ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡದ ಹಿರಿಮೆಯನ್ನು ಪಸರಿಸಿರುವ ಇವರ ಕವಿತೆಗಳು ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿವೆ.
ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ತುಮಕೂರು ಜಿಲ್ಲೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಮುಂದೆ ಅವಧಿಯಲ್ಲಿ ಕವಿತೆಗಳನ್ನು ಕುರಿತ ಹೊಸ ಹೊಳಗಿನ’ಬೆಳಕಿನ ಜಾಡು’ ಅಂಕಣದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಂಕಣ – 3
ಡಿ.ಎಸ್.ವೀರಯ್ಯನವರ ಕಾವ್ಯ : ‘ನೀರಿನ ಬಿಂದು ಕಡಲಾಗುವ ವಿಸ್ಮಯ’
ಸಮಾಜದ ಆತ್ಮ ಕಾವ್ಯ : ಕಾವ್ಯದ ಶರೀರ ಅನುಭವ ಎಂಬ ಮಾತೊಂದಿದೆ. ಒಂದು ಸಮಾಜದ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳು ಎಷ್ಟು ಮುಖ್ಯವೋ, ಕಾವ್ಯವೂ ಅಷ್ಟೇ ಮುಖ್ಯವಾಗುತ್ತದೆ ಎಂಬುದು ಆ ಮಾತಿನ ಉದ್ದೇಶ. ‘ಒಂದು ದೇಶದ ಶ್ರೇಯೋಭಿವೃದ್ಧಿಗೆ ಅವಶ್ಯಕವಾದ ಅನೇಕಮುಖವಾದ ಸಾಧನಗಳಲ್ಲಿ ಸಾಹಿತ್ಯ ಕೃಷಿಯೂ ಒಂದಾಗಿರುತ್ತದೆ’ ಎನ್ನುವ ಆಚಾರ್ಯ ಬಿ.ಎಂ.ಶ್ರೀಕoಠಯ್ಯನವರ ಈ ಮಾತು ಸಮಾಜಕ್ಕೆ ಸಾಹಿತ್ಯದ ಅಗತ್ಯತೆಯನ್ನು ನಿರೂಪಿಸುತ್ತದೆ. ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದು ಅಂತೆಯೇ, ಸಾಹಿತಿಯು ಸಮಾಜದ ಉತ್ಪನ್ನವಾಗಿ ಬೆಳೆಯುತ್ತಾನೆ, ಎಂಬುದನ್ನು ನಾವು ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ವಿವೇಚಿಸಬಹುದು. ಕನ್ನಡದ ಉಪಲಬ್ಧ ಆದಿಕವಿ ಪಂಪನಿoದ ಇಲ್ಲಿಯವರೆಗೆ ಬರೆಯುತ್ತಿರುವ ಅನೇಕ ಕವಿಗಳು ಸಮಾಜದೊಂದಿಗೆ ನಡೆಸಿದ ತಮ್ಮ ಅನುಸಂಧಾನವನ್ನು ಸಾಹಿತ್ಯವನ್ನಾಗಿ ಸೃಜಿಸಿರುವುದನ್ನು ನಾವು ಕಾಣಬಹುದಾಗಿದೆ. ೯ನೇ ಶತಮಾನದಲ್ಲಿ ಇದ್ದ ಜಾತಿಪದ್ದತಿಯ ಚರ್ಚೆಯನ್ನು ಕವಿ ಪಂಪನು ‘ಕರ್ಣ’ನ ಪಾತ್ರದ ಮೂಲಕ ತಂದು ಮತ್ತೆ ತನ್ನ ವಿಶ್ವಾತ್ಮಕ ಚಿಂತನೆಯನ್ನು ಕರ್ಣನಮೂಲಕವೇ ಹೇಳಿಸುವ ಸಾಹಿತ್ಯ ಮತ್ತು ಸಾಮಾಜಿಕ ಅನುಸಂಧಾನದ ನಡೆ ಪ್ರಶಂಸನೀಯವಾದದ್ದು.
ಕುಲಮನೇ ಮುನ್ನಮ್ ಉಗ್ಗಡಿಪಿರೇಂಗಳ
ಕುಲಂ ಕುಲಮಲ್ತು ಚಲಂ ಕುಲಂ
ಗುಣಂ ಕುಲಂ ಅಭಿಮಾನಮದೊಂದೆ ಕುಲಂ
ಅಣ್ಮುಕುಲಂ ಬಗೆವಾಗಳೀಗಳ್
ಈ ಕಲಹದೊಳಣ್ಣ ನಿಮ್ಮ ಕುಲಂ ಆಕುಲಮಂ
ನಿಮಗುಂಟುಮಾಡುಗುo
– ಪಂಪ ಭಾರತ
ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾದ ಜಾತಿ ಪದ್ಧತಿಯನ್ನು ಕಾವ್ಯಾನುಸಂಧಾನ ಮಾಡಿಸಿದ ಪಂಪನ ಪ್ರತಿಭೆಯನ್ನು ನಾವು ಗಮನಿಸಿದಾಗ, ತನ್ನ ಸಮಕಾಲೀನ ಸಮಾಜದಲ್ಲಿ ಇದ್ದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ತನ್ನ ಸೃಜನಶೀಲತೆಯ ಕಾವ್ಯದಲ್ಲಿ ಪ್ರತಿಭಟನೆಯನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದು.
ಹೀಗೆ ವರ್ತಮಾನದಲ್ಲೂ ಮುಂದುವರೆದಿರುವ ಜಾತಿಪದ್ಧತಿಯ ಸವಾಲುಗಳು ಮತ್ತು ಅಸ್ಪೃಶ್ಯತೆಯ ನೋವಲ್ಲಿ ಬೆಂದವರು ಸಮಾನತೆ ಎಂಬ ಭರವಸೆಯ ನಾಳೆಗಳನ್ನು ಡಿ.ಎಸ್. ವೀರಯ್ಯ ಅವರ ಕಾವ್ಯದಲ್ಲಿ ನೋಡಬಹುದು
ಡಿ.ಎಸ್.ವೀರಯ್ಯ ಅವರು ಸೃಜನಶೀಲ ಗದ್ಯದಲ್ಲಿ ಪರಿಣಿತಿ ಸಾಧಿಸಿರುವಂತೆ ಕವಿತೆಗಳನ್ನು ಕಟ್ಟುವುದರಲ್ಲೂ ಸ್ವಪ್ರತಿಭೆಯನ್ನು ಮೆರೆದಿದ್ದಾರೆ. ಅವರು ಪ್ರಕಟಿಸಿರುವ ಗೆರೆಗಳು ಮತ್ತು ಬೇರುಗಳು ಎಂಬ ಎರಡು ಕವನ ಸಂಕಲನಗಳು ಕನ್ನಡ ಕಾವ್ಯದ ಚಾರಿತ್ರಿಕ ಸಂದರ್ಭದ ಹಿನ್ನೆಲೆಯಲ್ಲಿ ನಾವು ಗಮನಿಸಬೇಕಾಗುತ್ತದೆ” ಎನ್ನುವ ಆಚಾರ್ಯ ಮಲ್ಲೇಪುರಂ ಅವರ ಮಾತು ವೀರಯ್ಯನವರ ಕಾವ್ಯದ ಅಧ್ಯಯನದ ಸಂದರ್ಭದಲ್ಲಿ ಅತ್ಯುತ್ತಮ ಪ್ರವೇಶಿಕೆಯನ್ನು ತೆರೆದುಡುತ್ತದೆ.
ಜೀವಮಾನವೆಲ್ಲಾ ಅವಮಾನವ ನುಂಗಿ
ನೂರಾರು ಕಷ್ಟಕೋಟಲೆಗಳಿಗೆ
ಬೆನ್ನಕಾಯಿಸಿದ ನಿನಗೆ ಸಿಗಲಾರದೇ
ಎಂದಾದರೊಂದು ದಿನ ಶೀತಲ ಚಂದ್ರನ ತಂಪು
ಈ ಕಾವ್ಯವು ಹೇಳುತ್ತಿರುವ ದ್ವನಿ ಮತ್ತು ವ್ಯುತ್ಪತ್ತಿ ದಲಿತ ಸಂವೇದನೆಯವು ಎಂಬುದು ಹೆದ್ದರೆಯಾಗಿ ಕಂಡರೂ ಕಾವ್ಯದಲ್ಲಿರುವ ದು:ಖವು ಅದು ಬೆನ್ನುಗಳು ಹೊತ್ತದ್ದು. ಕಷ್ಟಕೋಟಲೆಗಳನ್ನು ಅನುಭವಿಸುವ ಎಲ್ಲಾ ಜನರ ಮನಸ್ಸು ಹೊರುವ ಸಂಕಟವನ್ನು ಕವಿ ತನ್ನ ಬೆನ್ನಮೇಲೆ ಹೊರುತ್ತಾನೆ. ಅರವಿಂದ ಮಾಲಗತ್ತಿಯವರು ಒಂದು ಕಡೆ ದಲಿತ ಸಾಹಿತ್ಯವನ್ನು ‘ಸೀಮಾತೀತ’ ಎಂದು ಕರೆಯುವ ಔಚಿತ್ಯದ ಹಿನ್ನೆಲೆಯಲ್ಲಿ ನಾವು ಡಿ.ಎಸ್. ವೀರಯ್ಯನವರ ಕಾವ್ಯವನ್ನು ನೋಡುವ ಅಗತ್ಯವಿದೆ. ಇತರರ ನೋವನ್ನು ಬಲ್ಲವನು ಮಾತ್ರ ಮನುಷ್ಯನಾಗುತ್ತನೆ ಎನ್ನುವ ಮಾತೊಂದಿದೆ. ದಲಿತ ಸಾಹಿತ್ಯದ ನೆಲೆ ವ್ಯಕ್ತಿಗತ ದುಃಖದ ಪರಿಧಿಯಲ್ಲೇ ಉಸಿರಾಡಿದರೂ ಕೂಡ ತನ್ನಂತೆಯೇ ಇತರರ ದುಃಖವೂ, ಎಂದು ಭಾವಿಸುವ ತಾಯ್ತನ ಬಂದಾಗ ‘ಎಂದಾದರೊಂದು ದಿನ ಶೀತಲ ಚಂದ್ರನ ತಂಪು’ ಸಿಗಲಾರದೇ ಎನ್ನುವ ಮಾತು ಸಹ ಕಾವ್ಯವಾಗುತ್ತದೆ.
ದಲಿತ ಸಂವೇದನೆಯ ಕಾವ್ಯವನ್ನು ಸೃಜಿಸುವ ಕವಿಯಲ್ಲಿ ಜಗತ್ತಿನಲ್ಲಿ ನೊಂದವರೆಲ್ಲಾ ನನ್ನವರೇ ಎನ್ನುವ ಸೀಮಾತೀತ ಪರಿಕಲ್ಪನೆಯ ಕಾವ್ಯಕ್ಕೆ ಕಾರಣನಾಗುತ್ತನೆ.
ಮನದ ಕೊಡಲಿಯ ಮಸೆದು
ಜಾತಿ ಆಲವ ಕಡಿದು
ಬೆಳೆಸಿರಿ ಮಾನವೀಯತೆಯ ಮರವ
ಸೀಮಾತೀತ ನೆಲೆಯ ವೀರಯ್ಯನವರ ಈ ಕಾವ್ಯ ಜಗತ್ತು ಕೊಟ್ಟ ದುಃಖಗಳಿಗೆ ಬೆನ್ನುಮಾಡಿ ಶೀತಲ ಚಂದ್ರನ ತಂಪನ್ನು ಪಡೆದು ಜಗತ್ತಿಗೆ ಜಾತಿ ರಹಿತ ಸಮಾಜದ ತಂಪನ್ನು ಹಂಚುವ ಗುಣವನ್ನು ಪಡೆದಿದೆ. ಯಾವ ಕವಿ ತನ್ನ ದುಃಖಗಳನ್ನು ಮೀರಿ ತನೆಗೆ ನೋವು ಕೊಟ್ಟವರಿಗೆ ನೋವು ಬೇಡ ಎಂದು ಭಾವಿಸುತ್ತನೆಯೋ ಆತ ಜನಕವಿಯಾಗುತ್ತಾನೆ ಆ ನಿಟ್ಟಿನಲ್ಲಿ ವೀರಯ್ಯನವರ ಕಾವ್ಯದ ಘನತೆ ಹೆಚ್ಚಿದೆ.
‘ಪ್ರತಿಯೊಂದು ವಸ್ತುವಿನಲ್ಲಿಯೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಶಿಷ್ಟತೆ ಉಂಟು. ಪಿಂಡಾಂಡ ಎಷ್ಟು ವಿಶಿಷ್ಟವೋ ಬ್ರಹ್ಮಾಂಡವೂ ಅಷ್ಟೇ ವಿಶಿಷ್ಟ. ಕಾವ್ಯದ ಮುಖ್ಯ ಪ್ರಯೋಜನ ವಿಶಿಷ್ಟತಾ ಅನುಭವ ಸಾಮನ್ಯತೆಯಲ್ಲಿಯೂ ಅತ್ಯಂತ ವಿಶಿಷ್ಟವಾದದ್ದನ್ನು ಕಾವ್ಯ ಅನುಭವಕ್ಕೆ ತಂದು ಕೊಡುತ್ತದೆ’ ಎಂದು ಕಾವ್ಯದ ವಿಶೇಷತೆಗಳನ್ನು ತಿಳಿಸುವಾಗ ಕುವೆಂಪು ಹೆಳಿದ ಮಾತಿದು.
ಎಳೆಯ ಬಿಸಿಲಿಗೆ ಹೊಳೆವ ಹಿಮವೇ
ಜಂಭದಿ ತುಳುಕುವ ತೆನೆಗಳ ಸಾಲೇ
ಆಗಸದಿ ಹಾರುವ ಹಕ್ಕಿಗಳ ಮಾಲೇ
ನಿಮಗಿಲ್ಲ ಅಂತರ ನಮಗೇಕೀ ಅಂತರ
ಡಿ.ಎಸ್.ವೀರಯ್ಯನವರ ಈ ಕಾವ್ಯವು ಸಾಮಾನ್ಯವಾದರೂ ಅವರ ದಮನಿತ ಲೋಕದ ಅನುಭವ ವಿಶಿಷ್ಟತೆಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಇತರರಿಗೆ ದಕ್ಕುವ ಅನ್ನ, ಇತರರಿಗೆ ಇರುವ ಸ್ವಾತಂತ್ರ್ಯ ನಮಗೆ ಏಕಿಲ್ಲ ಎನ್ನುವ ಅನುಭವವು ಕವಿಯು ಅನುಭವಿಸಿದ ಯಾತನೆಗಳ ಅನುಭವವನ್ನು ನಮಗೆ ದರ್ಶನ ಮಾಡಿಸುತ್ತದೆ. ಕವಿಯೊಬ್ಬ ತನ್ನ ಅನುಭವವನ್ನು ಸಾರ್ವತ್ರಿಕರಣ ಗೊಳಿಸುವ ಕಾವ್ಯದಲ್ಲಿ ತಾನು ಸಾರ್ವತ್ರಿಕವಾಗಿಯೂ ಏಕಕಾಲದಲ್ಲಿ ತಾನು ಏಕಾಂಗಿಯು ಆಗಿದ್ದಾಗ ಕಾವ್ಯದ ಅನುಭವ ಪಾಕಗೊಳ್ಳುತ್ತದೆ. ವ್ಯಕ್ತಿಗತ ನೆಲೆಯ ಅನುಭವವನ್ನು ಸಾರ್ವತ್ರೀಕರಣ ಗೊಳಿಸುವಾಗ ಕವಿ ಎಲ್ಲರ ಬದುಕಿನ ಮೂಲವಾದ ಅನ್ನದ ನೆಲೆಯನ್ನು ಅದನ್ನು ದಕ್ಕಿಸಿಕೊಳ್ಳುವ ದಾರಿಯಲ್ಲಿ ತಾನು ಪ್ರಶ್ನೆಗಳ ಮೂಲಕವೇ ಜಗತ್ತಿನೊಂದಿಗೆ ಅನುಸಂಧಾನ ನಡೆಸುತ್ತಾನೆ. “ಡಿ.ಎಸ್. ವೀರಯ್ಯನವರು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ. ಅವರು ಚತುರ್ಮುಖ ಸಾಹಸಿ” ಎನ್ನುವ ಆಚಾರ್ಯ ಮಲ್ಲೇಪುರಂ ಅವರ ಮಾತು ವೀರಯ್ಯನವರ ಕಾವ್ಯದ ಒಳಸುಳಿಗಳನ್ನು ಅನುರಣನಗೊಳಿಸಿದೆ. ಎಲ್ಲರಂತೆ ಕಾವ್ಯದ ಮೂಲಕವೇ ಪ್ರಾರಂಭವಾದ ಅವರ ಪ್ರತಿಭಟನೆ, ಸಾಹಿತ್ಯಮುಖಿಯಾಗಿ, ಸಮಾಜಮುಖಿಯಾಗಿ, ರಾಜಕೀಯಮುಖಿಯಾಗಿ ರಾಷ್ಟçಮುಖಿಯಾಗುವ ವಿಶಿಷ್ಟತೆಯನ್ನು ಕಟ್ಟಿಕೊಡುತ್ತದೆ. ಆ ವಿಶಿಷ್ಟತೆಯು ಹೂವು ಅರಳುವಾಗ ತನ್ನ ಕಂಪನ್ನು ಸುತ್ತಲ ವಾತಾವರಣದಲ್ಲಿ ಪಸರಿಸುವಂತೆ ವೀರಯ್ಯನವರ ಅವರ ಚತುರ್ಮುಖ ವ್ಯಕ್ತಿತ್ವದ ಗಾಳಿಗಂಧವನ್ನು ಓದುಗರಿಗೆ ಪಸರಿಸಿದೆ ಎಂದರೆ ತಪ್ಪಾಗಲಾರದು.
ಯಾವುದೇ ವ್ಯಕ್ತಿ ತಾನು ಜೀವಿಸುವ ಜೀವನವನ್ನು ತಾನಿರುವ ಬಿಂದುವಿನಿಂದ ತನ್ನನ್ನು ಎತ್ತರಕ್ಕೆ ಏರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತಾನೆ. ತನ್ನ ಬದುಕಿನಲ್ಲಿರುವ ತಲ್ಲಣಗಳೊಂದಿಗೆ ಸದಾ ಹೋರಾಡುತ್ತಾ ತನ್ನ ಆಹನ್ನು ವಿಸ್ತರಿಕೊಳ್ಳುವಾಗ ಅವನಿಗೆ ಕಾವ್ಯ ಒಂದು ಹರಿಗೋಲಾಗಿ ಕಾಣುತ್ತದೆ. ಭೌತಿಕ ತಲ್ಲಣಗಳನ್ನು ಶಮನಮಾಡಬಲ್ಲ ಅಸ್ತ್ರ ಆತನಿಗೆ ಪ್ರತಿಭೆಯ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆ ಅಂತರ್ಗತವಾಗಿರುತ್ತದೆ. ವ್ಯಕ್ತಿ ತನ್ನ ತನವನ್ನು ಕಂಡುಕೊಂಡು ತನ್ನ ದಾರಿಯಲ್ಲಿ ನಡೆದರೆ ಪ್ರತಿಭೆ ತಾನಾಗಿಯೇ ಬೆಳೆಸುತ್ತದೆ.
ಡಿ.ಎಸ್. ವೀರಯ್ಯ ಅವರ ‘ಗೆರೆ’ ಕವನ ಸಂಕಲನದಲ್ಲಿನ ಈ ಕೆಳಗಿನ ಪದ್ಯವು ಅವರ ಸುಪ್ತಮನಸ್ಸಿನಲ್ಲಿನಲ್ಲಿ ತಮ್ಮ ಒಡಲದನಿಯು ತನ್ನ ತಲ್ಲಣಗಳನ್ನು ಮೀರುವ ಭರವಸೆಯ ಗೆರೆಯಾಗಿ ನಿಚ್ಚಳವಾಗಿ ಕಾಣುತ್ತದೆ.
ಎಣ್ಣೆಕಾಣದ ಕೂದಲುಗಳು
ಸುಕ್ಕು ಹಿಡಿದ ದೇಹಗಳು
ಕಳೆಗುಂದಿದ ಮುಖಗಳು
ಚಿಂದಿ ಬಟ್ಟೆಯ ಜೀವಗಳು
ಗುಳಿ ಬಿದ್ದ ಕಣ್ಣುಗಳು
ಸವೆದು ಬಗ್ಗಿದ ಮೂಳೆಗಳು
ಕಥೆ ಕಾವ್ಯದ ವಸ್ತುಗಳು
ವ್ಯಂಗ್ಯಚಿತ್ರದ ಗೆರೆಗಳು
ಗೆರೆ ಎನ್ನುವ ಪದವೇ ಒಂದು ರೂಪಕ. ಸಮಾಜದಲ್ಲಿ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯವಿಲ್ಲದಿರುವಾಗ ಶೊಷಣೆಗೆ ಒಳಪಟ್ಟ ಜನರಿಗೆ ಈ ಗೆರೆಗಳು ಶೋಷಕರ ಅಸ್ತ್ರವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಸಮಾಜ ಮೇಲ್ನೋಟಕ್ಕೆ ಎಲ್ಲರೂ ಒಂದೇ ಎಂದು ಸಾರುತ್ತಿದ್ದರೂ ಮಾನಸಿಕವಾಗಿ ಸಮುದಾಯಗಳ ನಡುವೆ ವ್ಯಕ್ತಿ ವ್ಯಕ್ತಿಗಳ ನಡುವೆ ಇರುವ ಜಾತಿ, ಹಣ, ವರ್ಗ, ವರ್ಣದ ಗೆರೆಗಳು ಮನುಷ್ಯತ್ವವನ್ನು ತಿನ್ನುವ ಹುಳಗಳಂತೆ ಸದಾ ಕಾಣುತ್ತಿರುವುದು ಈ ನಾಡಿನ ದುರಂತವೇ ಸರಿ. ಇಂತಹಾ ಅನೇಕ ಗೆರೆಗಳು ಡಿ.ಎಸ್. ವೀರಯ್ಯನವರಿಗೂ ಇದ್ದವು ಅವುಗಳನ್ನು ತಮ್ಮ ಪ್ರತಿಭೆ ಮತ್ತು ಹೋರಾಟದ ಮೂಲಕ ಗೆರೆಗಳನ್ನು ದಾಟಿ ತಮ್ಮ ಸಾಧನೆಯ ಮೈಲಿಗಲ್ಲುಗಳಾಗಿ ಮಾಡಿಕೊಂಡಿದ್ದನ್ನು ಅವರ ಈ ಕಾವ್ಯವು ನಿರೂಪಿಸುತ್ತದೆ. ಕಾವ್ಯದಲ್ಲಿ ಕಾಣುವ ‘ಕಥೆ ಕಾವ್ಯದ ವಸ್ತುಗಳು ವ್ಯಂಗ್ಯಚಿತ್ರದ ಗೆರೆಗಳು’ ಎನ್ನುವ ಸಾಲಿನಲ್ಲಿ ಸಾಧಕನಿಗೆ ಕಾಣುವ ಸಮಾಜಿಕ ನೆಲೆಯ ಕಥನಗಳು, ಕಾವ್ಯಗಳು ವ್ಯಂಗ್ಯಚಿತ್ರಗಳಾಗಿ ರೂಪಾಂತರವಾಗುವ ತಲ್ಲಣಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಧಕ ಈ ಗೆರೆಗಳನ್ನು ಮೀರುವ ಪ್ರತಿಭಾನ್ವಿತನಾಗಿ ತನ್ನ ತಲ್ಲಣಗಳನ್ನು ನಿರೂಪಿಸಿದ ಸಮಾಜದ ತಾರತಮ್ಯಗಳನ್ನು ವ್ಯಂಗ್ಯಕ್ಕೆ ಒಳಪಡಿಸುವ ಮೂಲಕ ತನ್ನ ಸಮಾಜದ ಅನೇಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾನೆ. ಡಿ.ಎಸ್.ವೀರಯ್ಯ ಅವರೂ ಸಹ ತಮ್ಮ ಪ್ರತಿಭೆಯ ಮೂಲಕ ಚತುರ್ಮುಖ ಸಾಧನೆಯನ್ನು ಸಾಧಿಸಿದ ನಂತರ ಈ ಸಮಾಜಕ್ಕೆ ತಮ್ಮ ಸಾಧನೆಯ ಬೆಳಕಿನಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಕಾಣುವ ರೂಪಕವನ್ನಾಗಿ ಗೆರೆಗಳನ್ನು ಬಳಸಿರುವುದನ್ನು ಕಾಣಬಹುದು.
ಕಾವ್ಯ ಕವಿಗೆ ತಾತ್ವಿಕ ವಿವೇಕವನ್ನು ತಂದುಕೊಡುತ್ತದೆ ಮತ್ತು ತಾನು ಕಂಡ ಸತ್ಯವನ್ನು ಅನಾವರಣಗೊಳಿಸುವ ಮಾರ್ಗವಾಗಿ ಕಂಗೊಳಿಸುತ್ತದೆ ಎನ್ನುವ ಮಾತನ್ನು ವೀರಯ್ಯ ಅವರ ಕಾವ್ಯವು ಇಲ್ಲಿ ನಿರೂಪಿಸಿದೆ.
ಬಿರಿದ ಭೂಮಿಗೆ ಸಿಟ್ಟೆದ್ದ ಸಮುದ್ರಕೆ
ರೊಚ್ಚೆದ್ದ ಗಾಳಿಗೆ ಮೈಯೊಡ್ಡಿದ ನಿನ್ನ
ಉಕ್ಕಿನ ಮೈಯ್ಯನೊಮ್ಮೆ ಕೊಡವಿ ಬಾ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಬೆಳಕನ್ನು ಆರದಂತೆ ಕಾಪಾಡುತ್ತಿರುವ ಡಿ.ಎಸ್. ವೀರಯ್ಯ ಅವರ ಕಾವ್ಯಶಕ್ತಿ ತಾನೊಬ್ಬನೇ ಬದುಕುವ ಹಂಬಲದಿಂದ ತನ್ನ ಸಾಧನೆಯನ್ನು ಪೂರೈಸಿಲ್ಲ ಅವರೊಂದಿಗೆ ನೊಂದವರು, ಶೋಷಿತರು, ಬಡವರು ವಿಮೋಚನೆಯೆಡೆಗೆ ನಡೆಯಲಿ ಎಂದು ತಾನೇ ಒಂದು ಬೆಳಕಾಗಿ ಎಲ್ಲರನ್ನೂ ಮುನ್ನಡೆಸುತ್ತಿದೆ. ಹೀಗೆ ಡಿ.ಎಸ್.ವೀರಯ್ಯನವರ ಕಾವ್ಯವು ಸಮಾಜಿಕವಾಗಿ ಶೋಷಣೆಗೆ ಒಳಗಾದವರ ಎದೆಯಲ್ಲಿ ದೀಪವನ್ನು ಹಚ್ಚಿಡುವ ಕೆಲಸವನ್ನು ಮಾಡುತ್ತಾ ತನ್ನ ಸಾಹಿತ್ಯಕ ಅನುಸಂಧಾನವನ್ನು ನಡೆಸಿರಿವುದು ಚರಿತ್ರಾರ್ಹವಾದ ಸಂಗತಿಯಾಗಿದೆ.
ಚಳುವಳಿಗಳು ಇಲ್ಲದಿರುವ ಈ ಕಾಲಗಟ್ಟದ ನಿರ್ವಾತದಲ್ಲಿ ಡಿ.ಎಸ್.ವೀರಯ್ಯ ಅವರ ಹೋರಾಟದ ಬದುಕನ್ನು ರೂಪಿಸಿದ ದಲಿತ ಚಳುವಳಿಯ ಬೇರುಗಳಲ್ಲಿ, ಹೋರಾಟದ ಕಿಡಿಗಳ ತಾಯ್ತನವು ವೀರಯ್ಯನವರ ಕಾವ್ಯಗಳಲ್ಲಿ ಇನ್ನೂ ಜೀವಿಸಿದೆ. ಸಿದ್ದಲಿಂಗಯ್ಯ, ದೇವನೂರ ಮಹಾದೇವ ಅವರೊಳಗೆ ಹುದುಗಿರುವ ಮಾನವತೆಯ ಕಾವ್ಯ ವೀರಯ್ಯನವರ ಕಾವ್ಯದಲ್ಲೂ ಇದೆ ಅದನ್ನು ನೋಡುವ ಕಣ್ಣುಗಳು ಬೇಕಿದೆ ಮತ್ತು ಕರುಳಿಗೆ ಅರ್ಥವಾಗುವ ಭಾಷೆಯಲ್ಲಿರುವ ಇವರ ಕವಿತೆಗಳನ್ನು ಅರ್ಥಮಾಡಿಕೊಳ್ಳುವ ತಾಯ್ತನ ಓದುಗನಿಗೆ ದಕ್ಕಬೇಕಿದೆ. ಆಗ ಒಬ್ಬ ಹೋರಾಟಗಾರ ಯಶಸ್ಸಿನ ಹಿಂದಿನ ತಲ್ಲಣಗಳು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.






0 Comments