ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆ ಹೇಳುವ ಊರುಗಳೂ ಪೃಥೆಯಂತಹ ಪಾತ್ರಗಳೂ

ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಕೃತಿ ‘ರಸಮಲಾಯಿ’

‘ಸಸಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಲೇಖಕಿಯ ಮಾತು ಇಲ್ಲಿದೆ.

-ಪೂರ್ಣಿಮಾ ಭಟ್ಟ

ಚಿಕ್ಕಂದಿನಲ್ಲಿ ನಿದ್ದೆ ಆವರಿಸುವ ಮುನ್ನ ಕಡ್ಡಾಯವೇ ಆಗಿ ಹೋಗಿದ್ದ ಕಥೆಗಳನ್ನು ಶುರು ಮಾಡುವಾಗ ಅಪ್ಪಯ್ಯ ಸದಾ ಹೇಳುತ್ತಿದ್ದ, ‘ಕುಂತಿಯೊಬ್ಬಳು ಇಲ್ಲದೇ ಇದ್ದರೆ ಮಹಾಭಾರತವೇ ಆಗುತ್ತಿರಲಿಲ್ಲ’ ಎಂದು.  ಆಗ ಅಚ್ಚರಿಯಾಗುತ್ತಿತ್ತು – ‘ಒಬ್ಬ ವ್ಯಕ್ತಿ, ಒಂದು ಪಾತ್ರ ಅಷ್ಟೆಲ್ಲ ಮುಖ್ಯವಾ ಕಥೆಗೆ!’ ಎಂದು. ಬೆಳೆಯುತ್ತ, ಬೆಳೆಯುತ್ತ ಪಾತ್ರಗಳ ಬಗೆಗಿದ್ದ ಈ ಅಚ್ಚರಿ ಕುತೂಹಲವಾಗಿ ಬದಲಾಗುತ್ತ, ಕಥನವಾಗುತ್ತ, ಆಪ್ತವಾಗುತ್ತ, ಎದೆಯಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡರೂ ಭಾರವಾಗುತ್ತ, ಕೂತು ಬರೆದಂತೆ ಹಗುರಾಗುತ್ತ ನಡೆಯಿತು. ಕ್ರಮಿಸಿದ ಹಾದಿಗಳು, ಸೇರಿದ ಊರುಗಳು ನನ್ನ ಕಿವಿಯನ್ನು ಮಾತ್ರ ತಲುಪುವಂತೆ ಕಥೆ ಉಸುರುತ್ತ ಸಾಗಿದವು. ಪಾತ್ರಗಳನ್ನು ದಯಪಾಲಿಸುತ್ತ ನನ್ನನ್ನು ಸುಖವಾಗಿಟ್ಟವು. ನಾನು ವಿನಮ್ರಳಾಗಿ ಆ ಪಾತ್ರಗಳನ್ನು ನಿಮ್ಮೆದುರಿಗಿಟ್ಟೆ.

ಬರೆಯಾಣದ ಸೆಳವಿನಲ್ಲಿ ಇನ್ನಿಲ್ಲದೇ ಮಗ್ನಳಾಗಿ, ಕತೆಯ ಹರಿವು ಬೇರೆಯಾದಾಗ ಮತ್ತೆ ತೆಪ್ಪ ಹತ್ತಿಸಿದ್ದೂ ಇವೇ ಪಾತ್ರಗಳು. ಅವು ಅನುಭವಿಸುವ ಕಾರ್ಪಣ್ಯವನ್ನು ಬರೆಯಲೂ ಆಗದೇ, ಸಹಿಸಲೂ ಆಗದೇ ಕಂಗಾಲಾದಾಗ ನನ್ನನ್ನು ಸಲಹಿದ್ದು ಇವೇ ಪಾತ್ರಗಳು. ‘ಹ್ಞಾಂ, ಈ ಪಾತ್ರಕ್ಕೊಂದು ಸಮಾಧಾನ ಸಿಕ್ಕಿತಲ್ಲ – ಇಲ್ಲೇ ನಿಲ್ಲಿಸಿಬಿಡು ಪ್ರಭುವೇ’ ಎಂದು ಪ್ರಾರ್ಥಿಸಿದ ಮರುಕ್ಷಣವೇ ನನ್ನ ಕೈಯಿಂದ ಉಳುಚಿಕೊಂಡು ಮಾಯೆಯಂತೆ ಆಕಾಶದ ಮೂಲೆಯಲ್ಲಿ ಗಹಗಹಿಸಿದ್ದೂ ಇವೇ ಪಾತ್ರಗಳು.

ನನ್ನ ಪಕ್ಕದೂರಿನ ಮೋಡಿಗಾರನಿಗೆ, ಅಂಜನದ ಸಹವಾಸವಿಲ್ಲವಾದರೆ ಎಡಗಣ್ಣು ಅದುರುತ್ತದೆಯಂತೆ. ಇಲ್ಲೇ ಹದಿಮೂರು ಮೈಲಿ ದೂರವಿರುವ ಮಾಟಗಾತಿಗೆ, ಅಮಾವಾಸ್ಯೆಯಂದು ಮಾಡುವ ಕೈಕರಣ ತಪ್ಪಿ ಹೋದರೆ ಎದೆ ನೋವು ಬಂದೊದಗುತ್ತದೆಯಂತೆ. ನನ್ನೂರಿನಲ್ಲಿ ಹಸಿ ಬಾಣಂತಿಯರ ಮಾಲೀಶು ಮಾಡಿ ಮಾಡಿಯೇ ಮುದುಕಿಯಾದ ಪಾರ್ವತಜ್ಜಿಗೆ ಎಣ್ಣೆ ಮುಟ್ಟದೇ ವಾರ ಕಳೆದರೆ ಸಂದು ಸಂದೆಲ್ಲ ನೋವಂತೆ. ಈ ಕತೆಗಾತಿಯ ಪಾಡೂ ಅಷ್ಟೇ. ಕತೆ ಬರೆಯದೇ ಸುಮ್ಮನುಳಿದರೆ ಪಾತ್ರಗಳು ಮಧ್ಯರಾತ್ರಿ ಎದೆಯ ಮೇಲೆ ಕೂತು ಶುರುವಿನಲ್ಲಿ ನಿಧಾನ ಕೆನ್ನೆ ನೇವರಿಸುತ್ತವೆ. ಆಗಲೂ ಎದ್ದು ಬರೆಯದಿದ್ದರೆ ಕಣ್ಣೊಳಗೆ ಬೆರಳು ತೂರಿಸುವ ಧಮ್ಕಿ ಹಾಕುತ್ತವೆ. ವಿಷಯ ಹೀಗೆಲ್ಲ ಇರುವಾಗ ಬರೆಯದೇ ಇರಲಿ ಹೇಗೆ?

ಮೊದಲ ಕಥಾ ಸಂಕಲನವನ್ನು ಇನ್ನಿಲ್ಲದ ಆಸ್ಥೆಯಿಂದ ಪ್ರಕಟಿಸಿದ ‘ಸಸಿ ಪ್ರಕಾಶನ’ವೇ ಈ ಸಂಕಲನವನ್ನೂ ಪ್ರಕಟಿಸುತ್ತಿರುವುದು ಸಂತಸದ ಸಂಗತಿ. ಬದುಕು ತೋರಿದ ಕವಲು ದಾರಿ ಹಿಡಿದು ಖಂಡಾಂತರ ಸಾಗಿ ಬಂದ ಈ ಹೊತ್ತಿನಲ್ಲಿ ನನ್ನ ನೆಲದ ಬರೆಯಾಣ, ಓದಾಣದ ಕೊಂಡಿ ಕಳಚದಂತೆ ನೋಡಿಕೊಳ್ಳುತ್ತಿರುವ ಸಸಿ ಪ್ರಕಾಶನದ ಜಯರಾಮಚಾರಿ ಅವರಿಗೆ ಆಭಾರಿ.

ಪಾತ್ರಗಳು ಕೆಲವೊಮ್ಮೆ ಬಳಲಿಸಿದಾಗ ದಿಕ್ಕಾಣದೇ ಕೂತ ಹೊತ್ತಲ್ಲಿ ಸಮಾಧಾನಿಸುವ ಅಬ್ದುಲ್ ರಶೀದ್ ಸರ್, ಬರೆದ ಕತೆಗಳನ್ನು ಉತ್ಸಾಹದಿಂದ ಓದಿ ತಪ್ಪದೇ ವಿವರವಾಗಿ ಅಭಿಪ್ರಾಯ ಬರೆದು ನನ್ನಲ್ಲಿ ಅಚ್ಚರಿ ಮೂಡಿಸುವ ಸುಬ್ರಾಯ ಚೊಕ್ಕಾಡಿ ಸರ್, ಸದಾ ಜೊತೆಗಿರುವ ರಶ್ಮಿ-ಸುಮನಿ ಇವರೆಲ್ಲ ನನ್ನ ಲೈಫ್‌ಲೈನ್. ನಿಮಗೆ ಅಪರಿಮಿತ ಅಕ್ಕರೆ.

ನವಿರು ಸಾಲುಗಳೊಂದಿಗೆ ಹೇಳಬೇಕಾದ್ದನ್ನೆಲ್ಲವೂ ಹೇಳಿ ಚೆಂದದ ಬೆನ್ನುಡಿ ಬರೆದುಕೊಟ್ಟ ರಶ್ಮಿ. ಎಸ್, ನಿಮಗೆ ತುಂಬು ಪ್ರೀತಿ. ಖ್ವಾಯೀಷಿಗನುಗುಣವಾಗಿ ಮುಖಪುಟ ರಚಿಸಿಕೊಟ್ಟ ಸೌಮ್ಯಾ ಕಲ್ಯಾಣ್‌ಕರ್, ಕ್ಷಿಪ್ರವಾಗಿ ಪ್ರೂಫ್ ತಿದ್ದಿದ್ದೂ ಅಲ್ಲದೇ ಕತೆಗಳ ಬಗ್ಗೆ ಮೆಚ್ಚುಗೆಯನ್ನು ತೋರಿದ ಪ್ರಶಾಂತ ಸಾಗರ ಇವರಿಗೆ ಥ್ಯಾಂಕ್ಸ್.

ಈ ಸಂಕಲನದಲ್ಲಿರುವ ಕೆಲವು ಕತೆಗಳು ಪುರವಣಿ, ವಿಶೇಷಾಂಕ, ಪತ್ರಿಕೆಗಳಲ್ಲಿ ಪ್ರಕಟವಾದಂಥವು. ಪ್ರಕಟಿಸಿದ ಕನ್ನಡ ಪ್ರಭದ ಗಿರೀಶ್ ರಾವ್ ಹತ್ವಾರ್ (ಜೋಗಿ), ಮಯೂರದ ರಘುನಾಥ ಚ.ಹ, ಉದಯವಾಣಿಯ ಎ.ಆರ್ ಮಣಿಕಾಂತ್, ವಿಧಾತ್ರಿ, ವಿಜಯ ಕರ್ನಾಟಕದ ವಿದ್ಯಾರಶ್ಮಿ ಹಾಗೂ ಸುಧಾ, ಆಂದೋಲನ, ಕೆಂಡಸಂಪಿಗೆ ಪತ್ರಿಕೆಯ ಸಂಪಾದಕರಿಗೆ ಕೃತಜ್ಞತೆಗಳು.

ಬರೆಯಲು ಕೂತ ಕ್ಷಣದಿಂದ ಮುಗಿಸಿ ಏಳುವವರೆಗೂ ‘ಛಾ ಮಾಡಿಕೊಡಲ?’ ಎಂದು ಪ್ರೀತಿಯಿಂದ ಹತ್ತು ಸಲ ಕೇಳಿ ನನ್ನ ಪಿತ್ತ ನೆತ್ತಿಗೇರಿಸುವ ನಲ್ಮೆಯ ಮಧು, ಮುದ್ದು ಮಕ್ಕಳಾದ ಸಮರ್ಥ, ದಕ್ಷ, ಬರೆದದ್ದಲ್ಲ ಓದಿ ಖುಷಿಪಡುವ ಆಯಿ, ಅಣ್ಣ, ಅತ್ತಿಗೆ, ರಶ್ಮೀ, ಅತ್ತೆ, ಮಾವ, ಪ್ರೋತ್ಸಾಹ ನೀಡುವ ಸುದೀಪ, ಎಂಥ ಪರಿಸ್ಥಿತಿಯಲ್ಲೂ ಬೆನ್ನಿಗೆ ನಿಲ್ಲುವ ಗ್ಯಾಂಗ್‌ಸ್ಟರ್‌ ಕಝಿನ್ನುಗಳು, ಗೆಳೆಯರು – ನಿಮಗೆಲ್ಲ ಅಪ್ಪುಗೆ. ಆಂತರ್ಯದ ಕಥೆಗಳನ್ನು ಲಾಲಿಸುವ ನನ್ನೂರಾದ ಶಿರಸಿ, ಬೆಂಗಳೂರು, ಲಂಡನ್ನಿಗೆ ನಮನ.

ಇನ್ನು ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಂಡ ನೀವು. ಸ್ವಲ್ಪ ಭಯ, ಹಿಂಜರಿಕೆಯಿಂದಲೇ ಹೊರತಂದ ಮೊದಲನೆಯ ಕಥಾ ಸಂಕಲನಕ್ಕೆ ಎಷ್ಟೆಲ್ಲ ಪ್ರೀತಿ ನೀಡಿದಿರಿ, ಅಚ್ಚೆ ತೋರಿದಿರಿ, ಎಡವಿದಲ್ಲಿ ತಿದ್ದಿದಿರಿ. ಈ ಕತೆಗಳಿಗೂ ಅದೇ ಆದರ ನೀಡುವಿರೆಂಬುದು ನನ್ನ ನಂಬುಗೆ. ಆ ನಂಬುಗೆಯ ಬಲದಿಂದಲೇ ಇನ್ನಷ್ಟು ಕಾಲ ಕತೆ ಜಾರಿಯಲ್ಲಿರಲಿದೆ…

‍ಲೇಖಕರು Admin

30 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading