ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋತವನ ಆತ್ಮಕತೆ 

– ಆಶಿಕ್ ಮುಲ್ಕಿ

ಇಂದು ಒಂದೇ ದಿನ. ಇವತ್ತು ಪಾಠ ಮುಗಿಸಿ ತರಗತಿಯಿಂದ ಕಾಲು ಆಚೆಗಿಟ್ಟರೆ ರವಿಶಂಕರ ಭಟ್ಟರು ತನ್ನ ಸುದೀರ್ಘ ಶಿಕ್ಷಕ ವೃತ್ತಿಗೆ ವಿದಾಯ ಹೇಳುತ್ತಾರೆ. ಈಗ ನಿಂತು ಒಂದರೆಕ್ಷಣ ಮೂವತ್ತೇಳು ವರ್ಷಗಳ ಶಿಕ್ಷಕ ಬದುಕಿನ ಕಡೆಗೆ ಇಣುಕಿದರೆ, ಅವರ ಪಾಠ ಕೇಳುತ್ತಾ, ಗರಡಿಯಲ್ಲಿ ಪಳಗುತ್ತಾ ಹೋದ ಮಕ್ಕಳು ಇಂದು ಬದುಕಿನ ಹಲವು ಮಜಲುಗಳು ಈಜುತ್ತಾ ಉನ್ನತ ಬದುಕು ಕಟ್ಟಿಕೊಂಡಿದ್ದಾರೆ. ಇಂಜಿನಿಯರ್ ಗಳು, ವೈದ್ಯರು, ರಾಜಕರಣಿಗಳು, ಬ್ಯುಸಿನೆಸ್ ಮನ್ ಗಳು ಹೀಗೆ ಲಕ್ಷ ಲಕ್ಷ ಸಂಪಾದಿಸುವ ಮಟ್ಟದಲ್ಲಿದ್ದಾರೆ. ಅಂಥದ್ದೊಂದು ಸಂತೃಪ್ತ ಶಿಕ್ಷಕ ಬದುಕಿಗೆ ಇಂದು ವಿದಾಯ ಹೇಳಿ ನಡೆದರೆ, ನಾಳೆಯಿಂದ ಎಲ್ಲವನ್ನೂ ನೆನೆಸಿಕೊಳ್ಳಬೇಕು. ವಯಸ್ಸು ಅರವತ್ತು ಬೇರೆ. ಮನಸ್ಸು ಹೇಳಿದರೂ, ದೇಹ ಕೇಳ ಬೇಕಲ್ಲವೇ! ಅನಿವಾರ್ಯ. 

ಸಮಯ ಸರಿಯಾಗಿ ಸಂಜೆ ನಾಲ್ಕು. ಮೂರನೇ ವರ್ಷದ ಬಿಎ ವಿದ್ಯಾರ್ಥಿಗಳಿಗೆ ಪಾಠ ಮುಗಿಸಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುತ್ತಾ ಭಾರವಾದ ಎದೆಯೊಂದಿಗೆ ಸ್ಟಾಫ್ ರೂಮಿಗೆ ಹೆಜ್ಜೆ ಹಾಕಿದರು. ಕಾಲೇಜಿನ ವರಾಂಡದಲ್ಲಿ ಪ್ರತಿ ದಿನ ರಪರಪನೆ ಹಾಯುತ್ತಿದ್ದ ಅವರ ಕಾಲನ್ನು ಅಂದು ಮೆಲ್ಲ ಮೆಲ್ಲನೆ ದೇಹ ಎಳೆದು ಕೊಂಡೊಯ್ಯುತ್ತಿದಿದ್ದು ವಿದ್ಯಾರ್ಥಿಗಳೆಲ್ಲಾ ನೋಡಿ ಕಣ್ಣೀರಾಗಿದ್ದರು. ಅವರು ಸ್ಟಾಫ್ ರೂಮ್ ಸೇರುವ ಮುನ್ನವೇ ವಿದ್ಯಾರ್ಥಿಗಳು ಬಾಗಿಲು, ಕಿಟಕಿ ಬಳಿ ಜಮಾಯಿಸಿದ್ದರು. ಒಬ್ಬೊಬ್ಬರೇ ಆಗಿ ಕೈ ಕುಲುಕುತ್ತಾ ಕಾಲು ಮುಟ್ಟಿ ಆಶಿರ್ವಾದ ಪಡೆಯಲು ದಂಡು ಸೇರಿದ್ದರು. “ಎಲ್ಲವೂ ದೈವೇಚ್ಛೆ” ಎನ್ನುತ್ತಾ ವೃತ್ತಿ ಬದುಕಿನ ಕೊನೆಯ ದಿನವನ್ನು ಕಡಲ ಹಣೆ ಮುಟ್ಟಿ ಇಳಿದು ಹೋಗುತ್ತಿದ್ದ ಸೂರ್ಯನ ನೆನೆದು ಅವರೂ ಆ ಕಾಲೇಜಿನ ಗೇಟು ಹಾದು ನಿಂತರು. ಆಗಲೂ ವಿದ್ಯಾರ್ಥಿಗಳು ಅವರ ಹಿಂದೆ ಹಿಂದೆ ಹೋಗುತ್ತಾ ನಡೆದರು. ಕೆಲವರಿಗೆಲ್ಲಾ ಅತಿವಿನಯ. ರಸ್ತೆಯಲ್ಲೇ ಪ್ರೀತಿಯ ಮೇಷ್ಟ್ರಿಗೆ ಶಾಷ್ಟಾಂಗ ನಮಸ್ಕಾರ ಹಾಕಿ, ಕೈ ಮುಗಿದು ಹೋದರು. ಮಂಗಳೂರಿನ ದಿಕ್ಕು ತೊರೆದು ರಸ್ತೆ ಅರಸಿ ಬಂದ ಸಿಟಿ ಬಸ್ಸೊಂದು ಬಂದ ಕೂಡಲೇ ಭಟ್ಟರು ಮನೆಯ ದಾರಿ ಹಿಡಿದರು. ಬಸ್ಸು ಚಲಿಸಿದಂತೆ ಕಿಟಕಿಯಿಂದ ಕಾಲೇಜನ್ನು, ಕೈ ಬೀಸಿ ನಿಂತಿದ್ದ ವಿದ್ಯಾರ್ಥಿಗಳನ್ನು ನೋಡುತ್ತಾ ಸಾಗಿದರು. ಅಷ್ಟೊತ್ತಿಗೆ ಕಡಲ ಹಣೆ ಮುಟ್ಟಿ ನಿಂತಿದ್ದ ಸೂರ್ಯ, ಧೊಪ್ಪನೆ ಉದುರಿ ಬಿದ್ದಂತೆ ಸಾಗರದ ಆಳಕ್ಕೆ ಮಗುಚಿ ಬಿದ್ದಿದ್ದ.

ಮೊದಲೆಲ್ಲಾ ವಾರಕ್ಕೊಮ್ಮೆ ಕಾಲೇಜಿನ ಕಡೆಗೆ ಬಂದು ಹೋಗುತ್ತಿದ್ದರು. ಸ್ಟಾಫ್ ರೂಮಿನಲ್ಲಿ ಅವರು ಕೂರುತ್ತಿದ್ದ ಚೇರಿನ ಮೇಲೆ ಕೆಲ ಕಾಲ ಕೂತು ಕಾಲ ಕಳೆದು ಮಕ್ಕಳ ಜೊತೆಗೆ ಹರಟುತ್ತಿದ್ದರು. ದಿನಕಳೆದಂತೆ ಅವರ ಜಾಗಕ್ಕೆ ಹೊಸ ಶಿಕ್ಷಕರು ಬಂದ ಕೂಡಲೇ, ಅವರ ಚೇರು ಕೂಡ ಆ ಕಾಲೇಜಿನಲ್ಲಿ ಅವರಿಗೆ ಇಲ್ಲವಾಯಿತು. ನಂತರ ವಾರಕ್ಕೊಮ್ಮೆ ಬರುತ್ತಿದ್ದವರು ತಿಂಗಳಿಗೊಮ್ಮೆ ಬಂದು ಹೋಗ ತೊಡಗಿದರು. ನಂತರ ಅದು ಆಗಲೋ ಈಗಲೋ ಒಮ್ಮೆಯಾಯಿತು. ಕೊನೆಗೆ ಅವರೂ ಎಲ್ಲವನ್ನೂ ಮರೆತರು ಎಂದು ಎನಿಸುತ್ತದೆ. ಕಾಲೇಜಿನ ಕಡೆಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಇದರ ನಡುವೆ ಅದ್ದೂರಿಯಾಗಿ ಭಟ್ಟರಿಗೆ ನೆನಪಿನ ಕಾಣಿಕೆಯೆಲ್ಲಾ ಕೊಟ್ಟು, ಮಕ್ಕಳಿಗೆ ಕೊನೆಯದಾಗಿ ನಾಲ್ಕು ಮಾತನಾಡಿಸಿ‌ ಬಹಳ ಗೌರವಯುತವಾಗಿ ಅವರನ್ನು ಬೀಳ್ಗೊಟ್ಟರು. ಅಲ್ಲಿಗೆ ಅಧಿಕೃತವಾಗಿ ರವಿಶಂಕರ್ ಭಟ್ಟರಿಗೂ ಆ ಕಾಲೇಜಿಗೂ ಇದ್ದ ನಂಟು ಕಡಿದುಬಿತ್ತು. 

ಮನೆಯಲ್ಲಿ ಭಟ್ಟರ ಕೋಣೆಯಿಂದ ಗಾಜು ಸರಿಸಿ ನೋಡಿದರೆ ಪ್ರಶಾಂತ ಕಡಲು. ಆ ಕಡಲು ಯಾವತ್ತೂ ಬೋರ್ಗರೆದು ಬಂದಿದ್ದಿನ್ನು ಭಟ್ಟರು ನೋಡಿರಲಿಲ್ಲ. ಅಂದು ಮಾತ್ರ ದಡಕ್ಕಪ್ಪಳಿಸಿದ ಪುಟ್ಟ ಪುಟ್ಟ ಅಲೆಗಳ ಸದ್ದೂ ಅವರ ಕಿವಿ ಚೀಲವನ್ನು ಹೊಡೆಯುವಂತೆ ಭಾಸವಾಗಿತ್ತು. ಸಮುದ್ರದ ಮೇಲೆ ಮೀನಿಗಾಗಿ ರೆಕ್ಕೆ ಬಿಚ್ಚಿ ಹಾರುತ್ತಿದ್ದ ಹಕ್ಕಿಗಳಲ್ಲಿ ಎಷ್ಟು ವಿಧ? ಎಲ್ಲಾ ಹಕ್ಕಿಗಳು ಮೀನು ತಿನ್ನುತ್ತದಯೇ? ಆಕಾಶದ ಒಂದು ತೂತಿನಿಂದ ಜಿಗಿದು ಶರವೇಗದಲ್ಲಿ ಬರುವ ಗಿಡುಗ ಎಷ್ಟು ವೇಗವಾಗಿ ಬೇಟೆಯಾಡುತ್ತದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಊಹಿಸಿಕೊಳ್ಳುತ್ತಾ ಕಿಟಕಿಯ ಕಡೆಗೆ ಮುಖ ಮಾಡಿ ಕೂರುತ್ತಿದ್ದರು. ಊಟಕ್ಕೆ ಊಟ, ಏನೇ ಬೇಕಿದ್ದರೂ ಕೊಣೆಗೆ ಬರುವಷ್ಟರ ಮಟ್ಟಿಗೆ ಕುಟುಂಬದಲ್ಲಿ ಗೌರವವೂ ಅವರು ಸಂಪಾದಿಸಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಓದಿಸಿ ಅವರಿಗೂ ಜೀವನೋಪಾಯ ತೋರಿಸಿಕೊಟ್ಟಿದ್ದರು. ಮದುವೆಯೂ ಮಾಡಿಸಿದ್ದರು. ಇನ್ನೇನಿದೆ ಬದುಕಲ್ಲಿ! ಪೆನ್ಷನ್ ದುಡ್ಡು ಬರುತ್ತದೆ. ಹೆಂಡತಿ ಸರೋಜಿನಿ ಜೊತೆಗೆ ಅರಾಮಾಗಿ ಜೀವನ ಕಳೆದರೆ ಸಾಕಲ್ಲವೇ! ಅಂಥದ್ದೊಂದು ನೆಮ್ಮದಿ ಆಗಾಗ್ಗೆ ಆವರಿಸಿಕೊಳ್ಳುತ್ತಿತ್ತು. ಹೀಗೆ ಹಲವು ದಿನಗಳು ವೃತ್ತಿಯ ನಿವೃತ್ತಿಯ ಅಮಲಲ್ಲೇ ಹಾದು ಹೋದವು. ಈ ನಡುವೆ ಊರಿನ ಜಾತ್ರೆ, ಸಂಘಗಳಿಂದ ತಲೆಗೊಂದು ಪೇಟ, ಕೊರಳಿಗೊಂದು ಹಾರ, ಬೆನ್ನಿಗೊಂದು ಶಾಲು ಹೊದಿಸಿಕೊಳ್ಳುತ್ತಾ ಹೋದರು. ಪಡ್ಡಾಯಿಯಲ್ಲಿ ಯಾರೂ ಕೂಡ ಶಾಲೆಯ ಮೆಟ್ಟಿಲೇರದ ಕಾಲದಲ್ಲೇ ಭಟ್ಟರು ಓದಿ ಕಾಲೇಜು ಶಿಕ್ಷಕನಾಗಿದ್ದು ಆ ಪಡ್ಡಾಯಿಯ ಪ್ರತಿ ಮರಳ ಕಣಗಳಿಗೂ ಗೊತ್ತು. ಆ ಗೌರವದ ಆದರವೇ ಇದು. ಬೇಸರದ ಜತೆ ಜತೆಗೆ ಊರ ಜನರ ಈ ಪ್ರೀತಿ ಅಭಿಮಾನದಲ್ಲಿ ಕರಗಿ ಹೋಗಿದ್ದರು ಭಟ್ಟರು. 

ಮೂವತ್ತು, ನಲವತ್ತು ವರ್ಷ ಕಾಲ ಪಾಠ, ಬೋಧನೆ ಮಾಡಿದ್ದ ಜೀವ ಈಗ ನಿವೃತ್ತಿ ಹೆಸರಲ್ಲಿ ಹಠಾತ್ತನೇ ಸುಮ್ಮನಿರಲು ಸಿದ್ಧವಿರಲಿಲ್ಲ. ಭಜನಾ ಮಂದಿರದಲ್ಲಿ ಶ್ಲೋಕ ಹೇಳುವುದು, ರಸ್ತೆ ಹಾಯುವ ಊರ ಮಕ್ಕಳನ್ನು ಕರೆದು ಜಗಲಿಯಲ್ಲಿ ಕೂರಿಸಿ ಶಿಕ್ಷಣದ ಬಗ್ಗೆ ಬೋಧಿಸುವುದನ್ನೆಲ್ಲ ಮಾಡುತ್ತಿದ್ದರು. ಜೊತೆಗೆ ಹುಟ್ಟಿನಿಂದ ಕಾಡಿದ ಜಂಬವೂ ಮಾತಿನ ಮದ್ಯೆ ತಾನು ಹಾಗೂ ತನ್ನಿಂದ ಕಲಿತ ಮಕ್ಕಳ ಸ್ಥಿತಿಗತಿ ಬಗ್ಗೆಯೂ ಸಮುದ್ರವನ್ನು ಸಾಕ್ಷಿಯಾಗಿಸಿ ಮೆದುಳು ಕಚ್ಚತೊಡಗಿದ್ದರು. ಹೀಗಿರುವ ಒಂದು ದಿನ ಬೆಳಗ್ಗೆ ಎದ್ದವರೇ ಹೆಂಡತಿ ಸರೋಜಿನಿಯನ್ನು ಕರೆದು, ರಾತ್ರಿಯೆಲ್ಲಾ ನಿದ್ದೆ ಎಚ್ಚರಗೊಂಡ ಬಗ್ಗೆಯೂ, ಇನ್ನೇನಾದರು ತನ್ನ ಬದುಕಿನಲ್ಲಿ ತಾನು ಸಾಧಿಸುವ ಬಗೆಗಿನ ಇಂಗಿತವನ್ನೂ ವ್ಯಕ್ತ ಪಡಿಸಿದರು. 

“ಇನ್ನೇನಿದೆ? ನೀವು ಒಂದಾಯಸ್ಸಲ್ಲಿ ಮಾಡಬೇಕಾದದ್ದನ್ನೆಲ್ಲಾ ಮಾಡಿ ಆಯ್ತಲ್ಲ? ಇನ್ನೆಂತುಂಟು? ನೀವು ಕಳೆದ ಅಷ್ಟೂ ವರ್ಷ ಮಾಡಿದ್ದೇನು? ನಿಮ್ಮಲ್ಲಿನ ಜ್ಞಾನವನ್ನು ಧಾರೆ ಎರೆದಿದ್ದೀರಿಲ್ವಾ! ನಿಮ್ಮಿಂದ ಕಲಿತ ಮಕ್ಕಳು ಈಗ ಎಲ್ಲಿದ್ದಾರೆ ಎನ್ನುವುದು ನಿಮಗೇ ಗೊತ್ತಲ್ವಾ? ಮತ್ಯಾಕೆ ಇಷ್ಟೊಂದು ಚಡಪಡಿಕೆ. ಆ ಭಗವಂತ ನಿಮ್ಮನ್ನು ಇಲ್ಲಿಗೆ ಕಳುಹಿಸಿದರ ಉದ್ದೇಶವನ್ನು ಈಡೇರಿಸಿದ್ದೀರಿ” ಎಂದು ಸರೋಜಿನಿ ಭಟ್ಟರಿಗೆ ಹಿತ ಮಾತುಗಳನ್ನು ಆಡಿದರು. ಸರೋಜಿನಿಯ ಮಾತಿಗೆ ಭಟ್ಟರ ತುಡಿತವನ್ನು ತಡೆ ಹಿಡಿಯುವ ತಾಕತ್ತು ಇತ್ತಾದರೂ, ಆದರದು ಅಲ್ಪಕಾಲಿಕ. ಹೆಚ್ಚೇನು ಸಮಯಗಳ ಕಾಲ ಸರೋಜಿನಿಯ ಮಾತು ಭಟ್ಟರ ಕಿವಿಯಲ್ಲಿ ನಿಲ್ಲಲಿಲ್ಲ. ಹಿತ್ತಲಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿ ಅಟ್ಟದ ಮೇಲೆ ಎಸೆಯ ತೊಡಗಿದರು. ಲುಂಗಿ, ಸ್ಟ್ಯಾಂಡ್ ಬನಿಯನ್, ತೋಳಿಗೊಂದು ಬೈರಾಸು ನೇತು ಹಾಕಿ ಹಿತ್ತಲು ತುಂಬೆಲ್ಲಾ ಓಡಾಡಿ ಬಂದು ದಣಿದು ಜಗಲಿಯ ಮೇಲೆ ಕೂತರು. ಕೂತವರೇ! ಬೈರಾಸು ತಲೆತಳಗೆ ಮಡಚ್ಚಿಟ್ಟು ಅರಬ್ಬಿ ಸಮುದ್ರ ದಾಟಿ ಬರುತ್ತಿದ್ದ ಗಾಳಿಗೆ ಒಗ್ಗುತ್ತಾ ಕಣ್ಣು ಮುಚ್ಚಿ ಮಲಗಿದರು. ಮತ್ತದೇ ಚಡಪಡಿಕೆ. ಸುಮ್ಮನೆ ಕೂರುವುದಾದರು ಹೇಗೆ? ಆ ಲಘು ನಿದ್ದೆಯಲ್ಲೂ ಭಟ್ಟರ ಮೆದುಳು ತುಂಬಾ ಇದೇ ಪ್ರಶ್ನೆ ಆವರಿಸತೊಡಗಿತ್ತು. ನಿದ್ದೆ ದೇಹ ತುಂಬಾ ಇನ್ನೇನು ಆವರಿಸ ಬೇಕಿತ್ತು ಎನ್ನುವಾಗಲೇ, ಹಠಾತ್ತನೇ ಎದ್ದು ಕೂತ ಭಟ್ಟರು, ಧರಧರನೆ ಎದ್ದು ತೋಳ ಮೇಲಿನ ಬೈರಾಸು ಕೊಡವಿ ಅಡುಗೆ ಮನೆ ಕಡೆಗೆ ಹೆಂಡತಿ ಹುಡುಕುತ್ತಾ ಹೋದರು. ಮಧ್ಯಾಹ್ನದ ಊಟಕ್ಕೆ ಸಾರಿಗೆ ಪಪ್ಪಂಕಾಯಿ ಕತ್ತರಿಸಿ ಮಣ್ಣಿನ ಮಡಿಕೆಗೆ ಹಾಕುತ್ತಿದ್ದ ಸರೋಜಿನಿ ಬಗಲಿಗೆ ಬಂದು, 

“ನಾನೊಂದು ಆತ್ಮಕತೆ ಬರೆದರೆ ಹೇಗೆ?” ಎಂದು ಕೇಳಿದರು. ಭಟ್ಟರ ಆತ್ಮಕತೆಯ ಕತೆ ಕೇಳುತ್ತಿದ್ದಂತೆ ಸರೋಜಿನಿ ತುಟಿ ಅರಳಿತು. 

“ಬರೆಯಬಹುದು ನೋಡಿ. ಬರೆದರೆ ತುಂಬಾ ಜನರಿಗೆ ಸ್ಪೂರ್ತಿ ಆಗುವುದರಲ್ಲಿ ಸಂಶಯವೇ ಇಲ್ಲ” ಎಂದಳು ಸರೋಜಿನಿ. ಇನ್ನು ಬೇಡ ಎಂದರೂ ಕೇಳುವುದಿಲ್ಲ ಭಟ್ಟರು ಎಂದು ಮೊದಲೇ ಇಷ್ಟೂ ವರ್ಷದ ಅವರ ಜೊತೆಗಿನ ಒಡನಾಟದಿಂದ ತಿಳಿದುಕೊಂಡಿದ್ದ ಸರೋಜಿನಿ ಹುರಿದುಂಬಿಸಿ ಬಿಟ್ಟಳು. 

“ಈಗ ಪಪ್ಪಂಕಾಯಿ ಸಾರು, ಮಜ್ಜಿಗೆ ಜೊತೆಗೆ ಊಟ ಮಾಡಿ, ಆತ್ಮಕತೆ ಬರೆಯೋಣವಂತೆ” ಎಂದು ಸರೋಜಿನಿ ತಟ್ಟೆ ತೊಳೆದು ಮೇಜಿನ ಮೇಲಕ್ಕಿಟ್ಟಳು. ಅದನ್ನೇ ಯೋಚಿಸುತ್ತಾ ಸಾರಿನಲ್ಲಿದ್ದ ಪಪ್ಪಂಕಾಯಿ ಹಿಂಡಿ ಅನ್ನದ ಉಂಡೆ ಗಂಟಲಿಗಿಳಿಸಿದ ಭಟ್ಟರು, ತನ್ನ ವೃತ್ತಿ ಬದುಕಿನ ಸಾಧನೆಯನ್ನು ಪಟ್ಟಿ ಮಾಡುವ ಲೆಕ್ಕ ಹಾಕಿಕೊಂಡರು. ಊಟ ಮುಗಿಸಿ ಕೈ ತೊಳೆದು ಬೈರಾಸಿನಲ್ಲಿ ಕೈ ಒರೆಸುತ್ತಾ ಕಪಾಟಿನ ಮುಂದೆ ಬಂದು ನಿಂತರು. ಕಪಾಟಿನಲ್ಲಿ ಭಟ್ಟರಿಗೆ ‘ಉತ್ತಮ ಶಿಕ್ಷಕ’ನಿಗಾಗಿ ಒಲಿದು ಬಂದ ಹತ್ತಾರು ಪ್ರಶಸ್ತಿಗಳು, ಪದಕಗಳು, ಪ್ರಶಸ್ತಿ ಪತ್ರಗಳು. ಎಲ್ಲವೂ ಈಗ ಧೂಳು ತಿಂದಿದೆ. ಒಂದೊಂದೇ ಆಗಿ ಎತ್ತಿ ಧೂಳು ಸರಿಸಿ ಮುಗುಳ್ನಗೆ ಬೀರುತ್ತಾ ಅದೇ ಜಾಗದಲ್ಲಿ ಜೋಡಿಸಿಟ್ಟರು. ಆತ್ಮಕತೆಯಲ್ಲಿ ಒಂದು ಅಧ್ಯಾಯ ತನಗೆ ಬಂದ ಪ್ರಶಸ್ತಿಗಳ ಬಗ್ಗೆಯೇ ಬರೆಯುವುದು ಭಟ್ಟರು ಆತ್ಮಕತೆಯ ಕಡೆಗೆ ಇಟ್ಟ ಮೊದಲ ಹೆಜ್ಜೆ.

ಕಾಲೇಜಿನಲ್ಲಿ ಪಾಠ ಮಾಡುವಾಗ ಬಳುವಳಿಯಾಗಿ ಬಂದ ಸಂಸ್ಕೃತ ಶ್ಲೋಕಗಳನ್ನು ಹೇಳುವುದು ಅವರ ರೂಢಿ. ಭಗವದ್ಗೀತೆಯ ನೀತಿ ಪಾಠಗಳು ಸಲೀಸಾಗಿ, ಸಮಯೋಚಿತವಾಗಿ ಇತಿಹಾಸದ ನಡನಡುವೆ ಹೇಳುತ್ತಿದ್ದರು. ಇದರಿಂದಾಗಿ ಹಿಸ್ಟರಿ ಓದುವುದರ ಜೊತೆಗೆ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಟ್ಟಂತಾಗುತ್ತದೆ ಎನ್ನುವುದು ಅವರ ನಂಬಿಕೆ. ಇದು ಬಹುತೇಕ ಸರಿ. ಆದರೆ ಅದೇ ಸತ್ಯವಾಗಿರಲಿಲ್ಲ. ಇಂಥದ್ದೇ ನೀತಿ ಪಾಠಗಳನ್ನೂ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಅವರು. ಹೀಗಾಗಿ ಆತ್ಮಕತೆಯೂ ಹಾಗೇ ಇರಬೇಕು ಎನ್ನುವುದಾಗಿತ್ತು ಅವರಿಗಿದ್ದ ಹಠ. ಯಾರೋ ಬರೆದಿದ್ದನ್ನು ಓದಿದ್ದು ಬಿಟ್ಟರೆ, ಇದುವರೆಗೆ ಒಂದು ಸಾಲು ಭಟ್ಟರು ತಮ್ಮಿಂತಾನೆ ಬರೆದಿರಲಿಲ್ಲ. ಅದರ ಅಗತ್ಯವೂ ಅವರಿಗಿರಲಿಲ್ಲ. ಅದೇನಿದ್ದರು ಸಾಹಿತಿಗಳ ಕೆಲಸ! ನಾನು ಮೇಷ್ಟ್ರು ನನ್ನ ಕೆಲಸ ಅದಲ್ಲವಲ್ಲ ಎಂದೇ ನಂಬಿದ್ದರು. ಇದೇ ಕಾರಣಕ್ಕೆ ಈಗ ತನ್ನ ಆತ್ಮಕತೆ ಎಲ್ಲಿಂದ ಹಾಗೂ ಹೇಗೆ ಶುರು ಮಾಡಬೇಕು ಎನ್ನುವ ಗೊಂದಲ ಭಟ್ಟರಿಗೆ. 

ಅದೊಂದು ಮಳೆಗಾಲದ ಸಯಂಕಾಲ. ಕಡಲ ಕಿನಾರೆಯ ಮಳೆಗೂ ಘಟ್ಟದ ಮಳೆಗೂ ಅಜಗಜಾಂತರ ಅಂತರವಿದೆ. ಮಳೆ ಹನಿ ಮರ ಗಿಡಗಳನ್ನು ಸವರುತ್ತಾ ಭೂತಾಯಿನ್ನು ಸೇರಲು ಬಹಳ‌ ಹೊತ್ತು ಬೇಕು. ಆದರೆ ಸಮುದ್ರದ ಮೇಲೆ ಬಿರುಸು ಗಾಳಿಯೊಂದಿಗೆ ಆಕಾಶದಿಂದ ತೊಟ್ಟಿಕ್ಕಿ ಬೀಳುವ ಹನಿಗಳು ಇಲ್ಲಿ ಸಮುದ್ರ ಮೇಲ್ಮೈ ಸವರುವ ವೇಗ ಕಣ್ಣಿಗೂ ನಿಲಕದು. ಅಂಥದ್ದೊಂದು ಮಳೆಗಾಲದಲ್ಲಿ ಕಣ್ಣಚ್ಚಾಯ ಕುಡಿಯುತ್ತಾ ಕೂತಿದ್ದ ಭಟ್ಟರು ಕೊನೆಗೂ ತನ್ನ ಆತ್ಮಕತೆ ಬರೆಯುವ ಲಯಕಂಡುಕೊಂಡರು. ಹಾಳೆಯೊಂದರ ಮೇಲೆ ಪೆನ್ನು ಇಟ್ಟಿದ್ದ ನೆನಪವರಿಗೆ. ಸರಸರನೆ ಪೆನ್ನು ಹಾಳೆಯ ತುಂಬೆಲ್ಲಾ ಓಡಾಡಿ, ಏರಿ ಇಳಿದು ಅವರಿಂದ ಅವರ ಬದುಕನ್ನು ಬರೆಸಿಕೊಂಡಿತು. ಅಂದಿನ ಸಯಂಕಾಲ‌ ದಾಟಿ ಅಗಸದಿಂದ ಯಾರೋ ಕಟ್ಟಿಗೆ ಸುಟ್ಟು ಮಸಿ ಮೇಲಕ್ಕೆ ಒರೆಸಿ ಕಪ್ಪಾದಂತೆ ಕತ್ತಲೂ ಆವರಿಸಿಕೊಂಡಿತು. ಬಯಲಾಗಿದ್ದ ಸಮುದ್ರದ ಮೇಲೆ ಚಂದ್ರನೂ ನಕ್ಕು ನಕ್ಕು ನಿಂತಿದ್ದ. ತನ್ನ ಆತ್ಮಕತೆಯನ್ನು ಬರೆಯಲು ಶುರು ಮಾಡಿದ ಭಟ್ಟರು ಭಾವುಕವಾಗಿ ತನ್ನ ಮಕ್ಕಳನ್ನು ಓದಿಸಿದ್ದನ್ನು, ತನ್ನ‌ ಮಕ್ಕಳಂತೆ ಎಲ್ಲಾ‌ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನೂ ನೋಡಿಕೊಂಡಿದ್ದನ್ನೂ ಹೇಳುತ್ತಾ ಕೊನೆಗೆ ಕರಾವಳಿಯ ಜನಜನಿತ ಗಾದೆಯ ಸಾಲೊಂದನ್ನು ಬರೆದು ಮೊದಲ ಅಧ್ಯಾಯ ಮುಗಿಸಿದರು. 

“ಶಿಕ್ಷಕರ ಮಾತು ನೆಲ್ಲಿಕಾಯಿಯಂತೆ

ಮೊದಲು ಕಹಿ ಎನಿಸಿದರೂ, ಕೊನೆಗದು ಸಿಹಿಯಾಗಿರಲಿದೆ” 

ಒಮ್ಮೆ ಬರೆಯಲು ಶುರು ಮಾಡಿದ ಮೇಲೆ ಭಟ್ಟರ ಬರವಣಿಗೆ ಸರಾಗವಾಗಿ ಸಾಗಿತು. ಒಟ್ಟು ಏಳು ಅಧ್ಯಾಯಗಳನ್ನು ಒಂದೇ ಗುಕ್ಕಿಗೆ ಬರೆದಂತೆ ಬರೆದು ಭಟ್ಟರು ತನ್ನ ಕೊನೆಯ ಆಸೆಯನ್ನೂ ಈಡೇರಿಸಿಕೊಂಡರು.

“ಸರೋಜಿನಿ ಬಾ ಇಲ್ಲಿ. ನೋಡು ಆತ್ಮಕತೆ! ನನ್ನ ಆತ್ಮಕತೆ! ನಾನೇ ಬರೆದ ಆತ್ಮಕತೆ!” ಎನ್ನುತ್ತಾ ಹೆಂಡತಿಯನ್ನು ಕರೆದು ಆಕೆಯ ಕೈಗೆ ಬಿಳಿಹಾಳೆಯ ಕಟ್ಟೊಂದನ್ನು ಇಟ್ಟರು. ಮನೆಯೊಳಗೆಲ್ಲಾ‌ ಗುಬ್ಬಚ್ಚಿ ಹಾರಾಡಿದಂತಿತ್ತು ಆ ಕ್ಷಣ ಇಬ್ಬರಿಗೂ. ಮಕ್ಕಳಿಗೂ ಕರೆ ಮಾಡಿ ಖುಷಿ ಹಂಚಿಕೊಂಡರು. ಇನ್ನು ಇದಕ್ಕೊಂದು ಒಳ್ಳೆಯ ಹೆಸರಿಟ್ಟರೆ ನಮ್ಮ ಸ್ವಾಮಿಗಳ ಕೈಯಲ್ಲಿ ಪುಸ್ತಕ ಬಿಡುಗಡೆ ಮಾಡಿಸಬಹುದು ಎನ್ನುವ ಹೊತ್ತಿಗೆ, ಸೈಕಲ್ ನಲ್ಲಿ ಬಂದ ಪೋಸ್ಟ್ ಮ್ಯಾನ್ ಭಟ್ರೇsss ಭಟ್ರೇsss ಎನ್ನುತ್ತಾ ಕರೆದನು. 

ಪೋಸ್ಟ್ ಮ್ಯಾನ್ ಕರೆಗೆ ಓಗೊಟ್ಟು ಬಂದ ಭಟ್ಟರು ಹಾಗೂ ಸರೋಜಿನಿ, “ಏನಾ ಏನಾಯ್ತಾ?” ಎಂದು ಗದರುವ ಧ್ವನಿಯಲ್ಲೇ ಕೇಳಿದರು.‌ 

“ಏನಿಲ್ಲಾ ಭಟ್ರೆ, ನಿಮಗೊಂದು ಪೋಸ್ಟ್ ಇದೆ” ಎಂದ ಪೋಸ್ಟ್ ಮ್ಯಾನ್. “ಪೋಸ್ಟಾ? ನಮಗೆ ಯಾರ್ ಮಾರ್ರೆ ಪೋಸ್ಟ್ ಕಳಿಸ್ಲಿಕ್ಕೆ? ಮಕ್ಳಿಬ್ರೂ ವೀಡಿಯೋ ಕಾಲ್ ಮಾಡ್ತಾರೆ. ಬೇಕಾದವರು ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಕಳಿಸ್ತಾರೆ. ಎಲ್ಲಾ ಈಗ ಫೋನ್ ನಲ್ಲೇ ಆಗ್ತದಲ್ಲಾ. ಮತ್ತಿನ್ನೆಂತ ಪೋಸ್ಟ್” ಎನ್ನುತ್ತಾ ಭಟ್ಟರು 

“ನೀನು ವಿಳಾಸ ತಪ್ಪಾಗಿ ಬಂದಿರಬೇಕು ಸರಿಯಾಗಿ ವಿಳಾಸ ನೋಡು ಎಂದು ಪೋಸ್ಟ್ ಮ್ಯಾನ್ ಗೆ ಹೇಳಿದರು. 

“ಇಲ್ಲ ಭಟ್ರೇ, 

ನಿಮಗೆ! ರವಿಶಂಕರ ಭಟ್ s/o 

ಕೇಶವ ಭಟ್ ಅಂದ್ರೆ ನಿವೇ ಅಲ್ವಾ?” 

ಪೋಸ್ಟ್ ಮ್ಯಾನ್ ಕೇಳಿ ಮುಗಿಸುವುದಕ್ಕೂ ಮುನ್ನ ಭಟ್ಟರು,

“ಹೌದು ಮಾರ್ರೆ ನನ್ನಪ್ಪಾನೆ! ಆಯ್ತು ಕೊಡು” ಎಂದು ಪೋಸ್ಟ್ ಗೆ ಸಹಿ ಹಾಕಿ ಒಂದು ಮುಚ್ಚಿದ ಲಕೋಟಿಯಂತಿದ್ದ ಕಟ್ಟನ್ನು ಇಸ್ಕೊಂಡರು.

ಪೋಸ್ಟ್ ಮ್ಯಾನ್ ಕೈಯಿಂದ ಪೋಸ್ಟ್ ಇಸ್ಕೊಂಡು ಮನೆಯೊಳಕ್ಕೆ ನಡೆದ ಭಟ್ಟರು ಹೆಂಡತಿಗೆ ಒಂದರ್ಧ ಲೋಟ ಕಣ್ಣಚ್ಚಾಯ ಕೊಡುವಂತೆ ಹೇಳಿದರು. 

“ಅದು ಬಿಡಿ ನೀವು ಆತ್ಮಕತೆಗೊಂದು ಹೆಸರು ಅಲೋಚಿಸಿ. ಇದು ಆಮೇಲೆ ವಿಚಾರಿಸುವ” 

ಎನ್ನುತ್ತಾ ಶ್ರೀಮತಿ ಭಟ್ಟರು ಅಡುಗೆ ಮನೆಗೆ ಮುಖ ಮಾಡಿದರು. 

ಅಷ್ಟೊತ್ತಿಗೆ ಅತ್ತ ಹೊರಗೆ ಮತ್ತೊಂದು ಸುತ್ತಿಗೆ ಮೋಡ ಬಿರಿದು ಮಳೆ ಸುರಿಯಲು ಆರಂಭಿಸಿತ್ತು. ಕೈಯಲ್ಲಿ ಆ ಪೋಸ್ಟ್ ಹಿಡಿದು ಕೋಣೆಯೊಳಗೆ ನಡೆದ ಭಟ್ಟರು, ಮೇಜಿನ ಮೇಲೆ ಅದನ್ನಿಟ್ಟು ಹೊರಗಡೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ ನಿಂತರು. ಗಾಳಿಯೊಂದು ಅಪ್ಪಳಿಸಿ ಬರುತ್ತಿರುವ ಮಳೆ ಕಿಟಕಿಯ ಗಾಜಿಗೆ ಬಡಿದು ಭಟ್ಟರ ಮೈಮೇಲೆ ಅದರ ಹನಿ ಸಿಡಿಯುತ್ತಿತ್ತು. ಹೊಗೆಯಾಡುವ ಕಣ್ಣಚ್ಚಾಯದೊಂದಿಗೆ ಕೊಠಡಿಯೊಳಗೆ ಬಂದ ಸರೋಜಿನಿ ಕೈಯಿಂದ ಲೋಟ ಇಸ್ಕೊಂಡು ಕುಡಿಯಲು ಪ್ರಾರಂಭಿಸಿದರು.‌ ಕುಡಿಯುತ್ತಾ ಭಟ್ಟರು,

“ನೋಡಾ ಆತ್ಮಕತೆ ಬರೆಯುವುದಿಕ್ಕಿಂದ ಕಷ್ಟ ಅದಕ್ಕೊಂದು ಹೆಸರಿಡುವುದು” ಎಂದರು. 

ಸರೋಜಿನಿ ಭಟ್ಟರ ಮಾತಿಗೆ ತಲೆ ಅಲ್ಲಾಡಿಸಿದರು. ಭಟ್ಟರು ಹಾಗೆ ಚಹಾ ಕುಡಿಯುತ್ತಾ ನಿಂತಿರುವಾಗಲೇ ಸರೋಜಿನಿ ಬಂದ ಪೋಸ್ಟ್ ಬಿಚ್ಚಿ, ಅದರೊಳಗೆ ಕೈ ಹಾಕಿ ಪುಸ್ತಕವೊಂದನ್ನು ಹೊರತೆಗದು ಭಟ್ಟರ ಕೈಗೆ ಕೊಟ್ಟರು. ಇಬ್ಬರಿಗೂ ಆಶ್ವರ್ಯವಾಯಿತು. ಅದೊಂದು ಪುಸ್ತಕ. ನಮಗ್ಯಾರು ಪುಸ್ತಕ ಕಳಿಸ್ಲಿಕ್ಕೆ ಎಂಬ ಭಾವದೊಂದಿಗೆ ಒಬ್ಬರಿಗೊಬ್ಬರು ಮುಖ ಮುಖ ನೋಡಿಕೊಂಡರು. 

ಪುಸ್ತಕ ಸಂಪೂರ್ಣ ಬಿಚ್ಚಿ ನೋಡಿದರು. ಅದೊಂದು ಕಥೆಗಳ ಪುಸ್ತಕ. ಅದರ ಮೇಲೆ ಸೋತವನ ಆತ್ಮಕತೆ ಎಂದು ಬರೆದಿತ್ತು. ಭಟ್ಟರಿಗೆ ಮೊದಲು ಏನಿದು? ಯಾರು ಬರೆದ ಪುಸ್ತಕವಿದು? ಯಾಕೆ ನನಗೆ ಕಳುಹಿಸಿದ್ದಾರೆ ಎಂದು ತಿಳಿಯಲಿಲ್ಲ. ಕೊನೆಗೆ ಪುಸ್ತಕದ ಮೊದಲ ಪುಟ ತಿರುವಿದಾಗ, ಅಲ್ಲೊಂದು ಸಣ್ಣ ಚೀಟಿ ಬರೆದು ಮಡಚಿ ಇಡಲಾಗಿತ್ತು. ಚೀಟಿ ಹೊರತೆಗೆದು ಪುಸ್ತಕ ಕೆಳಗಿಟ್ಟ ಭಟ್ಟರು ಆ ಚೀಟಿ ಓದಲು ಪ್ರಾರಂಭಿಸಿದರು. ಆ ಚೀಟಿಯಲ್ಲಿ ಹೀಗೆ ಬರೆಯಲಾಗಿತ್ತು. 

ನಮಸ್ಕಾರ ಸರ್, ನಾನು ಅಬ್ದುಲ್. ನಿಮ್ಮ ಪಾಠ ಕೇಳಿದ ನೂರಾರು ವಿದ್ಯಾರ್ಥಗಳಲ್ಲೊಬ್ಬ. ನೀವು ಶಿಕ್ಷಕರಾಗಿ ಕೆಲಸ ಮಾಡಿದ ಕಾಲೇಜಿನ ಬಿಎ ತರಗತಿ ವಿದ್ಯಾರ್ಥಿ. ನಿಮ್ಮ ಹಿಸ್ಟರಿ ತರಗತಿಯಲ್ಲಿ ಕೊನೆಯಿಂದ ಎರಡನೇ ಬೆಂಚಿನಲ್ಲಿ ಕಿಟಿಕಿಯ ಕಡೆಗೆ ಕೂರುತ್ತಿದ್ದ ಹುಡುಗ. ಕಲಿಕೆಯಲ್ಲಿ ಬಹಳ ಹಿಂದಿದ್ದ ನನಗೆ ನಿಮ್ಮದಲ್ಲಾ, ಯಾರ ಪಾಠವೂ ಅರ್ಥವಾಗುತ್ತಿರಲಿಲ್ಲ. ಪ್ರತಿ ಪರೀಕ್ಷೆಯಲ್ಲೂ ಫೇಲ್ ಆದ ನನ್ನ ಉತ್ತರ ಪತ್ರಿಕೆಯನ್ನು ಕ್ಲಾಸಿಗೆಲ್ಲಾ ತೋರಿಸಿ ನಗೆ ಚಟಾಕಿ ಹಾರಿಸಿದ್ದೀರಿ. ಸಿಟ್ಟು ಬಂದಾಗಲೆಲ್ಲಾ 

“ಗಾಡಿ ರಿಪೇರಿ ಮಾಡ್ಲಿಕ್ಕೆ ಹೋಗಾ!! 

M80ಯಲ್ಲಿ ಮೀನು ಮಾರ್ಲಿಕ್ಕೆ ಹೋಗಾ!! 

ಇಲ್ಲಿ ಬಂದೆಂಥಾ ಬೆಂಚು ಬಿಸಿ ಮಾಡುವುದು” 

ಎಂದು ಹಲವು ಬಾರಿ ಹಿಯಾಳಿಸಿದ್ದೀರಿ. ನಿಮಗೆ ನೆನಪಿರ್ಲಿಕ್ಕಿಲ್ಲ. ಅದಿರಲಿ. ಇದು ನನ್ನ ಕಥಾ ಸಂಕಲನ. ನಿಮಗೊಂದು ಪ್ರತಿ ಕಳುಹಿಸಿಕೊಡಬೇಕನ್ನಿಸ್ತು. ಓದಿ ಸರ್. ಕೊನೆಗೊಂದು ಮಾತು,

“ಎಲ್ಲಾ ಮಕ್ಕಳು ನನ್ನ ಮಕ್ಕಳು ಎಂದು ಹೇಳುವುದು ಸುಲಭ ಸರ್…

ಆದರೆ ಮನಸಾ ಹಾಗೆ ಅಂದುಕೊಳ್ಳುವುದಕ್ಕೆ ಕಷ್ಟ. ಒಳ್ಳೆದಾಗಲಿ ನಿಮಗೆ”

ಪ್ರೀತಿಯಿಂದ,

ಅಬ್ದುಲ್ ಆಶಿಕ್

ಕಿಟಕಿ ಆಚೆಯಿಂದ ಬಡಿದು ಹನಿಯಾಗಿ ಕೊಠಡಿ ಸೇರುತ್ತಿದ್ದ ಮಳೆಯ ಹನಿಗಳು ಆ ಚೀಟಿಗೂ ಬಿದ್ದು, ಚೀಟಿ ಒದ್ದೆಯಾಗಿತ್ತು.‌ ಹೊರಗಡೆ ತೆಂಗಿನಮರ ಗಾಳಿಗೆ ವಾಲಲು ಶುರುವಾಗಿತ್ತು. ಸಮುದ್ರದ ಭೋರ್ಘರೆತ ಭಟ್ಟರ ಕಿವಿಗೆ ಅಲೆಗಳಂತೆ ಅಪ್ಪಳಿಸಲು ಶುರುವಿಟ್ಟುಕೊಂಡಿತ್ತು. ಕೆಲಕಾಲ ಬೊಬ್ಬಿರಿದ ಮಳೆಯೂ ಕ್ರಮೇಣವಾಗಿ ತಣ್ಣಗಾಯಿತು‌. ತಂಪು ಗಾಳಿಯ ನಡುವೆಯೂ ಭಟ್ಟರು ಆ ಕಿಟಕಿಗೆ ಒರಗಿ ನಿಂತು ಬೆವರಲು ಶುರು ಆದರು. ಮತ್ತೊಂದು ಸೋರ್ಯಾಸ್ತಮನಕ್ಕೆ ನಭೆ ಸಿದ್ಧವಾಗಿತ್ತು. ಕಡಲು ಅಲೆಗಳನ್ನು ಅತ್ತ ಹುಟ್ಟಿಸಿ ದಡಕ್ಕೆ ಸೇರಿಸುತ್ತಲೇ ಇತ್ತು. ಭಟ್ಟರಿಗೆ ತನ್ನ ಆತ್ಮಕತೆ ಎಷ್ಟು ಅಪೂರ್ಣ ಎಂದು ಆ ಕ್ಷಣ ಭಾಸವಾಗಲು ಶುರುವಾಯಿತು.

‍ಲೇಖಕರು Admin

15 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading