಶ ಗಳನ್ನು ದಾಖಲಿಸುವ ಮೂಲಕ ಅವ್ವನ ಬಯೋಗ್ರಫಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಓದುಗರ ಮನವನ್ನು ಮೀಟಿದ್ದಾರೆ

‍ಲೇಖಕರು Admin

5 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading