ಇತ್ತೀಚೆಗೆ ತಾನೇ ತಮ್ಮ ತಂದೆಯನ್ನು ಕಳೆದುಕೊಂಡ ಕಥೆಗಾರ
ಶಿವಕುಮಾರ ಮಾವಲಿ ಅವರ ಕಾಡುವ ಬರಹ ಇಲ್ಲಿದೆ.
1996ರ ಸಂಕ್ರಾಂತಿಯ ಮರುದಿನ ಗಾಜನೂರಿನ ತುಂಗಾ ಆಣೆಕಟ್ಟೆಯ ಸಮೀಪಲ್ಲಿದ್ದ ಮೊರಾರ್ಜಿ ವಸತಿ ಶಾಲೆಗೆ ಅಪ್ಪ ನನ್ನನ್ನು ಬಿಟ್ಟು ಬರಲು ಬಂದಿದ್ದರು. ಹಾಸ್ಟೆಲ್ ಗೆ ಬೇಕಾದ ವಸ್ತುಗಳ ಜೊತೆ ಶಿವರಾಜ ಬಸ್ ಇಳಿದಾಗ, ಆ ಚಿಕ್ಕ ವಯಸ್ಸಿನಲ್ಲಿ ಮನೆಯವರೆಲ್ಲರನ್ನು ಬಿಟ್ಟು ದೂರದೂರಿನ ಶಾಲೆಗೆ ಹೋಗುವ ಸಂಕಟ ಆಗ ಎದುರಾಗಿತ್ತು. ಆದರೆ, ಅಪ್ಪ ತುಂಬಾ ಸಹಜವಾಗಿಯೇ ಇದ್ದರು. ಮಧ್ಯಾಹ್ನದ ಹೊತ್ತಿಗೆ ಶಾಲೆಗೆ ನನ್ನನ್ನು ಸೇರಿಸಿ ಅಪ್ಪ ವಾಪಾಸ್ ಹೊರಡುವಾಗ ಟ್ರಂಕಿನಲ್ಲಿದ್ದ ಅಮೃಂತಾಂಜನ್ ಡಬ್ಬಿ, ಪಾರ್ಲೇಜಿ ಬಿಸ್ಕತ್ ಪ್ಯಾಕ್, ನೀಲಗಿರಿ ಎಣ್ಣೆಯ ಸಣ್ಣ ಟ್ಯೂಬ್, ಪಾಂಡ್ಸ್ ಪೌಡರ್, ಪೇಸ್ಟು, ಮೆಡಿಮಿಕ್ಸ್ ಸಾಬೂನು ಮುಂತಾದ ವಸ್ತುಗಳನ್ನು ನೀಟಾಗಿ ಜೋಡಿಸಿಟ್ಟು ಹೊರಟರು. ಶೀತ ಆಗಿದೆಯೆಂದರೆ ಸಾಕು, ಸ್ವಲ್ಪ ಕೊಬ್ಬರಿ ಎಣ್ಣೆ ಕಾಯಿಸಿಕೊಂಡು ಮೂಗಿಗೆ ಏರಿಸಿಕೊಂಡರೆ ಎಲ್ಲಾ ಸರಿ ಹೋಗುತ್ತದೆ ಎಂಬುದು ಅಪ್ಪನ ಪ್ರಕಾರ ದಿವ್ಯ ಔಷಧಿ. ಹೀಗೆ ಶಾಲೆಗೆ ಬಿಟ್ಟು ಬಂದದ್ದು ಅಪ್ಪ ನನಗಾಗಿ ಮಾಡಿದ ಮಹತ್ಕಾರ್ಯ ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ.
ಸಾವಿನ ಬಗ್ಗೆ Emily Dickenson ಬರೆದ ಪದ್ಯವೊಂದರ, “This quiet dust was once gentlemen and ladies” ಎಂಬ ಸಾಲುಗಳನ್ನು ಹಿಂದೊಮ್ಮೆ ನಾನು ಅನುವಾದಿಸಿದ್ದೆ. ಮನೆಯ ಹಿಂದಿನ ಅಡಿಕೆ ಮತ್ತು ತೆಂಗಿನ ಮರಗಳ ನಡುವೆ ಅಪ್ಪ ತಣ್ಣನೆ ಮಲಗಿ ಹದಿನೈದು ದಿನಗಳಾದ ನಂತರ ಆ ಸಾಲುಗಳಲ್ಲಿರುವ ನೋವು ನನ್ನನ್ನು ಪ್ರತಿ ಕ್ಷಣ ಹಿಂಡುತ್ತಿದೆ. ಆ Quiet Dust ಕಣ್ಮುಂದೆ ಬಂದು ನಿಂತರೆ ಸಾಕು, ಅಪ್ಪನ ಜೊತೆಗಿನ ನಲವತ್ತು ವರ್ಷಗಳ ನೆನಪುಗಳು ಎದೆಗೆ ಇರಿಯುತ್ತಿವೆ. ಸಾವೆಂಬುದು ಲೋಕಕ್ಕೊಂದು ಸುದ್ದಿ, ಮನೆಯವರಿಗೆ ಅದು ‘ಶಾಶ್ವತ ನೋವು’ ಎಂಬುದು ಬುದ್ಧಿಗೆ ತಿಳಿದಿದ್ದರೂ ಭಾವಕ್ಕೆ ಸ್ಪರ್ಷಿಸಿದ್ದು ಅಪ್ಪ ನಮ್ಮನ್ನು ಅಗಲಿದ ಈ ದಿನಗಳಲ್ಲಿ. ಅಷ್ಟಕ್ಕೂ ಮನುಷ್ಯ ಮತ್ತೊಬ್ಬರಿಗೆ ಏನಾಗಿರುತ್ತಾನೆ ಎಂದರೆ ‘ನೆನಪು’ ಎಂದೇ ಹೇಳಬೇಕು. ಭೌತಿಕವಾಗಿ ಅಗಲಿದ ಅಪ್ಪ ನೆನಪುಗಳ ಭಂಡಾರವನ್ನೇ ಬಿಟ್ಟು ಹೋಗಿದ್ದಾರೆ. ಆದರೂ ‘ಅವರಿಲ್ಲ’ ಎಂಬ ನೆನಪು ಮಾತ್ರ ಕ್ರೂರವಾದದ್ದು.
ಅಪ್ಪನಿಂದ ನಾನು ಕಲಿತದ್ದು ಹಣದ ವ್ಯವಹಾರ ಎಂಬುದು ಎಷ್ಟು ಶುದ್ಧವಾಗಿರಬೇಕು ಮತ್ತು ನೇರವಾಗಿರಬೇಕು ಎಂಬುದನ್ನು. ಆ ವಿಷಯದಲ್ಲಿ ಅವರು ನಿಷ್ಠುರಿಯಂತೆ ಕಾಣುತ್ತಿದ್ದರು. ತೀರಾ ಬೇಕಾದವರ ಬಳಿಯೂ ನಿಷ್ಠುರವಾಗಿ ಹಾಗೆ ವರ್ತಿಸುವುದು ಸೂಕ್ತವಲ್ಲ ಎಂದು ಅನೇಕ ಬಾರಿ ಹೇಳಿದ್ದೆ. ಹಾಗೆಯೇ ಅವರಿಂದ ಕಲಿಯಬಾರದ್ದು ಇತ್ತು. ಅದನ್ನು ಹೇಳದೆ ಕಲಿಸಿದರು. ಬೆಂಗಳೂರಿಂದ ಹೊರಟ ಕಾರು ಊರು ತಲುಪುವುದರೊಳಗೆ ಕನಿಷ್ಠ ಎರಡು ಬಾರಿ ‘ಎಲ್ಲಿದ್ದೀರಾ? ಹುಷಾರು’ ಎಂಬ ಕಾಳಜಿಯ ಫೋನ್ ಕರೆ ಇನ್ನೆಲ್ಲಿ?
ಏಳೆಂಟು ವರ್ಷಗಳ ಹಿಂದೆ ಅಪ್ಪಂದಿರ ದಿನಕ್ಕೆ, ಕನ್ನಡ ಪ್ರಭದಲ್ಲಿ “ಅಪ್ಪ ಎಂಬ ಸಾಲಗಾರ” ಎಂಬ ವಿಶೇಷ ಲೇಖನ ಬರೆದಿದ್ದೆ. ಅದನ್ನು ಪ್ರತಿ ವರ್ಷ ಅಪ್ಪಂದಿರ ದಿನ ಬಂದಾಗ ಅನೇಕರು ನನಗೇ ಕಳಿಸಿರುತ್ತಾರೆ. ಅನೇಕ ಫ್ಯಾಮಿಲಿ ಗ್ರೂಪ್ ಗಳಲ್ಲಿ ಅದು ಶೇರ್ ಆಗುತ್ತಲೇ ಇರುತ್ತದೆ. ಅದರಲ್ಲಿರುವ ಅನೇಕ ಸಾಲುಗಳಲ್ಲಿರುವುದು ‘ನನ್ನ ಅಪ್ಪ’ನೇ ಎಂಬ ಎಲ್ಲರ ಅಪ್ಪ. ಈಗ ಅದರಲ್ಲಿನ ಒಂದೊಂದು ಸಾಲೂ ನನ್ನನ್ನು ಇನ್ನಿಲ್ಲದಂತೆ ಸಂಕಟಕ್ಕೆ ತಳ್ಳುತ್ತಿದೆ. ಸಂಭ್ರಮದ ಹಿಂದೆಯೇ ಕಾದು ಕುಳಿತಿದ್ದ ಅಪ್ಪನ ಅಗಲಿಕೆಯ ಸಂಕಟ ಅನಿರೀಕ್ಷಿತ ಆಘಾತ. Dickenson ತನ್ನ ಇನ್ನೊಂದು ಪದ್ಯದಲ್ಲಿ ಹೇಳುತ್ತಾಳೆ,’Because I could not stop for death, he kindly stopped for me’ ಎಂದು. ಇದು ಹಾಗೆಯೇ ಆಯಿತು.
ಇನ್ನೂ ಕೆಲ ವರ್ಷ ನಮ್ಮ ಜೊತೆಯಲ್ಲಿರಬಹುದಾಗಿತ್ತು, ಇನ್ನಷ್ಟು ಹೊಸತುಗಳನ್ನು ಅವರು ಕಾಣಬೇಕಿತ್ತು ಎಂದು ನಾವೆಲ್ಲಾ ಬಯಸುತ್ತೇವೆ. ಆದರೆ ಮನುಷ್ಯನ ದೇಹ, ಮನಸ್ಸು ಮತ್ತು ಚೈತನ್ಯಗಳು ತುಂಬಾ ವೈಯಕ್ತಿಕವಾದವು. ಅವಕ್ಕೆ ಪೃಕೃತಿಯಷ್ಟೇ ಜವಾಬ್ದಾರಿಯನ್ನು ನಾವೂ ತೋರಿಸಬೇಕಾಗುತ್ತದೆ.

ಅಪ್ಪನ ಅಗಲಿಕೆಯ ಸಮಯದಲ್ಲಿ ನನಗೆ ಸ್ಪಷ್ಟವಾದ ಕೆಲವು ವಿಷಯಗಳಿವೆ. ಸಾವಿನ ಮನೆಯಲ್ಲಿ ಕೇವಲ ನೀರವತೆ ಮಾತ್ರ ಇರುವುದಿಲ್ಲ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ‘ನಿರಂತರತೆ’ ಇರುತ್ತದೆ. ಆ ಸಮಯದಲ್ಲಿ ನಡೆಯುವ ಬಹುತೇಕ ಪ್ರಕ್ರಿಯೆಗಳು ‘ನಾಳೆ’ಗಳತ್ತ ಮುಖ ಮಾಡಿರುತ್ತವೆ. ಅಗಲಿದ ವ್ಯಕ್ತಿಗೆ ತೀರ ಹತ್ತಿರದವರ ನೋವು, ದುಃಖ ಕೂಡ ವಾಸ್ತವ ಮತ್ತು ಭಾವನಾಲೋಕದ ನಡುವೆ ಪದೇ ಪದೇ ಶಿಫ್ಟ್ ಆಗುತ್ತಿರುತ್ತದೆ. ಹಾಗೆಯೇ ಆ ಸಮಯದಲ್ಲಿ ಮತ್ತು ನಂತರದ ಕೆಲ ದಿನಗಳಲ್ಲಿ ನಡೆಸುವ ಆಚರಣೆಗಳಲ್ಲಿ ಅನೇಕ ವಿಷಯಗಳು ಅಸಂಬದ್ಧವೂ, ಅಮಾನವೀಯವೂ ಆಗಿರುತ್ತವೆ. ಮನುಷ್ಯ ತುಂಬಾ ದುಃಖದಲ್ಲಿದ್ದಾಗ ಮತ್ತು ಅತೀವ ಸಂತಸದಲ್ಲಿದ್ದಾಗ ಮೌಢ್ಯಾಚರಣೆಗಳನ್ನು ಸುಲಭವಾಗಿ ಹೇರಬಹುದು ಅನ್ನಿಸುತ್ತೆ. ಅದರಲ್ಲೂ ಒಂದು ಸಾವಿನ ನೋವಿನಿಂದ ಹೊರ ಬರಲು ಬೇಕಾಗುವ ಸಮಯಕ್ಕೆ ಕರುಣೆಯೇ ಇರುವುದಿಲ್ಲ. It is inexplicable.
ನನ್ನ ಕಥೆಗಳನ್ನು, ನಾಟಕಗಳನ್ನು ಓದಿದ ಕೆಲವರು, ‘ನಿಮ್ಮ ಕಥೆಗಳಲ್ಲಿ ಇದ್ದಕ್ಕಿದ್ದಂತೆ ಒಂದು ನಾಟಕೀಯ ತಿರುವು ಬರುತ್ತದೆ’ ಎಂದು ಹೇಳುತ್ತಾರೆ. ಆಗೆಲ್ಲ ನಾನು ಒಂದು ಮಾತು ಹೇಳುತ್ತಿರುತ್ತೇನೆ. ಬದುಕಿನಲ್ಲಿರುವ ನಾಟಕೀಯ ತಿರುವುಗಳಷ್ಟು ನಾನು ಕಥೆಗಳಲ್ಲಿ ತರಲಾರೆ ಎಂದು. ಅಪ್ಪನ ಅಗಲಿಕೆ ನನ್ನಲ್ಲಿ ಆ ಸತ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಆಸ್ಪತ್ರೆಯ ದಾರಿಯಲ್ಲಿ ಕಾರಿನಲ್ಲಿ ಕೂತಾಗ ಅಪ್ಪ ಆಡಿದ ಕೆಲವು ಮಾತುಗಳು, ಎಮರ್ಜೆನ್ಸಿ ವಾರ್ಡಿನಲ್ಲಿನ ಗಾಬರಿ ಮತ್ತು ತರಾತುರಿ, ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ರಾತ್ರಿಯೂ ಅಲ್ಲದ, ಬೆಳಗೂ ಅಲ್ಲದ ಜಾವದ ಮೂರು ಗಂಟಗೆಯಷ್ಟೊತ್ತಿಗೆ ವೈದ್ಯರು ‘Out of danger’ ಎನ್ನಲಾಗುವುದಿಲ್ಲ ಎಂದು ಹೇಳಿದ್ದು, ಯಾವುದೋ ಸಿನಿಮಾದಲ್ಲಿ ಕೇಳಿದ ಸಂಭಾಷಣೆಯಲ್ಲ, ನನಗೇ ವೈದ್ಯರು ಹೇಳುತ್ತಿರುವುದು ಎನಿಸಿದಾಗ ಪ್ರೇಮಳನ್ನು ತಬ್ಬಿ ಬಿಕ್ಕುವುದು ಬಿಟ್ಟು ಇನ್ನೇನು ಮಾಡುವುದಿತ್ತು?
ಮಲಗಿದಾಗಲೂ ವಾಚ್ ಕಟ್ಟಿಕೊಂಡಿರುತ್ತಿದ್ದ ಅಪ್ಪ, ಆ ದಿನ ಮಧ್ಯಾಹ್ನ ಮಲಗಿದ್ದಾಗ, ಹುಷಾರಿಲ್ಲದೆ ಮಲಗಿದಾಗ ವಾಚ್ ಯಾಕೆ ಬೇಕು ಎಂದು ನಾನೇ ಅವರ ವಾಚ್ ಕೈಯಾರೆ ಬಿಚ್ಚಿಟ್ಟಿದ್ದೆ. ಆಗಲೂ ಅವರಿಗೆ ಅದನ್ನು ಬಿಚ್ಚಡಲು ಮನಸ್ಸಿರಲಿಲ್ಲ. ಈಗ ನನಗೆ ನೋವಾಗುತ್ತಿರುವ ವಿಷಯವೆಂದರೆ ಎಂಟು ವರ್ಷಗಳ ಹಿಂದೆ “ಒಂದು ಹಳೆಯ ನೆನಪು” ಎಂಬ ಕಥೆ ಬರೆದಿದ್ದೆ. ಅದು ಟೈಪಿಸ್ಟ್ ತಿರಸ್ಕರಿಸಿದ ಕಥೆ ಪುಸ್ತಕದಲ್ಲಿದೆ. ಅದರಲ್ಲೊಂದು ವಿಲಕ್ಷಣ ಪ್ರಸಂಗ ಇದೆ. ಯಾಕೋ ಸಪ್ಪಗೆ ಹಳ್ಳಿಯ ಮನೆಯ ಕಟ್ಟೆಯ ಮೇಲೆ ಕೂತ ಅಪ್ಪನ ಕೈಗೆ ಮಗ ಒಂದು ಗುಲಾಬಿ ಹೂವು ಕೊಟ್ಟಿರುತ್ತಾನೆ. ಆ ದಿನ ರಾತ್ರಿ ಅಪ್ಪನನ್ನು ಕಳೆದುಕೊಳ್ಳುತ್ತಾನೆ. ಅಪ್ಪನಿಗೆ ಮಗನೊಬ್ಬ ಹೂವು ಕೊಟ್ಟ ದಿನ ಅಪ್ಪ ಮರಣಿಸುವ ಆ ಕಥೆ ಈಗ ನೆನಪಾಗಿ ನನ್ನ ಹೃದಯ ಹಿಂಡುತ್ತಿದೆ. ಆ ಹೂವಿನ ರೀತಿಯೇ ನನಗೆ ‘ಅಪ್ಪನ ವಾಚ್’ ನೆನಪಾಗುತ್ತಿದೆ. ನಾನು ಆ ದಿನ ವಾಚ್ ಬಿಚ್ಚಿಡಬಾರದಿತ್ತೇನೋ ಎಂದೆಲ್ಲಾ ಅನಿಸುತ್ತದೆ. ಎಷ್ಟು ನಾಟಕೀಯತೆಯ ನಡುವೆಯೇ ನಾವೆಲ್ಲ ಉತ್ಸಾಹ ಉಳಿಸಿಕೊಳ್ಳಬೇಕಿದೆಯಲ್ಲವೆ ಎಂದು ನೆನೆದು ವಾಸ್ತವಕ್ಕೆ ಬರುತ್ತೇನೆ. ನೆನಪು ಇರಿದರೆ, ವಾಸ್ತವ ಅರಿಯುವಂತೆ ಮಾಡುತ್ತದೆ.
ಅಪ್ಪನೊಂದಿಗಿನ ಜಗಳ, ತಮಾಷೆ, ಯೌವನದಲ್ಲಿ ದುಡಿಯುವ ಬಗ್ಗೆ ಅಷ್ಟಾಗಿ ಆಸಕ್ತಿ ತೋರದೆ, ಸುಮ್ಮನೆ ಕೂರಬೇಕಾದ ವಯಸ್ಸಿನಲ್ಲಿ ಹುಟ್ಟಿಕೊಂಡಿದ್ದ ದುಡಿಯಬೇಕೆಂಬ ಹುಚ್ಚು, ಅಮ್ಮನ ವಿಷಯದಲ್ಲಿ ಬೆಟ್ಟದಷ್ಟು ಕಾಳಜಿ ಪ್ರೀತಿಗಳಿದ್ದರೂ, ಫ್ಯೂಡಲ್ ನಂತೆಯೇ ವರ್ತಿಸುತ್ತಿದ್ದುದು, ಸೌತ್ ಸಿನಿಮಾ ನೋಡುವ ಅವರ ಹುಕಿ, ಹಿಂದಿ ಹಾಡುಗಳನ್ನು ಗುನುಗುತ್ತಿದ್ದ ಆ ವಿಶೇಷ ಧ್ವನಿ, ಕುಟುಂಬದವರ ಮೇಲಿದ್ದ ಕಾಳಜಿ, ಇವನ್ನೆಲ್ಲಾ ನೆನದರೆ ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವರನ್ನು ನೆನಪಿನ ಲೋಕದಲ್ಲಿ ಭದ್ರವಾಗಿಟ್ಟುಕೊಳ್ಳುತ್ತೇನೆ. ಶಾಲೆಗೆ ಬಿಡಲು ಬಂದ ದಿನ ಅವರು ಕೊಡಿಸಿದ ಅಮೃತಾಂಜನ್ ಡಬ್ಬಿ , ಪಾರ್ಲೇಜಿ ಬಿಸ್ಕತ್ ಪ್ಯಾಕ್ ಗಳು ನನ್ನ ಕಣ್ಣಂಚಿನಲ್ಲಿ ಹಾಗೇ ಇವೆ, ಇರುತ್ತವೆ…






0 Comments