ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ

-ಗೊರೂರು ಶಿವೇಶ್

ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ: ‘ವಿಡಿಯೋ’ ಚಿತ್ರದ ವಿಶ್ಲೇಷಣೆ

ಭಾಷೆ, ಧರ್ಮ, ಗಡಿಗಳನ್ನು ಮೀರಿ ಮನುಷ್ಯನ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುವ ಏಕೈಕ ಕಸುವು ಅತೀಂದ್ರಿಯ ಶಕ್ತಿಗಳದ್ದು. ಕತ್ತಲ ಕೋಣೆಯಲ್ಲಿ ತನ್ನಷ್ಟಕ್ಕೇ ತಾನೇ ತೆರೆದುಕೊಳ್ಳುವ ಕಿಟಕಿ, ಬಿಳಿಸೀರೆಯ ಮೋಹಿನಿ, ಕತ್ತಲಿನಲ್ಲಿ ಮಿನುಗುವ ಬೆಕ್ಕಿನ ಕಣ್ಣುಗಳು ಶತಮಾನಗಳಿಂದ ಸಾಹಿತ್ಯ, ರಂಗಭೂಮಿ ಹಾಗೂ ಬೆಳ್ಳಿತೆರೆಯನ್ನು ಆಳುತ್ತಲೇ ಬಂದಿವೆ.

​ಕನ್ನಡ ಚಿತ್ರರಂಗದಲ್ಲಿ ‘ಪಾತಾಳ ಮೋಹಿನಿ’, ‘ನಾ ನಿನ್ನ ಬಿಡಲಾರೆ’, ‘ಅಪರಾಧಿ’, ಉಪೇಂದ್ರ ಅವರ ಕ್ಲಾಸಿಕ್ ‘ಶ್!’, ‘ಆಪ್ತಮಿತ್ರ’ದಿಂದ ಹಿಡಿದು ನವ್ಯ ಮಾದರಿಯ ‘6-5=2’ ವರೆಗೆ ಹಲವು ಪ್ರಯೋಗಗಳು ಗೆದ್ದು ಬೀಗಿವೆ. ಈ ಹಾದಿಯಲ್ಲಿ ನೂರಾರು ಚಿತ್ರಗಳು ಸೋತು ಗೋರಿ ಸೇರಿದರೂ, ಸೀಮಿತ ಬಜೆಟ್ ಹಾಗೂ ಸದಾ ಹಸಿದಿರುವ ಪ್ರೇಕ್ಷಕ ವರ್ಗದ ಕಾರಣದಿಂದ ಈ ‘ಭಯದ ಜಾನರ್’ ಯಾವತ್ತೂ ಬತ್ತಿಹೋಗದ ಗಣಿ.

​ಅಗಾಥಾ ಕ್ರಿಸ್ಟಿಯ ‘ಆ್ಯಂಡ್ ದೇರ್ ವರ್ ನನ್’ ಕಾದಂಬರಿಯ ಶೈಲಿಯಲ್ಲೋ ಅಥವಾ ‘ದಿ ಎಕ್ಸಾರ್ಸಿಸ್ಟ್’ ಮಾದರಿಯಲ್ಲೋ, ಹಾಳುಬಿದ್ದ ಬಂಗಲೆ ಅಥವಾ ನಿಗೂಢ ಎಸ್ಟೇಟ್‌ಗೆ ತೆರಳುವ ಯುವಕರ ಗುಂಪು, ಒಬ್ಬೊಬ್ಬರಾಗಿ ಕಣ್ಮರೆಯಾಗುವ ಕಥಾಹಂದರ ಹಳೆಯದೇ. ಆದರೆ, ಇತ್ತೀಚೆಗೆ ತೆರೆಕಂಡಿರುವ ‘ವಿಡಿಯೊ’ ಸಿನಿಮಾ ಈ ಚಿರಪರಿಚಿತ ಚೌಕಟ್ಟನ್ನು ಇಂದಿನ ಡಿಜಿಟಲ್ ಕಾಲಘಟ್ಟಕ್ಕೆ ತಕ್ಕಂತೆ ಮರುಹುಟ್ಟು ನೀಡಿದೆ.

​ಇಲ್ಲಿ ಕನ್ನಡದ ‘6-5=2’ ಚಿತ್ರದ ಮಾದರಿಯ ನೈಜ(Found footage) ನಿರೂಪಣೆಯ ಶೈಲಿಯಿದೆ; ಜೊತೆಗೆ ಭಾರತೀಯ ಚಿತ್ರರಂಗದಲ್ಲೇ ಅಪರೂಪವೆನಿಸಿದ ‘ತುಂಬಾಡ್’ ಚಿತ್ರದಂತಹ ಗಾಢ ಕಲ್ಪನೆ, ವಿಲಕ್ಷಣ ವಾತಾವರಣ ಹಾಗೂ ಮಾನವ ಸಹಜ ದುರಾಶೆಯನ್ನು ಬಿಂಬಿಸುವ ಪಾತ್ರ ಪೋಷಣೆಯೂ,ಮೇಳೈಸಿದೆ. ಚಿತ್ರದ ಪೋಸ್ಟರ್ಗಳ ನಿರ್ವಹಣೆಯಲ್ಲಿ ಆ ಚಿತ್ರದ ಪ್ರಭಾವವನ್ನು ಕಾಣಬಹುದು. ಇಂದಿನ ಯುವಜನತೆಯನ್ನು ಆವರಿಸಿರುವ ಸಾಮಾಜಿಕ ಜಾಲತಾಣಗಳ ಗೀಳು, ವೀವ್ಸ್ ಹಾಗೂ ಲೈಕ್ಸ್‌ಗಾಗಿ ಮಾಡುವ ಅಪಾಯಕಾರಿ ಹುಚ್ಚಾಟಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ. ಸಾಧಾರಣವಾಗಿ ಶುರುವಾಗುವ ಪಯಣ, ದ್ವಿತೀಯಾರ್ಧಕ್ಕೆ ಬರುತ್ತಿದ್ದಂತೆ ಮಾಟ-ಮಂತ್ರ, ವಾಮಾಚಾರದ ಕರಾಳ ಜಾಲಕ್ಕೆ ಸಿಲುಕಿ, ಪ್ರೇಕ್ಷಕರನ್ನು ಕೇವಲ ಭಯಪಡಿಸದೆ ನೇರವಾಗಿ ಬೀಭತ್ಸದ ಪರಮಾವಧಿಗೆ ದೂಡುತ್ತದೆ.

​’ಬ್ಲಿಂಕ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ಪ್ರತಿಭಾವಂತ ನಟ ದೀಕ್ಷಿತ್ ಶೆಟ್ಟಿ ಈ ವಿಭಿನ್ನ ಹಾಗೂ ರಿಸ್ಕಿ ಕಥಾವಸ್ತುವನ್ನು ನಂಬಿ ಚಿತ್ರಕ್ಕೆ ಬಂಡವಾಳ ಹೂಡಿರುವುದು ಪ್ರಶಂಸನೀಯ. ‘ಬ್ಲಿಂಕ್’ ಖ್ಯಾತಿಯ ನಿರ್ದೇಶಕ ರಂಗಭೂಮಿ ಪ್ರತಿಭೆ ಶ್ರೀನಿಧಿ ಬೆಂಗಳೂರು, ತಮ್ಮ ಚುರುಕಾದ ಚಿತ್ರಕಥೆ ಮತ್ತು ಹರಿತವಾದ ಸಂಭಾಷಣೆಯ ಮೂಲಕ ಚಿತ್ರವನ್ನು ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ.

ನೈಜವೆನಿಸುವ ಕ್ಯಾಮೆರಾ ಕೋನಗಳು ಹಾಗೂ ಕತ್ತಲೆಯನ್ನೇ ಒಂದು ಪ್ರಮುಖ ಪಾತ್ರವಾಗಿಸಿದ ಕೈಚಳಕ ಚಿತ್ರದ ಅತಿ ದೊಡ್ಡ ಶಕ್ತಿ.ಧ್ವನಿ ವಿನ್ಯಾಸ (Sound design) ಮೈನವಿರೇಳಿಸುವ ಸದ್ದುಗಳು ಹಾಗೂ ನಿಶ್ಯಬ್ದದ ಬಳಕೆ ಚಿತ್ರಮಂದಿರದ ಆಸನಕ್ಕೆ ಕಟ್ಟಿಹಾಕುತ್ತವೆ.ತಾರಾ ಗಣದಲ್ಲಿ ಹೊಸ ಪ್ರತಿಭೆಗಳೇ ತುಂಬಿದ್ದರೂ, ಪ್ರತಿಯೊಬ್ಬರೂ ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ಆತಂಕವನ್ನು ನೈಜವಾಗಿಸಿದ್ದಾರೆ.

​ಭಯವನ್ನೇ ಬಂಡವಾಳ ಮಾಡಿಕೊಳ್ಳುವ ಮಾಟಗಾರರು, ಕಪಟ ಜ್ಯೋತಿಷಿಗಳ ಸೋಗಲಾಡಿತನ ಹಾಗೂ ಮೌಢ್ಯದ ಗಂಭೀರ ಪ್ರಶ್ನೆಗಳನ್ನು ಈ ಸಿನಿಮಾ ಪ್ರೇಕ್ಷಕನ ಮುಂದೆ ಎತ್ತಿಡುತ್ತದೆ. ಭಯವನ್ನು ಒಂದು ರಂಜನೆಯಾಗಿ ನೋಡಿ ಮರೆಯುತ್ತಾರೋ ಅಥವಾ ಇಂತಹ ಮಾಟ-ಮಂತ್ರಗಳ ಅಂಧಾಭಿಮಾನಕ್ಕೆ ಸಮಾಜ ಮತ್ತೆ ಬಲಿಯಾಗುತ್ತದೆಯೋ ಎನ್ನುವ ಭಾವನೆಯನ್ನು ಚಿತ್ರದ ಅಂತ್ಯ ಮೂಡಿಸುತ್ತದೆ.

‍ಲೇಖಕರು Admin

15 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading