ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಮರೆಯಲಾಗದ ಕಾದಂಬರಿ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 16

ಕೃತಿ – ರಾಜಾ ಸುರಪುರದ ವೆಂಕಟಪ್ಪ ನಾಯಕ

ಲೇಖಕರು – ಬಿ ಎಲ್ ವೇಣು

ಪ್ರಕಾಶನ – ಗೀತಾಂಜಲಿ ಪುಸ್ತಕ ಪ್ರಕಾಶನ,

ಬೆಲೆ – ೩ ೦ ೦

ಸುರಪುರ ಹೆಸರಿಗೆ ತಕ್ಕ ಹಾಗೆ ಅದು ಶೂರರ ಪುರವೇ ಸರಿ. ಗೋಸಲ ವಂಶದ ರಾಜರು ಇನ್ನೂರು ವರ್ಷಗಳ ಕಾಲ 12 ಜನ ಅರಸರು ಸುರಪುರ ಸಂಸ್ಥಾನವನ್ನು ಆಳಿದರು. ಹಲವು ಕಾರಣಗಳಿಂದ ಈ ಸಂಸ್ಥಾನವು ದಕ್ಷಿಣ ಭಾರತದಲ್ಲಿಯೇ ತನ್ನದೇ ಛಾಪನ್ನು ಮೂಡಿಸಿಕೊಂಡಿತ್ತು. ಇವರು ಮೊಘಲರೊಂದಿಗೆ, ಆದಿಲ್ ಶಾಹಿಗಳ ಜೊತೆಗೆ, ನಿಜಾಮರೊಂದಿಗೆ ಹಾಗೆಯೇ ಬ್ರಿಟಿಷರನ್ನು ಕೂಡ ಎದುರಿಸಬೇಕಾಯಿತು. ತಮ್ಮ ಅರಸೊತ್ತಿಗೆ ಹಾಗೂ ಅಸ್ತಿತ್ವ ಅಸ್ಮಿತೆಗಾಗಿ ಸಾಕಷ್ಟು ಸಂಘರ್ಷ ಮಾಡಲೇಬೇಕಾಯಿತು. ಅದರಲ್ಲೂ ಕೊನೆಯ ಅರಸ ನಾಲ್ವಡಿ ವೆಂಕಟಪ್ಪ ನಾಯಕ ಮತ್ತು ಆತನ ತಾಯಿ ರಾಣಿ ಈಶ್ವರಮ್ಮನವರ ಬದುಕು ಸಂಘರ್ಷಮಯವಾದುದು. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಿಗೆ ಬ್ರಿಟಿಷರಿಗೆ ಸವಾಲು ಹಾಕಿದ್ದು ನಾಲ್ವಡಿ ವೆಂಕಟಪ್ಪ ನಾಯಕ, ಅದಕ್ಕೆ ಪ್ರೇರಣೆ ನೀಡಿದ್ದು ತಾಯಿ ಈಶ್ವರಮ್ಮ. ಇವರಿಬ್ಬರ ಸಾಹಸ ಗಾತೆಯನ್ನು ಬಿ. ಎಲ್. ವೇಣು ಅವರು ಕಾದಂಬರಿ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ನಾಲ್ವಡಿ ವೆಂಕಟಪ್ಪ ನಾಯಕ ಒಬ್ಬ ನತದೃಷ್ಟ ನಾಯಕ. ಏನೆಲ್ಲಾ ಅರ್ಹತೆಗಳನ್ನು ಹೊಂದಿದ್ದರು ಕೂಡ ಕಾಲನ ಕೈ ಗೊಂಬೆಯಾಗಿ ಏನೆಲ್ಲಾ ಪಾಡನ್ನು ಪಡಬೇಕಾಯಿತು. ತಂದೆ ಅಜ್ಜ ಮಾಡಿದ ಸಾಲಕ್ಕೆ ಈತ ಹೆಗಲಣೆಯಾಗುತ್ತಾನೆ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ತಾಯಿ ಇದ್ದು ತಬ್ಬಲಿಯಾಗಿ ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆಯುತ್ತಾನೆ. ಮೇಲಾಗಿ ಈತನ ಶಿಕ್ಷಣ ಮತ್ತು ಉಸ್ತುವಾರಿಗಾಗಿ ಮೆಡೋಸ್ ಟೇಲರೆಂಬ ಬ್ರಿಟಿಷ್ ಅಧಿಕಾರಿಯನ್ನು ನೇಮಿಸುತ್ತಾರೆ.

ರಾಣಿ ಈಶ್ವರಮ್ಮನಿಗೆ ಹಲವು ಬಿಕ್ಕಟ್ಟುಗಳು. ನಿಜಾಮನಲ್ಲಿ ಮಾಡಿದ ಸಾಲವನ್ನು ತೀರಿಸಲು, ಲೆಕ್ಕಪತ್ರ ಸರಿದೂಗಿಸಲು ಬ್ರಿಟಿಷ್ ಅಧಿಕಾರಿ ಗ್ರಿಸ್ಲೆ, ಪ್ರೆಜರ್ ರ ಹಸ್ತಕ್ಷೇಪದಿಂದ ಏನೆಲ್ಲಾ ಸಮಸ್ಯೆಗಳು ಉದ್ಭವಿಸುತ್ತದೆ. ಗಂಡನ ಅಗಲುವಿಕೆ, ಅಪ್ರಾಪ್ತ ವಯಸ್ಸಿನ ಮಗ, ಮೈದುನ ಪಿಡ್ಡ ನಾಯಕನ ಸಂಚು, ಮೆಡೋಸ್ ಟೇಲರನ ನಯವಂಚಕತನ ಎಲ್ಲರ ಷಡ್ಯಂತ್ರದಲ್ಲಿ ರಾಣಿ ಈಶ್ವರಮ್ಮ ಸಿಲುಕುತ್ತಾಳೆ.ಹಾಗೆಂದು ಅವಳು ಎದೆಗುಂದದೆ ಯಾವುದಕ್ಕೂ ಜಗ್ಗದೆ ತನ್ನ ಮಗನನ್ನು ಪಟ್ಟಕ್ಕೆ ಕೂಡಿಸಿ ತಾನೇ ರಾಜ್ಯಭಾರ ಮಾಡಲು ಮುಂದಾಗುತ್ತಾಳೆ. ಅವಳ ಚಾಣಾಕ್ಷತನ, ದಿಟ್ಟತನದ ಮುಂದೆ ಬ್ರಿಟಿಷ್ ಅಧಿಕಾರಿಗಳ ಆಟ ನಡೆಯದಾದಾಗ ಕುತಂತ್ರದಿಂದ ಅವಳನ್ನು ಗಡಿಪಾರು ಮಾಡಿದಾಗ, ಬೇರೆ ಮಾರ್ಗವಿಲ್ಲದೆ ತವರು ಮನೆಯಾದ ರತ್ನಗಿರಿಗೆ ಬಂದು ನೆಲೆಸುತ್ತಾಳೆ.
ಆದರೆ ಮಗನಾದ ನಾಲ್ವಡಿ ವೆಂಕಟಪ್ಪ ತಾಯಿಯಿಂದ ದೂರವಾಗಿ ಬ್ರಿಟಿಷ್ ಅಧಿಕಾರಿ ಟೈಲರನ್ನೇ ತಂದೆ ಎಂದು ಸಂಬೋಧಿಸುತ್ತಾ ಅಮಾಯಕನಂತೆ ಬೆಳೆಯುತ್ತಾನೆ. ತಾಯಿ ಜೊತೆಗಿಲ್ಲದೆ ಇದ್ದರೂ ದೂರದಿಂದಲೇ ಅವನಲ್ಲಿ ಸ್ವಾಭಿಮಾನ ಮತ್ತು ನಾಡು ನುಡಿಗಾಗಿ ಧ್ವನಿ ಎತ್ತುವಂತೆ ಪ್ರೇರೆಪಿಸುತ್ತಾಳೆ. ವೆಂಕಟಪ್ಪ ನಾಯಕ ಒಮ್ಮೆ ಆನೆಯನ್ನು ಮದಿಸಿ ಬಂದ ಸಂಗತಿಯನ್ನು ತಾಯಿಯ ಮುಂದೆ ಹೇಳಿದಾಗ, ಅವಳ ಪ್ರತಿಕ್ರಿಯೆ ಭಿನ್ನವಾಗಿತ್ತು. “ಮಧಿಸುವುದಾದರೆ ಬ್ರಿಟಿಷರನ್ನು ಮಧಿಸು, ಆನೆಯನ್ನು ಮಾವುತನು ಕೂಡ ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುತ್ತಾನೆ ” ಎಂಬ ದಾಷ್ಟ್ರದ ನುಡಿ ಕೇಳಿದಾಗ ಎಂಥವರು ನಿಬ್ಬೆರಗಾಗುತ್ತಾರೆ.

ಮತ್ತೊಂದು ಪ್ರಸಂಗದಲ್ಲಿ ಅವಳಿಗೆ ಮಾಶಾಸನ ಕೊಟ್ಟು ವನದುರ್ಗ ಕೋಟೆಯಲ್ಲಿ ವಾಸಿಸಲು ಟೈಲರ್ ಹೇಳಿದಾಗ, ನಿಮ್ಮಿಂದ ನಮಗೆ ಯಾವುದೇ ರೀತಿಯಾದ ಭಿಕ್ಷೆ ಬೇಡ ಕೊಡುವುದಾದರೆ ನನ್ನ ಮಗನಿಗೆ ಅರಸೊತ್ತಿಗೆ ನೀಡು, ಅನುಕಂಪ ಬೇಡ ಎಂದು, ಬ್ರಿಟಿಷರ ಮಾತನ್ನು ತಿರಸ್ಕರಿಸಿ ಮತ್ತೆ ಮರಳಿ ತಂದೆ ಮನೆಗೆ ಹೋಗುತ್ತಾಳೆ. ಅಲ್ಲಿಂದಲೇ ಮಗನಿಗೆ ಏನೆಲ್ಲ ಸಂದೇಶ ಕಳಿಸುತ್ತಾ ಆತನಿಗೆ ದಕ್ಕಬೇಕಾದ ಹಕ್ಕಿನ ಅರಿವನ್ನು ಸದಾ ಜಾಗೃತ ಮಾಡಿಸುತ್ತಿರುತ್ತಾಳೆ. ಆದರೆ ಒಮ್ಮೆ1857 ಮೇ 27 ರಂದು ತಿರುಪತಿಯಿಂದ ಮರಳಿ ಬರುವಾಗ ಮಾರ್ಗ ಮಧ್ಯದಲ್ಲಿ ಅಸಹಜ ಸಾವನ್ನು ಅಪ್ಪುತ್ತಾಳೆ. ಈಶ್ವರಮ್ಮ ಅಳಿದರು ಸುರಪುರದ ಜನಮಾನಸದಲ್ಲಿ ಅವಳು ಶಾಶ್ವತವಾಗಿ ಉಳಿಯುತ್ತಾಳೆ. ಸ್ವಾಭಿಮಾನಿ ಈಶ್ವರಮ್ಮ ಏಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಿದರು ಎದೆಗುಂದದ ಛಲದಂಕ ಮಲ್ಲೆ. ಅವಳು ನೇರ ನಿಷ್ಠುರ ನುಡಿಯವಳು, ಯಾರ ಮಾತಿಗೂ ಸೊಪ್ಪು ಹಾಕದೆ ತನಗೆ ಸರಿ ಅನಿಸಿದ್ದನ್ನು ಮಾಡಿ ತೋರಿಸಿದವಳು. ಅವಳ ನ್ಯಾಯಪರವಾದ ಆಡಳಿತದಿಂದ ಸುರಪುರ ಜನ ಅವಳನ್ನು ಆರಾಧಿಸುತ್ತಿದ್ದರು. ಹಾಗಾಗಿ ಅವಳು ಬ್ರಿಟಿಷರಿಗೆ ಮಗ್ಗಲು ಮುಳ್ಳಾಗಿದ್ದದ್ದು ಸತ್ಯ. ಅವಳೇ ಈ ಕಾದಂಬರಿಯ ಕೇಂದ್ರ ಬಿಂದು ಎಂದರು ತಪ್ಪಾಗದು.

ವೆಂಕಟಪ್ಪ ನಾಯಕ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗುತ್ತಾನೆ. ಟೈಲರ್ ಮಾತ್ರ ಆತನಿಗೆ ನೀಡಬೇಕಾದ ಎಲ್ಲ ರೀತಿಯ ಶಿಕ್ಷಣವನ್ನು ನೀಡಿದ್ದರು ಕೂಡ ಅರಸೊತ್ತಿಗೆಯನ್ನು ಮಾತ್ರ ಬಿಟ್ಟು ಕೊಟ್ಟಿರುವುದಿಲ್ಲ. ಅವನ ಕುರಿತಾಗಿ ಕಾಳಜಿ ಇಟ್ಟುಕೊಂಡವಳು ಟೈಲರ್ ನ ಮಗಳು ಸ್ಟೆಲ್ಲಾ ಮಾತ್ರ.

ಕೊನೆಗೆ ವೆಂಕಟಪ್ಪ ನಾಯಕ ಏನೆಲ್ಲ ಪ್ರಯತ್ನಪಟ್ಟು ಡಾಲ್ ಹೌಸಿಯನ್ನು ಭೇಟಿಯಾಗಿ, ಬ್ರಿಟಿಷ್ ಅಧಿಕಾರಿಗಳ ಲೋಪದೋಷವನ್ನು ತಿಳಿಸಿ, ಮತ್ತೆ ತನ್ನ ಅಧಿಕಾರವನ್ನು ಪಡೆಯಲು ಯಶಸ್ವಿಯಾಗುತ್ತಾನೆ. ಆದರೆ ಅವನ ಈ ಪ್ರಯತ್ನದ ಫಲವನ್ನು ಕಾಣಲು ತಾಯಿ ಇರುವುದಿಲ್ಲ. ನಂತರ ರಾಣಿ ರಂಗಮ್ಮನ ಜೊತೆ ವಿವಾಹವಾಗುತ್ತದೆ. ಯಶಸ್ವಿಯಾಗಿ ಅರಸೊತ್ತಿಗೆ ನಿಭಾಯಿಸುತ್ತಾ, ಮೊಟ್ಟ ಮೊದಲಿಗೆ ದಕ್ಷಿಣ ಭಾರತದಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ಪ್ರಯತ್ನ ಮಾಡುತ್ತಾನೆ. ಅದಕ್ಕಾಗಿ ಅನೇಕ ಸಂಸ್ಥಾನಗಳಿಗೆ ಭೇಟಿ ನೀಡಿ, ಸ್ವಾತಂತ್ರ್ಯದ ಕನಸನ್ನು ಎಲ್ಲರಲ್ಲೂ ಬಿತ್ತುತ್ತಾನೆ. ಅದಕ್ಕಾಗಿ ಸೈನ್ಯ ಸಜ್ಜುಗೊಳಿಸುತ್ತಾನೆ. ಬ್ರಿಟಿಷರೊಂದಿಗೆ ಸೆಣ ಸಾಡಲು ಸಿದ್ದನಾಗುತ್ತಾನೆ. ಆರಂಭದಲ್ಲಿ ಜಯ ಲಭಿಸಿದರು ಕೂಡ ನಂತರ ಸೈನ್ಯದ ಕೊರತೆಯಿಂದ ಸೋಲನ್ನಪ್ಪುತ್ತಾನೆ. ಆಗ ನಿಜಾಮನ ಸಹಾಯ ಬಯಸಿ ಹೋದಾಗ ವಾನ ಪರ್ತಿಯ ಅರಸನ ಸಂಚಿನಲ್ಲಿ ಸಿಲುಕುತ್ತಾನೆ. ಹಾಗೆಯೇ ನಿಜಾಮನ ಕುಟಿಲತೆಯಿಂದ ಸೆರೆಸಿಕ್ಕು ಬಂಧಿಯಾಗುತ್ತಾನೆ. ಅವನನ್ನು ಬಂಧಿಸಿ ಮದರಾಸಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಅಂಬರ ಪೇಟೆ ಎಂಬ ಸ್ಥಳದಲ್ಲಿ ಆತನನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ. ಒಬ್ಬ ಅಸಮಾನ್ಯರಾಜನ, ಅಸಮಾನ್ಯ ಸಾಹಸದ ಕಥೆ ಇಲ್ಲಿಗೆ ಅಂತ್ಯವಾಗುತ್ತದೆ. ಬಾಲ್ಯದಿಂದಲೂ ಏನೆಲ್ಲ ಕಷ್ಟಗಳನ್ನು ಪಡುತ್ತಾ ತಾಯಿ ಪ್ರೀತಿಯಿಂದ ವಂಚಿತನಾಗಿ ತನಗೆ ದಕ್ಕ ಬೇಕಾದ ಅರಸೊತ್ತಿಗೆ ದೊರಕದೆ, ತಮ್ಮವರ ಮೋಸಕ್ಕೆ ಬಲಿಯಾಗಿ ಒಬ್ಬ ಮಹಾನ್ ದೇಶಪ್ರೇಮಿ, ಸ್ವಾಭಿಮಾನಿ ನಾಯಕನ ಅಂತ್ಯ ದುರಂತವಾದದ್ದು ಕಂಡಾಗ ಸಂಕಟವಾಗುತ್ತದೆ. ಹುಲಿಯ ಜೊತೆ ಸೆಣ ಸಾಡಿ,ಮದಗಜವನ್ನು ಮಧಿಸಿದ ಶೂರ ತಮ್ಮವರ ಮೋಸಕ್ಕೆ ಬಲಿಪಶು ಆದದ್ದು ವಿಪರ್ಯಾಸ. ಒಟ್ಟು ಆತನ ಅಂತ್ಯ ಓದುಗನಿಗೆ ಯಕ್ಷಪ್ರಶ್ನೆಯಾಗಿ ಕಾಡುವುದು.

ಕಾದಂಬರಿ ಒಂದೇ ಓಟದಲ್ಲಿ ಓದಿಸಿಕೊಂಡು ಹೋಗುತ್ತದೆ. ಆದರೆ ಲೇಖಕ ಇನ್ನಷ್ಟು ಸೂಕ್ಷ್ಮ ಸಂಗತಿಗಳನ್ನು ಗಮನಿಸಿದರೆ ಇದೊಂದು ಮಹತ್ವದ ಐತಿಹಾಸಿಕ ಕಾದಂಬರಿ ಆಗುತ್ತಿತ್ತು. ಈ ಕಾದಂಬರಿಯಲ್ಲಿ ಬರುವ ಸಂಭಾಷಣೆಗಳು ಅತ್ಯಂತ ಸಿನಿಮಿಯ ದಾಟಿಯಲ್ಲಿ ಮೂಡಿಬಂದಿದೆ. ಟೇಲರ್ ಮತ್ತು ಮಗಳು ಸ್ಟೆಲ್ಲಾ ಅವರಿಬ್ಬರ ಸಂಭಾಷಣೆ ನಾಟಕೀಯವಾಗಿದ್ದು, ಅವಳ ವರ್ತನೆ ಕೂಡ ಚಲ್ಲು ಚೆಲ್ಲಾಗಿ ಮೂಡಿಬಂದಿದೆ. ಇತರ ಪಾತ್ರಗಳ ಸಂಭಾಷಣೆಯಲ್ಲಿ ದೇಸಿಯ ಸೊಗಡಿದ್ದರೆ ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು. ಅದರಲ್ಲೂ ಉತ್ತರ ಕರ್ನಾಟಕದ ಗಡುಸಾದ ಭಾಷೆ ಬಳಸಿದ್ದಲ್ಲಿ ಸಂಭಾಷಣೆಯ ಸೊಗಡು ಹೆಚ್ಚುತ್ತಿತ್ತು. ಊಟದ ವರ್ಣನೆ ಮಾಡುವಾಗ ಬಯಲು ಸೀಮೆಯ ಜವಾರಿ ಊಟದ ಕುರಿತು ಬಣ್ಣಿಸಿದರೆ ಅದರ ರುಚಿಯೆ ಬೇರೆ ಆಗುತ್ತಿತ್ತು. ಆನೆ ಜೊತೆಯ ಸೆಣಸಾಟದ ಸಂದರ್ಭದಲ್ಲಿ ಕಾಡಿನ ವರ್ಣನೆ ಮಾಡಿದ್ದು ಕಂಡಾಗ, ಲೇಖಕರಿಗೆ ಸುರಪುರದ ಪರಿಸರದ ಪರಿಚಯವಿಲ್ಲ ಎಂಬುದು ಎದ್ದು ಕಾಣುತ್ತದೆ. ಕಲ್ಲಿನ ಗುಡ್ಡ, ಕುರುಚಲು ಕಾಡನ್ನು ಹೊಂದಿರುವ ನಮ್ಮ ಈ ಬಯಲು ಸೀಮೆಯ ಪ್ರಕೃತಿಯ ಸೊಬಗು ಬೇರೆ. ಇಲ್ಲಿನ ಕಲ್ಲಿನ ಗುಡ್ಡದ ವರ್ಣನೆ ಇನ್ನಷ್ಟು ಬೇಕಿತ್ತು. ಸುರಪುರ ಸಂಸ್ಥಾನ ಸೈನ್ಯಕ್ಕಾಗಿ ಹೆಸರುವಾಸಿ. ಅದರ ಕುರಿತು ಒಂದಿಷ್ಟು ಮಾಹಿತಿ ನೀಡಬಹುದಿತ್ತು. ಜೊತೆಗೆ ಸುರಪುರದ ಅರಸರು ಕಲಾಪೋಷಕರಾಗಿದ್ದರು ಇಂತಹ ಒಂದಿಷ್ಟು ಸಣ್ಣಪುಟ್ಟ ಸಂಗತಿಗಳನ್ನು ಕಾದಂಬರಿಯಲ್ಲಿ ಸೇರಿಸಬಹುದಿತ್ತು. ಕಾದಂಬರಿಯ ಶೀರ್ಷಿಕೆ ಕೂಡ “ಸುರಪುರದ ರಾಜ ವೆಂಕಟಪ್ಪ ನಾಯಕ” ಎಂದಾಗಬಹುದಿತ್ತು.

ಈ ಎಲ್ಲ ಸಂಗತಿಗಳನ್ನು ಹೊರತಾಗಿಯೂ ಕೂಡ ಕಾದಂಬರಿ ಓದುಗನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ರಾಣಿ ಈಶ್ವರಮ್ಮ ಮತ್ತು ನಾಲ್ವಡಿ ವೆಂಕಟಪ್ಪನಾಯಕ ಈ ಎರಡು ಪಾತ್ರಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಮರೆತು ಹೋದ ಸುರಪುರ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಪ್ರಯತ್ನ ಮಾಡಿ, ಮರೆಯಲಾರದ ಸುರಪುರ ಇತಿಹಾಸ ಎನ್ನುವಂತೆ ಬಿ. ಎಲ್. ವೇಣು ಅವರು ಚಿತ್ರಿಸಿದ್ದಾರೆ. ಕಾದಂಬರಿಯ ವಸ್ತು ವಿನ್ಯಾಸ,ತಂತ್ರಗಾರಿಕೆ ಎಲ್ಲವೂ ಅರ್ಥಪೂರ್ಣವಾಗಿ ಮೂಡಿಬಂದಿದೆ. ಕೆಲವು ಸಣ್ಣ ಪುಟ್ಟ ಪಾತ್ರಗಳು ಕೂಡ ಕಾಡುವಂತೆ ಸಂಯೋಜಿಸಿದ್ದಾರೆ. ಒಟ್ಟಾರೆ ನಮ್ಮ ಹೆಮ್ಮೆಯ ಸುರಪುರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ, ಮಾಹಿತಿ ನೀಡುವ ಈ ಕಾದಂಬರಿ ಮಹತ್ವದ್ದು ಮತ್ತು ಮರೆಯಲಾರದ್ದು

‍ಲೇಖಕರು Admin

16 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading